ಭಾನುವಾರ, ಸೆಪ್ಟೆಂಬರ್ 26, 2021
21 °C
ಜಾಗೃತ ನಡೆ

ಹೊಸ ಮನ್ವಂತರಕ್ಕೆ ನಾಂದಿ ಈ ಮದುವೆ

ಸುಬ್ರಮಣ್ಯ ಎಚ್.ಎಂ. Updated:

ಅಕ್ಷರ ಗಾತ್ರ : | |

ನವ ಜೋಡಿಯ ಪಿಸುಮಾತು  ಚಿತ್ರಗಳು: ಭರತ ಕುಂದಕೂರು

ಯಾವಾಗಲೂ ಸಭೆ, ಕಾರ್ಯಾಗಾರ, ತರಬೇತಿ ನಡೆಯುತ್ತಿದ್ದ ಕುಷ್ಟಗಿಯ ವಿಮುಕ್ತಿ ದೇವದಾಸಿ ಮಹಿಳಾ ವೇದಿಕೆಯ ಕಚೇರಿಯಲ್ಲಿ ಅಂದು ದಿಬ್ಬಣದ ಸಂಭ್ರಮ. ಅಲ್ಲಿದ್ದ ಅರಿಸಿನ, ಕುಂಕುಮ, ಹೂವು, ಬಾಳೆ, ಬಾಸಿಂಗ, ಪೇಟ, ವಧು–ವರರ ದಿರಿಸು ಆ ಸಂಭ್ರಮವನ್ನು ಸಾಕ್ಷೀಕರಿಸುತ್ತಿದ್ದವು.

ಒಂದೆಡೆ ಖಡಕ್ ರೊಟ್ಟಿಗಳ ರಾಶಿ ಬಿದ್ದಿದ್ದರೆ, ಇನ್ನೊಂದೆಡೆ ಅಡುಗೆ ಸಿದ್ಧಪಡಿಸುವ ಗಡಿಬಿಡಿ. ಮದುವೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ದೇವದಾಸಿಯರ ಮುಖದಲ್ಲಿ ಅದೆಂತಹ ಸಂಭ್ರಮ ಅಂತೀರಿ. ಹೌದು, ಹೊಸ ಸಾಮಾಜಿಕ ಮನ್ವಂತರಕ್ಕೆ ಒಡ್ಡಿಕೊಳ್ಳುವ ಕಾತರದ ಕ್ಷಣವದು!

(ನವ ಜೋಡಿ ಪಿಸುಮಾತು​)

ಅದು ಸಾಮಾನ್ಯ ದಿಬ್ಬಣವಲ್ಲ. ದೇವದಾಸಿಯರ ಮಕ್ಕಳ ಸಾಮೂಹಿಕ ವಿವಾಹ ಮಹೋತ್ಸವದ ಐತಿಹಾಸಿಕ ಗಳಿಗೆ. ತಮ್ಮ ಮಕ್ಕಳಿಗೆ ವಿವಾಹ ಭಾಗ್ಯ ದೊರೆಯುತ್ತಿರುವುದು ಆ ತಾಯಂದಿರ ಸಂಭ್ರಮಕ್ಕೆ ಮೇರೆಯೇ ಇಲ್ಲದಂತೆ ಮಾಡಿತ್ತು.

ತಾಲ್ಲೂಕು ಕ್ರೀಡಾಂಗಣ ಇವರ ಸಾಮೂಹಿಕ ವಿವಾಹಕ್ಕೆ ಸಜ್ಜಾಗಿದ್ದರೆ, ಆ ವಿವಾಹಕ್ಕೆ ಮುನ್ನ ಕಚೇರಿಯೊಳಗೆ ವಿವಿಧ ಪೂಜಾ ವಿಧಿವಿಧಾನಗಳು ನಡೆಯುತ್ತಿದ್ದವು. ಜಾತಿ, ಮತ ಭೇದವಿಲ್ಲದೆ ಹಲವರು ಉದಾರ ಮನಸ್ಸಿನಿಂದ ನೀಡಿದ ಅಕ್ಕಿ, ಬೇಳೆಯನ್ನು ಶುದ್ಧೀಕರಿಸುತ್ತಿದ್ದ ದೇವದಾಸಿ ತಾಯಂದಿರಾದ ದೋಟಿಹಾಳದ ಹನುಮವ್ವ, ಕಲಕೇರಿ ಲಕ್ಷ್ಮವ್ವ, ಸೇಬನಕಟ್ಟೆ ಕೆಂಚವ್ವ, ದೊಡ್ಡೇಗುಡ್ಡ ದುಗ್ಗವ್ವ ಲಗುಬಗೆಯಿಂದ ಕೆಲಸದಲ್ಲಿ ಮಗ್ನರಾಗಿದ್ದರು.

(ಮದುವೆ ಶಾಸ್ತ್ರ)

ಕಾಲು ಊನವಾಗಿದ್ದರೂ ಲೆಕ್ಕಿಸದೆ ಲಕ್ಷ್ಮವ್ವ ಮದುವೆಗಾಗಿ ತಿಂಗಳಿಂದ ಹಣ, ಬೇಳೆಕಾಳುಗಳ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದರು. ‘ಇದಾ ನೋಡ್ರಿ ನಿಜವಾದ ಹಬ್ಬ. ನೂರಾರು ಮಂದಿ ದೇವದಾಸಿಯರು‌ ಹಗಲು– ರಾತ್ರಿ ಊರೂರು ಸುತ್ತಿ ದವಸ– ಧಾನ್ಯ ತಂದಾರ್‌ರೀ... ಕೈಲಾದ ರೊಕ್ಕ ಕೊಟ್ಟು, ಉಪಕಾರ ಮಾಡ್ಯಾರ. ಮದಿವೀಗೆ ತಯಾರಾದ್‌ ಮೂವತ್‌ ಜೋಡಿ ನಮ್ ಕೂಸುಗೋಳು ಅಂತನ ಅನಕೊಂಡೇವ್ರಿ...’ ಎನ್ನುತ್ತಿದ್ದಾಗ ಅವರ ಮುಖದ ಮೇಲೆ ಸಂತಸ ಮಿಂಚಿ ಹೋಯಿತು.

ಎಂ. ಗುಡ್ಡದೂರಿನ ಅನಾಥ ಯುವಕ ಮಲ್ಲಪ್ಪನಿಗೂ ಕಂಕಣಭಾಗ್ಯ ಕೂಡಿ ಬಂದಿತ್ತು. ಊರು ದುಗ್ಗವ್ವನ ಗುಡಿ ಪೂಜಾರಿಕೆಯೇ ಅವರ ಜೀವನಾಧಾರ. ದೇವದಾಸಿಯಾದ ತಾಯಿ ಅನಾರೋಗ್ಯದಿಂದ ತೀರಿ ಹೋಗಿ ವರ್ಷಗಳೇ ಕಳೆದಿವೆ. ಊರಿನ ಜನರೇ ಅವರಿಗೆ ಬಂಧು–ಬಳಗ.

(ನವ ಜೋಡಿಗಳು)

ಹೊಂಗೆಸೊಪ್ಪಿನ ಚಪ್ಪರದ ಕೆಳಗೆ ಮದುಮಗನಿಗೆ ಹಾಲುಗಂಬದ ಶಾಸ್ತ್ರ ನಡೆಯುತ್ತಿದ್ದರೆ, ಮನೆ ಮುಂಭಾಗದ ಬೇವಿನ ಮರದ ಕೆಳಗೆ ನೆರೆದಿದ್ದ ಹೆಂಗಳೆಯರ ಸೋಬಾನೆ ಪದಗಳ ಇಂಪು ಓಣಿ ತುಂಬೆಲ್ಲಾ ಪಸರಿಸಿ ಸಂತೋಷ ಇಮ್ಮಡಿಗೊಳಿಸಿತ್ತು.

ಅದೇ ಊರಿನ ಪಕ್ಕದ ಓಣಿಯ ಉಷ್ಣವ್ವ ಮರೆಯಪ್ಪ ಅವರ ಮನೆಯಲ್ಲೂ ಸಂಭ್ರಮ. ಬಡತನ, ನೋವಿನಲ್ಲೂ ಸಂತೋಷದ ಕೊರತೆ ಇರದಂತೆ ಮಗನ ಮದುವೆಗೆ ಸಿದ್ಧತೆ ನಡೆಸಿದ್ದರು. ಮೈತುಂಬಾ ಅರಿಸಿನ ಹಂಚಿಕೊಂಡಿದ್ದ ವರ, ಒರಳುಕಲ್ಲು, ನೊಗ, ಹಾಲುಗಂಬಕ್ಕೆ ಪೂಜೆ ಮಾಡುತ್ತಿದ್ದರೆ, ಪಕ್ಕದಲ್ಲೇ ನಿಂತಿದ್ದ ಸ್ನೇಹಿತರು ಕೀಟಲೆ ಮಾಡುತ್ತಿದ್ದರು.

(ಒರಳು, ಬಿಸುವ ಕಲ್ಲು ಪೂಜೆ)

ಸಮೀಪದ ವಣಗೇರಿ ಗ್ರಾಮದ ಮಾದರ ಓಣಿಯ ನಾಗವ್ವನ ಮನೆಯಲ್ಲಿ ವಧು ಪೂಜೆ. ಮುಸ್ಸಂಜೆಯಲ್ಲಿ ಚಪ್ಪರದ ಕೆಳಗೆ ಕುಳಿತಿದ್ದ ಬಳೆಗಾರ ನಾಜೂಕಾಗಿ ವಧುವಿನ ಕೈಗೆ ಬಳೆ ತೊಡಿಸುತ್ತಿದ್ದ.

ಕೈಬಳೆ ಸದ್ದು ಮನೆ ತುಂಬಾ ರಂಗು ತುಂಬಿತ್ತು. ಚೆಲುವು ತುಂಬಿಕೊಂಡಿದ್ದ ಮದುವಣಗಿತ್ತಿ ಮೆಹಂದಿ ಹಚ್ಚಿಕೊಂಡು ನಡುಮನೆ ಗೋಡೆಗೆ ಒರಗಿ ನಾಚಿಕೆಯಿಂದ ತಲೆತಗ್ಗಿಸಿ ನಿಂತಿದ್ದಳು. ಇತ್ತ ತಾಯಿ ನಾಗವ್ವ ಸಂತೃಪ್ತಿಯಲ್ಲಿ ಮಿಂದೆದ್ದ ಮುಖಭಾವ ಹೊತ್ತು, ನೆಂಟರಿಷ್ಟರ ಕ್ಷೇಮ ಸಮಾಚಾರದಲ್ಲಿ ತೊಡಗಿದ್ದರು. ‘ನಮ್‌ ಬಾಳಂತೂ ಹಾಳಾತ್ ನೋಡ್ರೀ... ಅದ್ಕಾ ಮಗಳಿಗೆ ಕಾಲೇಜ್‌ ಮಟ ಓದ್ಸೀನಿ. ನಮ್ ಬಾಳು ಅವರಿಗೆ ಬರಬಾರ್ದುರೀ...’ ಎಂದು ಕಣ್ಣಂಚಿನಲ್ಲಿ ತುಳುಕಿದ ಹನಿಯೊಂದನ್ನು ಒರೆಸಿಕೊಂಡರು.

(ಕಾರ್ಯಕ್ರಮಕ್ಕೆ ಸಾಕ್ಷಿಯಾದ ಜನಸ್ತೋಮ)

ದೇವದಾಸಿಯರ ಮಕ್ಕಳ ಸಾಮೂಹಿಕ ವಿವಾಹಕ್ಕೆ ಹದಿನಾಲ್ಕು ಜಿಲ್ಲೆಗಳ ಹೋರಾಟದ ಸಂಗಾತಿಗಳು, ಸಂಘ– ಸಂಸ್ಥೆಗಳ ಪ್ರತಿನಿಧಿಗಳು, ಅಪಾರ ಸಂಖ್ಯೆಯ ಸಾರ್ವಜನಿಕರು, ಮಾಧ್ಯಮದವರು ಸಾಕ್ಷಿಯಾಗಿದ್ದರು. ಕೊಪ್ಪಳ, ಕಲಬುರ್ಗಿ, ಬೆಳಗಾವಿ, ರಾಯಚೂರು, ವಿಜಯಪುರ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಭಾಗಗಳಿಂದ ಮೂವತ್ತು ಜೋಡಿ ಸಾಮೂಹಿಕ ವಿವಾಹದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟರು.

ವಧು– ವರರಲ್ಲಿ ಕೆಲವರು ಈ ಪದ್ಧತಿಗೆ ಒಳಗಾದ ತಾಯಂದಿರ ಮಕ್ಕಳಾದರೆ, ಇನ್ನು ಕೆಲವರು ಈ ಪದ್ಧತಿಯಿಂದ ಹೊರಗುಳಿದವರ ಮಕ್ಕಳು. ವಧು– ವರರ ಸ್ವಾಭಿಮಾನದೊಂದಿಗೆ ದಂಪತಿಯಾಗುವ ಮೂಲಕ ಅನಿಷ್ಟ ಪದ್ಧತಿ ಧಿಕ್ಕರಿಸುವ ದೀಕ್ಷೆ ತೊಟ್ಟರು. ತಮಗಾದ ಅನ್ಯಾಯ, ಶತಮಾನಗಳ ಶೋಷಣೆ, ಕೀಳರಿಮೆಯಿಂದ ಹೊರಬರಲು ಸಾಮೂಹಿಕ ವಿವಾಹ ಎಂಬ ಕಿರುಕಿಂಡಿಯ ಹೊಂಬೆಳಕು ತಮ್ಮ ಮಕ್ಕಳ ಬದುಕಿನಲ್ಲಿ ಹಾದು ಹೋದ ಕ್ಷಣ ಆ ತಾಯಂದಿರ ಕಣ್ಣಿನಲ್ಲಿ ಹೊಳಪು ಮೂಡಿಸಿತು.

(ಅರಿಶಿಣದ ಶಾಸ್ತ್ರ)

‘ಸಮಾಜದಲ್ಲಿ ದೇವದಾಸಿಯರು ಎಂದರೆ ಕೀಳಾಗಿ ಭಾವಿಸುವವರೇ ಹೆಚ್ಚು. ಇಂತಹ ಹೊತ್ತಿನಲ್ಲಿ ಅವರ ಮಕ್ಕಳ ಮದುವೆ ಮಾತು ಅಂದರೆ ಸವಾಲಿನ ಸಂಗತಿಯೇ ಸರಿ’ ಎಂದರು ಮದುವೆಗೆ ಸಾಕ್ಷಿಯಾದ ವಿಮುಕ್ತಿ ದೇವದಾಸಿ ಮಹಿಳಾ ವೇದಿಕೆ‌ ಅಧ್ಯಕ್ಷೆ ಪಡಿಯಮ್ಮ.

ಮಕ್ಕಳ ಮದುವೆಗೆ ‍ಪಡಿಪಾಟಲು ಪಡುವ ತಾಯಂದಿರ ಕಷ್ಟ, ಒಡಲ ಸಂಕಷ್ಟ ಅನುಭವಿಸುವವರಿಗಷ್ಟೆ ಗೊತ್ತು. ಎಲ್ಲರಂತೆ ಬಾಳ್ವೆ ನಡೆಸಲಾಗದ ವ್ಯವಸ್ಥೆಯ ಸಂಚು, ಸಮಾಜದ ತುಚ್ಛ ನೋಟಕ್ಕೆ ಉತ್ತರವೇ ಈ ಸಾಮೂಹಿಕ ವಿವಾಹ ಎಂಬ ಅವರ ಮಾತು ಸಮುದಾಯದ ಜಾಗೃತ ಪ್ರಜ್ಞೆಗೆ ಸಾಕ್ಷಿಯಂತೆ ಇತ್ತು.

(ವಧು – ವರನ ಅರಿಶಿಣದ ಶಾಸ್ತ್ರ)

ಮೊದಲ ದಿಟ್ಟ ಹೆಜ್ಜೆ

‘ದೇವದಾಸಿ ಪದ್ಧತಿ ಕೈಬಿಡಿ’ ಎನ್ನುವುದಾದರೆ ಅವರ ಬದುಕಿನ ಬದಲಾವಣೆಗೆ ಕಾರ್ಯಸಾಧನೆಗಳು ಸಾಕಾಗಿಲ್ಲ. ಕೇವಲ ವಿಚಾರ ಹೇಳುತ್ತೇವೆ, ಖಂಡಿಸುತ್ತೇವೆ. ಆದರೆ, ಅವರ ಒಡಲಾಳದ ಸಮಸ್ಯೆ, ಹಸಿವು ಕುರಿತು ಚರ್ಚೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ದೇವದಾಸಿಯರ ಮಕ್ಕಳ ಸಾಮೂಹಿಕ ವಿವಾಹ ಇತಿಹಾಸದಲ್ಲಿಯೇ‌ ಪ್ರಥಮ ಪ್ರಯತ್ನ. ಸಮುದಾಯದಿಂದಲೇ ಜಾಗೃತಿ ಆರಂಭವಾಗಿದ್ದು, ಈ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಇದು ಮೊದಲ ದಿಟ್ಟಹೆಜ್ಜೆ’ ಎಂಬುದು ಪಿ.ಯು.ಸಿ.ಎಲ್ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ವೈ.ಜೆ. ರಾಜೇಂದ್ರ ಅವರ ವಿಶ್ಲೇಷಣೆ.

(ಕಬಡ್ಡಿಪಟು ಮೌನೇಶ – ರೇಣುಕಾ ಜೋಡಿ)

‘ಕಾನೂನು ಕಾಗದದಲ್ಲೇ ಉಳಿದಿದ್ದು, ತೆರೆಮರೆಯಲ್ಲಿ ಈ ಮೌಢ್ಯ ಈಗಲೂ ಮುಂದುವರಿದಿದೆ. ವೈಚಾರಿಕ ಶಿಕ್ಷಣ ಸಿಗದ ಹೊರತು ಈ ಪದ್ಧತಿಯಿಂದ ಹೊರಬರಲು ಸಾಧ್ಯವಿಲ್ಲ’ ಎನ್ನುತ್ತಾರೆ ವಿಮುಕ್ತಿ ದೇವದಾಸಿ ಮಹಿಳಾ ವೇದಿಕೆ ಸಲಹೆಗಾರ ದಾನಪ್ಪ ಮಸ್ಕಿ ಹಾಗೂ ಕವಿ ಡಾ.ವಡ್ಡಗೆರೆ ನಾಗರಾಜಯ್ಯ.

‘ದೇವದಾಸಿ ಪದ್ಧತಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಈ ಮದುವೆ ಹೊಸ ಸಂಚಲನ ಸೃಷ್ಟಿಸಿದೆ. ಯಾವುದೇ ಅಳುಕಿಲ್ಲದೆ ಬದುಕಲು ಇದು ಪ್ರೇರಣೆಯಾಗಿದೆ’ ಎಂದು ಅವರು ಸಂಭ್ರಮಿಸುತ್ತಾರೆ.

(ವಧು – ವರರನ್ನು ಆಶೀರ್ವದಿಸಿದ ವಿಮುಕ್ತಿ ದೇವದಾಸಿ ಮಹಿಳಾ ವೇದಿಕೆ ಅಧ್ಯಕ್ಷೆ ಪಡಿಯಮ್ಮ)

ಮು‌ನ್ನೆಲೆಗೆ ಬಂದ ಆಸ್ತಿತ್ವದ ಪ್ರಶ್ನೆ

ಈ ವಿವಾಹದ ಮೂಲಕ ದೇವದಾಸಿ ತಾಯಂದಿರ ಮಕ್ಕಳೆಲ್ಲಾ ‌ಒಂದೇ ಎನ್ನುವ ಭಾವನೆ ಮೂಡಿಸಿದೆ. ಸ್ವಾಭಿಮಾನ ಜಾಗೃತಗೊಂಡು ಆಸ್ತಿತ್ವದ ಪ್ರಶ್ನೆ ಮುನ್ನೆಲೆಗೆ ಬಂದಿದೆ. ರಾಜ್ಯ ಸರ್ಕಾರ ಕೂಡ ಕಳೆದ ಬಜೆಟ್‌ನಲ್ಲಿ ದೇವದಾಸಿಯ ಮಗಳನ್ನು ವಿವಾಹವಾದರೆ ₹ 5 ಲಕ್ಷ, ಮಗನನ್ನು ವರಿಸಿದರೆ ₹ 3 ಲಕ್ಷ ಘೋಷಣೆ ಮಾಡಿದೆ. ಆರ್ಥಿಕ ನೆರವಿನಿಂದ ಈ ಪದ್ಧತಿ ಮೀರುವ ಪ್ರಯತ್ನ ನಡೆಯಬೇಕಿದೆ’ ಎಂದು ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯ ತಳಸಮುದಾಯಗಳ ಅಧ್ಯಯನ ಕೇಂದ್ರದ ಡಾ.ಆರ್.ವಿ. ಚಂದ್ರಶೇಖರ್, ಪ್ರೊ.ಪ್ರದೀಪ್‌ ರಮಾವತ್ ಪ್ರತಿಪಾದಿಸುತ್ತಾರೆ.

(ಮದುವೆ ಶಾಸ್ತ್ರ)

ದೇವದಾಸಿಯರ ಬದುಕಿಗೆ ಹೊಸ ದಿಕ್ಕು ತೋರುವ ಈ ಸಮಾರಂಭದ ಹಿಂದೆ ದೇವದಾಸಿಯರ ಮಕ್ಕಳಾದ ಚಂದುಲಿಂಗಾ ಕಲಾಲಬಂಡಿ, ಕೊಪ್ಪಳದ ಯಮನೂರಪ್ಪ, ಮಂಜುನಾಥ ವಿರೂಪಾಪುರ, ಮಲಿಯಮ್ಮ ಸೇರಿದಂತೆ ವಿವಿಧ ಸಮಾಜದ ಮುಖಂಡರ ಸಹಕಾರ ಮತ್ತು ಪರಿಶ್ರಮ ಅಡಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು