ಭಾನುವಾರ, ಮಾರ್ಚ್ 7, 2021
30 °C

ಸಹಸ್ರ ಬುದ್ಧಿ ಹೇಳಿದ ಸಹಸ್ರಬುದ್ದೆ

ಪ್ರೊ.ಸಿ.ಎನ್.ಆರ್.ರಾವ್ Updated:

ಅಕ್ಷರ ಗಾತ್ರ : | |

Deccan Herald

ಬನಾರಸ್‌ ವಿಶ್ವವಿದ್ಯಾಲಯದಲ್ಲಿ ಸಹಸ್ರಬುದ್ಧೆ ಎಂಬ ಅಧ್ಯಾಪಕರು ಇದ್ದರು. ನನ್ನ ಜೀವನದಲ್ಲಿ ಅತಿ ಹೆಚ್ಚು ಪ್ರಭಾವ ಬೀರಿದ್ದರು. ಅವರು ಪಾಠ ಮಾಡುವ ವಿಧಾನ ಒಂದೇ ಅಲ್ಲ, ವಿದ್ಯಾರ್ಥಿಗಳ ಬಗ್ಗೆ ಪ್ರೀತಿ, ನಗುತ್ತಾ ಮಾತನಾಡುವ ಆತ್ಮೀಯತೆ, ಎಲ್ಲವೂ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿತ್ತು. ನನ್ನ ಬಗ್ಗೆಯಂತೂ ವಿಶೇಷ ಕಾಳಜಿ ಇತ್ತು.

ಒಮ್ಮೆ ಮಾತನಾಡುವಾಗ, ಖ್ಯಾತ ರಸಾಯನ ವಿಜ್ಞಾನಿ ಲೈನಸ್ ಪಾಲಿಂಗ್ ಅವರ ‘ನೇಚರ್‌ ಆಫ್‌ ಕೆಮಿಕಲ್‌ ಬಾಂಡಿಂಗ್‌’ ಪುಸ್ತಕ ಓದಲು ಹೇಳಿದರು.  ಅವರ ಸಲಹೆ ನನ್ನ ಜನ್ಮವನ್ನೇ ಬದಲಿಸಿ ಬಿಟ್ಟಿತು. ಮುಂದೆ ಅಮೆರಿಕಾದಲ್ಲಿ ಲೈನಸ್ ಪಾಲಿಂಗ್ ಅವರ ಜತೆ ಕೆಲಸ ಮಾಡುವ ಅವಕಾಶವೂ ಸಿಕ್ಕಿತು. ಮುಂದೆ ಅವರಿಗೆ ನೊಬೆಲ್‌ ಪ್ರಶಸ್ತಿ ಲಭಿಸಿತು. ಅಣು ಜೀವಶಾಸ್ತ್ರದ(ಮಾಲೆಕ್ಯುಲರ್‌ ಬಯಾಲಜಿ) ಹುಟ್ಟಿಗೆ ಅವರು ಕಾರಣರಾದರು. ಸಹಸ್ರ ಬುದ್ದೆಯವರು ವಿಜ್ಞಾನಿ ಆಗಿರಲಿಲ್ಲ. ಆದರೆ, ಅತ್ಯುತ್ತಮ ಅಧ್ಯಾಪಕ. ಅವರಿಂದ ಕಲಿತ ಹಲವು ಗುಣಗಳನ್ನು ನಾನು ಪಾಠ ಮಾಡುವಾಗ ಅನುಸರಿಸುತ್ತಲೇ ಬಂದೆ. ಐಐಟಿಯಲ್ಲಿ ಕಥೆಗಳನ್ನು ಹೇಳುವ ಮೂಲಕ ಪಾಠ ಮಾಡುತ್ತಿದ್ದೆ.

ಸಹಸ್ರ ಬುದ್ದೆ ವಿದ್ಯಾರ್ಥಿಗಳ ವಿಜ್ಞಾನ ಪ್ರಬಂಧ ಮಂಡಿಸಲು ಮಾರ್ಗದರ್ಶನ ನೀಡುತ್ತಿದ್ದರು. ಆದರೆ, ಅದರಲ್ಲಿ ಅವರು ತಮ್ಮ ಹೆಸರನ್ನು ಹಾಕಿಕೊಳ್ಳುತ್ತಿರಲಿಲ್ಲ. ವಿದ್ಯಾರ್ಥಿಗಳ ಹೆಸರುಗಳನ್ನೇ ಹಾಕುತ್ತಿದ್ದರು.

ಇದನ್ನೂ ಓದಿ: ಶಿಕ್ಷಕರ ದಿನಾಚರಣೆ ವಿಶೇಷ: ಅರಿವು ಮೂಡಿಸಿದ ಆ್ಯನ್‌ ವಾರಿಯರ್‌!

ಕಾಲೇಜು ದಿನಗಳಲ್ಲೂ ಅಷ್ಟೇ ನಾರಾಯಣರಾವ್‌ ಎಂಬ ಉಪನ್ಯಾಸಕರು ವಿಜ್ಞಾನದ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸುತ್ತಿದ್ದರು. ಬಿಎಸ್‌ಸಿ ಮುಗಿದ ಬಳಿಕ ಬನಾರಸ್‌ ವಿಶ್ವವಿದ್ಯಾಲಯಕ್ಕೆ ಹೋಗು ಎಂದು ಸಲಹೆ ನೀಡಿದರು. ಅವರು ಅದೇ ವಿಶ್ವವಿದ್ಯಾಲಯದಲ್ಲಿ ಓದಿದ್ದರು. ಅಲ್ಲದೇ, ಅವರ ರೀಸರ್ಚ್‌ ಪೇಪರ್‌ ಕೂಡಾ ಪ್ರಕಟ ಆಗಿತ್ತಂತೆ. ತಮ್ಮ ಜೇಬಿನಿಂದ ಒಂದು ತುಂಡು ಕಾಗದವನ್ನು ತೆಗೆದು ಅದರಲ್ಲಿ ತಮ್ಮ ಹೆಸರು ಪ್ರಕಟ ಆಗಿದ್ದನ್ನು ತೋರಿಸಿದ್ದರು. ನೀನು ಅಲ್ಲಿಗೆ ಹೋದರೆ, ಇದೇ ರೀತಿ ಪೇಪರ್‌ ಪಬ್ಲಿಷ್‌ ಮಾಡಬಹುದು ಎಂದು ಹೇಳಿದರು. ಆ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ವಿಜ್ಞಾನ, ಸಂಶೋಧನೆ ಅಷ್ಟೊಂದು ಪ್ರಸಿದ್ಧಿ ಪಡೆದಿರಲಿಲ್ಲ. ಐಐಎಸ್‌ಸಿ ಇತ್ತು. ಆದರೂ, ಬನಾರಸ್‌ ವಿಶ್ವವಿದ್ಯಾಲಯ ತುಂಬಾ ಪ್ರಖ್ಯಾತಿ ಪಡೆದಿತ್ತು. ಹೀಗಾಗಿ ಅಲ್ಲಿಗೆ ಹೋದೆ.

ಚಿಕ್ಕಂದಿನಲ್ಲಿ ಆಚಾರ್ಯ ಪಾಠಶಾಲೆಯಲ್ಲಿ ಓದುವಾಗ ಶಿಕ್ಷಕರು ಪ್ರಭಾವ ಬೀರಿದ್ದರಿಂದಲೇ ವಿಜ್ಞಾನದ ವಿಷಯವನ್ನು ಆಯ್ಕೆ ಮಾಡಿಕೊಂಡೆ. ಅಲ್ಲಿ ಶಿವರುದ್ರಪ್ಪ, ಕೃಷ್ಣಮೂರ್ತಿ, ನಾರಾಯಣರಾವ್‌ ಎಂಬ ಶಿಕ್ಷಕರು ಇದ್ದರು. ಅವರೆಲ್ಲ ಬಹಳ ಒಳ್ಳೆಯ ಉಪಾಧ್ಯಾಯರು. ಅವರಿಗೆ ಸಂಬಳ ಕಡಿಮೆ ಬರುತ್ತಿತ್ತು. ಆದರೆ, ಪಾಠ ಮಾಡುವುದರಲ್ಲಿ ಶ್ರದ್ಧೆ ಮತ್ತು ಆಸಕ್ತಿ ಇತ್ತು. ಹಣಕ್ಕಿಂತ ಪಾಠ ಹೇಳೋದರಲ್ಲೇ ಖುಷಿ ಕಾಣುತ್ತಿದ್ದರು. ಸಂತೋಷದಿಂದಲೇ ಪಾಠ ಮಾಡುತ್ತಿದ್ದರು.

ಒಟ್ಟಿನಲ್ಲಿ ಹೇಳುವುದಾದರೆ ಶಿಕ್ಷಕರು ಮತ್ತು ಉಪನ್ಯಾಸಕರು ಪುಸ್ತಕದಲ್ಲಿ ಇರುವುದನ್ನೇ ಮಕ್ಕಳ ಮುಂದೆ ಒಪ್ಪಿಸಿದರೆ, ಆತ ಒಬ್ಬ ಒಳ್ಳೆಯ ಶಿಕ್ಷಕನಾಗಲು ಸಾಧ್ಯವಿಲ್ಲ. ಮಕ್ಕಳ ಜೀವನವನ್ನು ರೂಪಿಸುವ ಶಕ್ತಿ ಶಿಕ್ಷಕನಿಗೆ ಇರಬೇಕು. ನಗುತ್ತಾ, ನಗಿಸುತ್ತಾ ಕಲಿಸಬೇಕು. ಪುಸ್ತಕಗಳನ್ನು ಓದಲು ಪ್ರೇರಣೆ ನೀಡಬೇಕು.

ಇದನ್ನೂ ಓದಿ: ಬದುಕಿನ ಶಾಲೆಯಲ್ಲಿ ಹಲವು ಗುರುಗಳು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು