ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಮಲಾನ

Last Updated 20 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಹಿಮಾಲಯದ ತಪ್ಪಲೆಂದರೆ ಅದು ಜಲಧಾರೆಗಳು, ನದಿ, ತೊರೆಗಳ ಬೀಡು. ಇಂಥ ಜಾಗದಲ್ಲಿರುವ ಅತ್ಯಂತ ಆಕರ್ಷಣೀಯ ಸ್ಥಳ ‘ಮಲಾನ’. ಮನಾಲಿ ಮತ್ತು ಮಲಾನ ಒಂದೇ ರಾಜ್ಯದಲ್ಲಿರುವ ಊರುಗಳು. ಆದರೆ, ಮನಾಲಿಯಷ್ಟು ಮಲಾನ ಜನಪ್ರಿಯವಾಗಲಿಲ್ಲ.

ಹಿಮಾಚಲಪ್ರದೇಶದ ದೌಲಾಧಾರ ಪರ್ವತ ಶ್ರೇಣಿಯಲ್ಲಿ ಅತ್ಯಂತ ಕಡಿದಾದ ಪರ್ವತದ ಮಡಿಲಲ್ಲಿ ಸಮುದ್ರಮಟ್ಟದಿಂದ ಸುಮಾರು ಒಂಬತ್ತು ಸಾವಿರ ಅಡಿಯಷ್ಟು ಎತ್ತರದಲ್ಲಿರುವ ಒಂದು ಪುಟ್ಟ ಹಳ್ಳಿ ಮಲಾನ. ಈ ಹಳ್ಳಿಗೆ ಯಾವುದೇ ರಸ್ತೆ ಮಾರ್ಗ ಇಲ್ಲ. ಕಾಲ್ನಡಿಗೆಯಲ್ಲಿ ಚಂದ್ರಖಾನಿ ಪಾಸ್ ಎಂಬ ಹಿಮಚಾದ್ರಿತ ಪ್ರದೇಶದ ಮೂಲಕ ಸುಮಾರು 12 ಕಿ.ಮೀ. ನಡೆದೇ ಈ ಹಳ್ಳಿ ತಲುಪಬೇಕು.

ಈ ಹಳ್ಳಿಯನ್ನು ವೀಕ್ಷಿಸಲು ಪ್ರವಾಸಿಗರಿಗೆ ಯಾವಾಗ ಬೇಕಾದರೂ ಹೋಗಲು ಸಾಧ್ಯವಿಲ್ಲ. ಮಾರ್ಚ್‍ನಿಂದ ಡಿಸೆಂಬರ್ ತಿಂಗಳವರೆಗೆ ಮಾತ್ರ ಈ ಹಳ್ಳಿ ಪ್ರವಾಸಿಗರಿಗೆ ತೆರೆದಿರುತ್ತದೆ. ಉಳಿದ ಎರಡು ತಿಂಗಳು ಅತಿಯಾದ ಹಿಮದಿಂದ ಕೂಡಿದ್ದು, ಇಲ್ಲಿಗೆ ಹೋಗುವುದೇ ಅಸಾಧ್ಯ.

ಮಲಾನ 1500ರಿಂದ 2000 ಜನಸಂಖ್ಯೆ ಹೊಂದಿದೆ. ಮರದಿಂದ ನಿರ್ಮಿಸಿದ ಮನೆಗಳು, ದೇವಾಲಯಗಳು, ದೇವಾಲಯದ ಸುಂದರ ಕೆತ್ತನೆಗಳು ಆಕರ್ಷಣೀಯವಾಗಿವೆ. ಇಲ್ಲಿನ ಜನರು ತಾವು ಗ್ರೀಕ್ ಪೂರ್ವಜರೆಂದು ಹೇಳಿಕೊಳ್ಳುತ್ತಾರೆ. ಭಾರತ ಸ್ವಾತಂತ್ರ್ಯ ಪಡೆದ ಸಂವಿಧಾನ ಹೊಂದಿದ್ದರೂ, ಈ ಪುಟ್ಟ ಹಳ್ಳಿ ತನ್ನ ಪ್ರತ್ಯೇಕತೆಯನ್ನು ಹಾಗೆಯೇ ಉಳಿಸಿಕೊಂಡಿದೆ. ತನ್ನದೇ ಆದ ವಿಶೇಷ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ, ಭಾಷೆ ಮತ್ತು ಬದುಕಿನ ರೀತಿ ನೀತಿ ನಿಯಮಗಳಿಂದ ವಿಶ್ವ ಭೂಪಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.

ಮಲಾನ ಹಿಮಾಲಯದ ಉಳಿದ ಹಳ್ಳಿಗಿಂತ ತೀರಾ ಭಿನ್ನ. ಈ ಹಳ್ಳಿಯ ಜನ ವಿಚಿತ್ರ ಮುಖ ಲಕ್ಷಣ ಹೊಂದಿದ್ದಾರೆ. ಕೋಲು ಮುಖ, ಉದ್ದನೆಯ ಚೂಪಾದ ಮೂಗು, ಕೆಂಪು ಹಳದಿ ಮತ್ತು ಬಿಳಿಮಿಶ್ರಿತ ಕಂದು ವರ್ಣದ ತ್ವಚೆ. ಕರಿದಾದ ಕಣ್ಣು ಇವರ ಪ್ರಧಾನ ಲಕ್ಷಣ. ಇಂತಹ ಲಕ್ಷಣಗಳು ಅತಿ ಸಮೀಪದ ಹಳ್ಳಿಗಳಲ್ಲಿ ಕಂಡುಬರುವುದಿಲ್ಲ. ಇವರು ಧರಿಸುವ ವಸ್ತ್ರಗಳಲ್ಲೂ ಸಹ ಭಿನ್ನತೆ ಇದೆ. ಜನರು ತಾವೇ ಕೈಯಿಂದ ನೇಯ್ದ ಒರಟಾದ ಮೇಲಂಗಿ, ಪುರುಷರು ತೇಪೆಗಳಂತೆ ಕಾಣುವ ಜೇಬುಗಳಿಂದ ಕೂಡಿರುವ ಪ್ಯಾಂಟನ್ನು ಧರಿಸಿದರೆ, ಸ್ತ್ರೀಯರು ಮೇಲಂಗಿ ಮತ್ತು ಲಂಗವನ್ನು ಧರಿಸುತ್ತಾರೆ.

ಮಹಿಳೆಯರು ಅಲಂಕಾರ ಪ್ರಿಯರು. ಮೂಗಿನ ಎರಡು ಕಡೆಗೂ ಮೂಗು ನತ್ತು, ಕಿವಿಗೆ ಬೃಹತ್ ಗಾತ್ರದ ನೇತಾಡುವ ಬಳೆಗಳು, ಮೊಳಕೈ ತುಂಬಾ ಬಳೆಗಳು, ಕತ್ತಿಗೆ ನೇತಾಡುವ ಸರಗಳು ಇವರಿಗೆ ತುಂಬಾ ಪ್ರಿಯ. ಪುರುಷರು ತಲೆಗೆ ಟೋಪಿಯನ್ನು, ಮಹಿಳೆಯರು ತಲೆಬಟ್ಟೆಯನ್ನು ಕಡಾಯವಾಗಿ ಕಟ್ಟುತ್ತಾರೆ.

ಭಾರತದಲ್ಲಿ ಎಲ್ಲೂ ಇಂಥ ಒಂದು ಜನಾಂಗದ ಕುರುಹು ಕಾಣದಿರುವಾಗ ಇವರುಗಳು ಎಲ್ಲಿಂದ ಹೇಗೆ ಬಂದರೆಂಬುದು ಯಕ್ಷಪ್ರಶ್ನೆ. ಇವರ ಪೂರ್ವಿಕರು ಹೇಳುವಂತೆ ಹಿಮಾಲಯದ ಮಾರ್ಗವಾಗಿ ಭಾರತಕ್ಕೆ ದಂಡೆತ್ತಿ ಬಂದ ಗ್ರೀಕ್ ದೊರೆ ಅಲೆಕ್ಸಾಂಡರ್ ಸ್ವದೇಶಕ್ಕೆ ಹಿಂತಿರುಗುವಾಗ ಅವರ ಸೈನಿಕರಲ್ಲಿ ಕೆಲವರು ಮನಾಲದಲ್ಲೇ ಉಳಿದರೆಂದು ಭಾವಿಸಲಾಗಿದೆ.

ಈ ಜನರ ರೀತಿ ನೀತಿ ತೀರಾ ಭಿನ್ನವಾದದ್ದು. ಅಪ್ಪಿತಪ್ಪಿಯೂ ಹತ್ತಿರದ ಯಾವುದೇ ಹಳ್ಳಿಗಳಿಗೂ ಹೋಗುವುದಿಲ್ಲ. ಹಾಗೆಯೇ ಬೇರೆಯವರನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಸ್ನೇಹ ಸಂಬಂಧ ಬೆಳೆಸುವುದಿಲ್ಲ. ಯಾರೇ ಅಪರಿಚಿತರು ಹಳ್ಳಿಗೆ ಪ್ರವೇಶಿಸಬೇಕಾದರೆ ಮೊದಲು ಹಳ್ಳಿಯ ಪ್ರಧಾನನ ಅನುಮತಿ ಪಡೆಯಬೇಕು. ಅವರಿಗೆ ಸಂಬಂಧಿಸಿದ ವಸ್ತುಗಳನ್ನಾಗಲಿ, ಸ್ಥಳೀಯರನ್ನಾಗಲಿ ಮುಟ್ಟುವಂತಿಲ್ಲ. ಹಾಗೇನಾದರೂ ಮುಟ್ಟಿದರೆ ಮುಲಾಜಿಲ್ಲದೇ ₹ 1 ಸಾವಿರ ದಂಡ ತೆರಬೇಕು.

ಕಿರಿದಾದ ಓಣಿಯಂತಿರುವ ಕಾಲು ಹಾದಿಯ ಅಕ್ಕಪಕ್ಕದಲ್ಲಿರುವ ಮನೆ ಗೋಡೆಗಳನ್ನು ಮುಟ್ಟಿದರೂ ದಂಡ ತಪ್ಪಿದ್ದಲ್ಲ. ತಾವು ತಮ್ಮ ಪ್ರದೇಶ ಮತ್ತು ವಸ್ತುಗಳು ಪವಿತ್ರವಾದದೆಂಬ ಭಾವನೆಯೇ ಈ ಕಟ್ಟುಪಾಡಿಗೆ ಕಾರಣ. ಶುಚಿತ್ವದ ಪ್ರಶ್ನೆ ಬಂದಾಗ ಇವರಷ್ಟು ಕೊಳಕು ಜನ ಜಗತ್ತಿನಲ್ಲಿ ಇಲ್ಲವೇನೋ ಅನಿಸುತ್ತದೆ. ಇವರಿಗೆ ಜೀವನದಲ್ಲಿ ಒಮ್ಮೆಯೂ ಸ್ನಾನ ಮಾಡಿದ ನೆನಪಿಲ್ಲವಂತೆ. ಇನ್ನು ಕಾನೂನು ಕಟ್ಟಳೆಗಳಂತು ತೀರಾ ವಿಚಿತ್ರ. ಭಾರತ ಸಂವಿಧಾನದಲ್ಲಿರುವ ಕಾನೂನನ್ನು ಪಾಲಿಸುವುದಿಲ್ಲ. ತಮ್ಮದೇ ಆದ ಕಾನೂನನ್ನು ರೀತಿನೀತಿ ರಚಿಸಿಕೊಂಡಿದ್ದಾರೆ. ಯಾವುದೇ ಗಲಾಟೆ, ಘರ್ಷಣೆಗಳು ನಡೆದರೂ ಹತ್ತಿರದ ಪೊಲೀಸ್ ಠಾಣೆಗೆ ಹೋಗುವುದಿಲ್ಲ. ಊರಿನ ವ್ಯಕ್ತಿಯ ಸಮ್ಮುಖದಲ್ಲಿ ದೇವಾಲಯದ ಮುಂದೆ ಬಗೆಹರಿಸಿಕೊಳ್ಳುತ್ತಾರೆ. ಹಿರಿಯ ವ್ಯಕ್ತಿಯೇ ನ್ಯಾಯಾಧೀಶ.

ಇನ್ನು ಇವರ ವಿವಾಹ ಪದ್ಧತಿಯಂತೂ ತೀರಾ ಭಿನ್ನವಾದದ್ದು. ಇಲ್ಲಿ ಯಾರನ್ನೂ ವಿಧಿವತ್ತಾಗಿ ವಿವಾಹವಾಗುವುದಿಲ್ಲ. ಬದಲಾಗಿ ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ ಸ್ತ್ರೀ ಮತ್ತು ಪುರುಷರು ಇಷ್ಟಪಟ್ಟರೆ ಮುಗಿಯಿತು. ₹ 1 ದೇವರಿಗೆ ಕಾಣಿಕೆ ಹಾಕಿ ಹಾರ ಬದಲಿಸಿಕೊಂಡರೆ ವಿವಾಹವಾದಂತೆ. ವಿವಾಹಿತ ಸ್ತ್ರೀ ವಿವಾಹಿತ ಪುರುಷನನ್ನು, ವಿವಾಹಿತ ಪುರುಷ ವಿವಾಹಿತ ಮಹಿಳೆಯನ್ನು, ಅವಿವಾಹಿತ ಮಹಿಳೆ ವಿವಾಹಿತ ಪುರುಷನನ್ನು ಮರು ವಿವಾಹವಾಗಬಹುದು. ಇಲ್ಲಿ ವಯಸ್ಸಿನ ನಿರ್ಬಂಧವಿಲ್ಲ.

ಇವರ ಆದಾಯದ ಮೂಲವೆಂದರೆ ಕೃಷಿ ಮತ್ತು ಹೈನುಗಾರಿಕೆ. ಸ್ತ್ರೀ ಮತ್ತು ಪುರುಷರಿಬ್ಬರೂ ಹೊಲಗಳಲ್ಲಿ ಮತ್ತು ಕಾಡುಗಳಲ್ಲಿ ಕೆಲಸ ಮಾಡುತ್ತಾರೆ. ಮಹಿಳೆಯರಂತೂ ಕಷ್ಟದ ಕೆಲಸವನ್ನು ಸುಲಭವಾಗಿ ನಿಭಾಯಿಸುವರು. ಅಲ್ಲದೆ, ಮರದ ದಿನ್ನೆಗಳನ್ನು ಬೆನ್ನಮೇಲೆ ಸುಲಭವಾಗಿ ಹೊತ್ತು ಸಾಗಿಸುವರು.

ಒಟ್ಟಿನಲ್ಲಿ ವಿಚಿತ್ರ ಸಂಸ್ಕೃತಿ ಹೊಂದಿರುವ ಮಲಾನ ಜನರು ಎತ್ತರದ ಚಂದ್ರಖಾನಿ ಕಣಿವೆಯಲ್ಲಿ ನಿಸರ್ಗದ ಮಡಿಲಲ್ಲಿ ನೆಲೆ ನಿಂತಿದ್ದಾರೆ. ಸುಂದರ ಕಣಿವೆಯಲ್ಲಿರುವ ಮಲಾನ ಎಂತಹವರನ್ನೂ ಆಕರ್ಷಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT