ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಮಿಡಿ ಶಾಸನದ ಮರು ಓದು

Last Updated 27 ಜೂನ್ 2020, 19:30 IST
ಅಕ್ಷರ ಗಾತ್ರ

ಕಾಕುಸ್ಥವರ್ಮನ ಬದಲು ಅವನ ಮೊಮ್ಮಗ ಯಾಕೆ ದಾನ ಕೊಟ್ಟ? ಅಥವಾ ಕದಂಬ-ಪಲ್ಲವರ ಯುದ್ಧಕಾಲದಲ್ಲಿ ಕಾಕುಸ್ಥವರ್ಮನ ಮಗ ಶಾಂತಿವರ್ಮನು ಮರಣಿಸಿದ್ದನೆ? ಮೃಗೇಶವರ್ಮನು ಇನ್ನೂ ಮಹಾರಾಜನಾಗಿರಲಿಲ್ಲವೆ?

ಎಂ.ಎಚ್.ಕೃಷ್ಣ ಅವರು, 1936ರಲ್ಲಿ ಮೊದಲ ಬಾರಿಗೆ ಹಲ್ಮಿಡಿಯ ಶಾಸನವನ್ನು MARನಲ್ಲಿ ಪ್ರಕಟಿಸಿ, ಈ ಶಾಸನದ ಅರ್ಥವನ್ನು ಸವಿವರವಾಗಿ ಬರೆದಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ಕನ್ನಡದ ಈ ಶಾಸನದ ಬಗ್ಗೆ ಶಾಸನ ಶಾಸ್ತ್ರಜ್ಞರು ಮತ್ತು ವಿದ್ವಾಂಸರು ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ತಮ್ಮದೇ ಆದ ಪ್ರೌಢ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ. ಆದರೆ, ಈ ಶಾಸನದಲ್ಲಿ ಬರುವ ಕೆಲವು ಪದಗಳು ಯಾವುದು, ವ್ಯಕ್ತಿಗಳು ಯಾರು ಎಂಬ ಪ್ರಶ್ನೆಗಳು ಇನ್ನೂ ನಿಗೂಢವಾಗಿ ಉಳಿದಿವೆ. ಈ ವಿಚಾರವಾಗಿ ನಾನು ನನ್ನ ತಿಳಿವಳಿಕೆಗೆ ನಿಲುಕಿದ್ದನ್ನು ವಿವರಿಸಲು ಯತ್ನಿಸಿದ್ದೇನೆ.

ಶಾಸನದ ವಿವರ

ಪಶುಪತಿಯ (ಈಶ್ವರ) ಪ್ರಸಾದದಿಂದ ಹುಟ್ಟಿದ, ತಾನು ಮಾಡಿದ ಯುದ್ಧ, ದಾನಗಳಿಂದ ದಕ್ಷಿಣಾಪಥದಲ್ಲಿ ಪಶುಪತಿಯೆಂದು ಪ್ರಖ್ಯಾತನಾದ ಕಾಕುಸ್ಥನು, ಭಟಾರಿ ವಂಶ ತಿಲಕನಾಗಿದ್ದನು. ಇವನ ತಾಯಿ ಕದಂಬ ವಂಶದವಳಾಗಿದ್ದಳು. ಕಾಕುಸ್ಥ ಭಟಾರಿಯು ಕದಂಬ ಸಾಮ್ರಾಜ್ಯದಲ್ಲಿ ಹತ್ತು ಮಂಡಲೇಶ್ವರರ ನಾಯಕನಾಗಿದ್ದನು (MAR 1911- Plate 4(1) Pg 33).

ಹಲ್ಮಿಡಿ ಶಾಸನದಲ್ಲಿ ಮೊದಲಿಗೆ ಸುದರ್ಶನಚಕ್ರಧಾರಿಯಾದ ಶ್ರೀವಿಷ್ಣುವನ್ನು ವಂದಿಸಿ, ಕದಂಬ ಚಕ್ರವರ್ತಿಯನ್ನು ನಮಿಸಿ ನಂತರದಲ್ಲಿ ಕಕುಸ್ಥ ಭಟೊರನನ್ನು ತ್ಯಾಗಸಂಪನ್ನನೆಂದು ಮತ್ತು ಕಲಭೋರನ ಶತ್ರುವೆಂದು ಹೊಗಳಲಾಗಿದೆ. ’ಅವನು ಮಂಡಲೇಶ್ವರನಾಗಿ ನರಿದಾವಿಳೆ ನಾಡನ್ನು ಆಳುತ್ತಿರುವಾಗ ಮೃಗೇಶ ಮತ್ತು (ಬಹುಶಃ ತಮ್ಮನಾದ) ನಾಗೇಂದ್ರರು ಸೇರಿ ದಾನವನ್ನು ಕೊಡುವ ವಿಚಾರವು ಬರುತ್ತದೆ. ಭಟಾರಿ ಕುಲದಲ್ಲಿ ಪ್ರಸಿದ್ಧನಾದ, ಆ ಕುಲತಿಲಕನಾದ ಕಕುಸ್ಥ ಭಟಾರಿಯನ್ನು ಪಶುಪತಿಗೆ ಹೋಲಿಸಲಾಗಿದೆ. ಆಕಾಶ-ತಾರೆಗಳ ಅಧಿಪತಿಯಾದ, ಗಣಗಳನ್ನು ಆಳುವ ಪಶುಪತಿಯಂತೆ, ದಕ್ಷಿಣಾಪಥದಲ್ಲಿ ನೂರಾರು ಹವನಗಳನ್ನು ಮಾಡಿ, ತನ್ನ ಪಶುಪ್ರಧಾನ ಶೌರ್ಯದಿಂದ ಯುದ್ಧಗಳನ್ನು ಮಾಡಿ, ದಾನ ಪಶುಪತಿಯೆಂದು ಹೊಗಳಿಸಿಕೊಂಡು, ಪಶುಪತಿಯೆಂದೇ ಕರೆಸಿಕೊಳ್ಳುವ ಕದಂಬರ ಸೇನಾಧಿಪತಿ ಕಕುಸ್ಥಭಟಾರಿಯು ಯುದ್ಧ ನಿರತನಾಗಿರಲು, ಇವನ ಆಸರೆಗೆ ಪಲ್ಮಡಿಯಲ್ಲಿ ವಾಸವಿದ್ದ ಎಲ್ಲಾ ಭಟಾರಿಗಳ ಪ್ರೀತಿಯ ಮನೆ ಮಗನಂತಿದ್ದ ಸೇಂದ್ರಕ ದೇಶದ ರಾಜ ವಿಜಾರಸನು ಬಂದನು.‘

’ಸೇಂದ್ರಕ-ಬಾಣ ಈ ಉಭಯದೇಶಗಳ ನೇತೃತ್ವ ವಹಿಸಿದ್ದ ಆ ವೀರ ವಿಜಾರಸನು ಆ ಎಲ್ಲಾ ಪುರುಷರ ಎದುರಲ್ಲಿ, ಕೇಕೆಯ ಪಲ್ಲವರ ಜೊತೆಗೂಡಿದ ಸೈನ್ಯವನ್ನು ಎದುರಿಸಿ, ಹೋರಾಡಿ ಕದಂಬರಿಗೆ ವಿಜಯವನ್ನು ತಂದಿತ್ತನು. ಈ ಸಂದರ್ಭದಲ್ಲಿ ಮೃಗೇಶ, ನಾಗೇಂದ್ರರು ಸೇರಿ ಪಲ್ಮಡಿಯನ್ನು ಮತ್ತು ಮೂಳಿವಳ್ಳಿಯನ್ನು ಬಾಳ್ಗಳ್ಚಾಗಿ ಸೇಂದ್ರಕ ರಾಜ ವಿಜಾರಸನಿಗೆ ಕೊಟ್ಟರು. ಈ ದಾನವನ್ನು ಭಟಾರಿ ಕುಲದವನಾಗಲಿ, ಆಳುವ ಕದಂಬನಾಗಲಿ ತಪ್ಪಿದರೆ ಮಹಾಪಾತಕನಾಗುತ್ತಾನೆ. ಮುಂದೆ, ಮೃಗೇಶ ನಾಗೇಂದ್ರರಿಬ್ಬರು, ಸಳ್ಬಂಗದರ್ (ಕೋಟೆ ಕಾಯುವವರ ಪ್ರಮುಖ?) ಮತ್ತು ವಿಜಾರಸರು ಕೂಡಿ ಪಲ್ಮಡಿಯ ಕೋಟೆಗೆ ಸಂಬಂಧಿಸಿದ (ಕುರುಂಬಿಡಿ) ಕರವನ್ನು ಬಿಟ್ಟರು. ಇದನ್ನು ನಾಶ ಮಾಡಿದವನು ಮಹಾಪಾತಕನು, ಒಳ್ಳೆಯದಾಗಲಿ‘ ಎಂಬಲ್ಲಿಗೆ ಶಾಸನವು ಮುಗಿಯುತ್ತದೆ.

ಶಾಸನದ ಎಡಗಡೆಯ ಬದಿಯಲ್ಲಿ ಕೊನೆಯ ಸಾಲನ್ನು ಕೊರೆಯಲಾಗಿದೆ. ಹೀಗೆ ಪ್ರತ್ಯೇಕವಾಗಿ ಉಲ್ಲೇಖಿತ ಸಾಲಲ್ಲಿ, ಭಟ್ಟಾರಿ ಕುಲದವರ ಗದ್ದೆಗಳಿಗೆ ರಾಜಭಾಗವಾದ ಹತ್ತನೆಯೊಂದು ಕರವನ್ನು ವಿಜಾರಸರು ಬಿಟ್ಟರು. ಹೀಗೆ ಕದಂಬ ದೇಶದ ನರಿದಾವಿಳೆ ನಾಡಿನಲ್ಲಿದ್ದ ಪಲ್ಮಡಿ ಮತ್ತು ಮೂಳಿವಳ್ಳಿಯು ಸೇಂದ್ರಕ ದೇಶದ ಭಾಗವಾಗುತ್ತದೆ. ಕಾಲಾಂತರದಲ್ಲಿ ಸೇಂದ್ರಕ ದೇಶವು ಕದಂಬರ ಸಾಮ್ರಾಜ್ಯದ ಒಂದು ಭಾಗವಾಗಿ, ಸೇಂದ್ರಕ ವಿಷಯವೆಂದು ಕರೆಸಿಕೊಂಡಿದೆ. ಪಲ್ಮಡಿಯು ಸೇಂದ್ರಕ ವಿಷಯದ ಭಾಗವಾಗಿರುವುದು ಬೇಲೂರಿನ ಶಾಸನದಲ್ಲಿ (EC 05 Bl 245, Rice Ed) ಉಕ್ತವಾಗಿದೆ. ಈ ಶಾಸನವನ್ನು ಹಾಕಿಸಿದವನು ಕಾಕುಸ್ಥ ಭಟಾರಿ. ದಾನವನ್ನು ಕೊಟ್ಟವನು ಮೃಗೇಶವರ್ಮ. ಇವನ ಆಳ್ವಿಕೆಯ ಆರಂಭ ಕಾಲದಲ್ಲಿ ಈ ಶಾಸನವನ್ನು ಹಾಕಿಸಲಾಗಿದೆ. ಇದರ ಕಾಲ ಕ್ರಿ.ಶ.475.

ಶಾಸನದ ಓದುವಿಕೆಗೆ ಹಿನ್ನೆಲೆ

ಎಂ.ಎಚ್.ಕೃಷ್ಣ ಅವರು ಈ ಶಾಸನದ ಕಾಲ ಕ್ರಿ.ಶ. ಸುಮಾರು 450, ಇದರ ಕರ್ತೃ ಕಾಕುಸ್ಥವರ್ಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಕುಸ್ಥವರ್ಮನ ಬದಲು ಅವನ ಮೊಮ್ಮಗ ಯಾಕೆ ದಾನ ಕೊಟ್ಟ? ಅಥವಾ ಕದಂಬ-ಪಲ್ಲವರ ಯುದ್ಧಕಾಲದಲ್ಲಿ ಕಾಕುಸ್ಥವರ್ಮನ ಮಗ ಶಾಂತಿವರ್ಮನು ಮರಣಿಸಿದ್ದನೆ? ಮೃಗೇಶವರ್ಮನು ಇನ್ನೂ ಮಹಾರಾಜನಾಗಿರಲಿಲ್ಲವೆ? ಎಂಬ ಪ್ರಶ್ನೆಗಳು ಮೂಡುತ್ತವೆ. ಇದಕ್ಕೆ ಕಾರಣ ಪ್ರಸ್ತುತ ಹಲ್ಮಿಡಿಯ ಶಾಸನದಲ್ಲಿ ‘ನಮಃ ಶ್ರೀಮತ್ಕದಂಬಪನ್’ ಎಂದು ನಿರ್ದಿಷ್ಟ ವ್ಯಕ್ತಿಯನ್ನು ಸೂಚಿಸಿಲ್ಲ.

‘ಆ ಬಟಾರಿ ಕುಲಾಮಲ’- ಇಲ್ಲಿ ‘ಆ’ ಎಂಬುದು ಮೂರನೇ ಸಾಲಿನಲ್ಲಿ ಉಕ್ತವಾಗಿರುವ ಕಕುಸ್ಥಭಟ್ಟೋರನನ್ನು ಸೂಚಿಸುತ್ತದೆ. ಇದರಿಂದ ಕಕುಸ್ಥಭಟಾರಿ ಮತ್ತು ಪಶುಪತಿ ಇಬ್ಬರೂ ಒಬ್ಬನೇ ಎಂದು ತಿಳಿಯುತ್ತದೆ. ಕಾಕುಸ್ಥವರ್ಮ ಮತ್ತು ಕಾಕುಸ್ಥಭಟಾರಿ ಇಬ್ಬರೂ ಬೇರೆ ಬೇರೆ ವ್ಯಕ್ತಿಗಳಾಗಿದ್ದು, ಈ ಶಾಸನ ಕಾಕುಸ್ಥವರ್ಮನಿಗೆ ಸೇರಿದ್ದಲ್ಲ ಎಂದು ತಿಳಿಯುತ್ತದೆ. ಕಕುಸ್ಥಭಟಾರಿಗೆ ಶಾಸನದಲ್ಲಿ ಅಗ್ರಸ್ಥಾನವಿದೆ (ತನ್ನ ತಾಯಿಯ ಮೂಲಕ ಕಕುಸ್ಥ ಭಟಾರಿಯು, ಕಕುಸ್ಥವರ್ಮನ ಮೊಮ್ಮಗನಾಗಿರಬೇಕು ಮತ್ತು ಮೃಗೇಶವರ್ಮನಿಗಿಂತ ಹಿರಿಯವನಾಗಿರಬೇಕು). ಆ ನಂತರದಲ್ಲಿ ಮೃಗೇಶವರ್ಮನಿಗೆ ಸ್ಥಾನ ಕಲ್ಪಿಸಲಾಗಿದೆ.

ತನ್ನ ಭಟಾರಿ ಕುಲದವನಾಗಲಿ, ಆಳುವ ಕದಂಬ ರಾಜನಾಗಲಿ ಈ ದಾನವನ್ನು ಕೆಡಿಸಬಾರದು ಎಂದು ನಿರ್ದೇಶಿಸುವುದರ ಮೂಲಕ ಕಕುಸ್ಥ ಭಟಾರಿಯು ಶಾಸನಕರ್ತನಾಗಿದ್ದಾನೆ. ಕೊಟ್ಟ ದಾನಕ್ಕೆ ತನ್ನ ಕುಲದವರು ಮತ್ತು ಆಳುವ ಕದಂಬರನ್ನು ಸೇರಿಸಿ ಶಾಪವನ್ನು ಕೊಡುವ ಮೂಲಕ, ಶಾಸನ ಶಾಪಾಶಯಗಳಲ್ಲಿ ಹಲ್ಮಿಡಿ ಶಾಸನ ವಿಶಿಷ್ಟವಾಗಿ ನಿಲ್ಲುತ್ತದೆ. ಈ ಶಾಪಾಶಯವನ್ನು ಗಮನಿಸಿದರೆ, ಸೇಂದ್ರಕವು ಒಂದು ಸಣ್ಣ ದೇಶವೆಂದು ಮನನವಾಗುತ್ತದೆ. ಕಾಲಾಂತರದಲ್ಲಿ, ರಾಜಕೀಯ ಮೇಲಾಟದಲ್ಲಿ ಸೇಂದ್ರಕ ದೇಶವು ಕದಂಬ ರಾಜ್ಯವನ್ನು ಸೇರಿ ಸೇಂದ್ರಕ ವಿಷಯವಾಗಿ ಮಾರ್ಪಾಟಾಗಿರುವುದನ್ನು ಕಾಣುತ್ತೇವೆ.

ಪಲ್ಮಡಿಯಲ್ಲಿ ಭಟಾರಿ ಕುಲದವರು ವಾಸವಾಗಿದ್ದರು. ಕದಂಬ ವಂಶದ ಹೆಣ್ಣನ್ನು ತಮ್ಮ ಕುಲವಧುವಾಗಿ ಮಾಡಿಕೊಂಡ ಈ ಭಟಾರಿ ಕುಲದವರು ಬ್ರಾಹ್ಮಣರಾಗಿರಬೇಕು. ಏಕೆಂದರೆ ಈ ಕುಲದವರ ಮನೆ ಮಗನಂತಿದ್ದ ವಿಜಾರಸನು ಇವರ ಗದ್ದೆಗಳಿಗೆ ರಾಜಭಾಗ ಹತ್ತನೆಯೊಂದು ಕರವನ್ನು ಬಿಟ್ಟನು.

ದಾನವನ್ನು ಕೊಟ್ಟವರು ಮೃಗೇಶವರ್ಮ ಮತ್ತು ನಾಗೇಂದ್ರವರ್ಮ(?) ಈ ಯುದ್ದಾನಂತರ ಮೃಗೇಶನು ಪಟ್ಟಾಭಿಷಕ್ತನಾಗಿರಬೇಕು (ಈಗಿರುವಂತೆ ಮೃಗೇಶನ ಆಳ್ವಿಕೆಯ ಕಾಲ ಕ್ರಿ.ಶ.475-485). ಮೃಗೇಶನ ಆಳ್ವಿಕೆಯ ಆರಂಭ ವರ್ಷವನ್ನು ಈ ಶಾಸನದ ಕಾಲವಾಗಿ ಪರಿಗಣಿಸಬಹುದು. ಶಾಸನದ ಕಾಲ ಕ್ರಿ.ಶ.475 ಆಗುತ್ತದೆ. ಸಂಸ್ಕೃತ ಭಾಷೆಯೊಂದಿಗೆ ಹದವಾಗಿ ಮಿಳಿತಗೊಂಡು ಐದನೆಯ ಶತಮಾನದಲ್ಲೇ ಕನ್ನಡವು ಪ್ರಬುದ್ದ ಭಾಷೆಯಾಗಿ ಹೊರಹೊಮ್ಮಿದೆ.

ಹಲ್ಮಿಡಿ ಶಾಸನದ ಪಠ್ಯ

1. ಜಯತಿ ಶ್ರೀ ಪರಿಷ್ವಙ್ಗಶ್ಯಾಙ್ರ್ಗ [ವ್ಯಾ] ನತಿರಚ್ಯುತಃ ದಾನವಾಕ್ಷ್ಣೋರ್ಯುಗಾನ್ತಗ್ನಿಃ [ಶಿಷ್ಟಾನಾನ್ತು] ಸುದರ್ಶನ: ||
2. ನಮ: ಶ್ರೀಮತ್ಕದಂಬಪನ್ತ್ಯಾಗಸಂಪನ್ನನ್ಕಲಭೋರ[ನಾ] ಅರಿಕ
3. ಕುಸ್ಥಭಟ್ಟೋರನಾಳೆ ನರಿದಾವಿ[ಳೆ] ನಾಡುಳ್ ಮೃಗೇಶನಾ
4. ಗೇನ್ದ್ರಾಭೀಳಭ್ರ್ಬಟಹರಪ್ಪೋರ್ ಶ್ರೀ ಮೃಗೇಶನಾಗಾಹ್ವಯ
5. ರಿವ್ರ್ವರಾ ಬಟರಿಕುಲಾಮಲವ್ಯೋಮತಾರಾಧಿನಾಥನ್ನಳಪ
6. ಗಣಪಶುಪತಿಯಾ ದಕ್ಷಿಣಾಪಥ ಬಹುಶತಹವನಾ
7. ಹವದು[ಳ್] ಪಶುಪ್ರದಾನ ಶೌಯ್ರ್ಯೋದ್ಯಮಭರಿತೋ [ನ್ದಾನ]ಪ
8. ಶುಪತಿಯೆನ್ದು ಪೊಗಳೆಪ್ಪೊಟ್ಟಣ ಪಶುಪತಿ
9. ನಾಮಧೇಯನಾಸರಕ್ಕೆಲ್ಲಭಟರಿಯಾ ಪ್ರೇಮಾಲಯ
10. ಸುತನ್ಗೆ ಸೇನ್ದ್ರಕಬಣೋಭಯದೇಶದಾ ವೀರಾಪುರುಷ ಸಮಕ್ಷ
11. ದೆ ಕೇಕಯ ಪಲ್ಲವರಂ ಕಾದೆರಿದು ಪೆತ್ತಜಯನಾ ವಿಜ
12. ಅರಸನ್ಗೆ ಬಾಳ್ಗಳ್ಚು ಪಲ್ಮಡಿಉಂ ಮೂಳಿವಳ್ಳಿಉಂ ಕೊ
13. ಟ್ಟಾರ್ ಬಟಾರಿಕುಲದೊನಳುಕದಮ್ಬನ್ಕಳ್ದೋನ್ ಮಹಾಪಾತಕನ್
14. ಇವ್ರ್ವರುಂ ಸಳ್ಬಙ್ಗದರ್ ವಿಜಾರಸರುಂ ಪಲ್ಮಡಿಗೆ ಕುರು
15. ಮ್ಬಿಡಿವಿಟ್ಟಾರ್ ಅದಾನಳಿವೊನ್ಗೆ ಮಹಾಪಾತಕಮ್ ಸ್ವಸ್ತಿ
ಎಡಪಕ್ಕ ಸಾಲು
16. ಭಟ್ಟಗ್ರ್ಗೀಗಳ್ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT