ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೂರ... ವಿಮರ್ಶೆಯ ಮಾರ್ಗಕಾರ

Last Updated 3 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಅಪಾರ ವಿದ್ವತ್ತಿನ ಬಲವುಳ್ಳ ಜಿ.ಎಸ್‌. ಆಮೂರರ ವಿಮರ್ಶೆಯನ್ನು ಬಹುಶಃ ಕನ್ನಡದ ಯಾರ ವಿಮರ್ಶೆಯ ಜೊತೆಗೂ ಹೋಲಿಸಲಾಗದು. ಅವರು ಆಲ್ಫ್ರೆಡ್ ಕಾಸಿನ್, ಎಡ್ಮಂಡ್ ವಿಲ್ಸನ್, ಲಯೊನೆಲ್ ಟ್ರಿಲಿಂಗ್ ಅವರಂತಹ ಪ್ರಸಿದ್ಧ ವಿಮರ್ಶಕರ ಸಾಲಿನಲ್ಲಿ ನಿಲ್ಲುವವರು. ವಿಮರ್ಶಾ ಜಗತ್ತಿನಲ್ಲಿ ಅವರು ಮೂಡಿಸಿರುವ ಹೆಜ್ಜೆ ಗುರುತುಗಳು ಮಹತ್ವವಾದುವು...

***

ಮೊನ್ನೆಯಷ್ಟೇ ತೀರಿಕೊಂಡ ಗುರುರಾಜ ಶ್ಯಾಮಾಚಾರ್ಯ ಆಮೂರರು ನಮ್ಮ ವಿಮರ್ಶಕರಲ್ಲೇ ತೀರ ಅನನ್ಯರಾದವರು. ಯಾಕೆಂದರೆ, ತಾವು ಮೆಚ್ಚಿಕೊಂಡ ಕನ್ನಡದ ಕೆಲವು ಲೇಖಕರ ಬಗ್ಗೆ ಬರೆಯುವಾಗ ಅವರು ತಳೆದ ನೈತಿಕ ನಿಲುವು. ನಾವು ಹೇಗೆ ಬದುಕುತ್ತಿದ್ದೇವೆ ಎಂಬ ಬಗ್ಗೆ, ಒಳಿತು ಕೆಡುಕುಗಳ ಸ್ವರೂಪದ ಬಗ್ಗೆ, ನಮ್ಮ ಸಂಸ್ಕೃತಿ ವಹಿಸುವ ಪಾತ್ರದ ಬಗ್ಗೆ, ನೈತಿಕತೆಯನ್ನು ಕುರಿತ ಆಯ್ಕೆಯಲ್ಲಿ ನಾವು ತೆಗೆದುಕೊಳ್ಳುವ ಸಂದಿಗ್ಧ ನಿಲುವುಗಳ ಬಗ್ಗೆ ಅವರು ಅನೇಕ ಪ್ರಶ್ನೆಗಳನ್ನು ಎತ್ತಿದರು. ನನ್ನಂಥ ಓದುಗರು ಅವರಲ್ಲಿ ಸಾಹಿತ್ಯ ವಿಮರ್ಶೆಗಿಂತಲೂ ಮಿಗಿಲಾದ ಒಳನೋಟಗಳನ್ನು ಪಡೆದದ್ದುಂಟು.

ಇಪ್ಪತ್ತನೆಯ ಶತಮಾನದ ಬೇರೆ ಯಾವ ಧೀಮಂತ ವಿಮರ್ಶಕರಿಗಿಂತಲೂ ಮಿಗಿಲಾಗಿ ಆಮೂರರು ಸಾಹಿತ್ಯಿಕ ಕಲ್ಪನೆಯಿಲ್ಲದೆ, ಪ್ರತಿಭೆಯಿಲ್ಲದೆ ಸಮಾಜವನ್ನು ಹೇಗೋ ಹಾಗೆ ರಾಜಕೀಯವನ್ನು ಕೂಡ ಅರ್ಥಮಾಡಿಕೊಳ್ಳಲಾಗದೆಂಬ ನಿಲುವಿಗೆ ಬದ್ಧರಾಗಿದ್ದವರು. ಒಂದು ರೀತಿಯಲ್ಲಿ ಅವರದು ಮ್ಯಾಥ್ಯೂ ಅರ್ನಾಲ್ಡನ ನಿಲುವು. ಜಗತ್ತಿನಲ್ಲಿ ಅತ್ಯುತ್ತಮವಾಗಿರುವುದನ್ನು ಅರಿಯುವ ಮತ್ತು ಅದನ್ನು ಪ್ರಚುರಗೊಳಿಸುವ ಪ್ರಯತ್ನದಲ್ಲಿ ಅವರು ಸಮಾಜದ ಸುಶಿಕ್ಷಿತರಿಗೆ ಶಿಕ್ಷಣ ನೀಡುವ ಗುರಿಯುಳ್ಳ ಮಾನವತಾವಾದಿ ವೈಚಾರಿಕ ಪರಂಪರೆಗೆ ಅಂಟಿಕೊಂಡರು. ತಮ್ಮ ವಿಮರ್ಶಾ ಕೃಷಿಗೆ ಬಗೆಬಗೆಯ ವಿಚಾರಗಳನ್ನು ತಂದರು. ತಮ್ಮ ಕೃತಿಗಳಲ್ಲಿ ಅನೇಕ ಸಾಮಾಜಿಕ, ಸಾಂಸ್ಕೃತಿಕ ವಿಷಯಗಳನ್ನು ಚರ್ಚಿಸಿದರು.

ಸಾಹಿತ್ಯವನ್ನು ಕುರಿತು ಮಹಾ ಸಿದ್ಧಾಂತವನ್ನೇನೂ ಮಂಡಿಸಲಿಲ್ಲ ಅವರು. ಯಾಕೆಂದರೆ ಜ್ಞಾನದ ದೃಷ್ಟಿಯಿಂದ ನಾವು ಪರಾವಲಂಬಿಗಳು; ಎಲ್ಲಿಯವರೆಗೆ ಪರಾವಲಂಬಿಗಳಾಗಿರುತ್ತೇವೆಯೋ ಅಲ್ಲಿಯವರೆಗೆ ಹೊಸತನ್ನು ಹೇಳುವುದು ಸಾಧ್ಯವಾಗುವುದಿಲ್ಲ. ನಾವಾಗಿಯೇ ಜ್ಞಾನವನ್ನು ಸೃಷಿಸುವ ಶಕ್ತಿಯನ್ನು ನಮ್ಮ ಶಿಕ್ಷಣ, ಸಮಾಜ ಕೊಡಬೇಕಾಗುತ್ತದೆ ಎಂದವರು ತಿಳಿದಿದ್ದರು. ಆದರೂ ಅಪಾರ ವಿದ್ವತ್ತಿನ ಬಲವುಳ್ಳ ಅವರ ವಿಮರ್ಶೆಯನ್ನು ಬಹುಶಃ ಕನ್ನಡದ ಯಾರ ವಿಮರ್ಶೆಯ ಜೊತೆಗೂ ಹೋಲಿಸಲಾಗದು. ನನ್ನ ದೃಷ್ಟಿಯಲ್ಲಿ ಅವರು ಆಲ್ಫ್ರೆಡ್ ಕಾಸಿನ್, ಎಡ್ಮಂಡ್ ವಿಲ್ಸನ್, ಲಯೊನೆಲ್ ಟ್ರಿಲಿಂಗ್, ಜಾರ್ಜ್ ಸ್ಟೈನರ್ ಮುಂತಾದ ಪ್ರಸಿದ್ಧ ವಿಮರ್ಶಕರ ಸಾಲಿನಲ್ಲಿ ನಿಲ್ಲುವವರು.

ಆಮೂರರ ವಿಮರ್ಶೆಯಲ್ಲಿ ಎದ್ದು ಕಾಣುವ ಅಂಶಗಳೆಂದರೆ ಚಾರಿತ್ರಿಕ ಪ್ರಜ್ಞೆ ಮತ್ತು ಪರಂಪರೆಯ ಶೋಧ. ಕಾಲಕಾಲಕ್ಕೆ ಅವರು ತಮ್ಮ ವಿಮರ್ಶಾ ಮಾನದಂಡಗಳನ್ನು ಬದಲಾಯಿಸಿಕೊಂಡದ್ದೂ ಉಂಟು. ವಿಮರ್ಶಕ ಎಂ.ಜಿ. ಹೆಗಡೆಯವರ ಪ್ರಕಾರ ಅವರ ವಿಮರ್ಶಾಪಯಣ ‘ಸಾಹಿತ್ಯ ಕೃತಿಯೆಂದರೆ ಒಂದು ಭಾಷಿಕ ಸಂರಚನೆ’ ಎಂಬಲ್ಲಿಂದ, ಅದು ಒಂದು ಸಾಂಸ್ಕೃತಿಕ ರಚನೆ ಕೂಡ ಹೌದು ಎಂಬ ಕಡೆಗೆ, ಕೃತಿನಿಷ್ಠ ವಿಮರ್ಶೆಯ ಏಕಮುಖಿಯಾದ ಮಾದರಿಯಿಂದ ಬಹುತ್ವವನ್ನು ಹಾಗೂ ಬಹುಮುಖತ್ವವನ್ನು ಅನುಮೋದಿಸುವ ಕಡೆಗೆ, ನಮ್ಮದೇ ಆದ ಪರಂಪರೆಯ ಶೋಧ ಹಾಗೂ ಪ್ರತಿಷ್ಠಾಪನೆಯ ಕಡೆಗೆ ಸಾಗಿತು.

ಕನ್ನಡದಲ್ಲಿ ಅವರಷ್ಟು ವಿಪುಲವಾಗಿ ಬರೆದ ಇನ್ನೊಬ್ಬ ವಿಮರ್ಶಕರಿಲ್ಲ. ವಿಮರ್ಶೆ, ಆತ್ಮಚರಿತ್ರೆ, ಭಾಷಾಂತರ, ಸಂಪಾದನೆ, ಹೀಗೆ ವಿವಿಧ ಪ್ರಕಾರಗಳಲ್ಲಿ ಅವರದು ಒಟ್ಟು 85 ಕೃತಿಗಳು (ಕನ್ನಡದಲ್ಲಿ 61; ಇಂಗ್ಲಿಷಿನಲ್ಲಿ 25). ಕನ್ನಡ ಸಾಹಿತ್ಯವನ್ನು ಇಂಗ್ಲಿಷಿನ ಮೂಲಕ ಕನ್ನಡೇತರರಿಗೆ ಪರಿಚಯಿಸಿದವರಲ್ಲಿ ಅವರೇ ಅಗ್ರಗಣ್ಯರು. ಅವರ ‘ಎಸ್ಸೇಸ್ ಆ್ಯನ್‌ ಮಾಡರ್ನ್ ಕನ್ನಡ ಲಿಟರೇಚರ್’ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯವನ್ನು, ಅಂದರೆ ಕಾವ್ಯ, ಸಣ್ಣಕತೆ, ಕಾದಂಬರಿ, ನಾಟಕ, ವಿಮರ್ಶೆ, ಇತ್ಯಾದಿ ಕ್ಷೇತ್ರಗಳಲ್ಲಿ ಆಗಿರುವ ಬೆಳವಣಿಗೆಗಳನ್ನು ಪರಿಚಯಿಸುವುದರ ಜೊತೆಗೆ ಮುಖ್ಯ ಲೇಖಕರನ್ನೂ ಅನೇಕ ಮಹತ್ವದ ಕೃತಿಗಳನ್ನೂ ವಿಮರ್ಶಿಸಿರುವ ಏಕೈಕ ಗ್ರಂಥ. ಅನಕೃ ಅವರ ‘ಸಂಧ್ಯಾರಾಗ’, ಶಾಂತಿನಾಥ ದೇಸಾಯಿಯವರ ‘ಓಂ ಣಮೋ’ ಕಾದಂಬರಿಗಳನ್ನು ಅವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ‘ದಿ ಸ್ಪೈಡರ್ ಅಂಡ್ ದಿ ವೆಬ್’ ಬೇಂದ್ರೆಯವರ ಆಯ್ದ ಕವನಗಳ ಭಾಷಾಂತರ.

ಬೇಂದ್ರೆಯವರ ಕಾವ್ಯವನ್ನು ಕುರಿತು ಆಮೂರರು ಒಂದಲ್ಲ, ಎರಡಲ್ಲ, ಮೂರು ಕೃತಿಗಳನ್ನು ಬರೆದರು. ಕಳೆದ ವರ್ಷ ‘ಮಯೂರ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ‘ಇವತ್ತಿಗೂ ನನಗೆ ಯಾವುದೇ ಒಬ್ಬ ಲೇಖಕನ ಬಗ್ಗೆ ಮತ್ತೆ ಮತ್ತೆ ಬರೆಯಬೇಕು ಎಂದು ಅನಿಸುವುದಿದ್ದರೆ ಅದು ಬೇಂದ್ರೆ. ನಿಜವಾದ ಕವಿ ಅವರು. ಅವರನ್ನು ಬೇರೆ ಬೇರೆ ಆಯಾಮಗಳಿಂದ ನೋಡಿದ್ದೇನೆ. ಆದರೆ ಇನ್ನೂ ಪೂರ್ತಿ ತಿಳಿದಿದ್ದೇನೆ ಅನಿಸಿಲ್ಲ’ ಎಂದು ಹೇಳಿದ್ದರು. ಹಾಗೆಂದು ಇತರ ಮುಖ್ಯ ಲೇಖಕರನ್ನು ಕಡೆಗಣಿಸಿದರೆನ್ನುವಂತಿಲ್ಲ. ಕೆರೂರು ವಾಸುದೇವಾಚಾರ್ಯ, ಕುವೆಂಪು, ಶ್ರೀರಂಗ, ಶಾಂತಿನಾಥ ದೇಸಾಯಿ, ಯು.ಆರ್.ಅನಂತಮೂರ್ತಿ, ಗಿರೀಶ ಕಾರ್ನಾಡ ಮೊದಲಾದವರ ಸಾಹಿತ್ಯವನ್ನು ಅವರು ಇಡಿಯಾಗಿ ಅಭ್ಯಸಿಸಿ ಬರೆದಿರುವ ಗ್ರಂಥಗಳೇ ಇವೆ.

ವಿಮರ್ಶಕರಿಗೆ ಒಂದು ಭಾಷೆಯ ಕೃತಿಗಳಲ್ಲಿ ಅತ್ಯುತ್ತಮವಾದುದನ್ನು ಗುರುತಿಸಿ, ಅವುಗಳ ಬೆಲೆಕಟ್ಟಿ, ಮುಂದಿನ ಪೀಳಿಗೆಯ ಓದುಗರಿಗೆ ಪರಿಚಯಿಸುವ ಜವಾಬ್ದಾರಿಯೂ ಇದೆಯಷ್ಟೆ. ಅದು ಸಾಂಸ್ಕೃತಿಕ ಮಹತ್ವವುಳ್ಳ ಕೆಲಸ. ಈ ದಿಸೆಯಲ್ಲೂ ಆಮೂರರ ಕೆಲಸ ಗಮನಾರ್ಹವಾದದ್ದು. ಉದಾಹರಣೆಗೆ, ಅವರು ಕನ್ನಡ ವಿಮರ್ಶೆ ಬಹುಮಟ್ಟಿಗೆ ಕಡೆಗಣಿಸಿಬಿಟ್ಟಿದ್ದ ವಿ.ಸೀ.ಯವರನ್ನು ನಮ್ಮ ಯುಗದ ಅತ್ಯಂತ ಧೀಮಂತ, ಬಹುಶ್ರುತ ಹಾಗೂ ಪ್ರಜ್ಞಾವಂತ ಲೇಖಕರಲ್ಲಿ ಒಬ್ಬರೆಂದು ಗುರುತಿಸಿದ್ದಲ್ಲದೆ ‘ವಿ.ಸೀ.ಯವರ ಬೆಲೆಬಾಳುವ ಬರಹಗಳು’ ಎಂಬ ಅಪರೂಪದ ಸಂಕಲನವನ್ನೂ ಸಿದ್ಧಪಡಿಸಿದರು. ಇಲ್ಲಿ ಅವರು ಸಂಪಾದಿಸಿದ ‘ಅವಳ ಕಥೆಗಳು’ ಎಂಬ ಮಹಿಳೆಯರ ಕತೆಗಳ ಸಂಕಲನವನ್ನೂ ನೆನಪಿಸಿಕೊಳ್ಳಬೇಕು.

ನಮ್ಮಲ್ಲಿ ಈಗ ಕೆಲವರು ತಾವು ಒಬ್ಬೊಬ್ಬ ಲೇಖಕರನ್ನೂ ಸಮಗ್ರವಾಗಿ ಓದಿ ವಿಮರ್ಶೆ ಬರೆಯುತ್ತಿರುವುದಾಗಿ ಹೇಳಿಕೊಳ್ಳುತ್ತಿರುವುದುಂಟು. ಆದರೆ ಆಮೂರರು ಒಬ್ಬ ಲೇಖಕರ ಕೃತಿಯೊಂದರ ಬಗ್ಗೆ ಒಂದು ಪುಸ್ತಕ ಬರೆಯಲಿ ಅಥವಾ ಒಂದು ಸಣ್ಣ ಲೇಖನವನ್ನೇ ಬರೆಯಲಿ, ಅದರಲ್ಲಿ ಅವರು ಆ ಲೇಖಕನನ್ನು ಎಷ್ಟೆಲ್ಲ ಸಮಗ್ರವಾಗಿ ಓದಿದ್ದಾರೆನ್ನುವುದಕ್ಕೆ ಪುರಾವೆಯಿರುತ್ತದೆ. ಅವರಿಗೆ ಲೇಖಕನಿಗಿಂತ ಅವನ ಕೃತಿಗಳು, ಆ ಮೂಲಕ ಅವನು ಸಾಹಿತ್ಯಕ್ಕೆ ನೀಡಿದ ಕೊಡುಗೆ ಮುಖ್ಯವಾಗಿತ್ತು. ಈ ಮಾತಿಗೆ ನಿದರ್ಶನವಾಗಿ ಅವರು ಅ.ನ.ಕೃ. ಅವರ ಬಗ್ಗೆ ಬರೆದಿರುವ ಪುಸ್ತಕವನ್ನು ನೋಡಬಹುದು. ಅದುವರೆಗೆ ಅ.ನ.ಕೃ. ಅವರನ್ನೂ ಒಳಗೊಂಡು ಜನಪ್ರಿಯ ಲೇಖಕರೊಬ್ಬರನ್ನೂ ನಮ್ಮ ವಿಮರ್ಶೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ‘ಎಲಿಯೆಟ್‌ನಿಂದ ನಾನೊಂದು ವಿಷಯ ಕಲಿತುಕೊಂಡೆ. ಅತ್ಯುತ್ತಮ ಸಾಹಿತ್ಯವನ್ನಷ್ಟೇ ಕೊಡಿ. ಅದರ ಬಗ್ಗೆ ಮಾತ್ರ ಬರೆಯುತ್ತೇನೆ ಎಂಬ ಮನೋಭಾವ ವಿಮರ್ಶಕನಿಗೆ ಇರಬಾರದು. ಅತ್ಯುತ್ತಮ ಸಾಹಿತ್ಯ ಎಂದು ಯಾರು ನಿರ್ಧರಿಸುವುದು? ಈಗಾಗಲೇ ಯಾರೋ ಒಬ್ಬರು ಅತ್ಯುತ್ತಮ ಎಂದು ನಿರ್ಧರಿಸಿದ್ದು ಬೆಸ್ಟ್ ಆಗಿರಲಿಕ್ಕಿಲ್ಲ. ನಾನೇ ಹೊಸತಾಗಿ ನೋಡಿ ನಿರ್ಧರಿಸಬೇಕಲ್ಲವೆ?’ ಇವು ಅವರವೇ ಮಾತುಗಳು.

ಸುಮಾರು ಮೂರು ದಶಕಗಳಷ್ಟು ದೀರ್ಘ ಕಾಲ ಅವರನ್ನು ತೀರ ಹತ್ತಿರದಿಂದ ನೋಡುವ, ಗಂಟೆಗಟ್ಟಲೆ ಅವರ ಮಾತುಗಳನ್ನು ಕೇಳುವ, ಅವರಿಗೆ ಪ್ರಶ್ನೆಗಳನ್ನು ಹಾಕಿ ನಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುವ ಭಾಗ್ಯ ನನ್ನದಾಗಿತ್ತು. ನನ್ನ ಕತೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಅವರು ಅವುಗಳ ಪ್ರಯೋಗಶೀಲತೆಯನ್ನು ಪ್ರಸ್ತಾಪಿಸುತ್ತ, ‘ರೂಢಿಯಲ್ಲಿದ್ದ ಸಾಹಿತ್ಯದ ಆಕೃತಿಗಳು ಸ್ವಂತದ ಅಭಿವ್ಯಕ್ತಿಗೆ ಅಪರ್ಯಾಪ್ತವೆನಿಸಿದಾಗ ಪ್ರಯೋಗಶೀಲತೆ ಅನಿವಾರ್ಯವಾಗುತ್ತದೆ... ವರ್ತಮಾನದ ಎಲ್ಲ ವಿವರಗಳನ್ನೊಳಗೊಂಡೂ ಅದರಾಚೆಗೆ ಕೈಕಾಲು ಚಾಚುವ ದಿವಾಕರರ ರಚನೆಗಳು ವಾಸ್ತವದಿಂದ ಭಿನ್ನವಾದ ಲೋಕವೊಂದನ್ನು ಸೃಷ್ಟಿಸುವುದರ ಮೂಲಕ ತಮ್ಮ ಅಪ್ಪಟ ಸೃಜನಶೀಲತೆಯನ್ನು ಮೆರೆಯುತ್ತವೆ’ ಎಂದು ಬರೆದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದರು. ಹಾಗೆ ನೋಡಿದರೆ ಅವರ ಹಾಗೆ ತಮ್ಮ ವಿಮರ್ಶೆಗಳಿಂದ ಎರಡು ಮೂರು ಪೀಳಿಗೆಗಳ ಲೇಖಕರನ್ನು ಪ್ರೋತ್ಸಾಹಿಸಿದ ಇನ್ನೊಬ್ಬ ವಿಮರ್ಶಕರು ಇಲ್ಲ.

ವಿ.ಸೀ. ಅವರು ಹೊನ್ನಾವರದ ಕಾಲೇಜೊಂದರಲ್ಲಿ ಪ್ರಿನ್ಸಿಪಾಲರಾಗಿದ್ದಾಗ ಅವರನ್ನು ಸಭೆಗೆ ಪರಿಚಯಿಸುತ್ತ, ‘ಆಮೂರರಂಥವರು ಆಕ್ಸ್‌ಫರ್ಡ್‌ನಲ್ಲಿರಬೇಕಾಗಿತ್ತು, ಕೇಂಬ್ರಿಜ್‌ನಲ್ಲಿರಬೇಕಾಗಿತ್ತು’ ಎಂದು ಹೇಳಿದ್ದರಂತೆ. ಈ ಬಗ್ಗೆ ಪ್ರಸ್ತಾಪಿಸುತ್ತ ಆಮೂರರೇ ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಬರೆದಿದ್ದಾರೆ: ‘ನಾನು ಕಲಿಯುತ್ತಿರುವಾಗ ಡ್ಯಾನಿಯಲ್ ಜೋನ್ಸನ ಡಿಕ್ಷ್‌ನರಿ ಆಫ್ ಇಂಗ್ಲಿಷ್ ಪ್ರೊನನ್ಸಿಯೇಷನ್ ಬಗೆಗಾಗಲಿ, ಸ್ಟ್ಯಾಂಡರ್ಡ್ ಪ್ರೊನನ್ಸಿಯೇಷನ್ ಬಗೆಗಾಗಲಿ ನಮ್ಮ ಶಿಕ್ಷಕರಿಂದ ಕೇಳಿರಲಿಲ್ಲ. ನಾನು ಬಹಳ ದಿನ ‘Tortoise’ ಶಬ್ದವನ್ನು ‘ಟಾರ್ಟೈಜ್’ ಎಂತಲೇ ಉಚ್ಚರಿಸುತ್ತಿದ್ದೆ. ಅದು ತಪ್ಪು, ‘ಟಾರ್ಟಿಸ್’ ಎಂದು ಹೇಳಿಕೊಟ್ಟವನು ಕಾನ್ವೆಂಟ್ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿಯಿಂದ ಭಾಷೆ ಕಲಿಯುತ್ತಿದ್ದ ನನ್ನ ಮಗ ಶ್ಯಾಮ.’ ಆಮೂರರು ಹಲವು ದಶಕಗಳ ನಂತರ ಉನ್ನತ ಸಂಶೋಧನೆಗಾಗಿ ಅಮೆರಿಕಕ್ಕೆ ಹೋದಾಗ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಒಬ್ಬರು ಅವರನ್ನು ಇನ್ನೊಬ್ಬ ವಿದ್ವಾಂಸರಿಗೆ ಪರಿಚಯಿಸುತ್ತ, ‘ಹಿ ಸ್ಪೀಕ್ಸ್ ಇಂಗ್ಲಿಷ್ ಬೆಟರ್ ದ್ಯಾನ್ ಆನ್ ಅಮೆರಿಕನ್’ ಎಂದು ಹೇಳಿದರಂತೆ. ಮತ್ತೊಬ್ಬರು ಅವರನ್ನೇ ‘ಡಿಡ್ ಯು ಗೋ ಟು ಆಕ್ಸ್‌ಫರ್ಡ್ ಸರ್?’ ಎಂದು ಕೇಳಿದರಂತೆ.

ಆಮೂರರು ಸೀನಿಯರ್ ಫುಲ್‌ಬ್ರೈಟ್ ಫೆಲೋಷಿಪ್ ಪಡೆದು ಅಮೆರಿಕದ ಕ್ಯಾಲಿಫೋರ್ನಿಯಾ (ಸಾಂತಾ ಬಾರ್ಬರಾ) ಮತ್ತು ಯೇಲ್ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿದವರು; ಬ್ರಿಟಿಷ್ ಕೌನ್ಸಿಲ್ ಮೂಲಕ ಇಂಗ್ಲೆಂಡಿನಲ್ಲೂ ಸಂಶೋಧನೆ ಕೈಗೊಂಡವರು; ಇಂದು ಪಾಶ್ಚಾತ್ಯ ಜಗತ್ತಿನಲ್ಲಿ ವಿಖ್ಯಾತ ವಿಮರ್ಶಕರೆಂದು, ವಿದ್ವಾಂಸರೆಂದು ಹೆಸರಾಗಿರುವ ಮಾರ್ವಿನ್ ಮಡ್ರಿಕ್, ಜಾನ್ ಎಸ್ಪೀ, ಚಾರ್ಲ್ಸ್‌ ಡೇವಿಸ್, ಹೆರಲ್ಡ್ ಬ್ಲೂಮ್, ಕ್ಲೆಯಾಂತ್ ಬ್ರೂಕ್ಸ್, ರೆನೆ ವೆಲಕ್, ಚಾರ್ಲ್ಸ್ ಫಿಡಲ್‌ಟನ್, ಹ್ಯೂ ಕೆನರ್, ಮೈಕೆಲ್ ಹಾಲ್ರಾಯ್ಡ್ ಮುಂತಾದವರ ಜೊತೆ ಅವರು ಉನ್ನತ ಅಧ್ಯಯನ ನಡೆಸಿದವರು ಅಥವಾ ಚರ್ಚಿಸಿದವರು. ಆದ್ದರಿಂದಲೇ ವಿದ್ವತ್ತು ಬಯಸುವ ಉನ್ನತ ಮಟ್ಟದ ಅಧ್ಯಯನದ ಬಗ್ಗೆ ವಿಶೇಷ ಕಾಳಜಿಯಿದ್ದ ಅವರಿಗೆ ನಮ್ಮ ದೇಶದ ಸದ್ಯದ ಪರಿಸ್ಥಿತಿಯಿಂದ ಎಷ್ಟು ವಿಷಾದವಾಗಿತ್ತೆನ್ನುವುದಕ್ಕೆ ಈ ಕೆಲವು ಮಾತುಗಳೇ ಸಾಕು:

‘ನಮ್ಮ ದೇಶದಲ್ಲಿಯ ಸಂಶೋಧಕರು ‘ವಾತಾಪಿ ಜೀರ್ಣೋಭವ’ ಎಂಬ ಮಾತಿನಂತೆ ಇಡಿಯ ಪ್ರಬಂಧಗಳನ್ನೇ ಕಾಪಿ ಮಾಡಿ ತಮ್ಮ ಹೆಸರಿನಲ್ಲಿ ಪ್ರಕಟಿಸುತ್ತಾರೆ. ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪ್ರಬಂಧವೊಂದು ನನ್ನ ಅಭಿಪ್ರಾಯಕ್ಕಾಗಿ ಬಂದಿತ್ತು. ಅದರಲ್ಲಿಯ ಕೆಲವು ಭಾಗಗಳು ನನಗೆ ತೀರ ಪರಿಚಿತವೆನಿಸಿದುವು. ಆದರೆ ಅವುಗಳ ಮೂಲ ನೆನಪಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಅವು ನನ್ನ ಲೇಖನಗಳೇ ಎನ್ನುವುದು ತಿಳಿದು ಬಹಳ ವಿಷಾದವೆನಿಸಿತು... ಇದು ಅಪ್ರಾಮಾಣಿಕತನವಷ್ಟೇ ಅಲ್ಲದೆ ವಿದ್ವತ್ತಿಗೆ ಆಗುವ ದ್ರೋಹವೂ ಹೌದು.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT