ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊತ್ತಿಗೆ ಮಾರುವ ಇ–ಹೊತ್ತು

Last Updated 19 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ತಲೆ ಮೇಲೆ ಗಂಟುಹೊತ್ತು, ಊರೂರು ಸುತ್ತಿ, ಪುಸ್ತಕ ಮಾರಾಟ ಮಾಡುತ್ತಿದ್ದ ಹಿಂದಿನ ಸಂಸ್ಕೃತಿ ಕುರಿತು ನಾವೆಲ್ಲ ಕೇಳಿದ್ದೇವೆ. ಓದುವ ಹವ್ಯಾಸದ ತೀವ್ರ ಏರಿಳಿತದ ಈ ಸಂದಿಗ್ಧ ಕಾಲದಲ್ಲಿ ಪುಸ್ತಕಗಳು ಓದುಗರನ್ನು ಹೇಗೆ ತಲುಪುತ್ತಿವೆ? ಅವುಗಳನ್ನು ಪ್ರಕಟಿಸುವವರು ಎದುರಿಸುತ್ತಿರುವ ಸಂಕಷ್ಟಗಳೇನು? ಇಲ್ಲಿದೆ ಒಂದು ಪ್ರಕಾಶಕರ ಕುಶಲೋಪರಿ. ಹಾಗೆಯೇ ಸರ್ಕಾರಿ ಪುಸ್ತಕ ಖರೀದಿಯ ಕರಾಳ ಮುಖವನ್ನೂ ಇಲ್ಲಿ ಕಾಣಿಸಲಾಗಿದೆ...

***

ಉದ್ಯಮ ಮತ್ತು ಸಂಸ್ಕೃತಿ ಎಂದು ಏಕಕಾಲಕ್ಕೆ ಗುರುತಿಸಿಕೊಳ್ಳುವ ಕನ್ನಡ ಪುಸ್ತಕ ಪ್ರಕಾಶನ ಕ್ಷೇತ್ರವು ಹಲವು ಕಷ್ಟನಷ್ಟಗಳ ನಡುವೆಯೂ ಸವಾಲುಗಳನ್ನು ಎದುರಿಸುತ್ತಲೇ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ‘ಹೆಳವನಿದ್ದಲ್ಲಿಗೆ ಹೊಳೆ ಬಂದಿತು’ ಎನ್ನುವ ಬೇಂದ್ರೆ ಕವಿತೆಯ ಸಾಲು ಕನ್ನಡ ಪುಸ್ತಕೋದ್ಯಮಕ್ಕೆ ಈ ಹೊತ್ತಿನಲ್ಲಿ ಬಹಳ ಸರಿಯಾಗಿ ಅನ್ವಯವಾಗುತ್ತದೆ. ಮೊದಲೇ ಕುಂಟುತ್ತಾ, ತೆವಳುತ್ತಾ ಸಾಗುತ್ತಿದ್ದ ಕನ್ನಡ ಪುಸ್ತಕೋದ್ಯಮವು ಕೋವಿಡ್ ಸಂಕಟದ ಈ ಹೊತ್ತಿನಲ್ಲಿ ಇನ್ನಷ್ಟು ಬಿಕ್ಕಟ್ಟುಗಳಲ್ಲಿ ಸಿಲುಕಿಕೊಂಡಿದೆ.

ಸಾಹಿತ್ಯ ಮತ್ತು ಭಾಷಾ ಸಮ್ಮೇಳನಗಳು, ಕಾಲೇಜು ಮತ್ತಿತರ ಕಡೆಗಳಲ್ಲಿ ನಡೆಯುತ್ತಿದ್ದ ಕಮ್ಮಟಗಳು, ಸೆಮಿನಾರುಗಳು, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು– ಇವು ಸಾಹಿತ್ಯ, ವೈಚಾರಿಕ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತಾ ಸಣ್ಣಮಟ್ಟದಲ್ಲಿ ಪ್ರಕಾಶನ ನಡೆಸುತ್ತಿದ್ದ ನಮ್ಮಂಥವರಿಗೆ ಪುಸ್ತಕಗಳನ್ನು ಮಾರಲು ಇದ್ದ ದಾರಿಗಳಾಗಿದ್ದವು. ಅದರೊಟ್ಟಿಗೆ ಪುಸ್ತಕ ಅಂಗಡಿಗಳೂ ಕೈಹಿಡಿದಿದ್ದವು. ಆದರೆ, ಕೋವಿಡ್‌ ಕಾರಣದಿಂದ ಸಮ್ಮೇಳನ, ಸೆಮಿನಾರುಗಳು ನಡೆಯುವಂತಿಲ್ಲ. ಸಾಹಿತ್ಯದ ಪುಸ್ತಕಗಳನ್ನು ಮಾರಲು ಎಷ್ಟೋ ಜಿಲ್ಲಾ ಕೇಂದ್ರಗಳಲ್ಲಿ ಅಂಗಡಿಗಳೇ ಇಲ್ಲ. ಇರುವ ಪುಸ್ತಕದ ಅಂಗಡಿಗಳಿಗೂ ಜನ ಬರುತ್ತಿಲ್ಲ. ಹೀಗಾಗಿ ಮುದ್ರಿತ ಪುಸ್ತಕಗಳ ಪ್ರಕಾಶನ ಸಂಸ್ಕೃತಿ ನಿಧಾನಕ್ಕೆ ಸ್ತಬ್ಧಗೊಳ್ಳುತ್ತದೇನೋ ಎಂಬ ಆತಂಕ ಕಾಡಿದ್ದು ಸುಳ್ಳಲ್ಲ.

ಆದರೆ, ಹಾಗಾಗಲಾರದು. ಏಕೆಂದರೆ, ಸಾಹಿತ್ಯಾಧಾರಿತ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶನಗಳು ಆಯಾ ಪ್ರಕಾಶಕ/ಕಿಯರ ಆಸಕ್ತಿ, ಅಭಿರುಚಿ ಮತ್ತು ಇದನ್ನೂ ವೃತ್ತಿ ಮಾಡಿಕೊಳ್ಳಬಹುದು ಎಂಬ ಪ್ರಯತ್ನಶೀಲ ಮನೋಭಾವದಿಂದಾಗಿ ಚಾಲನೆಯಲ್ಲಿವೆ. ಉದ್ದಿಮೆಯೊಂದನ್ನು ಮಾಡುತ್ತೇವೆ ಎಂಬ ಮನಃಸ್ಥಿತಿಯವರು ಕನ್ನಡ ಪುಸ್ತಕ ಪ್ರಕಾಶನವನ್ನು ಹುಟ್ಟುಹಾಕಿದ್ದು ಕಡಿಮೆಯೇ. ಆದ್ದರಿಂದ ಎಂತಹದ್ದೇ ಸಂದರ್ಭ ಬರಲಿ, ಮುದ್ರಣ ಪ್ರಕಾಶನ ಸಂಸ್ಕೃತಿ ಉಳಿಯುತ್ತದೆ ಎಂಬ ಆಶಾವಾದ ಇದ್ದೇ ಇದೆ.

ಪ್ರಕಾಶನ ಕ್ಷೇತ್ರ ಸದ್ಯ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಅದಕ್ಕೆ ಮುಖ್ಯ ಕಾರಣ ದಿನೇ ದಿನೇ ಕಡಿಮೆಯಾಗುತ್ತಿರುವ ಓದುಗರ ಸಂಖ್ಯೆ. ಮೊದಲಿನಿಂದಲೂ ಈ ಸಮಸ್ಯೆ ಇದೆ. ವಿವಿಧ ಪ್ರಕಾಶನ ಸಂಸ್ಥೆಗಳ ಒಟ್ಟಾರೆ ನೂರು ಪುಸ್ತಕಗಳಿಗಾದರೂ ವರ್ಷದಲ್ಲೇ ತಲಾ ಸಾವಿರ ಓದುಗರು ಸಿಕ್ಕು, ಪ್ರತಿಗಳೆಲ್ಲ ಖರ್ಚಾಗಿ ಮರುಮುದ್ರಣದ ಭಾಗ್ಯ ಸಿಗಬಹುದೆಂದು ಕನಸು ಕಾಣುವಂತಹ ಪರಿಸ್ಥಿತಿ ಈಗಿಲ್ಲ. ಇಂಗ್ಲಿಷ್‌ ಮಾಧ್ಯಮದ ಒಲುಮೆ ಕನ್ನಡ ಸಾಹಿತ್ಯಕ್ಕೆ ಕುತ್ತಾಗಿ ಪರಿಣಮಿಸಿದ್ದು, ಹಣ ಕೊಟ್ಟು ಪುಸ್ತಕ ಓದುವುದು ವ್ಯರ್ಥ ಎಂಬ ಭಾವನೆ ಬೇರೂರಿದೆ.

ಒಂದೈದಾರು ಜಿಲ್ಲಾ ಕೇಂದ್ರಗಳಲ್ಲಿ ಬಿಟ್ಟರೆ ಉಳಿದ ಕಡೆಗಳಲ್ಲಿ ಸಾಹಿತ್ಯ, ಸಂಸ್ಕೃತಿ, ವೈಚಾರಿಕ ಪುಸ್ತಕಗಳನ್ನು ಮಾರಲೋಸುಗ ಒಂದೇ ಒಂದು ಮಳಿಗೆ ಸಿಗುವುದಿಲ್ಲ. ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆಯಡಿ ಬರುವ ಸಿರಿಗನ್ನಡ ಪುಸ್ತಕ ಮಳಿಗೆಗಳು ಹಲವು ಜಿಲ್ಲಾ ಕೇಂದ್ರಗಳಲ್ಲಿ ಮುಚ್ಚಿ ಹೋಗಿವೆ. ಕೆಲವು ಜಿಲ್ಲಾ ಕೆಂದ್ರಗಳಲ್ಲಿ ಪುಸ್ತಕದ ಜತೆ ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡುತ್ತಾ ಅದರ ಸಹಾಯದಿಂದ ಉಸಿರಾಡುತ್ತಿವೆ. ಜಿಲ್ಲಾ ಕೇಂದ್ರಗಳ ಸ್ಥಿತಿಯೇ ಹೀಗಾದ ಮೇಲೆ ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಸಾಹಿತ್ಯದ ಪುಸ್ತಕಗಳನ್ನು ಹುಡುಕುವಂತೆಯೇ ಇಲ್ಲ. ಹೀಗಾಗಿ ಪುಸ್ತಕಪ್ರಿಯರು ಬೇಕಾದ ಪುಸ್ತಕ ಪಡೆಯಲು ಬಹುತೇಕ ರಾಜಧಾನಿಗೆ ಎಡತಾಕಬೇಕಾದ ಸ್ಥಿತಿಯಿದೆ.

ಮಾರಾಟ ಜಾಲದ ಸಮಸ್ಯೆ ಹೀಗಾದರೆ ಇಂದಿಗೂ ಕನ್ನಡದಲ್ಲಿ ಪ್ರಕಾಶಕರಿಗೆ ಪುಸ್ತಕವೊಂದಕ್ಕೆ ಎಷ್ಟು ಬೇಡಿಕೆ ಬರುತ್ತದೆ ಎಂಬುದರ ಅಂದಾಜು ಮೊದಲೇ ಗೊತ್ತಾಗುವುದಿಲ್ಲ. ಯಾವುದೇ ಪ್ರಕಾರದ ಪುಸ್ತಕವಾಗಿರಲಿ, ಮೊದಲಿಗೆ ಒಂದು ಸಾವಿರ ಪ್ರತಿಗಳನ್ನು ಮುದ್ರಣ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕಿಂತ ಕಡಿಮೆ ಪ್ರಮಾಣದ ಪುಸ್ತಕ ಅಚ್ಚು ಹಾಕಿಸಲು ಹೋದರೆ ಅಧಿಕ ವೆಚ್ಚದ ಹೊರೆಯನ್ನೂ ಹೊರಬೇಕಾಗುತ್ತದೆ. ವರ್ಷಕ್ಕೆ ಎಂಟ್ಹತ್ತು ಪುಸ್ತಕ ತರುವವರೂ ಪುಸ್ತಕಗಳನ್ನು ಇಡಲು ಅಚ್ಚುಕಟ್ಟಾದ ದೊಡ್ಡ ಗೋದಾಮಿನ ವ್ಯವಸ್ಥೆ ಮಾಡಿಕೊಂಡಿರಲೇಬೇಕು.

ಹೆಚ್ಚಿನ ಮುದ್ರಣಾಲಯಗಳು ಬೆಂಗಳೂರಿನಲ್ಲೇ ಇರುವುದರಿಂದ ನಮ್ಮಂತಹ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರದಲ್ಲಿ ನೆಲೆಸಿರುವ ಹಲವು ಪ್ರಕಾಶಕರು ಪ್ರತೀ ಪುಸ್ತಕದ ಮುದ್ರಣಕ್ಕೂ ರಾಜಧಾನಿಯ ಪ್ರಿಂಟಿಂಗ್ ಪ್ರೆಸ್‍ಗಳನ್ನೇ ಅವಲಂಬಿಸಬೇಕಾಗಿದೆ. ಪುಸ್ತಕಗಳ ಸರಬರಾಜು ವೆಚ್ಚವನ್ನೂ ಭರಿಸಬೇಕಾಗುತ್ತದೆ. ಪುಸ್ತಕ ಮಾರಾಟಗಾರರಿಗೆ ಶೇಕಡ 40ರವರೆಗೆ ರಿಯಾಯಿತಿಯನ್ನೂ ಕೊಡಬೇಕಾಗುತ್ತದೆ. ಮಾರಾಟಗಾರರು ಹಲವು ತರಹದ ಕಷ್ಟನಷ್ಟಗಳಲ್ಲಿ ಇರುವುದರಿಂದ ಪುಸ್ತಕ ಮಾರಾಟವಾದ ಹಣವೂ ಎಷ್ಟೋ ಬಾರಿ ಪ್ರಕಾಶಕರಿಗೆ ಸರಿಯಾಗಿ ಮರಳಿಬರುವುದಿಲ್ಲ. ಇವೆಲ್ಲ ಪ್ರಕಾಶನ ವೃತ್ತಿಗಿರುವ ಬಹುಮುಖ್ಯ ಸವಾಲುಗಳು. ಆದ್ದರಿಂದಲೇ ಎಷ್ಟೋ ಜನ ಸಾಹಿತ್ಯಾಸಕ್ತರು ಪ್ರಕಾಶನವನ್ನು ಪ್ರಾರಂಭಿಸಿ, ಬಲು ಉತ್ಸಾಹದಿಂದ ಎರಡ್ಮೂರು ಪುಸ್ತಕ ಪ್ರಕಟಿಸಿ, ನಂತರ ತಮ್ಮ ಕೈಲಾಗುವುದಿಲ್ಲವೆಂದು ಕೈಚೆಲ್ಲಿ ಕುಳಿತಿರುವ ಉದಾಹರಣೆಗಳು ಬಹಳಷ್ಟಿವೆ.

ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿಸುವ ಯೋಜನೆಯು ಪುಸ್ತಕ ಸಂಸ್ಕೃತಿ ಉಳಿಸುವ ಕಾಯಕದ ಪ್ರಕಾಶನಗಳಿಗೆ ಸ್ವಲ್ಪಮಟ್ಟಿಗೆ ಜೀವದಾಯಿನಿ ಆಗಿರುವುದು ನಿಜ. ಆದರೆ, ಅದು ನಡೆಸುವ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಕುಗಳಿದ್ದು, ಒಳ್ಳೆಯ ಪುಸ್ತಕಗಳು ಆಯ್ಕೆಯಾಗದೆ ಉಳಿಯುವ ಸಂಭವವೇ ಹೆಚ್ಚು. ಉದಾಹರಣೆಗೆ ಅಹರ್ನಿಶಿ ಪ್ರಕಟಿಸಿದ ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿ ಖರೀದಿಗೆ ಆಯ್ಕೆಯಾಗಲಿಲ್ಲ. ಒಂದು ಕೃತಿ ಮುದ್ರಣವಾದ ಹತ್ತು ವರ್ಷಗಳ ನಂತರ ಮರು ಮುದ್ರಣವಾದರೆ ಕೊಂಡುಕೊಳ್ಳಲು ನಿಯಮದಲ್ಲಿ ಅವಕಾಶವಿದೆ. ‘ಗಾಂಧಿ ಬಂದ’ ಕೃತಿಯನ್ನು ಆಯ್ಕೆ ಮಾಡದಿರಲು ಕಾರಣವೇನೆಂದರೆ ಹತ್ತು ವರ್ಷಗಳ ಅವಧಿಯಲ್ಲಿ ಈ ಕೃತಿ ಮೂರ್ನಾಲ್ಕು ಮುದ್ರಣ ಕಂಡಿದೆ ಎಂಬುದು. ಮೂರ್ನಾಲ್ಕು ಮುದ್ರಣಗಳು ಓದುಗರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಓದಿದ್ದರಿಂದ ಆಯಿತೇ ವಿನಾ ಗ್ರಂಥಾಲಯ ಇಲಾಖೆಯು ಖರೀದಿ ಮಾಡುತ್ತಿರುವುದರಿಂದ ಅಲ್ಲ ಎಂಬುದನ್ನು ಯಾರಿಗೆ ಹೇಳುವುದು?

ಗ್ರಂಥಾಲಯ ಇಲಾಖೆಯ ಆಯ್ಕೆ ಸಮಿತಿಯು ಆಯ್ಕೆ ಮಾಡಿದ ಪುಸ್ತಕದ ಮುನ್ನೂರು ಪ್ರತಿಗಳನ್ನು (ವರ್ಷವೊಂದಕ್ಕೆ) ಇಲಾಖೆಗೆ ಮಾರಾಟ ಮಾಡಲು ಅವಕಾಶವಿದೆ. ಆದರೆ, ಪ್ರಕಾಶನ ಸಂಸ್ಥೆಗಳು ₹ 1 ಲಕ್ಷ ಮಿತಿಯ ಒಳಗಡೆಯೇ ಪುಸ್ತಕಗಳನ್ನು ಸರಬರಾಜು ಮಾಡಬೇಕೆಂಬ ಹಣಕಾಸಿನ ಮಿತಿಯಿದೆ (ಲೇಖಕರಿಗೂ ಪುಸ್ತಕ ಸರಬರಾಜು ಮಾಡಲು ₹1 ಲಕ್ಷ ಮಿತಿ ವಿಧಿಸಲಾಗಿದೆ). ಪುಟಸಂಖ್ಯೆಗೆ ಅನುಗುಣವಾಗಿ ಪುಸ್ತಕಕ್ಕೆ ಬೆಲೆಯನ್ನು ಗೊತ್ತುಪಡಿಸಲಾಗುತ್ತದೆ. ಅದನ್ನು ಹೆಚ್ಚಿಸಲಾಗಿದೆಯಾದರೂ ಒಟ್ಟಾರೆ ಮೌಲ್ಯದ ಮೇಲಿನ ಮಿತಿಯನ್ನು ಹೆಚ್ಚಿಸಿಲ್ಲ. ಆದ್ದರಿಂದ ಗ್ರಂಥಾಲಯದ ಈ ಯೋಜನೆಯ ಪೂರ್ಣ ಪ್ರತಿಫಲವನ್ನು ಪಡೆಯಲು ಪ್ರಾಮಾಣಿಕವಾಗಿ ಪ್ರಕಾಶನ ನಡೆಸುವವರು ವಿಫಲರಾಗುತ್ತಾರೆ.

ಪ್ರತಿವರ್ಷ ಪುಸ್ತಕದ ಮುನ್ನೂರು ಪ್ರತಿಗಳ ಬದಲು ಐನೂರು ಪ್ರತಿಗಳನ್ನು ಖರೀದಿಸಿ ಪ್ರಕಾಶನ ಸಂಸ್ಥೆಗಳಿಗೆ ಕಾಯಕಲ್ಪ ನೀಡುವುದಾಗಿ ಸರ್ಕಾರ ಹೇಳಿದೆ. ಪ್ರತೀ ಪ್ರಕಾಶನ ಸಂಸ್ಥೆಗೆ ಮಾರಾಟಕ್ಕಿರುವ ₹ 1 ಲಕ್ಷ ರೂಪಾಯಿಯ ಗರಿಷ್ಠ ಮಿತಿಯನ್ನು ಹೆಚ್ಚಿಸದೇ ಹೋದರೆ ಈ ನಿರ್ಧಾರದಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಪುಸ್ತಕದ ಪ್ರತಿಗಳ ಖರೀದಿ ಪ್ರಮಾಣ ಮೊದಲಿದ್ದ ಹಾಗೇ ಇದ್ದರೆ ಏನೂ ತೊಂದರೆ ಇಲ್ಲ. ಖರೀದಿಗೆ ವಿಧಿಸಿರುವ ಮಿತಿಯನ್ನು ಮಾತ್ರ ₹ 3 ಲಕ್ಷಕ್ಕೆ ಹೆಚ್ಚಿಸಬೇಕು. ಹಾಗೆಯೇ ಪ್ರಕಾಶಕರು ತಾವು ಪ್ರಕಟ ಮಾಡಿದ ಸಂಸ್ಥೆಯ ಹೆಸರಿನಲ್ಲಿಯೇ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಸರಬರಾಜು ಮಾಡಬೇಕು. ಬೇನಾಮಿ ಹೆಸರಿನಲ್ಲಿ ಸರಬರಾಜು ಮಾಡುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ಪ್ರಕಾಶಕರ ಸಂಖ್ಯೆಯಂತೆಯೇ ಈ ದಿನಗಳಲ್ಲಿ ಪ್ರಕಾಶಕಿಯರ ಸಂಖ್ಯೆಯೂ ಹೆಚ್ಚುತ್ತಿದೆ. ಮಹಿಳೆಯರು ಕೂಡಾ ಪ್ರಕಾಶನ ಕ್ಷೇತ್ರದಲ್ಲಿ ತೊಡಗಲು ಉತ್ಸುಕತೆ ತೋರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಸರ್ಕಾರ ಇತ್ತೀಚೆಗೆ ನೇಮಿಸಿದ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯಲ್ಲಿ ಒಬ್ಬರೇ ಒಬ್ಬರೂ ಮಹಿಳೆ ಇಲ್ಲದಿರುವುದಕ್ಕೆ ಏನು
ಹೇಳೋಣ?

ಪುಸ್ತಕೋದ್ಯಮದ ಇತ್ತೀಚಿನ ವಿದ್ಯಮಾನವೆಂದರೆ ಅಂಗಡಿಗಳನ್ನು ನೆಚ್ಚಿಕೊಳ್ಳದೆ ಸಾಮಾಜಿಕ ಜಾಲತಾಣವನ್ನು, ಅದರಲ್ಲಿರುವ ತಮ್ಮ ಓದುಗರ ಬಳಗವನ್ನು ನೆಚ್ಚಿಕೊಂಡೇ ಹಲವು ಪ್ರಕಾಶನ ಸಂಸ್ಥೆಗಳು ತಲೆ ಎತ್ತುತ್ತಿವೆ. ಹಾಗೆ ನೋಡಿದರೆ ಇದೊಂದು ಒಳ್ಳೆಯ ವಿದ್ಯಮಾನ. ಹಿಂದೆ ಎಷ್ಟೋ ಜನ ಪ್ರಕಾಶಕರು ತಲೆಯ ಮೇಲೆ ಪುಸ್ತಕ ಹೊತ್ತು ಊರೂರು ಅಲೆದು ಪುಸ್ತಕ ಪರಿಚಾರಿಕೆ ಮಾಡಿದ ಐತಿಹ್ಯಗಳು ನಮ್ಮಲ್ಲಿವೆ. ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಈ ಪರಿಚಾರಿಕೆ ಮುಂದುವರೆಯಲು ಅವಕಾಶವಾಗಿದ್ದು, ಅದನ್ನು ಕನ್ನಡದ ಹೊಸ ತಲೆಮಾರಿನ ಕೆಲ ಸಾಹಿತ್ಯಾಸಕ್ತರು ಶಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ. ಹಾಸನದ ಶರತ್ ಅವರ ಪ್ರಜೋದಯ, ನಿತೇಶ್ ಕುಂಟಾಡಿಯವರ ಋತುಮಾನ, ಟಿ.ಎಸ್.ಗೊರವರ ಅವರ ಸಂಗಾತ, ಬೆಳಗಾವಿಯ ಗೆಳೆಯರ ಸಮಕಾಲೀನ ಓದುಬರಹ ಬಳಗ ಆನ್‍ಲೈನ್ ಮಾರುಕಟ್ಟೆಯ ಮೂಲಕ ಪುಸ್ತಕ ಮಾರಾಟ ಜಾಲವನ್ನು ಕಟ್ಟಿವೆ; ಆನ್‍ಲೈನ್ ಮೂಲಕ ಪುಸ್ತಕಕ್ಕೆ ಬೇಡಿಕೆ ಪಡೆದು ಪೋಸ್ಟ್ ಅಥವಾ ಕೊರಿಯರ್ ಮೂಲಕ ಓದುಗರಿಗೆ ಪುಸ್ತಕ ತಲುಪಿಸುತ್ತಿವೆ.

ಪುಸ್ತಕದಂಗಡಿ ಇಲ್ಲದ ಪ್ರದೇಶಗಳಿಗೂ ಸರಾಗವಾಗಿ ಪುಸ್ತಕಗಳನ್ನು ತಲುಪಿಸಲು ಮತ್ತು ಸದಭಿರುಚಿಯ ಪುಸ್ತಕ ಪ್ರಕಟಿಸುವ ಹಲವಾರು ಪ್ರಕಾಶನ ಸಂಸ್ಥೆಗಳಿಗೆ ಪುಸ್ತಕ ಮಾರಾಟ ಮಾಡಲು ಈ ಆನ್‍ಲೈನ್ ಸ್ಟೋರ್‌ಗಳು ಅನುಕೂಲಕರವಾಗಿ ಪರಿಣಮಿಸಿವೆ. ಜತೆಗೆ ಮೈಲ್ಯಾಂಗ್ ಸೇರಿದಂತೆ ಹಲವು ಇ -ಪುಸ್ತಕಗಳ ಮಾರಾಟ ಜಾಲಗಳು ಅಸ್ತಿತ್ವಕ್ಕೆ ಬಂದಿದ್ದು, ಇದಕ್ಕೆ ಕನ್ನಡ ಓದಬಲ್ಲ ಬೇರೆ ರಾಷ್ಟ್ರಗಳಲ್ಲಿರುವ ಓದುಗರು ಸೇರಿದಂತೆ ಹಲವರಿಂದ ಒಳ್ಳೆಯ ಸ್ಪಂದನೆ ಸಿಗುತ್ತಿದೆ ಎಂಬ ಮಾಹಿತಿಯಿದೆ. ಇ–ಪುಸ್ತಕಗಳು ಮುದ್ರಿತ ಪುಸ್ತಕಗಳ ಅಸ್ತಿತ್ವವನ್ನು ಅಲುಗಾಡಿಸುವುದಿಲ್ಲ. ಬದಲಿಗೆ ಮುದ್ರಿತ ಪುಸ್ತಕಗಳ ಓದಿಗೆ ಪೂರಕವಾಗಿರುತ್ತವೆ ಎಂಬ ಮಾತೂ ಅಲ್ಲಲ್ಲಿ ಕೇಳಿಬರುತ್ತಿದೆ. ಕೆಲವು ಓದುಗರು ಇ–ಪುಸ್ತಕ ಓದಿ ಮುದ್ರಿತ ಪುಸ್ತಗಳಿಗೂ ಬೇಡಿಕೆ ಇಡುತ್ತಿದ್ದಾರೆ ಎಂದು ಈ ಗೆಳೆಯರು ಹೇಳುತ್ತಿರುವರಾದರೂ ಪರಿಣಾಮವನ್ನು ಕಾದು ನೋಡಬೇಕಾಗಿದೆ. ಏನೇ ಹೇಳಿದರೂ ಏನೇ ಮಾಡಿದರೂ ಪ್ರಕಾಶನ ಸಂಸ್ಥೆಗಳು ಕೊನೆಗೆ ಉಳಿಯುವುದು, ಬೆಳೆಯುವುದು ಓದುಗರಿಂದ ಮಾತ್ರವೇ. ಸರ್ಕಾರದ ಯೋಜನೆಗಳು, ನಮ್ಮಗಳ ಪ್ರಯತ್ನಗಳು ಅದಕ್ಕೆ ಪೂರಕವಾಗಿರಬಹುದು ಅಷ್ಟೆ. ಕನ್ನಡ ಪುಸ್ತಕ ಓದುವ ಆಸ್ಥೆಯುಳ್ಳ ಯುವ ಸಮೂಹವನ್ನು ಹುಟ್ಟುಹಾಕದೆ ಹೋದರೆ ಎಲ್ಲವೂ ವ್ಯರ್ಥ.

(ಲೇಖಕಿ ಅಹರ್ನಿಶಿ ಪ್ರಕಾಶನದ ಮುಖ್ಯಸ್ಥೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT