ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗು: ಜೀವನದರ್ಶನ

Last Updated 6 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ನಾವು ಅದೆಷ್ಟೇ ದುಃಖದಲ್ಲಿ, ನಿರಾಸೆಯಲ್ಲಿ ಮುಳುಗಿದ್ದರೂ ದೊಡ್ಡವರ ಲೋಕದ ಪರಿವೆಯೇ ಇಲ್ಲದ ಚಿಕ್ಕಮಕ್ಕಳ ನಗು ಹೃದಯದ ಎಲ್ಲ ಗಂಟುಗಳನ್ನು ಸಡಿಲಗೊಳಿಸುತ್ತದೆ ಅಲ್ಲವೆ? ತೀರ ಎಳೆ ಮಕ್ಕಳು ನಿದ್ದೆಯಲ್ಲಿ ನಗುವುದು, ನಂತರ ತಾಯಿಯ ಮುಖ ನೋಡಿ ನಗುವುದು, ಚೂರು ಬೆಳೆಯುತ್ತಿದ್ದಂತೆ ಚಲಿಸುವ, ಶಬ್ದ ಮಾಡುವ ಎಲ್ಲವನ್ನು ನೋಡಿ ನಗುವುದು. ಮಗುವಿನ ಬೆಳವಣಿಗೆಯ ಒಂದು ಮುಖ್ಯ ಹಂತವೇ 'ನಗು'. ಸುತ್ತಲಿನ ಪ್ರಪಂಚಕ್ಕೆ ಮಗು ಸ್ಪಂದಿಸುವ ರೀತಿ ನಗುವಿನದ್ದಾಗಿರದಿದ್ದರೆ ಅದರ ಬೆಳವಣಿಗೆಯಲ್ಲೇನೋ ದೋಷ ಇರಬಹುದು ಎನ್ನುತ್ತಾರೆ ತಜ್ಞರು. ಇನ್ನು ಹದಿನಾರರ ಹುಚ್ಚು ಮನಸ್ಸಿನ ನಗು ನಮಗೆ ಗೊತ್ತಿದೆ.

ನಂತರ ಬಿಡಿ ನೂರಾರು ನಗುಗಳು: ಸ್ನೇಹದ ನಗು, ಔಪಚಾರಿಕ ಭಾವರಹಿತ ನಗು, ಹಲ್ಕಿರಿಯುವ ನಗು, ಮೈಪರಚಿಕೊಳ್ಳುವಂತೆ ಮಾಡುವ ಅಸಹ್ಯದ ನಗು, ಶೃಂಗಾರದ ಮಾದಕ ನಗು, ಪ್ರೇಮಿಯ ಮೈಮರೆಸುವ ನಗು, ಅಪರಿಚಿತರ ಭಯ ಹುಟ್ಟಿಸುವ ನಗು, ಅಪಾಯಕಾರಿ ಅಪಹಾಸ್ಯದ ನಗು, ತಿರಸ್ಕಾರದ, ವ್ಯಂಗ್ಯದ, ಕುಹಕದ ನಗು, ಅಧಿಕಾರದ ಅಮಲೇರಿರುವವರ ಅಟ್ಟಹಾಸದ ನಗು, ಮೋಸದ ದುಷ್ಟ ನಗು, ಪ್ರಳಯಾಂತಕ ನಗು, ಲಾಫಿಂಗ್‌ ಕ್ಲಬ್ಬಿನ ನಗು, ಬದುಕಿನ ನಿರರ್ಥಕತೆಯ ನೋಟ ಹೊತ್ತ ವೈರಾಗ್ಯದ ನಗು.

ಕೆಲವರು ತಮ್ಮ ಬದುಕಿನ ಕಹಿ ಘಟನೆಗಳನ್ನು ಸಹ ವಿಚಿತ್ರ ದುರ್ಬಲ ನಗುವಿನೊಂದಿಗೆ ಹೇಳಿದರೆ ಮತ್ತೆ ಕೆಲವರು ತಮ್ಮ ಕಷ್ಟದ ಪರಿಸ್ಥಿತಿಯನ್ನು ದೈನ್ಯಗೊಳಿಸದೆ ಅದರಾಚೆಗೆ ನಿಂತು ತಿಳಿಹಾಸ್ಯ ಬೆರೆಸಿದ ದೃಷ್ಟಿಯಿಂದ ನೋಡುತ್ತಾರೆ. ನೋವನ್ನು ನಗುವಿನಿಂದ ಮರೆಮಾಚುವುದೇ ಬೇರೆ, ನೋವಿನೊಳಗಿನ ನಗುವೇ ನೋವನ್ನು ದುರ್ಬಲಗೊಳಿಸುವುದೇ ಬೇರೆ ಅಲ್ಲವೇ? ಪ್ರಚಂಡ ಕೋಪದಲ್ಲಿ ಕುದಿಯುತ್ತಿರುವವರನ್ನು ನಗಿಸಲು ಸಮರ್ಥರಾದವರು ನಿಜವಾಗಲೂ ದೊಡ್ಡ ಸಾಧಕರೇ ಹೌದು. ನಗುವಿಗೂ ನಟನೆಗೂ ಅನ್ಯೋನ್ಯ ಸಂಬಂಧವಿದೆಯಾದರೂ ಎಷ್ಟೋ ಬಾರಿ ಜೀವನದಲ್ಲಿ ನಟನೆಯ ನಗು ಸಾಧ್ಯವೇ ಇಲ್ಲ.

ನಿಮ್ಮ ಅತ್ಯಂತ ಪ್ರೀತಿಪಾತ್ರರ ಮುಖಗಳನ್ನು ಕಣ್ಮುಂದೆ ತಂದುಕೊಂಡಾಗ ಅದರಲ್ಲಿ ಎಷ್ಟು ಜನರದ್ದು ನೈಜ ನಗುಮುಖವಾಗಿರಬಹುದು? ನಮ್ಮ ನಮ್ಮ ನಗೆಗಳಿಗೆ ಇರುವ ಸಾಮ್ಯತೆ, ಅಂತರ, ವೈರುಧ್ಯಗಳೇ ಸ್ನೇಹಕ್ಕೆ ಕಾರಣವೂ ಪೂರಕವೂ ಆಗಿರಬಹುದೇ? ಸ್ನೇಹವೇ ತಳಹದಿಯಾಗಿರಬೇಕಾದ ಕೌಟುಂಬಿಕ ಸಂಬಂಧಗಳಲ್ಲಿ ಕರ್ತವ್ಯ, ಜವಾಬ್ದಾರಿಗಳಿದ್ದೂ ನಗೆ ಇಲ್ಲವೆಂದರೆ ಏನರ್ಥ? ಕಾದಾಡುವ ಸಹೋದರ, ಸಹೋದರಿಯರೂ, ವಿರಸದಲ್ಲಿ ಬಾಳುತ್ತಿರುವ ದಂಪತಿಗಳೂ, ಬಾಂಧವ್ಯವಿಲ್ಲದೆ ದೂರಾದ ತಂದೆ, ತಾಯಿ ಮಕ್ಕಳೂ ಎದುರುಬದುರಾದಾಗ ಎಲ್ಲವನ್ನೂ ಬದಿಗೊತ್ತಿ ಸುಮ್ಮನೆ ಒಂದು ನಗುವನ್ನು ವಿನಿಮಯ ಮಾಡಿಕೊಳ್ಳುವಂತಾದರೆ ಎಂತೆಂತಹ ಪವಾಡ ಜರುಗಬಹುದಲ್ಲವೇ? ಆತ್ಮವಿಶ್ವಾಸ, ಧೈರ್ಯ ತುಂಬುವ ನಿರ್ಮಲ ನಗು ಡಾಕ್ಟರರದ್ದು, ಶಿಕ್ಷಕರದ್ದು ಮಾತ್ರ ಆಗಿರದೆ ಪೊಲೀಸರು, ಅಧಿಕಾರಿಗಳು, ಮಂತ್ರಿಗಳದ್ದೂ ಆಗಿಬಿಟ್ಟರೆ ಬದುಕು ಹೇಗಿರಬಹುದು?

ಇದನ್ನೆಲ್ಲಾ ನೋಡುತ್ತಾ ಹೋದರೆ ನಗುವಿನ ಹಿಂದೆ ಒಂದು ತತ್ವವೇ ಅಡಗಿದೆ ಎಂದೆನಿಸದೆ ಇರದು. ನಮ್ಮ ನಗುವಿಗೂ ಪ್ರಾಪಂಚಿಕ ಸತ್ಯವನ್ನು ನಾವು ಗ್ರಹಿಸುವ ರೀತಿಗೂ ನೇರ ಸಂಬಂಧವಿದೆ. ನಮ್ಮ ಗ್ರಹಿಕೆಯ ಕ್ರಮ ಬದಲಾದಾಗ ನಮ್ಮ ನಗೆಯೂ ಬದಲಾದೀತು. ನಮ್ಮ ಸಾಮಾನ್ಯ ತರ್ಕವನ್ನು ಒಡೆದು ಪ್ರಪಂಚವನ್ನು ಗ್ರಹಿಸುವ ಕೌತುಕದ ಮಾರ್ಗವೇ ಹಾಸ್ಯ. ಶುದ್ಧ ಹಾಸ್ಯ ಬದುಕಿನ ಒಳನೋಟಗಳನ್ನು ಒದಗಿಸುವ ದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT