ಶಿಲ್ಪ ಕಲಾ `ವಿಶ್ವಕರ್ಮ' ಗುಣವಂತೇಶ್ವರ ಭಟ್ಟರು

7

ಶಿಲ್ಪ ಕಲಾ `ವಿಶ್ವಕರ್ಮ' ಗುಣವಂತೇಶ್ವರ ಭಟ್ಟರು

Published:
Updated:
ಕೆತ್ತನೆಯಲ್ಲಿ ನಿರತ ಗುಣವಂತೇಶ್ವರ ಭಟ್‌

ಶಿಲ್ಪ ಕಲಾ `ವಿಶ್ವಕರ್ಮ' ಗುಣವಂತೇಶ್ವರ ಭಟ್ಟರು

ಕಾರ್ಕಳದಿಂದ ಉಡುಪಿಗೆ ಹೋಗುವ ಹೆದ್ದಾರಿಯ ಸನಿಹ ಗಮನ ಸೆಳೆಯುವ ಒಂದು ಶಿಲ್ಪ ಕಲಾ ಕೇಂದ್ರವಿದೆ. ಅದರೊಳಗೆ ನೋಡಿದರೆ ಸಾಕ್ಷಾತ್ ಎದ್ದು ಬಂದ ಬೇಲೂರಿನ ಹೊಯ್ಸಳ ಕಲೆಯ ಪ್ರತಿರೂಪವಾದ ಶಿಲಾ ಬಾಲಿಕೆಯರಿದ್ದಾರೆ, ದೇವಾಲಯಗಳಲ್ಲಿ ಪೂಜಿಸುವ ದೇವ ದೇವತೆಯರಿದ್ದಾರೆ, ಕರಾವಳಿಯ ನಾಗ ಶಿಲೆಗಳ ವೈವಿಧ್ಯಗಳಿವೆ. ಒಂದೆಡೆ ಧನ್ವಂತರಿ, ಇನ್ನೊಂದೆಡೆ ಪರಶುರಾಮ. ಶಿಲ್ಪಕಲಾ ಸೌಂದರ್ಯದ ವಿಶ್ವಕರ್ಮನ ನೆಲೆಯಾಗಿ ಕಾಣುತ್ತದೆ ಕಲಾಶಾಲೆ.

ಅಲ್ಲಿ ಶಿಲೆಯಿಂದ ಶಿಲ್ಪವನ್ನು ಸೃಷ್ಟಿಸುವುದರಲ್ಲಿ ತನ್ಮಯರಾಗಿರುವವರು ಗುಣವಂತೇಶ್ವರ ಭಟ್ಟರು. ಇಂದು ಕರಾವಳಿಯಲ್ಲಿ ಅವರು ಬಹು ಬೇಡಿಕೆಯ ಒಬ್ಬ ಶಿಲ್ಪಿಯಾಗಿದ್ದರೂ ಅದರ ಬಗೆಗೆ ಅವರಿಗೆ ಒಣ ಪ್ರತಿಷ್ಠೆಯಿಲ್ಲ. ಇವರ ಕೈಯಲ್ಲಿ ಸಿಕ್ಕಿದ ಕಲ್ಲೊಂದು ಚಾಣಗಳ ಪೆಟ್ಟು ತಿಂದು ಶಿಲಾಬಾಲಿಕೆಯಾಗಿ ಜೀವಂತವಾಗುತ್ತದೆ. ಆರಾಧನೆಯ ದೇವವಿಗ್ರಹವಾಗಿ ಗುಡಿಯಲ್ಲಿ ವಿರಾಜಮಾನವಾಗುತ್ತದೆ. ಭಾರತದ ಹಳೆಯ ಪರಂಪರೆಯ ಶಿಲ್ಪ ಸೌಂದರ್ಯದ ಸೃಷ್ಟಿಕರ್ತನಾಗಿ ಅವರು ನೂರಾರು ಶಿಲಾ ವಿಗ್ರಹಗಳ ಮೂಲಕ ಶಿಲೆಯನ್ನು ಕಾವ್ಯವಾಗಿ ಅರಳಿಸುತ್ತಾರೆ.

59ರ ಹರಯದ ಗುಣವಂತೇಶ್ವರ ಭಟ್ಟರು ಬಂಟ್ವಾಳ ತಾಲ್ಲೂಕಿನ ಕೋಡಪದವು ಎಂಬಲ್ಲಿ ಹುಟ್ಟಿದವರು. ತಂದೆ ಕೋಟಿಮೂಲೆ ಶಂಕರ ಭಟ್ಟರು ಮರದಿಂದ ಕಲಾತ್ಮಕವಾದ ಬಾಗಿಲುಗಳು, ತಂಬೂರಿ, ತಬಲ ಇತ್ಯಾದಿ ಕಲಾ ಪರಿಕರಗಳ ಕೆತ್ತನೆಯಲ್ಲಿ ಹೆಸರಾದವರು. ಕಲಾವಂತಿಗೆಗಾಗಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಪಡೆದವರು. ಅವರ ಕಲಾ ಪ್ರೌಢಿಮೆಯನ್ನು ಕಣ್ಣಲ್ಲಿ ಕಂಡೇ ಕರಗತ ಮಾಡಿಕೊಂಡ ಗುಣವಂತೇಶ್ವರ ಭಟ್ಟರು ಓದಿದ್ದು ಹತ್ತನೆಯ ತರಗತಿ. ಬಳಿಕ ಕೆನರಾ ಬ್ಯಾಂಕ್ ಪ್ರಾಯೋಜಿತ ಬೆಂಗಳೂರಿನ ಕೋಲ್ಪಾಡಿ ಏಕನಾಥ ಕಾಮತ್ ಕಲಾ ಸಂಸ್ಥೆಯಲ್ಲಿ ಎರಡು ವರ್ಷಗಳ ಕಾಲ ಶಿಲ್ಪಕಲೆಯ ತರಬೇತಿ ಪಡೆದರು. ಇದರೊಂದಿಗೆ ತಂದೆಯಿಂದ ಕಲಿತ ಕಾಷ್ಠ ಕಲೆಯನ್ನೂ ಬೆಳೆಸಿಕೊಂಡರು. ಐದು ವರ್ಷಗಳ ನಿರಂತರ ಅಭ್ಯಾಸದಿಂದ ಪರಿಪೂರ್ಣವಾದ ಶಿಲ್ಪ ಕಲಾ ಸಾಮರ್ಥ್ಯವನ್ನು ಗಳಿಸಿಕೊಂಡರು.

ಕಾರ್ಕಳದಲ್ಲಿ ಕೆನರಾ ಬ್ಯಾಂಕ್‍ನ ಶತಮಾನೋತ್ಸವ ಗ್ರಾಮೀಣ ಅಭಿವೃದ್ಧಿ ಸಮಿತಿ ಆಯೋಜಿಸಿದ ಸಿ. ಇ. ಕಾಮತ್ ಇನ್‍ಸ್ಟಿಟ್ಯೂಟ್ ಆಫ್ ಆರ್ಟಿಸನ್ಸ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಶಿಲ್ಪ ಕಲೆಯ ಸಾಧನೆಗೆ ಮಾರ್ಗದರ್ಶಕ ಶಿಕ್ಷಕರಾಗಿ 23 ವರ್ಷಗಳಿಂದ ಸಾವಿರಾರು ಕಲಾ ಪ್ರತಿಭೆಗಳನ್ನು ಸೃಷ್ಟಿಸುವ ಕೆಲಸ ಭಟ್ಟರದು. ಈ ಶಿಲ್ಪಕಲಾ ಶಾಲೆಗೆ ದೇಶದಲ್ಲೇ ಮೊದಲ ಸ್ಥಾನ ಬಂದಿದೆ. ಇಂತಹ ಸಾಧನೆಗೆ ಅವರಂತಹ ಶಿಕ್ಷಕರ ಪಾತ್ರವೂ ಮುಖ್ಯವಾಗಿದೆ. ಮನೆಯ ಬಳಿ ತಮ್ಮ ಕಲಾ ಸೃಷ್ಟಿಯ ಕಾರ್ಯಾಗಾರದಲ್ಲಿ ಅಸಂಖ್ಯಾತ ಶಿಲಾ ವಿಗ್ರಹಗಳನ್ನು ಕಡೆದು ದೇಶದ ಎಲ್ಲೆಡೆಗೂ ತಲುಪಿಸಿದ್ದಾರೆ. ಕರಾವಳಿಯ ಹಲವೆಡೆ ಶಿಲಾಮಯ ದೇಗುಲಗಳ ನಿರ್ಮಾಣವನ್ನೂ ಮಾಡಿ ಕೊಟ್ಟಿದ್ದಾರೆ.

ಭಟ್ಟರ ಕಲೆಯ ಸಾಧನೆ ಸಣ್ಣದೇನಲ್ಲ. ಅವರಿಂದ ತರಬೇತಿ ಪಡೆದವರನ್ನೇ ಜೊತೆಗಿಟ್ಟುಕೊಂಡಿದ್ದಾರೆ. ಇವರ ಕರಗಳಲ್ಲಿ ಕಲೆಯಾಗಿ ಅರಳಿದ ಕಲ್ಲುಗಳ ಸಂಖ್ಯೆ ಕಡಿಮೆ ಇಲ್ಲ. ಪುತ್ತೂರಿನ ಬಳಿಯ ಈಶ್ವರಮಂಗಲದ ಹನುಮಗಿರಿಯಲ್ಲಿ ಸ್ಥಾಪನೆಯಾದ 18 ಅಡಿ ಎತ್ತರ (ನಾಲ್ಕು ಅಡಿ ಎತ್ತರದ ಪೀಠ ಸೇರಿದರೆ 22 ಅಡಿ)ವಿರುವ ಶ್ರೀರಾಮ ವಿಗ್ರಹ ಅವರದೇ ಸೃಷ್ಟಿ. ಅಲ್ಲಿರುವ ಒಂಭತ್ತು ಅಡಿ ಎತ್ತರದ ಪಂಚಮುಖಿ ಆಂಜನೇಯ ವಿಗ್ರಹ ಅವರಿಗೆ ಕೀರ್ತಿ ತಂದಿದೆ. ಹೊಸನಗರ ಮಠಾಧೀಶರಾದ ರಾಘವೇಶ್ವರ ಭಾರತೀ ಯತಿಗಳ ರಾಮಾಯಣ ಮಹಾಸತ್ರಕ್ಕಾಗಿ ಒಂದೇ ವಾರದಲ್ಲಿ ಆರು ಅಡಿ ಎತ್ತರದ ಆಂಜನೇಯನ ಕಾಷ್ಠ ವಿಗ್ರಹ ತಯಾರಿಸಿ ಕೊಟ್ಟದ್ದು ಅವರ ಸಾಧನೆ. ಗುರುಗಳಿಗೆ ತಯಾರಿಸಿಕೊಟ್ಟ ಕಾಷ್ಠ ಕಲೆಯ ಪೂಜಾ ಮಂಟಪ ಬಹು ಶೋಭಾಯಮಾನವಾಗಿದೆ.

ಹಟ್ಟಿಯಂಗಡಿ ದೇವಾಲಯದ ಗಣಪತಿ, ಅರಳದ ಏಳು ಅಡಿ ಎತ್ತರದ ಗರುಡ ಮಹಾಕಾಳಿ ಗುಣವಂತೇಶ್ವರ ಭಟ್ಟರ ಸೃಷ್ಟಿ ಕೌಶಲದ ಸಾಕ್ಷ್ಯಗಳು. ಅಲ್ಲದೆ ಐದು ಅಡಿ ಎತ್ತರದ ಪರಶುರಾಮ, ಶಿವಮೊಗ್ಗದ ವಿಪ್ರ ಟ್ರಸ್ಟ್‌ಗೆ ನಿರ್ಮಿಸಿದ ಭಜನೆ ಅಂಜನೇಯನ ಕಾಷ್ಠ ವಿಗ್ರಹ, ಮುಂಡಾಜೆಯ ಪರಶುರಾಮನ ಶಿಲ್ಪ, ಇತ್ತೀಚೆಗೆ ಕಡೆದ ಜೆಡ್ಡುವಿನ ಧನ್ವಂತರಿ ವಿಗ್ರಹ ಹೀಗೆ ಭಟ್ಟರ ಅದ್ಭುತ ಪ್ರತಿಭೆಯ ಸಂಕೇತಗಳಾದ ಮನಮೋಹಕ ಶಿಲ್ಪಗಳಿಗೆ ಲೆಕ್ಕ ಇಟ್ಟಿಲ್ಲ. ಚೌತಿಯ ಸಂದರ್ಭ ಅವರು ತಯಾರಿಸಿಕೊಟ್ಟ ಗಣಪತಿ ವಿಗ್ರಹಗಳ ಸಂಖ್ಯೆ ಐನೂರು ದಾಟಿದ್ದರೆ. ಕರಾವಳಿಯುದ್ದಕ್ಕೂ ಸ್ಥಾಪನೆಗೊಂಡ ನಾಗನಕಲ್ಲುಗಳ ಸಂಖ್ಯೆ ಐದು ಸಾವಿರಕ್ಕಿಂತ ಹೆಚ್ಚು ಎನ್ನುತ್ತಾರೆ.

ಬೇಲೂರಿನ ಶಿಲ್ಪ ಸೌಂದರ್ಯದ ವಿಗ್ರಹಗಳನ್ನೇ ಆಧಾರವಾಗಿಟ್ಟುಕೊಂಡು ಶಿಲ್ಪಕೃತಿಗಳನ್ನು ರಚಿಸಿರುವ ಭಟ್ಟರು ಕಾಗದದಲ್ಲಿ ವಿಗ್ರಹದ ರೇಖಾಚಿತ್ರವನ್ನು ಬರೆದುಕೊಂಡು ಅಳತೆಗೆ ತಕ್ಕಂತೆ ಕತ್ತರಿಸಿದ ಕಲ್ಲಿನ ಮೇಲೆ ಅದರ ರೇಖೆಗಳನ್ನು ಕೊರೆಯುತ್ತಾರೆ. 12 ಬಗೆಯ ಚಾಣಗಳಿಂದ ನಾಜೂಕಾಗಿ ಕೃತಿಯನ್ನು ಕೆತ್ತಿ ಬಳಿಕ ಪಾಲಿಷ್ ಮಾಡಿ ಕಪ್ಪು ಬಣ್ಣ ಹಚ್ಚಿ ವಿಗ್ರಹವನ್ನು ಪೂರ್ಣಗೊಳಿಸುತ್ತಾರೆ. ಇದಕ್ಕೆ ಬೇಕಾದ ಸೂಕ್ತ ಕಪ್ಪು ಕಲ್ಲುಗಳು ಇದುವರೆಗೂ ಸಮೀಪದ ನೆಲ್ಲಿಕಾರಿನಲ್ಲಿ ಲಭಿಸುತ್ತಿತ್ತು. ಆದರೆ ಗಣಿ ಕಾಯ್ದೆಯನ್ನು ಸರ್ಕಾರ ಬಿಗಿಗೊಳಿಸಿದೆ. ಶಿಲ್ಪ ರಚನೆಯ ಕಲ್ಲುಗಳು ಸಿಗದೆ ತೊಂದರೆ ಉಂಟಾದುದನ್ನು ಸ್ಮರಿಸುತ್ತಾರೆ. ಹಾಗೆಯೇ ಕಾಷ್ಠ ವಿಗ್ರಹಗಳಿಗೆ ಅಗತ್ಯವಾದ ಶಿವಾನಿ ಮರ ಮಲೆನಾಡಿನಲ್ಲಿ ಮಾತ್ರ ಲಭ್ಯವಿರುವುದು ಕಲೆಯ ಪ್ರಗತಿಗೆ ತೊಡಕಾಗಿದೆಯಂತೆ.

ವಿಗ್ರಹ ತಯಾರಿಕೆ ಬಹು ಪರಿಶ್ರಮದ ಕೆಲಸ. ಶಿಲ್ಪಿಗೆ ಏಕಾಗ್ರತೆ, ತಾಳ್ಮೆ ಬೇಕು. ಒಂದೂವರೆ ಅಡಿ ಎತ್ತರದ ವಿಗ್ರಹ ಪೂರ್ಣಗೊಳ್ಳಲು 20 ದಿನಗಳ ನಿರಂತರ ದುಡಿಮೆಯನ್ನು ಬಯಸುತ್ತದೆ. ಪಂಚಮುಖಿ ಆಂಜನೇಯನ ವಿಗ್ರಹ ತಯಾರಿಕೆಗೆ ಎರಡು ವರ್ಷಗಳು ಬೇಕಾದವಂತೆ. ಅವರ ಕಲಾ ಸೃಷ್ಟಿಗಳು ಕೇರಳ, ದೆಹಲಿ, ಗೋವಾ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೂ ತಲುಪಿದೆ. ಕೇರಳ ಶೈಲಿಯ ಕಲಾ ರಚನೆಯನ್ನೂ ಸಿದ್ಧಿಸಿಕೊಂಡಿದ್ದಾರೆ. ಜನರ ಅಪೇಕ್ಷೆಯ ಶೈಲಿಯ ವಿಗ್ರಹಗಳನ್ನೇ ಮಾಡಿಕೊಡುತ್ತಾರೆ. ಸಾಲೆತ್ತೂರು, ಪುತ್ತೂರು, ಮುಂಡೂರು, ಸವಣೂರು ಮೊದಲಾದೆಡೆಗಳಲ್ಲಿ ಶಿಲಾಮಯ ಗರ್ಭಗೃಹಗಳನ್ನೂ ರಚಿಸಿ ಕೊಟ್ಟ ಸಾಧನೆ ಅವರದು. ಅವರೊಂದಿಗೆ ನಿರಂತರವಾಗಿ ಎಂಟು ಮಂದಿ ಕೆಲಸಗಾರರು ದುಡಿಯುತ್ತಿದ್ದಾರೆ.

ಭಟ್ಟರ ಕಲಾ ಸಾಧನೆಗೆ ನಾಡು- ನುಡಿ ಮನಸೋತು ಅವರನ್ನು ಗುರುತಿಸಿದೆ, ಪುರಸ್ಕರಿಸಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುರಸ್ಕಾರಗಳು ಅರಸಿ ಬಂದಿವೆ. ಲಾಲ್‍ಕೃಷ್ಣ ಅಡ್ವಾಣಿ, ಮನೋಹರ ಪರಿಕ್ಕರ್ ಅವರಿಂದ ಸನ್ಮಾನಿತರಾಗಿದ್ದಾರೆ. ಸಾಧನೆಗೆ ಶಿಕ್ಷಕಿಯಾಗಿರುವ ಮಡದಿ ವೀಣಾ ಸರಸ್ವತಿ, ಮಗಳು ಚಂಪಾಶ್ರೀ ಅವರ ಬೆಂಬಲವಿದೆ. ಮಗ ವಿಜಯಶಂಕರ ಡಿಪ್ಲೊಮಾ ಮಾಡಿದ್ದರೂ ಈಗ ತಂದೆಯ ಜೊತೆಗೂಡಿ ಶಿಲ್ಪ ಕಲೆಯನ್ನು ಬೆಳೆಸುತ್ತಿದ್ದಾರೆ (9448502148).

 

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !