ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಪ್ರೀತಿಯ ನೆರಳಲ್ಲಿ ಬೆಳೆದ ಗಿಡ ಮೇಘನಾ

Last Updated 11 ಮೇ 2018, 5:36 IST
ಅಕ್ಷರ ಗಾತ್ರ

‘ಪಾಪಿ’ (ಮೇಘನಾ ಗುಲ್ಜಾರ್ ಅಪ್ಪನನ್ನು ಹೀಗೆಯೇ ಕರೆಯುವುದು) ಜೊತೆಗೆ ಕಳೆದ ಬಾಲ್ಯದ ದಿನಗಳಲ್ಲಿ ನನಗೆ ಹೆಚ್ಚು ಕಾಡುವುದು ಅವರ ಸಿತಾರ್ ದನಿಯನ್ನು ಹುಡುಕಿ ನಾನು ಹೋಗುತ್ತಿದ್ದುದು. ನಿದ್ರೆಯಿಂದೆದ್ದು ಆ ದನಿಯನ್ನೇ ಹುಡುಕಿ ಹೋಗುತ್ತಿದ್ದೆ. ಅದನ್ನು ಕೇಳುತ್ತಾ ಮತ್ತೆ ಪಾಪಿಯ ಮೊಣಕಾಲಿನ ಮೇಲೆ ತಲೆಯಿಟ್ಟು ಮಲಗುತ್ತಿದ್ದೆ. ಶಾಲೆಗೆ ಹೊತ್ತಾಗುತ್ತಿತ್ತು. ಅವರು ಎಬ್ಬಿಸುತ್ತಿದ್ದರು. ಆಯಾ ಸ್ನಾನ ಮಾಡಿಸಿ, ಭುಜದುದ್ದ ಬೆಳೆದಿದ್ದ ಕೂದಲನ್ನು ಬಾಚಿ, ಜಡೆಗಳನ್ನು ಕಟ್ಟುತ್ತಿದ್ದಳು. ಪಾಪಿ ಟೈ ನಾಟ್ ಹಾಕುತ್ತಿದ್ದರು. ಡಬ್ಬಲ್ ನಾಟ್ ಹಾಕುವುದರಲ್ಲಿ ಅವರದ್ದು ನಾಜೂಕುತನ…’

‘ಬಿಕಾಸ್ ಹೀ ಈಸ್…’ ಎಂಬ ಪುಸ್ತಕದಲ್ಲಿ ಮೇಘನಾ ಹೀಗೆಲ್ಲ ಬರೆದಿದ್ದಾರೆ. ಅಪ್ಪ ಗುಲ್ಜಾರ್ ಬಗೆಗೆ ಬರೆದ ಈ ಮಗಳು ಸಿನಿಮಾ ಕ್ಷೇತ್ರಕ್ಕೀಗ ಪರಿಚಿತ ಹೆಸರು. ‘ತಲ್ವಾರ್’ ಸಿನಿಮಾದ ಯಶಸ್ಸಿನ ನಂತರ ನಿರೀಕ್ಷೆಯ ನೊಗ ಹೊತ್ತಿರುವ ಇವರು ‘ರಾಜಿ’ ಎಂಬ ಇನ್ನೊಂದು ಹಿಂದಿ ಸಿನಿಮಾ ನಿರ್ದೇಶಿಸಿದ್ದಾರೆ. ಈ ವಾರ ಅದು ತೆರೆಕಾಣಲಿದೆ.

ಮೇಘನಾ ಹದಿನೆಂಟು ತಿಂಗಳ ಮಗುವಾಗಿದ್ದಾಗ ಅಪ್ಪ-ಅಮ್ಮ ಪ್ರತ್ಯೇಕವಾಗಿ ಬದುಕತೊಡಗಿದರು. ದೊಡ್ಡವಳಾದ ಮೇಲೆ ಇಬ್ಬರಿಗೂ ಮಗಳು ಹಾಕಿದ ಪ್ರಶ್ನೆ-‘ನಾವೆಲ್ಲ ಯಾಕೆ ಒಂದೇ ಮನೆಯಲ್ಲಿ ಒಟ್ಟಿಗೆ ಇರುತ್ತಿಲ್ಲ’. ಇದಕ್ಕೆ ಅಪ್ಪ ಹಾಗೂ ಅಮ್ಮ ಇಬ್ಬರೂ ಕೊಟ್ಟ ಉತ್ತರ ತೂಕದ್ದಾಗಿತ್ತು. ಅಂದಿನಿಂದ ಇಂದಿನವರೆಗೆ ಮೇಘನಾ ಎಂದೂ ತಂದೆ-ತಾಯಿ ಪ್ರೀತಿಯ ಕೊರತೆಯ ಬಗೆಗೆ ಹೇಳಿಕೊಂಡಿಲ್ಲ.

‘ಸೋಷಿಯಾಲಜಿ’ಯಲ್ಲಿ ಪದವಿ ಮುಗಿಸಿದ ಮೇಘನಾ ಎದುರಲ್ಲಿ ಎರಡು ಆಯ್ಕೆಗಳಿದ್ದವು. ಒಂದು-ಜಾಹೀರಾತು, ಎರಡು-ಸಿನಿಮಾ. ಅವರು ಎರಡನೆಯದನ್ನು ಆರಿಸಿಕೊಂಡರು. ನ್ಯೂಯಾರ್ಕ್‌ನ ಟಿಶ್ ಸ್ಕೂಲ್ ಆಫ್ ಆರ್ಟ್‌ನಲ್ಲಿ ಕಲಿತ ಮೇಲೆ ಸೃಜನಶೀಲತೆ ಹಾಗೂ ತರಗತಿ ಕಲಿಕೆಯ ನಡುವಿನ ಹೊಂದಾಣಿಕೆ ಹಾಗೂ ವ್ಯತ್ಯಾಸ ಮನವರಿಕೆಯಾಯಿತು.

ಓದುವ ಹಂತದಲ್ಲಿಯೇ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ಬರೆಯಲಾರಂಭಿಸಿದವರು ಮೇಘನಾ. ಆಶಾ ಭೋಂಸ್ಲೆ, ನಾಸಿರುದ್ದೀನ್ ಶಾ ತರಹದವರ ಸಂದರ್ಶನಗಳನ್ನೂ ಮಾಡಿದರು. ಚಿತ್ರಕಥೆ ಬರೆಯುವುದರಲ್ಲಿ ಕೈಪಳಗಿಸಿಕೊಳ್ಳಲು ಹತಾರ ಕೊಟ್ಟಿದ್ದೂ ತಂದೆಯೇ.

‘ಮಾಚಿಸ್’ ಸಿನಿಮಾದ ನಿರ್ಮಾಣೋತ್ತರ ಕೆಲಸಗಳನ್ನು ನೋಡಿಕೊಂಡ ಅವರು, ‘ಹೂ ತು ತು’ ಸಿನಿಮಾದ ಚಿತ್ರಕಥೆ ಬರೆಯಲು ನೆರವಾದರು. ತಂದೆಯ ಜೊತೆಗಿನ ಸಂವಾದ ಹಾಗೂ ತನ್ನದೇ ಕಲಿಕೆಗೆ ಇದೇ ದೊಡ್ಡ ದಾರಿ.
ದೂರದರ್ಶನಕ್ಕಾಗಿ ಎರಡು ಕಿರುಚಿತ್ರಗಳನ್ನು ಮಾಡುವ ಅವಕಾಶವೂ ಸಿಕ್ಕಿತು. ಮನೆಗೆಲಸ ಮಾಡುವ ಮಹಿಳೆಯರ ಬಗೆಗೆ ತಯಾರಿಸಿದ ಕಿರುಚಿತ್ರ ಬದುಕಿನ ಬೇರೆಯದೇ ಮುಖವನ್ನು ಕಾಣಿಸಿತು.

ಖಾಸಗಿ ಭದ್ರತಾ ಸಂಸ್ಥೆಗಳ ಕುರಿತು ತಯಾರಿಸಿದ ಇನ್ನೊಂದು ಕಿರುಚಿತ್ರ ಕಟ್ಟಿಕೊಟ್ಟ ಅನುಭವವೂ ಅನನ್ಯ. ಸೋಷಿಯಾಲಜಿ ವಿದ್ಯಾರ್ಥಿನಿಯಾಗಿದ್ದರಿಂದ ಈ ಕಿರುಚಿತ್ರಗಳಿಗೆ ಹೊಸ ಆಯಾಮ ದಕ್ಕಿಸಿಕೊಡಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ಬಾಡಿಗೆ ತಾಯಿ ಕುರಿತ ಕಥಾನಕದಲ್ಲಿ ಇಬ್ಬರು ಸ್ನೇಹಿತೆಯರ ನಡುವಿನ ಬಿರುಕು ಕಾಣಿಸಿಕೊಳ್ಳುವ ಸೂಕ್ಷ್ಮವನ್ನು ‘ಫಿಲ್ಹಾಲ್’ ಸಿನಿಮಾದಲ್ಲಿ ಮೇಘನಾ ಕಾಣಿಸಿದರು. ಚಿತ್ರಕಥೆ, ನಿರ್ದೇಶನ ಎರಡೂ ಅವರದ್ದೇ. ಅಪ್ಪ ಆ ಸಿನಿಮಾಗೆ ಹಾಡುಗಳನ್ನು ಬರೆದುಕೊಟ್ಟಿದ್ದರು.

ಮೊದಲ ಸಿನಿಮಾದಲ್ಲೇ ವಿಮರ್ಶಕರ ಮನಗೆದ್ದ ಮೇಘನಾ, ‘ತಲ್ವಾರ್’ ಹಿಂದಿ ಚಲನಚಿತ್ರದ ಮೂಲಕ ಇನ್ನೊಂದು ಹಂತಕ್ಕೆ ಏರಿದರು. ಆ ಸಿನಿಮಾಗೆ ಚಿತ್ರಕಥೆ ತಯಾರಿಸಿ, ವಿಶಾಲ್ ಭಾರದ್ವಾಜ್ ಉಡುಗೊರೆಯಾಗಿ ನೀಡಿದ್ದರೆನ್ನುವುದು ವಿಶೇಷ.

ನಿರ್ದೇಶಕಿಯಾಗಿ ದೃಶ್ಯ ಸೂಕ್ಷ್ಮಗಳನ್ನು ಕಾಣಿಸಿದ ಆ ಸಿನಿಮಾ ನಂತರ ಈಗ ಆಲಿಯಾ ಭಟ್ ಅಭಿನಯದ ‘ರಾಝಿ’ ಸಿನಿಮಾ ಕಟ್ಟಿದ್ದಾರೆ. ಅಪ್ಪನ ಸಿತಾರ್ ದನಿಯ ಜೊತೆಗೆ ನೈಜ ಘಟನೆಗಳ ಕಥಾಕಾಲಕ್ಷೇಪವನ್ನು ಇಷ್ಟಪಡುವ ಮೇಘನಾ ಆ ಸಿನಿಮಾಗೆ ಎಂಥ ಪ್ರತಿಕ್ರಿಯೆ ಸಿಗುವುದೋ ಎಂದು ಕುತೂಹಲಿಯಾಗಿದ್ದಾರೆ.
–ಎನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT