ಸುಮತೀಂದ್ರ ನಾಡಿಗ ಕೆಲವು ನೆನಪುಗಳು

7

ಸುಮತೀಂದ್ರ ನಾಡಿಗ ಕೆಲವು ನೆನಪುಗಳು

Published:
Updated:

ತಲೆಯ ತುಂಬ ಕಟ್ಟು ಕಳಚಿಕೊಂಡ ಹೊರೆಯಂತೆ ಕಾಣುವ ಬೆಳ್ಳಗಿನ ಬಿರುಗೂದಲು; ತುಸು ಅರಳಿದಂಥ ಮೂಗಿನ ಹೊಳ್ಳೆಗಳ ಕೆಳಗೆ, ಮೇಲ್ದುಟಿಯ ಮೇಲೆ ಒಂದು ಸಣ್ಣ ಗೆರೆಯಂತಿರುವ ನರೆಮೀಸೆ; ಅದರ ಕೆಳಗೆ ನಗಲು ತವಕಿಸುತ್ತಿರುವಂತೆಯೇ ಬಲಗೈ ತಂದಿತ್ತ ಸಿಗರೇಟನ್ನು ಹಿಡಿದುಕೊಳ್ಳುವ ತುಟಿಗಳು; ತಿಳಿ ಹಸಿರು ಚೌಕಳಿ ಬಟ್ಟೆಯ ಸೂಟು; ಎಡಗೈಯಲ್ಲೊಂದು ಸಾಕಷ್ಟು ಭಾರವಾದ ಚರ್ಮದ ಬ್ಯಾಗು– ಇದು 1974ರಲ್ಲಿ ಒಂದು ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮೊಗಸಾಲೆಯಲ್ಲಿ ನಾನು ಕಂಡ ಸುಮತೀಂದ್ರ ನಾಡಿಗರ ಚಿತ್ರ. ಆ ದಿರಿಸಿನಲ್ಲಿ, ಆ ನಿಂತ ನಿಲುವಿನಲ್ಲಿ ಅವರು ನನಗೆ ಎಲ್ಲಿಂದಲೋ ತಪ್ಪಿಸಿಕೊಂಡು ಬಂದ ಹಿಪ್ಪಿಯಂತೆ ಕಾಣಿಸಿದರೆನ್ನಬೇಕು. ಆಮೇಲೆ ಒಂದೆರಡು ಭೇಟಿಯಲ್ಲೇ ಇವರು ಎಂದಿನಿಂದಲೂ ನನಗೆ ಗೊತ್ತಲ್ಲ ಎನ್ನಿಸುವುದಕ್ಕೆ ಕಾರಣ ಒಂದಿಷ್ಟೂ ಬಿಗುಮಾನವಿಲ್ಲದ, ಯಾರನ್ನೂ ಅನುಮಾನದಿಂದ ನೋಡದ, ಹತ್ತಿರ ಬಂದವರೆಲ್ಲರನ್ನೂ ಆಕರ್ಷಿಸುತ್ತಿದ್ದ ಅವರ ಮಾತು, ಆತ್ಮೀಯತೆ.

ಆಗಷ್ಟೇ ಅಮೆರಿಕದಿಂದ ಹಿಂತಿರುಗಿ ಬಂದು, ಬಸವನಗುಡಿಯಲ್ಲಿ ಮನೆ ಮಾಡಿದ್ದ ನಾಡಿಗರು ಯಾವುದಾದರೊಂದು ಸರಿಯಾದ ಉದ್ಯೋಗಕ್ಕಾಗಿ ಓಡಾಡುತ್ತಿದ್ದರು. ಎಷ್ಟು ಓಡಾಡಿದರೂ ಕೆಲಸವಾವುದೂ ಸಿಕ್ಕಲಿಲ್ಲ. ಕಡೆಗೆ ತಮ್ಮಲ್ಲಿದ್ದ ಸ್ವಲ್ಪ ಹಣವನ್ನು ಹೂಡಿ ಗಾಂಧಿಬಜಾರಿನಲ್ಲಿ ಒಂದು ಪುಸ್ತಕದಂಗಡಿ ತೆರೆದರು. ಅದರ ಹೆಸರು ‘ಕರ್ನಾಟಕ ಬುಕ್ ಹೌಸ್’. ಅದರಲ್ಲಿ ಪುಸ್ತಕ ಕೊಳ್ಳುವವರಿಗಿಂತ ಪುಕ್ಕಟೆ ಓದುವವರೇ ತುಂಬಿರುತ್ತಿದ್ದರು. ಇನ್ನು ಸಂಜೆಯಾದರೆ ಸಾಕು, ಅಲ್ಲಿ ಸೇರುತ್ತಿದ್ದ ನಾಡಿಗರ ಲೇಖಕ ಮಿತ್ರರು ಒಬ್ಬಿಬ್ಬರಲ್ಲ: ನಿಸಾರ್ ಅಹಮದ್, ಜಿ.ಕೆ. ಗೋವಿಂದರಾವ್, ಎ.ಎಸ್. ಮೂರ್ತಿ, ಟಿ.ಜಿ. ರಾಘವ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ವಿಜಯಮ್ಮ, ಗೋಪಾಲಕೃಷ್ಣ ಪೈ, ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಕಿ.ರಂ. ನಾಗರಾಜ, ವ್ಯಾಸರಾವ್, ಎ.ಎನ್. ಪ್ರಸನ್ನ... ಜಯನಗರದಲ್ಲಿದ್ದ ಗೋಪಾಲಕೃಷ್ಣ ಅಡಿಗರಂತೂ ಹೆಚ್ಚುಕಡಿಮೆ ದಿನವೂ ಬರುತ್ತಿದ್ದರು. ಅವರನ್ನು ನೋಡುವುದಕ್ಕೆಂದೇ ಕೆಲವರು ಬೆಂಗಳೂರಿಗೆ ಬಂದಾಗಲೆಲ್ಲ ಅಲ್ಲಿಗೆ ಬರುತ್ತಿದ್ದರು. ಅಂಥವರಲ್ಲಿ ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ಚದುರಂಗ, ಜಿ.ಎಸ್. ಆಮೂರ, ಎಚ್.ಎಂ. ಚೆನ್ನಯ್ಯ, ಸುನಂದಾ ಬೆಳಗಾಂವಕರ, ವಿವೇಕ ಶಾನಭಾಗ ನೆನಪಾಗುತ್ತಾರೆ.

ಆ ಕಾಲದಲ್ಲಿ ನಾಡಿಗರು ತಮ್ಮ ಅಂಗಡಿಗೆ ಬಂದವರಿಗೆ ಅಥವಾ ರಸ್ತೆಯಲ್ಲಿ ನಡೆಯುತ್ತಿರುವಾಗಲೋ ಹೋಟೆಲಿನಲ್ಲಿ ಕಾಫಿ ಹೀರುತ್ತಿರುವಾಗಲೋ ಸಿಕ್ಕವರಿಗೆ, ಅವರ ಪರಿಚಿತರಿರಲಿ ಅಥವಾ ಪರಿಚಯ ಮಾಡಿಕೊಂಡವರಿರಲಿ, ತಮ್ಮ ಕೋಟಿನ ಜೇಬಿನಿಂದ ಪದ್ಯವೊಂದನ್ನು ಸೆಳೆದು ಕೊಡುತ್ತಿದ್ದರು. ‘ಆರು ಕವನ ಸಂಕಲನಗಳು’ ಎಂಬ ತಮ್ಮ ಕೃತಿಯ ಮುನ್ನುಡಿಯಲ್ಲಿ ಅವರು ಹೇಳುತ್ತಾರೆ: ‘ಸಾಮಾನ್ಯವಾಗಿ ನನ್ನ ಮನಸ್ಸಿಗೆ ಘಾಸಿಯಾಗುವ ಮಾತು ಕೇಳಿದಾಗ, ಅಥವಾ ನಡತೆಯನ್ನು ಕಂಡಾಗ, ಅಥವಾ ಯಾವುದೋ ಒಂದು ತತ್ವವೋ, ವಿಚಾರವೋ, ಘಟನೆಯೋ ನನ್ನನ್ನ ಅಸ್ವಸ್ಥಗೊಳಿಸಿದಾಗ, ಸಮಾಧಾನವನ್ನು ಕಂಡುಕೊಳ್ಳುವ ಕ್ರಿಯೆಯಾಗಿ, ಕವಿತೆ ಬರೆಯುತ್ತೇನೆ. ಇನ್ನು ಕೆಲವೊಮ್ಮೆ ಸಂತೋಷವನ್ನು ತಂದ ಯಾವುದೋ ಸಂಗತಿಯೇ ಕಾವ್ಯರಚನೆಗೆ ನನ್ನನ್ನು ಪ್ರೇರೇಪಿಸುತ್ತದೆ. ಬರೆದ ಪದ್ಯಗಳನ್ನು ಅನೇಕ ಬಾರಿ ತಿದ್ದುವುದು ನಾನು ಕಲಿತ ಪಾಠಗಳಲ್ಲಿ ಒಂದಾಗಿದೆ.’’ ಹೌದು, ನಾಡಿಗರು ಹೆಚ್ಚೂಕಡಿಮೆ ಪ್ರತಿದಿನವೂ ಕವನ ಬರೆಯುತ್ತಿದ್ದರು. ಮೊದಲು ಕವನವೊಂದರ ಹಲವು ‘ಡ್ರಾಫ್ಟು’ಗಳು (ಕರಡು ಪ್ರತಿಗಳು) ಒಂದಾದ ಮೇಲೊಂದರಂತೆ ಸಿದ್ಧವಾಗುತ್ತಿದ್ದವು. ಕವನ ಪರಿಪೂರ್ಣವಾಯಿತು ಅನ್ನಿಸಿದಾಗ ಅದನ್ನು ಯಾವುದಾದರೂ ಪತ್ರಿಕೆಗೆ ಕಳಿಸುತ್ತಿದ್ದರು. ಅಂದರೆ ಒಂದು ಕವನದ ಹಿಂದೆ ಅನೇಕ ‘ಡ್ರಾಫ್ಟು’ಗಳಿರುತ್ತಿದ್ದವು. ಎ.ಕೆ. ರಾಮಾನುಜನ್ ಒಮ್ಮೆ ಅವರ ಪುಸ್ತಕದಂಗಡಿಯಲ್ಲೇ, ‘‘ನಿಮ್ಮ ಡ್ರಾಫ್ಟುಗಳನ್ನೆಲ್ಲ ನಾನು ಪ್ರಿಂಟಲ್ಲೇ ಓದಿಬಿಡ್ತೀನಿ’’ ಎಂದು ತಮಾಷೆ ಮಾಡಿದ್ದರು, ನಿಜ. ಆದರೂ ಅವರು ನಾಡಿಗರ ಜಾನ್ ಡನ್‌ನ ಕೆಲವು ಕವನಗಳ ಅನುವಾದವನ್ನು ಮೆಚ್ಚಿಕೊಂಡು ‘‘ನೀವು ಡನ್‌ನನ್ನು ಕನ್ನಡದಲ್ಲಿ ಡಂಗೂರ ಹೊಡೆದಿದ್ದೀರಿ’’ ಎಂದಿದ್ದುಂಟು.

ಕಾವ್ಯವ್ಯಾಮೋಹಿಯಾಗಿದ್ದ, ನಿರಂತರ ಕಾವ್ಯಾಭ್ಯಾಸಿಯಾಗಿದ್ದ ನಾಡಿಗರು ತರುಣರು ಯಾರಾದರೂ ತಮ್ಮ ಕವನಗಳನ್ನು ತೋರಿಸಿದರೆ ಅವುಗಳನ್ನು ಯಾವ ಮುಲಾಜೂ ಇಲ್ಲದೆ ತುಸು ಕಟುವಾಗಿಯೇ ವಿಮರ್ಶಿಸುತ್ತ ‘ತಿದ್ದು’ತ್ತಿದ್ದರು. ತತ್ಪರಿಣಾಮವಾಗಿ ಕೆಲವರ ಸಿಟ್ಟಿಗೂ ಗುರಿಯಾಗುತ್ತಿದ್ದರು. ಹಾಗೆ ನೋಡಿದರೆ ಅವರಿಗೆ ‘ತಿದ್ದು’ವುದೊಂದು ಹವ್ಯಾಸವೇ ಆಗಿತ್ತೆನ್ನಬೇಕು. ಒಮ್ಮೆ ನಾನು ಅವರ ಕಣ್ಣುತಪ್ಪಿಸಿ ಅವರದೊಂದು ‘ಡ್ರಾಫ್ಟ’ನ್ನು ಎಗರಿಸಿದೆ; ಕೆಲವು ದಿನಗಳ ನಂತರ ಅದನ್ನು ಬೇರೊಂದು ಹಾಳೆಯಲ್ಲಿ ಕಾಪಿ ಮಾಡಿ, ನಾನೇ ಬರೆದದ್ದೆಂದು ಹೇಳುತ್ತ ಅವರಿಗೆ ಕೊಟ್ಟೆ. ಅವರು ‘ಏನ್ರೀ, ಇಲ್ಲಿ ಲಯವಿಲ್ಲ, ಈ ಉಪಮೆ ಸರಿಯಿಲ್ಲ’ ಎಂದವರೇ ಅದನ್ನೂ ತಿದ್ದಿದರು!

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಜಿ.ಪಿ. ರಾಜರತ್ನಂ ಅವರ ವಿದ್ಯಾರ್ಥಿಯಾಗಿದ್ದ ನಾಡಿಗರು, ರಾಜರತ್ನಂ ಅವರಂತೆಯೇ ಸಾಹಿತ್ಯ ಪರಿಚಾರಿಕೆಯಲ್ಲಿ ತೊಡಗಿಕೊಂಡವರು. ಯಾರಾದರೂ ಬರೆದ ಒಂದು ಕವನವೋ ಕತೆಯೋ ಕಾದಂಬರಿಯೋ ಉತ್ತಮವೆನ್ನಿಸಿದರೆ ಅದರ ಬಗ್ಗೆ ಎಷ್ಟು ಜನರಿಗೆ ಹೇಳಿದರೂ ಅವರಿಗೆ ತೃಪ್ತಿಯಾಗುತ್ತಿರಲಿಲ್ಲ. ಎಚ್.ಎಸ್. ಶಿವಪ್ರಕಾಶರ ಮೊದಲ ಕವನಸಂಕಲನ ‘ಮಿಲರೇಪ’ ಪ್ರಕಟವಾದಾಗ ಅವರನ್ನು ತಮ್ಮ ಪುಸ್ತಕದಂಗಡಿಗೆ ಕರೆದುಕೊಂಡು ಬಂದು ಅಡಿಗರ ಸಮ್ಮುಖದಲ್ಲಿ ಅಲ್ಲಿನ ಕವನಗಳನ್ನು ಓದಿಸಿದ್ದು ಇನ್ನೂ ನನ್ನ ನೆನಪಿನಲ್ಲಿದೆ.

1972–73ರ ಸುಮಾರಿನಲ್ಲಿ ಇದ್ದ ಕೆಲಸವನ್ನು ಬಿಟ್ಟು ಪಿ.ಎಚ್‌ಡಿ ಮಾಡುವುದಕ್ಕಾಗಿ ಅಮೆರಿಕಕ್ಕೆ ಹೋದ ನಾಡಿಗರು ಅಲ್ಲಿನ ಟೆಂಪಲ್ ಯೂನಿವರ್ಸಿಟಿ ಹಾಗೂ ಹ್ಯಾವರ್‌ಫೋರ್ಡ್ ಕಾಲೇಜುಗಳಲ್ಲಿ ಪಾರ್ಟ್‌ಟೈಂ ಇನ್‌ಸ್ಟ್ರಕ್ಟರ್ ಆಗಿದ್ದರು. ಆಗ ಅವರು ಗಳಿಸುತ್ತಿದ್ದದ್ದು ಕಡಿಮೆಯೆಂದರೆ ತೀರಾ ಕಡಿಮೆ. ಅದರಲ್ಲೇ ಹಣ ಉಳಿಸಿ ಗೋಪಾಲಕೃಷ್ಣ ಅಡಿಗರನ್ನು ಅಲ್ಲಿಗೆ ಕರೆಸಿಕೊಂಡರು. ಅಲ್ಲಿ ಹಲವು ಕಾಲೇಜುಗಳಲ್ಲಿ ಅಡಿಗರ ಭಾಷಣಗಳನ್ನೂ ಕಾವ್ಯವಾಚನವನ್ನೂ ಏರ್ಪಡಿಸಿದರು. ಅಡಿಗರ ಕೆಲವು ಮುಖ್ಯ ಕವನಗಳನ್ನು ಇಂಗ್ಲಿಷಿಗೆ ಅನುವಾದಿಸಿ, ಅವುಗಳನ್ನು ಅಲೆನ್ ಗಿನ್ಸ್‌ಬರ್ಗ್‌ನಂಥ ಅಮೆರಿಕನ್ ಕವಿಗಳು ಓದುವಂತೆ ಮಾಡಿದರು.

ಅಡಿಗರ ಕಾವ್ಯದ ಜೊತೆ ಅವರು ತುಂಬ ಇಷ್ಟಪಡುತ್ತಿದ್ದದ್ದು ಬೇಂದ್ರೆಯವರ ಕಾವ್ಯ. ಹಿಂದೊಮ್ಮೆ ‘ಪ್ರಜಾವಾಣಿ’ಯಲ್ಲಿ ಬೇಂದ್ರೆಯವರ ‘ನಾಕುತಂತಿ’ಯ ಕವನಗಳನ್ನು ವಿಮರ್ಶಿಸುತ್ತ ‘ಡೂ’ ಎಂಬ ಕವನದಲ್ಲಿರುವ ‘ಡೂ ಡೂ ಮಾಡೂ ಹಾಡೂ ನೀಡೂ’ ಎಂಬಂತೆ ‘ಸೇ ಐಸೇ ದೋಸೇ’ ಎಂದು ಕೂಡ ಬರೆಯಬಹುದೆಂದು ಬೇಂದ್ರೆಯವರನ್ನು ಕೆಣಕಿದ ನಾಡಿಗರು ಮುಂದೆ ‘ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ ಎಂಬ ಪ್ರೌಢ ಪ್ರಬಂಧವನ್ನೇ ರಚಿಸಿದರು. ಅದೇ ಸುಮಾರಿಗೆ ನನಗೆ, ಜಿ.ಪಿ. ಬಸವರಾಜು ಅವರಿಗೆ ಮತ್ತು ಗೋಪಾಲಕೃಷ್ಣ ಪೈಗೆ ಸುಮಾರು ಐದಾರು ದಿನ ಎಲಿಯಟ್ಟನ ‘ವೇಸ್ಟ್‌ಲ್ಯಾಂಡ್’ ಪಾಠ ಮಾಡಿದ್ದುಂಟು. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳಲ್ಲದ ನಮಗೆ ಅದರಿಂದ ಎಷ್ಟೆಲ್ಲ ಉಪಯೋಗವಾಯಿತೆಂದು ವಿವರಿಸಲಾಗದು. ಹಾಗೆಯೇ ಬಿ.ಜಿ.ಎಲ್. ಸ್ವಾಮಿಯವರ ಕೃತಿಗಳ ಪ್ರಭಾವದಿಂದ ‘ಸಸ್ಯಲೋಕ’ ಎಂಬ ಕವನ ಬರೆದದ್ದಲ್ಲದೆ ಒಂದು ದಿನ ಅವರನ್ನು ಲಾಲ್‌ಬಾಗಿಗೆ ಕರೆದೊಯ್ದು ನಮ್ಮಲ್ಲಿ ಕೆಲವರಿಗೆ ಅವರು ಅಲ್ಲಿನ ಮರ ಮರವನ್ನೂ ಪರಿಚಯಿಸುವಂತೆ ಮಾಡಿದರು. ಅಂದು ನಮ್ಮಲ್ಲಿ ಒಂದು ಟೇಪ್ ರೆಕಾರ್ಡರ್ ಇರಲಿಲ್ಲವಲ್ಲ ಎಂದು ಈಗಲೂ ಹಳಹಳಿಸುತ್ತಿದ್ದೇನೆ.
ನಾಡಿಗರದು ಅಸಾಧ್ಯ ಹಾಸ್ಯಪ್ರಜ್ಞೆ. ವೈಯೆನ್ಕೆಯವರ ನಂತರ ನಾಡಿಗರಷ್ಟು ‘ಪನ್’ ಮಾಡುತ್ತಿದ್ದ ಇನ್ನೊಬ್ಬರನ್ನು ನಾನು ಕಂಡಿಲ್ಲ. ಉದಾಹರಣೆಗೆ – ಕೆಮ್ಮುವವನಾದರೆ ಅವನು ‘ಕಾಫ್ಕ’, ನವೆಯಿಂದಾಗಿ ತುರಿಸಿಕೊಳ್ಳುವವನು ‘ಕೆರ್ಕ್‌ಗಾರ್ಡ್’, ಯಾರಾದರೂ ಅರ್ಜೆಂಟೀನಾದ ಲೇಖಕ ಬೋರ‍್ಹೆಸ್‌ನ ಮಾತೆತ್ತಿದರೆ ಅವನು ‘ಬೋರ್ ಹೈ’, ಅವರು ಕೆಲಸ ಮಾಡುತ್ತಿದ್ದ ‘ಬಾಪ್ಕೊ’ ಪ್ರಕಾಶನ ಸಂಸ್ಥೆಯಾದರೆ ‘ತೆರಿ ಬಾಪ್ಕು’ ಎಂಬ ಬೈಗುಳ. ಮತ್ತೆ ತಮ್ಮ ಬಿಳಿ ಕೂದಲ ಬಗ್ಗೆ ಎಷ್ಟು ತಮಾಷೆ ಮಾಡಿಕೊಂಡರೂ ಸಾಲದು. (‘ನರೆಕೂದಲು’ ಎಂಬ ಅವರದೊಂದು ಪ್ರಬಂಧವೇ ಇದೆ.) ಒಮ್ಮೊಮ್ಮೆ ತಮ್ಮ ಕವನಗಳಿಗೆ ‘ಧವಳಕೇಶಿ’ ಎಂದೋ ‘ಕೇಶರಾಜ’ ಎಂದೋ ಅಂಕಿತ ಹಾಕುತ್ತಿದ್ದದ್ದೂ ಉಂಟು.

1980ರ ದಶಕದಲ್ಲಿ ಅದು ಹೇಗೋ ಅವರಿಗೆ ಕೆಲವರ ಕೃತಿಚೌರ್ಯವನ್ನು ಬಯಲು ಮಾಡಬೇಕೆನಿಸಿತು. ಈ ಸಂಬಂಧ ಎರಡು ಪ್ರಸಂಗಗಳು ನೆನಪಾಗುತ್ತವೆ. ಒಂದು, ರಾಮಚಂದ್ರದೇವ ಯೂಗೋಸ್ಲಾವಿಯಾದ ಕವಿ ವಾಸ್ಕೊ ಪೋಪನ ಒಂದು ಕವನ ಕದ್ದಿದ್ದಾರೆಂದು ಆರೋಪಿಸಿದ್ದು. ರಾಮಚಂದ್ರದೇವರು ಅದು ಕದ್ದದ್ದಲ್ಲವೆಂದೂ ತಾವು ‘ಅನುವಾದ’ ಎಂದು ಬರೆದಿದ್ದು ಮುದ್ರಣದ ಸಮಯದಲ್ಲಿ ಬಿಟ್ಟುಹೋಯಿತೆಂದೂ ಸಮಜಾಯಿಷಿ ಕೊಟ್ಟರು. ಎರಡು, ಅನಂತಮೂರ್ತಿಯವರ ‘ಮೌನಿ’ ಕತೆಯ ಮೂಲ ಬರ್ನಾಡ್ ಮಲಾಮಡ್‌ನ ‘ಮೌರ್ನರ್ಸ್’ ಎಂಬ ಕತೆ ಎಂದು ಸಾಧಿಸುವುದಕ್ಕಾಗಿ ಲೇಖನವೊಂದನ್ನು ಬರೆದದ್ದು. ಆ ಕಾಲದಲ್ಲಿ ‘ಫೇಸ್‌ಬುಕ್’ ಇರಲಿಲ್ಲ; ಇದ್ದಿದ್ದರೆ ಎಂದೂ ಯಾವುದೇ ಸಾಹಿತ್ಯ ಕೃತಿಯನ್ನು ಓದದವರು ಕೂಡ ಖುಷಿಪಡುತ್ತಿದ್ದುದರಲ್ಲಿ ಸಂಶಯವಿಲ್ಲ. ಆದರೆ ಆಗ ಕೆಲವರು ಅದೊಂದು ‘ಮೂಲವ್ಯಾಧಿ’ಯೆಂದು ನಕ್ಕರು. ಒಬ್ಬ ವಿಮರ್ಶಕರು ಬರ್ನಾರ್ಡ್ ಮಲಾಮಡ್‌ನ ಕತೆಯನ್ನು ಓದದೆಯೇ ‘ಮೌನಿ’ ತೀರ ಒರಿಜಿನಲ್ ಕತೆಯೆಂದು ತೀರ್ಪು ಕೊಟ್ಟರು.

ಮೇಲಿನ ಇಂಥ ಪ್ರಸಂಗಗಳಿಂದಲೇ ಅವರು ತಮ್ಮ ಸಮಕಾಲೀನ ಲೇಖಕರ, ವಿಮರ್ಶಕರ ಅನುಮಾನಕ್ಕೆ ಪಾತ್ರರಾದರೋ ಏನೊ. ತಾವು ಓದಿದ್ದನ್ನು ತಕ್ಷಣ ಇತರ ಸಾಹಿತ್ಯಪ್ರಿಯರ ಜೊತೆ ಹಂಚಿಕೊಳ್ಳಬೇಕೆಂಬ ಅವಸರವೇ ಅವರನ್ನು ಹೊತ್ತಲ್ಲದ ಹೊತ್ತಿನಲ್ಲಿ, ಕೆಲವೊಮ್ಮೆ ಅರ್ಧರಾತ್ರಿಯಲ್ಲಿ, ಯಾರ‍್ಯಾರಿಗೋ ಫೋನ್ ಮಾಡುವಂತೆ ಮಾಡುತ್ತಿತ್ತು. ಅದರ ಹಿಂದಿದ್ದ ಉದ್ದೇಶವನ್ನು ಅರಿಯಲಾರದ ಕೆಲವರು ಆ ಬಗ್ಗೆ ಕೆಲವು ಕಾರ್ಯಕ್ರಮಗಳ ವೇದಿಕೆಗಳಲ್ಲಿ ಕೂಡ ಆಡಿಕೊಂಡು ನಗುತ್ತಿದ್ದರಲ್ಲ, ಅದಕ್ಕೇನು ಹೇಳುವುದು?

ರಾಜಕೀಯವಾಗಿ ಸಮರ್ಪಕವಾಗಿರುವುದನ್ನು ದ್ವೇಷಿಸಿದ ಕೆಲವೇ ಕೆಲವರಲ್ಲಿ ನಾಡಿಗರಿಗೆ ಅಗ್ರಸ್ಥಾನ. ಆ ಗುಣವನ್ನು ಅವರು ಅಡಿಗರಿಂದಲೇ ಕಲಿತಿರಲಿಕ್ಕೆ ಸಾಕು. ನಮ್ಮಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿ ಲೇಖಕರು ತಮಗೆ ಅನ್ನಿಸಿದ್ದನ್ನು, ಅದೆಷ್ಟೇ ಅಹಿತವಾಗಿದ್ದರೂ, ಬಹಿರಂಗವಾಗಿ ಹೇಳಬಲ್ಲರೆ? ಅನುಮಾನ. ಆದರೆ ಎಂದೂ ಯಾವ ಮುಚ್ಚುಮರೆಯನ್ನೂ ಅರಿಯದಿದ್ದ ನಾಡಿಗರು ಹಾಗಿರಲಿಲ್ಲ. ಆದ್ದರಿಂದಲೇ ಕನ್ನಡ ಸಾಹಿತ್ಯದ ಶಕ್ತಿ ಕೇಂದ್ರಗಳು ಅವರನ್ನು ದೂರವಿಟ್ಟವು; ಅವರು ತಮಗೆ ದೊರೆಯಬೇಕಾಗಿದ್ದ ಸ್ಥಾನಗಳಿಂದ, ಪ್ರಶಸ್ತಿಗಳಿಂದ ವಂಚಿತರಾದರು. ಕೆಲವರಂತೂ ನಾಡಿಗರ ಹೆಸರೆತ್ತಿದರೆ ಸಾಕು, ಅವರು ‘ಬಲಪಂಥೀಯ’, ‘ಆರ್.ಎಸ್.ಎಸ್’, ‘ಭೈರಪ್ಪನವರ ಅನುಯಾಯಿ’ ಎಂದು ಉರಿದುಬೀಳುತ್ತಿದ್ದರು.

ಕಡೆಕಡೆಗೆ ಅವರು ಒಂಟಿಯಾದರೆ? ನವ್ಯರ ಕಾಲದಲ್ಲಿ ಬಹಳಷ್ಟು ಲೇಖಕರಿಗೆ ಸಾಹಿತ್ಯದ ಅಸಲು ಕಸುಬಿನ ಬಗೆಗೆ ಹೇಗೋ ಹಾಗೆ ಜೀವನಮೌಲ್ಯಗಳ ಬಗೆಗೂ ನಿಷ್ಠೆಯಿತ್ತು. ಆದರೆ ಕ್ರಮೇಣ ರಾಜಕೀಯ ಪ್ರಭಾವವಿದ್ದರೆ ಏನೆಲ್ಲ ಗಳಿಸಬಹುದೆಂದು ಅರಿತುಕೊಂಡ ಅನೇಕರು ಆ ಕಡುಕಷ್ಟದ ನಿಷ್ಠೆಯನ್ನು ಮರೆತು ಬದಲಾಗಿಬಿಟ್ಟದ್ದು ಈಗ ಇತಿಹಾಸ. ಆದರೆ ನಾಡಿಗರು ಮಾತ್ರ ಅಂಥ ನಿಷ್ಠೆಗೇ ಗಂಟುಬಿದ್ದರು. ‘40 ವರ್ಷಗಳ ನಂತರ’ ಎಂಬ ಅವರ ಕವನ ಹಾಗೆ ಬದಲಾದವರೊಬ್ಬರ ಎರಡು ಮುಖಗಳನ್ನು ಚಿತ್ರಿಸಿರುವುದನ್ನು ನೋಡಿ:

ನಲವತ್ತು ವರ್ಷಗಳ ಈಚೆ ಸಂಧಿಸಿದಾಗ, ನಿನ್ನ ಪಾಡಿಗೆ ನೀನು,
ನನ್ನ ಪಾಡಿಗೆ ನಾನು, ನಮ್ಮೆರಡು ಜೀವಗಳು ಬಾಯಿಬಿಡಲಿಲ್ಲ.
ಜನರ ಮಾತುಗಳಲ್ಲಿ ದೊಡ್ಡವರೆ ಇದ್ದರೂ, ದೊಡ್ಡತನ ಎಲ್ಲಿಯೂ
ಕಾಣಲಿಲ್ಲ. ಇದು ಮಿಲನವಾಗಿರಲಿಲ್ಲ, ಮುಂಚೆಯೆ ತಿಳಿಸಿದ್ದ ಪಾರ್ಟಿಯಾಗಿತ್ತು.
ಪಾರ್ಟಿಯ ಮುಗುಳ್ನಗೆ ಇತ್ತು. ಅಹಂಕಾರ ಕೋಳಿಗಳು ಒಂದನ್ನೊಂದು
ಕುಕ್ಕುವ ಕ್ರಮಕ್ಕೆ ಸ್ಪರ್ಧೆ ನಡೆದಿತ್ತು. ಇದನ್ನೆಲ್ಲ ನೋಡುತ್ತ
ನೋಡುತ್ತ ಒಳಗೊಳಗೆ ನಾಚಿಕೆಯಿತ್ತು. ಸಹಜ ವರ್ತನೆ
ಎಲ್ಲೊ ಮಾಯವಾದದ್ದನ್ನು ಹೇಳಿಕೊಳ್ಳಲು ಹೊರಟ
ಹಳೆಯ ಸ್ನೇಹದ ಬಾಯಿ ಕಟ್ಟಿಹೋಗಿತ್ತು. 

***

-ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಓದುಗರ ಜೊತೆ ಸಂವಾದದಲ್ಲಿ ತೊಡಗಿದ್ದ ಸುಮತೀಂದ್ರ ನಾಡಿಗ. ಅವರ ಪತ್ನಿ ಮಾಲತಿ ಕೂಡ ಚಿತ್ರದಲ್ಲಿ ಇದ್ದಾರೆ. -ಪ್ರಜಾವಾಣಿ ಚಿತ್ರ, ಎಂ.ಎಸ್‌.ಮಂಜುನಾಥ್‌ 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !