ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಮೃದ್ಧಿ ಸಂಕೇತ, ಭೂಮಿಗೆ ಸೀಮಂತ

ಹುಲ್ಲುಹುಲ್ಲಿಗೆ ಅಮೃತವುಣಿಸುತ್ತ...
Last Updated 7 ಜನವರಿ 2021, 14:48 IST
ಅಕ್ಷರ ಗಾತ್ರ

ಸೀತನಿ ಸುಲಗಾಯಿ ತಿನ್ನಾಕ ಬರ್ರೀ ಅಂತ ಕರದು, ಹೊಸಲಿಗೆ ಕುಂಕುಮ ಇಟ್ರಂದ್ರ ಅವೊತ್ತು ಮನ್ಯಾಗ ಒಲಿ ಹೊತ್ತಿಸುವ ಹಂಗಿಲ್ಲ ಅಂತಲೇ ಅರ್ಥ.

ಮನ್ಯಾಗಿದ್ದ ಎಳೀ ಕೂಸಿನಿಂದ ಹಿಡಿದು ಹಿರಿಯರ ತನಾನೂ ಎಲ್ಲಾರೂ ಸೀತನಿ, ಸುಲಗಾಯಿ ತಿನ್ನಾಕ ಹೋಗೋರೆ. ಸೀತನಿ ಅಂದ್ರ ಜೋಳದ ಸಿಹಿತೆನಿ. ಇವು ಹಾಲ್ದುಂಬಿಕೊಂಡಿರುವ ಕಾಲದಾಗ, ಸುಲಗಾಯಿ ಕಾಳು ಬಲತಿರ್ತಾವ. ಇನ್ನೇನು ಕಡಲಿಕಾಳು ಬಲಿತ ಕಾಲದಾಗ ಹಿಂಗ ಸೀತನಿ, ಸುಲಗಾಯಿ ಸಮಾರಾಧನೆ ಶುರು ಆಗ್ತದ.

ಅದೊಂದು ಸಂಭ್ರಮ. ಹೊಲದೊಳಗ ಒಂದಷ್ಟು ಜಾಗ ಸ್ವಚ್ಛೆ ಮಾಡಿ, ಒಲಿ ಹೂಡ್ತಾರ. ಒಣಗಿದ ದಂಟು, ಗಿಡದ ಟೊಂಗ್ಯ ಒಟ್ಟುಗೂಡಿ, ಅದರೊಳಗ ಕೆಂಡ ಬರೂಹಂಗ ಮಾಡ್ತಾರ. ಇದರೊಳಗ ಈ ಸೀತನಿಯನ್ನು ತಂದು ಸುಡ್ತಾರ. ಜೊತಿಗೆ ಕಡ್ಲಿಗಿಡಾನೂ ಇಟ್ಟಿರ್ತಾರ. ಈ ಎರಡೂ ಕಾಳುಗಳನ್ನು ಸುಡುಮುಂದ ಹಸಿವಾಸನಿ ಮೂಗಿಗೆ ಅಡರ್ತದ. ಮೂಗಿನ ಹೊರಳೆಗಳೆರಡೂ ಬಿಗಿಯಪ್ಪುವ ಹಂಗ ಅದನ್ನು ಆಘ್ರಾಣಿಸಬೇಕು.

ಸೀತನಿ ಸುಟ್ಟು ತಿನ್ನುವ ಸಂಭ್ರಮ
ಸೀತನಿ ಸುಟ್ಟು ತಿನ್ನುವ ಸಂಭ್ರಮ

ಹೊಲದ ಕೆಲಸ ಮಾಡಿ, ಅಂಗೈ ತುಂಬೆಲ್ಲ ಗೆರೆ ಮೂಡಿಸಿಕೊಂಡೋರು, ಈ ಒಲಿಯ ಸುತ್ತ ಕುಂದರ್ತಾರ. ಮುತ್ತಿನಗೊಂಚಲಿನಂಥ ತೆನಿಯಿಂದ ಕಾಳು ಬಿಡಸೂದು ಇವರಿಗಷ್ಟೆ ಗೊತ್ತು. ದುಡಿದುಡಿದು ಕೈ ಜಡ್ಡು ಬಿದ್ದಿರೂದ್ರಿಂದ ಸುಡೂದು ಇವರಿಗೆ ತಿಳಿಯೂದೆ ಇಲ್ಲ. ಕಾಳುಗಳನ್ನು ಬಿಡಿಸಿ, ಬಿಡಿಸಿ ಗಂಗಾಳದಾಗ ಹಾಕ್ತಾರ.

ಈ ಗಂಗಾಳದಿಂದ ಇವು ತಿನ್ನೋರ ಗಂಗಾಳಿಗೆ ಬರ್ತಾವ. ಇದರೊಳಗ ಆಗಲೇ ಸೀತನಿ ಜೊತಿಗೆ ನಂಜಿಕೊಳ್ಳಾಕಂತ ಸೇಂಗಾದ ಹಿಂಡಿ, ಹುರದಿಟ್ಟ ಸೇಂಗಾ, ಬೆಲ್ಲ, ಹಿಂಗ ಜೊತಿಗೂಡಿರ್ತಾವ. ಸೀತನಿ ಬಿಡಸೂದ್ರೊಳಗ ನಮ್ಮ ಸುಲಗಾಯಿನೂ ಒಂದು ಹದದೊಳಗ ಸುಟ್ಟಿರ್ತಾವ. ಹಸಿರು ಬಣ್ಣ ಮಸಿ ಬಳ್ಕೊಂಡಿರ್ತದ. ಈ ಕಾಳಿಗೆ ಬೀದರ್‌ನಾಗ ‘ವವಾಳಿ’ ಅಂತಾರ.

ಕಡಲಿಕಾಳಿನ ಹಾಲೆಲ್ಲ ಒಂದು ಮಂದ ರುಚಿಗೆ ಬಂದಿರ್ತದ. ಅದನ್ನು ತಿನ್ನೂ ಮಜಾ ತಿಂದೋರಿಗೆ ಗೊತ್ತು. ಹಿಂಗ ಹುರದ ಕಾಳನ್ನೆಲ್ಲ ಬಿಡಿಸಿ, ಬಿಸಿ ಇದ್ದಾಗಲೇ ಒಂದಷ್ಟು ತುಪ್ಪ, ಉಪ್ಪು ಹಾಕಿ ಕಲಿಸಿ ಕೊಟ್ರಂದ್ರ, ಒಳಗಿನ ಕಾಳಿಗಿಂತ ಈ ಸಿಪ್ಪಿನ್ನ ಬಾಯಾಗಿಟ್ಕೊಂಡು ಸುಲಿಯೂ ಮಜಾನೆ ಬ್ಯಾರೆ.ತುಪ್ಪ, ಉಪ್ಪು ಮತ್ತು ಕಡಲಿಕಾಳು. ಮಸ್ತ್‌ ರುಚಿ.

ಯಾವಾಗ ಎಳ್ಳಮವಾಸಿ ಹತ್ರ ಬರ್ತದ.. ಹಂಗ ಜೋಳದ ತೆನಿ ಬಲೀತಾವ. ಆಗ ಭೂಮಿಗೆ ಸೀಮಂತದ ಸಂಭ್ರಮ ಶುರು ಆಗ್ತದ. ಬಯಕಿ ಊಟ ಮಾಡೂದೆ ಒಂದು ಸಡಗರ. ಸಜ್ಜಿರೊಟ್ಟಿ, ಖಟಿ ರೊಟ್ಟಿ, ಸೇಂಗಾ ಹಿಂಡಿ, ಗುರೆಳ್ಳು, ಅಗಸಿ, ಪುಠಾಣಿ ಹಿಂಡಿ, ಹಿಟ್ಟಿನ ಪಲ್ಯ (ಝುಣಕಾ), ಮೊಳಕಿ ಕಾಳಿನ ಉಸುಳಿ, ಕಲ್ಹೂವಿನಂಥ ಮೊಸರು, ಎಣ್ಣಿಗಾಯಿ, ಹುರದ ಸೇಂಗಾ, ಜೋಳದ ಬಾನ, ಚಿತ್ರಾನ್ನ, ಭುತ್ತಿ, ಸೇಂಗಾದ ಹೋಳಿಗಿ, ಮಾದ್ಲಿ, ತುಪ್ಪ, ಕರಜಿಕಾಯಿ ಎಲ್ಲಾನೂ ಇರ್ತಾವ.

ಇವನ್ನು ತೊಗೊಂಡು ಹೊಲಕ್ಕ ಹೋಗಿ, ಹೊಲದಾನ ಬನ್ನಿ ಗಿಡದ ಕೆಳಗ ಪೂಜಾ ಮಾಡ್ತಾರ. ಐದು ಕಲ್ಲು ಕೂರಿಸಿ, ಪಾಂಡವರಂತಲೂ, ಮರದ ಹಿಂದ ಒಂದು ಕಲ್ಲು ಕೂರಿಸಿ, ಕರ್ಣ ಅಂತಲೂ ನೈವೇದ್ಯ ಹಿಡೀತಾರ. ಇದೇ ನೈವೇದ್ಯ ಒಂದು ಗಡಗಿಯೊಳಗ ಹಾಕಿ, ಚಂದಗೆ ಕಲಿಸಿ, ಚರಗ ಚಲ್ತಾರ.

ಚರಗ ಚಲ್ಲೂದಂದ್ರ ಬಸಿರಾದ ಭೂಮಿಯ ಬಯಕಿ ತೀರಿಸೂದು. ಹಿಂಗ ಚರಗ ಚಲ್ಲೂಮುಂದ ‘ಹುಲ್ಲುಹುಲ್ಲಿಗೂ’ ಅಂತ ಚೀರಿದ್ರ, ಅವರ ಹಿಂದ ಇರೋರು, ಚಲ್ಲಂಬರಿಯೋ ಅಂತ ಚೀರ್ತಾರ. ಹಿಂಗ ಹೊಲದ ತುಂಬೆಲ್ಲ ಓಡಾಡಿ, ಚರಗ ಚಲ್ಲಿ, ಪ್ರತಿಹುಲ್ಲಿಗೂ ಅನ್ನದಗುಳು ಸಿಗೂಹಂಗ ಮಾಡ್ತಾರ.

ಹೊಲದಲ್ಲಿ ಚರಗ ಚೆಲ್ಲುವ ಸಂಭ್ರಮ
ಹೊಲದಲ್ಲಿ ಚರಗ ಚೆಲ್ಲುವ ಸಂಭ್ರಮ

ಎಳ್ಳಾಮಾಸಿ ಖಾದ್ಯಗಳು ಇಲ್ಲಿಗೇ ಮುಗಿಯೂದಿಲ್ಲ. ಬೀದರ್‌, ಕಲಬುರ್ಗಿಯೊಳಗ ಬಜ್ಜಿ ಅಂತ ಮಾಡ್ತಾರ. ಎಳೀ ಕಾಳುಗಳನ್ನು ಸೋಸಿ, ಎಲ್ಲ ಬಗೆಯ ಸೊಪ್ಪುಗಳನ್ನು ಕೊಚ್ಚಿ, ಹೋಳು ತರಕಾರಿಯನ್ನು ಹೆಚ್ಚಿ, ಹೊಸ ಹುಣಸೀಕಾಯಿಯನ್ನು ಅರೆದು, ಕಡಲಿಹಿಟ್ಟಿನ ಜೊತಿಗೆ ಬೆರೆಸಿ ಮಾಡುವ ಪಲ್ಯ ಇದು.

ಅಲಸಂದಿಕಾಳು, ಮೆಟಗಿಕಾಳು, ಕಡಲಿಕಾಳು, ಹುರುಳಿಕಾಳು, ತೊಗರಿಕಾಳು, ಸಬ್ಬಸಿಗೆ ಸೊಪ್ಪು,‍ಪಾಲಕ್‌, ಹಸಿ ಈರುಳ್ಳಿ, ಮೆಂತ್ಯ ಮುಂತಾದವನ್ನೆಲ್ಲ ಹೆಚ್ಚಿ, ಕೊಚ್ಚಿ ಸಣ್ಣದಾಗಿಸುತ್ತಾರೆ. ಕ್ಯಾರೆಟ್ಟು, ಸೌತೆಕಾಯಿ, ಸೋರೆಕಾಯಿ, ಕುಂಬಳಕಾಯಿ, ಬೀನ್ಸು ಇವೆಲ್ಲವನ್ನೂ ಹೆಚ್ಚಿರ್ತಾರ. ಇವನ್ನೆಲ್ಲ ಬಾಡಿಸಿ, ಕಾಳು ಬೇಯಿಸಿಕೊಂಡು, ಅರೆದಿಟ್ಟ ಹುಣಸೀಕಾಯಿ ಹಾಕಿ, ಬೇಯಿಸ್ಕೊಂತ ಕಡಲಿಹಿಟ್ಟು ಹಾಕ್ಬೇಕು. ಈ ಬಜ್ಜಿಯನ್ನು ರೊಟ್ಟಿ ಜೊತಿಗೆ ಮೆಲ್ಲುವುದೇ ಒಂದು ಮಜ.

ಹೊಲ ಇದ್ದೋರು ಬಂಧು, ಬಳಗ, ಸ್ನೇಹಿತರನ್ನು ಕರೆದು, ಊಟಕ್ಕ ಕೊಡ್ತಾರ. ಅದೆಷ್ಟು ಮಂದಿ ಹೊಲದಾಗ ಕೈ ತೊಳಿತಾರೋ, ಕಣಜ ಅಷ್ಟು ತುಂಬ್ತದ ಅನ್ನೂದೊಂದು ಮಾತದ. ಕಷ್ಟ ಕಡಿಮಿ ಆಗ್ತಾವ ಅಂತನೂ ನಂಬ್ತಾರ. ಊರು ಮಂದಿಯೆಲ್ಲ ಬಳಗ ಆದ್ಮೇಲೆ ಕಷ್ಟ ಕೊಡೋರರೆ ಯಾರು? ಇಂಥದ್ದೊಂದು ನಂಬಿಕಿನೂ ಇರಬಹುದು.

ಚರಗ ಚಲ್ಲಿದ ಮ್ಯಾಲೆ ಅದೇ ಬನ್ನಿ ಮರದ ನೆರಳಿನಾಗ ಕುಂತು ಎಲ್ಲಾರೂ ಪಂಕ್ತಿ ಭೋಜನ ಮಾಡ್ತಾರ. ಮೊದಲ ಪಂಕ್ತಿ ಮಾವಂದು. ಅಂದ್ರ ಮನಿಯ ಹಿರಿಯರದ್ದು. ಅವರ ಜೊತಿಗೆ ಮಕ್ಕಳದ್ದು. ಆಮೇಲೆ ಮನಿ ಹೆಣ್ಮಕ್ಕಳದ್ದು. ಕೊನಿ ಪಂಕ್ತಿ ಅತ್ತೀದು. ಹಿಂಗ ಎಷ್ಟ ಪಂಕ್ತಿ ಇದ್ರೂ ಮಾವನೊಟ್ಟಿಗೆ ಕುಂತು, ಅತ್ತಿಜೊತಿಗೆ ಊಟ ಮುಗಿಸೋರು ಭಾಳ ಮಂದಿ ಅದಾರ. ಉಣ್ಣೂದಂದ್ರ ಬರೇ ಉಣ್ಣೂದಲ್ಲ ಅವೊತ್ತು. ಪರಸ್ಪರ ನಗಿಚಾಟಕಿ ಮಾಡ್ಕೊಂತ, ಯಾರು ಏನು ಮಾಡಿದ್ರೂ ಅದನ್ನು ಹೊಗಳ್ಕೊಂತ ಉಣ್ಬೇಕು. ಅದೇ ಪದ್ಧತಿ. ಅವೊತ್ತು ಯಾವುದಕ್ಕೂ ಅಪಸ್ವರ ತಗಿಯೂಹಂಗಿಲ್ಲ.

ಇಂಥ ಒಗ್ಗೂಡಿ ಊಟ ಮಾಡುವ ಯೆಳ್ಳಾಮಾಸಿಗೆ ಹೊಲ ಇರಲಿಲ್ಲಂದ್ರ... ಗಾಬರಿಯಾಗಬ್ಯಾಡ್ರಿ, ಊರು ಬಿಟ್ಟು ನಗರ ಸೇರಿದವರು, ಉದ್ಯಾನವನ ಹುಡುಕಿಕೊಂಡು ಹೋಗ್ತಾರ. ತಾವೇ ಬುತ್ತಿ ಕಟ್ಕೊಂಡು, ಯಾರದರೆ ಹೊಲಕ್ಕೂ ಹೊಂಟೇ ಬಿಡ್ತಾರ. ಯಾರ ಹೊಲದ ಅಂಗಳದಾಗ ಕುಂತ್ರೂ ಯಾರೂ ಏನು ಅನ್ನೂದಿಲ್ಲ.

ಹಿಂಗ ಎಳ್ಳಾಮಾಸಿ ಮುಗಿಯೂದ್ರೊಳಗ... ಎಳ್ಳಿನಷ್ಟೇ ಬಿಸಿಲು ಶುರುವಾಗ್ತದ. ಚಳಿ ಹಿಂದಕ ಸರೀತದ. ಸೀತನಿ ಸುಲಗಾಯಿಯಿಂದ ಶುರುವಾದ ಹೊಲದ ಹಬ್ಬ, ಸಂಕ್ರಾಂತಿಗೆ ಕೊನಿಗೊಳ್ತದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT