ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕ್ಸ್ ಮತ್ತು ಬದುಕು

Last Updated 19 ಜುಲೈ 2020, 12:58 IST
ಅಕ್ಷರ ಗಾತ್ರ

ಕಾಮದ ಕುರಿತು ಅದೆಷ್ಟು ನಿರಂತರವಾಗಿ ಮಾತನಾಡಿದರೂ ನಿಜದ ಭಾವನೆಗಳು ಹಾಗೆಯೇ ಉಳಿದುಬಿಡುತ್ತಿದ್ದವು. ನಾನು ಇತ್ತೀಚೆಗೆ ಟಿಂಡರ್, ಕಾಫಿ ಮೀಟ್ಸ್ ಬಾಗೆಲ್ ಮತ್ತು ಒಕೆ ಕ್ಯುಪಿಡ್‌ನಂತಹ ಜಾಲತಾಣಗಳನ್ನು ಬಳಸಿಕೊಂಡು ಡೇಟಿಂಗ್ ಶುರುಮಾಡಿದ್ದೇನೆ. ಡೇಟಿಂಗ್‌ ಅನ್ನು ಹೇಗೆ ನ್ಯಾವಿಗೇಟ್ ಮಾಡುವುದು ಮತ್ತು ನಾನು ಡೇಟ್ ಮಾಡುವ ಜನರೊಂದಿಗೆ ಮಾತನಾಡುವ ಬೇರೆ ಬೇರೆ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ನಾನು ಅವರೊಂದಿಗೆ ಬೆಳೆಸಿಕೊಳ್ಳುವ ಸಂಬಂಧಗಳಲ್ಲಿ ಆದಷ್ಟು ಪ್ರಾಮಾಣಿಕತೆ, ಸಹಾನುಭೂತಿ ಹಾಗೂ ಪರಸ್ಪರರಿಗೆ ತೋರಬೇಕಾದ ದಯೆಯನ್ನು ಅಳವಡಿಸಿಕೊಳ್ಳಲು ಹಾಗೂ ಅದು ನನ್ನ ವರ್ತನೆಯಲ್ಲಿ ಪ್ರತಿಫಲಿಸುತ್ತಿರುವಂತೆ ನಿಗಾವಹಿಸುತ್ತಿದ್ದೇನೆ. ಇದಕ್ಕೆಲ್ಲಾ ಬಹುಶಃ ನಾನು ಮುಗಿಸಿದ ಲಿಬರಲ್ ಆರ್ಟ್ಸ್ ಕೋರ್ಸ್, ಅಲ್ಲಿನ ಕಲಿಕೆ, ಅದು ನನಗೆ ಕೊಟ್ಟ ಜೀವನದೃಷ್ಟಿ ನನ್ನ ಸುತ್ತಲಿನ ಜಗತ್ತಿನ ಬಗ್ಗೆ ಸೂಕ್ಷ್ಮವಾಗಿ ಮತ್ತಷ್ಟು ಸಂವೇದನಾಶೀಲತೆಯಿಂದ ಯೋಚಿಸುವಂತೆ ಪ್ರೇರೇಪಿಸಿವೆ ಎನಿಸಿದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಬದುಕಿನ ಪ್ರಸ್ತುತ ವಾಸ್ತವ ಹಾಗೂ ಅದರಲ್ಲಿನ ನಮ್ಮ ಕ್ರಿಯಾತ್ಮಕ ಸಹಭಾಗಿತ್ವವನ್ನು, ನಮ್ಮ ಓದಿನ ಭಾಗವಾಗಿರುವ ಪ್ರತಿಯೊಬ್ಬರ ಮೂಲಭೂತ ಹಕ್ಕುಗಳು, ಸಮಾನತೆ ಮತ್ತು ಸರ್ವರಿಗೂ ದಕ್ಕಬೇಕಾದ ಮಾನವ ಘನತೆಯ ಹಿನ್ನೆಲೆಯಲ್ಲಿ ಯೋಚಿಸಲು ಪ್ರಾರಂಭಿಸಿದಾಗ ಹಲವು ಹೊಸ ಹೊಳಹುಗಳು ನಮಗೆ ಗೋಚರಿಸುತ್ತವೆ ಮತ್ತು ಹೊಸ ಹುಡುಕಾಟಕ್ಕೆ ಸಿದ್ಧಗೊಳಿಸುತ್ತವೆ ಎನಿಸುತ್ತದೆ. ಡೇಟಿಂಗ್ ಪ್ರಾರಂಭಿಸಿ ಕೇವಲ 5-6 ತಿಂಗಳುಗಳಾಗಿದ್ದರೂ, ಈ ಅವಧಿಯಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಡೇಟಿಂಗ್, ಲೈಂಗಿಕತೆ ಮತ್ತು ಸಂಬಂಧಗಳ ಬಗ್ಗೆ ನನಗೆ ನಿಜವಾಗಿ ಎಷ್ಟು ತಿಳಿದಿದೆ (ಅಥವಾ ನನಗೆಷ್ಟು ತಿಳಿದಿಲ್ಲ) ಎಂಬುದನ್ನು ಮನಗಂಡಿದ್ದೇನೆ.

ಎಂಜಿನಿಯರಿಂಗ್ ಓದುತ್ತಿರುವ ದಿನಗಳಲ್ಲಿ ಗೆಳೆಯರೆಲ್ಲರೂ ಕಾಮದ ಬಗ್ಗೆ, ಲೈಂಗಿಕತೆಯ ಬಗ್ಗೆ ಅದರಲ್ಲೂ ಮಹಿಳೆಯರ ಬಗ್ಗೆ ಸಮಯ ಸಿಕ್ಕಾಗಲೆಲ್ಲ ಮಾತನಾಡುತ್ತಿದ್ದೆವು. ಆದರೆ ಆ ಮಾತುಗಳೆಲ್ಲೆಲ್ಲ ಹರೆಯದ ಉನ್ಮಾದತೆ ತುಂಬಿಕೊಂಡು ಹಲವು ಸಲ ಸಭ್ಯ ರೇಖೆಯನ್ನು ದಾಟಿಬಿಡುತ್ತಿತ್ತು. ನಮ್ಮ ಕ್ಯಾಂಪಸ್ಸಿನಲ್ಲಿರುವ ಆ ಹುಡುಗಿ ಎಷ್ಟು ಮಾದಕವಾಗಿದ್ದಾಳೆ, ಅವಳಲ್ಲೆಷ್ಟು ಉದ್ರೇಕಿಸುವ ಗುಣವಿದೆ, ಎಷ್ಟರ ಮಟ್ಟಿಗೆ ಬ್ಯಾಂಗೇಬಲ್, ನಿರ್ದಿಷ್ಟ ಮಹಿಳೆಯರೊಂದಿಗೆ ನಾವು ನಡೆಸಬಹುದಾದ ಸಂಭೋಗಕ್ರಿಯೆಯನ್ನು ಕಲ್ಪಿಸಿಕೊಳ್ಳುತ್ತಿದ್ದೆವು. ನಮ್ಮ ಮಾತುಗಳಲ್ಲಿ ತುಂಬಾ ಸಲ ಸೆಕ್ಸಿಸ್ಟ್ ಕಮೆಂಟುಗಳೆ (ಲಿಂಗ ಭೇದಭಾವದ) ತುಂಬಿಕೊಂಡಿರುತ್ತಿದ್ದವು. ನಾವು ಹುಡುಗಿಯರ ಮಾದಕ ಚಿತ್ರಗಳನ್ನು ಮೊಬೈಲಿನಲ್ಲಿ ಹಂಚಿಕೊಳ್ಳುತ್ತಿದ್ದೆವು. ನಮ್ಮ ಕಾಲೇಜಿನ ಬೆಂಚುಗಳ ಮೇಲೆ ಮಹಿಳೆಯರ ಡೂಡಲ್‌ಗಳನ್ನೂ ವ್ಯಂಗ್ಯಚಿತ್ರಗಳನ್ನೂ ಬಿಡಿಸುತ್ತಿದ್ದೆವು. ನಮ್ಮ ಅನೇಕ ಸಂಭಾಷಣೆಗಳಲ್ಲಿ ಸೆಕ್ಸಿಸ್ಟ್ ಜೋಕುಗಳು ಪದೇ ಪದೇ ಸಾಮಾನ್ಯವೆಂಬಂತೆ ಮರುಕಳಿಸುತ್ತಿದ್ದವು. ಬೂಬ್ಸ್(ಮೊಲೆ) ಮತ್ತು ಆಸ್(ಅಂಡು) ನಾವು ಮತ್ತೆ ಮತ್ತೆ ಬಳಸುವ ಪದಗಳಾಗಿರುತ್ತಿದ್ದವು. ನಮ್ಮ ಮಾತುಕತೆಗಳಲ್ಲಿ ಹಸ್ತಮೈಥುನದ ಸುತ್ತ ಹೆಣೆದ ಜೋಕುಗಳು ಬಹುಮುಖ್ಯ ಪಾತ್ರ ವಹಿಸುತ್ತಿದ್ದವು. ನಾವೆಲ್ಲಾ ಆಗ ಮೊದಲು ಇಲ್ಲಿಂದ ತೊಲಗು; ಅಥವಾ ಇಲ್ಲಿಂದ ಎದ್ದು ಹೋಗು; ಎಂಬ ಪದಗಳಿಗೆ ಸಂವಾದಿಯಾಗಿ ಹೊಡ್ಕೋ ಹೋಗು(Go masturbate) ಎಂದು ಕಿಚಾಯಿಸುತ್ತಿದ್ದೆವು. ಹಸ್ತಮೈಥುನದ ಬಗ್ಗೆ ಗೊತ್ತಿಲ್ಲದವರನ್ನಂತೂ ಗೋಳು ಹೊಯ್ದುಕೊಳ್ಳುತ್ತಿದ್ದೆವು. ನಮ್ಮ ನಡುವೆ ರೋಚಕವಾದ ವಿವರಗಳು ಹಂಚಿಕೊಳ್ಳಲ್ಪಡುತ್ತಿದ್ದವು. ಅದರಾಚೆಗೆ ನಾವು ನೋಡುತ್ತಿದ್ದ ನೀಲಿಚಿತ್ರಗಳ ಬಗ್ಗೆ, ಚಲಾವಣೆಯಲ್ಲಿರುವ ಅತ್ಯುತ್ತಮ ನೀಲಿ ತಾರೆಯ ಬಗ್ಗೆ ಮತ್ತು ನಾವು ಡೌನ್ ಲೋಡ್ ಮಾಡಿಕೊಂಡಿದ್ದ ನೀಲಿ ಚಿತ್ರಗಳ ಸೈಜ್ (ಗಿಗಾ ಬೈಟ್ಸ್) ಗಳ ಬಗ್ಗೆ ಮಾತನಾಡುತ್ತಿದ್ದೆವು.

ನಾವು ನಮ್ಮ ಲೈಂಗಿಕತೆ ಮತ್ತದರ ಕುರಿತಾದ ಭಾವನೆಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿರಲಿಲ್ಲ. ಪ್ರತಿ ಬಾರಿ ಮಹಿಳೆಯರ ನಿರಾಕರಣೆಯಿಂದ ನಮ್ಮಲ್ಲಿ ಉಂಟಾಗುತ್ತಿದ್ದ ಒಂಟಿತನ ಮತ್ತು ನಿರಾಸೆಯನ್ನು ಹತ್ತಿಕ್ಕುವುದಕ್ಕಾಗಿ ಬಾರಿನ ಬಾಗಿಲು ತಟ್ಟುತ್ತಿದ್ದೆವು. ಸೆಕ್ಸಿನ ಸುತ್ತ ನಮಗಿದ್ದ ಅಜ್ಞಾನ ಮತ್ತು ಆತಂಕದ ಬಗ್ಗೆ, ಬೇರೊಬ್ಬರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರೀತಿಸಲ್ಪಡುವ, ಕಾಳಜಿ ತೋರುವ, ಮುದ್ದಿಸಲ್ಪಡುವ, ಒಪ್ಪಲ್ಪಡುವ ಬಗ್ಗೆ, ಸಾಗರದಂತಿರುವ ನೀಲಿ ಚಿತ್ರಗಳ ಜಾಲದಲ್ಲಿ ಮುಳುಗಿ ಹೋಗದೆ ನಮ್ಮ ನಮ್ಮ ಕಾಮಾಸಕ್ತಿಗಳನ್ನು ಗುರುತಿಸಿ ಅವುಗಳೊಟ್ಟಿಗೆ ವ್ಯವಹರಿಸುವ ವಿಧಾನಗಳ ಬಗ್ಗೆ, ಕೈಚಾಚುತ್ತಿರುವ ಸಂಬಂಧಗಳನ್ನು ನೀರೆರೆದು ಪೋಷಿಸುವ ಬಗ್ಗೆ, ನಮ್ಮ ನಮ್ಮ ಅಸೂಯೆಗಳನ್ನು ನಿಭಾಯಿಸುವ ಬಗ್ಗೆ, ಮುರಿದು ಹೋಗುವ ಸಂಬಂಧಗಳನ್ನು ಆರೋಗ್ಯಕರವಾಗಿ ಸ್ವೀಕರಿಸುವ ಬಗ್ಗೆ ನಾವೆಂದೂ ಚರ್ಚಿಸುತ್ತಿರಲಿಲ್ಲ.

ಆ ಸಮಯವಾದರೂ ಎಂತಹುದು? ನಾವು ವಯಸ್ಸಿಗೆ ಬಂದಿದ್ದೇವೆಂಬ ಒಂದೇ ಒಂದು ಕಾರಣಕ್ಕೆ ನಮ್ಮ ಪೋಷಕರು ನಮ್ಮನ್ನು ತಬ್ಬಿಕೊಳ್ಳುವ, ಮುದ್ದು ಮಾಡುವ, ಸ್ಪರ್ಶಿಸುವ ಇತರೆ ಯಾವುದೇ ಮುಟ್ಟಿ ಮಾತನಾಡಿಸುವ ದೈಹಿಕ ಪ್ರೀತಿಯ ಬಗೆಗಳಿಂದ ದೂರವುಳಿದ ಸಮಯವದು. ಹುಡುಗರಾಗಿ ನಾವು ಹಂಚಿಕೊಳ್ಳುತ್ತಿದ್ದ ದೈಹಿಕ ಸಾಮೀಪ್ಯವೆಂದರೆ ನಾವು ಒಟ್ಟಿಗೆ ಕಂಪ್ಯೂಟರ್ ಗೇಮ್ ಆಡುವಾಗ, ಕಾಲೇಜ್ ಕ್ಯಾಂಪಸ್ಸಿನಲ್ಲಿ ಒಟ್ಟಿಗೆ ತಿರುಗಾಡುವಾಗ, ಸಂಗೀತ ಕಚೇರಿಗಳಿಗೆ ಹಾಜರಾದಾಗ
ಮಾತ್ರ ಆಗಿತ್ತು. ಯಾರಿಗಾದರೂ ಗೆಳತಿ ಇಲ್ಲದಿದ್ದರೆ, ಅವನು ಡೇಟಿಂಗ್ ಹೋಗುತ್ತಿರಲಿಲ್ಲವಾದರೆ ಅವನು ಎಲ್ಲ ರೀತಿಯ ದೈಹಿಕ ಪ್ರೇಮದಿಂದ ದೂರವಿರಬೇಕಾಗುತ್ತಿತ್ತು. ಇದಕ್ಕೆ ಕಾರಣವೇನೆಂದು ಯೋಚಿಸಿದಾಗ ಹೊಳೆದದ್ದು; ನಮ್ಮಲ್ಲಿ ಸಾಂತ್ವನ ನೀಡಲು ಪರಸ್ಪರರನ್ನು ಮುದ್ದು ಮಾಡುವುದು,‌ ಒಬ್ಬರನ್ನೊಬ್ಬರು ತುಂಬಾ ಹೊತ್ತು ತಬ್ಬಿಕೊಳ್ಳುವುದು,ಕೈ ಕೈ ಹಿಡಿದುಕೊಂಡು ಓಡಾಡುವುದು, ಚುಂಬಿಸುವುದು ಮುಂತಾದ ಯಾವುದೇ ರೀತಿಯ ಅನ್ಯೋನ್ಯತೆಗೆ ಲೈಂಗಿಕ ಸಂಬಂಧದ ಬಣ್ಣ ಬಳಿದುಬಿಡಲಾಗುತ್ತದೆ. ನಮ್ಮಲ್ಲಿರುವ ಹೋಮೋಫೋಬಿಯಾ(ಸಲಿಂಗ ಪ್ರೇಮದೆಡೆಗೆ ನಮ್ಮಲ್ಲಿರುವ ಭಯ) ನಾವು ಒಟ್ಟಿಗೆ ಯಾವುದೇ ಲೇಬಲ್ಲುಗಳಿಲ್ಲದೆ ಬದುಕುವುದನ್ನು ತಡೆಯುತ್ತವೆ. ಅದರಲ್ಲೂ ಸಲಿಂಗ ಪ್ರೇಮದ ಸಂಬಂಧಗಳ ಬಗ್ಗೆ ನಾವು ಮಾತನಾಡುವಾಗ ದೃಶ್ಯ ಮಾಧ್ಯಮದಲ್ಲಿ ಚಿತ್ರಿಸುವಾಗ ಅದಕ್ಕೊಂದು ಕಾಮದ ಬಣ್ಣದ ಲೇಪ ಹಚ್ಚಿಬಿಡುತ್ತೇವೆ, ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಗೂ ಕಮೆಂಟುಗಳಲ್ಲಿ ಅವನೆಷ್ಟು ಗೇ ಇದ್ದಾನೆ ಅಥವಾ ಎಷ್ಟರ ಮಟ್ಟಿಗೆ ಅವನಲ್ಲಿ ಅನ್ಯಲಿಂಗದ ಛಾಯೆಗಳಿವೆ ಎಂಬುದನ್ನು ಯಾವುದೇ ಸೂಕ್ಷ್ಮಗಳಿಲ್ಲದೆ ಹೀಗಳೆದಿದ್ದೇವೆ. ಈ ಭಯದಿಂದಾಗಿಯೇ ನನಗೆ ಪುರುಷರೊಂದಿಗೆ ನನ್ನ ಲೈಂಗಿಕತೆಯನ್ನು ಅನ್ವೇಷಿಸಲು ಬಯಸಿದರೂ ಭಯವಾಗಿ ಸೋತಿದ್ದೇನೆ.

ನನ್ನ ಸ್ನೇಹಿತರೊಂದಿಗೆ ಈ ಬಗ್ಗೆ ಮಾತನಾಡುವುದಿರಲಿ, ಇಂತಹ ಆಸೆಗಳನ್ನು ಹೊಂದಿರುವ ಬಗ್ಗೆ ಅಪರಾಧಿ ಮನೋಭಾವದಿಂದ ಹೊರಬರಲು ಹೆಣಗಾಡಿದ್ದೇನೆ, ಅದರ ಬಗ್ಗೆ ಯೋಚಿಸಲು ನನಗೆ ನಡುಕ ಹುಟ್ಟುವ ಪರಿಸ್ಥಿತಿಯೂ ಕೂಡ ನಿರ್ಮಾಣವಾದದ್ದಿದೆ. ಆಗೆಲ್ಲಾ ನಾವು ಕಂಠದವರೆಗೂ ಕುಡಿದಾಗ ಮಾತ್ರ ನಮಗೆ ಪರಸ್ಪರರ ಮುಂದೆ ಅಳಲು ಸಾಧ್ಯವಾಯಿತು.

ಕಾಲೇಜಿನಲ್ಲಿ ಒಂದು ಅಥವಾ ಒಂದೂವರೆ ವರ್ಷ ಕಳೆದಾದ ಮೇಲೆ ನಮ್ಮಲ್ಲಿ ಹೆಚ್ಚಿನವರು ನಮ್ಮ ಒಂಟಿತನ, ದುಃಖ, ಭಗ್ನಪ್ರೇಮದಿಂದಾದ ನೋವು, ಹತಾಶೆ ಮತ್ತು ಕೋಪವನ್ನು ಕೋಣೆಗಳಲ್ಲಿ ಒಬ್ಬರೇ ಅಳುವುದು, ಕವಿತೆ ಬರೆಯುವುದು ಮತ್ತು ನಮ್ಮ ಗಮನವನ್ನು ಬೇರೆಡೆಗೆ ಹರಿಸುವುದರ ಮೂಲಕ ಹೊರಹಾಕುತ್ತಿದ್ದೆವು. ನಾವು ಗೆಳೆಯರೆಲ್ಲ ಒಟ್ಟಿಗೆ ಸುತ್ತಾಡುತ್ತಿರುವಾಗ ಅತಿ ಕಡಿಮೆಯೆನ್ನುವಷ್ಟರ ಮಟ್ಟಿಗೆ ಯಾವುದೇ ಅಳುಕಿಲ್ಲದೆ, ಕಾಮದ ಲೇಪವಿಲ್ಲದೆ, ಜನರ ಕುಹಕದ ಮಾತುಗಳ ಭಯವಿಲ್ಲದೆ ನಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳಲು, ಪರಸ್ಪರ ತೆರೆದುಕೊಳ್ಳಲು, ಪ್ರೀತಿಯಿಂದ, ಸ್ನೇಹದಿಂದ ಸ್ಪರ್ಶ ಸಖ್ಯವನ್ನು ಸಾಧಿಸಲು ಸಾಧ್ಯವಾಯಿತು. ನಮಗಾಗ ಪಿತೃಪ್ರಧಾನ ವ್ಯವಸ್ಥೆಯಲ್ಲಿನ ಪುರುಷತ್ವದ ವೈಭವೀಕರಣದ ಬಗ್ಗೆಯಾಗಲಿ ಅಥವಾ ಅದು ಹೇಗೆ ನಮ್ಮ ತಿಳಿವನ್ನು ಅಸೂಕ್ಷ್ಮವನ್ನಾಗಿ ಸಂವೇದನಾರಹಿತರನ್ನಾಗಿ ಮಾಡಿ ಪರಸ್ಪರರೆಡೆಗಿನ ಸ್ಪರ್ಶ ಮತ್ತು ಅನ್ಯೋನ್ಯತೆಯ ಮಹತ್ವವನ್ನು ತೆರೆಮರೆಯಾಗಿಸಿ ನಮ್ಮನ್ನು ಖಾಲಿತನಕ್ಕೆ ದೂಡಿದೆ ಎಂಬುದರ ಬಗ್ಗೆಯಾಗಲಿ ಅರಿವಿರಲಿಲ್ಲ. ಯಾರೂ ಕೂಡ ಆ ಏಕಾಕಿತನವನ್ನು ಎದುರಿಸುವುದು ಹೇಗೆ ಎಂದು ಕಲಿಸಿಕೊಡಲಿಲ್ಲ.

ನಿಮಗೆ ಕಿಸ್ ಮಾಡುವುದು ಇಷ್ಟವಾ? ಎಂದು ನಾನು ನನ್ನ ಡೇಟ್ ಅನ್ನು ಕೇಳಿದೆ ಮತ್ತು ಅವಳು ಹೌದು ಎಂದು ಹೇಳಿದಳು. ಆ ಪುಟ್ಟ ‘ಕೇಳುವಿಕೆ’ ಮತ್ತು ಉತ್ತರ ನನ್ನಲ್ಲೊಂದು ನಿರಾಳ ಭಾವವನ್ನು ಕೊಟ್ಟಿತು. ಈ ರೀತಿ ಸೆಕ್ಸ್ ಮಾಡುವ ಮುಂಚೆ ‘ಅನ್‌ಸೆಕ್ಸಿ’ ವಿಷಯಗಳನ್ನು ಮಾತನಾಡುವುದು ಆ ಸುಂದರ ಕ್ಷಣಗಳನ್ನು ಹಾಳುಮಾಡುತ್ತವೆ ಎಂಬ ಕಲ್ಪನೆ ಇದ್ದರೂ ಪರಸ್ಪರ ಮಾತನಾಡಿಕೊಳ್ಳುವ ಮೂಲಕ ಒಪ್ಪಿಗೆಯನ್ನು ಪಡೆಯುವುದು ಅಥವಾ ಕಾಮಕೇಳಿಯಲ್ಲಿ ನಾವಿಡುವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಕೂಡ ನಮ್ಮ ಸಂಗಾತಿಯ ಭಾವವನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಮಧುರ ಕ್ಷಣಗಳನ್ನು ಮತ್ತಷ್ಟು ಮಾದಕ ಮತ್ತು ರಮ್ಯವಾಗಿಸುತ್ತವೆ. ನಾನಂತೂ ಈಗೀಗ ಸೆಕ್ಸ್ ಮಾಡುವ ಮೊದಲು ಮತ್ತು ನಂತರದಲ್ಲಿ ನಮ್ಮ ನಮ್ಮ ಭಾವನೆಗಳ ಬಗ್ಗೆ ಮಾತನಾಡಿಕೊಳ್ಳುವುದನ್ನು ನಿಯಮದಂತೆ ಮಾಡಿಕೊಂಡು ಪಾಲಿಸುತ್ತಾ ಬರುತ್ತಿದ್ದೇನೆ. ಎಲ್ಲವೂ ನೀಲಿ ಚಿತ್ರದಲ್ಲಿದ್ದಂತೆ ಸಾಗುವ ಬದಲು ಪರಸ್ಪರರನ್ನು ಅರ್ಥ ಮಾಡಿಕೊಳ್ಳುತ್ತಾ ಸಾಗುವುದು ಕಾಮಕ್ರಿಯೆ ಹೀಗಿದ್ದರೆ ಚೆನ್ನ ಎಂಬ ಪೂರ್ವಪಾಠಕ್ಕಿಂತಲೂ ಎಷ್ಟೋ ಪಟ್ಟು ಖುಷಿ ಕೊಡುತ್ತದೆ. ಈ ರೀತಿಯಾಗಿರುವುದು ಕಾಮದ ಬಗೆಗಿನ ನನ್ನ ಪುರುಷಕೇಂದ್ರಿತ ಕಲ್ಪನೆಗಳನ್ನು ಪ್ರಶ್ನಿಸುತ್ತದೆ - ನನಗೆ ಗೊತ್ತು; ನಾನು ಈ ಹಾದಿಯನ್ನು ಪ್ರಜ್ಞಾಪೂರ್ವಕವಾಗಿ ಆಯ್ದುಕೊಳ್ಳುತ್ತಿದ್ದೇನೆ, ಆದರೆ ಇದು ನನಗೆ ಸಂತಸದ ನವೀನ ಸಾಧ್ಯತೆಗಳ ಬಾಗಿಲನ್ನೇ ನನ್ನ ಮುಂದೆ ತೆರೆದಿರಿಸಿದೆ ಮತ್ತು ಹೆಚ್ಚಿನ ಪುರುಷರು ಹೊಂದಿರುವ ಕೆಲವು ಅಭದ್ರತೆಗಳನ್ನು ನಿಭಾಯಿಸಲು ನನಗೆ ಸಹಾಯ ಮಾಡಿದೆ. ರೂಢಿಗತ ಕಾಮಕ್ರೀಡೆಯ ಆಲದಮರಕ್ಕೆ ಜೋತು ಬೀಳುವ ಬದಲು ನಾನು ಜೊತೆಯಲ್ಲಿರುವ ಮಹಿಳೆಗೆ ಸಂತೋಷವನ್ನು ನೀಡುವುದನ್ನು ನಿಜವಾಗಿಯೂ ಆನಂದಿಸುತ್ತೇನೆ. ಇದರ ಅರ್ಥವೇನೆಂದರೆ, ನಮ್ಮ ಮೇಲೆ ಹೇರಲಾಗಿದ್ದ ಸಾಂಪ್ರದಾಯಿಕ ಶಿಶ್ನ-ಯೋನಿಯ ಸಂಭೋಗದ ಒತ್ತಡವನ್ನು ದೂರವಿಡುವುದು ಮಾನದಂಡವೆಂದು ನಂಬಿದ್ದೇನೆ. ಕಾಮಕ್ರಿಯೆಯಲ್ಲಿ ನಾನಿಡುವ ಪ್ರತಿಯೊಂದು ಹೆಜ್ಜೆಗೆ ನನ್ನ ಸಂಗಾತಿಯ ಪ್ರತಿಕ್ರಿಯೆಯ ಬಗ್ಗೆ ಗಮನಹರಿಸುವುದರ ಪ್ರಾಮುಖ್ಯತೆಯನ್ನು ಮನಗಂಡಿದ್ದೇನೆ. ಅವಳ ಅಭಿಪ್ರಾಯ ಕೇಳುವುದು, ಮುಂದಿನ ಪ್ರತಿ ಇಂಗಿತದ ಬಗ್ಗೆ ಒಪ್ಪಿಗೆ ಪಡೆಯುವುದು, ನಿಧಾನವಾಗಿ ಮುಂದುವರೆಯುವುದು ಮತ್ತು ಮಹಿಳೆಗೆ ಪ್ರತಿಕ್ರಿಯಿಸಲು ಸಾಕಷ್ಟು ಸಮಯ ನೀಡುವುದು ಇಬ್ಬರೂ ಕಳೆಯಲಿರುವ ಮಧುರ ಕ್ಷಣಗಳಿಗೆ ಅತಿಮುಖ್ಯ ಎಂದೇ ನನಗನಿಸಿವೆ.

ಮೊದಲ ಬಾರಿಗೆ, ನಾನು ಈ ಸ್ನೇಹಿತನೊಂದಿಗೆ ಪ್ರಾಮಾಣಿಕವಾಗಿ ಕಾಮದ ಬಗೆಗಿನ ವಿಷಯದ ಬಗ್ಗೆ ಚರ್ಚಿಸಿದೆ. ನನ್ನೆಲ್ಲ ಆತಂಕಗಳು, ಭಯಗಳು ಮತ್ತು ಅನುಮಾನಗಳನ್ನು ಹಂಚಿಕೊಂಡೆ. ನಾವಿಬ್ಬರೂ ಕೂತು ನಮ್ಮ ಮೊದಲ ಲೈಂಗಿಕ ಅನುಭವಗಳ ಬಗ್ಗೆ ನಾವು ಪರಸ್ಪರ ಮಾತನಾಡಿಕೊಂಡೆವು. ಆಗ ನಮಗೆ ಲೈಂಗಿಕತೆಯ ಸುತ್ತಲಿನ ಅನೇಕ ವಿಭಿನ್ನ ಅಂಶಗಳ ಬಗ್ಗೆ ನಮಗೆ ನಿಜವಾಗಿಯೂ ತಿಳಿದಿಲ್ಲವೆಂಬುದು ಗೊತ್ತಾಯಿತು. ಉದಾಹರಣೆಗೆ ಕಾಂಡೋಮನ್ನು ಹೇಗೆ ಹಾಕುವುದು, ಕಾಮಕ್ರೀಡೆಯ ಮಧುರ ಸಮಯದಲ್ಲಿ ವಿವಿಧ ಹಂತಗಳಲ್ಲಿ ನಮಗೇನಿಷ್ಟ ಮತ್ತು ಏನಿಷ್ಟವಿಲ್ಲವೆಂಬುದನ್ನು ಹೇಗೆ ಮಾತನಾಡಿಕೊಳ್ಳುವುದು, ಪರಸ್ಪರ ಒಪ್ಪಿಗೆಯನ್ನು ಹೇಗೆ ಪಡೆದುಕೊಳ್ಳುವುದು, ಸಂತಸದ ಅನುಭವವನ್ನು ಹೇಗೆ ಖಚಿತಪಡಿಸಿಕೊಳ್ಳುವುದು ಇತ್ಯಾದಿ ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿ ಹಗುರಾದೆವು ಮತ್ತು ಹಲವು ವಿಷಯಗಳನ್ನು ತಿಳಿದುಕೊಂಡೆವು.

ಇಲ್ಲಿಯವರೆಗೂ ನಮ್ಮ ಶಾಲೆಗಳಲ್ಲಿ ಅಥವಾ ನಮ್ಮ ಪೋಷಕರಿಂದ ನಾವು ಎಂದಿಗೂ ಲೈಂಗಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿಲ್ಲ ಅಥವಾ ಅವರು ನಮಗೆ ಈ ವಿಷಯದ ಬಗ್ಗೆ ಯಾವುದೇ ನೈಜವಾದ ಅರಿವು ಮೂಡಿಸಿಲ್ಲ ಎಂಬುದರ ಬಗ್ಗೆ ನಮಗೆ ವಿಷಾದವಿದೆ. ಕಾಂಡೋಮನ್ನು ಹೇಗೆ ಬಳಸಬೇಕೆಂದು ತಿಳಿಯುವುದರಿಂದ ಹಿಡಿದು ಮತ್ತೆಲ್ಲವನ್ನೂ ಗೊತ್ತುಮಾಡಿಕೊಳ್ಳುವುದಕ್ಕೆ ಇಂಟರ್ನೆಟ್ ಅನ್ನು ಸರ್ಫ್ ಮಾಡಬೇಕಾಗಿತ್ತು ಎಂದು ನನ್ನ ಸ್ನೇಹಿತ ಹೇಳಿಕೊಂಡಿದ್ದ. ಈ ವಿಷಯ ನನ್ನ ಮಟ್ಟಿಗೂ ಸತ್ಯ ಕೂಡ ಹೌದು.

ನಾವು ಎಷ್ಟೇ ಮುಕ್ತವಾಗಿರಲು ಪ್ರಯತ್ನ ಪಟ್ಟರೂ ಮುಜುಗರ ಕೆಲವನ್ನು ಮುಚ್ಚಿಹಾಕಿಬಿಡುತ್ತದೆ. ಶೀಘ್ರ ಸ್ಖಲನ ಮುಂತಾದ ವಿಷಯಗಳನ್ನು ಚರ್ಚಿಸುವಾಗ ನನ್ನ ಸ್ನೇಹಿತ ತೀವ್ರವಾದ ಮುಜುಗರಕ್ಕೆ ಒಳಗಾಗುತ್ತಿದ್ದ. ಅಷ್ಟರ ಮಟ್ಟಿಗೆ ನಾವು ಮಡಿವಂತಿಕೆಯ ಸಮಾಜವನ್ನು ನಿರ್ಮಾಣ ಮಾಡಿಬಿಟ್ಟಿದ್ದೇವೆ. ದೇಹವೇ ದೇಗುಲ ಎಂಬ ಮಾತಿದೆ. ನಮ್ಮ ನಮ್ಮ ದೇಗುಲಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಕಾಮದ ಬಗ್ಗೆ ಮಾತನಾಡುವುದು ಮುಜುಗರದ, ಅಸಹ್ಯಕರ ವಿಚಾರ ಎಂಬ ಭಾವವನ್ನು ಹೇರಲ್ಪಟ್ಟಿರುವ ಭಾರತದಂತಹ ದೇಶದಲ್ಲಿ ಸ್ವಲ್ಪ ಧೈರ್ಯ ತಂದುಕೊಂಡು ಈ ವಿಷಯಗಳ ಬಗ್ಗೆ ಯಾರೊಂದಿಗಾದರೂ ಮಾತನಾಡಲು ನನಗೆ ಸಾಧ್ಯವಾಗಿದ್ದು ಒಂದು ರೀತಿಯ ನಿರಾಳ ಭಾವವನ್ನು ನೀಡಿದೆ. ನಾನು ಮತ್ತು ನನ್ನ ಗೆಳೆಯ ಕಾಲೇಜಿನಿಂದ ನಮ್ಮ ಮನೆಗಳಿಗೆ ಹಿಂತಿರುಗಿದ ನಂತರ, ನಮ್ಮ ನಡುವಿನ ಮಾತುಕತೆ ಎಷ್ಟು ಮುಖ್ಯವಾಗಿತ್ತು ಮತ್ತು ಈ ರೀತಿ ಸಮಯ ಕಳೆಯುವುದು ಎಷ್ಟು ಅದ್ಭುತವಾಗಿದೆ ಎಂದು ನಾವಿಬ್ಬರೂ ಪರಸ್ಪರ ಮೆಸೇಜಿಸಿಕೊಂಡಿದ್ದೇವೆ. ಆ ಮಾತುಕತೆಯ ನಂತರ ನಾನು ಕಾಮದಂತಹ ಪವಿತ್ರ, ಸಾಮಾನ್ಯ ಹಾಗೂ ಸೂಕ್ಷ್ಮ ವಿಷಯಗಳನ್ನು ಇತರರ ಮುಂದೆ ಕೀಳಾಗಬಹುದೆಂಬ ಭಾವ ಸುಳಿಯಗೊಡದೆ ಮುನ್ನೆಲೆಗೆ ತರದಿದ್ದರೆ ಬಹುಷಃ ಪುರುಷರೊಂದಿಗೆ ಅಂತಹ ಸಂಭಾಷಣೆಗಳನ್ನು ಎಂದಿಗೂ ನಡೆಸಲಾಗದು ಎಂದು ಅರಿತುಕೊಂಡೆ - ಇಂತಹ ಎಷ್ಟೋ ಸಂದರ್ಭಗಳಲ್ಲಿ ನಮ್ಮ ಮುಂದಿನವರೇ ಮೊದಲ ಹೆಜ್ಜೆ ಇಡುವುದು ಸಾಧ್ಯವಿಲ್ಲದ ಮಾತು ಎನಿಸುತ್ತದೆ. ಹಾಗಾಗಿ ಯಾರಾದರೊಬ್ಬರು ಧೈರ್ಯ ಮಾಡಿ ಮಾತು ಆರಂಭಿಸುವುದು ಅವಶ್ಯವೆನಿಸುತ್ತದೆ.

ಇದೀಗ, ಈ ಹೊತ್ತು ಪ್ರೀತಿ, ಕಾಮ, ಕಾಳಜಿ, ವಾತ್ಸಲ್ಯ, ಬಯಕೆ ಮತ್ತು ಆರೈಕೆ ಮುಂತಾದ ವಿಷಯಗಳ ನನ್ನ ಪ್ರತಿಶೋಧ ಮತ್ತು ನನ್ನ ಅಗತ್ಯಗಳ ಸ್ವವಿಮರ್ಶೆಯ ಉಚ್ಪ್ರಾಯದ ದಿನಗಳೆಂದು ಭಾವಿಸುತ್ತೇನೆ. ಈ ಸಮಯ ಕಾಮ, ಲೈಂಗಿಕತೆ, ಪರಸ್ಪರರ ಒಪ್ಪಿಗೆ, ನನ್ನ ಜೀವನದಲ್ಲಿ ಬಂದು ಹೋಗುವ ಪುರುಷರ ಮತ್ತು ಮಹಿಳೆಯರೊಂದಿಗಿನ ರಚನಾತ್ಮಕ ಸಂಬಂಧಗಳು ಕುರಿತಾದ ನನ್ನೆಲ್ಲ ಆತಂಕ, ಭಯ, ಭಾವನೆಗಳು, ಅನುಮಾನಗಳೊಂದಿಗೆ ಪ್ರಾಮಾಣಿಕವಾಗಿ ಸಂವಹಿಸುವ ಮೊದಲ ಹೆಜ್ಜೆಗಳೆಂದು ಭಾವಿಸುತ್ತೇನೆ. ಒಂಟಿತನವನ್ನು ಯಾವ ರೀತಿ ಎದುರಿಸಬೇಕು ಮತ್ತು ಎದುರಿಸಬಾರಾದು ಎಂಬುದನ್ನು ಅರ್ಥಮಾಡಿಕೊಳ್ಳಲು ನಿಜವಾಗಿಯೂ ಪ್ರಯತ್ನಿಸುವುದು ಅತ್ಯವಶ್ಯ ಹಾಗೂ ಇದು ಚಿಟಿಕೆ ಹೊಡೆಯುವುದರಲ್ಲಿ ಆಗುವಂತಹ ಕೆಲಸವಲ್ಲ ಬದಲಾಗಿ ತುಂಬಾ ಪರಿಶ್ರಮ, ಸಮಯ ಬೇಡುವ ಕೆಲಸವೆಂದು ಅರಿತುಕೊಂಡಿದ್ದೇನೆ.

ಸಮುದ್ರದಷ್ಟು ವಿಶಾಲವಾಗಿರುವ ನೀಲಿಚಿತ್ರಗಳು, ಆಲ್ಕೋಹಾಲ್, ಗೇಮಿಂಗ್ ಮತ್ತು ಪುರುಷತ್ವವನ್ನೇ ಆಳದಲ್ಲಿ ಮೆರೆಸುವ ಕ್ರೀಡೆಗಳು; ಬಾಲ್ಯದಿಂದಲೂ ಹುಡುಗರೊಂದಿಗೆ ಪುರುಷರೊಂದಿಗೆ ಆಡಬೇಕಾದ ನಮ್ಮ ನಿಜದ ಸಮತೆಯ ಬದುಕಿನ ಬಗ್ಗೆ ಮತ್ತು ಕಾಮಕ್ರಿಯೆಯಲ್ಲಿ ಹೇಗೆ ಪರಸ್ಪರ ಗೌರವಿಸುವುದರ ಅಸಲಿ ಮಾತುಗಳನ್ನು ಮರೆಸುವಂತೆ ಮಾಡಿಬಿಟ್ಟಿವೆ. ನಮ್ಮ ಹೃದಯದ ಮಾತುಗಳನ್ನು ಬಿಟ್ಟು ನಾವು ಆಡುವ ಪುರುಷತ್ವ ವೈಭವೀಕರಣದ ಬೇರೆಲ್ಲ ಜುಜುಬಿ ಮಾತುಗಳು ಅನಗತ್ಯ ವಿಷಚಕ್ರಗಳಿಗೆ ಸಿಕ್ಕು ಹೇಗೆ ಪುರುಷರ ನಿಜವಾದ ಸ್ಪರ್ಶದ ಬಯಕೆ, ಕಾಳಜಿ ತೋರುವ ಯಾವುದೇ ಜೀವದ ಉಪಸ್ಥಿತಿ, ಅನ್ಯೋನ್ಯತೆ, ಮಾನವ ಸಹಜ ಪ್ರೀತಿ ಕಾಳಜಿಗಾಗಿನ ಹಂಬಲಗಳನ್ನು ಹಾಸ್ಯಾಸ್ಪದವಾಗಿ ಕಾಣುತ್ತದೆ ಎಂಬುದನ್ನು ನೆನೆಸಿಕೊಂಡರೆ ಭಯವಾಗುತ್ತದೆ.

ಹಾಸಿಗೆ ಸೇರಿದಂತೆ ಎಲ್ಲ ಕಡೆಯೂ ನಮ್ಮ ಸಂಗಾತಿಯ ಅಸ್ಮಿತೆ ಮತ್ತು ಅವರ ಭಾವನೆಗಳನ್ನು ಗೌರವಿಸುವುದು ಅತಿಮುಖ್ಯವೆನಿಸುತ್ತದೆ. ಆ ಮೂಲಕ ಪವರ್ ಪಾಲಿಟಿಕ್ಸನ್ನು ವಿಭಿನ್ನ ಹೊಸ ಮಾನವೀಯ ದೃಷ್ಟಿಕೋನದಲ್ಲಿ ನೋಡುವುದು ಸಾಧ್ಯವಿದೆ. ಈ ಎಲ್ಲ ಹುಡುಕಾಟಗಳು ನನಗೆ ಸ್ತ್ರೀವಾದವನ್ನು ಅರ್ಥ ಮಾಡಿಕೊಳ್ಳುವಲ್ಲಿಯೂ ಸಹಾಯ ಮಾಡಿವೆ. ಸ್ತ್ರೀವಾದವೆಂದರೆ ಸ್ವತಃ ಮತ್ತು ಇತರರೆಡೆಗೆ ಒಳ್ಳೆಯತನ, ದಯೆ, ಸಹಾನುಭೂತಿ, ಸಮಾನತೆ ಮತ್ತು ವಾತ್ಸಲ್ಯವನ್ನು ಹೊಂದುವಂತೆ ಬದುಕುವುದೆಂದು ಅರ್ಥ ಮಾಡಿಸಿವೆ. ಈ ನೆಲೆಗಟ್ಟಿನಲ್ಲಿ ಯೋಚಿಸುತ್ತಿರುವುದರಿಂದ ಹಾಗೂ ಬದುಕಲು ಕಲಿಯುತ್ತಿರುವುದರಿಂದ ಸಮಾಜ ನನ್ನನ್ನು ಬಹಾದ್ದೂರ್ ಗಂಡಸುಎಂದು ಕರೆಯದೆ ಹೋಗಬಹುದು. ಅಷ್ಟಕ್ಕೂ ಪುರುಷ ಕೇಂದ್ರಿತ ಮನಸ್ಥಿತಿಯಿಂದ ಬರುವ ಅಂತವೇ ಸವಕಲು ಬಿರುದುಗಳನ್ನು ಹೊಂದುವಲ್ಲಿ ನನಗ್ಯಾವ ಆಸಕ್ತಿಯೂ ಇಲ್ಲ. ಆದರೆ ನನ್ನೆಲ್ಲ ವಿಚಾರಧಾರೆಗಳು ನನ್ನನ್ನು ಒಬ್ಬ ಉತ್ತಮ ಮತ್ತು ಉಲ್ಲಾಸಭರಿತ ವ್ಯಕ್ತಿಯನ್ನಾಗಿ ರೂಪಿಸುತ್ತಿವೆ ಎಂಬುದರ ಬಗ್ಗೆ ಹೆಮ್ಮೆ ಇದೆ.

[ಸುಧಾ೦ಶು ಮಿತ್ರ, 28 ವರ್ಷದ ಸಿಸ್-ಪುರುಷ(cis male) ಎಂದು ತಮ್ಮನ್ನು ಗುರುತಿಸಿಕೊಳ್ಳಲು ಬಯಸುವ ಇವರು ಲಿಂಗತ್ವದ ಸ್ಪೆಕ್ಟ್ರಮ್‌ನಲ್ಲಿ ತಮ್ಮ ಅಸ್ಮಿತೆಯ ನಿಖರವಾದ ಹುಡುಕಾಟದಲ್ಲಿದ್ದಾರೆ. ಅವರು ಬೆಂಗಳೂರು ಮೂಲದ ಸಂಶೋಧಕರಾಗಿದ್ದು ಸ್ತ್ರೀವಾದಿ ವಿಚಾರಗಳ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ]

ಅನುವಾದ: ದಾದಾಪೀರ್‌ ಜೈಮನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT