ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನೂರ ಮಹಾದೇವ ಬರಹ: ಈ ಶೆಟ್ಟರ ಮಂಡೆಯಲ್ಲಿ ಬುದ್ಧಿ ಉಂಟೋ

Last Updated 23 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ನಾನೀಗ ಅಷ್ಟಾಗಿ ಎಲ್ಲಿಗೂ ಹೋಗುತ್ತಿಲ್ಲ. ಆರೋಗ್ಯ ಕೈ ಕೊಡುತ್ತಿದೆ. ಆದರೂ ಇಲ್ಲಿಗೆ ಬಂದೆ. ಕಾರಣ – ರಘುರಾಮ ಶೆಟ್ಟರು ‘ಪ್ರಜಾವಾಣಿ’ಯಲ್ಲಿ ಇದ್ದಾಗಿನಿಂದಲೂ ನನಗೆ ಗೊತ್ತು. ‘ಮುಂಗಾರು’ ಪತ್ರಿಕೆ ನಡೆಸುತ್ತಿರುವಾಗಲೂ ನನಗೆ ಗೊತ್ತು. ಅವರು ಇವತ್ತು ಕಣ್ಮರೆಯಾಗುತ್ತಿರುವ ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದರು. ದಲಿತರು, ಹಿಂದುಳಿದವರು, ಹಳ್ಳಿಗರು, ಅಸಹಾಯಕರು ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸುವಂತೆ ಆಗಬೇಕೆಂದು ತಹತಹಿಸುತ್ತಿದ್ದರು. ಇದನ್ನೇ ತಮ್ಮ ಕಾರ್ಯಕ್ಷೇತ್ರದಲ್ಲೂ ಅಳವಡಿಸಿಕೊಂಡಿದ್ದ ವಡ್ಡರ್ಸೆಯವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮುದಾಯಕ್ಕೆ ಸೇರಿದವರು. ಈಗ ಅವರು ಇಲ್ಲ. ಬಂಟರೂ ನೆನಪಿಸಿಕೊಳ್ಳುತ್ತಿಲ್ಲ, ಶೆಟ್ಟರು ತಮ್ಮ ಹೃದಯದಲ್ಲಿಟ್ಟುಕೊಂಡಿದ್ದ ತಳಸಮುದಾಯದವರೂ ನೆನಪಿಸಿಕೊಳ್ಳುತ್ತಿಲ್ಲ. ಈ ಸಂಕಟಕ್ಕಾಗಿ ಬಂದೆ.

ವಡ್ಡರ್ಸೆಯವರ ‘ಮುಂಗಾರು’ ಪತ್ರಿಕೆಯನ್ನು ನಾನು ಬಿಡುಗಡೆ ಮಾಡಿದ್ದೆ. ರಘುರಾಮ ಶೆಟ್ಟರು ನನ್ನನ್ನು ಬಿಡದೆ ಹೆಚ್ಚೂಕಮ್ಮಿ ಎಳೆದುಕೊಂಡೇ ಹೋಗಿ ನನ್ನಿಂದ ಬಿಡುಗಡೆ ಮಾಡಿಸಿದರು. ಅದು ನಡೆದದ್ದು 1984ರ ಸೆಪ್ಟೆಂಬರ್ 9ರಂದು. ತೇಜಸ್ವಿ ಅಧ್ಯಕ್ಷತೆ ವಹಿಸಿದ್ದರು. ಅಂತೂ ಬಿಡುಗಡೆ ಮಾಡಿದೆ. ಐದಾರು ವಾಕ್ಯಗಳನ್ನೂ ಮಾತಾಡಿದೆ. ಐದಾರು ಅಂದರೆ ಐದಾರು ವಾಕ್ಯಗಳು ಮಾತ್ರವೇ. ಅಲ್ಲಿ ಹೇಗೆ ಮಾತಾಡಿದೆನೋ ಹಾಗಾಗೇ ಈಗಲೂ ನೆನಪಿದೆ. ಬಹುಶಃ ನನ್ನ ಆ ಮಾತುಗಳ ಮೋಹಕ್ಕೆ ನಾನೇ ಒಳಗಾಗಿಬಿಟ್ಟಿದ್ದೆ ಅನ್ನಿಸುತ್ತದೆ.

ನಾನು ಅಲ್ಲಿ ಮಾತಾಡಿದ್ದು ಇಷ್ಟು: ‘ದಕ್ಷಿಣ ಕನ್ನಡ ಜಿಲ್ಲೆಯವರು ವಿದ್ಯಾವಂತರು, ಬುದ್ಧಿವಂತರು ಎಂಬ ಮಾತು ನಮ್ಮ ಕಡೆ ಪ್ರಚಲಿತವಿದೆ. ಜೊತೆಗೆ ಇದು ಭೂತಾರಾಧನೆ, ಯಕ್ಷಗಾನದ ನೆಲ. ಇಲ್ಲಿನವರಿಗೆ ರಘುರಾಮ ಶೆಟ್ಟರ ‘ಮುಂಗಾರು’ ಪತ್ರಿಕೆ ಸಾಹಸ ಹೇಗೆ ಕಾಣಿಸಬಹುದು ಎಂಬ ಕುತೂಹಲ ನನಗೆ. ನೀವು ಹೀಗೆ ಅಂದುಕೊಳ್ಳಬಹುದು: ‘ಈ ರಘುರಾಮ ಶೆಟ್ಟರ ಮಂಡೆಯಲ್ಲಿ ಬುದ್ಧಿ ಉಂಟೋ? ಈ ಬಾಲಕರನ್ನು ಕಟ್ಟಿಕೊಂಡುಬಂದು ಸಮರಕ್ಕೆ ಹೊರಟಿದ್ದಾರಲ್ಲ!’ ಅಂತ. ಆದರೆ ನೆನಪಿಡಿ - ಈ ರಘುರಾಮ ಶೆಟ್ಟಿ ಎಂಬ ವ್ಯಕ್ತಿ ನೀವು ಆರಾಧಿಸುವ ಭೂತದೈವದಂತೆ. ಈ ಬಾಲಕರು ಅಭಿಮನ್ಯುಗಳು’– ಇದಷ್ಟೇ ಅಂದು ನಾನು ಮುಂಗಾರು ಪತ್ರಿಕೆ ಬಿಡುಗಡೆ ಮಾಡಿ ಮಾತಾಡಿದ್ದು!

ನಿಜ, ಮುಂಗಾರು ಪತ್ರಿಕೆಯ ಸಂಪಾದಕ ಮಂಡಲಿಯಲ್ಲಿದ್ದ ಆ ಬಾಲಕರು ಅಭಿಮನ್ಯುಗಳೇ ಆಗಿದ್ದರು. ಅವರು ಚಕ್ರವ್ಯೂಹ ಭೇದಿಸಬಲ್ಲವರಾಗಿದ್ದರು ಕೂಡ. ಆದರೆ ಅವರು ತಮ್ಮ ಅಪಕ್ವ ಆದರ್ಶಕ್ಕೆ ಬಲಿಯಾಗಿ ಕೆಲವೇ ತಿಂಗಳುಗಳಲ್ಲಿ ಮುಂಗಾರುವಿನಿಂದಲೇ ನಿರ್ಗಮನರಾದರು. ಇದನ್ನೆಲ್ಲಾ ನೋಡಿದಾಗ ಅನ್ನಿಸಿತು- ಆ ಬಾಲಕರು ಚಕ್ರವ್ಯೂಹ ಭೇದಿಸಬಲ್ಲವರಾಗಿದ್ದರು, ನಿಜ. ಆದರೆ ಚಕ್ರವ್ಯೂಹವನ್ನು ಸದೆಬಡಿದು ಹೊರಬಂದು ಯುದ್ಧ ಗೆಲ್ಲುವುದು ಗೊತ್ತಿರಲಿಲ್ಲ. ಹುಲಿಯಂತಾಡುವುದು ಗೊತ್ತಿತ್ತು. ಬೆಕ್ಕಿನಂತೆ ಮರ ಹತ್ತಿ ಉಳಿಯುವುದು ಗೊತ್ತಿರಲಿಲ್ಲ. ಬಹುಶಃ ಈಗ ಆ ಮಾಜಿ ಬಾಲಕರಿಗೂ ಹೀಗೇ ಅನ್ನಿಸುತ್ತಿರಬಹುದು.

ಈ ಎಲ್ಲಾ ಆಗಿ ಮುಂಗಾರು ಪತ್ರಿಕೆಯಿಂದ ನಿರ್ಗಮಿಸಿದ ಈ ಬಾಲಕರು ನನಗೂ ಅಚ್ಚುಮೆಚ್ಚಿನವರೇ ಆಗಿದ್ದರು. ಆಗ ತುಂಬಾ ತೊಳಲಾಟಕ್ಕೆ ಒಳಗಾದೆ. ಹೆಚ್ಚೂ ಕಮ್ಮಿ ಒಂಟಿಯಾದ ರಘುರಾಮ ಶೆಟ್ಟರ ಮನಃಸ್ಥಿತಿಯನ್ನು ಊಹಿಸಿಕೊಳ್ಳಲಾರದಾದೆ ಅಥವಾ ಅದನ್ನು ನೆನಪಿಸಿಕೊಳ್ಳಲೂ ಇಷ್ಟಪಡಲಾರೆನೇನೊ.

ಆಗ ಆದ ಒಂದು ಪ್ರಕರಣವನ್ನು ಪ್ರಸ್ತಾಪಿಸುವೆ. ಪತ್ರಿಕೆ ಆರಂಭಿಸಿದ ಕೆಲವೇ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟು ತತ್ತರಿಸುವಂತೆ ಮಾಡಿತ್ತು. ಪತ್ರಿಕೆ ಉಳಿಸಿ ನಡೆಸಲು ರಘುರಾಮ ಶೆಟ್ಟರು ಹೆಣಗಾಡತೊಡಗಿದ್ದರು. ಇದನ್ನು ಮಾಜಿ ಬಾಲಕ ದಿನೇಶ್ ಅಮಿನ್‍ ಮಟ್ಟು ಈಗ ಬಿಡುಗಡೆಯಾಗುತ್ತಿರುವ ‘ಬೇರೆಯೇ ಮಾತು’ ಪುಸ್ತಕದ ತಮ್ಮ ‘ಗುರುನಮನ’ದಲ್ಲಿ ಬರೆಯುತ್ತಾರೆ: ‘ಈ ಶೀತಲ ಸಮರ ನಡೆಯುತ್ತಿದ್ದ ದಿನಗಳಲ್ಲಿಯೇ ಒಮ್ಮೆ ವಡ್ಡರ್ಸೆಯವರು ನ್ಯೂಸ್ ಪ್ರಿಂಟ್ ಖರೀದಿ ಸಮಸ್ಯೆ ಬಗೆಹರಿಸಲು ಎಸ್.ಬಂಗಾರಪ್ಪನವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದರು. ಬಂಗಾರಪ್ಪನವರು ತಮಗೆ ಗೊತ್ತಿದ್ದ ಅಬಕಾರಿ ಉದ್ಯಮಿಯೊಬ್ಬರಿಗೆ ಫೋನ್ ಮಾಡಿ, ಒಂದು ಲಾರಿ ನ್ಯೂಸ್ ಪ್ರಿಂಟ್ ಕಳಿಸಲು ಹೇಳಿದ್ದರು. ಅದರ ಮರುದಿನದ ಮುಂಗಾರು ಪತ್ರಿಕೆಯ ಮುಖಪುಟದಲ್ಲಿ ಸೀರೆ ಉಟ್ಟು, ಬಳೆ ತೊಟ್ಟು, ಇಂದಿರಾ ಗಾಂಧಿಯವರ ಮನೆ ಮುಂದೆ ನಿಂತ ಬಂಗಾರಪ್ಪನವರ ವ್ಯಂಗ್ಯಚಿತ್ರ ಪ್ರಕಟವಾಗಿತ್ತು. ಅದು ಬಂಗಾರಪ್ಪನವರು ಮರಳಿ ಕಾಂಗ್ರೆಸ್ ಪಕ್ಷ ಸೇರಲು ಮಾತುಕತೆ ನಡೆಯುತ್ತಿದ್ದ ಕಾಲವಾಗಿತ್ತು. ಇದು ತಮ್ಮ ಸಹೋದ್ಯೋಗಿಗಳು ಉದ್ದೇಶಪೂರ್ವಕವಾಗಿ ಮಾಡಿದ ಕೀಟಲೆ ಎಂದು ವಡ್ಡರ್ಸೆಯವರು ಬಹಳ ನೊಂದಿದ್ದರು.

ಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಪ್ರಕಟವಾದ ದಿನ ಅಳುಕುತ್ತಲೇ ಭೇಟಿಯಾದ ಪತ್ರಿಕೆಯ ನಿರ್ದೇಶಕರೊಬ್ಬರಿಗೆ ‘ನನಗೆ ಶೆಟ್ರು ಏನೆಂದು ಗೊತ್ತು, ಶೆಟ್ರಿಗೆ ಬೇಜಾರು ಮಾಡ್ಕೊಳ್ಳಬೇಡಿ ಎಂದು ಹೇಳಿ’ ಎಂದು ಬಂಗಾರಪ್ಪನವರೇ ಸಮಾಧಾನ ಮಾಡಿ ಕಳುಹಿಸಿದ್ದರಂತೆ’. ಆಗ ಬಂಗಾರಪ್ಪನವರ ಪ್ರಬುದ್ಧತೆ ನನಗೂ ಸ್ವಲ್ಪ ಸಮಾಧಾನ ನೀಡಿತ್ತು. ಒಟ್ಟಿನಲ್ಲಿ ಮುಂಗಾರು ಸಮರ ಹೊರಗೆ ಮಾತ್ರವಲ್ಲ, ಒಳಗೂ ನಡೆಯತೊಡಗಿತ್ತು. ಇದನ್ನು ಏನೆಂದು ಕರೆಯಬೇಕೋ ಗೊತ್ತಾಗುತ್ತಿಲ್ಲ. ವಿಧಿಯಾಟ ಅನ್ನಲು ಮನಸ್ಸಾಗುತ್ತಿಲ್ಲ!

ನನಗೆ ಈಗಲೂ ಒಂದು ಕನ್‍ಫ್ಯೂಷನ್ ಇದೆ. ಈ ರಘುರಾಮ ಶೆಟ್ಟರು ನಾಯಕನೋ ಅಥವಾ ದುರಂತ ನಾಯಕನೋ ಅಂತ. ಒಂದು ದೊಡ್ಡ ಕನಸನ್ನು ಕಂಡು, ಅದಕ್ಕೊಂದು ಮನೆ ಕಟ್ಟಿ, ಆ ಮನೆಯ ಭಾರವನ್ನು ಹೊತ್ತು, ಅದು ಕುಸಿಯುತ್ತಿದ್ದರೂ ಛಲ ಬಿಡದೆ ನೆಲಕಚ್ಚುತ್ತಾರಲ್ಲ, ಇದನ್ನು ನೋಡಿದರೆ ದುರಂತ ನಾಯಕ ಎಂದೆನ್ನಿಸುತ್ತದೆ. ಆದರೆ, ಅದೇ ಆ ಕ್ಷಣದಲ್ಲೇ, ಈ ವಡ್ಡರ್ಸೆ ರಘುರಾಮ ಶೆಟ್ಟಿ ಎಂಬ ಸಾಹಸಿಗ ‘ಮುಂಗಾರು’ ಪ್ರಕಾಶನ ಸಂಸ್ಥೆ ಎಂಬ, ಓದುಗರೇ ಮಾಲೀಕರಾಗಿದ್ದ ಪಬ್ಲಿಕ್ ಲಿಮಿಡೆಟ್ ಕಂಪನಿ ರಚಿಸಿ, ಓದುಗರ ಒಡೆತನದ ಸಂಸ್ಥೆ ಕಟ್ಟುತ್ತಾರಲ್ಲ- ಇದು ಇಂದು ಮಾಡಬೇಕಾಗಿರುವ ಸಾಹಸವಾಗೇ ಉಳಿದಿದೆ. ಈ ಸಂಪತ್ತನ್ನು ರಘುರಾಮ ಶೆಟ್ಟರು ನಾಡಿಗೆ ಬಿಟ್ಟು ಹೋಗಿದ್ದಾರೆ. ಇದನ್ನು ನೆನೆದು, ನಾಯಕಪಟ್ಟ ಮತ್ತು ದುರಂತ ನಾಯಕಪಟ್ಟ ಈ ಎರಡನ್ನೂ ತಕ್ಕಡಿಯಲ್ಲಿಟ್ಟು ತೂಗಿದಾಗ, ತಕ್ಕಡಿ ಮೇಲೆ ಕೆಳಗೆ ತೂಗಿ ತೂಗಿ, ನಾಯಕಪಟ್ಟ ಒಂದು ಗುಲಗಂಜಿ ತೂಕ ಹೆಚ್ಚಾಗಿ ತೂಗಿ, ಗೆದ್ದು ನಿಲ್ಲುತ್ತದೆ.

ಇಂದಿನ ನಮ್ಮ ಮಾಧ್ಯಮ ಕ್ಷೇತ್ರ ಅದರಲ್ಲೂ ದೃಶ್ಯ ಮಾಧ್ಯಮ ಕ್ಷೇತ್ರದ ಅವನತಿ ಕಂಡು ದುಃಖಿತನಾಗಿ ನನ್ನ ಸುಪ್ತಮನಸ್ಸು ರಘುರಾಮ ಶೆಟ್ಟರಿಗೆ ನಾಯಕ ಪಟ್ಟವನ್ನೇ ಆಯ್ಕೆ ಮಾಡಿತೇನೊ ಎಂದೆನಿಸುತ್ತದೆ. ಇರಲಿ, ಇದು ಮುಖ್ಯವೇ ಅಲ್ಲ. ಇಂದು ಮಾಧ್ಯಮ ಕ್ಷೇತ್ರವು ಸಮಸ್ಯೆಗಳನ್ನು ವರದಿ ಮಾಡುತ್ತಿದೆಯೋ ಅಥವಾ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆಯೋ ಗೊತ್ತೇ ಆಗುತ್ತಿಲ್ಲ. ಉದಾಹರಣೆಗೆ, ಹಿಜಾಬ್ ಕೇಸ್‍ನಲ್ಲಿ ನಿಜವಾದ ಸಮಸ್ಯೆಯ ಪಾಲೆಷ್ಟು, ಇದನ್ನು ಸಮಸ್ಯಾತ್ಮಕ ಮಾಡಿದ ಮಾಧ್ಯಮಗಳ ಪಾಲೆಷ್ಟು ನಿರ್ಧರಿಸಿ ಹೇಳುತ್ತೀರಾ? ಇದೇ ರೀತಿ ಅನೇಕಾನೇಕ ಉದಾಹರಣೆಗಳನ್ನು ಹೇಳಬಹುದು. ಮಾಧ್ಯಮ ಕ್ಷೇತ್ರ ತನ್ನ ನೀತಿ, ನಿಯಮ, ಸಂಯಮ, ಮಾನ ಮಾರ್ಯದೆ, ಘನತೆಗಳನ್ನು ತಾನೇ ತುಳಿದು ನಿಂತಿದೆ.

ಇಂಥ ಸಂದರ್ಭದಲ್ಲಿ ರಘುರಾಮ ಶೆಟ್ಟರು ನೆನಪಾಗುತ್ತಾರೆ. ನೆನಪಾಗಬೇಕು ಕೂಡ. ಅವರ ಕನಸು ‘ಓದುಗ ಒಡೆತನದ ಮಾಧ್ಯಮ’ದ ಪ್ರಯತ್ನ ಇಂದಾದರೂ ನನಸಾಗಬೇಕಾಗಿದೆ.

ಯಾಕೋ ಮಾತು ಗಂಭೀರ ಆಯ್ತು. ಇದನ್ನು ಬರೆಯುವಾಗ ಟಿ.ವಿ.ಯಲ್ಲಿ ಕತ್ತಿ ಝಳಪಿಸುತ್ತಾ ‘ಲವ್ ಕೇಸರಿ ಸುದ್ದಿ’ ಬರುತ್ತಿತ್ತು. ‘ಲವ್ ಜಿಹಾದ್’ ಅನ್ನು ‘ಅವರು’ ಮಾಡುತ್ತಾರೆಂದು ‘ಇವರೇ’ ಆರೋಪಿಸಿ ಅದಕ್ಕೆ ಪ್ರತಿಯಾಗಿ ‘ಇವರು’ ಲವ್ ಕೇಸರಿ ಮಾಡಿ ಎಂದು ಅಬ್ಬರಿಸುತ್ತಿದ್ದರು. ‘ಅವರು’ ಕಳ್ಳತನ ಮಾಡುತ್ತಾರೆಂದು ‘ಇವರೇ’ ಆರೋಪಿಸಿ ‘ಇವರು’ ದರೋಡೆ ಮಾಡಬೇಕು ಎಂಬಂತಿತ್ತು ಆ ವಾದ! ಈ ಟೈಮ್‍ನಲ್ಲೇ ನನಗೊಬ್ಬ ಕಿಡಿಗೇಡಿ ಹುಡುಗ ಫೋನ್ ಮಾಡಿ ತನ್ನ ಪರಿಚಯ ಮಾಡಿಕೊಂಡು, ‘ಸರ್, ನಾನು ನಿಮ್ಮ ಅಭಿಮಾನಿ’ ಅಂದ. ‘ಆಯ್ತಪ್ತ ಆಯ್ತು ಏನ್ ಸಮಾಚಾರ?’ ಎಂದೆ. ‘ನಾನೊಂದು ಪದ್ಯ ಹಾಡ್ತೀನಿ, ನನ್ನ ಹೆಸರನ್ನು ಯಾರಿಗೂ ಹೇಳಬಾರದು’ ಅಂದುದಕ್ಕೆ ‘ಆಯ್ತು, ನಾನು ಬೇರೆಯವರಿಗೆ ಹೇಳಿದರೆ ಒಂದು ಲಕ್ಷ ಕೊಡ್ತೀನಿ, ಟ್ರಾಫಿಕ್‍ನಲ್ಲಿದ್ದೇನೆ, ಬೇಗ ಹಾಡಪ್ಪ’ ಎಂದು ಮನೆಯಲ್ಲೇ ಕೂತು ಅಂದೆ. ಅವನು ಜಾನಪದ ಮಟ್ಟಲ್ಲಿ ಹಾಡಿದ. ನಾನು ಅವನಿಗೆ ‘ಶರಣಾದೆ’ ಎಂದೆ. ಯಾಕೆಂದರೆ ಅವನು ಹಾಡಿದ್ದು ಲವ್ ಕೇಸರಿ, ಲವ್ ಜಿಹಾದ್‍ಗೆ ಉತ್ತರವಾಗಿತ್ತು. ಅವನ ಹಾಡು ಇದು:

ಮಾವಾ, ಮಾವಾ ಕೇಳೊ ಮಂಗ್ಯಾ

ಕತ್ತಿ ಝಳಪಿಸುತ ಬಂದು, ನನ ಮುಂದ ನಿಂದು

ಹಿಂಗ ಲವ್ ಮಾಡು, ಲವ್ ಮಾಡು ಅಂದರ

ಹೆಂಗ ಮಾಡಲೋ ಲವ್ವ, ಹೆಂಗ ಮಾಡಲೋ ಲವ್ವ

ನಿನ್ನ ಎದೆಯೊಳಗ ಇಲ್ಲದ ಲವ್ವ, ಮಾಡೆಂದರ ಹೆಂಗ ಮಾಡಲೋ ಲವ್ವ

ಲವ್ ಲವ್ ಅಂದರ ಏನು ಮಾವ, ಏನು ಮಾವ?

ಕೇಳೊ ಮಾವಾ ಹೇಳುತೀನಿ, ನಾ ಹೇಳಿದ ಮೇಲ ನೀ ಕೇಳು

ಲವ್ವಲ್ಲಿ ಯುದ್ಧ ಯಾಕೋ ಮಾವ, ಲವ್ವೇ ಧರ್ಮವು ಕೇಳು

ಲವ್ವಂದರ ಕಾಮನಬಿಲ್ಲು, ಅದರೊಳಗೈತಿ ರಂಗು ರಂಗೇಳು

ಏಕ ಬಣ್ಣವಾದರದು ವಾಕರಿಕೆಯೊ, ಬಣ್ಣಬಣ್ಣದ ಓಕುಳಿಯೋ ಲವ್ವು,

ಮಾವ, ರಂಗು ರಂಗಲ್ಲಿ ಬಾರೊ, ಕತ್ತಿ ಮುರಿದೆಸೆದು ಬಾರೊ

ಲವ್ವು ಮಾಡೋಣು ಬಾರೊ ಓಕುಳಿಯ ಆಡೋಣು ಬಾರೊ

ಹೆಂಗಪ್ಪ ಇದು? ‘ಲವ್ ಜಿಹಾದ್’ ಅಂತೆ, ಲವ್ ಅಂದರೆ ಎಲ್ಲರಿಗೂ ಗೊತ್ತು. ಜಿಹಾದ್ ಅಂದರೆ ಧರ್ಮಯುದ್ಧ ಅಂತೆ! ನಿಜವಾದ ಲವ್ ಧರ್ಮವನ್ನೂ ಮೀರುತ್ತದೆ. ಇನ್ನು ಲವ್ ಮತ್ತು ಯುದ್ಧ ಅಜಗಜಾಂತರ ಕ್ರಿಯೆಗಳು. ಹಾಗೇ ಇತ್ತೀಚೆಗೆ ‘ಲವ್ ಕೇಸರಿ’ ಅಂತ ರಂಗಪ್ರವೇಶ ಮಾಡಿದೆ. ಕೇಸರಿ ಅಂದರೆ ವಿರಕ್ತ! ಈ ಲವ್ ಮತ್ತು ಆ ವಿರಕ್ತಿ ಹೇಗೆ ಕೂಡುತ್ತವೆ? ವಿರಕ್ತಿ ಇರುವವರನ್ನು ಲವ್ ಮಾಡಿದರೆ, ಮಾಡಿದವರ ಪಾಡೇನು? ಜೊತೆಗೆ ಇದು ಗಂಡಸರ ಸಮಸ್ಯೆಯಾಗಿಬಿಟ್ಟಿದೆ. ಹೆಣ್ಣೆಂದರೆ ಮನಸ್ಸೇ ಇಲ್ಲದ ಕೀಲುಗೊಂಬೆ ಅಂತ ಈ ಗಂಡಸರು ಅಂದುಕೊಂಡಂತಿದೆ- ಹೀಗೆಲ್ಲಾ ಧರ್ಮಸೂಕ್ಷ್ಮತೆಯ ಚಿಂತೆ ಮಾಡುತ್ತಾ ನನ್ನ ತಲೆ ಕೆಟ್ಟು ಎಕ್ಕುಟ್ಟೋಗಿತ್ತು. ಇಂಥ ಸಂಕಷ್ಟದಲ್ಲಿ ಆ ಕಿಡಿಗೇಡಿ ಹುಡುಗನ ಜಾನಪದ ಮಟ್ಟು ಬಂದು ನನ್ನ ತಲೆ ನೇವರಿಸಿ ಸಾಂತ್ವನ ನೀಡಿತು. ಅದಕ್ಕಾಗಿ ಅವನಿಗೆ ಕೃತಜ್ಞತೆಗಳು.

ಕ್ಷಮೆ ಇರಲಿ, ನಾನು ಇಷ್ಟು ಮಾತಾಡಬೇಕೆಂದುಕೊಂಡಿರಲಿಲ್ಲ. ಈಗೊಂದು ವಿಸ್ಮಯ ಹೇಳಿ ನನ್ನ ಮಾತು ಮುಗಿಸುತ್ತೇನೆ. ಎಲ್ಲರಿಗೂ ಗೊತ್ತಿದೆ. ಅಸಮಾನತೆ ಮೌಲ್ಯದ ಚಾತುರ್ವರ್ಣದ ಹಿಂದೂ ಗುಂಪಿನ ಪ್ರತಿಪಾದಕ ಆರ್‌ಎಸ್‍ಎಸ್‍ನ ಶ್ರೀ ಗೋಲ್ವಾಲ್ಕರ್ ಹಾಗೂ ಹಿಂಸಾಮೂರ್ತಿ ಶ್ರೀ ನಾಥುರಾಂ ಗೋಡ್ಸೆಯರ ಕುಮೌಲ್ಯಗಳನ್ನು ಭಾರತದೆಲ್ಲೆಡೆ ಬಿತ್ತಿ ಬೆಳೆಯಲು ನಾಗಪುರದ ಆರ್‌ಎಸ್‍ಎಸ್ ಅವಿರತ ಪ್ರಯತ್ನಿಸುತ್ತಲೇ ಇದೆ. ಭಾರತದ ತುಂಬೆಲ್ಲಾ ಗೋಲ್ವಾಲ್ಕರ್ ಮತ್ತು ಗೋಡ್ಸೆ ನಿರ್ಮಾಣ ಮಾಡಲು ಸ್ಥಳಾವಕಾಶಕ್ಕಾಗಿ ಈ ಚಾತುರ್ವರ್ಣದ ಹಿಂದೂ ಗುಂಪು, ಭಾರತವನ್ನೆಲ್ಲಾ ಆವರಿಸಿಕೊಂಡಿರುವ ಗಾಂಧಿ ಮತ್ತು ಅಂಬೇಡ್ಕರ್‌ರನ್ನು ನಿರ್ನಾಮ ಮಾಡಲು ಸತತವಾಗಿ ಗಾಂಧಿ, ಅಂಬೇಡ್ಕರ್ ಎಂಬ ಆಲ ಮತ್ತು ಅರಳಿಮರಗಳನ್ನು ಕೊಚ್ಚಿ ತರಿದು ಕತ್ತರಿಸಿ ತುಳಿದು ಏನೆಲ್ಲಾ ಮಾಡುತ್ತಿದೆ. ಆದರೂ, ಆದರೂನುವೆ ಪೌರತ್ವ ಕಾಯ್ದೆ ತಿದ್ದುಪಡಿ (CAA, NRC) ಸಂದರ್ಭ ಭುಗಿಲೆದ್ದಾಗ ಅದರೊಳಗಿಂದ ಮೂಡಿದ ಗಾಂಧಿ, ಅಂಬೇಡ್ಕರ್ ಪ್ರಭಾವಳಿ ಭಾರತದ ತುಂಬಾ ಆವರಿಸಿಕೊಳ್ಳುವ ಪರಿ, ಇದೇನು ಚೋದ್ಯ! ಆಗ ಜನರ ಬೇಗುದಿಗೆ ಗಾಂಧಿ, ಅಂಬೇಡ್ಕರ್ ಸಾಂತ್ವನ ನೀಡಿದರೇ?

ಗಾಂಧಿಯವರನ್ನು ಕಡೆದು ಸತ್ವವನ್ನಷ್ಟೇ ತೆಗೆದಿಟ್ಟುಕೊಂಡು ಪ್ರತಿಮೆ ಮಾಡಿ ನಿಲ್ಲಿಸಿದರೆ, ಅದರೊಳಗಿಂದ ‘ಸಹನೆ ಮತ್ತು ಪ್ರೀತಿ’ ಸೂಸುತ್ತವೆ. ಹಾಗೆ ಅಂಬೇಡ್ಕರ್‌ಗಾಗಿಯೂ ಈ ನೆಲ ಕಾತರಿಸುತ್ತಿದೆ. ನ್ಯಾಯಕ್ಕೆ ನ್ಯಾಯದ ಹಕ್ಕೇ ಇಲ್ಲದ ಸಂದರ್ಭದಲ್ಲಿ ನ್ಯಾಯಕ್ಕೇನೇ ನ್ಯಾಯದ ಹಕ್ಕು ಸಿಗುವಂತಾಗಲು ಕಾರಣರು ಅಂಬೇಡ್ಕರ್. ಅಂಬೇಡ್ಕರ್‌ ಅವರನ್ನು ಕಡೆದು ಸತ್ವವನ್ನಷ್ಟೇ ತೆಗೆದಿಟ್ಟುಕೊಂಡು ಪ್ರತಿಮೆ ಮಾಡಿ ನಿಲ್ಲಿಸಿದರೆ ಅದರೊಳಗಿಂದ ನ್ಯಾಯ, ಸಮಾನತೆ ಸೂಸುತ್ತವೆ. ಸಹನೆ, ಪ್ರೀತಿ, ನ್ಯಾಯ, ಸಮಾನತೆಯ ಜಲಕ್ಕಾಗಿ ಭಾರತದ ನೆಲ ಚಾತಕ ಪಕ್ಷಿಯಂತೆ ಕಾಯುತ್ತಿಲ್ಲವೇ? ಭಾರತಕ್ಕೆ ಗಾಂಧಿ, ಆಮ್ಲಜನಕ ನೀಡುವ ಅರಳಿ ಮರದಂತೆ ಹಾಗೂ ಅಂಬೇಡ್ಕರ್‌, ಆಸರೆ ನೀಡುವ ಆಲದ ಮರದಂತೆ ಇರಬಹುದೇ?

(ವಡ್ಡರ್ಸೆ ರಘುರಾಮ ಶೆಟ್ಟರ ಲೇಖನಗಳ ಸಂಗ್ರಹ ‘ಬೇರೆಯೇ ಮಾತು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾಡಿದ ಭಾಷಣದ ಅಕ್ಷರರೂಪ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT