ಭಾನುವಾರ, ಆಗಸ್ಟ್ 14, 2022
28 °C

ಪುಸ್ತಕ ಸಂಸ್ಕೃತಿಗೆ ಇದೋ ‘ಅಂಬೇಡ್ಕರ್‌ ಮಾರ್ಗ’

ಸಹನಾ ಕಾಂತಬೈಲು Updated:

ಅಕ್ಷರ ಗಾತ್ರ : | |

Prajavani

ದಲಿತ ಕೇರಿಯ ಮಕ್ಕಳಲ್ಲಿ ಪುಸ್ತಕಗಳ ಕೊರತೆ ಇರುವುದನ್ನು ಗುರುತಿಸಿದ ಈ ಉಪನ್ಯಾಸಕಿ, ಆ ಮಕ್ಕಳಿಗಾಗಿ ಲೈಬ್ರರಿಯನ್ನೇ ಶುರು ಮಾಡಿದರು. ಮಕ್ಕಳಿಗೆಲ್ಲ ಓದಿನ ರುಚಿ ಹಿಡಿಸಿದರು. ಅವರಿಗೀಗ ಊರೂರಿನಲ್ಲಿ ಇಂತಹ ಲೈಬ್ರರಿ ಶುರು ಮಾಡುವ ಉಮೇದು...

ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಎಲ್ಲರಂತೆ ಉಪದೇಶ ಮಾಡಲು ಹೋಗದೆ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಅಪರೂಪದ ಸಾಧಕರೊಬ್ಬರಿದ್ದಾರೆ. ಅವರೇ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಪ್ರಿಯದರ್ಶಿನಿ ಶರಣಪ್ಪ ಅಮದಿಹಾಳ್.

ಧನ್ನೂರ್ ಪದವಿಪೂರ್ವ ಕಾಲೇಜಿನಲ್ಲಿ ಅವರು ಇತಿಹಾಸ ಉಪನ್ಯಾಸಕರು. ದುರ್ಬಲ, ಅಸಹಾಯಕ ವರ್ಗದವರಿಗಾಗಿ ಇತ್ತೀಚೆಗೆ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಹೆಸರಿನಲ್ಲಿ ಪುಟ್ಟ ಲೈಬ್ರರಿ ಆರಂಭಿಸಿದ್ದಾರೆ. ಈ ಲೈಬ್ರರಿಗೆ ಸದಸ್ಯತ್ವ ಪಡೆಯುವುದು ಬೇಕಿಲ್ಲ. ಯಾರು ಬೇಕಿದ್ದರೂ ಬಂದು ಓದಬಹುದು. ಪುಸ್ತಕಗಳನ್ನು ಕೊಳ್ಳಲಾಗದವರಿಗೆ ಸ್ವಂತ ಗಳಿಕೆಯಿಂದ ಪುಸ್ತಕ ಕೊಂಡು ಲೈಬ್ರರಿ ಮಾಡಿದ್ದಾರೆ ಪ್ರಿಯದರ್ಶಿನಿ.

ಇಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿ ಬಾ ಫುಲೆ, ಶಾಹೂ ಮಹಾರಾಜ್, ಲೋಹಿಯಾ, ಭಗತ್ ಸಿಂಗ್ ಅವರ ವ್ಯಕ್ತಿಚಿತ್ರಗಳ ಪುಸ್ತಕಗಳಿವೆ. ಮಹಿಳಾಪರ ಚಿಂತನೆಯ ಪುಸ್ತಕಗಳಿವೆ. ಅಂಬೇಡ್ಕರ್ ಅವರ ಸಮಗ್ರ ಬರಹ, ಭಾಷಣಗಳ ಸಂಪುಟಗಳಿವೆ. ಸಣ್ಣ ಮಕ್ಕಳಿಗಾಗಿ ಪ್ರಮುಖ ಜನನಾಯಕರ ಜೀವನ ಚರಿತ್ರೆಗಳಿವೆ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಓದಬಹುದಾದ ಪುಸ್ತಕಗಳ ಸಂಗ್ರಹ ಇಲ್ಲಿದೆ. ಯಾವ ಪ್ರಚಾರವನ್ನೂ ಬಯಸದೆ ಸಮಾಜಕ್ಕೆ ಒಳಿತಾಗಬೇಕೆನ್ನುವ ಒಂದೇ ಉದ್ದೇಶದಿಂದ ಅವರು ಲೈಬ್ರರಿ ನಡೆಸುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.

ಪ್ರಿಯದರ್ಶಿನಿ ಅವರ ಪುಸ್ತಕ ಪ್ರೇಮ ಅನುಪಮವಾದದ್ದು. ಅವರು ವಿದ್ಯಾರ್ಥಿಯಾಗಿರುವಾಗ ಪಠ್ಯಪುಸ್ತಕಗಳಿಗಿಂತ ಉಳಿದ ಪುಸ್ತಕಗಳನ್ನೇ ಹೆಚ್ಚು ಓದಿದವರು. ಈ ಪುಸ್ತಕ ಪ್ರೀತಿ ಅವರಿಗೆ ತಂದೆಯಿಂದ ಬಂದಿದೆ. ಅವರು ಪಿಎಚ್‍.ಡಿ ಮಾಡಿದ್ದು ಅಂಬೇಡ್ಕರ್ ವಿಚಾರಗಳ ಕುರಿತು. ಅಂಬೇಡ್ಕರ್ ಅವರ ಓದಿನ ರೀತಿ, ಓದಿನಿಂದ ಅವರು ಗಳಿಸಿದ ಜ್ಞಾನ ಪ್ರಿಯದರ್ಶಿನಿ ಅವರಿಗೆ ಪುಸ್ತಕದ ಮೇಲಿನ ಪ್ರೀತಿ, ಗೌರವವನ್ನು ಇನ್ನೂ ಹೆಚ್ಚಿಸಿತು.

ಲೈಬ್ರರಿ ಮಾಡಲು ಏನು ಕಾರಣ ಎಂಬುದನ್ನು ಅವರು ಹೀಗೆ ಹೇಳುತ್ತಾರೆ: ‘ಯುವಜನರು ಇಂದು ಮಾಹಿತಿಯನ್ನು ಇಂಟರ್‌ನೆಟ್ ಮೂಲಕ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಪ್ರಕಾರ, ಇಂಟರ್‌ನೆಟ್‌ನಲ್ಲಿ ಸಿಗುವ ಜ್ಞಾನ ಬರೀ ಕಮರ್ಶಿಯಲ್. ಮನಸ್ಸನ್ನು ತಟ್ಟಲ್ಲ. ಸುಮ್ಮನೆ ಮಾಹಿತಿ ತೆಗೆದುಕೊಳ್ಳಬಹುದು ಅಷ್ಟೆ. ಎಲ್ಲಾ ಪುಸ್ತಕಗಳು ಈಗ ಆನ್‍ಲೈನ್‍ನಲ್ಲೇ ಸಿಗುತ್ತವೆ. ಆದರೆ, ಅದರಲ್ಲಿ ನೋಡುವುದಕ್ಕೂ ಪುಸ್ತಕ ಹಿಡಿದು ಓದುವುದಕ್ಕೂ ಬಹಳ ವ್ಯತ್ಯಾಸ ಇದೆ. ಪುಸ್ತಕ ಕೊಡುವ ಜ್ಞಾನವನ್ನು ಬೇರೆ ಯಾವುದೂ ಕೊಡುವುದಿಲ್ಲ’.

‘ಇಂದು ಮಕ್ಕಳೆಲ್ಲಾ ಪುಸ್ತಕದಿಂದ ದೂರ ಹೋಗುತ್ತಿದ್ದಾರೆ. ಎಲ್ಲರ ಕೈಯಲ್ಲೂ ಮೊಬೈಲ್. ನನ್ನ ಬ್ಯಾಗ್‍ನಲ್ಲೊಂದು ಪುಸ್ತಕ ಇದ್ದೇ ಇರುತ್ತದೆ. ಮನೆಯಿಂದ ಕಾಲೇಜು ಮುಟ್ಟಬೇಕಾದರೆ ಒಂದು ಗಂಟೆ ಬೇಕು. ಅಷ್ಟು ಹೊತ್ತಿಗೆ ಒಂದು ಪುಸ್ತಕ ಮುಗಿಸಿಬಿಡ್ತೇನೆ. ನನಗೆ ಇದ್ದ ಆಸಕ್ತಿ ಬೇರೆಯವರಿಗೆ ಇಲ್ಲವಲ್ಲ. ಯಾಕೆ ಅವರಲ್ಲಿ ಆಸಕ್ತಿ ಕಡಿಮೆ ಆಗ್ತಾ ಇದೆ ಎಂಬ ಪ್ರಶ್ನೆ ಎದ್ದಿತು. ನಮ್ಮೂರಿನ ದಲಿತರ ಕಾಲೊನಿಗೆ ಹೋದೆ. ಅಲ್ಲಿರುವ ಎಲ್ಲಾ ಮಕ್ಕಳ ಲಿಸ್ಟ್ ತಗೊಂಡೆ. ಎಲ್‍ಕೆಜಿಯಿಂದ ಡಿಗ್ರಿಯವರೆಗೆ ಎಷ್ಟು ಮಕ್ಕಳು ಇದ್ದಾರೆಂದು ಲಿಸ್ಟ್ ಮಾಡಿದೆ. 60 ಮಂದಿ ಸಿಕ್ಕರು’ ಎಂದು ಪ್ರಿಯದರ್ಶಿನಿ ನೆನಪುಗಳನ್ನು ಕೆದಕುತ್ತಾರೆ.

‘60 ಮಕ್ಕಳು ಸುಮ್ಮನೇ ತಿರುಗಾಡ್ತಿದ್ದಾರೆ. ಅದರಲ್ಲಿ 10-20 ಮಕ್ಕಳಾದ್ರೂ ಓದಲು ಕೂತುಕೊಳ್ಳಲಿ ಎಂದು ಅವರ ಹೆತ್ತವರನ್ನು ಕರೆದು ಮೀಟಿಂಗ್ ಮಾಡಿ ಹೇಳಿದೆ. ನಾನು ಇಲ್ಲಿ ಒಂದು ಲೈಬ್ರರಿ ಮಾಡಬೇಕೆಂದು ಇದ್ದೇನೆ. ಮಕ್ಕಳನ್ನು ಕಳಿಸಿ. ಇದಕ್ಕೆ ನಿಮ್ಮ ಸಹಕಾರ ಇದ್ದರೆ ಮುಂದುವರಿಯುತ್ತೇನೆ ಎಂದು. ಅವರೆಲ್ಲರೂ ಒಪ್ಪಿಕೊಂಡರು. ಅದರಂತೆ ನಾನು ಲೈಬ್ರರಿ ತೆರೆದೆ’ ಎಂದು ವಿವರಿಸುತ್ತಾರೆ.

ಮಕ್ಕಳಿಗೆ, ದೊಡ್ಡವರಿಗೆ ಯಾವ ಯಾವ ಪುಸ್ತಕ ಬೇಕು ಎಂಬುದನ್ನು ಪಟ್ಟಿಮಾಡಿ ಅವರು ಪತಿ ಉದಯಕುಮಾರ್ ಅವರ ಜೊತೆಗೂಡಿ ಪುಸ್ತಕ ಖರೀದಿಸಿದರು. ಅವನ್ನೆಲ್ಲ ವ್ಯವಸ್ಥಿತವಾಗಿ ಜೋಡಿಸಿಡಲು ಕಪಾಟು ತರಿಸಿದರು. ಈಗ ಬಂದವರಿಗೆ ಪುಸ್ತಕ ತೆಗೆದುಕೊಡಲು ಒಬ್ಬ ಸಹಾಯಕನನ್ನೂ ನೇಮಿಸಿದ್ದಾರೆ. ಅವರು ಮನೆಯಲ್ಲೂ ತುಂಬ ಪುಸ್ತಕ ಇಟ್ಟುಕೊಂಡಿದ್ದಾರೆ. ಮೊದಲೆಲ್ಲ ಮನೆಗೆ ಮಕ್ಕಳು ಬರುವುದಿಲ್ಲ ಎಂದು ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ಅವರ ಮನೆಗೆ ತೆಗೆದುಕೊಂಡು ಹೋಗಲು ಕೊಡುತ್ತಿದ್ದರು. ಈಗ ಲೈಬ್ರರಿಗೇ ಬಂದು ಮಕ್ಕಳು ಓದುತ್ತಾರೆ.

ಆರಂಭದಲ್ಲಿ ಸಂಜೆ ಹೊತ್ತು ಒಂದು ಗಂಟೆ ಮಾತ್ರ ತೆರೆಯುತ್ತಿದ್ದರು. ಆದರೆ ಮಕ್ಕಳೇ ಮುಂದೆ ಬಂದು ಬೆಳಿಗ್ಗೆಯೂ ತೆಗೆಯಬೇಕು ಎಂದು ಒತ್ತಾಯಿಸಿದುದರಿಂದ ಈಗ ಬೆಳಿಗ್ಗೆಯೂ ತೆರೆದಿರುತ್ತದೆ. ದಿನಪತ್ರಿಕೆಯನ್ನೂ ಹಾಕಿಸಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ 9ರ ತನಕ, ಸಾಯಂಕಾಲ 5ರಿಂದ 9ರ ತನಕ ತೆರೆದಿರುತ್ತದೆ. ಎಲ್‍ಕೆಜಿ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರ ತನಕ ಓದಲು ಇಲ್ಲಿಗೆ ಬರುತ್ತಾರೆ.

‘ಅಂಬೇಡ್ಕರ್ ಅವರ ಆಶಯ ಏನಿತ್ತು ಅದು ಸಮಾಜಕ್ಕೆ ಮುಟ್ಟಬೇಕು. ಅದಕ್ಕೋಸ್ಕರ ಈ ಪ್ರಯತ್ನ. ನಾವೇ ಓದಿಕೊಂಡು ನಾವೇ ಬೆಳೆಯುವುದಲ್ಲ. ಸಮಾಜಕ್ಕೆ ಹಿಂದಿರುಗಿ ಎಂದು ಅಂಬೇಡ್ಕರ್ ಹೇಳಿರುವುದು. ನಾವು ಕಲಿತು ಅದನ್ನು ಸಮಾಜಕ್ಕೆ ಕೊಡಬೇಕು ಎಂಬುದು ಅವರ ಸಂದೇಶ. ಯಾವಾಗಲೂ ಓದುತ್ತಿದ್ದವರು ಅಂಬೇಡ್ಕರ್. ಜ್ಞಾನ ಒಂದು ಶಕ್ತಿ. ಇದನ್ನು ಮಕ್ಕಳು ಗಳಿಸಬೇಕು’ ಎಂದು ಪ್ರಿಯದರ್ಶಿನಿ ವಿನಮ್ರವಾಗಿ ಹೇಳುತ್ತಾರೆ.

ಪ್ರತೀ ಹಳ್ಳಿ ಹಳ್ಳಿಗೂ ಇಂತಹ ಲೈಬ್ರರಿ ವಿಸ್ತರಿಸುವುದು ನನ್ನ ಗುರಿ. ಯಾರು ಸ್ಥಳ ಮತ್ತು ಕಟ್ಟಡ ಕೊಡಲು ಮುಂದೆ ಬರುತ್ತಾರೋ ಅಲ್ಲೆಲ್ಲ ಲೈಬ್ರರಿ ಮಾಡಬೇಕೆಂಬ ಗುರಿ ಇದೆ. ಸಮಾಜವನ್ನು ವೈಚಾರಿಕತೆಯತ್ತ ಕರೆದೊಯ್ಯಲು ನನ್ನ ಈ ಪುಟ್ಟ ಪ್ರಯತ್ನ’ ಎನ್ನುತ್ತಾರೆ ಅವರು.

ಹಳ್ಳಿ ಹಳ್ಳಿಯಲ್ಲೂ ಓದುವ ಸಂಸ್ಕೃತಿ ಬೆಳೆಸಲು ಹೊರಟ ಅವರ ಈ ಕಾಯಕಕ್ಕೆ ಸಲಾಂ ಹೇಳೋಣವೇ? ಸಂಪರ್ಕ ಸಂಖ್ಯೆ: 9482605156.


ಪ್ರಿಯದರ್ಶಿನಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು