ಸಂಬಳವಿಲ್ಲದ ಕೆಲಸ

ಮಂಗಳವಾರ, ಜೂಲೈ 23, 2019
20 °C

ಸಂಬಳವಿಲ್ಲದ ಕೆಲಸ

Published:
Updated:
Prajavani

ಮೊನ್ನೆ ಬ್ಯಾಂಕಿಗೆ ಹೋಗಿದ್ದೆ. ನೆಟ್ ಬ್ಯಾಂಕಿಂಗಿನ ಈ ಯುಗದಲ್ಲಿ ಬೆರಳ ತುದಿಯಲ್ಲಿ ಹಣ ಕಳಿಸಿ, ಪಡೆದು ಮಾಡಬಹುದಾದ ಈ ದಿನಗಳಲ್ಲಿ ಬ್ಯಾಂಕಿಗೆ ಹೋಗುವವರೂ ಇದ್ದಾರಾ ಅಂತ ಕೆಲವರಿಗೆ ಅನ್ನಿಸಬಹುದು. ಹೀಗೆ ನಮ್ಮ ಹಾಗೆ ಯೋಚಿಸುವ ಇನ್ನೂ ಕೆಲವರಿದ್ದಾರೆ. ಅವರೆಲ್ಲಾ ಪ್ರಗತಿಯ ಹಾದಿಯಲ್ಲಿ ಸ್ವಲ್ಪ ಮೆಲ್ಲಗೆ ನಡೆಯುತ್ತಿರುವವರು.

ಅಲ್ಲಿ ಒಬ್ಬ ಹಿರಿಯ ಮಹಿಳೆಯೊಬ್ಬರು ಬಂದು ಮ್ಯಾನೇಜರ್ ಹತ್ತಿರ ಕಣ್ಣೀರಿಡಲು ಶುರು ಮಾಡಿದರು. ಅತ್ತ ಆರ್ಮಿಯಲ್ಲಿ ಪುಟ್ಟ ಕೆಲಸದಲ್ಲಿರುವ ಮಗ ಹಾಗೂ ಅವನ ತಂದೆ (ಮಹಿಳೆಯ ಪತಿ) ತೊದಲು ಭಾಷೆಯಲ್ಲಿ ಏರು ದನಿಯಲ್ಲಿ ಮಾತನಾಡುತ್ತಿದ್ದರು. ಹುಬ್ಬಳ್ಳಿ ಸೀಮೆಯ ಕುಟುಂಬ ಹೊಟ್ಟೆಪಾಡಿಗೆ ಮೈಸೂರಿಗೆ ಬಂದು ಇಪ್ಪತ್ತು ವರ್ಷ ಆಗಿದೆ. ಹಾಗಾಗಿ ಅವರ ಭಾಷೆ ಒಂಥರಾ ಎರಡೂ ವೈರುಧ್ಯಮಯ ಭೌಗೋಳಿಕ ಪ್ರದೇಶದ ವಿಚಿತ್ರ ಮಿಶ್ರಣ ಆಗಿತ್ತು.

‘ಅವರಿಗೆ ಪ್ಯಾರಾಲಿಸಿಸ್ ಆಗೇತಿ. ಆದರೆ ಮೇಡಮರೆ, ಪಿಂಚ್ಣಿ ದುಡ್ಡು ನನ್ ಕೈಲೆ ಕೊಡಲ್ಲಂತೆ’ ಅಂತ ಪಿಸುಮಾತಿನಲ್ಲಿ ಹೇಳಿದರು. ಮ್ಯಾನೇಜರು ಹಿರಿಯ ಮನುಷ್ಯನ ಕಡೆ ನೋಡಿದರೆ ಅವರು ‘ಬೇಡ’ ಎಂಬಂತೆ ಸ್ವಲ್ಪ ವ್ಯಗ್ರ ಅನ್ನಿಸುವ ಹಾಗೆ ಕೈ ಸನ್ನೆ ಮಾಡಿದರು.

ಅವರ ಪಿಂಚಣಿ ಹಣ ತಮ್ಮ ಹಾಗೂ ಮಗನ ಜಾಯಿಂಟ್ ಅಕೌಂಟಿನಲ್ಲಿರಲಿ ಅಂತ ಅವರ ಹಟ. ಮಗ ಆರ್ಮಿಯಲ್ಲಿ ಇರುತ್ತಾನೆ, ಬರುವುದು ಆರು ತಿಂಗಳಿಗೊಮ್ಮೆ ರಜೆ ಸಿಕ್ಕಾಗ ಮಾತ್ರ. ಅಷ್ಟರ ನಡುವೆ ನನಗೆ ಹಣದ ಅವಶ್ಯಕತೆ ಬಿದ್ದರೆ ಏನು ಮಾಡಬೇಕು ಎನ್ನುವುದು ಮಹಿಳೆಯ ನ್ಯಾಯಯುತ ಅಳಲು.

‘ಮದ್ಲು ಅಂದ್ರ ನಮ್ಮನೊಯೋರಿಗೇ ಆರೋಗ್ಯ ಚೆನ್ನಾಗಿತ್ತು ಮೆಡಮರೆ, ಅವ್ರೇ ಬರದು ಹೋಗದು ಬ್ಯಾಂಕು ಪ್ಯಾಟೆ ಎಲ್ಲಾ ಮಾಡ್ತಿದ್ದುದು. ಈಗ ಆಗಲ್ಲ. ಪ್ಯಾರಾಲಿಸಿಸ್ ಆದ ಮ್ಯಾಲೆ ಇವರನ್ನ ಬಚ್ಚಲಕ್ಕೂ ಕರಕಂಡು ಹೋಗಬಕು. ಅಂಥಾದ್ರೊಳಗ ಕಾಸು ಬೇಕಾದರೆ ನಾನು ಯಾರ ಹತ್ರ ಕೇಳಲಿ? ನನ್ನ ಹೆಸರನ್ನ ಖಾತೆಗೆ ಸೇರಿಸು ಅಂದರೆ ಒಪ್ಪೋದೇ ಇಲ್ಲ’ ಅಂತ ಉಸಿರುಗಟ್ಟಿ ಹೇಳಿದರು. ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಮಗ, ಗಂಡ ನೋಡುವುದರೊಳಗೆ ಒರೆಸಿಕೊಳ್ಳಬೇಕು ಎನ್ನುವ ಧಾವಂತ ಬೇರೆ.

‘ನಿಮಗೆ ಏನಾದರೂ ಬೇರೆ ಆದಾಯ ಇದೆಯಾ?’ ಮ್ಯಾನೇಜರ್ ಪ್ರಶ್ನೆ.

‘ಮನೆ ಕೆಲಸಕ್ಕೆ ಹೋಗ್ತಿದ್ದೆ. ಈಗ ಜಾಸ್ತಿ ಕೆಲಸ ಆಗಂಗಿಲ. ಇವರನ್ನ ಎತ್ತಬೇಕು, ಕುಂಡ್ರಸಬೇಕು…ಆಮ್ಯಾಲೆ ತಿಂಡಿ ಊಟ, ಹೊರಗ ಹೋದ್ರ ಮನೆಯಾಗೆ ಏನಾರ ಪ್ರಾಬ್ಲಂ ಆದರೆ ಅಂತ ಹೆದ್ರಿಕೆ ಮೆಡಮರೆ… ಎಲ್ಲಾ ನಾನೇ ಮಾಡಿರೂ ನಮ್ಮ ಮನಿಯೋರು ನನ್ ಹೆಸರಿಗೆ ಒಂದ್ ಪೈಸಾ ಇಟ್ಟಿಲ್ಲರಿ. ಎಲ್ಲಾ ಮಗ ತಕ್ಕಬುಡ್ತನ…’

‘ಸರಿ ಬಿಡಿ… ನಾನು ಹೇಳ್ತೀನಿ...’ ಎಂದು ಆ ಹಿರಿಯ ಮಹಿಳೆಯ ಮಗನನ್ನು ಕರೆದರು.

ನಲವತ್ತರ ಹತ್ತಿರವಿದ್ದ ಸೌಮ್ಯ ಮುಖದ ಮಗ ಬಂದು ನಿಂತರು.

‘ನೋಡೀಪಾ…ನಿಮ್ಮ ಹೆಸರು ತೆಗೆದು ನಿಮ್ಮ ಅಮ್ಮನ ಹೆಸರು ಹಾಕಿ…’ ಎಂದು ಮ್ಯಾನೇಜರು ಹೇಳುತ್ತಿರುವಾಗ ಥಟ್ ಅಂತ ಹೇಳಿದರು ಆ ಮನುಷ್ಯ: ‌‘ಮೇಡಂ, ನನಗೆ ಪ್ರಾಬ್ಲಮ್ ಇಲ್ಲ. ಅಪ್ಪ ಒಪ್ಪೋದಿಲ್ಲ…’ ಎಂದು.

ಮ್ಯಾನೇಜರು ಮಹಿಳೆಯ ಮುಖ ನೋಡಿದರು. ಮಹಿಳೆ ನಿರ್ಭಾವುಕರಾಗಿ ನಿಂತಿದ್ದರು.

‘ಅಪ್ಪನಿಗೆ ಹೇಳು. ನಿಮ್ಮ ಹಾಗೂ ಅಪ್ಪನ ಜಾಯಿಂಟ್ ಖಾತೆಗೆ ಪಿಂಚಣಿ ಬರುತ್ತಿದ್ದರೆ ನಿಮ್ಮ ಅಪ್ಪನ ನಂತರ ದುಡ್ಡು ನಿಂತು ಹೋಗಬಹುದು. ಅವರ ನಂತರ ನಿಮ್ಮ ತಾಯಿಗೆ ಪಿಂಚಣಿ ಮುಂದುವರೆಸಬೇಕಿರುವ ಕಾರಣ ಅವರ ಹೆಸರು ಇದ್ದರೆ ಸೂಕ್ತ. ನೀವೇ ಡಿಸೈಡ್ ಮಾಡಿ. ಕಾನೂನು ಪ್ರಕಾರ ಇದು ಆಗಬೇಕಿರುವ ಕೆಲಸ… ನಿಮ್ಮ ಹೆಸರು ತೆಗೆದು ಅಕೌಂಟಿಗೆ ಅವರ ಹೆಸರು ಸೇರಿಸಿ’

ಮಗ ತಂದೆಯ ಹತ್ತಿರ ಚರ್ಚೆ ಮಾಡಿದ. ಹಾ ಹೂ ಎಂದು ಗಲಾಟೆ ಮಾಡುತ್ತಾ ಬಹು ಕಷ್ಟದಿಂದ ಕೈಕಾಲಾಡಿಸುತ್ತಾ ಹೆಂಡತಿಯ ಮೇಲೆ ಸಿಟ್ಟು ತೋರಿಸುತ್ತಾ ಇದ್ದರು. ಹೆಂಡತಿ ತನ್ನ ಪ್ರಾಮಾಣಿಕತೆಯ ಬಗ್ಗೆ ಅವರಿಗೆ ಏನೇನೋ ಹೇಳುತ್ತಿದ್ದರೂ ಹಿರಿಯರ ಸಿಟ್ಟು ಕಡಿಮೆ ಆಗಲಿಲ್ಲ.

‘ನಾನು ಯದಕ್ಕೂ ಸುಖಾಸುಮ್ಮನೆ ಬಳಸಲ್ಲರಿ… ಹೆಸರು ಸೇರಸಬೇಕು ಅನಲಿಕತ್ತಾರ. ಸರಕಾರ ಹೇಳೇದಂತ’ ಎಂದು ಏರಿದ ಧ್ವನಿಯಲ್ಲಿ ಹೇಳಿದರು. ಸಿಟ್ಟು ಇಳಿಯಲೇ ಇಲ್ಲ. ಮಾರನೇ ದಿನ ಬರುತ್ತೇವಂತ ಹೊರಟರು. ಮತ್ತೆ ಏನಾಯಿತೋ ತಿಳಿಯಲಿಲ್ಲ.

ಈ ಘಟನೆ ಯಾಕೋ ಮನಸ್ಸಿನಲ್ಲಿ ಉಳಿಯಿತು. ತನ್ನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಹೆಂಡತಿಗೆ ಆರ್ಥಿಕ ಪಾಲು ನೀಡಲು ಯಾಕೆ ಗಂಡಸು ಹೀಗೆ ಹಿಂಜರಿಯುತ್ತಾನೆ? ಇದು ಬರೀ ಗಂಡಸಿನ ಪ್ರಶ್ನೆ ಅಲ್ಲ. ಹಾಗೂ ನಾನಿಲ್ಲಿ ಹೇಳುತ್ತಿರುವುದನ್ನು ಸಂಪೂರ್ಣ ಸಾರ್ವತ್ರಿಕ ಅಂತ ಯೋಚಿಸುವ, ‘ಎಲ್ಲಾ ಗಂಡಸರೂ ಹೀಗೇ ಅಂತ ಏನಿಲ್ಲ’ ಅನ್ನುವ ಸಮಜಾಯಿಷಿಗೆ ಇಳಿಯಬೇಕಿಲ್ಲ. ಎಲ್ಲಾ ಗಂಡಸರೂ ಹೀಗಲ್ಲ ಎನ್ನುವುದು ಖಂಡಿತಾ ನಿಜವೇ. ಆದರೆ ಸಾಕಷ್ಟು ವರ್ಗಗಳಲ್ಲಿ, ಸಮಾಜಗಳಲ್ಲಿ, ದೇಶಗಳಲ್ಲಿ ಹೆಣ್ಣಿಗೆ ಆರ್ಥಿಕ ಸಬಲತೆ ಕಡಿಮೆ ಎನ್ನುವುದನ್ನು ಒಪ್ಪಬಹುದು.   

ಹೆಣ್ಣು ಮಾಡುವ ಕೆಲಸಕ್ಕೆ ಆರ್ಥಿಕ ಬೆಲೆ ಕಡಿಮೆ. ಅವಳು ಗಂಡಸಿಗಿಂತ ಹೆಚ್ಚು ಎತ್ತರಕ್ಕೇರಿದರೂ ಸಂಬಳದ ತಾರತಮ್ಯ ಅಂಗೈ ಹುಣ್ಣಿನಷ್ಟೇ ಸ್ಪಷ್ಟ.

ಇಲ್ಲಿ ಇರುವ ಕೆಲವು ಅಂಶಗಳನ್ನು ಗಮನಿಸಿ. ಈಕೆ ದಿನಕ್ಕೆ ಸರಾಸರಿ ಎಂಟು ಗಂಟೆ ದುಡಿಯುತ್ತಾಳೆ. ಈಕೆಯಂತೆಯೇ ಭಾರತದಲ್ಲಿ ಸುಮಾರು 200 ಕೋಟಿ ಹೆಣ್ಣುಮಕ್ಕಳು ದುಡಿಯುತ್ತಾರೆ. ಆದರೆ ಇವರ ಈ ಕೆಲಸಕ್ಕೆ ಯಾವ ಸಂಬಳವಾಗಲೀ, ಕೂಲಿಯಾಗಲೀ ಸಿಗುವುದಿಲ್ಲ! ದಿನವೊಂದಕ್ಕೆ ಇವರು ಪುಕ್ಕಟೆಯಾಗಿ ದುಡಿಯುವ ಅವಧಿಯನ್ನು ಗಂಟೆಗಳಲ್ಲಿ ಲೆಕ್ಕ ಹಾಕಿದರೆ ಒಟ್ಟು 160 ಕೋಟಿ ಗಂಟೆಗಳಾಗುತ್ತವೆ!

ಈಕೆಯನ್ನು ಮೊದಲು ‘ಹೌಸ್‌ವೈಫ್‌‘ ಎಂದು ಕರೆಯುತ್ತಿದ್ದರು. ಕನ್ನಡದಲ್ಲಿ ಏನೆಂದು ಕರೆಯುವುದು? ‘ಮನೆ ಹೆಂಡ್ತಿ’ ಎನ್ನಬಹುದೆ?! ಬಹುಶಃ ಅದನ್ನು ತಪ್ಪಿಸಲೆಂದೇ ಇರಬೇಕು– ಇತ್ತೀಚೆಗೆ ಇನ್ನಷ್ಟು ಅಚ್ಚುಕಟ್ಟಾಗಿ ‘ಹೋಮ್‌ ಮೇಕರ್‌’ ಎನ್ನುತ್ತಾರೆ! ಅಂದರೆ ಮನೆ ನಿರ್ಮಿಸುವವರು? ಜನಸಾಮಾನ್ಯರ ಭಾಷೆಯಲ್ಲಿ ಮನೆ ನಿರ್ಮಿಸುವವರು ಎಂದರೆ ಮೇಸ್ತ್ರಿ ಮತ್ತು ಎಂಜಿನಿಯರ್‌. ಅವರ ಕೆಲಸಕ್ಕೆ ಸಂಬಳವಿದೆ. ಅವರದ್ದೇ ಕೆಲಸವನ್ನು ಹೋಲುವ ಈ 200 ಕೋಟಿ ಹೆಣ್ಣುಮಕ್ಕಳಿಗೆ ಸಂಬಳ ಇಲ್ಲ.

ಸಂಬಳ ಕೇಳಿದರೆ ಏನಾಗುತ್ತದೆ? ಪ್ರೀತಿಯಿಂದ ಮಾತನಾಡುವ ಗಂಡ, ‘ನಿನ್‌ ಮನೆ ಕಣಮ್ಮೀ. ಈ ಕೆಲಸ ನೀನ್‌ ಮಾಡ್ದೆ ಇನ್ಯಾರು ಮಾಡಬೇಕು ಚಿನ್ನಾ..’ ಎನ್ನುತ್ತಾನೆ. ಒರಟ ಗಂಡ, ‘ಮನೇಲಿ ಕೂತು ಏನ್‌ ಮಹಾ ಕಡಿದು ಕಟ್ಟೆ ಹಾಕ್ತೀಯಾ? ಇದಕ್ಕೆ ಸಂಬಳ ಬೇರೆ ಕೇಡು. ಅಡುಗೆ ಮಾಡಿದ್ದನ್ನು ನೀನೂ ಉಣ್ಣಲ್ವಾ?

ನಿನ್‌ ಮನೆ ಕಣಮ್ಮೀ ಅಂತ ಹೇಳ್ತಾನಲ್ಲ ಆ “ಅಚ್ಮೆಚ್ಚಿನ” ಗಂಡ ಏನೇ ಮಾತಾಡಿದರೂ ಮನೆ ರಿಜಿಸ್ಟ್ರೇಷನ್‌ ಅವನ ಹೆಸರಲ್ಲೇ ಇರುತ್ತೆ! ಹೆಂಡತಿಯ ಹೆಸರಲ್ಲಿ ಇರೋದಿಲ್ಲ!

ಹಾಗಾಗಿಯೇ ಇರಬೇಕು, ಇತ್ತೀಚಿನ ವರ್ಷಗಳಲ್ಲಿ ಗಂಡ ಹೆಂಡತಿ ಇಬ್ಬರೂ ಸಾಲಕ್ಕೆ ಅರ್ಜಿ ಹಾಕಿದರೆ ಬ್ಯಾಂಕುಗಳು ಆಸ್ತಿ ಇಬ್ಬರ ಹೆಸರಿನಲ್ಲೂ ಇರಬೇಕು ಎನ್ನುವುದನ್ನು ಬಹುತೇಕ ಕಡ್ಡಾಯ ಮಾಡಿವೆ. ಹಾಗಾದರೆ ಇದಕ್ಕೇನು ಪರಿಹಾರ? ಹೆಣ್ಣು ಮಕ್ಕಳು ಹೆಚ್ಚು ಕೆಲಸ ಮಾಡಿದರೆ ಓಕೆ ನಾ? ಅಂತ ಕೇಳುತ್ತೀರಾ? ಅಲ್ಲೂ ಒಂದಷ್ಟು ತಕರಾರಿದೆ.

ಗಂಡಸೊಬ್ಬ ಯಾವುದೇ ಕೆಲಸಕ್ಕೆ ₹ 100 ಸಂಬಳ ತೆಗೆದುಕೊಂಡ ಅಂತಿಟ್ಟುಕೊಳ್ಳಿ. ಅದೇ ಕೆಲಸವನ್ನು ಅಷ್ಟೇ ಪ್ರಮಾಣದ ಕೆಲಸವನ್ನು ಅದೇ ಹುದ್ದೆ/ಸ್ಥಾನದಲ್ಲಿದ್ದುಕೊಂಡು ಮಹಿಳೆ ಮಾಡಿದರೆ ಅವಳಿಗೆ ಸಿಗುವ ಸಂಬಳ ಎಷ್ಟು ಗೊತ್ತಾ? ಬರೀ ₹ 66 ಮಾತ್ರ. ಅಂದರೆ ನಮ್ಮ ದೇಶದಲ್ಲಿ ಲಿಂಗಧಾರಿತ ಸಂಬಳದ ತಾರತಮ್ಯ ಶೇ 34ರಷ್ಟಿದೆ.   

ಅಚ್ಚರಿಯೆಂದರೆ ಭಾರತದ ಜಿಡಿಪಿಯಲ್ಲಿ ಅಂದರೆ ದೇಶೀಯ ಉತ್ಪನ್ನ ದರದಲ್ಲಿ ಬೆಲೆ ಕಟ್ಟದೆ ಇರುವ ’ಸೇವೆ’ ಹಾಗೂ ’ಕಾಳಜಿ’ಯ ಕೆಲಸಗಳಲ್ಲಿ ನಗರ ಹಾಗೂ ಹಳ್ಳಿಗಳ ಮಹಿಳೆಯರ ಸಂಖ್ಯೆಗೆ ಅಂಥಾ ವ್ಯತ್ಯಾಸವೇನೂ ಇಲ್ಲ.

ಈ ‘ಬೆಲೆ ಇಲ್ಲದ ಕೆಲಸ’ ನಮ್ಮ ದೇಶದ ಒಟ್ಟು ಜಿಡಿಪಿಯಲ್ಲಿ ಶೇ 3.5ರಷ್ಟಿದ್ದರೆ ಅದರಲ್ಲಿ ಶೇ 3.1ರಷ್ಟುಕೆಲಸವನ್ನು ಹೆಣ್ಣು ಮಕ್ಕಳೇ ಮಾಡುತ್ತಾರೆ. ಉಳಿದ ಅಲ್ಪಪ್ರಮಾಣ ಮಾತ್ರ ಗಂಡಸರ ಕೆಲಸ.

ಮನೆಕೆಲಸ ಅಥವಾ ಮನೆಯಿಂದ ಮಾಡುವ ಕೆಲಸಗಳು ಈಗಲೂ ಬಹುತೇಕ ಮಹಿಳೆಯರಿಗೇ ಇರುವಂಥವು. ಉದಾಹರಣೆಗೆ ಬೀಡಿ ಕಟ್ಟುವ ಕಾಯಕದಲ್ಲಿ ಶೇ 77.5ರಷ್ಟುಮಹಿಳೆಯರಿದ್ದಾರೆ. ಮನೆಗೆಲಸಕ್ಕೆ ಶೇ 89ರಷ್ಟು ಮಹಿಳೆಯರು ಹೋಗುತ್ತಾರೆ. ಆದರೆ ಇಬ್ಬರ ದುಡಿಮೆಯೂ ಅದೇ ಕೆಲಸ ಮಾಡುವ ಗಂಡಸರಿಗಿಂತ ಕಡಿಮೆಯೇ. ಅದಕ್ಕೇ ಅನ್ನಿಸುವುದು ಅಪ್ಪನಿಗೆ ರಿಟೈರ್ ಮೆಂಟ್ ಉಂಟು, ಅದಕ್ಕೆ ಪೆನ್ಷನ್ ಕೂಡ ಬರುತ್ತದೆ. ಅಮ್ಮನಿಗೆ ಸುಸ್ತಾಗುವಷ್ಟು ‘ರಿ-ಟೈರ್ಮೆಂಟ್’ ಮಾತ್ರ, ಜೊತೆಗೆ ಹೇರಳ ಟೆನ್ಷನ್ ಬೇರೆ.  

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !