ಶನಿವಾರ, ಜೂನ್ 19, 2021
26 °C

‘ಹೋಗ್ಬೇಡಿ ಮಿಸ್, ಪ್ಲೀಸ್ ಮಿಸ್...’ ಮಕ್ಕಳ ಉದ್ಗಾರ ಕೇಳಿ ಕಣ್ಣಂಚು ಒದ್ದೆಯಾಯ್ತು

ಮಾಂತೇಶ ಬಂಜೇನಹಳ್ಳಿ Updated:

ಅಕ್ಷರ ಗಾತ್ರ : | |

‘ಒಂದು ಸಲ ಮೇಷ್ಟ್ರಾದ್ರೆ ಜೀವನಪೂರ್ತಿ ಮೇಷ್ಟ್ರೇ. ಮಕ್ಕಳ ಮೂಲಕ ಸಮಾಜವನ್ನೂ ಅವರು ತಿದ್ದುತ್ತಾರೆ...’ ಶಿಕ್ಷಕ ವೃತ್ತಿಯ ಬಗ್ಗೆ ಜನರು ಇಟ್ಟಿರುವ ಗೌರವ ಕಟ್ಟಿಕೊಡುವ ಸಾಲುಗಳಿವು. ಶಿಕ್ಷಕರೊಬ್ಬರು ವರ್ಗವಾದಾಗ ಅಥವಾ ನಿವೃತ್ತರಾದಾಗ ಅವರ ಬಗ್ಗೆ ಇದ್ದ ಗೌರವವನ್ನು ಮಕ್ಕಳು ವ್ಯಕ್ತಪಡಿಸುವ ರೀತಿ ಕಂಡವರು ಕಣ್ಣೀರಾಗುತ್ತಾರೆ. ಅಂಥದ್ದೊಂದು ಭಾವುಕ ಪ್ರಸಂಗವನ್ನು ಅಕ್ಷರಗಳಲ್ಲಿ ಕಟ್ಟಿಕೊಡಲು ಯತ್ನಿಸಿದ್ದಾರೆ ತರೀಕೆರೆ ತಾಲ್ಲೂಕು ಹಾದಿಕೆರೆ ಕ್ಲಸ್ಟರ್‌ನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಾಂತೇಶ ಬಂಜೇನಹಳ್ಳಿ.

***

ಕಾರ್ಯನಿಮಿತ್ತ ನೇರಲಕೆರೆ (ತರೀಕೆರೆ ತಾಲ್ಲೂಕು) ಕ್ಲಸ್ಟರ್ ಕೇಂದ್ರದ ಶಾಲೆಗೆ ಹೋಗಿದ್ದೆ. ಕೆಲಸ ಮುಗಿಸಿ ಗಡಿಬಿಡಿಯಿಂದ ಹೊರಟ ನನಗೊಂದು ಅಚ್ಚರಿಯ ದೃಶ್ಯ ಕಾದಿತ್ತು. ಅದೇ ಶಾಲೆಯ ಶ್ರೀಮತಿ ಸವಿತಾ ಎಂಬ ಶಿಕ್ಷಕಿಯೊಬ್ಬರು ತಮ್ಮ ವಾಹನವೇರಿ ಹೊರಟು ನಿಂತಿದ್ದರು.

ಪ್ರತಿ ತರಗತಿ ಕೋಣೆಗಳ ಬಾಗಿಲಲ್ಲಿ ನಿಂತಿದ್ದ ಅಷ್ಟೂ ಮಕ್ಕಳು ‘ಮಿಸ್, ಮಿಸ್... ಮೀಸ್... ಮೀಸ್... ಪ್ಲೀಸ್ ಮೀ....ಸ್....’ ಎನ್ನುತ್ತಿದ್ದರು. ‘ಟೀಚರ್ ಸುಮ್ನೆ ಒಳಗೆ ಹೋಗ್ರಪ’ ಅಂತಿದ್ರು. ಅವರ ಮಾತಿಗೆ ಓಗೊಡದ ಮಕ್ಕಳು ಮತ್ತದೇ ಉದ್ಗಾರವನ್ನು ದೀರ್ಘವಾಗಿ ಹೊಮ್ಮಿಸುತ್ತಿದ್ದರು.


ಮಕ್ಕಳ ಮನಗೆದ್ದ ಶಿಕ್ಷಕಿ ಸವಿತಾ

ಆ ಮಕ್ಕಳು ಗೋಗರೆವ ದೃಶ್ಯ ನನಗೇಕೋ ಕರುಳು ಚುಚ್ಚಿದ ಅನುಭವ ನೀಡಿತು. ತಕ್ಷಣ ಆ ಶಿಕ್ಷಕಿಯತ್ತ ತಿರುಗಿದ ನಾನು, ‘ರಜೆ ಹೋಗ್ತಿದಿರಾ ಮೇಡಂ? ಮತ್ತೆ ಬರ್ತಿನಿ ಇರ್ರಪ ಅಂತ ಹೇಳ್ಬೋದಲ್ವಾ?’ ಎಂದೆ.

ಆ ಶಿಕ್ಷಕಿ ಪ್ರತಿಕ್ರಿಯಿಸಿ, ‘ಇಲ್ಲಾ ಸರ್... ನನಗೆ ಮತ್ತೊಂದು ಶಾಲೆಗೆ ವರ್ಗವಾಗಿದೆ. ಇಂದು ಆ ಶಾಲೆಗೆ ವರದಿ ಮಾಡಿಕೊಳ್ಳಲು ಹೋರಟಿದ್‌ದೇನೆ’ ಎಂದರು. ಅವರ ಕಣ್ಣಲ್ಲಿಯೂ ಕೊಂಚ, ಕೊಂಚ ನೀರ ಹನಿಗಳ ತೆವಳಿಕೆ ಎದ್ದು ಕಾಣುತಿತ್ತು.

‘ಕೆಲಸ ಎಲ್ಲೋದ್ರು ಮಾಡ್ತಿನಿ ಸರ್... ಆದ್ರೆ 5 ವರ್ಷ ಎಲ್ಲೂ ನಿಲ್ಲೋಕಾಗ್ತಿಲ್ಲ ಸರ್, ಅದೇ ಬೇಸರ’ ಎಂದವರೆ ಒಂದೇ ಉಸಿರಿಗೆ ವಾಹನ  ಚಾಲನೆ ಮಾಡಿಯೇ ಬಿಟ್ಟರು. ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಮಕ್ಕಳ ಕೂಗು ಶಾಲಾವರಣದಲ್ಲಿ ನಾಲ್ಕೂ ದಿಕ್ಕುಗಳಿಂದ ಪ್ರತಿಧ್ವನಿಸುತ್ತಲೇ ಇತ್ತು.

ಅಲ್ಲಿದ್ದ ಸಹೋದ್ಯೋಗಿ ಮಿತ್ರರು ಆ ಮಕ್ಕಳ ಕೂಗಿಗೆ ಅಡ್ಡಿಯಾಗಲು ಪ್ರಯತ್ನಿಸಲಿಲ್ಲ. ಅವೆಲ್ಲವನ್ನೂ ಪ್ರತ್ಯಕ್ಷವಾಗಿ ಕಂಡ ನನ್ನ ಮನಸು ಸಂಪೂರ್ಣ ಆರ್ದ್ರಗೊಂಡಿತು.

ಶಿಕ್ಷಕ ವೃತ್ತಿಗೆ ನಿಜಕ್ಕೂ ತೂಕವಿರುವುದೇ, ತನ್ನೆದೆಗೆ ಹೊಕ್ಕ ನಾಲ್ಕು ಅಕ್ಷರಗಳನ್ನು ಅಸಂಖ್ಯಾತವಾಗಿಸಿ, ಸದಾ ಅಭ್ಯಾಸ ಮಾಡುತ್ತಾ, ಹೊಸತನ್ನು ಕಲಿಯುತ್ತಾ, ಮಕ್ಕಳಿಗೆ ಕಲಿಸುತ್ತಾ ಬದುಕು ಸಾಗಿಸುವ ಬಗೆಯಿಂದ. ಒಮ್ಮೆ ಶಿಕ್ಷಕರಾದವರು ಜೀವಮಾನವಿಡೀ ಶಿಕ್ಷಕರೇ. ಮಕ್ಕಳನ್ನು ಅಷ್ಟೇ ಅಲ್ಲ, ಇಡೀ ಸಮಾಜವನ್ನು ತಿದ್ದುವ ಹೊಣೆ ಅವರ ಮೇಲೆ ಇರುತ್ತೆ. ಮಕ್ಕಳಲ್ಲಿ ಕಲಿಕೆಯ ಕುತೂಹಲ ಕೆರಳಿಸಿ ಕಲಿಕೆಗೆ ಪ್ರೇರೇಪಿಸುವ ಅಂಥ ಶಿಕ್ಷಕರಿಂದಲೇ ಸಮಾಜ ಸುಸ್ಥಿತಿಯಲ್ಲಿರಲು ಸಾಧ್ಯ.

ನೇರಲೇಕೆರೆ ಶಾಲೆಯಲ್ಲಿ ನಾನು ಕಂಡ ದೃಶ್ಯವು ನನಗೆ ನನ್ನದೇ ಬದುಕಿನ ಮೊದಲ ಪುಟಗಳನ್ನು ನೆನಪಿಸಿತು. ನನ್ನೂರಿನ‌ (ಅರಸೀಕೆರೆ ತಾಲ್ಲೂಕು, ದೊಡ್ಡಮೇಟಿಕುರ್ಕೆ) ಪ್ರಾಥಮಿಕ ಶಾಲೆಗೆ 1990ರ ದಶಕದ ಜೂನ್‌ನಲ್ಲಿ ಟಿ.ಎನ್.ಬಸವರಾಜಪ್ಪ ಸರ್ ಮೊದಲ ಸಲ ಕರ್ತವ್ಯಕ್ಕೆ ವರದಿ ಮಾಡಿಕೊಂಡರು.

ಬಂದ ಮೊದಲ ದಿನವೇ ಸರಿಯಾದ ಸಾಲಲ್ಲಿ ಕೂರಲಿಲ್ಲ ಎನ್ನುವ ಕಾರಣಕ್ಕೆ ನನ್ನ ಬೆನ್ನಿಗೆ ಬಡಿದರು. ಅವರನ್ನು ಕಂಡರೆ ಇಂದಿಗೂ ನನಗೆ ಭಯ. ಗಣಿತ ತರಗತಿಯಲ್ಲಿ ಕಪ್ಪು ಹಲಗೆ ಮೇಲಿನ 45ರ ಸಂಖ್ಯೆಯಲ್ಲಿ 4ರ ಸ್ಥಾನ‌ಬೆಲೆ ಕೇಳಿದ ತಕ್ಷಣ ಹೇಳಿದ್ದಕ್ಕೆ, ಪ್ರೀತಿಯಿಂದ ನನ್ನೆಡೆ ನೋಡಿ ಎಲ್ಲರ ಮುಂದೆ ಕೊಂಡಾಡಿದರು. ಅವರು ಇಂದಿಗೂ, ಎಂದೆಂದೆಗೂ ನನ್ನ ಪ್ರೀತಿ ಪಾತ್ರ ಮೇಷ್ಟ್ರು. ಅಜ್ಜಂಪುರ ತಾಲ್ಲೂಕಿನ ತಡಗ ಗ್ರಾಮದ ಬಸವರಾಜಪ್ಪ ಸರ್ ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಒಂದನೇ‌ ತರಗತಿಯಲ್ಲಿ ಶಿಸ್ತು ಕಲಿಸಲು ಎರಡು ಬಾರಿ ತರಗತಿ ಕೋಣೆಯಲ್ಲೇ ಸೂಸು ಮಾಡಿಕೊಳ್ಳುವಂತೆ ಹೊಡೆದಿದ್ದರು. ಎರಡನೇ ತರಗತಿಯ ಮೊದಲ ದಿನವೇ ‘ನಮ್ಮ ಊರು’ ಪಾಠವನ್ನು ನಿರರ್ಗಳವಾಗಿ ಓದಿದ ಕಾರಣ, ಇಡೀ ಶಾಲೆಗೆ ನನ್ನನ್ನು ನಾಯಕನನ್ನಾಗಿ ಘೋಷಿಸಿ, ಪೋಷಿಸಿ ನನ್ನೆದೆಯೊಳು ಅಗಣಿತ ಅಕ್ಷರಗಳ ಬಿತ್ತಿದ, ಪ್ರೀತಿಯ ಗುರುಗಳಾದ ಬಾಗಲಕೋಟೆ ನವನಗರದ‌ ವಾಸಿ, ಆಲಮಟ್ಟಿ ವ್ಯಾಪ್ತಿಯಲ್ಲಿ ಇನ್ನೂ ಕರ್ತವ್ಯ ನಿರ್ವಹಿಸುತ್ತಿರುವ ನನ್ನ ಪ್ರೀತಿಯ ಗುರುಗಳಾದ ಶ್ರೀಯುತ ಶ್ರೀಶೈಲ‌.ಎಂ.ಕಾವಳ್ಳಿ ಸರ್, ನನ್ನ ಪ್ರಾತಃಸ್ಮರಣೀಯ ಪ್ರೀತಿಯ ಗುರುಗಳು.

ಪ್ರಾಥಮಿಕ ಶಾಲೆಗಳ ಗುರುಗಳೇ ಹಾಗೆ... ತಂದೆ ತಾಯಿಯರ ಸ್ಥಾನವನ್ನು ಸದ್ದಿರದೇ ಗೆದ್ದು, ಮಕ್ಕಳ ಮನವನ್ನು ಆವರಿಸಿ ಬಿಡುತ್ತಾರೆ.

ಮಕ್ಕಳ ಯೋಗಕ್ಷೇಮ ವಿಚಾರಿಸಿ, ತಲೆ ನೇವರಿಸಿದರಂತೂ ಮಕ್ಕಳ ಖುಷಿ ಹೇಳತೀರದು. ನಲಿ-ಕಲಿ ತರಗತಿಯಲ್ಲಿ ಬೋಧಿಸುವಾಗ ಶಿಕ್ಷಕರ ಸಂಪೂರ್ಣ ಸಹಾಯದಿ ನಡೆವ ಕಲಿಕಾಂಶ ಚಟುವಟಿಕೆಯಲ್ಲಿ, ಶಿಕ್ಷಕರ ತೊಡೆ ಮೇಲೆ ಕೂರಲು ಕೆಲ ಮಕ್ಕಳು ಆಗಾಗ ಹವಣಿಸುವುದು ನಾನು ಕಂಡ ಸರ್ವೇ ಸಾಮಾನ್ಯ ದೃಶ್ಯ.

ಅವತ್ತು ಸವಿತಾ ಮೇಡಂ ಅವರು ಮರೆಯಾಗುವವರೆಗೂ ನಾನು ಅಭಿಮಾನದಿಂದ ಅವರ ವಾಹನ ಹೋದ ದಾರಿ ನೋಡುತ್ತಾ ನಿಂತಿದ್ದೆ. ಅವರು ಹೊರಟ ಎಷ್ಟೋ ಹೊತ್ತಿನವರೆಗೂ ಮಕ್ಕಳು ‘ಮಿಸ್, ಹೋಗ್ಬೇಡಿ ಮಿಸ್’ ಅಂತ ಕೂಗುತ್ತಲೇ ಇದ್ದರು. ಆ ಮೇಡಂ ಇತ್ತ ತಿರುಗಿ ನೋಡಲಿಲ್ಲ. ಪಾಪ! ಅವರ ಮನಸ್ಸು ಅದೆಷ್ಟು ಭಾರವಾಗಿತ್ತೋ, ಏನೋ?

ಸವಿತಾ ಅವರ ವೃತ್ತಿ ನಿಷ್ಠೆ, ಮಕ್ಕಳು ಅವರ ಮೇಲಿನ ಅಪಾರ ಆದರ ಮತ್ತು ಕಾಳಜಿಯಿಂದ ಕೂಗುತ್ತಾ ಅತ್ತ ಹರಿಸುತ್ತಿದ್ದ ಆ ಪರಿಯ ಪ್ರೀತಿಯ ಹೂವ ಹೊಳೆ, ನನ್ನೊಳು ಶಿಕ್ಷಕ ವೃತ್ತಿಯ ಬಗ್ಗೆ ಅತೀವ ಅಭಿಮಾನ ಮೂಡಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು