ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಕೆ.ಸಂಧ್ಯಾ ಶರ್ಮ ಬರಹ: ಸಾರ್ಥಕ, ಸಾಧನಾ ಜೀವಿ ಜಿ. ವೆಂಕಟಸುಬ್ಬಯ್ಯ

Last Updated 19 ಏಪ್ರಿಲ್ 2021, 7:33 IST
ಅಕ್ಷರ ಗಾತ್ರ

ಕನ್ನಡದ ನಿಘಂಟು ತಜ್ಞರೆಂದೇ ಪ್ರಸಿದ್ಧಿ ಹೊಂದಿರುವ ಖ್ಯಾತ ಭಾಷಾ ತಜ್ಞ, ಶತಾಯುಷಿ ಪ್ರೊ.ಜಿ ವೆಂಕಟಸುಬ್ಬಯ್ಯ ಬಗ್ಗೆ ಅವರ ಶಿಷ್ಯೆ ವೈ.ಕೆ.ಸಂಧ್ಯಾ ಶರ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

‘ಪ್ರೊ.ಜಿ ವೆಂಕಟಸುಬ್ಬಯ್ಯ (ಜೀವಿ) ನನ್ನ ವಿದ್ಯಾಗುರುಗಳು ಎಂದು ಹೇಳಿಕೊಳ್ಳಲು ನನಗಂತೂ ತುಂಬಾ ಹೆಮ್ಮೆ. ಅವರು ನನ್ನ ಅಕ್ಕ-ಅಣ್ಣಂದಿರಿಗೂ ಅರ್ಧ ಶತಮಾನದ ಹಿಂದೆಯೇ ಗುರುಗಳಾಗಿದ್ದರಾದ್ದರಿಂದ ನನಗೆ ಅವರ ಹೆಸರು ಪ್ರಾಥಮಿಕ ತರಗತಿಯಲ್ಲಿದ್ದಾಗಲೇ ಪರಿಚಯ. ಬಸವನಗುಡಿಯ ವಿಜಯಾ ಕಾಲೇಜಿನ ಹಿಂದೆಯೇ ನಮ್ಮ ಮನೆ ಹಾಗೂ ಜೀವಿಯವರ ಮನೆಯೂ ಇದ್ದುದರಿಂದ ನಾನಾಗಲೇ ಅವರನ್ನು ನೋಡಿದ್ದೆ ಕೂಡ. ಅದೃಷ್ಟವಷಾತ್ ನಾನು ಪಿ.ಯು.ಸಿ.ಗೆ ವಿಜಯಾ ಕಾಲೇಜಿಗೇ ಸೇರಿದಾಗ ನನ್ನ ಕನ್ನಡ ಅಧ್ಯಾಪಕರು ಜೀವಿಯೇ ಆಗಿದ್ದರು. ಪ್ರತಿದಿನ ಅವರು ಶಿಸ್ತಾಗಿ, ಸೂಟು ಧರಿಸಿ ಟಿಪ್ ಟಾಪಾಗಿ ಬೂದುಬಣ್ಣದ ಹೆರಾಲ್ಡ್ ಕಾರಿನಲ್ಲಿ ಬರುತ್ತಿದ್ದರು. ನಡಿಗೆಯಲ್ಲಿ ಗತ್ತು, ಮುಖದಲ್ಲಿ ಮುಗುಳ್ನಗೆ ಅವರ ಕುರುಹುಗಳು. ವಯಸ್ಸು ಐವತ್ತೈದು-ಐವತ್ತಾರಿಬಹುದು... ಆದರೂ ಮಹಡಿಯ ಮೇಲಿದ್ದ ಅವರ ಕೋಣೆಗೆ ಹೋಗುವಾಗ ಅವರು ಮೆಟ್ಟಿಲುಗಳನ್ನು ಸರಸರನೆ ಹತ್ತುತ್ತಿದ್ದ ಲವಲವಿಕೆಯ ಬಗೆ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

ಪಿಯುಸಿಯ ಏ-ಬಿ ಸೆಕ್ಷನ್ನುಗಳಿಗೆ ಅವರು ಕಂಬೈನ್ಡ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಸುಮಾರು ನೂರರ ಹತ್ತಿರ ವಿದ್ಯಾರ್ಥಿಗಳ ಸಂಖ್ಯೆ. ಹುಡುಗರೆಲ್ಲ ಬಲಗಡೆ, ಹುಡುಗಿಯರು ಎಡಗಡೆ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದೆವು. ಮೇಷ್ಟ್ರು ಸ್ವಲ್ಪ ಸ್ಟ್ರಿಕ್ಟು... ಮೂಗಿನ ತುದಿಯಲ್ಲೇ ಕೋಪ... ಅನವಶ್ಯಕವಾಗಿ ಹುಡುಗ-ಹುಡುಗಿಯರು ಕಾರಿಡಾರಿನಲ್ಲಿ ಅಡ್ಡಡ್ಡ ಮಾತನಾಡುತ್ತ ನಿಂತುಕೊಳ್ಳುವುದು ಅವರಿಗೆ ಹಿಡಿಸುತ್ತಿರಲಿಲ್ಲ. ಅದು ಹಳೇ ಕಾಲ ಅಂತಿಟ್ಟುಕೊಳ್ಳಿ... ಕ್ಲಾಸಿನಲ್ಲಿ ಬಂದ ತತ್ ಕ್ಷಣ ಹಾಜರಿ ತೆಗೆದುಕೊಳ್ಳುವಾಗ ‘ಯಾರೋ ಎಸ್ ಮೇಡಮ್’ ಎಂದಾಗ ಅವನೋ, ಅವಳೋ ಅವರಿಂದ ಚೆನ್ನಾಗಿ ಬೈಸಿಕೊಂಡಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಆದ್ದರಿಂದ ಅವರ ತರಗತಿಯಲ್ಲಿ ಎಲ್ಲರೂ ಗಪ್ ಚುಪ್!!.... ಹೆದರಿಕೆಯಿಂದಲ್ಲ, ಅವರು ಪಾಠ ಮಾಡುತ್ತಿದ್ದ ವೈಖರಿ, ಸ್ವಾರಸ್ಯ ಹಾಗಿರುತ್ತಿತ್ತು. ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದ ಪದ್ಯಗಳ ಅರ್ಥವನ್ನು ಅವರು ವಿವರಿಸುತ್ತಿದ್ದ ಬಗೆಯೇ ತುಂಬಾ ವಿಶಿಷ್ಟವಾಗಿರುತ್ತಿತ್ತು. ನಾನಂತೂ ಕನ್ನಡದ ಒಂದು ಕ್ಲಾಸನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅದರಲ್ಲೂ ವ್ಯಾಕರಣದ ತರಗತಿಯೆಂದರೆ ಇನ್ನೂ ಇಷ್ಟ. ಅವರ ಸ್ಫುಟವಾದ ಕನ್ನಡ ತರಗತಿಯಲ್ಲೇ ನನ್ನ ಮನಸ್ಸಿನಲ್ಲಿದ್ದ ಕನ್ನಡಪ್ರೀತಿ ಇಮ್ಮಡಿಗೊಂಡಿದ್ದು.

ಪಿಯುಸಿ ನಂತರ ನಾನು ಬೆಳಗ್ಗೆ ಕನ್ನಡ ಆನರ್ಸ್ ತರಗತಿಗೆ, ಮಧ್ಯಾಹ್ನ ಬಿಎಸ್ಸಿ ತರಗತಿಗೆ ಹಾಜರಾಗುತ್ತಿದ್ದೆ. ವರ್ಷದ ಕಡೆಯಲ್ಲಿ ಒಂದು ಕಡೆ ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಎಂದರು ಆಡಳಿತ ಮಂಡಳಿಯವರು. ಆಗ ನನಗೆ ಮಾರ್ಗದರ್ಶನ ಮಾಡಿದವರೇ ನನ್ನ ಗುರುಗಳಾದ ಜೀವಿಯವರು. ‘ನೀನು ಕನ್ನಡದಲ್ಲಿ ಅಷ್ಟು ಉತ್ತಮ ಅಂಕಗಳನ್ನು ಗಳಿಸಿದ್ದೀ.... ನೀನು ಕನ್ನಡ ಭಾಷೆಯನ್ನೇ ವಿಶೇಷವಾಗಿ ಅಭ್ಯಾಸ ಮಾಡಬೇಕು’ ಎಂದು ನನ್ನ ಬದುಕಿಗೊಂದು ತಿರುವು ನೀಡಿದರು. ಸತತ ಮೂರು ವರ್ಷಗಳ ಕಾಲ ಜೀವಿಯವರ ಪಾಠ ಕೇಳುವ ಸೌಭಾಗ್ಯ ನನ್ನದಾಯಿತು. ಕಬ್ಬಿಣದ ಕಡಲೆ ಕೇಶೀರಾಜನ ‘ಶಬ್ದಮಣಿದರ್ಪಣ’ ವ್ಯಾಕರಣವನ್ನು ಸುಲಿದ ಬಾಳೇಹಣ್ಣಿನಂದದಿ, ಮನಂಬುಗುವಂತೆ ಮನಸ್ಸಿನಲ್ಲಿ ಅಚ್ಚು ಒತ್ತಿಸಿದರು. ಬಿಎಂಶ್ರೀ ಅವರು ಭಾವಾನುವಾದ ಮಾಡಿದ ‘ಇಂಗ್ಲೀಷ್ ಗೀತೆಗಳು’ ಪದ್ಯಗಳನ್ನು ಅನುಭವಹೃದ್ಯವನ್ನಾಗಿಸಿದ ಅವರ ಬೋಧನಾರೀತಿ ನನ್ನ ಸ್ಮೃತಿಪಟಲದಲ್ಲಿ ಎಂದೂ ಚಿರಸ್ಥಾಯಿ. ನನ್ನ ಬರವಣಿಗೆಗೂ ಅವರು ಅಷ್ಟೇ ಒತ್ತಾಸೆ ನೀಡುತ್ತಿದ್ದರು. ಸಂಸ್ಕೃತ-ಆಂಗ್ಲ ಭಾಷೆಗಳಲ್ಲೂ ಅಷ್ಟೇ ಪರಿಣತರಾಗಿದ್ದ ಮೇಷ್ಟ್ರು, ನಮಗೆ ಆಂಗ್ಲ ಹಾಗೂ ಸಂಸ್ಕೃತ ಭಾಷೆಗಳ ಕವಿ-ಕಾವ್ಯಗಳ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ. ನಾವು ವಿದ್ಯಾರ್ಥಿಗಳೇ ಲೇಖನಗಳನ್ನು ಬರೆದು, ಸಂಪಾದಿಸಿ ‘ಉತ್ಸಾಹ’ ಎಂಬ ಪತ್ರಿಕೆಯನ್ನು ಹಲವು ವರ್ಷಗಳು ಪ್ರಕಟಮಾಡಲು ನೆರವು ನೀಡಿ ಪ್ರೋತ್ಸಾಹಿಸಿದ, ಅನನ್ಯ ಅವಕಾಶ ಒದಗಿಸಿದ್ದಕ್ಕೆ ಜೀವಿಯವರಿಗೆ ನಾವೆಲ್ಲ ಕೃತಜ್ಞರು.

ಎಲ್ಲಿ ಹೋದರೂ ನಾನು ಜೀವಿ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆ ನನಗಿದೆ. ಮುಂದೆ ಕನ್ನಡ ಎಂ.ಎ. ಅಭ್ಯಾಸ ಮಾಡುವಾಗಲೂ ನನಗೆ ಜೀವಿಯವರ ಸಂಪರ್ಕ ಇದ್ದೇ ಇತ್ತು. ನನಗೆ ಭಾಷೆ, ವ್ಯಾಕರಣ ವಿಷಯದಲ್ಲಿ ಏನೇ ಅನುಮಾನ ಬಂದರೂ ಇವತ್ತಿಗೂ ಅವರೊಡನೆ ಚರ್ಚಿಸಿ, ಸಂತೃಪ್ತ ವಿವರಣೆಗಳನ್ನು ಪಡೆದು ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತೇನೆ. ಅವರು ಮನದಟ್ಟಾಗುವಂತೆ ನೀಡುತ್ತಿದ್ದ ವಿವರಣೆ-ವ್ಯಾಖ್ಯಾನ ನನಗೆ ಬಹು ಸಮಾಧಾನ ತರುತ್ತಿತ್ತು. ದೂರವಾಣಿಯಲ್ಲೂ ಎಷ್ಟೋ ಬಾರಿ ಸಂಪರ್ಕಿಸಿದ್ದೇನೆ, ನನಗೆ ಮುಜುಗರ, ಹಿಂಜರಿಕೆಗಳಿಲ್ಲ. ಅವರು ನನಗಷ್ಟು ಹತ್ತಿರ ಎಂಬ ಧೈರ್ಯ.

ಇನ್ನೂ ಒಂದು ವಿಶೇಷ ಅಂದರೆ ‘ಗೊರೂರು ಸಾಹಿತ್ಯ ಪ್ರಶಸ್ತಿ’ ಗುರು-ಶಿಷ್ಯರಾದ ನಮ್ಮಿಬ್ಬರಿಗೂ ಒಂದೇ ವೇದಿಕೆಯಲ್ಲಿ ಪ್ರದಾನವಾಯಿತು. ‘ಉರಿದು ಹೋದ ಕನಸುಗಳು’ ನನ್ನ ಕವನ ಸಂಕಲನವನ್ನು ಗುರುಗಳೇ ಬಿಡುಗಡೆ ಮಾಡಿ ನನಗೆ ಆಶೀರ್ವದಿಸಿದರು. ನಾವು ಕನ್ನಡ ಆನರ್ಸ್ ವಿದ್ಯಾರ್ಥಿಗಳೆಲ್ಲ ಒಂದಲ್ಲ ಒಂದು ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗಿ ಅವರ ಒಡನಾಟದಲ್ಲಿ ಸಂತೋಷಪಡುತ್ತಿದ್ದೆವು.

ನನಗೆ ಇನ್ನೂ ಒಂದು ಖುಷಿಯ ಸಂಗತಿಯೆಂದರೆ ಜಯನಗರದ ನಂದಾ ಥಿಯೇಟರ್ ಬಳಿಯ ಒಂದೇ ಪಾರ್ಕಿನಲ್ಲಿ ನಾನು ಮತ್ತು ನನ್ನ ಪತಿ ಅವರ ಜೊತೆ ದಿನಾ ವಾಕ್ ಮಾಡುವ ಸಂದರ್ಭ ಒದಗಿದ್ದು. ಚುಮು ಚುಮು ನಸುಕು. ಡಿಸೆಂಬರ್ ತಿಂಗಳ ಕೊರೆಯುವ ಚಳಿ... ದಿನಾ ಜೀವಿಯವರಿಗಿಂತ ಮುಂಚೆ ನಾನಲ್ಲಿರಬೇಕೆಂದು ನನಗೆ ಆಸೆ. ಸುಮಾರು ಆರು ಗಂಟೆಯ ಹಿಮಗತ್ತಲಲ್ಲಿ ಪಾರ್ಕು ಪ್ರವೇಶಿಸಿ ಒಂದು ರೌಂಡ್ ಹಾಕಿ ಬರುವಷ್ಟರಲ್ಲಿ, ಜೀವಿಯವರಾಗಲೇ ತಮ್ಮ ಮಾಮೂಲು ಮೂರು ರೌಂಡ್ ಮುಗಿಸಿ, ಕೈ-ಕಾಲು ಅಲ್ಲಾಡಿಸುತ್ತ ವ್ಯಾಯಾಮ ಮಾಡುತ್ತ ಕಲ್ಲುಬೆಂಚಿನ ಮೇಲೆ ಕುಳಿತಿರುತ್ತಿದ್ದರು. ಅವರ ಚಟುವಟಿಕೆಯ ಚುರುಕು ನಡಿಗೆ ಕಂಡು ನನಗೆ ತುಂಬಾ ನಾಚಿಕೆಯಾಗುತ್ತಿತ್ತು. ‘ಅವರ ವೇಗದ ನಡಿಗೆಯನ್ನು ನೀನು ಸರಿಗಟ್ಟಲಾರೆ’ ಎಂದು ನಮ್ಮವರು ರೇಗಿಸುತ್ತಿದ್ದರು. ಶತಮಾನವನ್ನು ದಾಟಿದ್ದರೂ ‘ಜೀವಿ’ ಯುವಜನತೆಗಿಂತ ತುಂಬಾ ಚಟುವಟಿಕೆಯ ಜೀವನವನ್ನು ನಡೆಸುತ್ತಿದ್ದಾರೆಂಬ ಸಂಗತಿ ಇತರರಿಗೆ ನಿಜಕ್ಕೂ ಮಾದರಿ. ಅದೂ ಬೆಳಗಿನ ಜಾವ ಈ ವಯಸ್ಸಿನಲ್ಲಿ ಅವರೇ ಕಾಫಿ ಡಿಕಾಕ್ಷನ್‌ಗೆ ಹಾಕಿ , ಕಾಫಿ ಮಾಡಿಕೊಂಡು ಕುಡಿದು ಬರುತ್ತಾರೆಂದರೆ ಅವರೆಂಥ ‘ಬೆಳಗಿನ ಹಕ್ಕಿ’ ಎಂದು ನಾವೇ ಊಹಿಸಿಕೊಳ್ಳಬಹುದು. ಇದೇ ಅವರ ದೀರ್ಘಾಯುಷ್ಯದ ಗುಟ್ಟು ಎಂದೂ ಹೇಳಬಹುದು. ವಾಕಿಂಗ್ ಅವರ ಜೀವನಾಡಿ. ಸುಮಾರು ಮೂವತ್ತು ವರ್ಷದ ಹುಡುಗನಾಗಿದ್ದಾಗಿನಿಂದ ತಮ್ಮ ಈ ವಾಕಿಂಗ್ ಅಭ್ಯಾಸ, ಅಂದಿನಿಂದ ಇಂದಿನವರೆಗೂ ನಡೆದು ಬರುತ್ತಿದ್ದು, ಎಂದೂ ತಾವು ವಾಕಿಂಗ್ ನಿಲ್ಲಿಸಿಲ್ಲ ಎಂದು ಅವರು ನುಡಿಯುವಾಗ ಅವರ ಮೊಗದಲ್ಲಿ ಆರೋಗ್ಯದ ಕಳೆ ಮಿಂಚುತ್ತದೆ. ಅವರು ವಾಕಿಂಗ್ ಮುಗಿಸಿ ಕುಳಿತನಂತರ ಅವರ ಸುತ್ತ ಅವರಿಗಿಂತ ಕೊಂಚ ಸಣ್ಣ ವಯಸ್ಸಿನ ಸ್ನೇಹಿತರ ಒಂದು ದಂಡೇ ಸೇರುತ್ತದೆ. ಅವರೆಲ್ಲ ಸಾಹಿತ್ಯ ಜಗತ್ತಿನಲ್ಲಿ ಪ್ರಖ್ಯಾತರೇ. ನಗುಮೊಗದಿಂದ ಅವರೊಡನೆ ಜೀವಿ ಹರಟುತ್ತಾರೆ, ಅನೇಕ ವಿದ್ಯಮಾನಗಳನ್ನು ಕುರಿತು ಚರ್ಚಿಸುತ್ತಾರೆ. ಇಬ್ಬರೂ ಏನೇನು ಬರೆದಿರಿ, ಹೊಸ ಪುಸ್ತಕ ಬಂತೇ?.. ಇತ್ಯಾದಿ ನಮ್ಮಿಬ್ಬರನ್ನೂ ವಿಚಾರಿಸಿಕೊಳ್ಳುತ್ತಾರೆ. ಸರಿಯಾಗಿ ಏಳು ಗಂಟೆಗೆ ಮೇಲೆದ್ದು ಎಲ್ಲರಿಗೂ ಕೈ ಬೀಸಿ ಮನೆಯ ಕಡೆ ನಡೆಯುತ್ತಾರೆ. ಇದು ಅವರ ದಿನನಿತ್ಯದ ಅಭ್ಯಾಸ.

ಇದೆಲ್ಲ ಕೊಂಚ ಗತ ಇತಿಹಾಸ.... ಐದಾರು ವರ್ಷಗಳ ಹಿಂದೆ ನಮ್ಮ ಪಾರ್ಕಿಗೆ ಗ್ರಹಣ ಬಡಿಯಿತು. ಪಾರ್ಕಿನ ಅರ್ಧ ಭಾಗ ಕಬಳಿಸಿ ಮೆಟ್ರೋ ಆರಂಭವಾಯಿತು. ಜೀವಿಯವರ ನಡಿಗೆ ಸ್ಥಳ ಬದಲಾಗಿ ನಮ್ಮ ಭೇಟಿ ಅಪರೂಪವಾಗಿದೆಯಾದರೂ ನಾವು ಅವರನ್ನು ನಿತ್ಯ ನೆನೆಯುತ್ತೇವೆ. ಅವರು ಈ ವಯಸ್ಸಿನಲ್ಲೂ ದಿನನಿತ್ಯ ಒಂದಲ್ಲಾ ಒಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಂಡು-ಕೇಳಿ ತುಂಬಾ ಖುಷಿಪಡುತ್ತೇವೆ. ಇಂದವರು 107 ದಾಟಿ 108ರಲ್ಲಿ ಇತರರಿಗೆ ಅನುಕರಣೀಯರಾಗಿ ಆದರ್ಶದ, ಕ್ರೀಯಾಶೀಲ ಜೀವನವನ್ನು ಕ್ರಮಿಸುತ್ತ ನಾಡಿನ ಭಾಗ್ಯದಂತೆ ಕನ್ನಡನಾಡಿನ ಹೆಮ್ಮೆಯ ಪುತ್ರರಾಗಿ, ಮಾರ್ಗದರ್ಶಕರಾಗಿರುವುದು ಭುವನದ ಹಾಗೂ ನಮ್ಮೆಲ್ಲರ ಭಾಗ್ಯ. ಬರೀ ದೀರ್ಘಾಯಸ್ಸಿದ್ದರೆ ಸಾಲದು. ಇಂಥ ಸಕ್ರಿಯ-ಜೀವಂತಿಕೆಯ ಅನುಕ್ಷಣದ ಸಾರ್ಥಕ ಬದುಕು ನಮ್ಮ ಗುರುಗಳದು ಎಂದು ನೆನೆದಾಗ ಮೈ ರೋಮಾಂಚನಗೊಳ್ಳುತ್ತದೆ. ನಿಜಕ್ಕೂ ಚರಿತ್ರೆಯ ಪುಟಗಳಲ್ಲಿ ದಾಖಲಾಗುವಂಥ ಸಾಧಕ ಜೀವನ ಅವರದು.... ಅವರಿಗೆ ಮನಸಾ ವಂದಿಸುವೆ. ‘ಶ್ರೀ ಗುರುಭ್ಯೋ ನಮಃ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT