7

ಅಕ್ಷರ ಪಯಣದ ಮೊದಲ ನೆನಪು...

Published:
Updated:

ಕನ್ನಡದ ಹೆಸರಾಂತ ಕಥೆಗಾರರು, ಕಾದಂಬರಿಕಾರರು, ಲೇಖಕಿಯರು ತಮ್ಮ ಮೊದಲ ಬರವಣಿಗೆ, ಅದಕ್ಕೆ ಬಂದ ಮೊದಲ ಪ್ರತಿಕ್ರಿಯೆ, ಮೊದಲ ಗೌರವ ಸಂಭಾವನೆ, ಮೊದಲ ಪ್ರಶಸ್ತಿ… ಹೀಗೆ ಅನೇಕ ‘ಮೊದಲ’ ಸಿಹಿ ನೆನಪುಗಳ ಬುತ್ತಿಯನ್ನು ‘ಮುಕ್ತಛಂದ’ದ ಜತೆ ಹಂಚಿಕೊಂಡಿದ್ದಾರೆ.

ಎರಡು ಬಾಟಲಿ ಬಿಯರ್‌ ಪಣಕ್ಕೆ ‘ಕಪ್ಪು’ ಕಾದಂಬರಿ!

 ‘ನನ್ನದು ಮೌಖಿಕ ಪರಂಪರೆಯಿಂದ ಬಂದ ಕಥಾ ಜಗತ್ತು. ನನ್ನ ಅಜ್ಜ, ಅಜ್ಜಿ, ಅಪ್ಪ ಒಳ್ಳೆಯ ಕಥೆಗಳನ್ನು ಹೇಳುತ್ತಿದ್ದರು. ಕಥೆ ಕೇಳಿಸಿಕೊಂಡೇ ಬೆಳೆದವರು ಅವರು. ಬೆಳೆಯುತ್ತಾ ನಾವೂ ಕಥೆ ಹೆಣೆಯುತ್ತಾ, ಅದಕ್ಕೆ ಮತ್ತೊಂದಿಷ್ಟು ಉಪ್ಪು, ಖಾರ, ಮಸಾಲೆ ಸೇರಿಸಿ ಹಿಗ್ಗಿಸಿ ರೋಚಕವಾಗಿ ಬಣ್ಣಿಸುವ ಕಲೆ ಬಾಲ್ಯದಲ್ಲೇ ಸಿದ್ಧಿಸಿಬಿಟ್ಟಿತು. ಒಂದು ಸಂಗತಿಯನ್ನು ಭೂತಗನ್ನಡಿಯಲ್ಲಿ ನೋಡಿದಾಗ ಹೇಗೆ ಕಾಣಿಸುತ್ತದೆಯೋ ಹಾಗೆ ಅಂದುಕೊಳ್ಳಿ, ಆ ರೀತಿಯಲ್ಲಿ ಸಣ್ಣ ಸಂಗತಿಯನ್ನು ಬಹಳ ಹಿಗ್ಗಿಸಿ ಕಥನ ರೀತಿಯಲ್ಲಿ ಹೇಳುತ್ತಿದ್ದೆ.

‘ಸಹಪಾಠಿಗಳಿಗೆ ಕಥೆಗಳನ್ನು ಹೇಳಬೇಕೆಂದರೆ ಅದಕ್ಕೆ ಸಾಮಗ್ರಿ ಬೇಕಲ್ಲಾ? ಅದಕ್ಕೆ ಚಿಕ್ಕಂದಿನಲ್ಲೇ ಚಂದಮಾಮದಂಥ ಪತ್ರಿಕೆಗಳಲ್ಲಿ ಬರುತ್ತಿದ್ದ ಕಥೆಗಳನ್ನು ಓದಲು ಆರಂಭಿಸಿದೆ. ಎನ್‌. ನರಸಿಂಹಯ್ಯ, ಬಿ.ಕೆ.ಸುಂದರ್‌ ರಾಜ್‌ ಅವರ ಕಥೆಗಳಿಂದ ಹಿಡಿದು ತರಾಸು, ಅನಕೃ ಅವರಂಥವರ ಗಂಭೀರ ಸಾಹಿತ್ಯವನ್ನೂ ಓದಿದೆ. ತಂದೆ ತಂದುಕೊಟ್ಟಿದ್ದ ಎ.ಆರ್‌. ಕೃಷ್ಣಶಾಸ್ತ್ರಿಗಳ ವಚನ ಭಾರತವನ್ನು ಬಾಲ್ಯದಲ್ಲಿಯೇ ಅರೆದು ಕುಡಿದಿದ್ದೆ. ಬಾಲ್ಯದಲ್ಲಿ ಅಂಟಿದ ಬರವಣಿಗೆಯ ಚಟದಿಂದಾಗಿ ಎಂಟನೇ ತರಗತಿಯಲ್ಲಿ ಇರುವಾಗ ಒಂದು ಕೊಲೆ ಪ್ರಕರಣ ಆಧಾರವಾಗಿಟ್ಟುಕೊಂಡು 60–70 ಪುಟಗಳ ಪತ್ತೇದಾರಿ ಕಾದಂಬರಿ ಬರೆದಿದ್ದೆ. ಅದನ್ನು ಪ್ರಕಟಿಸುವ ದಾರಿ ಗೊತ್ತಿರಲಿಲ್ಲ. ಅದೇ ನನ್ನ ಮೊದಲ ಸಾಹಿತ್ಯ ಬರವಣಿಗೆಯ ಹಸ್ತಪ್ರತಿ ಇರಬಹುದು. ನಮ್ಮ ಬದುಕೇ ಒಂದು ರದ್ದಿಯಂತಿದ್ದುದರಿಂದ ಆ ರದ್ದಿಯೊಳಗೆ ಮೊದಲ ಬರವಣಿಗೆಯ ಹಸ್ತ ಪ್ರತಿ ರದ್ದಿಯಾಗಿ ಹೋಯಿತು!

ಇನ್ನು ಪದ್ಯಗಳ ವಿಷಯಕ್ಕೆ ಬಂದರೆ ಸಿದ್ದಗಂಗಾ ಮಠದದಲ್ಲಿ ಟಿಸಿಎಚ್‌ (ಶಿಕ್ಷಕರ ತರಬೇತಿ ಕೋರ್ಸ್‌) ಓದುತ್ತಿರುವಾಗ ಶಿವಕುಮಾರ ಸ್ವಾಮೀಜಿ ಕುರಿತು ಭಾಮಿನಿ ಷಟ್ಪದಿಯಲ್ಲಿ 50 ಪದ್ಯಗಳನ್ನು ಬರೆದಿದ್ದೆ. ಅದು ನನ್ನ ಕವನಗಳ ಮೊದಲ ಹಸ್ತಪ್ರತಿ. ಕವಿ ಎನಿಸಿಕೊಳ್ಳುವ ಗೀಳು ಹತ್ತಿ ನವ್ಯ ಕವಿಗಳ ಕೆಲವು ಸಾಲುಗಳನ್ನು ಕದ್ದು ಪದ್ಯ ಬರೆಯಲು ಆರಂಭಿಸಿದೆ. ಪಕ್ಕದ ಮನೆಯ ಹುಡುಗಿಯೊಬ್ಬಳು ಕಾದಂಬರಿ ಪುಸ್ತಕಗಳನ್ನು ನನ್ನಿಂದ ತೆಗೆದುಕೊಂಡು ಹೋಗುತ್ತಿದ್ದಳು. ಆಕೆಯ ಸೌಂದರ್ಯಕ್ಕೆ ಮಾರು ಹೋಗಿ:

ಹಾಲು ಜೇನಿನ ಬೆಣ್ಣೆ

ಅದನ್ನು ಕದಿಯುವ ಹೆಣ್ಣೆ

ರಸದೂಟ ಬಡಿಸು ನಿನ್ನ ಕವಿಗೆ ಒಮ್ಮೆ...

ಎನ್ನುವ ಪದ್ಯ ಬರೆದು ಅದನ್ನು ಪುಸ್ತಕದೊಳಗೆ ಇಟ್ಟುಕೊಟ್ಟಿದ್ದೆ. ಹೋದ ವೇಗದಲ್ಲೇ ಆಕೆ ಮರಳಿ ಬಂದು ಪುಸ್ತಕ ಕೈಗೆ ಕೊಟ್ಟು ಹೋದಳು. ಹೀಗೆ ಮೊದಲ ಪ್ರೇಮವೂ ಭಗ್ನಗೊಂಡು ರದ್ದಿ ಸೇರಿತು!

ನಮ್ಮ ಊರಿನ ಪಕ್ಕದ ಹರಪನಹಳ್ಳಿಯಲ್ಲಿ ದುರ್ಗಮ್ಮನ ಜಾತ್ರೆ ನಡೆಯುತ್ತಿತ್ತು. ಆ ಜಾತ್ರೆಯಲ್ಲಿ ಕೋಣ ಮತ್ತು ಕುರಿಗಳನ್ನು ಬಲಿಕೊಡುತ್ತಿದ್ದರು. ಇಡೀ ರಾತ್ರಿ ನೋಡಿದ ದೃಶ್ಯಗಳ ಕುರಿತು ‘ಬಲಿ’ ಎನ್ನುವ ಕಥೆ ಬರೆದೆ. ‘ಗುಂಪು’ ಪತ್ರಿಕೆಯ ಕಥಾಸಂಕಲನದಲ್ಲಿ ಅದು ಪ್ರಕಟವಾಯಿತು. ಆಗ ನನಗೆ 20ರ ಹರೆಯ. ನನ್ನ ಹೆಸರನ್ನು ಕೆ. ವೀರಭದ್ರಪ್ಪ ಎಂದೇ ಬರೆದುಕೊಳ್ಳುತ್ತಿದ್ದೆ. ಆ ಕಥೆ ಓದಿದ ಶಾಂತಿನಾಥ ದೇಸಾಯಿ ಅವರು ಅದರ ವಿಮರ್ಶೆಯನ್ನು ‘ಪ್ರಜಾವಾಣಿ’ಗೆ ಬರೆದಿದ್ದರು. ‘ಈ ಹುಡುಗ ಮುಂದೆ ಪ್ರತಿಭಾನ್ವಿತ ಕಥೆಗಾರನಾಗುತ್ತಾನೆ’ ಎಂದು ವಿಮರ್ಶೆಯಲ್ಲಿ ಬರೆದಿದ್ದರು. ಅದರಿಂದ ಉತ್ತೇಜಿತನಾಗಿ ಕಥೆ ಬರೆಯಲು ಶುರು ಮಾಡಿದೆ.

ಎಂ.ಬಿ.ಸಿಂಗ್‌ ಅವರು ಹಸಿವಿನ ಕುರಿತು ಬರೆಯಲು ಎಲ್ಲರಿಗೂ ಆಹ್ವಾನ ಕೊಟ್ಟಿದ್ದರು. ಅದಕ್ಕೆ ಬಹುಮಾನ ಕೂಡ ಇಟ್ಟಿದ್ದರು. ಆಗ ‘ಕೂಳು’ ಎನ್ನುವ ಕಥೆ ಬರೆದು ‘ಮಯೂರ’ಕ್ಕೆ ಕಳುಹಿಸಿದೆ. ಆ ಕಾಲಕ್ಕೆ ಹಸಿವು ಎನ್ನುವುದು ನಮ್ಮನ್ನು ದಟ್ಟವಾಗಿ ಕಾಡುತ್ತಿದ್ದ ಸಮಸ್ಯೆ. ಅದರ ಅನುಭವ ಆಧರಿಸಿ ‘ದೇವರ ಹೆಣ...’ ಇತ್ಯಾದಿ ಕಥೆಗಳನ್ನು ಬರೆದೆ. ಅವುಗಳಿಗೆ ‘ಮಯೂರ’ದಿಂದ ₹ 25 ಚೆಕ್‌ ಬಂದಿತ್ತು. ಅದರಲ್ಲಿ ಕೆ.ಎನ್‌. ಗುರುಸ್ವಾಮಿಯವರ ಸಹಿ ಇತ್ತು. ಆ ಚೆಕ್‌ ಅನ್ನು ನಗದು ಮಾಡಿಸುವುದೋ ಅಥವಾ ಹಾಗೆಯೇ ಇಟ್ಟುಕೊಳ್ಳುವುದೋ ಎನ್ನುವ ಯೋಚನೆಯಲ್ಲಿದ್ದೆ. ಅದಕ್ಕೆ ಫ್ರೇಮ್‌ ಹಾಕಿಸಿಟ್ಟುಕೊಳ್ಳಬೇಕೆನ್ನುವ ಯೋಚನೆಯನ್ನೂ ಮಾಡಿದ್ದೆ. ಆದರೆ, ಕೈಯಿಂದ ₹ 5 ಹಾಕಿ ಬ್ಯಾಂಕ್‌ ಖಾತೆ ತೆರೆದು ನಾಲ್ಕೈದು ತಿಂಗಳ ನಂತರ ಆ ಚೆಕ್‌ ಅನ್ನು ನಗದು ಮಾಡಿಸಿಕೊಂಡಿದ್ದೆ. ಇದು ನಾನು ಪಡೆದ ಮೊದಲ ಗೌರವ ಸಂಭಾವನೆ.

ಜೆ.ಸು.ದರ್ಶನ್‌ ಎಂಬ ಕವಿ ‘ಇನ್ನಾದರೂ ಬದುಕಬೇಕು’ ಎಂಬ ಕಥೆ ಬರೆದಿದ್ದರು. ನವ್ಯದ ವಿರೋಧಿಯಾಗಿ ‘ಇನ್ನಾದರೂ ಸಾಯಬೇಕು’ ಎನ್ನುವ ಕಥೆ ಬರೆದೆ. ಆಗ ಬಳ್ಳಾರಿಯಲ್ಲಿರುವ ರಾಯಲ್‌ ಟೂರಿಸ್ಟ್‌ ಟೌನ್‌ನವರು ನನ್ನ ಮತ್ತು ‘ಪ್ರಜಾವಾಣಿ’ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕಥೆ ಬರೆದ ತಪ್ಪಿಗೆ ಮೊದಲ ಬಾರಿಗೆ ₹ 500 ದಂಡ ಕಟ್ಟಿ ಪ್ರಕರಣ ಮುಕ್ತಾಯಗೊಳಿಸಿಕೊಂಡೆ. ನನ್ನನ್ನು ಲೇಖಕನನ್ನಾಗಿ ಗುರುತಿಸಿದ್ದು, ಮೊದಲು ಅವಕಾಶ ನೀಡಿದ್ದು ‘ಪ್ರಜಾವಾಣಿ’.

ಮಲ್ಲೇಪುರಂ ಜಿ. ವೆಂಕಟೇಶ್‌ ಜತೆಗೆ ಎರಡು ಬಿಯರ್‌ಗಳಿಗೆ ಪಣ ಕಟ್ಟಿ ಎಂಟು ದಿನಗಳೊಳಗೆ 170 ಪುಟಗಳ ‘ಕಪ್ಪು’ ಎನ್ನುವ ಕಾದಂಬರಿ ಬರೆದಿದ್ದೆ. ಅದೇ ನನ್ನ ಮೊದಲ ಕಾದಂಬರಿ. ಅದಕ್ಕೆ ಆ ವರ್ಷ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಕೂಡ ಬಂದಿತು.

– ಕುಂ. ವೀರಭದ್ರಪ್ಪ

ನನಗೆ ಬರೆಯುವ ತುಡಿತ ಬಾಲ್ಯದಿಂದಲೂ ಇತ್ತು. ಸಿಕ್ಕಿದ್ದನ್ನೆಲ್ಲ ಓದುವ, ಬರೆಯುವ ಹವ್ಯಾಸ ನನ್ನದು. ಬಹುಶಃ 5ನೇ ತರಗತಿಯಲ್ಲಿರುವಾಗ ಒಂದು ಕಾದಂಬರಿ ಬರೆದಿದ್ದೆ. ನನಗೆ ಚೆನ್ನಾಗಿ ನೆನಪಿದೆ. ಅದರ ಹೆಸರು ‘ಮಹಡಿ ಮನೆ’. ಅದರ ಹಸ್ತಪ್ರತಿ ಉಳಿದಿಲ್ಲ. ನನ್ನ ಕುಟುಂಬಕ್ಕೂ ಸಾಹಿತ್ಯದ ಹಿನ್ನೆಲೆ ಇರಲಿಲ್ಲ. ಹಾಗಾಗಿ ಅದನ್ನು ಪ್ರಕಟಣೆಗೆ ಕೊಡುವುದನ್ನು ಊಹಿಸಲೂ ಸಾಧ್ಯವಿರಲಿಲ್ಲ. ನನ್ನ ತಂದೆ ಕೆಆರ್‌ಎಸ್‌ನಲ್ಲಿ ಉದ್ಯೋಗದಲ್ಲಿದ್ದರಿಂದ ಬಹಳ ವರ್ಷ ಕೆಆರ್‌ಎಸ್‌ ಕ್ವಾಟ್ರಸ್‌ನಲ್ಲೇ ನಾವು ವಾಸವಿದ್ದೆವು. ಅಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ ಚಟುವಟಿಕೆಗಳಿಗೆ ಪೂರಕ ವಾತಾವರಣವಿತ್ತು.

‘ಪ್ರಜಾವಾಣಿ’ ಕಥಾಸ್ಪರ್ಧೆಗಳಿಗೆ ಕಥೆಗಳನ್ನು ಆಹ್ವಾನಿಸುತ್ತಿತ್ತು. ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಕಳುಹಿಸಬೇಕು ಎನ್ನುವ ಷರಾ ನನಗೆ ಅನೇಕ ವರ್ಷ ಅರ್ಥವೇ ಆಗಿರಲಿಲ್ಲ. ಇದು ನನ್ನಲ್ಲಿ ಗೊಂದಲ ಹುಟ್ಟು ಹಾಕಿತ್ತು. ‘ಪ್ರಜಾಮತ’ದ ಸಂಪಾದಕ ಮ.ನ.ಮೂರ್ತಿ ಅವರಲ್ಲಿ ಈ ಗೊಂದಲದ ಬಗ್ಗೆ ಹೇಳಿಕೊಂಡಾಗ ಅವರು ಕಾಗದದ ಒಂದು ಮಗ್ಗುಲಲ್ಲಿ ಮಾತ್ರ ಬರೆದು, ಇನ್ನೊಂದು ಮಗ್ಗುಲು ಖಾಲಿ ಬಿಡಬೇಕು ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಿದರು. 1974ರಲ್ಲಿ ‘ನಾನು ಅಪರಾಧಿಯೇ’ ಎನ್ನುವ ಕಥೆ ಬರೆದು ಕಳುಹಿಸಿದೆ. ಜೂನ್ ಅಥವಾ ಜುಲೈನಲ್ಲಿ ಆ ಕಥೆ ‘ಪ್ರಜಾಮತ’ದಲ್ಲಿ ಪ್ರಕಟವಾಯಿತು. ನನ್ನ ಪತಿ ‘ನೋಡಿಲ್ಲಿ ನೀನು ಬರೆದಿರುವ ಕಥೆ ಪತ್ರಿಕೆಯಲ್ಲಿ ಬಂದಿದೆ’ ಎಂದು ತಂದು ತೋರಿಸಿದಾಗ ಬಹಳ ಸಂಭ್ರಮಪಟ್ಟಿದ್ದೆ. ಪತಿ ಕೂಡ ಖುಷಿಪಟ್ಟರು.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ನನ್ನ ಮೊದಲ ಕಥೆ ‘ಒಮ್ಮೆ ಹೆಣ್ಣಾಗು ಪ್ರಭುವೇ’ ಬಹಳ ಪ್ರಶಂಸೆಗೆ ಪಾತ್ರವಾಯಿತು. ಅದರ ಬೆನ್ನಲ್ಲೇ ವಿವಾದ ಎಬ್ಬಿಸಿತು. ಧರ್ಮಗುರುಗಳು ಫತ್ವಾ ಹೊರಡಿಸಿದರು. ಸಮುದಾಯದಿಂದ ಬಹಿಷ್ಕಾರ ಹಾಕಿದರು. ಇದೊಂದು ಕಹಿ ಅನುಭವ. ಆದರೆ, ಈ ಕಥೆ ಆಧಾರವಾಗಿಟ್ಟುಕೊಂಡು ಆಲ್ ಇಂಡಿಯಾ ರೇಡಿಯೊ ಒಂದು ನಾಟಕ ರೂಪಿಸಿ ಪ್ರಸಾರ ಮಾಡಿತು. ಈ ರೇಡಿಯೊ ನಾಟಕಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಕೂಡ ಬಂತು. ಈ ಕಥೆ ಬರೆದು ಒಂದು ವರ್ಷ ಹಾಗೆಯೇ ಇಟ್ಟುಕೊಂಡಿದ್ದೆ. ಪ್ರಕಟಣೆಗೆ ಕಳುಹಿಸುವ ಧೈರ್ಯ ಮಾಡಿರಲಿಲ್ಲ. ಕಥೆ ಬಂದ ಮೇಲೆ ಜಿ.ಎಸ್. ಆಮೂರ ಅವರು ‘ನಿಮ್ಮ ಸಾಹಿತ್ಯ ಕೃಷಿಯಲ್ಲಿ ಇದೊಂದು ಮೈಲುಗಲ್ಲು’ ಎನ್ನುವ ಮೆಚ್ಚುಗೆಯ ಮಾತು ಬರೆದಿದ್ದರು.

ನನ್ನ ಮೊದಲ ಕಥಾ ಸಂಕಲ ‘ಹೆಜ್ಜೆ ಮೂಡಿದ ಹಾದಿ’. ಎರಡನೇ ಕಥಾ ಸಂಕಲನ ‘ಬೆಂಕಿ ಮಳೆ’ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿತು. ಅದಕ್ಕೆ ಸಾಹಿತ್ಯ ಅಕಾಡೆಮಿಯಿಂದ ಅತ್ಯುತ್ತಮ ಪುಸ್ತಕ ಪುರಸ್ಕಾರ ಸಿಕ್ಕಿದ್ದು ಖುಷಿ ಉಂಟು ಮಾಡಿತ್ತು. ನನ್ನ ಪತಿ ಉರ್ದು ಸಾಹಿತ್ಯದಲ್ಲಿ ಪರಿಣತರು. ಅವರಿಗೆ ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ನನ್ನ ಕಾರಣಕ್ಕೆ ಕನ್ನಡ ಓದಲು ಕಲಿತುಕೊಂಡರು. ನಾನು ಏನೇ ಬರೆದರೂ ಅದರ ಸಾರಾಂಶ ಕೇಳುತ್ತಾರೆ. ನನ್ನ ಬರವಣಿಗೆಗೆ ಮೊದಲ ಓದುಗ ಅವರು. ಹೆಣ್ಣು, ಪ್ರಕೃತಿ, ಬದುಕು, ಸಮಾಜ ಇವುಗಳನ್ನು ಆಧರಿಸಿ ಇವುಗಳ ನಡುವೆ ಬರವಣಿಗೆಯ ಯಾನ ನಡೆಸಿಕೊಂಡು ಬಂದಿದ್ದೇನೆ.

– ಬಾನು ಮುಷ್ತಾಕ್

ನಾನು ಸ್ಮಶಾನ ಪ್ರಿಯ ಕವಿ. ಪದ್ಯ ಬರೆಯಲು ಎಲ್ಲೂ ಜಾಗ ಸಿಗದಿದ್ದಾಗ ನನಗೆ ಕಂಡಿದ್ದು ಸ್ಮಶಾನ. ಅಲ್ಲಿನ ದಿವ್ಯ ಮೌನ, ರುದ್ರಸೌಂದರ್ಯ ನನ್ನ ಪದ್ಯಗಳಿಗೆ ಪ್ರೇರಣೆ. ಸಮಾಧಿಯೊಳಗೆ ತಣ್ಣಗೆ ಮಲಗಿದ್ದ ಹೆಣಗಳು ಕ್ರಾಂತಿಗೆ ಸಂಗಾತಿಗಳು. ಅವೂ ಕ್ರಾಂತಿಗೆ ಎದ್ದುಬರಲೆನ್ನುವುದು ನನ್ನ ಹಂಬಲ! ಹಾಗಾಗಿಯೇ ನನ್ನ ಮೊದಲ ಕವನ ಸಂಕಲನ ಹೊಲೆಮಾದಿಗರ ಹಾಡಿನಲ್ಲಿ ಸ್ಮಶಾನ ಚೆಲುವೆ ಮತ್ತು ಹೆಣಗಳ ಕುರಿತು ಸಾಕಷ್ಟು ಪದ್ಯಗಳಿವೆ.

ಹಸಿವು, ಬಡತನ, ಶೋಷಣೆಯ ವಿರುದ್ಧದ ಆಕ್ರೋಶವನ್ನು ಪದ್ಯಗಳ ಮೂಲಕ ಹೊರ ಹಾಕಿದೆ. ಅವೇ ಹಸಿದವರಿಗೆ, ಬಡವರಿಗೆ, ಕಾರ್ಮಿಕರಿಗೆ ಕ್ರಾಂತಿ ಗೀತೆಗಳಾದವು. ಪಶ್ಚಿಮ ಬಂಗಾಳ, ತಮಿಳುನಾಡು, ಪಂಜಾಬ್ ರಾಜ್ಯಗಳಲ್ಲಿನ ಬಡವರು, ಕಾರ್ಮಿಕರು, ದಲಿತರು ‘ದಲಿತರು ಬಂದರು ದಾರಿ ಬಿಡಿ’ ಗೀತೆಯನ್ನು ಹೋರಾಟದ ಗೀತೆ ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ನಾನು ಗಂಭೀರವಾಗಿ ಬರೆದಿದ್ದಿಲ್ಲ. ಹಿರಿಯ ಕವಿಗಳನ್ನು ಅನುಕರಿಸುತ್ತಿದ್ದೆ. ಇದು ಸರಿಯಲ್ಲ ಎಂದೆಣಿಸಿ ಅದನ್ನು ಬದಲಿಸಿಕೊಂಡೆ. ನಿಸರ್ಗ, ಬದುಕಿನ ಕಷ್ಟಗಳನ್ನು ಬರವಣಿಗೆಯ ಸರಕು ಮಾಡಿಕೊಂಡೆ. ಮೊದಲು ಬರೆದ ಕವಿತೆಗಳು ತೃಪ್ತಿ ಕೊಡಲಿಲ್ಲ. ಹಾಗಾಗಿ ಅವುಗಳನ್ನು ಪ್ರಕಟಿಸುವ ಗೋಜಿಗೆ ಹೋಗಲಿಲ್ಲ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಹಾಸ್ಟೆಲ್ನಲ್ಲಿ ಕೊಡುತ್ತಿದ್ದ ಊಟದ ಬಗ್ಗೆ ಪದ್ಯ ಬರೆದಿದ್ದೆ.

ಕೊಡುವರು ಜೋಳ

ಕಡಿಮೆ ಹಾಕುವರು ಕಾಳ

ಆಗುತ್ತಿದೆ ಅನೇಕರಿಗೆ ರಕ್ತಭೇದಿ...

ಈ ಪದ್ಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆಲ್ಲ ಪ್ರಾರ್ಥನಾ ಗೀತೆಯಾಗಿಬಿಟ್ಟಿತ್ತು. 13 ವರ್ಷದವನಿದ್ದಾಗ ನನ್ನ ಗುಡಿಸಿಲಿನ ಬಗ್ಗೆ ‘ನಮ್ಮ ಮನೆ’ ಪದ್ಯ ಬರೆದಿದ್ದೆ. ಪ್ರಕಟವಾದ ಮೊದಲ ಪದ್ಯವದು.

ಮಳೆಯಲ್ಲಿ ಸೋರುವ ಬೀಳುವ ಗುಡಿಸಲು

ನಮ್ಮ ಮನೆ ಇದು ನಮ್ಮ ಮನೆ

ಹೆಂಚನು ಕಾಣದ, ಗರಿಗಳ ಹೊದಿಕೆಯ 

ಸುಣ್ಣವ ಕಾಣದ ಸೆಗಣಿಯ ಬಳಿದಿಹ

ಇಟ್ಟಿಗೆ ಇಲ್ಲದ ಮಣ್ಣಿನ ಗೋಡೆಯ

ನಮ್ಮ ಮನೆ ಇದು ನಮ್ಮ ಮನೆ

ಈ ಪದ್ಯವನ್ನು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದಾಗ ನನ್ನ ಗುರುಗಳಾದ ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ ಅವರಿಗೆ ತೋರಿಸಿದಾಗ ಅದನ್ನು ಮೆಚ್ಚಿ, ಕಾಲೇಜು ಪತ್ರಿಕೆಯಲ್ಲಿ ಪ್ರಕಟ ಮಾಡಿದ್ದರು. ಸಾಹಿತ್ಯ ಪತ್ರಿಕೆ ‘ಶೂದ್ರ’ದಲ್ಲಿ ನನ್ನ ಮೊದಲ ಕವನ ‘ನಾವು’ ಹೊಲಗೇರಿ ಸಿದ್ಧಲಿಂಗಯ್ಯ ಹೆಸರಿನಲ್ಲಿ ಪ್ರಕಟವಾಗಿತ್ತು.

ನಾನು ಬರೆಯುತ್ತಿದ್ದ ಕ್ರಾಂತಿಕಾರಿ ಪದ್ಯಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ನನ್ನ ಗೆಳೆಯ ಡಿ.ಆರ್.ನಾಗರಾಜ್ ‘ಇವ್ನು ಏನೋ ಗೇಮ್ ಮಾಡ್ತಾ ಇದ್ದಾನೆ’ ಎಂದು ಸಂಶಯದಿಂದ ನೋಡುತ್ತಿದ್ದುದೂ ಉಂಟು. ನಾನು ಕುಳ್ಳಗೆ ಇದ್ದ ಕಾರಣಕ್ಕೆ ನನ್ನ ದೇಹ ಪ್ರಕೃತಿ ಅವನಲ್ಲಿ ಇಂತಹ ಸಂದೇಹ ಹುಟ್ಟುಹಾಕಿತ್ತು. ಅವನನ್ನು ಜತೆಯಲ್ಲೇ ಕುಳ್ಳಿರಿಸಿಕೊಂಡು ಪದ್ಯ ಬರೆದು ಸಂಶಯ ನಿವಾರಿಸಿದ ಪ್ರಸಂಗಗಳೂ ಇವೆ.

ಕವಿಯಾಗಬೇಕು ಎಂದು ಬಾಲ್ಯದಲ್ಲಿಯೇ ಬೆಟ್ಟದ ಬುಡದಲ್ಲಿ, ತೊರೆಯ ಸನಿಹದಲ್ಲಿ ಧ್ಯಾನಿಯಂತೆ ಕೂರುವುದು, ಮಂಚನಬೆಲೆ ಅರಣ್ಯವನ್ನು ನೋಡುತ್ತಾ ಮೈಮರೆತು ನಿಲ್ಲುತ್ತಿದ್ದೆ. ‘ಕವಿಯಾಗ್ತಿನಿ ಅಂತಾ ಹಿಂಗೆ ಮೈಮರೆತು ಕರಡಿ ಪಾಲಾದೀಯಾ ಬಾ’ ಎಂದು ನನ್ನಜ್ಜಿ ಕೈಹಿಡಿದು ಎಳೆದುಕೊಂಡು ಹೋಗು–ತ್ತಿದ್ದಳು. ನಾನು ವಿದ್ಯಾರ್ಥಿಯಾಗಿದ್ದಾಗ ಬರೆದ ಕವಿತೆಗಳನ್ನು ಪುಸ್ತಕವಾಗಿ ಪ್ರಕಟಿಸಲಿಲ್ಲ. ಎಂ.ಎ. ಓದುತ್ತಿದ್ದಾಗ ಡಿ.ಆರ್.ನಾಗರಾಜ್, ಶೂದ್ರ ಶ್ರೀನಿವಾಸ್, ಕಿ.ರಂ.ನಾಗರಾಜ್, ಸಮುದಾಯದ ಪ್ರಸನ್ನ, ಕಾಳೇಗೌಡ ನಾಗವಾರ ಆಸ್ಥೆ ವಹಿಸಿ ನನ್ನ ಕವಿತೆಗಳನ್ನು ಸಂಕಲನದ ರೂಪದಲ್ಲಿ ಹೊರತಂದರು. ಅದಕ್ಕೆ ಜಿ.ಎಸ್.ಎಸ್‌ ಮತ್ತು ಕಂಬಾರರು ಒಳ್ಳೆಯ ನುಡಿಗಳನ್ನು ಬರೆದರು. ಒಂದೇ ವಾರಕ್ಕೆ ಸಾವಿರ ಪ್ರತಿ ಮಾರಾಟವಾಗಿ ಮರುಮುದ್ರಣ ಕಂಡಿತು. ಚಂಪಾ ಅವರು ವಿದ್ಯಾವರ್ಧಕ ಸಂಘಕ್ಕೆ ನನ್ನನ್ನು ಆಹ್ವಾನಿಸಿ ಕವಿತೆ ವಾಚಿಸಲು ವೇದಿಕೆ ಕೊಟ್ಟರು. ಆಗಿನಿಂದ ನನ್ನ ಕವಿತೆಗಳನ್ನು ನಾನು ಹೋದಕಡೆಗಳಲ್ಲೆಲ್ಲ ಗಟ್ಟಿಯಾಗಿ ಓದಲು ಆರಂಭಿಸಿದೆ. ನನ್ನ ಕವಿತೆಗಳಲ್ಲಿನ ‘ಇಕ್ರಲಾ, ವದಿರ್‍ರಲಾ...’ ಸಾಲುಗಳು ಕಾವ್ಯವೇ ಹೌದೋ, ಅಲ್ಲವೋ ಎನ್ನುವ ಗೊಂದಲ ಹಲವರನ್ನು ಕಾಡಿದ್ದಿದೆ. ಕೆಲವರು ‘ಅಲ್ಲ’ ಅಂದರು. ಕೆಲವರು ‘ಹೌದು’ ಎಂದರು. ದಲಿತ ಕವಿ ಎನ್ನುವ ಹೊಸ ಪಾತ್ರ ಸೃಷ್ಟಿಯಾಯಿತು. ಆ ಪಾತ್ರವನ್ನು ನಿರ್ವಹಿಸಲು ನಾನು ಸಿದ್ಧನಾದೆ. ಹೀಗೆ ನನ್ನ ಕಾವ್ಯ ಜಗತ್ತು ಸಾಗಿ ಬಂದಿದೆ.

ನನ್ನ ಮಟ್ಟಿಗೆ ಪ್ರಶಸ್ತಿಗಳು ದೂರ. ಪ್ರಶಸ್ತಿಗಾಗಿ ಅರ್ಜಿ ಹಾಕುವ ಜಾಯಮಾನ ನನ್ನದಲ್ಲ. 1986ರಲ್ಲಿ ರಾಮಕೃಷ್ಣ ಹೆಗಡೆಯವರ ಒತ್ತಾಯಕ್ಕೆ ಮಣಿದು ರಾಜ್ಯೋತ್ಸವ ಪ್ರಶಸ್ತಿ ಪಡೆದೆ. ಶಿವರಾಮ ಕಾರಂತರು, ಸಿದ್ಧಯ್ಯ ಪುರಾಣಿಕ, ಗೋಪಾಲಕೃಷ್ಣ ಅಡಿಗ, ವಿ.ಕೃ. ಗೋಕಾಕ ಅವರಂತಹ ದಿಗ್ಗಜರ ಜತೆಗೆ ನನ್ನನ್ನೂ ಸೇರಿಸಿ ಐವರು ಸಾಧಕರಿಗೆ ಪ್ರಶಸ್ತಿ ಘೋಷಿಸಿದರು. ಅಂತಹ ದಿಗ್ಗಜರ ಜತೆ ಪ್ರಶಸ್ತಿ ಸ್ವೀಕರಿಸುವುದು ನನ್ನಂತಹ ಸಣ್ಣ ಕವಿಗೆ ಮುಜುಗರ. ಅಂಜಿಕೆ, ಅಳುಕು ಇದ್ದದ್ದು ಸಹಜವೇ ಆಗಿತ್ತು. ಆದರೆ, ಹೆಗಡೆಯವರು ಪ್ರಶಸ್ತಿ ಸ್ವೀಕರಿಸಬೇಕು ಎಂದಾಗ, ನಿರಾಕರಿಸಲು ಸಾಧ್ಯವಾಗಲಿಲ್ಲ. 1996ರಲ್ಲಿ ಸಾಹಿತ್ಯ ಅಕಾಡೆಮಿ ಜೀವಮಾನದ ಸಾಧನೆಗಾಗಿ ಗೌರವ ಪುರಸ್ಕಾರ ನೀಡಿದೆ.

ಪುಟ್ಟಣ್ಣ ಕಣಗಾಲ್ ಅವರ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಮೂರು ಗೀತೆಗಳನ್ನು ಬರೆದುಕೊಟ್ಟಿದ್ದೆ. ಬಂಡಾಯ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎನ್ನುವ ಭಯಕ್ಕೆ ‘ಆದಿತ್ಯ’ ಎನ್ನುವ ಹೆಸರಿನಲ್ಲಿ ಗೀತೆ ಬರೆದುಕೊಟ್ಟಿದ್ದೆ. ಆ ಸಿನಿಮಾಕ್ಕೆ ಅತ್ಯುತ್ತಮ ಗೀತೆ ರಚನೆಕಾರ ಪ್ರಶಸ್ತಿಯೂ ಮತ್ತು ಒಂದಿಷ್ಟು ನಗದು ಪುರಸ್ಕಾರವೂ ಬಂದಿತು. ಹಾಗೆ ನೋಡಿದರೆ ಇದೇ ನನಗೆ ಲಭಿಸಿದ ಮೊದಲ ಪ್ರಶಸ್ತಿ. ಇದನ್ನು ಸ್ವೀಕರಿಸಲು ಹೋದಾಗ ಆದಿತ್ಯ ನಾನೇ ಎನ್ನುವುದು ಎಲ್ಲರಿಗೂ ಗೊತ್ತಾಯಿತು. ‘ಇದರಲ್ಲಿ ನನ್ನದೇನೂ ಇಲ್ಲ, ಕಣಗಾಲರ ಬದುಕಿನ ನೋವಿಗೆ ಅಕ್ಷರ ರೂಪ ಕೊಟ್ಟಿದ್ದೇನೆ’ ಎನ್ನುವ ಸ್ಪಷ್ಟನೆ ನೀಡಿ, ಬಂಡಾಯಗಾರರ ಕೆಂಗಣ್ಣಿನಿಂದ ಪಾರಾಗಿದ್ದೆ!

ಪದ್ಯ ಬರೆಯುವ ಜತೆಗೆ ನಾಟಕ ಕೂಡ ಬರೆದಿದ್ದೆ. ನನ್ನ ಮೊದಲ ನಾಟಕ ‘ಪಂಚಮ’. ಸಿ.ಜಿ.ಕೆ. ನಿರ್ದೇಶನದ, ಲೋಹಿತಾಶ್ವ ಅಭಿನಯದ ಮೊದಲ ನಾಟಕ ಇದು.

– ಸಿದ್ಧಲಿಂಗಯ್ಯ

ಮೊದಲ ಗೌರವಧನ – ಅಮ್ಮನ ಆಶೀರ್ವಾದ

ನಮ್ಮದು ಸಾಹಿತ್ಯಾಸಕ್ತಿಯ ಕುಟುಂಬ. ಅಪ್ಪಯ್ಯ ಸೇರಿದಂತೆ ಎಲ್ಲರೂ ಪುಸ್ತಕ ಪ್ರಿಯರು. 1960ರ ದಶಕದಲ್ಲಿ ನನ್ನ ಅಣ್ಣ ಬರೆದ ಒಂದು ಕಥೆಗೆ ‘ಪ್ರಜಾವಾಣಿ’ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಬಂದಿತ್ತು. ಆತ ಹಾಗೂ ಅಕ್ಕಂದಿರು ಆಗೆಲ್ಲ ಬರೆಯುತ್ತಿದ್ದರು. ಅದನ್ನು ನೋಡುತ್ತ ನನಗೂ ‘ನಾನು ಬರೆಯಬಹುದು’ ಎಂದು ಕಂಡಿತು. ನಾನು ಹೈಸ್ಕೂಲಿನಲ್ಲಿರುವಾಗ ಕ್ಲಾಸಿನ ಹಸ್ತಪತ್ರಿಕೆಗೆ ಬರೆಯುತಿದ್ದೆ. ಮನೆಯಲ್ಲಿಯೂ ನಾವೆಲ್ಲ ಸೇರಿ ‘ಸಾಹಿತ್ಯ ಜ್ಯೋತಿ’ ಅಂತ ಹಸ್ತಪತ್ರಿಕೆ ತಂದೆವು. ಅದರಲ್ಲಿ ತಂದೆಯೇ ನಮಗಾಗಿ ಮುನ್ನುಡಿ ಬರೆಯುತ್ತಿದ್ದರು. ಅಣ್ಣ ಚಿತ್ರ ಬಿಡಿಸುವವನು, ಉಳಿದವರೆಲ್ಲ ಬರೆಯುವವರು. ನಾನದರಲ್ಲಿ ಒಂದು ಕಿರುಕಾದಂಬರಿಯನ್ನು ಬರೆದ ನೆನಪು. ಹೀಗೆ ಓದುವುದರ ಜೊತೆಗೆ ನಿಧಾನವಾಗಿ ಬರೆಯುವ ಕಡೆಗೆ ನನ್ನ ಆಸಕ್ತಿ ತೆರೆದುಕೊಂಡಿತು.

ಎಸ್ಸೆಸೆಲ್ಸಿಯಲ್ಲಿರುವಾಗ ನನ್ನ ಸಹಪಾಠಿ ಸ್ನೇಹಿತೆಯ ಅಣ್ಣ ಅಪಘಾತದಲ್ಲಿ ತೀರಿಕೊಂಡ ಘಟನೆಯನ್ನು ಆಧರಿಸಿ ಒಂದು ಕಥೆ ಬರೆದಿದ್ದೆ. ಅದೇ ನನ್ನ ಮೊದಲ ಪ್ರಕಟಿತ ಕಥೆ. ಆ ಕಥೆಯನ್ನು ‘ಕರ್ಮವೀರ’ಕ್ಕೆ ಕಳುಹಿಸಿದ್ದೆ. ಅದು ಅಲ್ಲಿ ಪ್ರಕಟವಾಗಿ, ₹ 10 ಗೌರವಧನ ಕೂಡ ಬಂದಿತ್ತು. ಸ್ಟೀಲ್‍ ಪಾತ್ರೆಗಳು ಪೇಟೆ ಪ್ರವೇಶಿಸುತ್ತಿದ್ದ ಕಾಲ ಅದು. ಮೊದಲ ಗೌರವ ಧನದಲ್ಲಿ ಒಂದು ದೊಡ್ಡ ಸ್ಟೀಲ್ ಪಾತ್ರೆ ಖರೀದಿಸಿ ಅಮ್ಮನಿಗೆ ಕೊಟ್ಟು ಕಾಲಿಗೆ ಬಿದ್ದೆ. ಅಮ್ಮ ಒಳ್ಳೆಯದಾಗಲಿ ಎಂದು ಹರಸಿದ್ದಳು. ಮೊದಲ ಕಥೆ ಮತ್ತು ಮೊದಲ ಗೌರವ ಧನದ ಸಂಭ್ರಮ ಅದು. ನನ್ನ ಅಮ್ಮ ಯಾವುದನ್ನೂ ತೀರ ದೊಡ್ಡದು ಮಾಡಿದವಳಲ್ಲ. ನಾನು ಬರೆಯುವುದನ್ನು ಕಂಡು ‘ಬರೆಯದೆ ಏನು, ಅಕ್ಷರ ಕಲಿಸಲಿಲ್ಲವೆ’ ಎಂದಿದ್ದ ಅಮ್ಮ ಅವಳು. ಹಲವು ಮಕ್ಕಳ ತಾಯಿಯಾಗಿ ಒಬ್ಬರನ್ನು ಮೇಲೆ ಎತ್ತಿ ಕಟ್ಟುವುದು, ಒಬ್ಬರನ್ನು ಕೆಳಗಿಡುವುದು ಆಕೆಯ ರಕ್ತದಲ್ಲೇ ಇರಲಿಲ್ಲ. ಇದು ನನಗೆ ದೊಡ್ಡ ಪಾಠ. ಅಮ್ಮನ ಇಂತಹ ಮಾತುಗಳೇ ಬರವಣಿಗೆಯ ಬಗ್ಗೆ ಯಾವ ಅಹಂಕಾರವೂ ಮೂಡದಂತೆ ನನ್ನನ್ನು ಕಾಪಾಡುತ್ತವೆ.

ಒಮ್ಮೆ ನೈಜ ಘಟನೆ ಆಧರಿಸಿ ಒಂದು ಕಥೆ ಬರೆದು ‘ಸುಧಾ’ಕ್ಕೆ ಕಳುಹಿಸಿದ್ದೆ. ಆ ಕಥೆ ಕಳುಹಿಸಿದ ಮೇಲೆ ನನಗೇನೋ ಕಿರಿಕಿರಿ ಉಂಟಾಗಿ ಕಥೆ ವಾಪಸ್ ಕಳಿಸಿ ಎಂದು ಪತ್ರ ಬರೆದೆ. ಆದರೆ ಸುಧಾದಲ್ಲಿ ಅದು ಪ್ರಕಟವಾಯಿತು. ಕಥೆ ಓದಿ ಬರವಣಿಗೆ ಚೆನ್ನಾಗಿದೆ ಎಂದು ಸೇತುರಾಮ್ ಮತ್ತು ಎಂ.ಬಿ.ಸಿಂಗ್ ಅವರು ಮೀಟಿಂಗ್ ಕರೆದು, ಎಸ್.ದಿವಾಕರ್ ಅವರ ಸಲಹೆ ಮೇರೆಗೆ ‘ವೈದೇಹಿ’ ಎನ್ನುವ ಹೆಸರಿನಲ್ಲಿ ಪ್ರಕಟಿಸಿದರಂತೆ. ಇದೆಲ್ಲ ನನಗೆ ತಿಳಿದದ್ದು ಆಮೇಲೆ. ಆ ಹೆಸರು ನನಗೆ ಇಷ್ಟವಾಯಿತು. ಅದೇ ಹೆಸರಿನ ಮರೆಯಲ್ಲಿ ಬರವಣಿಗೆ ಮುಂದುವರಿಸಿದೆ. ಜಾನಕಿ ಹೆಬ್ಬಾರ್ ಆಗಿದ್ದ ನಾನು ವೈದೇಹಿ ಆಗಿದ್ದು ಹೀಗೆ.

ಕುಂದಾಪುರದ ಕನ್ನಡ ಸಂಘ ನನ್ನ ಕತೆಯೊಂದಕ್ಕೆ ಬಹುಮಾನ ಕೊಟ್ಟಿತ್ತು. ಅದು ನನ್ನ ಮೊದಲ ಕಥಾ ಬಹುಮಾನ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದಾಗ ವಾರ್ಷಿಕೋತ್ಸವ ನಿಮಿತ್ತ ನಡೆದ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದು, ಅದನ್ನು ಡಾ. ಶಿವರಾಮ ಕಾರಂತರ ಕೈಯಿಂದ ಸ್ವೀಕರಿಸಿದ ಯೋಗ ನನ್ನದು. ಮುಂದೆ ‘ಪ್ರಜಾವಾಣಿ’ ದೀಪಾವಳಿ ಕಥಾಸ್ಪರ್ಧೆಯಲ್ಲಿ ನನ್ನ ‘ಒಂದು ಅಪರಾಧದ ತನಿಖೆ’ಗೆ ಮೆಚ್ಚುಗೆಯ ಬಹುಮಾನ ಬಂತು. ಆಗೆಲ್ಲ ಯಾವುದೇ ಪತ್ರಿಕೆಗಳಿಗೆ ಕಥೆಗಳನ್ನು ಕಳುಹಿಸುವಾಗ ಅಳುಕು ಇದ್ದೇ ಇರುತಿತ್ತು. ಕತೆಗಳು ಆಯ್ಕೆಯಾಗದಿದ್ದಲ್ಲಿ ವಾಪಸ್ ಕಳಿಸುತ್ತಿದ್ದ ಕಾಲ ಅದು. ನನ್ನ ಕತೆಯೂ ಎಲ್ಲಿಯಾದರೂ ವಾಪಸ್ ಬಂದರೆ? ಆದರೆ ಕಥೆಗಳು ವಾಪಸ್ ಬರುವುದರಿಂದಲೇ ನಮ್ಮೊಳಗೆ ಒಂದು ವಿಮರ್ಶೆ ನಡೆದು ನಮ್ಮನ್ನು ನಾವೇ ತಿದ್ದಿಕೊಂಡು ಮುಂದುವರಿಯಲು ಸಾಧ್ಯ ಎಂಬುದಕ್ಕೆ ನಾನೇ ಉದಾಹರಣೆ.

ಐದು ಮಕ್ಕಳ ನಾಟಕಗಳು ಮತ್ತು ಮಲ್ಲಿನಾಥನ ಧ್ಯಾನ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, 2009ರಲ್ಲಿ ‘ಕ್ರೌಂಚ ಪಕ್ಷಿಗಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ನನಗಿಂತ ಹೆಚ್ಚು ನನ್ನ ಕುಟುಂಬ ಸಂತೋಷ ಪಟ್ಟಿತು. ನನ್ನ ಅಕ್ಕ ತಂಗಿಯರು ಮತ್ತು ಅಣ್ಣ ತಮ್ಮಂದಿರು, ನನ್ನ ಪತಿ ಮತ್ತು ಮಕ್ಕಳು ಎಲ್ಲರೂ ಎಲ್ಲಿಯೂ ಎಂದಿಗೂ ನನ್ನನ್ನು ಹಿಂದೆಳೆಯಲಿಲ್ಲ.

– ವೈದೇಹಿ

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !