ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ದಸರಾ: ಗ್ರಾಮೀಣ ಲೋಕದೃಷ್ಟಿ

Last Updated 5 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಅಶ್ವೀಜ ಶುದ್ಧ ಮಾನವಮಿ ಬರಲೆಂದು
ಐಶ್ವರ್ಯ ಸಕಲ ಸಂಪದ ಹೆಚ್ಚಲೆಂದು
ಈಶ್ವರನ ಕೃಪೆ ನಿಮಗೆ ಸುಖಿಯಾಗಲೆಂದು
ಶಾಶ್ವತದಿ ಹರಸಿದೆವು ಬಾಲಕರು ಬಂದು

ಅರವತ್ತರ ದಶಕದ ವೇಳೆ ಶಾಲೆಯಲ್ಲಿ ಬಾಯಿಪಾಠವಾಗಿದ್ದ ಈ ಚಂದದ ‘ಮಾನವಮಿ ಪದ’ಗಳು ಇಂದಿಗೂ ಎದೆಯಲ್ಲಿ ಹಸುರಾಗಿಯೇ ಉಳಿದಿವೆ. ಬಿಳಿಯ ಅಂಗಿ, ಖಾಕಿ ಚಡ್ಡಿ, ತಲೆಯ ಮೇಲೆಂದು ಗಾಂಧಿ ಟೋಪಿ ತೊಟ್ಟ ನಾವು ಓಬಳಪ್ಪ ಮಾಸ್ತರರ ಮುಂದಾಳತ್ವದಲ್ಲಿ ಊರಿನ ಮನೆ ಮನೆಗೆ ತೆರಳಿ ಹಾಡುತ್ತಾ ನವರಾತ್ರಿಗೆ ಸೊಬಗನ್ನು ತುಂಬುತ್ತಿದ್ದೆವು. ಹಿಂದಿನ ಕಾಲದಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದ ‘ಓದಯ್ಯನ ಮಠ’ದಿಂದ ಆರಂಭವಾಗಿದ್ದ ಈ ಮಾನವಮಿ ಪದಗಳು ನಮ್ಮ ಕಾಲಕ್ಕೆ ಇನ್ನಷ್ಟು ಭಿನ್ನ ಪಾಠಗಳನ್ನು ಪಡೆದು ಚೌಪದಿಯ ಸ್ವರೂಪದಲ್ಲಿ ಹೆಸರಾಗಿದ್ದವು.

ದಸರಾ ನೀಡುತ್ತಿದ್ದ ರಜೆಯನ್ನು ಮಾನವಮಿ ಪದಗಳನ್ನು ಕಲಿಯುವುದಕ್ಕೆ ಮತ್ತು ಹಾಡುವುದಕ್ಕೆ ಮೀಸಲಿರಿಸಿ ಸಾರ್ಥಕಗೊಳಿಸಿದ್ದ ಅಂದಿನ ಗ್ರಾಮೀಣ ಭಾಗದ ಮಾಸ್ತರುಗಳು ಒಂಬತ್ತು ದಿನಗಳ ನಿರಂತರ ಪಯಣದ ಮೂಲಕ ಜಗತ್ತನ್ನು ಅರಿಯಲು ನಾಂದಿ ಹಾಡುತ್ತಿದ್ದರು. ನಮ್ಮ ಹಳ್ಳಿಯ ನಂತರ ಸುತ್ತಮುತ್ತಲ ಏಳು ಹಳ್ಳಿಗಳಿಗೂ ನಮ್ಮ ಈ ದಸರಾ ದಂಡು ದಾಂಗುಡಿ ಇಡುತ್ತಿತ್ತು.

ಕಡಲೆ ಬೆಲ್ಲವು ಕೊಬರಿ ನಮಗಾಗಬೇಕು
ಉಡುಗೊರೆ ವೀಳ್ಯವು ನಮ್ಮಯ್ಯಗಳಿಗೆ ಬೇಕು
ಮಳೆ ಬಂದು ಬೆಳೆ ಬಂದು ಇಳೆ ತಣಿಯಲೆಂದು
ತಿಳಿಗೊಳಗಳುಕ್ಕಿ ಗೋವುಗಳು ಕರೆಯಲೆಂದು
ಶಾಶ್ವತದಿ ಹರಸಿದೆವು ಬಾಲಕರು ಬಂದು

ಹಳ್ಳಕೊಳ್ಳಗಳು ತುಂಬಿ ಹರಿದು, ತೆವರಿ ತಿಟ್ಟುಗಳು ಹಚ್ಚ ಹಸುರಾಗಿ ಹೊಲಗದ್ದೆಗಳಲ್ಲಿ ಗರ್ಭ ಕಟ್ಟುವ ಕಾಲವೇ ಮಹಾನವಮಿ. ಮಾನವಮಿ ಪದಗಳೆಂದರೆ ಸಮೃದ್ಧಿಯನ್ನು ಹಾರೈಸಿ ಜನತೆಯನ್ನು ಹರಸುವ ಪದಗಳೆಂದು ಅಂದಿನ ನಂಬಿಕೆ. ಹಾಡಿ ದಣಿವಾಗುವಷ್ಟರಲ್ಲಿ ಆಯಾ ಮನೆಗಳವರು ಮನದುಂಬಿಕೊಡುತ್ತಿದ್ದ ಕೊಬ್ಬರಿ, ಬೆಲ್ಲ, ಕಡಲೆಪುರಿ, ಬತ್ತಾಸು, ಮಿಠಾಯಿಗಳನ್ನು ಕೈ ಚೀಲದಲ್ಲಿ ತುಂಬಿಕೊಳ್ಳುತ್ತಾ, ಎಲೆಅಡಿಕೆ ದಕ್ಷಿಣೆಗಳನ್ನು ಮಾಸ್ತರಿಗೆ ವರ್ಗಾಯಿಸುತ್ತಾ ಮನೆಯಿಂದ ಮನೆಗೆ, ಕೇರಿಯಿಂದ ಕೇರಿಗೆ ಹೋಗುತ್ತಿದ್ದಂತೆ ನಮ್ಮ ಸಾಹಿತ್ಯವೂ ಬದಲಾಗುತ್ತಿತ್ತು.

ವಿವಿಧ ವೃತ್ತಿಯ ಭಿನ್ನ ಭಿನ್ನ ಸಮುದಾಯದವರ ಮನೆಗಳಿಗೆ ಹೋದಾಗ ಅವರವರ ಕಾಯಕಗಳ ಮಹತ್ವವನ್ನು ಒತ್ತಿ ಹೇಳುವ ಚೌಪದಿಗಳನ್ನು ಹಾಡುತ್ತಿದ್ದೆವು. ‘ಒಕ್ಕಲನ್ನು ಕರೆಸಿ ಒಡಂಬಡಿಸಿ ಮಾತಾಡಿ ತಕ್ಕ ರೀತೀಲಿ ಸಾಗುಸಂತುಗಳ ಮಾಡಿ ಅಕ್ಕರಿಂದಲಿ ಬಡವ ಬಲ್ಲಿಗರ ನೋಡಿ’ (ಒಕ್ಕಲಿಗ); ‘ಕಾರಣಿಕ ಶಿರೋಮಣಿಯೆ ಕರುಣ ವಾರಿದಿಯೆ, ನೆರೆ ಜಾಣ ಇಂತಯ್ಯ ಕೀರ್ತಿ ಗುಣಮಣಿಯೆ’ (ಬ್ರಾಹ್ಮಣ); ‘ಉದಯದಲಿ ಎದ್ದು ಮುಖ ಮಜ್ಜನ ಮಾಡಿ ಮುದದಿ ಹೆತ್ತಪ್ಪ ಜುಂಪ್ಪನನು ಪಾಡಿ, ಚದುರಿಂದ ಕಂಬಳಿಯ ಘಳಿಗೆಯನು ಮಾಡಿ’ (ಗೊಲ್ಲರು); ‘ಮೂಡಲದಿ ಗುಂಡು ಬ್ರಹ್ಮಯ್ಯ ಸಂಪನ್ನ ಚಕ್ರವನು ಮಾಡಿ ತಿಗರಿಯನು ತಿರುಗಿಸುತ ಮಣ್ಣಿನಿಂದಲಿ ಮಡಕೆ ನಗಗಳನು ಮಾಡಿ’(ಕುಂಬಾರ) -ಈ ರೀತಿಯಲ್ಲಿ ಯಾವ ಜಾತಿಯೂ ಮೇಲಲ್ಲ ಕೀಳಲ್ಲ, ಯಾವ ಕಾಯಕವೂ ಹಿರಿದಲ್ಲ ಕಿರಿದಲ್ಲ ಎಂಬ ಉದಾರ ಆಧ್ಯಾತ್ಮವು ಮಾನವಮಿ ಪದಗಳ ಆಂತರ್ಯದಲ್ಲಿ ಮಡುಗಟ್ಟಿರುತ್ತಿತ್ತು. ಜೊತೆ ಜೊತೆಗೆ ಬಾಲಕರಾದ ನಮಗೆ ಆಯಾ ಊರಿನ ಹಳ್ಳ, ತೊರೆ, ಪೈರು, ಪಚ್ಚೆ, ದುಡಿಮೆ, ಶ್ರಮ ಮುಂತಾಗಿ ನಿಸರ್ಗದ ಮತ್ತು ಬೇಸಾಯದ ಪರಿಚಯೂ ಆಗುತ್ತಿತ್ತು. ನಾಲ್ಕು ಗೋಡೆಗಳ ನಡುವಿನ ಸೀಮಿತ ಪಾಠದ ಜೊತೆಗೆ ಲೋಕಜ್ಞಾನದ ದರ್ಶನವೂ ಆಗುತ್ತಿತ್ತು.

ಹೀಗೆ ಊರಾಡುತ್ತಾ ಹೋಗುವಾಗ ಕೆಲವೊಮ್ಮೆ ಆಯಾ ಊರಿನ ಶಾಲಾ ವಿದ್ಯಾರ್ಥಿಗಳಿಗೂ, ನಮಗೂ ಸವಾಲಿನ ಸ್ವರೂಪದ ಚೌಪದಿಗಳ ವಿನಿಮಯವಾಗುತ್ತಿತ್ತು. ಇದನ್ನು ‘ದಸರಾ ಪಲ್ಲಕಟ್ಟೋದು’ ಎಂದು ಕರೆಯುತ್ತಿದ್ದರು. ‘ಕನ್ನಡ ಸುಜಾಣ ಕವಿಗಳ ಪದನ ಕೇಳು, ಬಿನ್ನಾಣ ದೋಗಟೆಯ (ಒಗಟು) ನೀ ತಿಳಿದು ಹೇಳು’ ಎಂದು ಆರಂಭಿಸಿ ‘ಉದ್ದನಾಗಿರ್ಪಿದು ಹಾವು ತಾನಲ್ಲ, ಶುದ್ಧ ಹಳದಿಯ ಪಸಿರು ಪಚ್ಚೆ ತಾನಲ್ಲ -ನೀನು ಹೇಳಿದ ಬೆಡಗು ಪೆಟ್ಲು ಕಾಣಣ್ಣ. ನಾನೊಂದ ಬೆಡಗು ಹೇಳುವೆನು ಕೇಳಣ್ಣ’ -ಹೀಗೆ ಸೇರಿಗೆ ಸವಾಸೇರು ಎಂಬಂತೆ ಚೌಪದಿಗಳ ಜ್ಞಾನ ಭಂಡಾರವೇ ಸುಲಲಿತವಾಗಿ ಹರಿಯುತ್ತಿತ್ತು.

ಯಾವ ಜಾತಿ ಭೇದವೂ ಇಲ್ಲದೆ ಮನೆ ಮನೆ ಮುದ್ದೆಯ ರುಚಿ ಸವಿದು, ಸಂಗ್ರಹಿಸಿದ ಕಾಣಿಕೆಗಳನ್ನು ಒಟ್ಟುಗೂಡಿಸಿ ನಮ್ಮೂರಿಗೆ ಹಿಂತಿರುಗಿದ ನಂತರ ಮೈಸೂರು ದಸರಾ ನೋಡುವ ಹುಮ್ಮಸ್ಸು ಹಿರಿದಾಗುತ್ತಿತ್ತು. ಸಂಗ್ರಹಿಸಲಾದ ಕಾಣಿಕೆಯ ಜೊತೆಗೆ ಅತ್ತು ಕರೆದು ಪೋಷಕರಿಂದಲೂ ಒಂದಷ್ಟು ವಸೂಲಿ ಮಾಡಿ ಮಾಸ್ತರರ ಜೊತೆಗೆ ಮೈಸೂರು ತಲುಪಿ ಜಂಬೂ ಸವಾರಿ ನೋಡುತ್ತಿದ ಆ ದಿನಗಳು ಮತ್ತೆ ಮತ್ತೆ ನನಗೆ ಕಾಡುತ್ತಲೇ ಇರುತ್ತವೆ.

ನನ್ನ ದೃಷ್ಟಿಯಲ್ಲಿ ದಸರಾ ಎಂದರೆ ಅದೊಂದು ಅಖಂಡ ಜನಪದ ಆಚರಣೆಯೇ ಆಗಿದೆ. ರಾಜನಿಂದ ರೈತನವರೆಗೆ ನಂಬುಗೆಯ ಮೇಲೆ ನಡೆಯುತ್ತಿದ್ದ ದೇಸಿ ಸಂಪ್ರದಾಯವದು. ಒಂದಾನೊಂದು ಕಾಲಕ್ಕೆ ರಾಜರು ಯುದ್ಧಗಳನ್ನು ಗೆದ್ದ ಸಂಭ್ರಮ ಆಚರಿಸಿಕೊಂಡ ವಿಜಯೋತ್ಸವವೇ ವಿಜಯದಶಮಿ. ಯುದ್ಧ ಗೆದ್ದ ಸಂಭ್ರಮದ ಆಚರಣೆಗೆಂದೇ ವಿಜಯನಗರದ ಅರಸರು ಮಹಾನವಮಿ ದಿಬ್ಬವೆಂಬ ಭವ್ಯ ವಾಸ್ತುವನ್ನೇ ನಿರ್ಮಿಸಿದರು. ಪ್ರತಿವರ್ಷ ಅದರ ಮೇಲೆ ಕುಂತು ವಾರ್ಷಿಕೋತ್ಸವಗಳನ್ನು ಆಚರಿಸಿದರು. ಕಾಲಕ್ರಮೇಣ ಅದು ಯದುವಂಶದ ಅರಸರ ಕರ್ತವ್ಯ ಪಾಲನೆಯ ಭಾಗವಾಗಿ ಮೈಸೂರಿಗೆ ಸ್ಥಳಾಂತರಗೊಂಡಿತು.

ರಾಜರಿಗೆ ತಮ್ಮ ವಿಜಯದ ಸಂಕೇತವಾದ ದಸರಾ ಆಚರಣೆಯು ಜನಸಾಮಾನ್ಯರಿಗೆ ಭಕ್ತಿಯ ಮತ್ತು ಕಾಯಕದ ಆರಾಧನೆಯಾಗಿದ್ದ ಮಹಾಲಯ ಅಮಾವಾಸ್ಯೆ ಹಾಗೂ ಮಹಾನವಮಿಯ ಜೊತೆ ಬೆರೆಯಿತು. ಅರಮನೆಯಲ್ಲಿ ಮತ್ತು ಪಾಳೇಗಾರ ಸಂಸ್ಕೃತಿಗಳವರ ಆವರಣದಲ್ಲಿ ಆಯುಧಗಳು ಪೂಜೆಗೊಂಡರೆ ರೈತರು ಮತ್ತು ಪೂರಕ ಕುಶಲವೃತ್ತಿಗಳವರ ಮನೆಯಲ್ಲಿ ವ್ಯವಸಾಯದ ಉಪಕರಣಗಳು ಪೂಜೆಗೊಳಪಡುತ್ತವೆ. ಮಲೆನಾಡು ಮತ್ತು ಕರಾವಳಿ ಭಾಗದ ಶ್ರಮಿಕ ವರ್ಗದ ಜನ ದೀಪಾವಳಿಯಲ್ಲಿ ತಮ್ಮ ಪೂರ್ವಿಕನೆಂದು ನಂಬಿದ ಬಲೀಂದ್ರನ ಹೆಸರಿನಲ್ಲಿ ಬೇಸಾಯ ಸಲಕರಣೆಗಳನ್ನು ಪೂಜಿಸುತ್ತಾರೆ.

ಅಂತೆಯೇ ಬಯಲು ಸೀಮೆಯ ಜನ ಆಯುಧಕ್ಕೆ ಬದಲಾಗಿ ತಮ್ಮ ವೃತ್ತಿಯ ಉಪಕರಣಗಳನ್ನು ಆರಾಧಿಸಿ ಗೌರವಿಸುತ್ತಾರೆ. ಮಹಾಲಯ ಅಮಾವಾಸ್ಯೆಯಂದು ಗಗನದಿಂದ ಇಳಿಯುವ ತಮ್ಮ ಪೂರ್ವಜರ ಆತ್ಮಗಳು ದಸರಾ ಮುಗಿಯುವವರೆಗೆ ತಮ್ಮೊಡನಿದ್ದು, ಇಷ್ಟದ ಅಡುಗೆ ಉಂಡು ಅರಸಿ ಹಾರೈಸಿ ಹೋಗುತ್ತಾರೆ ಎಂಬುದು ಹಳ್ಳಿಗರಲ್ಲಿ ಇಂದಿಗೂ ಉಳಿದಿರುವ ಗಾಢ ನಂಬಿಕೆ. ಅಮಾವಾಸ್ಯೆ ದಿನದಿಂದ ಆರಂಭವಾಗುವ ಪಿತೃಪೂಜೆ ಮಹಾನವಮಿಯ ವಿಜಯದಶಮಿವರೆಗೂ ಹಂತಹಂತವಾಗಿ ನಡೆಯುತ್ತದೆ.

ಆ ಊರಿನವರು ಈ ಊರಿಗೂ; ಈ ಊರಿನವರು ಆ ಊರಿಗೂ ಹೋಗಿ ಪಿತೃಪೂಜೆಯಲ್ಲಿ ಪರಸ್ಪರ ಪಾಲ್ಗೊಳ್ಳಲು ಅನುವಾಗುವಂತೆ ಬೇರೆ ಬೇರೆ ದಿನಗಳಲ್ಲಿ ಈ ‘ಎಡೆ’ ಆಚರಣೆಗಳು ನಡೆಯುತ್ತಿರುತ್ತವೆ. ಪರಂಪರೆಯಿಂದ ರೂಢಿಗೊಂಡ ವೈವಿಧ್ಯಮಯ ಸಿಹಿ ಮತ್ತು ಖಾರ ಅಡುಗೆಗಳ ಬಾಣಸಿಗ ಲೋಕವೇ ಈ ಒಂಬತ್ತು ದಿನಗಳ ಉದ್ದಕ್ಕೂ ತೆರೆದುಕೊಳ್ಳುತ್ತದೆ. ಒಂಬತ್ತನೇ ದಿನ ಗ್ರಾಮ ದೇವತೆಯರ ಆರಾಧನೆಯ ಜೊತೆಗೆ ನಿಸರ್ಗದ ಸಂಕೇತವೆನಿಸಿದ ‘ಬನ್ನಿ’ ಮರದ ಪೂಜೆ ಮೂಲಕ ಮಾನೋಮಿ ಅರ್ಥಾತ್ ಮಹಾನವಮಿ ಸಮರ್ಪಣಗೊಳ್ಳುತ್ತದೆ. ಹೀಗಾಗಿ ಅರಮನೆಯಿಂದ ಗುರು ಮನೆವರೆಗೆ, ಗುರುಮನೆಯಿಂದ ಗುಡಿಸಲವರೆಗೆ ಅವರವರ ಸ್ಥರಗಳಲ್ಲಿ, ಅವರವರ ಭಕುತಿಗೆ ತಕ್ಕಂತೆ ನಡೆಯುವ ಎಲ್ಲಾ ಉತ್ಸವ ಆಚರಣೆಗಳೂ ಜಾನಪದಲ್ಲಿವೆ.

ದಸರಾ ಎಂಬುದೇ ಒಂದು ಬೃಹತ್ ವ್ಯಾಪಿಯಾದ ಜಾನಪದ ಆಚರಣೆ ಎಂದರೆ ತಪ್ಪಾಗಲಾರದು. ಕವಿ ಕುವೆಂಪು ಹೇಳುವಂತೆ ‘ರಾಜ್ಯಗಳುದಿಸಲಿ ರಾಜ್ಯಗಳಿಳಿಯಲಿ, ಹಾರಲಿ ಗದ್ದುಗೆ ಮುಕುಟಗಳು, ಮುತ್ತಿಗೆ ಹಾಕಲಿ ಸೈನಿಕರೆಲ್ಲ, ಬಿತ್ತುಳುವುದನವ ಬಿಡುವುದೇ ಇಲ್ಲ’. ವಿಜಯದಶಮಿ ಯುದ್ಧ ಗೆದ್ದ ಸಂಕೇತವಿರಬಹುದು. ಆದರೆ, ಮಹಾನವಮಿ ಮಾತ್ರ ಹಿರಿಯರ ಆತ್ಮಗಳನ್ನು ಆಹ್ವಾನಿಸಿ ಆರಾಧಿಸುವ ಮತ್ತು ರೈತಾಪಿ ಬದುಕಿನ ಉಪಕರಣಗಳನ್ನು ಪೂಜಿಸುವ ಅಪ್ಪಟ ಗ್ರಾಮೀಣ ಲೋಕದೃಷ್ಟಿಯ ಸಂಕೇತವಾಗಿಯೇ ಉಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT