ಗುರುವಾರ , ಸೆಪ್ಟೆಂಬರ್ 24, 2020
27 °C
ಕರ್ನಾಟಕದಲ್ಲಿ ದಲಿತ ಪ್ರಜ್ಞೆಯ ಅಂತಃಸತ್ವವಾಗಿ ಬೆಳಗುತ್ತಿವೆ ಹಾಡುಗಳು

ಜನರ ಬದುಕಿನಲ್ಲಿ ಬೆರೆತು ಹೋಗಿರುವ ಅಂಬೇಡ್ಕರ್ ಜಾನಪದ

ಅರುಣ್ ಜೋಳದಕೂಡ್ಲಿಗಿ Updated:

ಅಕ್ಷರ ಗಾತ್ರ : | |

ಜಾನಪದ ಸಂಶೋಧನೆಯಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಡಾ.ಅರುಣ್ ಜೋಳದಕೂಡ್ಲಿಗಿ ಅವರ ಈ ಲೇಖನವು ಕನ್ನಡಿಗರ ಜನಮಾನಸದಲ್ಲಿ ಅಂಬೇಡ್ಕರ್ ಹೇಗೆಲ್ಲಾ ನೆಲೆನಿಂತಿದ್ದಾರೆ, ಕನ್ನಡದ ಸತ್ವಪೂರ್ಣ ಭಜನಾ ಪರಂಪರೆಯು ಹೇಗೆ ಅಂಬೇಡ್ಕರ್ ಆಶಯಗಳನ್ನು ತನ್ನ ಭಿತ್ತಿಯ ಭಾಗವಾಗಿಸಿಕೊಂಡಿದೆ ಎಂದು ವಿವರಿಸುತ್ತದೆ. ಇಂದು (ಡಿ.6) ಅಂಬೇಡ್ಕರ್ ಪರಿನಿರ್ವಾಣ ದಿನವೂ ಹೌದು.

–––

ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕು ಕೊಂಡಗೂಳಿ ಗ್ರಾಮದಲ್ಲಿ ದಲಿತ ಮಹಿಳೆಯರು ಮನೆಯೊಳಗಿದ್ದ ದೇವರ ಪಟಗಳನ್ನು ಹೊರತಂದು ಸಾರ್ವಜನಿಕವಾಗಿ ಸುಟ್ಟರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಗಮನಸೆಳೆಯಿತು. ತಮಗಾದ ಅವಮಾನಕ್ಕೆ ಪ್ರತಿರೋಧವಾಗಿ ದೇವರುಗಳನ್ನು ಸುಡುವ ಆಕ್ರೋಶ ಭುಗಿಲೆದ್ದಿತ್ತು. ಕೊಂಡಗೂಳಿಯಲ್ಲಿ ಹೊಸದಾಗಿ ಕಟ್ಟಿದ ದ್ಯಾವಮ್ಮನ ರಥವನ್ನು ದಲಿತರು ಎಳೆಯಬಾರದೆಂದು ಸವರ್ಣೀಯರು ನಿಷೇಧಿಸಿದರು. ನಾವೇಕೆ ರಥವನ್ನು ಮುಟ್ಟಬಾರದೆಂದು ಪ್ರಶ್ನಿಸಿದ್ದಕ್ಕೆ ವಾಗ್ವಾದ ಕಲ್ಲು ತೂರಾಟ, ಸವರ್ಣೀಯರ ದಾಳಿ ನಡೆಯಿತು. ಗಾಯಗೊಂಡ ಹನ್ನೆರಡು ಜನರು ಜೇವರ್ಗಿ, ಕಲಬುರ್ಗಿಯಲ್ಲಿ ಚಿಕಿತ್ಸೆ ಪಡೆದರು. ದೇವರೆಂಬ ಮೌಢ್ಯ ದಲಿತರನ್ನು ಗುಲಾಮಗಿರಿಯಲ್ಲಿರಿಸಿದ್ದು ಸಾಕು ಎನ್ನುವ ಎಚ್ಚರ `ದೇವರುಗಳೆ ಬೇಡ’ ಎಂಬಲ್ಲಿಗೆ ಕರೆತಂದಿತ್ತು.

ಜೇವರ್ಗಿಯ ದಲಿತ ಮಹಿಳೆಯರ ಆಕ್ರೋಶ ತಮ್ಮೂರಿನ ಘಟನೆಯೊಂದರ ತತ್‌ಕ್ಷಣದ ಪ್ರತಿಕ್ರಿಯೆಯೇ? ದೇವರುಗಳನ್ನು ಸುಡುವಂತಹ ದೃಢ ನಿರ್ದಾರದ ವೈಚಾರಿಕತೆ ಈ ಘಟನೆಯೊಂದರಿಂದ ಬಂತೆ? ಎನ್ನುವ ಪ್ರಶ್ನೆಗಳು ಕಾಡುತ್ತವೆ. ಈ ಪ್ರಶ್ನೆಗಳಿಗೆ ಉತ್ತರದ ಜಾಡು ಹಿಡಿದರೆ ‘ಅಂಬೇಡ್ಕರ್ ಜಾನಪದ ಲೋಕ’ ಬಾಗಿಲು ತೆರೆದು ನಮ್ಮನ್ನು ಆಹ್ವಾನಿಸುತ್ತದೆ.

ಕಾರಣ ಈ ಭಾಗದ ಜನಪದ ಹಾಡುಗಳಲ್ಲಿ `ಹಿಂದು ಧರ್ಮದೋಳ್ ಉಳಿದು ಹಿಂದೆ ಬಿದ್ದೀರಿ / ಕಲ್ಲು ಕಟಿಗಿ ದೇವರ ಕಿತ್ತೊಗೆದು ಭೀಮ ಜಯಂತಿ ಮಾಡಿರಿ’ ಎಂಬ ಹಾಡಿನ ಧ್ವನಿ ಕೇಳಿಸುತ್ತದೆ. ಕಲಬುರ್ಗಿ, ಬೀದರ್, ಹುಮನಬಾದ್ ಭಾಗದ ಹಳ್ಳಿಗಳ ದಲಿತರ ಭಜನಾ ಪದಗಳಲ್ಲಿ ಇದರ ಪ್ರತಿಧ್ವನಿ ಮರುಕಳಿಸುತ್ತದೆ. ಇಲ್ಲೆಲ್ಲಾ ಅಂಬೇಡ್ಕರ್ ರೂಪಿಸಲೆತ್ನಿಸಿದ ವೈಚಾರಿಕತೆ. ಅವರ ಆಶಯಗಳು ‘ಜನಪದೀಕರಣ’ಗೊಂಡಿರುವುದು ನಮ್ಮನ್ನು ಅಚ್ಚರಿಗೊಳಿಸುತ್ತದೆ.

(ಇದನ್ನೂ ಓದಿ: ಹೊಸ ಪುಸ್ತಕ– ಅಂಬೇಡ್ಕರ್ ಚಿಂತನೆಗಳಿಗೆ ಹೊಸ ನೋಟ)

ದಲಿತ ಭಜನಾ ಪರಂಪರೆ

ಹೈದರಾಬಾದ್ ಕರ್ನಾಟಕದಲ್ಲಿ ಜೀವಪರ ತಿಳಿವು ವಿಸ್ತರಿಸುತ್ತಿರುವ ಕೆ.ನೀಲಾ ಮತ್ತು ಮೀನಾಕ್ಷಿ ಬಾಳಿ ಕಳೆದ ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕಲಬುರ್ಗಿ ಸೆಂಟ್ರಲ್ ಯುನಿವರ್ಸಿಟಿ ಕನ್ನಡ ವಿಭಾಗದ ಸಹಯೋಗದಲ್ಲಿ ‘ದಲಿತ ಭಜನಾ ಪರಂಪರೆ’ ಎನ್ನುವ ವಿಚಾರ ಸಂಕಿರಣ ಆಯೋಜಿಸಿದ್ದರು. ಅಂಬೇಡ್ಕರ್‌ವಾದಿಗಳು ದಲಿತರನ್ನು ಭಜನೆಗೆ ಸೀಮಿತಗೊಳಿಸದಿರಿ ಎನ್ನುವ ತಕರಾರು ತೆಗೆದಿದ್ದರು. ಈ ಸಂದರ್ಭದಲ್ಲಿ ಹಲವು ತಂಡಗಳು ಅಂಬೇಡ್ಕರ್ ಮತ್ತು ಬುದ್ಧನ ಅರಿವಿನ ಗೀತೆಗಳನ್ನು ಹಾಡಿದವು. ಮೊದಲ ಬಾರಿಗೆ ಕೇಳಿದ ನನಗೆ ಅಚ್ಚರಿಯಾಯಿತು. ಕಾರಣ ಈ ಹಾಡುಗಳು ದೇವರ ಭಜಿಸುವ ಗೀತೆಗಳಾಗಿರದೆ, ತ್ಯಜಿಸುವ ಗೀತೆಗಳಾಗಿದ್ದವು. ಕುರುಡು ಆರಾಧನೆಯ ಹೊತ್ತು ಸಾಗದೆ, ಮೌಢ್ಯತೆಯ ಭಾರ ಇಳಿಸಿ ಹಗುರಾಗುವಂತಿದ್ದವು. ಹೀಗಾಗಿ ಈ ಸೆಮಿನಾರಿನ ನಂತರವೂ ಈ ಹಾಡುಗಳ ಬಗ್ಗೆ ನನ್ನಲ್ಲಿ ಕುತೂಹಲ ಮೂಡಿತು. 

(ಇದನ್ನೂ ಓದಿ: ಮೂಢನಂಬಿಕೆಗೆ ಸಡ್ಡುಹೊಡೆದಿದ್ದ ಅಂಬೇಡ್ಕರ್)

ಎಚ್ಚೆತ್ತ ಮಹಿಳಾ ಪ್ರಜ್ಞೆ

ದಲಿತ ಭಜನಾ ತಂಡಗಳನ್ನು ಹುಡುಕಿಕೊಂಡು ನಾನು ಹುಮನಬಾದ್ ತಾಲ್ಲೂಕಿನ ಗಡವಂತಿ ತಲುಪಿದಾಗ ಇಳಿಸಂಜೆ. ಬಸವರಾಜ ಮಾಳಿಗೆ ಗಾರೆಕೆಲಸದಿಂದ ಬಂದು ದಣಿವಾರಿಸಿಕೊಳ್ಳುತ್ತಿದ್ದರು. ನಾನು ಮೊದಲೆ ಪರಿಚಯ ಮಾಡಿಕೊಂಡಿದ್ದರಿಂದ ಆತ್ಮೀಯವಾಗಿ ಉಪಚರಿಸಿದರು. ಹಾಡಿಕೆಗೆ ಬರುವಂತೆ ಭಜನೆ ತಂಡದ ಸದಸ್ಯರಿಗೆ ಸುದ್ದಿ ಮುಟ್ಟಿಸಿದರು. ಒಬ್ಬೊಬ್ಬರಾಗಿ ಬುದ್ಧವಿಹಾರದ ಎದುರಿನ ಅಂಬೇಡ್ಕರ್ ಪ್ರತಿಮೆಗೆ ನಮಿಸುತ್ತ ವಿಹಾರದ ಒಳಗೆ ಕುಳಿತರು. ಅಂಬೇಡ್ಕರ್ ಪ್ರಾರ್ಥನಗೀತೆ ಮೂಲಕ ಹಾಡಿಕೆಗೆ ಚಾಲನೆ ನೀಡಿದರು. ಹಾಡಿಕೆ ಇಳಿವಿನಿಂದ ಏರುಧ್ವನಿಗೆ ಚಲಿಸತೊಡಗಿತು. ಹಿಂದು ಧರ್ಮದ ಕಂದಾಚಾರಗಳ ಬಗ್ಗೆ ಜೋರು ಧ್ವನಿಯಲ್ಲಿ ವಿರೋಧ ತೋರುತ್ತಲೇ, ಶಿಕ್ಷಣ ಸಂಘಟನೆ ಹೋರಾಟ, ಬುದ್ಧನ ಅರಿವಿನ ಲೋಕದ ಪಯಣ ಹೀಗೆ ಹಾಡಿಕೆ ಅಹೋರಾತ್ರಿಯವರೆಗೆ ನಡೆಯಿತು. ಮರುದಿನ ಮೊಳಕೇರಾ ಗ್ರಾಮದ ರಮಾಬಾಯಿ ಮಹಿಳಾ ಸಂಘ ಮತ್ತು ಗುಲ್ಬರ್ಗಾ ಸಮೀಪದ ಸುಲ್ತಾನ್ ಪುರದ ಅನಿತಾ ಮಹಿಳಾ ಸಂಘದ ಮಹಿಳೆಯರು ಕೂಡ ಬಾಬಾಸಾಹೇಬರ ಅರಿವಿನ ಗೀತೆಗಳನ್ನು ಎಚ್ಚೆತ್ತ ಮಹಿಳಾ ಪ್ರಜ್ಞೆಯ ಭಾಗವೆಂಬಂತೆ ಹಾಡಿದರು.

ಬಸವರಾಜ ಮಾಳಗಿ ಅವರು ಮಾತನಾಡುತ್ತಾ, ಇಂಥದ್ದೇ ಹಾಡಿಕೆ ತಂಡಗಳು ಊರಿಗೊಂದರಂತೆ ಇರುವುದಾಗಿ ತಿಳಿಸಿದರು. ನಿಧಾನಕ್ಕೆ ಈ ಹಾಡಿನ ಜಾಡಿನಲ್ಲಿ ಈ ಭಾಗದ ಜನರು ಪೂರ್ಣಪ್ರಮಾಣದಲ್ಲಿ ಬುದ್ಧ ಅಂಬೇಡ್ಕರರೆಡೆಗೆ ಚಲಿಸುತ್ತಿರುವಂತೆ ಕಂಡಿತು. ಮೂರು ದಶಕಗಳ ಹಿಂದೆಯೇ ಇಂತಹ ಪದಗಳನ್ನು ಕಟ್ಟಿ ಜನಸಮುದಾಯಗಳಲ್ಲಿ ಬಿತ್ತಿ ಬೆಳೆದವರು ಹಿಲಾಲಪುರದ ಕಾಶೀನಾಥ ಪಂಚಶೀಲ ಗವಾಯಿ ಮತ್ತು ಮಾಣಿಕರಾವ ಜ್ಯೋತಿ. ಬಾಲ್ಯದಲ್ಲಿಯೇ ದೃಷ್ಟಿಕಳೆದುಕೊಂಡ ಕಾಶೀನಾಥರು ಮಾಣಿಕರಾವರ ಬೇಟಿಯಿಂದಾಗಿ ಬುದ್ಧ ಅಂಬೇಡ್ಕರರೆಡೆಗೆ ಆಕರ್ಷಿತರಾದರು. ಅಂದಿನಿಂದ ಕಾಶೀನಾಥ ಮತ್ತು ಮಾಣಿಕರಾವ್ ಜ್ಯೋತಿಯವರು ಬುದ್ಧ ಅಂಬೇಡ್ಕರ್ ಅರಿವನ್ನು ಜನಸಾಮಾನ್ಯರಲ್ಲಿ ಬಿತ್ತಲು ಹಗಲಿರುಳು ಶ್ರಮಿಸಿದರು. ಗೆಳೆಯರಾಗಿ, ಗುರುಶಿಷ್ಯರಾಗಿ, ಹಿತೈಷಿಗಳಾಗಿ ಒಬ್ಬರಿಗೊಬ್ಬರು ಆಳವಾದ ಸ್ನೇಹವನ್ನು ಹೊಂದಿ ಬದುಕಿದರು.

(ಇದನ್ನೂ ಓದಿ: ಆರ್‌ಎಸ್‌ಎಸ್‌ನ ಅಂಬೇಡ್ಕರ್‌ ಪ್ರೀತಿ ಮತ್ತು ಮಿಥ್ಯೆ)

ಕಾಶೀನಾಥ ಅವರು ತಮ್ಮ ಸಾಂಪ್ರದಾಯಿಕ ಜನಪದ ಹಾಡುಗಾರಿಕೆಯನ್ನು ಬಿಟ್ಟು, ಅದರದೇ ಲಯಕ್ಕೆ ಬುದ್ಧ ಅಂಬೇಡ್ಕರ್ ಜೀವನ ಮತ್ತು ಬೋಧನೆಗಳನ್ನು ತುಂಬಿದರು. ಬೀದರ್ ಗುಲ್ಬರ್ಗಾ ಭಾಗದಲ್ಲಿ ಹಳ್ಳಿಹಳ್ಳಿಗಳನ್ನು ಸುತ್ತಿ ದಲಿತರಲ್ಲಿ ಜಾಗೃತಿ ಮೂಡಿಸಿದರು. ಮೂಢನಂಬಿಕೆಗಳನ್ನು ತೊರೆದು, ಶಿಕ್ಷಣ ಹೊಂದುವಂತೆ ಯುವಕರನ್ನು ಹುರಿದುಂಬಿಸುತ್ತಿದ್ದರು. ಕಾಶೀನಾಥರು ಜನಸಮುದಾಯದ ಒಳ ಪ್ರವೇಶಿಸುವ ಕೀಲಿಕೈಗಳನ್ನು ಬಾಲ್ಯದಿಂದಲೆ ಪಡೆದವರು. ಹಾಗಾಗಿ ಅವರು ಬೀದರ ಭಾಗದಲ್ಲಿದ್ದ ಜನಪ್ರಿಯ ಹಿಂದಿ ಸಿನೆಮಾ ಗೀತೆಗಳ ಧಾಟಿಯಲ್ಲಿ ಹಾಡುಕಟ್ಟಿದರು. ಜನರು ಗುನುಗುತ್ತಿದ್ದ ಲಯದಲ್ಲಿ ಸಾಹಿತ್ಯವನ್ನು ಬದಲಿಸಿದರು. ಪ್ರೀತಿಪ್ರೇಮದ ಹಾಡುಗಳ ದಾರಿಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಚಿಂತನೆಯ ಮಾನವ ಪ್ರೀತಿಯನ್ನು ತುಂಬಿದರು. ಹೀಗಾಗಿ ಕಾಶೀನಾಥರ ಹಾಡುಗಳು ಭಜನೆ ಕೋಲಾಟ ರಿವಾಯ್ತ್ ಲಾವಣಿ ಬುಲಾಯಿ ಮೊದಲಾದ ಜನಪದ ಹಾಡಿಕೆಗಳಲ್ಲಿ ಬಹುಬೇಗ ಚಲಾವಣೆಗೆ ಬಂದು ನೆಲೆನಿಂತವು. ಇದೀಗ ಈ ಇಬ್ಬರ ಅಸಂಖ್ಯ ಶಿಷ್ಯರು ಕೂಡ ಹೊಸ ಹೊಸ ಪದಕಟ್ಟಿ ಹಾಡತೊಡಗಿದ್ದಾರೆ. ಸಾವಿರಾರು ಪದಗಳು ಜನಪದ ಮುದ್ರೆ ಪಡೆದು ಹಳ್ಳಿ ಹಳ್ಳಿಗಳಲ್ಲಿ ಕಾಲಿಗೆ ಗೆಜ್ಜೆಕಟ್ಟಿಕೊಂಡು ಜಾಗೃತಿ ಮೂಡಿಸುತ್ತ ಚಲಿಸುತ್ತಿವೆ.

(ಇದನ್ನೂ ಓದಿ: ಅಂಬೇಡ್ಕರ್ ಸ್ಮೃತಿ-ಸಂಸ್ಕೃತಿ: ಬಾಬಾಸಾಹೇಬರ ಕಡೆಯ ಸಂದೇಶಗಳು)

ಜಾನಪದದ ಮರುಹುಟ್ಟು

ಹೀಗೆ ಜನರನ್ನು ಪ್ರಭಾವಿಸಿ ಮನಗಳಲ್ಲಿ ಅಚ್ಚೊತ್ತಿ ಕಾಡಿದ ಯಾವುದೇ ಸಂಗತಿಯ ಬಗೆಗೆ ಅಚ್ಚರಿ, ಕೌತುಕ, ನಂಬಿಕೆ, ಆಚರಣೆ, ಕತೆ, ಗೀತೆ, ನುಡಿಗಟ್ಟುಗಳು ಹುಟ್ಟುತ್ತವೆ. ಇದನ್ನು ಒಬ್ಬರಿಗೊಬ್ಬರು ಹಂಚಿಕೊಂಡಾಗ ಜಾನಪದ ಮರುಹುಟ್ಟು ಪಡೆಯುತ್ತದೆ. ಹೀಗೆ ಜನಸಮುದಾಯಗಳ ಕೂಡುಬಿಂದುಗಳು ಮತ್ತು ಜನರ ಸಂವಹನದ ದಾರಿಗಳೂ ಬದಲಾಗಿವೆ. ಜನರು ಬೌತಿಕವಾಗಿ ಜೊತೆಯಾಗುವಂತೆ, ಇದೀಗ ಸೈಬರ್ ಸ್ಪೇಸಿನ ಸಾಮಾಜಿಕ ಜಾಲತಾಣಗಳಲ್ಲಿಯೂ ಪರಸ್ಪರರು ಸಂವಹನ ಮಾಡುತ್ತಿದ್ದಾರೆ. ಇಲ್ಲಿಯೂ ಹೊಸಗುರುತಿನ ನವಜಾನಪದ ಹುಟ್ಟುತ್ತಿದೆ. ಹೀಗಾಗಿ ಜನಸಮುದಾಯಗಳನ್ನು ಪ್ರಭಾವಿಸುವ ಸಂಗತಿಗಳ ಬಗೆಗೆ ಮನುಷ್ಯ ಸಹಜ ಕುತೂಹಲದಿಂದಾಗಿ ಹುಟ್ಟುವ ಸೃಜನಶೀಲ ಪ್ರಕ್ರಿಯೆಯ ಉತ್ಪನ್ನವೆ `ಜಾನಪದ’ ಎನ್ನುವ ಹೊಸ ವ್ಯಾಖ್ಯಾನಕ್ಕೆ ನಾವಿಂದು ಚಲಿಸಬೇಕಿದೆ. ಹಾಗಾದಾಗ ಅಂಬೇಡ್ಕರ್ ಜಾನಪದ ಲೋಕವೊಂದು ಕಾಣತೊಡಗುತ್ತದೆ. ಈ  ಲೋಕದಲ್ಲಿ ಸ್ವತಃ ನಾವು ವಿಹರಿಸುತ್ತಿರುವುದು ಅರಿವಿಗೆ ಬರುತ್ತದೆ.

ಈ ಅರ್ಥದಲ್ಲಿ `ಅಂಬೇಡ್ಕರ್ ಜಾನಪದ’ವನ್ನು ಭಿನ್ನವಾಗಿ ಗ್ರಹಿಸಬೇಕಿದೆ. ಬಾಬಾಸಾಹೇಬರು ಮೂಡಿಸಿದ ಅರಿವು ಜನಸಾಮಾನ್ಯರೊಳಗಿಂದ ಮರುಹುಟ್ಟು ಪಡೆದ ಬರಹ, ಮೌಖಿಕ ಕಥನ,  ಹಾಡಿಕೆ, ಸಂಗೀತ, ದೃಶ್ಯ, ಚಿತ್ರ, ಶಿಲ್ಪ ಮೊದಲಾದ ಬಹುರೂಪಗಳು ಅಂಬೇಡ್ಕರ್ ಜಾನಪದವಾಗಿ ರೂಪಾಂತರ ಹೊಂದುತ್ತವೆ.

ಹಂಪಿ ಸಮೀಪದ ಕಮಲಾಪುರದ ಅಂಬೇಡ್ಕರ್ ಪ್ರತಿಮೆ ಬಳಿ ದಿನಾಲು ಕೂಲಿಗಳನ್ನು ಕರೆದೊಯ್ಯಲು ಚೌಕಾಸಿ ನಡೆಯುತ್ತದೆ. ಇವರತ್ತಲೇ ಕೈ ತೋರುತ್ತಿರುವ ಅಂಬೇಡ್ಕರ್ ಏನು ಹೇಳುತ್ತಿರಬಹುದೆಂದು ಮಹಿಳೆಯೊಬ್ಬರನ್ನು ಕೇಳಿದಾಗ, `ಇನ್ನೇನು ಏಳ್ತಾರೆ, ಓದ್ರಿ ಓದ್ರಿ ಅಂತ ಬಡಕೊಂಡ್ರೂ ನೀವು ಓದಲಿಲ್ಲ, ನಿನ್ನ ಮಕ್ಕಳನ್ನಾದ್ರೂ ಓದ್ಸು' ಅಂತಿರಬೇಕು ಎಂದಳು. ಹೀಗೆ ಮೌನವಾಗಿ ನಿಂತ ಅಂಬೇಡ್ಕರ್ ಪ್ರತಿಮೆಗಳ ಬಗ್ಗೆ ಹುಟ್ಟಿದ ಆಯಾ ಭಾಗದ ಸ್ಥಳೀಯ ಕಥನಗಳ ಸಂಗ್ರಹವೂ ಕುತೂಹಲಕಾರಿ ಅಂಶಗಳನ್ನು ಕಾಣಿಸುತ್ತದೆ. ಅಂಬೇಡ್ಕರ್ ಪ್ರತಿಮೆಗಳ ದೈವಾರಾಧನೆಯೂ ಆಚರಣೆಯಾಗಿದೆ. ಇದನ್ನು ಹಿಂದೂ ದೈವಗಳ ಪೌರೋಹಿತ್ಯದ ಮೂರ್ತಿಪೂಜೆಗೆ ಹೋಲಿಸುವಂತಿಲ್ಲ. ಇದು ದೈವಗಳ ಜತೆಗಿನ ಜನಪದರ ಸಹಜ ಒಡನಾಟದಂತಿದೆ. ಪೌರೋಹಿತ್ಯದ ದೈವಾರಾಧನೆಯ ಒಡನಾಟಕ್ಕೆ ಮೂಡನಂಬಿಕೆಗಳನ್ನು ಜೊತೆಯಾದರೆ, ಬಾಬಾಸಾಹೇಬರ ಒಡನಾಟಕ್ಕೆ ಅವರ ಬರಹ ಚಿಂತನೆಗಳು ಜೊತೆಯಾಗುತ್ತವೆ. 

ಸುರಪುರ ಸಮೀಪ ಲಕ್ಷ್ಮೀಪುರದ ವೆಂಕಟೇಶ್ ಮಿಠ್ಠ ಎಂಬ ರಿವಾಯ್ತ್ ಹಾಡುಗಾರ ಕಟ್ಟಿದ `ಅಂಬೇಡ್ಕರ್ ಪದ'ದ ಬಗ್ಗೆ ಕೇಳಿದಾಗ, ಆತ ತನ್ನ ಮಗನ ಪಠ್ಯಪುಸ್ತಕದಲ್ಲಿದ್ದ ಅಂಬೇಡ್ಕರ್ ಪಾಠವನ್ನು ಆತನಿಂದಲೆ ಓದಿಸಿ ಹಾಡು ಕಟ್ಟಿದ್ದಾಗಿ ಹೇಳಿದ. ಹೀಗೆ ಶಾಲಾ ಪಠ್ಯದೊಳಗಿನ ಬಾಬಾಸಾಹೇಬರು ಮೌಖಿಕ ಪರಂಪರೆಗೆ ಜಿಗಿದಿರುವುದೊಂದು ಅಚ್ಚರಿ. ಆಧುನಿಕ ಶಿಕ್ಷಣ ಪಡೆದವರು ಅಂಬೇಡ್ಕರರ ಬಗೆಗೆ ಬರೆದ ಪದ್ಯಗಳು ಜನರ ಹಾಡಿಕೆಗೆ ನುಗ್ಗುವುದೂ ಇದೆ.

ಕನ್ನಡದಲ್ಲಿ ಕವಿ ಸಿದ್ದಲಿಂಗಯ್ಯ, ಕೆ.ರಾಮಯ್ಯ, ದಾನಪ್ಪ ಮಸ್ಕಿ ಮೊದಲಾದವರ ಕವಿತೆಗಳು ಮೈಸೂರಿನ ಜೆನ್ನಿ, ಪಿಚ್ಚಳ್ಳಿ ಶ್ರೀನಿವಾಸ್ ಮೊದಲಾದವರ ಹಾಡಿಕೆಗಳ ಮೂಲಕ ಜನಪದದ ಮುದ್ರೆ ಒತ್ತಿಸಿಕೊಂಡು ಚಲಿಸುತ್ತಿವೆ. ಹಂದಲಗೆರೆ ಗಿರೀಶ್ ಸಂಪಾದಿಸಿದ `ಅರಿವೇ ಅಂಬೇಡ್ಕರ್’ ಕೃತಿಯಲ್ಲಿ ಗೋಪಾಲಕೃಷ್ಣ ಅಡಿಗರಿಂದ ಈಚಿನ ಬಸವರಾಜ ಹೃತ್ಸಾಕ್ಷಿ, ವಿಕಾಸ್ ಆರ್. ಮೌರ್ಯ, ಮಂಜುಳಾ ಹುಲಿಕುಂಟೆವರೆಗೆ ಕನ್ನಡದ ಕವಿ ಮನಸ್ಸು ಅಂಬೇಡ್ಕರ್ ಜತೆ ನಡೆಸಿದ ಅನುಸಂಧಾನವನ್ನೂ ಗಮನಿಸಬೇಕಾಗಿದೆ. 

(ಇದನ್ನೂ ಓದಿ: ಅಂಬೇಡ್ಕರ್ ಬದುಕಿಗೆ ಕನ್ನಡಿ ಹಿಡಿವ ಯತ್ನ)

ಹೊಸಕಾಲದಲ್ಲಿ ಅಂಬೇಡ್ಕರ್‌ ಸ್ಮೃತಿ

ಯೂಟ್ಯೂಬಿನಲ್ಲಿ ಅಂಬೇಡ್ಕರ್ ಸಾಂಗ್ಸ್ ಎಂದು ಟೈಪಿಸಿದರೆ ಸಾವಿರಾರು ಹಾಡಿನ ಕೊಂಡಿಗಳು ತೆರೆಯುತ್ತವೆ. ಅಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಂಬೇಡ್ಕರ್ ಜೀವನ ವಿವರಗಳು ಜನಪದ ಕತೆಗಳಂತೆಯೂ, ಹೇಳಿಕೆಗಳು ಜನಪದ ಗಾದೆ ನುಡಿಗಟ್ಟುಗಳಂತೆಯೂ ಇಮೇಜುಗಳಾಗಿ ಹಂಚಿಕೆಯಾಗುತ್ತವೆ. ಜನಪ್ರಿಯ ಸಂಸ್ಕೃತಿಯಲ್ಲಿ ಅಂಬೇಡ್ಕರ್ ಒಂದು ಐಕಾನ್ ಆಗಿ ಚಲನೆಯಲ್ಲಿದ್ದಾರೆ. ದಲಿತ ಕೆಳಜಾತಿಗಳ ಯುವ ಸಮುದಾಯ ಬಳಸುವ ಟಿಶರ್ಟ್, ಕೊರಳ ಚೈನ್ ಲಾಕೆಟ್ ಒಳಗೊಂಡಂತೆ ಎಲ್ಲಾ ಆಧುನಿಕ ಪರಿಕರಗಳ ಮೇಲೂ ಅಂಬೇಡ್ಕರ್ ಚಿತ್ರ ಮುದ್ರಿತವಾಗುತ್ತಿವೆ.

ಪೋಸ್ಟರ್, ಫ್ಲೆಕ್ಸ್, ಕೀಚೈನ್, ಕ್ಯಾಲೆಂಡರ್, ಗೋಡೆಬರಹ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿಯೂ ಅಂಬೇಡ್ಕರ್ ಗುರುತು ಕಾಣುವಂತಾಗಿದೆ. ಮಹರಾಷ್ಟ್ರ ಮತ್ತು ಕರ್ನಾಟಕ ಗಡಿಭಾಗದ ಕೆಳಸಮುದಾಯಗಳ ಮದುವೆ ಮೊದಲಾದ ಸಮಾರಂಭಗಳ ಧ್ವನಿವರ್ಧಕಗಳಲ್ಲಿ ಅಂಬೇಡ್ಕರ್ ಹಾಡುಗಳು ಕೇಳುತ್ತವೆ. ಒಂದು ಕಾಲಕ್ಕೆ ಅಂಬೇಡ್ಕರ್ ದಲಿತ ಕೆಳಜಾತಿಗಳ ಗುರುತಾಗಿ ಅಪಮಾನಕ್ಕೆ ಗುರಿಯಾದ ಸಂದರ್ಭ ಬದಲಾಗಿ, ಇದೇ ಗುರುತು ದಲಿತ ಕೆಳಜಾತಿ ಅಲೆಮಾರಿ ಬುಡಕಟ್ಟುಗಳ ಅಸ್ಮಿತೆಯ ಸ್ವಾಭಿಮಾನದ ಸಂಕೇತವಾಗಿ ರೂಪಾಂತರಗೊಳ್ಳುತ್ತಿದೆ. 

ಇದರ ಜಾಡನ್ನು ಹಿಡಿದು ಹುಡುಕಾಡಿದರೆ ಭಾರತದಾದ್ಯಂತ ದೊಡ್ಡಮಟ್ಟದಲ್ಲಿ `ಅಂಬೇಡ್ಕರ್ ಜಾನಪದ' ಸೃಜಿಸಿದೆ. ಈ ಬಗ್ಗೆ ಸಾಂಪ್ರದಾಯಿಕ ಜಾನಪದ ಅಧ್ಯಯನಗಳು ಕಣ್ಣು ಹಾಯಿಸಿಲ್ಲ. ಆನಂದ ಪಟವರ್ಧನ್ ಅವರ `ಜೈ ಭೀಮ್ ಕಾಮ್ರೇಡ್' ಎಂಬ ಸಾಕ್ಷ್ಯಚಿತ್ರ ಇಂಥದ್ದೊಂದು ಪರಿಣಾಮಕಾರಿ ಶೋಧ. ಕನ್ನಡದಲ್ಲಿ  ಬಿ.ಎಂ. ಗಿರಿರಾಜ ನಿರ್ದೇಶಿಸಿದ `ಭಾರತ ಭಾಗ್ಯ ವಿಧಾತಾ’ ಧ್ವನಿಬೆಳಕಿನ ಅಭಿನಯ ಕೂಡ ಸಮರ್ಥ ಪ್ರಯೋಗ. ಪಂಜಾಬಿನ ಗಿನ್ನಿಮಹಿ `ಡೇಂಜರ್ ಚಮ್ಮಾರ್’ ಆಲ್ಬಮ್ ಮೂಲಕ ರಾಕ್ ಮ್ಯೂಜಿಕ್ ನಲ್ಲಿಯೂ ಅಂಬೇಡ್ಕರ್ ಅವರನ್ನು ಪಂಜಾಬಿನ ಜನಪದ ಲಯದಲ್ಲಿ ಜನಪ್ರಿಯತೆಗೆ ದಾಟಿಸುತ್ತಿದ್ದಾಳೆ. ಮಹರಾಷ್ಟ್ರದ ಕಬೀರ್ ಕಲಾ ಮಂಚ್‍ನ ಶೀತಲ್ ಸಾಟೆ ಒಳಗೊಂಡಂತೆ ಇಂಡಿಯಾದ ಸಾವಿರಾರು ಸಂಘಟನೆಗಳು ಹೋರಾಟದ ಹಾಡುಗಳಲ್ಲಿ ಅಂಬೇಡ್ಕರ್ ಪುನರ್ ಸೃಷ್ಠಿಯಾಗುತ್ತಿರುವುದನ್ನು ನೋಡಬಹುದು. 

ಹೈದರಾಬಾದ್ ಯುನಿವರ್ಸಿಟಿ ರೋಹಿತ್ ಮೇಮುಲನನ್ನು ಹೊರಹಾಕಿದಾಗ ಆತನ ಕೈಯಲ್ಲಿದ್ದ ಅಂಬೇಡ್ಕರ್ ಚಿತ್ರ, ಉತ್ತರ ಪ್ರದೇಶದಲ್ಲಿ ಬಾಬಾಸಾಹೇಬರ ಹಾಡನ್ನು ಮೊಬೈಲಲ್ಲಿ ಜೋರಾಗಿ ಕೇಳಿದ್ದಕ್ಕೆ ಕೊಲೆಯಾದ ದಲಿತ ಯುವಕ, ಮೇಲುಜಾತಿಗಳ ದುರಹಂಕಾರಕ್ಕೆ ಪ್ರತಿದಿನ ಬಲಿಯಾಗುತ್ತಿರುವ ದಲಿತರ ಮನೆಯ ಗೋಡೆಮೇಲಣ ಅಂಬೇಡ್ಕರ್ ಪಟ, ಸವರ್ಣೀಯರ ಅಸಹನೆಗೆ ತುತ್ತಾಗಿ ಮುರಿದು ಬಿದ್ದ ಬಾಬಾಸಾಹೇಬರ ಪ್ರತಿಮೆಗಳು... ಇವೆಲ್ಲಾ ಹೇಳುವ ಹಿಂಸೆಯ ಕಥೆಗಳೂ, ಯಾತನೆಯ ಹಾಡುಗಳೂ, ಉಸಿರುಗಟ್ಟಿದ ಬಿಕ್ಕಳಿಕೆಗಳೂ `ಅಂಬೇಡ್ಕರ್ ಜಾನಪದ’ದ ನೋವಿನ ಅಧ್ಯಾಯವಾಗಿ ಭವ್ಯಭಾರತದ ಕತೆ ಹೇಳುತ್ತಿವೆ.

(ಇದನ್ನೂ ಓದಿ: ಅಂಬೇಡ್ಕರ್ ಸ್ಮೃತಿ-ಸಂಸ್ಕೃತಿ: ಬಾಬಾಸಾಹೇಬರ ಕಡೆಯ ಸಂದೇಶಗಳು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.