ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಎಚ್ಚರ ಸಾಲದು ಮಗಳೇ...

Last Updated 10 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಹಾಥರಸ್‍ನ ಘಟನೆಯನ್ನು ಯಾವ ಶಬ್ದಗಳಿಂದ ಹೇಳಿದರೂ ದುಃಖದಿಂದ ಗಂಟಲು ಉಬ್ಬುತ್ತದೆ. ಇಷ್ಟೊಂದು ಬಾಧೆಗಳನ್ನು ಹೊತ್ತುಕೊಂಡು ಹೇಗೆ ನಡೆಯೋದು, ಸುಡುವ ಇಂತಹ ಬೆಂಕಿಯಲ್ಲಿ ಹೇಗೆ ಬದುಕೋದು? ಇದು ನೆನ್ನೆ ಮೊನ್ನೆಗೆ ಮುಗಿಯುತ್ತದೆ ಎನ್ನುವಂತಿಲ್ಲ. ನಾಳೆಗೂ ಮತ್ತೆ ಎದುರಾಗುತ್ತದೆ...

***

‘ಕೋಟಿ ಕೋಟಿ ಬಾಧೆಗಳಲ್ಲಿ ಲಕ್ಷಾಂತರ ನೋವುಗಳಲ್ಲಿ ನೀ ಹುಟ್ಟಿ ಬೆಳೆದೆಯಮ್ಮ ನನ ತಂಗಿ ಅನುಸೂಯ...’ ಕೋಲಾರದ ಬಡ ಕುಟುಂಬದ ಹೆಣ್ಣು ಮಗಳೊಬ್ಬಳು ನೋವಿಗೊಳಗಾದ ಸಂದರ್ಭದಲ್ಲಿ ಕೋಟಿಗಾನಹಳ್ಳಿ ರಾಮಯ್ಯನವರು ಬರೆದ ಹಾಡಿನ ಈ ಸಾಲುಗಳನ್ನು 80ರ ದಶಕದಲ್ಲಿ ನನ್ನಂಥವರೆಲ್ಲರೂ ಹಾಡುತ್ತಲೇ, ಕೇಳುತ್ತಲೇ, ಕಣ್ಣೀರಾಗಿದ್ದು ಇತಿಹಾಸವಲ್ಲ. ಈವತ್ತಿಗೂ ಈ ಕ್ಷಣಕ್ಕೂ ನಾವೆಲ್ಲಾ ಅಸ್ಪೃಶ್ಯರು, ತಳ ಸಮುದಾಯದವರು ಒಂದೇ ಬಾಧೆಯಾಗಿದ್ದರೆ ಅಥವಾ ನೂರು ಬಾಧೆಗಳಾಗಿದ್ದರೂ ಸಹಿಸಿಕೊಳ್ಳುತ್ತಿದ್ದೆವೇನೋ... ಇದು ಎಲ್ಲಾ ಹೆಣ್ಣುಮಕ್ಕಳ, ಎಲ್ಲಾ ನೊಂದವರ ಬಾಧೆಯಾಗಿದ್ದರಿಂದ ಅದಕ್ಕೇ ಕೋಟಿ ಕೋಟಿ ಬಾಧೆಗಳು ಎನ್ನುವುದು. ಇಂತಹ ನೋವು, ಅವಮಾನಗಳನ್ನು ಅನುಭವಿಸಿದವರಿಗೆ ಮಾತ್ರ ಕೋಟಿ ಬಾಧೆಗಳ ಈಟಿ ಎಂಥದ್ದು ಎನ್ನುವುದರ ಅರ್ಥವಾಗುತ್ತದೆ.

ಹಾಥರಸ್‍ನ ಘಟನೆಯನ್ನು ಯಾವ ಶಬ್ದಗಳಿಂದಲೂ ಹೇಳಿದರೂ ದುಃಖದಿಂದ ಗಂಟಲುಬ್ಬುತ್ತದೆ. ಇಷ್ಟೊಂದು ಬಾಧೆಗಳನ್ನು ಹೊತ್ತುಕೊಂಡು ಹೇಗೆ ನಡೆಯೋದು? ಹೇಗೆ ಬದುಕೋದು? ಹೇಗೆ ಮಾತನಾಡೋದು ಎನಿಸುತ್ತದೆ. ಇದು ನೆನ್ನೆ ಮೊನ್ನೆಗೆ ಮುಗಿಯುತ್ತದೆ ಎನ್ನುವಂತಿಲ್ಲ. ನಾಳೆಗೂ ಮತ್ತೆ ಮತ್ತೆ ಬರುತ್ತದೆ. ಇನ್ನೆಷ್ಟು ದಿನ ಹೀಗೇ ಅನುಭವಿಸುವುದು, ಬದುಕುವುದು ಎಂದು ಜೀವ ಹೈರಾಣಾಗುತ್ತದೆ.

ಇದನ್ನೆಲ್ಲಾ ನೋಡಿ, ಅನುಭವಿಸಿ ನೊಂದು ಬೆಂದಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ ಮಾತು ಈ ಕ್ಷಣ ನೆನಪಾಗುತ್ತದೆ. ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ದುಃಖಿತರು, ನೋವುಂಡವರು ಎಂದರೆ ಈ ನೆಲದ ಅಸ್ಪೃಶ್ಯರು ಮತ್ತು ಮಹಿಳೆಯರು. ಭೀಮ ಸಾಹೇಬರು ಈ ದೇಶದ ಮಹಿಳೆಯರನ್ನು ಜಾತಿಯಾಗಿ, ಧಾರ್ಮಿಕವಾಗಿ ವಿಂಗಡಿಸಿ ಮಾತನಾಡಲಿಲ್ಲ, ಬರೆಯಲಿಲ್ಲ. ಭಾರತದ ಎಲ್ಲಾ ಮಹಿಳೆಯರು ಎಂದು ಹೇಳುತ್ತಿದ್ದರು. ಅದಕ್ಕೆ ಅವರು ತಮ್ಮ ಜೀವಿತ ಕಾಲದವರೆಗೂ ಅಸ್ಪೃಶ್ಯರು, ನೊಂದವರು ಹಾಗೂ ಮಹಿಳೆಯರ ಮುಕ್ತಿಗಾಗಿ, ಸ್ವಾಭಿಮಾನದ ಬದುಕಿಗಾಗಿ ಹೋರಾಡುತ್ತೇನೆ ಎಂದಿದ್ದು. ಇದನ್ನು ಮಧ್ಯಪ್ರದೇಶದ ಒಂದು ಸಭೆಯಲ್ಲಿ ಹೇಳಿದ್ದು.

ಈಗ ನಾವೆಲ್ಲಾ ಮಹಾನಾಯಕ ಭೀಮ ಸಾಹೇಬರ ಬಾಲ್ಯದ ಘಟನೆಗಳನ್ನು ನೋಡುತ್ತಾ, ಎಚ್ಚರಗೊಳ್ಳುತ್ತಾ ಜಾಗೃತಗೊಳ್ಳುತ್ತಿದ್ದೇವೆ ಮತ್ತು ಆಗಿನ ಘಟನೆಗಳಿಗೂ ಇವತ್ತಿನ ಘಟನೆಗಳಿಗೂ ಏನೂ ವ್ಯತ್ಯಾಸವಿಲ್ಲ ಅನಿಸುತ್ತದೆ. ಜಾಗತಿಕವಾಗಿ ನಾವು ಎಷ್ಟೇ ಮುಂದುವರಿದಿದ್ದರೂ ಮಾನಸಿಕವಾಗಿ ಇಂತಹ ಘಟನೆಗಳಿಂದಾಗಿ ಅಧಃಪತನದ ಹಾದಿಯಲ್ಲಿದ್ದೇವೆ. ಇದಕ್ಕೆ ಪೂರಕವಾಗಿ ನನ್ನ ಬಾಲ್ಯದಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ.

ನಾನು ನನ್ನ ಮನೆಯ ಮುಂದಿನ ಹಟ್ಟಿಯಲ್ಲಿ ಗೋಲಿ ಆಡುತ್ತಿದ್ದೆ. ಜಗುಲಿ ಮೇಲೆ ತಲೆ ಬಾಚಿಕೊಳ್ಳುತ್ತಿದ್ದ ಅವ್ವ, ‘ಗೌಡ್ರು ಬಂದ್ರು, ಗೌಡ್ರು ಬಂದ್ರು’ ಎಂದು ಗಾಬರಿಯಿಂದ ಎದ್ದು ಒಳಕ್ಕೆ ಓಡಿದರು. ನಾನು ಎದ್ದೆನೋ ಬಿದ್ದೆನೋ ಎಂದು ಒಳಕ್ಕೆ ಓಡಿದೆ. ಓಡುವ ಭರದಲ್ಲಿ ಗೋಡೆ ಯಾವುದು? ಬಾಗಿಲು ಯಾವುದು ತಿಳಿಯದೇ ಗೋಡೆಗೆ ತಲೆ ಬಡಿಸಿಕೊಂಡು ಅದೇ ಭರದಲ್ಲಿ ದಢಾರನೇ ಹಿಂದಕ್ಕೆ ಬಿದ್ದೆ. ಒಂದು ಕ್ಷಣ ತಲೆಬುರುಡೆ ಜುಮ್ ಎಂದಿತು. ಸುಧಾರಿಸಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯಿತು. ಅಲ್ಲಿಗೆ ಅವ್ವ ಓಡಿ ಬಂದು ನನ್ನನ್ನು ಸಮಾಧಾನಗೊಳಿಸಿದರು. ಆ ಗೌಡರು ನನ್ನ ಮನೆಯ ದಾರಿಯಲ್ಲಿ ಹೋಗಿದ್ದೇ ತಿಳಿಯಲಿಲ್ಲ. ನಾನು ಕೇಳಿದೆ, ‘ಯಾಕವ್ವ ಅವ್ರು ಬಂದ್ರೆ ನಾನು ಗೋಲಿಯಾಡಬಾರದಾ?’ ಅಂತ. ಅವ್ವ, ‘ಹಂಗಲ್ಲ ಮಗನೇ, ಅವ್ರಿಗೆಲ್ಲಾ ನಮ್ಮನ್ ಕಂಡ್ರೆ ಆಗಲ್ಲ. ನಾವು ಎಷ್ಟರಲ್ಲಿ ಇರಬೇಕು, ಅಷ್ಟರಲ್ಲಿ ಇರಬೇಕು. ಹಂಗೆಲ್ಲಾ ಮಾತನಾಡಬಾರದು’ ಅಂತು. ‘ಹೋಗು, ಈಗ ಗೋಲಿ ಆಡಿಕೋ’ ಅಂದಿತು. ನನಗೆ ಆಡುವ ಖುಷಿ ಹೊರಟು ಹೋಗಿತ್ತು. ಮತ್ತು ನನ್ನ ತಲೆ, ಕಿವಿ ಗುಂಯ್ ಎನ್ನುತ್ತಿತ್ತು. ಅಂದರೆ ಈ ಘಟನೆಯಿಂದ ಪ್ರಬಲ ಜಾತಿಗಳ ಜನ ನಮ್ಮನ್ನೆಲ್ಲಾ ಎಷ್ಟು ಹದ್ದುಬಸ್ತಿನಲ್ಲಿಟ್ಟಿದ್ದರು ಎಂದು ತಾವೆಲ್ಲಾ ತಿಳಿದಿರಬಹುದು ಅಂದುಕೊಳ್ಳುತ್ತೇನೆ. ಈಗಲೂ ಪರಿಸ್ಥಿತಿ ಬದಲಾಗಿಲ್ಲ.

ಕೆಲವು ದಿನಗಳ ನಂತರ ಆ ಗೌಡರು ತೀರಿಕೊಂಡರು. ನನ್ನ ಕೇರಿಯ ಜನ ಅವರನ್ನು ನೋಡಲು ಹೊರಟಿದ್ದರು. ನಾನು ನನ್ನವ್ವನ ಜೊತೆ ಅಲ್ಲಿಗೆ ಹೋದೆ. ಎಲ್ಲರೂ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ನನ್ನ ಕೇರಿಯ ಜನ ಕೂಡ. ನನಗೂ ಕಣ್ಣಲ್ಲಿ ನೀರು ಬಂತು. ಸಾವಿಗೆ ಕೈ ಮುಗಿದು ಬಂದೆವು.

ಇದನ್ನು ಹೇಳಲು, ಬರೆಯಲು ಕಾರಣ ಮೊನ್ನೆ ಮನೀಷಾ ಎಂಬ ಮಗಳು ತೀರಿಕೊಂಡಾಗ ಆದ ಆಘಾತವನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಆದರೆ ಉಳಿದ ಸಮುದಾಯದ ಹೆಣ್ಣುಮಕ್ಕಳಿಗೆ ತೊಂದರೆಯಾದರೆ ಅಥವಾ ಇಂತಹದ್ದೇ ಘಟನೆಗಳು ನಡೆದರೆ ಇಡೀ ಸಮಾಜ ನೋಯುತ್ತದೆ ಮತ್ತು ನಾವು ಕೂಡ ಉಳಿದವರಿಗಿಂತ ಹೆಚ್ಚು ಸ್ಪಂದಿಸುತ್ತೇವೆ. ಆದರೆ, ದಲಿತ ಅಥವಾ ಅಸ್ಪೃಶ್ಯ ಹೆಣ್ಣು ಮಗಳು ಈ ರೀತಿ ತೀರಿಕೊಂಡರೆ ಏಕೆ ಸಮಾಜ ಸ್ಪಂದಿಸುವುದಿಲ್ಲ ಅಂತ ನನಗೆ ಗೊತ್ತಿರುವ ಪ್ರಸಿದ್ಧ ಕವಿಗಳು, ಪತ್ರಕರ್ತರು ನನ್ನನ್ನು ಪ್ರಶ್ನಿಸಿದರು. ಅದಕ್ಕೆ ಕಾರಣ ಯಾರಿಗೂ ಹೇಳುವ ಅಗತ್ಯವಿಲ್ಲ. ಇದೆಲ್ಲಾ ಗೊತ್ತಿರುವ ವಿಷಯವೇ. ಉಳಿದ ಸಮುದಾಯದ ಸುಖ-ದುಃಖಗಳು ಮಾತ್ರ ಮನುಷ್ಯನ ಸುಖ-ದುಃಖಗಳು. ಆದರೆ, ನಮ್ಮ ಸಾವು-ನೋವುಗಳು ಮನುಷ್ಯನ ಸಾವು-ನೋವುಗಳಲ್ಲವೇ? ನಮ್ಮನ್ನು ಈ ಸಮಾಜ ಹೇಗೆ ನೋಡುತ್ತದೆ ಎಂದರೆ ಬಹುಶಃ ನಗರ ಪ್ರದೇಶಗಳಲ್ಲಿ ಕಸ ಗುಡಿಸುವವರು ಬರುತ್ತಾರೆ. ಕಸ ತೆಗೆದುಕೊಂಡು ಹೋಗುವವರು ಬರುತ್ತಾರೆ. ನಾವು ಅವರನ್ನು ಗೌರವದಿಂದ ಪೌರ ಕಾರ್ಮಿಕರು ಎಂದು ಕರೆಯುತ್ತೇವೆ. ಆದರೆ, ಅವರು ಈ ಬೀದಿಗಳಲ್ಲಿ ಬಂದಾಗ ಉಳಿದ ಜನ ‘ಕಸದವರು ಬಂದರು’ ಎಂದು ಹೇಳುತ್ತಾರೆ. ನಾನು ಒಮ್ಮೆ ಅವರಿಗೆ ತಿಳಿ ಹೇಳಿದಾಗ ಕಣ್ಣನ್ನು ಕೆಂಪಗೆ ಮಾಡಿಕೊಂಡು ನಾನೇನೋ ದೊಡ್ಡ ಸುಧಾರಕನೇನೋ ಎನ್ನುವ ಹಾಗೆ ಅಸಹನೆ ತೋರಿದರು. ಎಷ್ಟೇ ಶತಮಾನಗಳು ಕಳೆದರೂ ಈ ಜಾತಿಯ ಮನಃಸ್ಥಿತಿ ಬದಲಾಗದೇನೋ ಎಂದು ಸುಮ್ಮನಾದೆ.

ಕವಿಗಳು, ಪತ್ರಕರ್ತರೂ ಆದ ನನ್ನ ಗೆಳೆಯರ ಪ್ರಶ್ನೆಗೆ ಉತ್ತರವೆಂಬಂತೆ ಒಂದು ಘಟನೆಯನ್ನು ವಿವರಿಸಿದೆ. ಕರ್ನಾಟಕದ ಕಂಬಾಲಪಲ್ಲಿಯಲ್ಲಿ ಘಟನೆ ನಡೆದ ದಿನ ಆ ಸಂಜೆ ಕೆ.ಆರ್‌. ಸರ್ಕಲ್‍ನಲ್ಲಿ ಎಣಿಕೆ ಮಾಡಿದಂತೆ 17 ಜನ ಇದ್ದೆವು. ಅಲ್ಲಿ ಡಾ.ಮರುಳಸಿದ್ದಪ್ಪ ಅವರು ಮಾತನಾಡುತ್ತಾ, ‘ನಾನೂ ನೀವೂ ಎಲ್ಲಾ ಸಾವಿನ ಶೋಕದಲ್ಲಿ ಮುಳುಗಿದ್ದೇವೆ. ನೋಡಿ ಇಲ್ಲಿ ಹೋಗಿ ಬರುವವರು ಮತ್ತು ಉಳಿದವರನ್ನು. ಇಲ್ಲಿ ಏನೂ ಆಗಿಯೇ ಇಲ್ಲವೆನ್ನುವ ಹಾಗೆ ಓಡಾಡುತ್ತಿದ್ದಾರೆ. ಇದು ನನ್ನ ಸಮಾಜ’ ಎಂಬ ನೋವಿನ ಮಾತುಗಳು ಈಗ ಹೇಳಿದರೇನೋ ಎನ್ನುವಂತೆ ಕೇಳಿಸುತ್ತಿವೆ. ಈ ಘಟನೆಯನ್ನು ಕೇಳಿದ ಪತ್ರಕರ್ತ ಗೆಳೆಯರು ನಿಟ್ಟುಸಿರು ಬಿಟ್ಟು ‘ಸಾರೀ’ ಎಂದರು. ‘ಇರ್ಲಿ ಬಿಡಿ ಸರ್’ ಅಂದೆ.

ಆದಿ ಜನಾಂಗದವರು ಅಕ್ಷರ ಕಲಿತರೆ ಅದೊಂದು ರೌರವ ನರಕ ಅಂತ ದೇವನೂರು ಹೇಳಿದ ಮಾತು ನಿಜ. ಈ ನರಕವನ್ನು ಭೀಮ ಸಾಹೇಬರು ಅನುಭವಿಸಿದ್ದರು. ನಾನೂ ನನ್ನಂಥವರೆಲ್ಲರೂ ಅನುಭವಿಸುತ್ತಲೇ ಇರುತ್ತೇವೆ. ಹೀಗೆ ಅನುಭವಿಸುತ್ತಲೇ ಇಲ್ಲಿಂದ ನಿರ್ಗಮಿಸುತ್ತೇವೆ. ಈ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ತವೆ.

ಇದನ್ನು ಹೇಳುತ್ತಲೇ ಇನ್ನೊಂದು ವಿಷಯವನ್ನು ನಿಮ್ಮೆಲ್ಲರ ಮುಂದಿಡಲು ಪ್ರಯತ್ನಿಸುತ್ತೇನೆ. ಇಂಥವುಗಳು ಭಾರತದಲ್ಲಿ ಯಾವುದೇ ಮೂಲೆಗೆ ಹೋದರೂ ನಡೆಯುತ್ತಲೇ ಇರುತ್ತವೆ. ಕೆಲವು ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಯರ‍್ರಮ್ಮ ಎನ್ನುವ ದಲಿತ ಸಮುದಾಯದ ಹೆಣ್ಣು ಮಗಳೊಬ್ಬಳನ್ನು ಬೀದಿಯಲ್ಲಿ ವಿವಸ್ತ್ರವಾಗಿ ಮೆರವಣಿಗೆ ಮಾಡಿ ಅವಮಾನ ಮಾಡಲಾಯಿತು. ಇಂತಹ ಅವಮಾನದಿಂದ ಜರ್ಝರಿತರಾದ ಆ ತಾಯಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಸುದ್ದಿ ಆಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದು ನನಗೆ ತಿಳಿದಿತ್ತು. ಆದರೆ, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸುವ ವಿಚಾರತಿಳಿದಿರಲಿಲ್ಲ.

ಅಂದು ಬೆಳಿಗ್ಗೆ ನಾನು ಕವಿ ಸಿದ್ದಲಿಂಗಯ್ಯನವರನ್ನು ಭೇಟಿಯಾಗಲು ಆ ದಿನ ಬೆಳಿಗ್ಗೆ ಮೂರ್ನಾಲ್ಕು ಬಾರಿಯಾದರೂ ಲ್ಯಾಂಡ್ ಲೈನ್‍ಗೆ ಫೋನ್ ಮಾಡಿದ್ದೆ. ಅವರು ಕರೆ ಸ್ವೀಕರಿಸಲಿಲ್ಲ. ಮತ್ತೆ ಫೋನ್ ಮಾಡಿದಾಗ ಸಿಕ್ಕ ಕವಿಗಳು ವಿಕ್ಟೋರಿಯಾ ಆಸ್ಪತ್ರೆಗೆ ಬಳ್ಳಾರಿಯ ಯರ‍್ರಮ್ಮನವರಿಗೆ ಸೀರೆ ಮತ್ತು ಬಟ್ಟೆ ಕೊಡಲು ಹೋಗಿದ್ದೆ ಅಂದರು. ‘ಇಕ್ಕುರ್ಲಾ ಹೊದಿರ್ಲಾ’ ಎನ್ನುವ ಸಾಲುಗಳ ಬರೆದಿದ್ದ ಕವಿಯೊಬ್ಬ ಹೀಗೆ ಮಾನವೀಯತೆ ಮೆರೆದಿದ್ದು ಆದಿ ಜನಾಂಗದವರ ಮನಃಸ್ಥಿತಿಯನ್ನು ತಿಳಿಸುತ್ತದೆ. ನೊಂದವರು, ಅವಮಾನಿತರು ಯಾವತ್ತೂ ಪ್ರತೀಕಾರ ಬಯಸುವವರಲ್ಲ. ಪ್ರತಿಸಂವೇದನೆಗೆ ಹಾತೊರೆಯುವವರು ಅವರು. ನಾನೇ ಬರೆದ ಒಂದು ಸಾಲು ಈಗ ನೆನಪಾಗುತ್ತದೆ. ‘ನನಗೆ ಹೊಡೆದವರ ಕೈ ನೋವಾಗದಿರಲೆಂದು’. ಈ ಜನಾಂಗಕ್ಕೆ ಉಳಿದ ಸಮುದಾಯವರಿಂದ ಒಂದು ಮುಗುಳ್ನಗೆ, ಪ್ರೀತಿ ಅಷ್ಟೇ ಸಾಕು. ಈ ಸಮಾಜಕ್ಕೆ ಅದೂ ಎಷ್ಟು ದುಬಾರಿಯಾಗಿದೆಯಲ್ಲಾ? ಇಂತಹ ಘಟನೆಗಳಿಂದ ದುಃಖವಾಗುತ್ತದೆ. ನೋವಾಗುತ್ತದೆ, ಹತಾಷೆಯಾಗುತ್ತದೆ. ಇದು ದೇವನೂರು ಹೇಳಿದ ಮಾತು. ಇದು ನಮಗೆ ನಾವು ಹೇಳಿಕೊಳ್ಳುವ ಮಾತು.

ಗಾಂಧಿ-ಬುದ್ಧ-ಬಸವ-ಅಂಬೇಡ್ಕರ್ ಹೇಳಿದ ಮಾತುಗಳಲ್ಲಿ ಇರುವೆ ನಡೆದ ಸಣ್ಣಸಣ್ಣ ಹೆಜ್ಜೆಗಳಲ್ಲಿ ನಾವು ಅದನ್ನು ಪಾಲಿಸಲು ಪ್ರಯತ್ನಿಸುತ್ತಿದ್ದೇವೆ. ಇದನ್ನು ನಾನು ಹೇಳಿದರೆ ಯಾರಿಗೂ ಬೇಸರ ಅನಿಸುವುದಿಲ್ಲ ಅಂದುಕೊಳ್ಳುತ್ತೇನೆ. ಬಸವಣ್ಣನವರು ‘ದಯವೇ ಧರ್ಮದ ಮೂಲವಯ್ಯ’ ಎಂಬೀ ಸಾಲುಗಳನ್ನು ಬರೆದು 800 ವರ್ಷಗಳೇ ಆಗಿವೆ. ಆದರೂ ಇದು ಅರ್ಥವಾಗಿದೆಯೋ, ಇಲ್ಲವೋ? ಅರ್ಥವಾದರೂ ಅದು ಹೇಳಲಿಕ್ಕೆ, ಬರೆಯಲಿಕ್ಕೆ ಅಷ್ಟೇನಾ? ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೇನೂ ಅಲ್ಲ ಎನ್ನುವ ಉದಾಸೀನವೋ ಏನೋ ಗೊತ್ತಿಲ್ಲ. ಆದರೂ ನನ್ನಂಥವರು ಅಣ್ಣ ಹೇಳಿದ ಮಾತುಗಳನ್ನು ನಮ್ಮ ಬದುಕಿನ ಸಣ್ಣ ಸಣ್ಣ ನಡೆ-ನುಡಿಗಳಲ್ಲಿ ಪಾಲಿಸಿದ್ದೇವೆ ಅಂದುಕೊಳ್ಳುತ್ತೇನೆ.

ಬದಲಾಗಬೇಕಾದವರು ಬದಲಾಗದಿದ್ದರೆ ಏನು ಬರೆದರೂ ಏನು ಹೇಳಿದರೂ ಒಂದೇ ಅನಿಸುತ್ತದೆ. ಆದರೂ ಈ ಆದಿ ಜನಾಂಗ ಎಲ್ಲರೊಟ್ಟಿಗೆ ಬದುಕುವ ಭರವಸೆಯನ್ನು ಬಿಟ್ಟಿಲ್ಲ. ಇಂದಲ್ಲ ನಾಳೆ ಸಹನೆಯ ತೋಟದಲ್ಲಿ ಮುಗುಳ್ನಗೆ ಹೂವುಗಳು ಅರಳುತ್ತವೆ ಅಂತ ಕಾಯುತ್ತಿದ್ದೇವೆ ಮತ್ತು ಕಾಯುತ್ತೇವೆ ಎಂದು ಹೇಳುವ ಈ ಜನರ ಆ ಸಹನೆ ಎಲ್ಲಿಂದ ಬಂತು? ಎಂದು ನಾನು ಬಹಳ ಯೋಚಿಸಿದ್ದೇನೆ. ಆಗ ಒಂದು ಬಾಲ್ಯದೊಂದು ಪ್ರಸಂಗ ನೆನಪಾಗುತ್ತದೆ. ನಾನು ಚಿಕ್ಕವನಿದ್ದಾಗ ನಾನು ಮತ್ತೆ ಮತ್ತೆ ಎಡವುತ್ತಿದ್ದೆ. ನಾನು ಎಡವಿಕೊಂಡಾಗಲೆಲ್ಲಾ ನನ್ನವ್ವ ಒಂದು ಮಾತು ಹೇಳುತ್ತಿತ್ತು. ‘ನೀನು ನೆಲ ನೋಡಿಕೊಂಡು ನಡೆದರೆ ಎಡವುದಿಲ್ಲ. ಆದ್ದರಿಂದ ತಲೆ ತಗ್ಗಿಸಿಕೊಂಡು ನೆಲ ನೋಡುತ್ತಾ ನಡಿ’ ಎಂದು ಹೇಳಿತ್ತು. ಅದಕ್ಕೆ ನಾವು ನೆಲವನ್ನೇ ನೋಡುತ್ತಾ ಬೆಳೆದೆವು. ಬಹುಶಃ ಆ ನೆಲದ ಗುಣವೇ ನಮ್ಮನ್ನೆಲ್ಲಾ ಇಲ್ಲಿಯರವರೆಗೆ ನಡೆಸಿದೆ ಅಂತ ಅನಿಸುತ್ತದೆ ಅಥವಾ ಈ ಭೂಮಿಯ ತೂಕದ ಸಹನೆ ನಮಗೆಲ್ಲಾ ಬಂದಿರಬಹುದು.

ಈ ಎಲ್ಲಾ ನೋವು-ಗಾಯಗಳು ನೆನಪಾಗಿದ್ದು ಹಾಥರಸ್‍ನಲ್ಲಿ ನಡೆದ ಘಟನೆಯಿಂದ. ಇವತ್ತು ಬೆಳಿಗ್ಗೆ ಮಗಳು ಮನೀಷಾ ಹೊಲಕ್ಕೆ ಹೋಗಿ ಮೈ ಮುರಿದು ಕೆಲಸ ಮಾಡಿಕೊಂಡು ಬಂದು ಸುಸ್ತಾಗಿ ಮಲಗಿದ್ದಾಳೆ. ಮಲಗು ಮಗಳೇ ಆರಾಮವಾಗಿ, ನಿದ್ರಿಸು ಕಂದ. ನಿನ್ನ ಏಳಿಸುವುದಿಲ್ಲ. ನಿನ್ನ ಕಾಯುತ್ತಾ ನಾನು ಎಚ್ಚರವಾಗಿರುತ್ತೇನೆ. ಆದರೆ ನೀನು ನಿನ್ನ ನಿದ್ರೆಯಲ್ಲಿಯೂ ಎಚ್ಚರವಾಗಿರಬೇಕು. ನನ್ನ ಎಚ್ಚರ ಸಾಲದು ಮಗಳೇ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT