ಬುಧವಾರ, ಮಾರ್ಚ್ 3, 2021
23 °C

ಅಲ್ಲಮನ ವಚನ-ದೃಶ್ಯಕಾವ್ಯಾನುಸಂಧಾನ

ಡಿ.ಎಸ್. ಚೌಗಲೆ/ಜಿ.ಬಿ.ನಾಗರಾಜ್ Updated:

ಅಕ್ಷರ ಗಾತ್ರ : | |

Prajavani

ಅಲ್ಲಮನ ವಚನಗಳ ಆಳ ಮತ್ತು ಹರವು ಅಗಾಧವಾದುದು. ಅಗೆದಷ್ಟು ಮೊಗೆದಷ್ಟು ಅನುಭವ- ಅನುಭೂತಿಗಳ ವಿಸ್ತಾರ ಅದರದ್ದು. ಒರತೆಯ ನೀರು ಬೊಗಸೆಯಿಂದ ಎತ್ತಿದಂತೆ ಮತ್ತೆ ಮತ್ತೆ ಜಿನುಗುವ, ಶೂನ್ಯದಲ್ಲಿ ನವಸೃಷ್ಟಿಯ ಜೀವ ಚೈತನ್ಯ ತುಂಬುವ ಶಕ್ತಿಯು ಅಲ್ಲನಮನ ವಚನಗಳಿಗಿದೆ. ಹಾಗೆಯೇ ಆ ಆಧ್ಯಾತ್ಮಿಕ ಅನುಭವಕ್ಕೆ ದೃಶ್ಯರೂಪಕೊಟ್ಟು ಪುನರ್ ಸೃಷ್ಟಿಯ ಮೂಲಕ ನವವ್ಯಾಖ್ಯಾನ ನೀಡುವ ಸಾಮರ್ಥ್ಯವು ನಮ್ಮ ನಡುವಿನ ಚಿತ್ರದುರ್ಗದ ಕಲಾವಿದ ಟಿ.ಎಮ್. ವೀರೇಶ ಅವರಿಗೆ ಇದೆ. ಬೆಂಗಳೂರಿನ ಆಚಾರ್ಯ ಚಿತ್ರಕಲಾ ಭವನದ ಕರೆಸ್ಪಾಂಡೆನ್ಸ್‌ ಕೋರ್ಸ್‌ ಮೂಲಕ ಚಿತ್ರಕಲೆಯನ್ನು ಕಲಿತ ಈ ಕಲಾವಿದನ ಕುಂಚದ ಬೀಸುಗಳಿಂದ ರಚನೆಗೊಂಡ ಕಲಾಕೃತಿಗಳಲ್ಲಿ ಅಲ್ಲಮನ ವಚನಗಳಿಗೆ ಇರುವ ಧ್ಯಾನಸ್ಥ ಸ್ಥಿತಿ ಹಾಗೂ ಮಾಂತ್ರಿಕ ಶಕ್ತಿಯಿದೆ. ಅದನ್ನು ಚಿತ್ರಕಲೆಯ ಮೂಲಕ ಅಭಿವ್ಯಕ್ತಿಪಡಿಸುವ ಶಕ್ತಿ ಅವರಿಗೆ ದಕ್ಕಿದೆ. ಹೀಗೆ ಅಲ್ಲಮನ ವಚನಗಳ ವಿಶಿಷ್ಟಾನುಭವಕ್ಕೆ ತಮ್ಮ ಕಲಾಕೃತಿಗಳ ಮೂಲಕ ವಚನ ಚಿತ್ರದ ಹೊಸ ಭಾಷ್ಯ ಬರೆದಿದ್ದಾರೆ ವೀರೇಶ.

ಸೃಷ್ಟಿ ಅಥವಾ ಭುವಿಯ ಒಡಲ ಬೆಚ್ಚಗಿನ ತೇವದಲ್ಲಿ ಹುದುಗಿದ್ದ ಬೀಜಕ್ಕೆ, ಮಣ್ಣ ಹೆಂಟೆಯನ್ನು ಅನಾಮತ್ತಾಗಿ ಉರುಳಿಸಿ ಮೇಲೆ ಚಿಮ್ಮಿಸಿ ಮೊಳಕೆಯೊಡೆಯುವ ಶಕ್ತಿ ಲಭಿಸುತ್ತದೆ. ಅಂಥದ್ದೇ ಶಕ್ತಿ ಇವರ ಕಲಾಕೃತಿಗಳಲ್ಲಿದೆ. ಜಲವರ್ಣದಲ್ಲಿ ಆಟವಾಡಿದ ವೀರೇಶ ಅವರ ಬಣ್ಣಗಲ್ಲಿ ಮೂರ್ತರೂಪ ಪಡೆದ ಅಮೂರ್ತ ಇಮೇಜ್‌ಗಳು ಬಯಲು– ಆಲಯಗಳ ದಟ್ಟವಾದ ಅನುಭೂತಿಯನ್ನು ನೋಡುಗನಿಗೆ ನೀಡುತ್ತವೆ. ಜಲದಲ್ಲಿ ಬಣ್ಣಗಳ ಬಳಕೆ, ಕುಂಚದ ಬೀಸಿನ ಓಡಾಟ, ಹೊಡೆತಗಳು ಅಧ್ಯಾತ್ಮದ ಚಲನಶೀಲತೆಯನ್ನು ಮತ್ತು ಗಹನವಾದ ರೂಪಕಶಕ್ತಿಯನ್ನು ಕೃತಿಗಳಿಗೆ ದಕ್ಕುವಂತೆ ಮಾಡಿವೆ. ಪ್ರಕೃತಿ ಮತ್ತು ಪುರುಷರ ಏಕಾಂತದಲ್ಲಿ ಹುಟ್ಟುವ ಪ್ರೇಮ- ಕಾಮಗಳ ಫಲಿತದ ನವಜೀವದ ಬೆಳಗಿನಂತೆ ವೀರೇಶರ ಕಲಾಕೃತಿಗಳು ಗಾಢತೆಯ ಅನುಭವವನ್ನು ಕೊಡುತ್ತವೆ. ಅಲ್ಲಮನ ವಚನಗಳು ಹೇಗೆ ಬಹು ಆಯಾಮಿಯೋ ಹಾಗೆಯೇ ವೀರೇಶರ ಕೃತಿಗಳು ಸಹ ಬಹು ಆಯಾಮವನ್ನು ಪಡೆದಂಥವು. ಕ್ಷಿತಿಜದ ಅತ್ತತ್ತ ಚಿಮ್ಮುವ ಬೆಳಕು- ಬೆಡಗುಗಳು ಅವರ ಚಿತ್ರಕೃತಿಗಳ ಧನಾತ್ಮಕ ಅಂಶ.

ಶೂನ್ಯ ಸಂಪಾದನೆ ಕೃತಿಯಲ್ಲಿಯ ಅಲ್ಲಮನ ಬದುಕು ಮತ್ತು ಚಿಂತನೆಗಳು ವೀರೇಶರಿಗೆ ಚಿತ್ರ ರಚಿಸಲು ಪ್ರೇರಣೆಯಾಗಿವೆ. ಅಲ್ಲಮನ ವಚನಗಳಿಗೆ ಹೊಸ ಅರ್ಥ ಕಂಡುಕೊಳ್ಳಲು ಇಂದಿಗೂ ಅನೇಕ ವಿದ್ವಾಂಸರು ಯತ್ನಿಸುತ್ತಿದ್ದಾರೆ ಎನ್ನುವುದರ ಅರಿವೂ ವೀರೇಶರಿಗೆ ಇದೆ. ಅದನ್ನು ವಿನಯಪೂರ್ವಕವಾಗಿ ಅವರು ಒಪ್ಪುತ್ತಾರೆ.

ಝೆನ್ ಪ್ಯಾಂಥಿಜಮ್‌ನ ‘ಆಲ್ ಈಸ್‌ ಗಾಡ್ ಅಂಡ್ ದೇರ್ ಈಸ್‌ ನೋ ಗಾಡ್’ ಎಂಬ ವಿಚಾರವನ್ನು ನೆನೆಯುತ್ತಲೇ ವೀರೇಶ ಅವರು ಅಲ್ಲಮನನ್ನು ಚಿತ್ತದ ಭಿತ್ತಿಯಿಂದ ಕಲಾಕೃತಿಗಳಿಗೆ ಇಳಿಸಿದ್ದಾರೆ. ಅದಕ್ಕೊಂದು ದರ್ಶನ, ಸೌಂದಂರ್ಯ, ಸತ್ಯದ ಶೋಧವನ್ನು ತಂದಿಡುವ ಯತ್ನಮಾಡಿದ್ದಾರೆ. ಬುದ್ಧ ಮತ್ತು ಅಲ್ಲಮನ ಚಿಂತನೆಯ ಸೋಜಿಗ ಪಡುವ ಇಮೇಜು ಇಲ್ಲಿಯ ಚಿತ್ರಗಳಲ್ಲಿದೆ. ಅಲ್ಲಮನ ನಿಗೂಢ ಅಭಿವ್ಯಕ್ತಿಯ ಮಾಂತ್ರಿಕತೆಯನ್ನು ಈ ಚಿತ್ರಗಳು ಬಣ್ಣ ಭಾಷೆಗಳ ಮೂಲಕ ಪಡೆದಿವೆ. ಅಲ್ಲಮನ ಭಾಷೆ- ವೀರೇಶರ ದೃಶ್ಯಭಾಷೆ! ಇದೊಂದು ‘ವಚನಚಿತ್ರಗಳ ದೃಶ್ಯಕಾವ್ಯಾನುಸಂಧಾನ’ವೂ ಹೌದು.

ಕಲಾಕೃತಿಗಳ ಬಗ್ಗೆ ಮಾತನಾಡುವ ವೀರೇಶ, ‘ಅಲ್ಲಮ ಅರ್ಥದ ನಿರ್ಮಾಣಕ್ಕೆ ಓದುಗನಿಗೆ ಯಾವ ಸಹಾಯವನ್ನೂ ಒದಗಿಸುವುದಿಲ್ಲ ಎನ್ನುವುದು ಒಂದು. ಪ್ರತಿ ವಚನಕ್ಕೂ, ವಚನದ ಪ್ರತಿ ಪದಕ್ಕೂ ಅರ್ಥವನ್ನು ಕಟ್ಟಿಕೊಳ್ಳುತ್ತ, ಮುಂದಿನ ಪದದಲ್ಲೋ ಮುಂದಿನ ಸಾಲಿನಲ್ಲೋ ಹಿಂದೆ ಕಟ್ಟಿದ ಅರ್ಥವನ್ನು ಒಡೆಯುತ್ತ ಹೋಗುತ್ತಾನೆ ಅನ್ನುವುದು ಇನ್ನೊಂದು. ಈ ಬಗೆಯ ಅಲ್ಲಮನ ವಚನದ ಗುಣಗಳನ್ನು ಕಲೆಯಲ್ಲಿ ಹಿಡಿಯಲು ಸಾಧಿಸುವ ಯತ್ನ ನನ್ನದು’ ಎನ್ನುತ್ತಾರೆ. 

ಹೀಗೆ ಅಲ್ಲಮನ ಆಧ್ಯಾತ್ಮಿಕ ಗುಣಗಳನ್ನು, ಅನುಭವವನ್ನು ವೀರೇಶ ತನ್ನ ಚಿತ್ತ ಭಿತ್ತಿಯಿಂದ ಕಲಾಭಿವ್ಯಕ್ತಿ ಮೂಲಕ ತಮ್ಮೆದುರು ಇಟ್ಟಿರುವರು. ಈ ಅಮೂರ್ತ ಕಲಾಕೃತಿಗಳ ಪ್ರದರ್ಶನವು ಮಹಾರಾಷ್ಟ್ರದ ಪುಣೆಯ ಆರ್ಟ್ ಟುಡೇ ಗ್ಯಾಲರಿಯಲ್ಲಿ ಫೆಬ್ರುವರಿ 13 ರಿಂದ 17ರವರೆಗೆ ನಡೆಯಲಿದೆ.

ವಚನಕ್ಕೆ ಜೀವದುಂಬಿ

ವಾಸ್ತವವಾದಿ ನೆಲೆಯ ಕಲೆಯಿಂದ ಅಮೂರ್ತ ಪರಂಪರೆಯತ್ತ ಟಿ.ಎಂ. ವೀರೇಶ್‌ ಹೊರಳಿದ್ದು ಆಕಸ್ಮಿಕ. ಕನ್ನಡಿಗರಿಗೆ ಚಿರಪರಿಚಿತವಲ್ಲದ ಈ ಕಲೆಯ ಆಯ್ಕೆ ಕಲಾವಿದನನ್ನು ಮಾಗಿಸಿದೆ. ‘ಬಣ್ಣ ಮತ್ತು ರೇಖೆಯೇ ಅಭಿವ್ಯಕ್ತಿ ಮಾಧ್ಯಮ’ ಎಂದು ಬಲವಾಗಿ ನಂಬಿದ ವೀರೇಶ್‌, ಅಲ್ಲಮಪ್ರಭುವಿನ ವಚನಗಳ ಸೆಳೆತಕ್ಕೆ ಒಳಗಾಗಿದ್ದು ಗುರುರಾಜ ಕರ್ಜಗಿ ಅವರ ಪ್ರವಚನದಿಂದ.

ವಿಜ್ಞಾನ ಹಾಗೂ ಕಾನೂನು ಪದವೀಧರರಾದ ವೀರೇಶ್‌, ವೃತ್ತಿಯಲ್ಲಿ ಛಾಯಾಗ್ರಾಹಕ. ಚಿತ್ರದುರ್ಗದ ಲಕ್ಷ್ಮಿ ಬಜಾರ್‌ನಲ್ಲಿರುವ ‘ಕ್ರಿಯೇಟಿವ್‌ ಸ್ಟುಡಿಯೊ’ ಬದುಕಿಗೆ ಆಸರೆಯಾಗಿದೆ. ಬಾಲ್ಯದಿಂದ ಪ್ರವೃತ್ತಿಯಾಗಿ ಬೆಳೆದ ಚಿತ್ರಕಲೆಯು ಸದಾ ಕಲೆಯನ್ನೇ ಧ್ಯಾನಿಸುವಂತೆ ಮಾಡಿದೆ. ಅಮೂರ್ತ ಕಲಾ ಪರಂಪರೆಯತ್ತ ಆಕರ್ಷಿತರಾದ ಬಳಿಕ ಪರಿಕಲ್ಪನೆಗಳನ್ನು ಕಟ್ಟಿಕೊಳ್ಳಲು ಹೆಣಗಾಡುವಂತಾಗಿದೆ.

ನಿತ್ಯ ನಸುಕಿನಲ್ಲಿ ಧ್ಯಾನ ಹಾಗೂ ಪ್ರಾಣಾಯಾಮಕ್ಕೆ ಕುಳಿತು ವಚನ ಗಾಯನ ಕೇಳುವುದು ಇವರ ರೂಢಿ. ಗುರುರಾಜ ಕರ್ಜಗಿ ಅವರು ವಚನಗಳ ಮೇಲೆ ನೀಡಿದ ಪ್ರವಚನ ವೀರೇಶ್‌ ಅವರನ್ನು ಆವರಿಸಿಕೊಂಡಿದೆ. ‘ಈ ಪ್ರವಚನ ಮಾಲಿಕೆ ಅಲ್ಲಮಪ್ರಭು ವಚನಗಳ ಸತ್ವವನ್ನು ಮನದಟ್ಟು ಮಾಡಿತು. ಅದೇ ಸ್ಫೂರ್ತಿಯಲ್ಲಿ ಅಧ್ಯಯನಕ್ಕೆ ಕೈಹಾಕಿದೆ’ ಎನ್ನುವ ವೀರೇಶ್‌, ಅಲ್ಲಮನಿಗೆ ಸಂಬಂಧಿಸಿದ ಕನ್ನಡದ ಎಲ್ಲ ಸಾಹಿತ್ಯವನ್ನು ತಡಕಾಡಿದ್ದಾರೆ.

ತರಾಸು ಅವರ ‘ಅಗ್ನಿರಥ ಮುಕ್ತಿ ಪಥ’ ಹಾಗೂ ಅಮರೇಶ ನುಗಡೋಣಿ ಅವರ ‘ಅಲ್ಲಮಪ್ರಭು– ಸಾಂಸ್ಕೃತಿಕ ಮುಖಾಮುಖಿ’ ಕೃತಿಗಳು ಅವರ ಒಳಗಿನ ಅಲ್ಲಮನನ್ನು ಬೆಳಗುತ್ತ ಸಾಗಿದವು. ಅಮೂರ್ತ ಸ್ವರೂಪದ ಪರಿಕಲ್ಪನೆಗಳಿಗೆ ಬಣ್ಣ ತುಂಬಲು ಆರಂಭಿಸಿದರು. ಗಿರಡ್ಡಿ ಗೋವಿಂದರಾಜು ಅವರ ‘ವಚನ ವ್ಯಾಕರಣ’ ಕೃತಿ ವಚನಗಳನ್ನು ಇನ್ನಷ್ಟು ಅರ್ಥೈಸಿಕೊಳ್ಳಲು ಸಹಕರಿಸಿದೆ. ವಚನದ ತಿರುಳನ್ನು ಕಲಾಕೃತಿಯಲ್ಲಿ ಕಟ್ಟಿಕೊಡುವ ಸಾಹಸ ಹೀಗೆ ಮೂರೂವರೆ ವರ್ಷಗಳಿಂದ ನಡೆದಿದೆ.

ಕ್ಯಾನ್ವಾಸ್‌ ಎದುರು ಕುಳಿತು ಬಣ್ಣ ತೀಡುವಾಗ ಅಲ್ಲಮಪ್ರಭು ಕಣ್ತುಂಬಿಕೊಳ್ಳುವ ಚಡಪಡಿಕೆಯೂ ಕಾಡಿದೆ. ತಕ್ಷಣವೇ ಅವರ ಪ್ರಯಾಣ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಗೆ ಹೊರಟಿದೆ. ಅಲ್ಲಮನನ್ನು ಅರ್ಥೈಸಿಕೊಳ್ಳಲು ಇರುವ ಎಲ್ಲ ಸಾಧ್ಯತೆಗಳನ್ನು ಬಳಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಿದ್ದಾರೆ. ಅಲ್ಲಮನನ್ನು ಆವಾಹಿಸಿಕೊಂಡು ಕ್ಯಾನ್ವಾಸ್‌ಗೆ ಇಳಿಸಿದ್ದಾರೆ. ‘ಅಲ್ಲಮನ ನುಡಿಗಳಿಂದ ಪ್ರೇರಣೆ ಪಡೆದು ಇಷ್ಟು ದೊಡ್ಡ ಚಿತ್ರಸರಣಿ ರಚಿಸಿದವರಲ್ಲಿ ವೀರೇಶ್‌ ಮೊದಲಿಗರು’ ಎಂಬುದು ವಿಮರ್ಶಕ ಓ.ಎಲ್‌. ನಾಗಭೂಷಣಸ್ವಾಮಿ ಅವರ ಅಭಿಪ್ರಾಯ.

43 ವ್ಯಕ್ತಿಗಳ ಭಾವಚಿತ್ರಗಳನ್ನು ಗಂಟೆಯಲ್ಲಿ ರಚಿಸುವ ಚಾಕಚಕ್ಯತೆ ಹೊಂದಿದ ವೀರೇಶ್‌, ಮೂರೂವರೆ ವರ್ಷಗಳಲ್ಲಿ ರಚಿಸಿದ್ದು 36 ಕಲಾಕೃತಿಗಳನ್ನು ಮಾತ್ರ. ಒಂದೊಂದು ಕಲಾಕೃತಿ ರಚನೆಗೂ 18ರಿಂದ 40ದಿನ ಕಾಲ ಹಿಡಿದಿದೆ. ಕೃತಿಗಳಲ್ಲಿರುವ ಬಣ್ಣ ಪ್ರಜ್ಞಾಪೂರ್ವಕ ಆಯ್ಕೆಯಲ್ಲ. 
ಕಲಾವಿದರ ಕುಂಚದಿಂದ ಕೊಂಚ ದೂರವೇ ಉಳಿದ ಹಸಿರು ಇವರ ಎಲ್ಲ ಚಿತ್ರಗಳಲ್ಲಿ ಎದ್ದು ಕಾಣುತ್ತಿದೆ. ‘ಕಲಾಕೃತಿ ರಚಿಸುತ್ತ ಕಣ್ಣಲ್ಲಿ ನೀರು ಜಿನುಗಿದೆ. ಸಾಕ್ಷಾತ್ಕಾರ ಉಂಟಾದ ಅನುಭವವೂ ಆಗಿದೆ. ಇವು ಅರ್ಥ ಮಾಡಿಕೊಳ್ಳುವ ಕೃತಿಗಳಲ್ಲ, ಅನುಭವಿಸುವಂತಹವು’ ಎಂಬುದು ವೀರೇಶ್‌ ಅವರ ಸ್ಪಷ್ಟ ಮಾತು.

‘ಸ್ತನ ಕ್ಯಾನ್ಸರ್‌’ ಜಾಗೃತಿಯ ಬಗ್ಗೆ ಕಲಾಕೃತಿ ರಚಿಸಿ ಇವರು ಗಮನ ಸೆಳೆದಿದ್ದರು. ಬೆಂಗಳೂರು, ದೆಹಲಿ ಸೇರಿ ಹಲವೆಡೆ ಚಿತ್ರಕಲಾ ಪ್ರದರ್ಶನ ನೀಡಿದ್ದಾರೆ. ಆದರೆ, ‘ಅಲ್ಲಮ– ಆಳದ ಎತ್ತರ’ಕ್ಕೆ ರಾಜ್ಯದಲ್ಲಿ ಕಲಾಗ್ಯಾಲರಿ ಸಿಗಲಿಲ್ಲ ಎಂಬ ಕೊರಗು ಅವರನ್ನು ಕಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.