ಮಹಾರಾಷ್ಟ್ರದ ಮಹಾಪರ್ವ ಗಣೇಶೋತ್ಸವ!

7

ಮಹಾರಾಷ್ಟ್ರದ ಮಹಾಪರ್ವ ಗಣೇಶೋತ್ಸವ!

Published:
Updated:
Deccan Herald

ಮಹಾರಾಷ್ಟ್ರದ ಮಹಾಪರ್ವ ಗಣೇಶೋತ್ಸವ. ಉದ್ದನೆಯ ಸಮುದ್ರ ತೀರ ಹೊಂದಿರುವ ಮುಂಬಯಿ ಮಹಾನಗರದ ಸಾರ್ವಜನಿಕ ಗಣೇಶೋತ್ಸವಕ್ಕೆ ತನ್ನದೇ ಆದ ವೈಭವಗಳಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಗಣೇಶ ಮೂರ್ತಿಗಳ ಮಾರಾಟಗಾರರು. ಮುಂಬಯಿಯಾದ್ಯಂತ ಅಲಂಕಾರ ಸಾಮಗ್ರಿಗಳ ಅಂಗಡಿಗಳಲ್ಲಿ ಖರೀದಿ ಜೋರಾಗಿದೆ. ಆದರೆ ಅಲಂಕಾರಕ್ಕೆ ಬಳಸುವ ವಸ್ತುಗಳಲ್ಲಿ ಹೆಚ್ಚಿನವು ಚೀನಾದಿಂದ ಆಮದು ಆದವು.

ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಪುಣೆಯಲ್ಲಿ 1893ರಲ್ಲಿ ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಆ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದ ಒಂದು ಅಂಗ ಎನಿಸಿತ್ತು. ಅಂದು ವಿಕ್ಟೋರಿಯಾ ರಾಣಿ ನೀಡಿದ ಆದೇಶದಲ್ಲಿ ‘ಬ್ರಿಟಿಷ್ ಸರ್ಕಾರವು ಜನರ ಧಾರ್ಮಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಹೇಳಲಾಗಿತ್ತು. ಇದರಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಒಳ್ಳೆಯದೇ ಆಯಿತು.

ಆ ದಿನಗಳಲ್ಲಿ ಕೇಸರಿ ಪತ್ರಿಕೆಯಲ್ಲಿ ರಾಷ್ಟ್ರ ಜಾಗೃತಿಯ ಸಂಪಾದಕೀಯ, ಕೊನೆಯ ದಿನ ಅನಂತ ಚತುರ್ದಶಿಯಂದು ಪುಣೆಯಲ್ಲಿ ತಿಲಕರ ಭಾಷಣ, ಭಾವಗೀತೆ, ನಾಟಕಗಳ ಪ್ರದರ್ಶನ... ಹೀಗೆ ದೇಶಾಭಿಮಾನ ಹುಟ್ಟಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದವು. ಪುಣೆಯ ನಂತರ ಮುಂಬಯಿ ಗಿರ್‍ಗಾಂವ್‍ನ ಕೇಶವ್ ಜಿ. ನಾಯ್ಕ್ ಚಾಳ್‍ನಲ್ಲಿ ಸ್ಥಾಪಿಸಿದ ಗಣೇಶ ಪ್ರತಿಮೆ ಮುಂಬಯಿಯಲ್ಲಿ ಸುದ್ದಿ ಮಾಡಿತ್ತು. ಇಂದು ಈ ಮಂಡಲವು ‘ಶ್ರೀ ಸಾರ್ವಜನಿಕ ಗಣೇಶೋತ್ಸವ್ ಸಂಸ್ಥಾ ಕೇಶವ್‍ಜೀ ನಾಯ್ಕ್ ಯಾಂಚಿ ಚಾಳ್’ ಹೆಸರಿನಿಂದ ಪ್ರಖ್ಯಾತಿ ಪಡೆದಿದೆ. ಆಧುನಿಕ ಜೀವನ ಶೈಲಿಯ ನಡುವೆಯೂ ಮುಂಬಯಿಯ ಮೊದಲ ಸಾರ್ವಜನಿಕ ಗಣೇಶೋತ್ಸವ ಮಂಡಲವಾದ ಇದು ತನ್ನ ಹಿಂದಿನ ಛಾಪನ್ನು ಉಳಿಸಿಕೊಂಡು ಬಂದಿದೆ. ಅತ್ತ ಪುಣೆಯ ದಗಡೂ ಸೇಠ್ ಹಲ್ವಾಯಿ ಗಣೇಶೋತ್ಸವ ಇಂದಿಗೂ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಹೊಸ ಭಾರತದ ‘ಥೀಮ್’ ಮುಂಬಯಿಯ ಗಣೇಶ ಮಂಡಲಗಳಲ್ಲೂ ಕಾಣಿಸತೊಡಗಿತು. ಗಣೇಶನನ್ನು ಆಧುನಿಕ ಸಮಸ್ಯೆಗಳಿಗೆ ಸ್ಪಂದಿಸುವಂತೆ ವಿವಿಧ ರೂಪಗಳನ್ನು ನೀಡುತ್ತಾ ಬರಲಾಯಿತು. ಮುಂಬಯಿ ನಗರ-ಉಪನಗರಗಳಲ್ಲಿ ಸಾವಿರಾರು ಪ್ರಮುಖ ಗಣೇಶೋತ್ಸವ ಮಂಡಲಗಳಿದ್ದರೂ ‘ಲಾಲ್‍ಭಾಗ್ ಚಾ ರಾಜಾ’ ಗಣಪತಿ ವೀಕ್ಷಿಸಲು ಭಕ್ತರು ಹೆಚ್ಚಿನ ಆಸಕ್ತಿ ತೋರಿಸುವುದನ್ನು ಗುರುತಿಸಬಹುದು. ಹತ್ತು ಗಂಟೆ ಕಾಲ ಬೇಕಿದ್ದರೂ ಇಲ್ಲಿ ಗಣೇಶನ ಮುಖದರ್ಶನಕ್ಕಾಗಿ ಭಕ್ತರು ಕಾಯುತ್ತಾರೆ. ಅದೇ ರೀತಿ ಕನ್ನಡಿಗರ (ಜಿ.ಎಸ್.ಬಿ.) ಕಿಂಗ್ಸ್‍ಸರ್ಕಲ್‍ನ ಗಣೇಶ ಮಂಡಲ ಮುಂಬಯಿಯ ಅತೀ ಶ್ರೀಮಂತ ಗಣೇಶ ಮಂಡಲವೆಂಬ ಕೀರ್ತಿ ಪಡೆದಿದೆ.


ಮುಂಬೈಯಲ್ಲಿ ಗಣೇಶ ಮೂರ್ತಿ ಮೆರವಣಿಗೆ

ಮುಂಬಯಿಯ ವಿವಿಧ ಗಣೇಶ ಮಂಡಲಗಳು ತಮ್ಮ ವತಿಯಿಂದ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಶಾಲಾ ಮಕ್ಕಳಿಗೆ ನೆರವು... ಆರ್ಥಿಕ ಸಂಕಷ್ಟದಲ್ಲಿರುವ ರೋಗಿಗಳಿಗೆ ನೆರವು... ಗಣೇಶ ಮಂಟಪಗಳ ಮೂಲಕ ಜನಜಾಗೃತಿ, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು, ಹೆಣ್ಣು ಭ್ರೂಣ ಹತ್ಯೆ ತಡೆಯವ ಬಗ್ಗೆ ಅರಿವು, ಸಾಕ್ಷರತೆ ವೃದ್ಧಿ, ಗುಟ್ಕಾ, ತಂಬಾಕುಗಳ ನಿಷೇಧ ಇತ್ಯಾದಿ ಸಂದೇಶಗಳನ್ನು ಭಕ್ತರಿಗೆ ನೀಡುತ್ತವೆ.

ಪಾನ್ ಮಸಾಲ, ಗುಟ್ಕಾ, ತಂಬಾಕು ಜಾಹೀರಾತುಗಳನ್ನು ಗಣೇಶೋತ್ಸವ ಮಂಡಳಿಗಳು ಹಿಂದೆ ಸ್ವೀಕರಿಸುತ್ತಿದ್ದವು. ಆದರೆ ಈಗ ಇವುಗಳನ್ನು ನಿಷೇಧಿಸಿವೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ವಿಚಾರದಲ್ಲಿ ಗಣೇಶ ಮಂಡಲಗಳ ನಡುವೆ ಸ್ಪರ್ಧೆ ಇದೆ. ‘ಲೋಕಸತ್ತಾ’ದಂತಹ ಪತ್ರಿಕೆಗಳು, ಮಹಾನಗರ ಪಾಲಿಕೆ ಇವೆಲ್ಲ ಉತ್ತಮ ಗಣೇಶ ಮಂಡಲಗಳಿಗೆ ಬಹುಮಾನ ನೀಡುತ್ತಿವೆ.

ಇಂದು ಗಣೇಶ ಮಂಡಲಗಳು ಅಲಂಕಾರಕ್ಕೆ ಹೆಚ್ಚು ಒಲವು ತೋರಿಸುತ್ತಿವೆ. ಎಪ್ಪತ್ತು – ಎಂಭತ್ತರ ದಶಕಗಳಲ್ಲಿ ಗಣೇಶೋತ್ಸವ ಮಂಡಳಿಗಳು ಜಾಹೀರಾತು ಮಾರುಕಟ್ಟೆಗೆ ಪೂರಕವಾಗತೊಡಗಿದವು. ವಿಭಿನ್ನ ಕಂಪನಿಗಳು ಇಲ್ಲಿ ಪ್ರವೇಶ ಮಾಡಲು ಮುಂದಾದವು. ತುರ್ತು ಪರಿಸ್ಥಿತಿಯ ನಂತರ ದೊಡ್ಡ ಕಂಪನಿಗಳೂ ಗಣಪತಿ ಮಂಡಲಗಳ ಪ್ರಾಯೋಜಕರಾದವು. ಅಂತಹ ಕೆಲವು ಗಣೇಶ ಮಂಡಲಗಳ ಹೆಸರು ವಿಜೃಂಭಿಸಿದವು. ಅವುಗಳ ಪ್ರತಿಷ್ಠೆಯೂ ಹೆಚ್ಚಾಯಿತು. ಕೆಲವೆಡೆ ಅದು ಚಂದಾ ವಸೂಲಿಯ ಕೇಂದ್ರವೂ ಆಗಿಬಿಟ್ಟಿತು. ಇಂತಹ ಕೆಲವು ಗಣೇಶ ಮಂಡಲಗಳ ಸದಸ್ಯರಾಗುವುದು ಕೆಲವರಿಗೆ ‘ಸ್ಟೇಟಸ್ ಸಿಂಬಲ್’ ಅನಿಸಿಕೊಂಡಿತು. ಕೆಲವು ಮಾಫಿಯಾ ಜನ ಕೂಡ ತಮ್ಮ ಕ್ಷೇತ್ರಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳನ್ನು ಸ್ಥಾಪಿಸಿ ಸುದ್ದಿ ಮಾಡಿದರು. (ಇಂದು ಕೆಲವು ನಿಂತಿವೆ.)

‘ಇಕೋ ಫ್ರೆಂಡ್ಲಿ’ ಗಣಪತಿ ಪ್ರತಿಮೆ ಸ್ಥಾಪಿಸುವಂತೆ ಕೆಲವು ಎನ್.ಜಿ.ಒ.ಗಳೂ ಪ್ರಚಾರ ಮಾಡುತ್ತಿವೆ. ಮನೆಗಳಲ್ಲಿ ಸ್ಥಾಪಿಸಲಾದ ಗಣೇಶ ಪ್ರತಿಮೆಗಳ ವಿಸರ್ಜನೆಗಾಗಿ ಅಲ್ಲಲ್ಲಿ ಕೃತಕ ಬಾವಿಗಳನ್ನು ತೆರೆಯಲಾಗುತ್ತದೆ. ಮುಂಬಯಿಯ ಎರಡು ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ, ಹನ್ನೊಂದು ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಮಂಡಲಗಳಲ್ಲಿ ಗಣೇಶ ಪ್ರತಿಮೆಯನ್ನು ಸ್ಥಾಪಿಸುತ್ತಾ ಬರಲಾಗಿದೆ. ಗಣೇಶೋತ್ಸವದ ಸಂದರ್ಭದಲ್ಲಿ ವಿದ್ಯುತ್ ಕಳ್ಳತನ ಮಾಮೂಲಿ.

ಒಂದು ಲಕ್ಷ ಬಾಡಿಗಾರ್ಡ್!

ಗಣೇಶೋತ್ಸವಕ್ಕೆ ಬೆರಳೆಣಿಕೆಯ ದಿನಗಳು ಬಾಕಿ ಇವೆ. ಮುಂಬಯಿಯಲ್ಲಿ ಲಕ್ಷಗಟ್ಟಲೆ ಭಕ್ತರು ಗಣೇಶನ ದರ್ಶನಕ್ಕಾಗಿ ಹೊರಡುತ್ತಾರೆ. ಪ್ರತಿವರ್ಷ ಆತಂಕವಾದಿಗಳ, ಸಮಾಜ ವಿರೋಧಿ ಶಕ್ತಿಗಳ ದಾಳಿಯ ಭಯ ಇದ್ದೇ ಇರುತ್ತದೆ. ಆದರೆ ಈ ಸಲ ಗಣೇಶೋತ್ಸವಕ್ಕೆ ಯಾವುದೇ ತೊಂದರೆಗಳು ಎದುರಾಗದಂತೆ ಒಂದು ಲಕ್ಷ ಬಾಡಿಗಾರ್ಡ್‌ಗಳು ನೇಮಕವಾಗಿದ್ದಾರೆ. ಈ ಬಾಡಿಗಾರ್ಡ್‌ಗಳು ಹೊರಗಿನವರಲ್ಲ, ಇವರು ಗಣೇಶೋತ್ಸವ ಮಂಡಲಗಳ ಆಯ್ದ ಕಾರ್ಯಕರ್ತರು. ಮುಂಬಯಿ ಪೊಲೀಸರು ಇವರಿಗೆ ಭಕ್ತರನ್ನು ಹಾಗೂ ವಾಹನಗಳನ್ನು ನಿಯಂತ್ರಿಸುವುದರಿಂದ ಹಿಡಿದು ತುರ್ತು ಸ್ಥಿತಿಯಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿಷಯಗಳ ಬಗ್ಗೆ ತರಬೇತಿ ನೀಡಿದ್ದಾರೆ.

ಮುಂಬಯಿಯ ಪ್ರಮುಖ ಗಣೇಶೋತ್ಸವ ಮಂಡಲಗಳು ವಿಮೆ ಮಾಡಿಸಿಕೊಳ್ಳುತ್ತವೆ. ಕಳೆದ ವರ್ಷ ಜಿ.ಎಸ್.ಬಿ. ಸೇವಾ ಮಂಡಲ, ಕಿಂಗ್ಸ್ ಸರ್ಕಲ್ ಮುನ್ನೂರು ಕೋಟಿ ರೂಪಾಯಿ ವಿಮೆ ಮಾಡಿಸಿಕೊಂಡಿತು. ಇದರಲ್ಲಿ ಭಕ್ತರ ಸುರಕ್ಷೆ, ಆಭರಣಗಳ ಸುರಕ್ಷೆ, ಬೆಂಕಿ–ಭೂಕಂಪದಿಂದ ಸುರಕ್ಷೆ... ಇವೆಲ್ಲಾ ಸೇರಿವೆ. ಲಾಲ್‍ಬಾಗ್ ಕಾ ರಾಜಾ, ಅಂಧೇರಿ ಕಾ ರಾಜಾ, ವಡಾಲಾ ರಾಮ್‍ಮಂದಿರ ಗಣೇಶೋತ್ಸವ ಮಂಡಲಗಳೆಲ್ಲಾ ವಿಮೆ ಮಾಡಿಸಿಕೊಳ್ಳುತ್ತಾ ಬಂದಿವೆ. ಮುಂಬಯಿಯಲ್ಲಿ ಹಲವೆಡೆ ಮಹಿಳಾ ಕಲಾವಿದರೂ ಸಕ್ರಿಯರಿದ್ದಾರೆ. ಅಷ್ಟೇ ಅಲ್ಲ, ಗಣೇಶ ಮೂರ್ತಿಗಳಿಗೆ ಬಣ್ಣದ ಅಲಂಕಾರಗಳನ್ನು ಅನೇಕ ಕಡೆ ಹುಡುಗಿಯರು, ಮಹಿಳೆಯರು ಕುಂಚದಿಂದ ಕಲಾತ್ಮಕವಾಗಿ ಮಾಡುತ್ತಾರೆ.

ಮುಂಬಯಿಯಲ್ಲಿ ಗಣೇಶೋತ್ಸವ ಸಮಾಪ್ತಿಯಾಗುವುದು ಲಾಲ್‍ಬಾಗ್ ಕಾ ರಾಜಾ ಮಂಡಳದ ಗಣೇಶ ಪ್ರತಿಮೆ ವಿಸರ್ಜನೆಯ ನಂತರವೇ. ಅನಂತ ಚತುರ್ದಶಿಯಂದು ಬೆಳಿಗ್ಗೆ ಲಾಲ್‍ಬಾಗ್‍ನಿಂದ ಹೊರಟ ಗಣೇಶನ ಮೆರವಣಿಗೆ ಮರುದಿನ ಬೆಳಿಗ್ಗೆ ಸೂರ್ಯೋದಯದ ವೇಳೆಗೆ ಅರಬ್ಬಿ ಸಮುದ್ರದಲ್ಲಿ ಗಣೇಶನ ವಿಸರ್ಜನೆಯೊಂದಿಗೆ ಮುಗಿಯುತ್ತದೆ. 20ರಿಂದ 22 ಗಂಟೆ ಕಾಲ ಅಲ್ಲಿ ಮೆರವಣಿಗೆ ಇರುತ್ತದೆ. ಅಲ್ಲಿಗೆ ಮುಂಬಯಿಯ ಸಾರ್ವಜನಿಕ ಗಣೇಶೋತ್ಸವ ಕೊನೆಗೊಂಡಂತೆ.


ಕಲಾವಿದರ ಮನೆಯಿಂದ ಮಂಡಲದ ಕಡೆ ಹೊರಟಿರುವ ಗಣಪತಿ ಬಪ್ಪ.

ಪೇಣ್

ಮುಂಬಯಿಯಿಂದ ಸುಮಾರು 40 ಕಿ.ಮೀ. ದೂರದ ರಾಯಗಢ ಜಿಲ್ಲೆಯ ಮುಂಬಯಿ – ಗೋವಾ ಹೆದ್ದಾರಿಯಲ್ಲಿರುವ ಪೇಣ್ ತಾಲ್ಲೂಕಿನಲ್ಲಿ ವರ್ಷವಿಡೀ ಗಣೇಶ ಮೂರ್ತಿ ತಯಾರಿಸುತ್ತಾರೆ.

130 ವರ್ಷಗಳಿಂದ ಈ ಪುಟ್ಟ ಊರಿನ ಗಣಪತಿ ಮೂರ್ತಿಗಳು ಮುಂಬಯಿ ಸಹಿತ ರಾಜ್ಯದ ಅನ್ಯಭಾಗಗಳಲ್ಲೂ ಭಾರೀ ಬೇಡಿಕೆ ಪಡೆದಿವೆ. ಮಾತ್ರವಲ್ಲ, ಪೇಣ್‍ನಲ್ಲಿ ತಯಾರಿಸಲಾದ ಗಣೇಶ ಮೂರ್ತಿಗಳಿಗೆ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಊರಿನಲ್ಲಿ ವಾರ್ಷಿಕ ಸರಾಸರಿ ₹ 125 ಕೋಟಿಗೂ ಅಧಿಕ ವ್ಯವಹಾರ ನಡೆಯುತ್ತದೆ. ಈ ಬಾರಿ 30 ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿ ತಯಾರಿಸಿದ್ದಾರೆ. ಗಣೇಶೋತ್ಸವದ ನಂತರ ಒಂದೆರಡು ತಿಂಗಳ ವಿಶ್ರಾಂತಿ ಬಿಟ್ಟರೆ ವರ್ಷವಿಡೀ ಇಲ್ಲಿ ಮೂರ್ತಿ ತಯಾರಿಗೆ ಬಿಡುವೇ ಇಲ್ಲ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !