ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ‘ಮಾರ್ಚ್ ಗ್ರೂಪ್‌ ಶೋ’

Last Updated 5 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಕಲಾವಿದ-ಕಲಾಕೃತಿ-ಪ್ರೇಕ್ಷಕ ಇವುಗಳ ಸಮಾಗಮಕ್ಕೆ ನಗರದಲ್ಲೊಂದು ಆರ್ಟ್ಜ್ ಸ್ಟೂಡಿಯೊ ವಿತ್ ಗ್ಯಾಲರಿಯು ಗೋಕುಲಂನಲ್ಲಿ ಈಚೆಗೆ ಉದ್ಘಾಟನೆಗೊಂಡಿದೆ. ಪ್ರಥಮವಾಗಿ ‘ಮಾರ್ಚ್ ಗ್ರೂಪ್‌ ಶೋ’ ಕಲಾಪ್ರದರ್ಶನವು ಪ್ರಾರಂಭಗೊಂಡು ಏ.13ರವರೆಗೆ ನಡೆಯುತ್ತಿದೆ.

ದುಬೈನಲ್ಲಿರುವ ಶೋಭಾ ಸುಬ್ಬಯ್ಯ ಅವರ ಪರಿಕಲ್ಪನೆಯಂತೆ ಆರ್ಟ್ಜ್ ಸ್ಟೂಡಿಯೊ ವಿತ್ ಗ್ಯಾಲರಿಯು ಮೈಸೂರಿನಲ್ಲಿ ಉದಯಿಸಿದೆ. ಮೂಲತಃ ಮೈಸೂರಿನವರಾದ ಶೋಭಾ ಸುಬ್ಬಯ್ಯ ಅವರು ದುಬೈನಲ್ಲಿ ಕಳೆದ 20ವರ್ಷಗಳಿಂದ ನೆಲೆನಿಂತಿದ್ದಾರೆ. ದುಬೈನಲ್ಲಿ ನಡೆಯುವ ಅಂತರರಾಷ್ಟ್ರೀಯ ಕಲಾಪ್ರದರ್ಶನಗಳನ್ನು ಕಂಡಾಗ ನಾವೇಕೆ ಮಾಡಬಾರದು ಎಂಬ ಮನಸ್ಥಿತಿಯಲ್ಲಿ ಮೈಸೂರಿಗೂ ದುಬೈಗೂ ಕಲಾವಿನಿಮಯದ ಕೊಂಡಿ ಬೆಸೆಯುವ ತವಕದಲ್ಲಿದ್ದಾರೆ. ಪತಿ ಸುಬ್ಬಯ್ಯ, ಮಕ್ಕಳಾದ ಛಾಯಾಚಿತ್ರಕಲಾವಿದ ಮುತ್ತಣ್ಣ ಮತ್ತು ತಿಮ್ಮಯ್ಯ ಸಾಥ್ ನೀಡುತ್ತಿದ್ದಾರೆ.

ಭಾರತೀಯ ಚಿತ್ರಕಲೆ ಮತ್ತು ಕಲಾಕೃತಿಗಳ ಪರಿಚಯ ದುಬೈನಲ್ಲಾಗಬೇಕು ಅದರ ಲಾಭ ಕಲಾವಿದರಿಗೆ ಸಿಗಬೇಕು ಎನ್ನುತ್ತಾರೆ ಅವರು.

ಶೋಭಾ ಸುಬ್ಬಯ್ಯನವರು ಕಲಾವಿದರಾಗಿ, ಒಳಾಂಗಣ ವಿನ್ಯಾಸಕರಾಗಿ ದುಬೈನಲ್ಲಿ ಕಾರ್ಯನಿವರ್ಹಿಸುತ್ತಿದ್ದು, ಅಲ್ಲಿನ ಕಲಾವಲಯವನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಭಾರತೀಯ ಕಲಾವಿದರ ಕಲಾಕೃತಿಗಳಿಗೆ ಹೆಚ್ಚು ಮಾನ್ಯತೆ ಇರುವುದರಿಂದ ಇದರ ಸದುಪಯೋಗ ಪಡೆದುಕೊಳ್ಳಲು ಮೈಸೂರಿನ ಕಲಾವಿದರನ್ನು ಒಂದುಗೂಡಿಸಿ ‘ಮಾರ್ಚ್ ಗ್ರೂಪ್‌ ಶೋ’ ಕಲಾಪ್ರದರ್ಶನ ಏರ್ಪಡಿಸಿದ್ದಾರೆ.

ಡಾ.ರಾಜಕುಮಾರ ಅವರನ್ನು ವೀರಪ್ಪನ್ ಅಪಹರಿಸಿದಾಗ ಸಾಮಾಜಿಕ ವ್ಯವಸ್ಥೆಯು ತಲ್ಲಣಗೊಂಡ ಅಸಹಾಯಕ ಸ್ಥಿತಿಯ ನಗ್ನಸತ್ಯವನ್ನು ತೋರ್ಪಡಿಸುವ ‘ಯಾರಿಂದ ಯಾರಿಗೆ ಬಿಡುಗಡೆ’ ಎಂಬ ಗ್ರಾಫಿಕ್ ಕಲಾಕೃತಿಯನ್ನು ಕಾವಾದ ವಿಶ್ರಾಂತ ಡೀನ್ ಬಸವರಾಜ ಮೊಸವಳಗಿ ಅವರು ತೀಕ್ಷ್ಣವಾಗಿ ಮುದ್ರಿಸಿದ್ದಾರೆ.

ಕಿಳ್ಳೇಕ್ಯಾತರ ಗೊಂಬೆಗಳಿಂದ ಪ್ರಭಾವಿತರಾಗಿರುವ ಮಹಾರಾಣಿ ಡಿಇ.ಡಿ ಕಾಲೇಜಿನ ಚಿತ್ರಕಲಾ ಶಿಕ್ಷಕಿ ಎಂ.ಎಲ್.ಮಾಧವಿಯವರ ‘ಫೋಕ್ ನೆಕ್ಸ್ಟ್ ಟೆಕ್ನಾಲಜಿ’ ಕಲಾಕೃತಿಯಲ್ಲಿ ಟಿಪ್ಪು ನಂತರದ ಆಯುಧಗಳ ಬೆಳವಣಿಗೆಯನ್ನು ಹಾಗೂ ‘ಅಶೋಕವಾಟಿಕಾ’ ಸೀತಾಪಹರಣದ ಸನ್ನಿವೇಶವನ್ನು ಜಾನಪದ ಶೈಲಿಯ ಕಲಾಕೃತಿಗಳಲ್ಲಿ ಚಿತ್ರಿಸಿದ್ದಾರೆ.

ರವಿವರ್ಮ ಕಲಾಶಾಲೆಯ ಪ್ರಾಚಾರ್ಯರು ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಕಲಾವಿದ ಶಿವಕುಮಾರ ಕೆಸರಮಡು ಅವರ ‘ಅಮೂರ್ತಕಲೆ’ಯ ಕಲಾಕೃತಿಗಳು ಸಮಕಾಲೀನ ಚಿತ್ರಕಲೆಯ ನೆಲೆಗಟ್ಟಿನಲ್ಲಿ ಮೂಡಿಬಂದಿವೆ. ಬಣ್ಣ, ಮೈವಳಿಕೆ, ಅವಕಾಶ, ಫೋರ್ಸ್‌ ಹಾಗೂ ಸಮತೋಲನವು ಸಂಯೋಜಿತವಾಗಿ ರೂಪುಗೊಂಡಿವೆ.

ನಿವೃತ್ತ ಸೈನಿಕರಾಗಿದ್ದ ರಂಗಣ್ಣ ತಾತ ಬೆಂಗಳೂರಿನ ಸಿಕೆಪಿಯಲ್ಲಿ ಕಲಾವಿದ್ಯಾರ್ಥಿಗಳಿಗೆ ರೂಪದರ್ಶಿಯಾಗಿದ್ದವರು, ಇವರಿಂದ ಪ್ರೇರಣೆಗೊಂಡು ಕಾವಾ ಉಪನ್ಯಾಸಕ, ಶಿಲ್ಪಕಲಾವಿದ ವೀರಣ್ಣ.ಎಂ. ಅರ್ಕಸಾಲಿ ಅವರು ಪಿಒಪಿ ಮಾಧ್ಯಮದಲ್ಲಿ ರಚಿಸಿರುವ ‘ರಂಗಣ್ಣ ತಾತ’ನ ಶಿಲ್ಪವು ಮನೋಹರವಾಗಿದೆ.

ಶ್ರೀಕಲಾನಿಕೇತನ ಕಲಾಶಾಲೆಯ ಉಪನ್ಯಾಸಕ ಮತ್ತು ಕಲಾವಿದ ಡಾ.ವಿಠ್ಠಲರಡ್ಡಿ ಚುಳಕಿಯವರ ‘ಅನ್‌ಟೈಟಲ್ 1ಮತ್ತು 2’ ಕಲಾಕೃತಿಗಳಲ್ಲಿ ನೈಸರ್ಗಿಕವಾಗಿ ಮೂಡುವ ಒಳನೋಟಗಳು ಬದಲಾವಣೆಗೊಳ್ಳುವ ಬಣ್ಣಗಳ ಸಂಯೋಜನೆಯನ್ನು ಆಧುನಿಕಕಲೆಯ ಸಮಕಾಲೀನ ಚಿತ್ರಕಲೆಯಲ್ಲಿ ಸಮರ್ಥವಾಗಿ ರೂಪಿಸಿದ್ದಾರೆ.

ಶಿಲ್ಪಕಲಾವಿದೆ ಡಾ.ಬಿ.ಆರ್‌.ಗೀತಾಂಜಲಿ ಅವರ ಫೈಬರ್ ಮಾಧ್ಯಮದ ‘ಮಾಡಲ್-1’ ಶಿಲ್ಪದಲ್ಲಿ ವಯಸ್ಸಾದ ಅಜ್ಜಿ ತಟಸ್ಥವಾದ ಬದುಕಿನ ಸೂಕ್ಷ್ಮತೆ ಮತ್ತು ಮೆಟಲ್ ಮಾಧ್ಯಮದ ‘ಅಮೂಲ್ಯವಾದ ಅವಶೇಷಗಳು’ ಎಂಬ ಶಿಲ್ಪಗಳು ಭಾವನಾತ್ಮಕವಾದ, ಯಾಂತ್ರಿಕೃತವಾದ ನಡವಳಿಕೆಯನ್ನು ಮೂಡಿಸಿವೆ.

ಹಿರಿಯ ಕಲಾವಿದರಾದ ಕಾವೇರಪ್ಪ.ಎನ್.ಬಿ. ಅವರು ಮೂಲತಃ ಕೊಡಗಿನವರು. ಅಲ್ಲಿ ಓಡಾಡುವಾಗ ಬಾಲ್ಯದ ನೆನಪು ಇಂದಿನ ಸ್ಥಿತಿ, ಬದಲಾವಣೆಯಾದ ಪ್ರಕೃತಿ, ಆ ಹಸಿರಿನ ಸೌಂದರ್ಯ, ಮಳೆ, ಮಂಜು ಮತ್ತೆ ಮರುಕಳಿಸಬಹುದೇ ಎಂಬ ಭರವಸೆಯನ್ನು ‘ಗ್ರೀನ್ ಹೋಪ್’ ಕಲಾಕೃತಿಯಲ್ಲಿ ನೋಡಬಹುದು.‌

ತಿ.ನರಸೀಪುರ ತಾಲ್ಲೊಕಿನ ಮುಸುವಿನ ಕೊಪ್ಪಲು ಸರ್ಕಾರಿ ಪ್ರೌಢ ಶಾಲೆ ಚಿತ್ರಕಲಾ ಶಿಕ್ಷಕರು ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಯುವಕಲಾವಿದ ಸುರೇಶ.ಕೆ. ಅವರ ‘ಮೂಮೆಂಟ್ ಆಫ್ ದಿ ಲೈಫ್’ ಕಲಾಕೃತಿಯಲ್ಲಿ ಮನುಷ್ಯ ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ಬದುಕನ್ನು ಕಪ್ಪು ಬಿಳುಪಿನ ಸಂಯೋಜನೆ ಮತ್ತು ತಂತ್ರಗಾರಿಕೆಯಲ್ಲಿ ಚಿತ್ರಿಸಿರುವುದು. ಮೆಚ್ಚುವಂತಾಗಿದೆ.

ಯುವಕಲಾವಿದ ಮತ್ತು ಆರ್ಟ್ಜ್ ಸ್ಟೂಡಿಯೊ ವಿತ್ ಗ್ಯಾಲರಿಯ ಕೋಆರ್ಡಿನೇಟರ್ ದಯಾನಂದ ನಾಗರಾಜು ಅವರ ‘ಬೆಸುಗೆ’ ಕಲಾಕೃತಿಯು ವೃತ್ತಾಕಾರವಾಗಿದ್ದು, ಜಗತ್ತಿನ ಸಂಬಂಧಗಳು ಸಂಕುಚಿತಗೊಳ್ಳುತ್ತಿವೆ. ನಿಸರ್ಗ ಕಲ್ಮಶಗೊಳ್ಳುತ್ತಿದೆ. ಈ ಸೂಕ್ಷ್ಮತೆಯನ್ನು ಬೆಸೆಯುವ ಸಂದೇಶ ಇವರ ಕಲಾಕೃತಿಯಲ್ಲಿ ಕಾಣಬಹುದಾಗಿದೆ.

ಯುವಕಲಾವಿದ ಎನ್‌.ಪರಮೇಶ್ವರ ಅವರು ಅಮೂರ್ತಕಲೆಯನ್ನು ಪ್ರದರ್ಶಿಸಿದ್ದು ಗಾಢವಾದ ಕಪ್ಪು ಬಣ್ಣವನ್ನು ಬಿಳಿ ಕ್ಯಾನ್ವಾಸ್ ಮೇಲೆ ಹಲವಾರು ಭಾವನೆಗಳುಂಟಾಗುವಂತೆ ಚಿತ್ರಿಸಿದ್ದಾರೆ. ಮೈವಳಿಕೆ ಮತ್ತು ತಂತ್ರಗಾರಿಗೆ ಹೆಚ್ಚು ಒತ್ತು ನೀಡಿದ್ದು, ಆಧುನಿಕ ಸ್ಪರ್ಶ, ವಿವಿಧ ಆಯಾಮ, ಇವರ ಕಲಾಕೃತಿಗಳಲ್ಲಿ ಕಂಡುಬರುತ್ತದೆ.

ಛಾಯಾಚಿತ್ರಕಲಾವಿದ ಶ್ರೀಧರ್.ವಿ.ಜಿ ಅವರು ಮೈಸೂರಿನ ಪಾರಂಪರಿಕ ಕಟ್ಟಡಗಳ ಉಳಿವಿಗಾಗಿ ಶ್ರಮಿಸುತ್ತಿರುವವರು. ಆಧುನಿಕತೆಯಲ್ಲಿ ನೆಲಕಚ್ಚಿರುವ ನೂರಾರು ಕಟ್ಟಡಗಳ ಮೂಲಛಾಯಾಚಿತ್ರಗಳು ಇವರ ಸಂಗ್ರಹದಲ್ಲಿವೆ. ಲ್ಯಾನ್ಸ್‌ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ಕಟ್ಟಡಗಳ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ.

ಒಟ್ಟಾರೆ ‘ಮಾರ್ಚ್ ಗ್ರೂಫ್ ಶೋ’ ಕಲಾ ಪ್ರದರ್ಶನದಲ್ಲಿ ಹಲವು ದೃಷ್ಟಿಕೋನಗಳಿಂದ ಕಲಾಕೃತಿಗಳನ್ನು ಕಾಣಬಹುದು. ಆರ್ಟ್ಜ್ ಸ್ಟೂಡಿಯೋ ವಿತ್ ಗ್ಯಾಲರಿಯು ನಿರಂತರವಾಗಿ ಕಲಾಚಟುವಟಿಕೆಯಿಂದಿರಲಿ, ಕಲಾವಿದರಿಗೆ ಉತ್ತಮ ವೇದಿಕೆಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT