ಕುಂಚದಲ್ಲಿ ಕರುನಾಡ ಪ್ರತಿಬಿಂಬ

ಮಂಗಳವಾರ, ಮಾರ್ಚ್ 26, 2019
31 °C

ಕುಂಚದಲ್ಲಿ ಕರುನಾಡ ಪ್ರತಿಬಿಂಬ

Published:
Updated:
Prajavani

‘ನಸುಕಿಗೆ ಎದ್ದು, ಚುಮು ಚುಮು ಚಳಿಯಲ್ಲಿ ಕಲ್ಲು ಬಂಡೆಗಳ ಮೇಲೆ ಹೋಗಿ ಕುಳಿತುಕೊಳ್ಳುತ್ತಿದ್ದೆವು. ಮೂಡಣದ ದಿಕ್ಕಿನಿಂದ ರವಿಯ ಹೊಂಬಣ್ಣದ ರಶ್ಮಿ ಮೆಲ್ಲಗೆ ಮೂಡಿದಂತೆ, ಇರುಳ ಸೆರಗಿನಲ್ಲಿ ಮರೆಯಾಗಿದ್ದ ಹಂಪಿಯ ಗುಡಿ, ಗೋಪುರಗಳಿಗೆ ಜೀವಕಳೆ ಬಂದಂತಾಗುತ್ತಿತ್ತು. ಕಿರಣಗಳು ಪ್ರಖರವಾದಂತೆ, ಕಣ್ಣೆದುರಿನ ಚಿತ್ರ ನಿಚ್ಚಳವಾಗಿ ಗೋಚರಿಸುತ್ತಿತ್ತು. ಆ ಇರುಳು– ಬೆಳಕಿನ ದೃಶ್ಯ ವೈಭವದಲ್ಲಿ, ಶಿಲೆಯಲ್ಲಿ ಅಡಗಿದ್ದ ಕಲೆಯ ಪ್ರತಿಬಿಂಬವನ್ನು ಕುಂಚದ ಮೂಲಕ ಕ್ಯಾನ್ವಾಸಿನ ಮೇಲೆ ಮೂಡಿಸುತ್ತಿದ್ದೆವು...’

ಹೀಗೆ, ಸ್ಥಳದಲ್ಲೇ ಕುಳಿತು ಚಿತ್ರ ಬಿಡಿಸುವಾಗ (spot painting) ಕಲಾಕುಸುರಿ ಅರಳುವ ಬಗೆಯನ್ನು ಬಣ್ಣಿಸಿದವರು ಮೈಸೂರಿನ ಹಿರಿಯ ಚಿತ್ರಕಲಾವಿದ ಕೆ.ಸಿ. ಮಹದೇವ ಶೆಟ್ಟಿ. 

ಚಿತ್ರಕಾರ, ಕಲಾ ಸಂಘಟಕ, ಕಲಾ ಶಿಕ್ಷಕ, ಜಾನಪದ ಕಲೋಪಾಸಕರಾಗಿರುವ ಶೆಟ್ಟಿ ಅವರದ್ದು ಬಹುಮುಖ ವ್ಯಕ್ತಿತ್ವ. ಪ್ರಸ್ತುತ ಮೈಸೂರಿನ ಶ್ರೀ ಕಲಾನಿಕೇತನ ಸ್ಕೂಲ್‌ ಆಫ್‌ ಆರ್ಟ್ಸ್‌ನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾವು ಕಲಾವಿದನಾಗಿ ಗುರುತಿಸಿಕೊಳ್ಳುವುದಕ್ಕಿಂತ, ತಮ್ಮ ಶಿಷ್ಯರು ಶ್ರೇಷ್ಠ ಕಲಾವಿದರಾಗಿ ಬೆಳೆಯಬೇಕು ಎಂಬ ಹಂಬಲ ಇವರದ್ದು. ಅದರಂತೆಯೇ ಇವರ ಗರಡಿಯಲ್ಲಿ ಪಳಗಿದ ಅನೇಕ ವಿದ್ಯಾರ್ಥಿಗಳು ಕಲಾ ಕ್ಷೇತ್ರದಲ್ಲೇ ತಮ್ಮ ಬದುಕನ್ನು ಉಜ್ವಲಗೊಳಿಸಿಕೊಂಡಿದ್ದಾರೆ.

ನಿಸರ್ಗ ಚಿತ್ರದತ್ತ ಒಲವು

ಆರಂಭದಿಂದಲೂ ಜಾನಪದ ವಸ್ತು ವಿಷಯಗಳ ಮೇಲೆ ಪೇಂಟಿಂಗ್‌ ಮಾಡುತ್ತಿದ್ದ ಶೆಟ್ಟರು, ಇತ್ತೀಚಿನ ದಿನಗಳಲ್ಲಿ ನಿಸರ್ಗ ಚಿತ್ರಗಳತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅಕ್ರಿಲಿಕ್‌ ಮಾಧ್ಯಮದಲ್ಲಿ ಅರಳಿದ ಇವರ ಕಲಾಕೃತಿಗಳಲ್ಲಿ ವಿಶೇಷವಾಗಿ ಗಮನ ಸೆಳೆಯುವುದು ದೃಷ್ಟಿಕೋನ (perspective) ಮತ್ತು ಬಣ್ಣದ ಸಂಯೋಜನೆ. ದಸರಾ ವಸ್ತುಪ್ರದರ್ಶನ, ಆಲ್‌ ಇಂಡಿಯಾ ಆರ್ಟ್‌ ಎಕ್ಸಿಬಿಷನ್‌, ರಾಷ್ಟ್ರೀಯ ಮಟ್ಟದ ಕಲಾಮೇಳ, ವೆಟ್‌ ಕ್ಯಾನ್‌ವಾಸ್‌ ಷೋ, ‘ಸೀ ಸ್ಕೇಪ್‌’ ಪೇಂಟಿಂಗ್‌, ‘ರೇನ್‌ ಸ್ಕೇಪ್‌’ ಪೇಂಟಿಂಗ್‌ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ 20ಕ್ಕೂ ಹೆಚ್ಚು ಗ್ರೂಪ್‌ ಷೋ ನೀಡಿದ್ದಾರೆ.

ಹಂಪಿ, ಕಲಬುರ್ಗಿ, ದಾವಣಗೆರೆ, ಮಂಗಳೂರು, ಬೆಂಗಳೂರು, ಮೈಸೂರಿನಲ್ಲಿ ನಡೆದ ವಾಟರ್‌ ಕಲರ್‌ ವರ್ಕ್‌ಶಾಪ್‌, ಲಿಥೋ ಗ್ರಾಫಿಕ್‌ ಪ್ರಿಂಟಿಂಗ್‌ ಕ್ಯಾಂಪ್‌, ಸೌತ್‌ ಇಂಡಿಯಾ ಕಂಟೆಂಪರರಿ ಆರ್ಟಿಸ್ಟ್‌ ಕ್ಯಾಂಪ್‌, ಕಿನ್ನಾಳ ಫೋಕ್‌ ಆರ್ಟ್‌, ವರ್ಲಿ ಟ್ರೈಬಲ್‌ ಆರ್ಟ್‌ ಕ್ಯಾಂಪ್‌ ಸೇರಿದಂತೆ ಹಲವು ಕಲಾ ಶಿಬಿರಗಳಲ್ಲಿ ಭಾಗವಹಿಸಿ ಕಲಾ ಪ್ರದರ್ಶನ ನೀಡಿದ್ದಾರೆ. ಇವರ ಕಲಾಸಾಧನೆಗೆ 1996ರಲ್ಲಿ ‘ಕರ್ನಾಟಕ ಲಲಿತಕಲಾ ಅಕಾಡೆಮಿ’ ಪ್ರಶಸ್ತಿಯೂ ಸಂದಿದೆ. 1993ರಿಂದ 1996ರವರೆಗೆ ಮೈಸೂರು ದಸರಾ ಕಲಾ ಪ್ರದರ್ಶನದಲ್ಲಿ ಭಾಗವಹಿಸಿ, ಹ್ಯಾಟ್ರಿಕ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಲಲಿತಕಲಾ ಅಕಾಡೆಮಿ, ಸುತ್ತೂರಿನ ಜಾನಪದ ವಸ್ತುಸಂಗ್ರಹಾಲಯ, ಕುಪ್ಪಳಿಯ ಕುವೆಂಪು ಮ್ಯೂಸಿಯಂ ಸೇರಿದಂತೆ ವಿವಿಧ ಮ್ಯೂಸಿಯಂಗಳಲ್ಲಿ ಇವರ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬಹುದು.

ಬಾಲ್ಯದ ಆಟ, ಆ ಹುಡುಗಾಟ...

ಮಹದೇವ ಶೆಟ್ಟಿ ಅವರು ಹಾಸನ ಜಿಲ್ಲೆಯ ಕಾಟಿಹಳ್ಳಿಯಲ್ಲಿ 1968ರ ಜೂನ್‌ 14ರಂದು ಬಡ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ತಂದೆ ಚಿಕ್ಕವೀರಶೆಟ್ಟಿ ಮತ್ತು ತಾಯಿ ಪುಟ್ಟಲಕ್ಷ್ಮಮ್ಮ. ಓದಿಗೆ ಅಷ್ಟೇನೂ ಪೂರಕವಾಗಿಲ್ಲದ ವಾತಾವರಣದಲ್ಲಿ ಬೆಳೆದ ಶೆಟ್ಟರು, 8ನೇ ತರಗತಿ ಓದುತ್ತಿದ್ದಾಗ ಪುಂಡ ಹುಡುಗರ ಸಹವಾಸಕ್ಕೆ ಬಿದ್ದು, ಶಾಲೆ ಬಿಟ್ಟವರು. ನಂತರ ಮನೆ ಬಿಟ್ಟು ತುಮಕೂರಿಗೆ ಹೋಗಿ ಚಿಕ್ಕಪ್ಪ ಬಿ.ವಿ. ಫಾಲಾಕ್ಷಪ್ಪ ಅವರ ಮನೆ ಸೇರಿಕೊಂಡರಂತೆ. ಚಿಕ್ಕಪ್ಪನವರ ಶಿಸ್ತು, ನೆರೆಮನೆ ಮಕ್ಕಳ ಓದಿನ ಆಸಕ್ತಿ... ಇವುಗಳಿಂದ ಪ್ರಭಾವಿತರಾದ ಶೆಟ್ಟಿ ಅವರು ಮತ್ತೆ ಓದಲು ಮನಸು ಮಾಡಿದ್ದು ಈಗ ಅವರಲ್ಲಿನ ಸಿಹಿ ನೆನಪು.

ನಂತರ ತುಮಕೂರಿನ ಶಿರಾಗೇಟ್‌ನಲ್ಲಿರುವ ಕಾಳಿದಾಸ ಪ್ರೌಢಶಾಲೆಗೆ 8ನೇ ತರಗತಿಗೆ ಸೇರಿಕೊಂಡರು. ಮ್ಯಾಪ್‌, ವಿಜ್ಞಾನದ ಚಿತ್ರಗಳನ್ನು ಸುಂದರವಾಗಿ ಬಿಡಿಸುತ್ತಿದ್ದ ಶೆಟ್ಟಿ ಅವರ ಕೈಚಳಕವನ್ನು ಗಮನಿಸಿದ ಶಿಕ್ಷಕಿ ಪ್ರಭಾವತಿ ಅವರು ಚಿತ್ರಕಲೆ ಪರೀಕ್ಷೆ ಕಟ್ಟಿಸುತ್ತಾರೆ. ಅಲ್ಲಿಂದ ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಯುತ್ತದೆ. ಎಸ್ಸೆಸ್ಸೆಲ್ಸಿ ಮುಗಿದ ನಂತರ ‘ರವೀಂದ್ರ ಕಲಾನಿಕೇತನ ಸ್ಕೂಲ್‌ ಆಫ್‌ ಆರ್ಟ್‌’ ಸಂಸ್ಥೆಯಲ್ಲಿ ‘ಡ್ರಾಯಿಂಗ್‌ ಮಾಸ್ಟರ್‌ ಕೋರ್ಸ್‌’ ಮುಗಿಸುತ್ತಾರೆ. ನಂತರ ಡಿಪ್ಲೊಮ ಇನ್‌ ಆರ್ಟ್‌ ಮಾಸ್ಟರ್‌, ಡಿಪ್ಲೊಮ ಇನ್‌ ಡ್ರಾಯಿಂಗ್‌ ಅಂಡ್‌ ಪೇಂಟಿಂಗ್‌ ವ್ಯಾಸಂಗ ಪೂರ್ಣಗೊಳಿಸಿದ ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್‌ ಆಫ್‌ ವಿಶುಯಲ್‌ ಆರ್ಟ್‌ ಸ್ನಾತಕೋತ್ತರ ಪದವಿ ಪಡೆಯುತ್ತಾರೆ. 

ಸ್ಮಾರಕ ಉಳಿಯಲಿ, ಕಲೆ ಬೆಳೆಯಲಿ...

ಕರುನಾಡಿನಲ್ಲಿರುವ ಐತಿಹಾಸಿಕ ಸ್ಮಾರಕ, ಗುಡಿ, ಗೋಪುರ, ದೇಗುಲಗಳು ಈ ನೆಲದ ಸಂಸ್ಕೃತಿಯ ಪ್ರತೀಕ. ಅವು ಮುಂದಿನ ಪೀಳಿಗೆಗೂ ಉಳಿಯಬೇಕು. ಕಾಲಾನುಘಟ್ಟದಲ್ಲಿ ಆ ಕಟ್ಟಡಗಳು ಅಳಿದರೂ, ಕಲಾಕೃತಿಗಳ ಮೂಲಕವಾದರೂ ಉಳಿಯಬೇಕು ಮತ್ತು ಬೆಳಗಬೇಕು ಎಂಬುದು ಶೆಟ್ಟರ ಮನದಾಸೆ. ಹಾಗಾಗಿಯೇ ಅವರು ನಾಡಿನಾದ್ಯಂತ ಸಂಚರಿಸಿ, ಹಂಪಿ ಕಲ್ಲಿನ ರಥ, ಉಗ್ರನರಸಿಂಹ, ಹಳೇಬೀಡಿನ ಗಣಪತಿ, ಶೃಂಗೇರಿ ಶಾರದಾಂಬೆ ದೇಗುಲ, ಸೋಮನಾಥಪುರದ ದೇವಾಲಯ, ಲಕ್ಕುಂಡಿ, ಮೇಲುಕೋಟೆ, ಶ್ರವಣಬೆಳಗೊಳ, ಐಹೊಳೆ, ಪಟ್ಟದಕಲ್ಲು, ಅಜಂತಾ ಗುಹೆ, ಗೇಟ್‌ ವೇ ಆಫ್‌ ಇಂಡಿಯಾ ಸೇರಿದಂತೆ ಅಪರೂಪದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ಸೊಬಗನ್ನು ತಮ್ಮ ಕಲಾಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ.

‘ಭಾರತದಲ್ಲಿರುವ ಎಲ್ಲ ಪ್ರಮುಖ ಐತಿಹಾಸಿಕ ಸ್ಮಾರಕ ಮತ್ತು ಶಿಲ್ಪಕಲೆಯ ಸೆಲೆಯನ್ನು ಹೊಂದಿರುವ ದೇಗುಲಗಳ ಕಲಾಕೃತಿಗಳನ್ನು ರಚಿಸುವ ಬಯಕೆ ಇದೆ. ಈ ಕಲಾಕೃತಿಗಳನ್ನು ಮ್ಯೂಸಿಯಂಗಳಲ್ಲಿ ಇಟ್ಟು ಸಂರಕ್ಷಿಸಿದರೆ, ಇತಿಹಾಸ ಅಧ್ಯಯನ ಮಾಡುವವರಿಗೆ, ಕಲಾ ರಸಿಕರಿಗೆ ಉಪಯುಕ್ತವಾಗುತ್ತವೆ. ಅಷ್ಟೇ ಅಲ್ಲದೆ, ಅಪರೂಪದ ಶಿಲ್ಪಕಲೆಗಳ ಮರುಸೃಷ್ಟಿಗೂ ಕಲಾಕೃತಿಗಳು ದಾರಿದೀಪವಾಗುತ್ತವೆ’ ಎನ್ನುತ್ತಾರೆ ಮಹದೇವ ಶೆಟ್ಟಿ. 

‘ಮೊದಲು ರಾಜ ಮಹಾರಾಜರು, ರಾಯಭಾರಿಗಳ ಪಡಸಾಲೆಗಳಲ್ಲಿ ಮಾತ್ರ ವಿಜೃಂಭಿಸುತ್ತಿದ್ದ ಕಲಾಕೃತಿಗಳು, ಇಂದು ಜನಸಾಮಾನ್ಯರ ಮನೆಗಳ ಹಜಾರದಲ್ಲೂ ಕಂಡು ಬರುತ್ತಿವೆ. ಇದಕ್ಕೆ ಕಾರಣ ಜನರಲ್ಲಿ ಕಲಾಭಿರುಚಿ ಬೆಳೆಯುತ್ತಿದೆ. ಹಾಗಾಗಿಯೇ ಉತ್ತಮ ಕಲಾಕೃತಿಗಳಿಗೆ ಚಿನ್ನದಂಥ ಬೆಲೆ ಸಿಗುತ್ತಿದೆ. ಕಲಾವಿದ ಮೌನಿಯಾಗಿದ್ದು, ಅವನ ಕಲಾಕೃತಿ ಮಾತನಾಡುವಂತಿರಬೇಕು. ತನ್ನ ಕನಸು–ಕನವರಿಕೆ, ಆಸೆ–ಆಕಾಂಕ್ಷೆಗಳನ್ನು ಕುಂಚದ ಮೂಲಕ ಅಭಿವ್ಯಕ್ತಿಸಬೇಕು. ಕಲಾಕೃತಿಗಳು ಸಾಮಾಜಿಕ ಪರಿವರ್ತನೆಗೆ ನಾಂದಿಯಾಗಬೇಕು. ಇತಿಹಾಸವನ್ನು ಬಿಂಬಿಸುವ ಕನ್ನಡಿಯಾಗಬೇಕು. ಕಲಾವಿದನಾದವನು ಎಂದಿಗೂ ಸಾಮಾಜಿಕ ಜವಾಬ್ದಾರಿ ಮರೆಯಬಾರದು’ ಎಂಬುದು ಶೆಟ್ಟಿ ಅವರ ಮನದಾಳದ ಮಾತುಗಳು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !