ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊಗ್ರಫಿ ಬೆನ್ನು ಹತ್ತಿ...

Last Updated 31 ಜನವರಿ 2019, 19:47 IST
ಅಕ್ಷರ ಗಾತ್ರ

ಲಿವುಡ್‌ನ ಕತ್ರಿನಾ ಕೈಫ್‌, ಸಾರಾ ಅಲಿಖಾನ್, ಸ್ಯಾಂಡಲ್‌ವುಡ್‌ನ ಪ್ರಿಯಾಮಣಿ, ಸಿಮ್ರನ್‌, ಉಪೇಂದ್ರ, ಶಿವರಾಜ್‌ಕುಮಾರ್‌ ಅವರ ಸಿನಿಮಾಗಳಿಗಾಗಿ ಸ್ಟಿಲ್ಸ್‌ ಕಟ್ಟಿಕೊಡುವ ಮೂಲಕ ಪ್ರಖ್ಯಾತಿ ಗಳಿಸಿದ್ದ ಶಿವ್‌ ಗಾಂಧಿ (ಅನ್ನೆಚಿರಾ ಶಿವ) ಈಗ ವೈಲ್ಡ್‌ ಲೈಫ್‌ ಫೋಟೊಗ್ರಾಫರ್‌ ಆಗಿ ಬದಲಾಗಿದ್ದಾರೆ.

ದಿನ ಬೆಳಗಾದರೆ ಸೆಲೆಬ್ರಿಟಿಗಳ ಜೊತೆ ಓಡಾಡುತ್ತಿದ್ದ ಶಿವ್‌ ಅವರು ತಮಗಿದ್ದ ಪ್ರಖ್ಯಾತಿ, ಅಸ್ಮಿತೆಯಿಂದ ಹೊರಬಂದು ಬೇರೊಂದು ಪ್ರಾಕೃತಿಕ ಜಗತ್ತಿಗೆ ಹೊರಳಿದ್ದಾರೆ. ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಷ್ಟರ ಮಟ್ಟಿಗೆ ಪ್ರಕೃತಿ ಛಾಯಾಚಿತ್ರಗಳನ್ನು ಸೆರೆಹಿಡಿದು ಫೊಟೊಗ್ರಫಿ ರಸಿಕರ ಮನಸ್ಸು ಗೆದ್ದಿದ್ದಾರೆ.

‘ಜಗತ್ತನ್ನು ಸುತ್ತಾಡುವ ಆಸೆ ಮೊದಲಿಂದಲೂ ಇತ್ತು. ಜನರು ಹೆಚ್ಚಾಗಿ ಓಡಾಡದ ಪ್ರದೇಶಗಳನ್ನು ತಲುಪಿ ಅಲ್ಲಿಯ ಸಮಸ್ಯೆ ಹಾಗೂ ಪ್ರಕೃತಿಯನ್ನು ಸೆರೆಹಿಡಿಯುವ ಕನಸಿನ ಹಿಂದೆ ಬಿದ್ದೆ. ಅದರಲ್ಲಿ ಈಗ ಸಾಕಷ್ಟು ಯಶಸ್ಸನ್ನೂ ಕಂಡಿದ್ದೇನೆ’ ಎಂಬುದು ಶಿವ್‌ ಅವರ ಮಾತು.

’ನನಗೆ ಈಗಲೂ ಕಾಡೋದು, ಕಾಶ್ಮೀರದ ಬಳಿ ಇರುವ ಜಂಸ್ಕಾರ್‌ ಎಂಬ ಹಳ್ಳಿ. ಅಲ್ಲಿ 338 ಕಿ.ಮೀ ಉದ್ದದ ನದಿ ಇದೆ. ಈ ನದಿ ವರ್ಷದಲ್ಲಿ ಎರಡು ತಿಂಗಳು ಮಾತ್ರ ಸಂಪೂರ್ಣವಾಗಿ ಮಂಜುಗಡ್ಡೆಯಾಗಿ ಬದಲಾಗುತ್ತದೆ. ಆ ಸಮಯದಲ್ಲಿ ಆ ಜಾಗವನ್ನು ನೋಡುವ ಖುಷಿಯೇ ಬೇರೆ. ಆದರೆ –30 ಡಿಗ್ರಿ ಸೆಲ್ಸಿಯಸ್‌ನಲ್ಲಿ ಉಸಿರಾಟ ಕಷ್ಟ. ಓಡಾಡೋದಕ್ಕೂ ಆಗದಂತಹ ಸ್ಥಿತಿ. ಆ ಹಳ್ಳಿಯಲ್ಲಿ ವಿದ್ಯುತ್‌ ಸಂಪರ್ಕವೂ ಇಲ್ಲ. ಯಾವುದೇ ಆಧುನಿಕ ಸೌಲಭ್ಯ ಇಲ್ಲ. ಶೌಚಾಲಯವೂ ಇಲ್ಲ. ಇಂತಹ ಸ್ಥಿತಿಯನ್ನು ಎದುರಿಸಿ ಛಾಯಾಚಿತ್ರಗಳನ್ನು ತೆಗೆದೆ. ಈಗ ಅಲ್ಲಿ ಟ್ರಕ್ಕಿಂಗ್‌ ಆರಂಭಿಸಿದ್ದಾರೆ. ಜನರಿಗೆ ಸ್ವಲ್ಪ ಅನುಕೂಲತೆಗಳೂ ಸಿಕ್ಕಿವೆ. ಆ ಊರಿನಲ್ಲಿ ಕೇವಲ 38 ಕುಟುಂಬಗಳು ನೆಲೆಸಿವೆ. ನನಗೂ ಅವರಿಗೆ ಸಹಾಯ ಮಾಡುವ ಕನಸಿದೆ’ ಎಂದು ತಮ್ಮ ಹೊಸ ಜರ್ನಿಯನ್ನು ತೆರೆದಿಟ್ಟರು.

18 ವರ್ಷ ಸೆಲೆಬ್ರಿಟಿ ಫೋಟೊಗ್ರಾಫರ್‌ ಆಗಿದ್ದ ಶಿವು ಅವರು ಸಿನಿಮಾಗಳ ಪೋಸ್ಟರ್‌ಗಳಿಗಾಗಿಯೂ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಭೀಮಾ ಜುವೆಲ್ಸ್‌ಗೂ ಜಾಹೀರಾತು ಶೂಟಿಂಗ್‌ ಮಾಡಿಕೊಟ್ಟಿದ್ದಾರೆ. ಈಗ ಎರಡೂವರೆ ವರ್ಷದಿಂದ ಸಂಪೂರ್ಣವಾಗಿ ಅದರಿಂದ ಹೊರಬಂದು ಪ್ರಕೃತಿ ಫೋಟೊಗಳನ್ನು ತೆಗೆಯುವುದರ ಮೂಲಕ ವಿಭಿನ್ನ ಪಯಣ ಆರಂಭಿಸಿದ್ದಾರೆ.

ಕಾಶ್ಮೀರ ಹಾಗೂ ಕೊಡಗಿನಲ್ಲಿ ಅವರು ಹೆಚ್ಚು ಛಾಯಾಚಿತ್ರಗಳನ್ನು ತೆಗೆದಿದ್ದಾರೆ.

‘ನನಗೆ ಈಗಲೂ ಕೌತುಕ ಅನಿಸೋ ಒಂದು ಸಂಗತಿ ಇದೆ. ಕೊಡಗಿನಲ್ಲಿ ನಾನು ಚಿತ್ರಗಳನ್ನು ತೆಗೆದ ಬಹುತೇಕ ಜಾಗಗಳು ಈಗ ಕಣ್ಮರೆಯಾಗಿವೆ. ಹೋಂ–ಸ್ಟೇಗಳನ್ನು ಕಟ್ಟಲಿ ಆದರೆ ಅದಕ್ಕಾಗಿ ಗುಡ್ಡ, ಬೆಟ್ಟಗಳನ್ನು ನಾಶ ಮಾಡಬಾರದು. ಟ್ರಕ್ಕಿಂಗ್‌ ಮಾಡುವವರು ಎಲ್ಲೆಂದರಲ್ಲಿ ಕಸ ಬಿಸಾಕುವುದನ್ನು ಬಿಟ್ಟರೆ ಪರಿಸರ ರಕ್ಷಣೆ ಮಾಡಬಹುದು’ ಎನ್ನುವುದು ಅವರ ಕಾಳಜಿ.

ಛಾಯಾಚಿತ್ರ ಪ್ರದರ್ಶನ

ಶಿವ್‌ ಗಾಂಧಿ ಅವರ ’ಸ್ಕೇಪ್ಸ್‌ ಆಫ್‌ ಇಂಡಿಯಾ‘ ಛಾಯಾಚಿತ್ರ ಪ್ರದರ್ಶನ ಫೆ.1ರಿಂದ ಆರಂಭವಾಗಿ ಇದೇ11ರವರೆಗೆ ನಡೆಯಲಿದೆ. ಸ್ಥಳ– ರೆವೆಸ್‌ ಆರ್ಟ್‌ ಗ್ಯಾಲರಿ, ಮಾರೇನಹಳ್ಳಿ ರಸ್ತೆ, ಸಂಗಮ್‌ ಸರ್ಕಲ್‌, 8ನೇ ಬ್ಲಾಕ್‌, ಜಯನಗರ

ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅವರ ಸಹೋದರ ದಿನೇಶ್ ಕುಂಬ್ಳೆ ಅವರು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ನಟ ಭುವನ್‌ ಪೊನ್ನಣ್ಣ, ಚೇತನ್‌ ಗೌಡ ಜೊತೆಗೂಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT