ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳೆಯರ ಅಂಗಳ | ಕಿನ್ನರನ ಪ್ರತಿಮೆ

Last Updated 30 ಜೂನ್ 2019, 2:04 IST
ಅಕ್ಷರ ಗಾತ್ರ

‘ಉತ್ತರದ ಕಿನ್ನರ’ನ ಪ್ರತಿಮೆಯು ಈಶಾನ್ಯ ಇಂಗ್ಲೆಂಡಿನಲ್ಲಿ ಇರುವ ಬೃಹದಾಕಾರದ ಪ್ರತಿಮೆ. ಇದು ಮನುಷ್ಯನ ರೀತಿಯಲ್ಲಿ ಇದೆ, ಇದರ ರೆಕ್ಕೆಗಳು ಹೊರಚಾಚಿಕೊಂಡಿವೆ. ಇದು ಇರುವುದು ಉತ್ತರ ಇಂಗ್ಲೆಂಡಿನಲ್ಲಿ ಎಂದು ಬರೆದಿದೆಯಲ್ಲ? ಅಲ್ಲಿನ, ಗೇಟ್‌ಶೆಡ್‌ ಎನ್ನುವ ದೊಡ್ಡ ಪಟ್ಟಣದಲ್ಲಿ ಪ್ರತಿಮೆ ಇದೆ.

ಈ ಪ್ರತಿಮೆ 20 ಮೀಟರ್‌ ಎತ್ತರವಾಗಿ, 54 ಮೀಟರ್‌ ಅಗಲವಾಗಿ ಇದೆ. ಇದರ ಎತ್ತರವು ನಾಲ್ಕು ಡಬಲ್‌ ಡೆಕ್ಕರ್‌ ಬಸ್ಸುಗಳಿಗಿಂತಲೂ ಹೆಚ್ಚು. ಇದರ ರೆಕ್ಕೆಗಳ ಒಂದು ತುದಿಯಿಂದ ಇನ್ನೊಂದು ತುದಿವರೆಗಿನ ಅಗಲವು ಜಂಬೋ ವಿಮಾನದಷ್ಟಿದೆ. ಈ ಪ್ರತಿಮೆಯ ತೂಕ 100 ಟನ್ನುಗಳು. ಇದರ ಒಂದೊಂದು ರೆಕ್ಕೆಯೂ 50 ಟನ್ ತೂಗುತ್ತದೆ. ಇದು ಬ್ರಿಟನ್ನಿನ ಅತಿದೊಡ್ಡ ಪ್ರತಿಮೆ.

ಇದನ್ನು ತಾಮ್ರ, ಕಾಂಕ್ರೀಟು ಮತ್ತು ಉಕ್ಕಿನ ಮಿಶ್ರಲೋಹದಿಂದ ನಿರ್ಮಿಸಲಾಗಿದೆ. ಉಕ್ಕಿನ ಮಿಶ್ರಲೋಹದ ಕಾರಣದಿಂದಾಗಿ ಇದಕ್ಕೆ ಕೆಂಪು–ಕಂದು ಬಣ್ಣ ಲಭಿಸಿದೆ. ಈ ಮಿಶ್ರಲೋಹದಿಂದಾಗಿಯೇ ಪ್ರತಿಮೆಯು 160 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯನ್ನೂ ತಾಳಿಕೊಳ್ಳಬಹುದು. ರೆಕ್ಕೆಗಳು 3.5 ಡಿಗ್ರಿಯಷ್ಟು ಮುಂದಕ್ಕೆ ಬಾಗಿದ್ದು, ಇದರಿಂದಾಗಿ ಪ್ರತಿಮೆಯು ಯಾರನ್ನೋ ತಬ್ಬಿಕೊಳ್ಳಲು ಹೊರಟಿದೆ ಎಂಬಂತೆ ಕಾಣಿಸುತ್ತದೆ.

ಇದನ್ನು ನಿರ್ಮಿಸಿದ್ದು ಬ್ರಿಟನ್ನಿನ ಖ್ಯಾತ ಶಿಲ್ಪಿ ಆ್ಯಂಟನಿ ಗಾರ್ಮ್ಲಿ. ಬ್ರಿಟನ್ನಿನ ಸಾರ್ವಜನಿಕ ಕಲಾ ಪ್ರತಿಮೆಗಳಲ್ಲಿ ಇದು ಅತ್ಯಂತ ಜನಪ್ರಿಯ. ಇದನ್ನು ಪೂರ್ಣಗೊಳಿಸಿದ್ದು 1998ರ ಫೆಬ್ರುವರಿಯಲ್ಲಿ. ಪ್ರತಿಮೆ ಇರುವ ಜಾಗದಲ್ಲಿ ಹಿಂದೆ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿತ್ತು. ಪ್ರತಿಮೆಯು ಇಲ್ಲಿನ ಗಣಿಗಳಲ್ಲಿ ಬೆವರು ಸುರಿಸಿದವರನ್ನು ಪ್ರತಿನಿಧಿಸುತ್ತದೆ ಕೂಡ. ಹಾಗೆಯೇ, ದೇಶವು ಕೈಗಾರಿಕಾ ಯುಗದಿಂದ ಮಾಹಿತಿ ಯುಗಕ್ಕೆ ಹೊರಳಿಕೊಂಡಿದ್ದನ್ನೂ ಪ್ರತಿನಿಧಿಸುತ್ತದೆ.

ಶಕುನಿ

ಈತ ದುರ್ಯೋಧನನ ಮಾವ. ತನ್ನ ಮೋಸದ ಆಟದಿಂದಲೇ ಕುಖ್ಯಾತಿ ಪಡೆದ ವ್ಯಕ್ತಿ. ಶಕುನಿಯು ಗಾಂಧಾರಿಯ ಸಹೋದರ ಕೂಡ ಹೌದು. ಪಾಂಡವರನ್ನು ರಾಜ್ಯದಿಂದ ಹೊರಹಾಕಲು ದುರ್ಯೋಧನನಿಗೆ ಸಲಹೆ ನೀಡಿದವನೂ ಇವನೇ.

ಪಗಡೆಯಾಟದಲ್ಲಿ ದುರ್ಯೋಧನನು ಧರ್ಮರಾಯನನ್ನು ಸೋಲಿಸುವಾಗ ಶಕುನಿಯ ಸಹಾಯ ಪಡೆದಿದ್ದ. ಶಕುನಿಯ ತಂತ್ರಗಾರಿಕೆಯ ಕಾರಣದಿಂದಾಗಿ ಪಾಂಡವರು ಮತ್ತು ಕೌರವರ ನಡುವೆ ರಾಜಿ ಮಾತುಕತೆ ಸಾಧ್ಯವಾಗಲಿಲ್ಲ. ಅದು ಮಹಾಭಾರತ ಯುದ್ಧಕ್ಕೆ ದಾರಿಯಾಯಿತು. ಶಕುನಿ ಕೂಡ ಯುದ್ಧದಲ್ಲಿ ಪಾಲ್ಗೊಂಡಿದ್ದ. ಯುದ್ಧದಲ್ಲಿ ಸಹದೇವನ ಕೈಯಲ್ಲಿ ಸಾವನ್ನಪ್ಪಿದ.

ಸಂಗಾತಿ ಉತ್ಸವ!

ವಿವಾಹ ಆಗಲು ಸೂಕ್ತ ಸಂಗಾತಿ ಸಿಗದೆ ವೇದನೆ ಅನುಭವಿಸುತ್ತಿರುವವರು ಪ್ರತಿವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಐರ್ಲೆಂಡಿನ ಲಿಸ್ಡುನ್‌ವರ್ನಾ ಪಟ್ಟಣದಲ್ಲಿ ಸೇರುತ್ತಾರೆ. ಯಾಕೆ ಸೇರುತ್ತಾರೆ ಗೊತ್ತಾ?! ತಮಗೆ ಸಂಗಾತಿ ಹುಡುಕಿಕೊಳ್ಳಲು! ಈ ಉತ್ಸವಕ್ಕೆ 150 ವರ್ಷಗಳ ಇತಿಹಾಸ ಇದೆ. ಇದನ್ನು ಸಂಗಾತಿ ಹುಡುಕಿಕೊಳ್ಳಲು ಇರುವ ವಿಶ್ವದ ಅತಿದೊಡ್ಡ ಉತ್ಸವ ಎನ್ನಲಾಗುತ್ತದೆ. ಸ್ಥಳೀಯ ರೈತರಿಗೆ ತಮಗೆ ಇಷ್ಟವಾದವರನ್ನು ಹುಡುಕಿ, ಮದುವೆ ಮಾಡಿಕೊಳ್ಳಲು ಸಮಯವೇ ಇರುತ್ತಿರಲಿಲ್ಲವಂತೆ. ಅವರಿಗೆ ಸಹಾಯ ಆಗಲಿ ಎಂಬ ಕಾರಣಕ್ಕೆ ಈ ಉತ್ಸವ ಆರಂಭ ಆಯಿತಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT