ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀ.ನಂ. ಎಂಬ ಅಪರಂಜಿ

Last Updated 28 ಮೇ 2022, 19:30 IST
ಅಕ್ಷರ ಗಾತ್ರ

ಕಾಡು ಕುಸುಮದಂತಹ ವ್ಯಕ್ತಿತ್ವದ ತೀ.ನಂ.ಶಂಕರನಾರಾಯಣ ನಾಡು ಕಂಡ ಬಹುಶ್ರುತ ವಿದ್ವಾಂಸ. ಕಳೆದ ವಾರ ಅವರು ತೀರಿಹೋದಾಗ ಕನ್ನಡಪ್ರಜ್ಞೆಯ ಅಧ್ಯಾಯವೊಂದು ಚರಿತ್ರೆಯ ಪುಟ ಸೇರಿತು...

ಕೆಲವು ವರ್ಷಗಳ ಹಿಂದಿನ ಮಾತು. ಆಗ ಮೈಸೂರು ವಿಶ್ವವಿದ್ಯಾಲಯವು ಬಿ.ಆರ್. ಪ್ರಾಜೆಕ್ಟ್‌ನಲ್ಲಿ ಒಂದು ಸ್ನಾತಕೋತ್ತರ ಕೇಂದ್ರವನ್ನು ತೆರೆಯಿತು. ಅಲ್ಲಿ ಅರ್ಥಶಾಸ್ತ್ರ, ಕೈಗಾರಿಕಾ ರಸಾಯನಶಾಸ್ತ್ರ ಮತ್ತು ಕನ್ನಡ ವಿಭಾಗವನ್ನು ಶುರು ಮಾಡಲಾಗಿತ್ತು. ಕನ್ನಡದ ಸ್ನಾತಕೋತ್ತರ ಕೇಂದ್ರವನ್ನು ತೆರೆದಾಗ ಮೊದಲು ಬಂದವರು ಡಾ. ತೀ.ನಂ. ಶಂಕರನಾರಾಯಣ ಮತ್ತು ಶ್ರೀಕಂಠ ಕೂಡಿಗೆಯವರು. ಆಗ ಬಿ.ಆರ್. ಪ್ರಾಜೆಕ್ಟ್ ಪ್ರದೇಶದಲ್ಲಿ ಏನೊಂದು ಸೌಲಭ್ಯವೂ ಇರಲಿಲ್ಲ. ಸ್ನಾತಕೋತ್ತರ ಕನ್ನಡದ ತರಗತಿಗಳನ್ನು ಪ್ರಾಥಮಿಕ ಶಾಲೆಯ ಕೊಠಡಿಗಳಲ್ಲಿ ಮಾಡುತ್ತಿದ್ದರಂತೆ. ಅಲ್ಲಿಗೆ ಬಂದ ತೀ.ನಂ. ಮತ್ತು ಕೂಡಿಗೆಯವರು ಬೇರೆ ಬೇರೆ ಜವಾಬ್ದಾರಿಗಳನ್ನು ಹೊರಬೇಕಾಯಿತು. ಇಬ್ಬರು ಆಗಾಗ ಇದನ್ನು ನೆನಪಿಸಿಕೊಳ್ಳುತ್ತಿದ್ದರು.

ದಿನದಲ್ಲಿ ಈ ಇಬ್ಬರೂ ವಿದ್ವಾಂಸರು ಎಷ್ಟು ಗಂಟೆ ಪಾಠ ಮಾಡುತ್ತಿದ್ದರು ಎನ್ನುವುದಕ್ಕೆ ಲೆಕ್ಕವೇ ಇರಲಿಲ್ಲ. ಅನಂತರ ತಿಪ್ಪೇರುದ್ರಸ್ವಾಮಿ, ಸುಧಾಕರ್, ಲಕ್ಕಪ್ಪಗೌಡ ಬಂದರು. ವಿಭಾಗವು ಪೂರ್ಣ ಪ್ರಮಾಣದ್ದಾದ ಮೇಲೆ ವಿವಿಧ ಕಾರ್ಯಕ್ರಮಗಳು ನಡೆದವು. ಜಾನಪದ ಕಲಾಮೇಳಗಳು, ವಿಚಾರ ಸಂಕಿರಣಗಳು ಶುರುವಾದವು. ಈ ಕಾರ್ಯಕ್ರಮಗಳಲ್ಲಿ ತೀ.ನಂ. ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅಲ್ಲದೆ, ಸ್ಥಳೀಯ ಸಮುದಾಯದ ಜತೆ ಅವರು ನಿಕಟ ಸಂಪರ್ಕ ಇಟ್ಟುಕೊಂಡಿದ್ದರು.

ಸ್ನಾತಕೋತ್ತರ ಕೇಂದ್ರದಿಂದ ಜಾನಪದ ಕಲಾಮೇಳ ನಡೆದರೆ ಸುತ್ತಲಿನ ಹಳ್ಳಿಯವರು ಎತ್ತಿನ ಗಾಡಿಯಲ್ಲಿ ಬರುತ್ತಿದ್ದರು. ಈಚೆಗೆ ತೀ.ನಂ. ತೀರಿಹೋದಾಗ ಅವರನ್ನು ನೆನಪು ಮಾಡಿಕೊಂಡು, ‘ಅಯ್ಯೋ ಹೋದರಾ? ತುಂಬಾ ಒಳ್ಳೆಯ ಮನುಷ್ಯ. ಅವರು ಭೇದಭಾವ ಮಾಡಿದ್ದನ್ನು ನಾವು ನೋಡಿಯೇ ಇಲ್ಲ. ಯಾರ ಜೊತೆಗಾದರೂ ಅಷ್ಟು ಚೆನ್ನಾಗಿ ಮಾತಾಡುತ್ತಿದ್ದರು’ ಎಂದು ಜನ ಹೇಳುತ್ತಿದ್ದರು. ಇದು ಅವರ ಸರಳತೆಗೆ ಸಾಕ್ಷಿ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಅಹಂಕಾರ ಮತ್ತು ಮದದಲ್ಲಿ ಇರುತ್ತಾರೆ, ಹಳ್ಳಿಯವರ ಜೊತೆಗೆ ಮಾತಾಡಿದರೆ ಘನತೆಗೆ ಕಡಿಮೆ ಎಂದು ತಿಳಿಯುತ್ತಾರೆ ಎಂಬ ಮಾತಿದೆ. ಅಂಥ ಸ್ವಭಾವವನ್ನು ತೀ.ನಂ. ಅವರಲ್ಲಿ ನಾನು ಎಂದಿಗೂ ಕಂಡಿರಲಿಲ್ಲ.

ಕುವೆಂಪು ವಿಶ್ವವಿದ್ಯಾಲಯ ಶುರುವಾದಾಗ ಅಕಾಡೆಮಿಕ್ ಕೌನ್ಸಿಲ್, ಸಿಂಡಿಕೇಟ್ ಸಮಿತಿಗಳಲ್ಲಿ ಅವರು ಸದಸ್ಯರಾದರು. ಅಲ್ಲಿಯೂ ಅವರು ಅಧಿಕಾರ ಎನ್ನುವುದನ್ನು ಚಲಾಯಿಸಿದವರಲ್ಲ. ತೀ.ನಂ, ಉದಾರವಾದ ಸ್ವಭಾವವನ್ನು ಹೊಂದಿದವರು. ಯಾರ ಬಗ್ಗೆಯೂ ಕೆಟ್ಟ ಮಾತನ್ನು ಹೇಳಿದವರಲ್ಲ. ಸಿಡುಕುತನವೂ ಇರಲಿಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ಇದ್ದವರು. ಭಿನ್ನಾಭಿಪ್ರಾಯವನ್ನು ಖಾಸಗಿ ಜೀವನಕ್ಕೆ ತಂದವರೂ ಅಲ್ಲ.

ತೀ.ನಂ. ಅವರಿಗೆ ಇಂಗ್ಲಿಷ್ ಗೊತ್ತಿತ್ತು. ಜಾನಪದಕ್ಕೆ ಸಂಬಂಧಪಟ್ಟ ಎಲ್ಲ ಚರ್ಚೆಗಳ ಅರಿವಿತ್ತು. ಹಾಗೆಯೇ ಯಾವುದೇ ವಾದಕ್ಕೆ ಕಟ್ಟು ಬೀಳುವುದಿಲ್ಲ ಎಂದೂ ಅವರು ಹೇಳುತ್ತಿದ್ದರು. ಅವರ ಸಂಶೋಧನಾಪ್ರಬಂಧ ಕಾಡುಗೊಲ್ಲರ ಸಂಸ್ಕೃತಿಗೆ ಸಂಬಂಧಪಟ್ಟದ್ದು. ಅದು ಬುಡಕಟ್ಟು ಸಂಸ್ಕೃತಿಯ ಅಧ್ಯಯನಕ್ಕೆ ಅತ್ಯಂತ ಮಹತ್ವದ ಕೊಡುಗೆ. ಯಾರು ಬುಡಕಟ್ಟು ಸಂಸ್ಕೃತಿಯನ್ನು ಅಧ್ಯಯನ ಮಾಡುತ್ತಾರೋ ಅವರು ಓದಲೇಬೇಕಾದ ಕೃತಿ ಇದು. ಆ ಕೃತಿಯಲ್ಲಿ ಒಂದು ಅಧ್ಯಯನದ ಶಿಸ್ತು ಇದೆ. ನಮಗೆ ಗೊತ್ತಿಲ್ಲದೆ ಹೋಗಿರುವ ಅನೇಕ ಸಂಗತಿಗಳೂ ಇವೆ. ವ್ಯಾಪಕ ಕ್ಷೇತ್ರಕಾರ್ಯವನ್ನು ಮಾಡಿದ್ದು ಕೂಡಾ ಆ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.

ಜಾನಪದ ಸಿದ್ಧಾಂತದ ಅಧ್ಯಯನಕ್ಕೆ ಹೆಚ್ಚು ಗಮನವನ್ನು ಅವರು ಕೊಟ್ಟಿದ್ದರು. ರಾಜ್ಯದ ಕೆಲವೇ ಕೆಲವು ಜಾನಪದ ವಿದ್ವಾಂಸರಲ್ಲಿ ಅವರೂ ಒಬ್ಬರಾಗಿದ್ದರು. ಜಾನಪದ ಗೊತ್ತಿರುವ ಹಾಗೆಯೇ ಅವರಿಗೆ ಹಳೆಗನ್ನಡ ಮತ್ತು ಹೊಸಗನ್ನಡದ ಆಗುಹೋಗುಗಳು ಸಹ ಗೊತ್ತಿದ್ದವು. ಜ್ಞಾನ ರೂಪಗಳನ್ನು ಕಟ್ಟುವುದು ಹೇಗೆ ಎನ್ನುವುದರ ಅರಿವು ಅವರಿಗಿತ್ತು. ಅವರು ಪದವಿ ತರಗತಿಗಳ ಪಠ್ಯಪುಸ್ತಕಗಳ ಸಂಪಾದಕರಾಗಿದ್ದಾಗ ಒಳ್ಳೆಯ ಬರಹಗಳನ್ನು ಸಂಪಾದಿಸುವ ಕಡೆಗೆ ಗಮನವನ್ನು ಕೊಟ್ಟರು. ವಿಶ್ವವಿದ್ಯಾಲಯದೊಳಗೆ ಇರುವವರಿಗೆ ಅದರ ರಾಜಕಾರಣ ಚೆನ್ನಾಗಿ ಗೊತ್ತಿರುತ್ತದೆ. ಅತ್ಯಂತ ಕೆಟ್ಟ ಪದ್ಯವೂ ಪಠ್ಯವಾಗುವುದಿದೆ. ಟೇಬಲ್‌ಮೇಟ್‍ಗಳ ಋಣ ಸಂದಾಯಕ್ಕೆ ಪಠ್ಯಗಳು ಆಗುವುದು ಎಲ್ಲರಿಗೂ ಗೊತ್ತೇ ಇದೆ. ತೀ.ನಂ. ಅಂತಹ ಋಣದ ಹಂಗಿಗೆ ಈಡಾಗಲಿಲ್ಲ.

ವಿಶ್ವವಿದ್ಯಾಲಯಗಳ ಬಹಳ ದೊಡ್ಡ ಹಾಗೂ ವಾಸಿಯಾಗದ ರೋಗವೆಂದರೆ ಜಾತಿ ರಾಜಕಾರಣ. ಅದರ ಜೊತೆಗೆ ಮತ್ತೂ ಒಂದು ಇರುತ್ತದೆ. ಯಾರ ಕಾಲನ್ನು, ಯಾರು ಎಳೆಯಬೇಕು ಎಂದು ನಿರ್ಧರಿಸಿ ಕಾರ್ಯಪ್ರವೃತ್ತರಾಗುವುದು. ಗುಂಪು ರಾಜಕಾರಣವು ಒಂದು ಅಡ್ಡಗೋಡೆ. ಕೆಲವೊಮ್ಮೆ ಅಧ್ಯಾಪಕರು ಇದನ್ನು ಹುಟ್ಟು ಹಾಕುತ್ತಾರೆ. ಮತ್ತೆ ಕೆಲವೊಮ್ಮೆ ವಿದ್ಯಾರ್ಥಿಗಳೇ ಇದಕ್ಕೆ ಕುಮ್ಮಕ್ಕು ಕೊಡುತ್ತಾರೆ. ಇದರ ಅರಿವು ತೀ.ನಂ. ಅವರಿಗೆ ಇತ್ತು. ಆದರೆ, ಅವರೆಂದೂ ಅಂತಹ ಕೊಚ್ಚೆಯಲ್ಲಿ ಬಿದ್ದವರಲ್ಲ.

ತೀ.ನಂ. ದೆಹಲಿಗೆ ಹೋಗಿ ಯುಜಿಸಿಯಿಂದ ಕನ್ನಡ ವಿಭಾಗಕ್ಕೆ ವಿಶೇಷ ಅನುದಾನವನ್ನು ತಂದರು. ಒಂದು ವಿಶ್ವವಿದ್ಯಾಲಯದ ಹಳೆಯ ವಿಭಾಗ ಮತ್ತು ಕನಿಷ್ಠ ಆರು ಜನ ಪ್ರಾಧ್ಯಾಪಕರು ಇರುವ ವಿಭಾಗಕ್ಕೆ ಈ ಅನುದಾನ ಸಿಗುತ್ತದೆ. ತೀ.ನಂ. ಅವರು ತಂದ ಅನುದಾನದಿಂದ ಕನ್ನಡ ಭಾರತಿಯಲ್ಲಿ ಮೊದಲ ಹಂತದ ಕೆಲಸಗಳು ಆದವು. ಅನಂತರ ಏನಾಯಿತು ಎಂದು ಗೊತ್ತಾಗಲಿಲ್ಲ. ಯಥಾಪ್ರಕಾರ ವಿಶ್ವವಿದ್ಯಾಲಯದ ಕಾಣದ ಕೈಗಳು ಆ ಯೋಜನೆಯನ್ನು ಸಮಾಪ್ತಿ ಮಾಡಲು ಏನೇನು ಬೇಕೋ ಅಷ್ಟೂ ಕೆಲಸವನ್ನು ಮಾಡಿದವು ಎಂದು ಹೇಳುತ್ತಾರೆ. ಇದರ ಬಗ್ಗೆ ನನಗೆ ತಿಳಿಯದು.

ತೀ.ನಂ. ಅವರು ದೊಡ್ಡ ದೊಡ್ಡ ಮಾತುಗಳ ಹಿಂದೆ ಹೋದವರಲ್ಲ. ಆದರೆ, ವೈಯಕ್ತಿಕ ಜೀವನದಲ್ಲಿ ಹೆಚ್ಚು ಜಾತ್ಯತೀತರಾಗಿದ್ದರು. ಅವರು ಜಾತಿಯನ್ನು ನಂಬಿರಲಿಲ್ಲ. ಅದನ್ನು ಹಿಡಕೊಂಡು ಉನ್ನತ ಹುದ್ದೆಗೆ ಹೋಗಲು ಯತ್ನವನ್ನು ಮಾಡಲಿಲ್ಲ. ಪ್ರಶಸ್ತಿಗೆ ಲಾಬಿಯನ್ನು ಮಾಡಲಿಲ್ಲ. ತುಂಬಾ ತಿಳಿವಳಿಕೆ ಇದ್ದ ಮನುಷ್ಯ. ಅವರು ನಿವೃತ್ತಿ ಹೊಂದಿದ ಮೇಲೆ ತಮ್ಮ ಪಾಡಿಗೆ ತಾವಿದ್ದರು. ಅವರ ಜ್ಞಾನವನ್ನು ಕನ್ನಡ ಸಾರಸ್ವತ ಲೋಕ ಬಳಸಿಕೊಳ್ಳಲಿಲ್ಲ. ಅದಕ್ಕೂ ಅವರು ಬೇಸರ ವ್ಯಕ್ತಪಡಿಸಲಿಲ್ಲ.

ತೀ.ನಂ ಇದ್ದಾಗ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿಯಲ್ಲಿ ಐಚ್ಛಿಕ ವಿಷಯಗಳನ್ನು ಹೆಚ್ಚು ಮಾಡಿದರು. ಅವರ ಉದ್ದೇಶ ವಿಭಾಗವನ್ನು ಬೆಳೆಸುವುದು. ಅದಕ್ಕಾಗಿ ಅವರು ತೌಲನಿಕ ಸಾಹಿತ್ಯ, ಸಾಹಿತ್ಯ ವಿಮರ್ಶೆ, ಭಾಷಾಂತರ, ಜಾನಪದ ಅಧ್ಯಯನ ಡಿಪ್ಲೊಮಾ ಕೋರ್ಸ್ ತರಬೇಕು ಎಂದು ಪ್ರಯತ್ನಪಟ್ಟರು. ಅದೂ ಆಗಲಿಲ್ಲ. ಆಗಲು ಸ್ಥಾಪಿತ ಹಿತಾಸಕ್ತಿಗಳು ಬಿಡಲಿಲ್ಲ.

ತೀ.ನಂ. ಅವರಂಥ ಒಬ್ಬ ಪ್ರಾಧ್ಯಾಪಕ ಅನೇಕ ವಿದ್ಯಾರ್ಥಿಗಳಿಗೆ ಪಾಠ ಮಾಡಿರುತ್ತಾರೆ. ಅವರಿಗೆ ಎಲ್ಲಾ ವಿದ್ಯಾರ್ಥಿಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ. ಆದರೆ, ಅವರ ತರಗತಿಗಳ ಲಾಭ ಪಡೆದ ವಿದ್ಯಾರ್ಥಿಗಳು ಕೂಡಾ ಮರೆತುಹೋದ ಸ್ಥಿತಿಗೆ ತಲುಪಿದ್ದಾರೆ. ‘ಅಧಿಕಾರ ಎಂದರೆ ನನಗೆ ರೇಜಿಗೆ ಹುಟ್ಟಿಸುತ್ತದೆ. ನನಗೆ ಅಂಥದ್ದು ಬೇಡ’ ಎನ್ನುತ್ತಿದ್ದರು ತೀ.ನಂ.

ಒಂದು ಸುಪ್ರಸಿದ್ಧ ಮಾತಿದೆ. ಒಬ್ಬ ವ್ಯಕ್ತಿಯು ತೀರಿಹೋದರೆ ಅವರ ಜೊತೆಗೆ ಅವರ ಜ್ಞಾನವೂ ಸಾಯುತ್ತದೆ ಎಂದು. ಈ ಮಾತು ತೀ.ನಂ. ಅವರಿಗೆ ಹೆಚ್ಚು ಅನ್ವಯವಾಗುತ್ತದೆ. ಕೊನೆಯ ದಿನಗಳಲ್ಲಿ ಅವರು ಒಂಟಿಯಾಗಿದ್ದರು. ಅವರ ಪತ್ನಿ ತೀರಿಹೋದ ಮೇಲೆ ಕುಗ್ಗಿದಂತೆ ಕಾಣಿಸುತ್ತಿತ್ತು. ಏಕಾಕಿತನ ಎನ್ನುವುದೇ ದೊಡ್ಡ ಹಿಂಸೆ. ಮೇಲಾಗಿ ಅವರ ಜ್ಞಾನ ಮತ್ತು ಅವರ ವಿದ್ವತ್ತನ್ನು ಕನ್ನಡದ ಸಾಂಸ್ಕೃತಿಕ ಲೋಕ ಗುರುತಿಸದೇ ಹೋಯಿತು. ಜ್ಞಾನದ ದೀವಟಿಗೆ ಹಿಡಿದ ಇಂತಹ ಸಂತಸದೃಶ ಪ್ರಾಧ್ಯಾಪಕ ಇನ್ನು ನೆನಪು ಮಾತ್ರ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT