ಮಂಗಳವಾರ, ಏಪ್ರಿಲ್ 20, 2021
31 °C
ರಾಶಿ ಕಾಗದಗಳ ಮಧ್ಯೆ ನಮ್ಮ ಪತ್ರ ಹುಡುಕುವ ಸವಾಲು!

PV Web Exclusive | ಮೆಚ್ಚಿನ ಅಂಚೆಯಣ್ಣನಿಗೊಂದು ಸಲಾಂ...

ಹನಮಂತ ಕೊಪ್ಪದ Updated:

ಅಕ್ಷರ ಗಾತ್ರ : | |

Prajavani

‘ಸುಮಾರು 15 ವರ್ಷಗಳ ಹಿಂದೆ ದೂರದೂರಿನಿಂದ ನಮ್ಮ ತಂದೆ ತಾಯಿ ಬರೆಯುತ್ತಿದ್ದ ಪತ್ರಗಳಿಗಾಗಿ ವಾರಗಟ್ಟಲೇ ಕಾಯುತ್ತಿದ್ದೆವು. ನೆನಪಿದೆಯಾ?’

ಗೆಳೆಯ ಶಿವು ಹೀಗೆ ಪ್ರಶ್ನಿಸಿದಾಗ ಬಾಲ್ಯದ ದಿನಗಳು ನೆನಪಿಗೆ ಬಂದವು. ಮೊಬೈಲ್, ಫೆಸ್‌ಬುಕ್, ವಾಟ್ಸ್ ಆ್ಯಪ್ ಮೂಲಕ ಕ್ಷಣಾರ್ಧದಲ್ಲಿ ಸಂದೇಶ ಕಳುಹಿಸಬಹುದಾದ ಈ ಹೊತ್ತಿನಲ್ಲಿ, ಅಂದು ನಾವು ಅಂಚೆ ಪತ್ರಗಳ ಬರುವಿಕೆಗಾಗಿ ಕಾಯುತ್ತಿದ್ದ ಕ್ಷಣ ಈಗ ನನಗೆ ಅಚ್ಚರಿಯಾಗಿ ಕಂಡಿತು. ಹಲವು ವರ್ಷಗಳ ಹಿಂದೆ ನಸು ಹಳದಿ ಬಣ್ಣದ 50 ಪೈಸೆಯ ಅಂಗೈಯಗಲದ ಈ ಪುಟ್ಟ ಪತ್ರ ನಮ್ಮ ಭಾವನೆಗಳ ಅಭಿವ್ಯಕ್ತಿಗೆ ಕೊಂಡಿಯಾಗಿತ್ತು.   

ಅದು 2004ರ ಸಮಯ. ನಾನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ 5ನೇ ತರಗತಿ ಓದುತ್ತಿದ್ದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅಬ್ಬರವಿರದ ಕಾಲವದು. ಮಠದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು. ಬಹುತೇಕ ಗ್ರಾಮೀಣ ಪ್ರದೇಶಗಳಿಂದ ಬಂದ ನಮಗೆ ಕುಟುಂಬದೊಂದಿಗೆ ಬೆಸೆಯುವ ಏಕಮಾತ್ರ ಸಾಧನ ಅಂಚೆ ಪತ್ರವಾಗಿತ್ತು. ಮಠದಲ್ಲಿದ್ದ ಅಂಚೆ ಕಚೇರಿ ಸಂಬಂಧಗಳ ಬೆಸುಗೆಯ ತಾಣವಾಗಿತ್ತು.

ತಂದೆ ತಾಯಿಗಳನ್ನು ಬಿಟ್ಟು ಬಹುದೂರದ ಮಠದಲ್ಲಿದ್ದ ವಿದ್ಯಾರ್ಥಿಗಳಿಗೆ ಪತ್ರಗಳೇ ನೆಮ್ಮದಿ ತರುವ ಸಂಗತಿಗಳಾಗಿದ್ದವು. ಅಲ್ಲಲ್ಲಿ ನಿಧಾನವಾಗಿ ಕಾಯಿನ್ ಬೂತ್, ಮೊಬೈಲ್‌ ಕಾಣಿಸಿಕೊಳ್ಳುತ್ತಿದ್ದರೂ ಅವು ನಮ್ಮನ್ನು ಇನ್ನೂ ತಲುಪಿರಲಿಲ್ಲ. ಪತ್ರಗಳ ಮೂಲಕವೇ  ನೆಚ್ಚಿನವರೊಂದಿಗೆ ಕುಶಲೋಪರಿ ವಿಚಾರಿಸುತ್ತಿದ್ದೆವು.

‘ತೀರ್ಥರೂಪ ತಂದೆಯವರಿಗೆ, ಮಾತೋಶ್ರೀ ತಾಯಿಯವರಿಗೆ, ಮಾತೃಸ್ವರೂಪಿ ಅಂಕಲಗಿ ಮೇಡಂ ಅವರಿಗೆ, ಚಿರಂಜೀವಿ ತಮ್ಮನಿಗೆ’ ಅಂತೆಲ್ಲಾ ಶುರುಮಾಡುತ್ತಿದ್ದ ಪತ್ರದ ಸಾಲುಗಳು ಹಿರಿಯರು ಮತ್ತು ಕಿರಿಯರಿಗೆ ಗೌರವ ಕೊಡುವುದನ್ನು ಕಲಿಸಿಕೊಡುತ್ತಿದ್ದವು. ಆ ಪತ್ರಗಳಲ್ಲಿ ನೋವು, ಸಾಂತ್ವನ, ಸಂತೋಷ, ಗೌರವ, ಹಾರೈಕೆ ಎಲ್ಲವೂ ಅಭಿವ್ಯಕ್ತಗೊಳ್ಳುತ್ತಿದ್ದವು.

ಸಮಸ್ಯೆ ಶುರುವಾಗುವುದೇ ಇಲ್ಲಿ. ಸಾವಿರಾರು ವಿದ್ಯಾರ್ಥಿಗಳಿದ್ದ ಮಠದಲ್ಲಿ ರಾಜ್ಯದ ಬೇರೆ ಬೇರೆ ಊರುಗಳಿಂದ ಪ್ರತಿದಿನ ಬರುತ್ತಿದ್ದ ನೂರಾರು ಪತ್ರಗಳನ್ನು ಬಟವಾಡೆ ಮಾಡುವುದು ಅಂಚೆಯಣ್ಣನಿಗೆ ಸವಾಲಿನ ಕೆಲಸವಾಗಿತ್ತು. ಅದರಲ್ಲೂ ಪೂರ್ಣ ವಿಳಾಸ ಇಲ್ಲದ ಪತ್ರ ಇದ್ದರೆ ಮುಗಿದೇ ಹೋಯಿತು. ಆ ಪತ್ರವನ್ನು ನಿಜವಾದ ವಾರಸುದಾರನಿಗೆ ತಲುಪಿಸುವಷ್ಟರಲ್ಲಿ ಅಂಚೆಯಣ್ಣ ಸುಸ್ತಾಗಿ ಬಿಡುತ್ತಿದ್ದ.

ನಮ್ಮ ಮಠದಲ್ಲಿ ಪ್ರಾಥಮಿಕ ಶಾಲೆ ಮತ್ತು 2 ಪ್ರೌಢಶಾಲೆಗಳಲ್ಲಿ ನೂರಾರು ವಿಭಾಗಗಳಿದ್ದವು. ಪ್ರತಿ ತರಗತಿಯಲ್ಲಿ A ಇಂದ I ವರೆಗೂ ವಿಭಾಗಗಳಿದ್ದವು. ಒಂದೊಂದು ವಿಭಾಗದಲ್ಲಿ 50ರಿಂದ 60 ವಿದ್ಯಾರ್ಥಿಗಳಿರುತ್ತಿದ್ದರು. ಅದರಲ್ಲೂ ಎರಡು ಪ್ರೌಢಶಾಲೆ ಹೆಸರು ಬಹಳ ವ್ಯತ್ಯಾಸದಿಂದ ಕೂಡಿರಲಿಲ್ಲ. ಒಂದು ಶ್ರೀ ಸಿದ್ಧಲಿಂಗೇಶ್ವರ ಸನಿವಾಸ ಪ್ರೌಢ ಶಾಲೆ (SSRHS) ಅಂಥ ಇದ್ದರೆ ಮತ್ತೊಂದು ಶ್ರೀ ಸಿದ್ಧಲಿಂಗೇಶ್ವರ ಸನಿವಾಸ ಉನ್ನತ ಪ್ರೌಢಶಾಲೆ (SSRHSS). ಪತ್ರ ಬರೆಯುವಾಗ ಇವುಗಳಲ್ಲಿ ಕೇವಲ ಒಂದು S ಹೆಚ್ಚು ಕಡಿಮೆಯಾದರೂ ವಿಳಾಸವೇ ತಪ್ಪಾಗಿಬಿಡುತ್ತಿತ್ತು!

ಹಳ್ಳಿಗಳಲ್ಲಿದ್ದ ಪೋಷಕರು ವಿಳಾಸ ಬರೆಯುವಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಬಹಳಷ್ಟು ಜನರು ಪತ್ರ ಬರೆಯುವಾಗ ಹುಡುಗನ ಹೆಸರು ಬರೆದು ಸಿದ್ದಗಂಗಾ ಮಠ ಎಂದು ಮಾತ್ರ ಬರೆಯುತ್ತಿದ್ದರು. ಆದರೆ, ಅಷ್ಟು ಜನರಲ್ಲಿ ಅವನನ್ನು ಹುಡುಕುವುದು ಅಸಾಧ್ಯವಾಗಿತ್ತು.

ಅಂಚೆ ಕಚೇರಿಯವರಿಗೆ ಪತ್ರ ಬಟವಾಡೆ ಮಾಡಲು ಸುಲಭವಾಗಲಿ ಎಂಬ ಉದ್ದೇಶದಿಂದ ಪ್ರತಿ ಶಾಲೆ ಮುಂದೆ ಒಂದು ದೊಡ್ಡ ಬೋರ್ಡ್‌ ಇಡಲಾಗುತ್ತಿತ್ತು. ಅದರಲ್ಲಿ ಪ್ರತಿ ವಿಭಾಗದ ಹೆಸರಿನಲ್ಲಿ ಸಣ್ಣ ಸಣ್ಣ ಬಾಕ್ಸ್‌ಗಳನ್ನು ಮಾಡಲಾಗಿತ್ತು. ಅಂಚೆಯಣ್ಣ ಈ ಬಾಕ್ಸ್‌ಗಳಲ್ಲಿ ತಂದು ಪತ್ರಗಳನ್ನು ಹಾಕುತ್ತಿದ್ದ. ನಾವು ಅಲ್ಲಿ ಹೋಗಿ ನಮ್ಮ ಪತ್ರಗಳನ್ನು ತೆಗದುಕೊಳ್ಳಬೇಕಾಗಿತ್ತು. ಆದರೆ ಎಷ್ಟೊ ಪತ್ರಗಳು ಸಂಪೂರ್ಣ ವಿಳಾಸ ಇರದ ಕಾರಣ ಕೊನೆಯ ಬಾಕ್ಸ್‌ನಲ್ಲಿ ಉಳಿಯುತ್ತಿದ್ದವು. ಭಾನುವಾರ ನಾವು ಇಂಥ ಬಟವಾಡೆಯಾಗದ ಪತ್ರಗಳನ್ನು ಓದುತ್ತಿದ್ದೇವು. ಆ ಪತ್ರಗಳಲ್ಲಿರುವ ಕಾಳಜಿ, ಭಾವನಾತ್ಮಕ ಸೆಲೆ, ಪ್ರೀತಿ ನೋಡಿ ಅದನ್ನು ನಿಜವಾದ ವಾರಸುದಾರನಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವು.

ಪತ್ರ ಬರೆಯುವಾಗ ನಾವು ಮಾಡುತ್ತಿದ್ದ ಕಾಗುಣಿತ ದೋಷಗಳು, ದಿಕ್ಕು ತಪ್ಪುತ್ತಿದ್ದ ವಾಕ್ಯ ರಚನೆ, ಪದಗಳಿಗಾಗಿ ಪರದಾಡುತ್ತಿದ್ದ ಕ್ಷಣಗಳು ನಿಧಾನವಾಗಿ ನಮ್ಮ ಗಮನಕ್ಕೆ ಬರುತ್ತಿದ್ದವು. ಇದರಿಂದ ನಮ್ಮ ಭಾಷಾ ಜ್ಞಾನ, ಬರವಣಿಗೆ ಕೌಶಲವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು. ನಮ್ಮ ತರಗತಿಯಲ್ಲಿ ಒಂದಿಬ್ಬರು ಮುತ್ತು ಪೋಣಿಸಿದಂಥ ಮುದ್ದಾದ ಬರವಣಿಗೆಗೆ ಹೆಸರಾಗಿದ್ದರು. ಅವರಿಂದ ಕಾಡಿ ಬೇಡಿ ನಮ್ಮ ಪತ್ರಗಳನ್ನು ಬರೆಸುತ್ತಿದ್ದೇವು. ರಜೆಯಲ್ಲಿ ಊರಿಗೆ ಬಂದಾಗ ನಮ್ಮ ಪತ್ರಗಳನ್ನು ನಾವೇ ಓದಿದಾಗ ಅದರಲ್ಲಿನ ಭಾವುಕತೆ ನೋಡಿ ನಗು ಬರುತ್ತಿತ್ತು.

ಇದು ಪತ್ರಗಳ ಕತೆಯಾದರೆ, ‘ಮನಿ ಆರ್ಡರ್‌’ನದ್ದು ಮತ್ತೊಂದು ಕತೆ. ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ‘ಮನಿ ಆರ್ಡರ್’ ಬರುತ್ತಿದ್ದ ಕಾರಣ ಬಂದವರ ಹೆಸರನ್ನು ಅಂಚೆ ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗುತ್ತಿತ್ತು. ಇಷ್ಟು ದಿನಗಳೊಳಗೆ ತೆಗೆದುಕೊಳ್ಳದಿದ್ದರೆ, ಅದನ್ನು ವಾಪಸ್ ಕಳುಹಿಸುವ ಎಚ್ಚರಿಕೆಯು ಅದರಲ್ಲಿ ಇರುತ್ತಿತ್ತು. ‘ಮನಿ ಆರ್ಡರ್’ ಬಂದವರ ಹೆಸರನ್ನು ಸಂಜೆಯ ಪ್ರಾರ್ಥನೆಯಲ್ಲಿ ಹೇಳಲಾಗುತ್ತಿತ್ತು.

ತಪ್ಪು ವ್ಯಕ್ತಿಗೆ ಹಣ ಹೋಗಬಾರದು ಎಂಬ ಉದ್ದೇಶದಿಂದ ಪೋಸ್ಟ್ ಮಾಸ್ಟರ್  ‘ಮನಿ ಆರ್ಡರ್’ ಅನ್ನು ಭಾರಿ ಪರಿಶೀಲನೆ ಮಾಡಿಯೇ ಕೊಡುತ್ತಿದ್ದ. ನಾವು ಗುರುತಿನ ಚೀಟಿ ತೆಗೆದುಕೊಂಡು ಅಂಚೆ ಕಚೇರಿಗೆ ಹೋಗಬೇಕಾಗಿತ್ತು. ಅದನ್ನು ಯಾರು, ಎಲ್ಲಿಂದ ಕಳಿಸಿದ್ದಾರೆ ಎಂಬುದನ್ನು ಪೋಸ್ಟ್ ಮಾಸ್ಟರ್ ಕೇಳುತ್ತಿದ್ದ. ಸರಿಯಾಗಿ ಹೇಳಿದರೆ ಕೈಯಲ್ಲಿ ಹಣ ತಲುಪುತ್ತಿತ್ತು.

ನನಗಿದು ದೊಡ್ಡ ಸಮಸ್ಯೆಯಾಗಿತ್ತು. ವಿಜಯಪುರದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ನನ್ನ ತಂದೆ ಎಲ್ಲಿ ಕೆಲಸ ಸಿಗುತ್ತಿತ್ತೋ ಅಲ್ಲಿಗೆ ಹೋಗಿ ಮನೆ ಮಾಡಿ ವಾಸಿಸುತ್ತಿದ್ದರು. ಎಷ್ಟೊ ಸಲ ಅವರು ಎಲ್ಲಿ ಇದ್ದಾರೆಂಬುದು ಕೂಡಾ ಗೊತ್ತೆ ಇರುತ್ತಿರಲ್ಲ. ಪೋಸ್ಟ್ ಮಾಸ್ಟರ್ ಎದುರು ನಮ್ಮ ಮನೆಯ ಸುತ್ತಮುತ್ತಲಿನ ವಿಳಾಸವನ್ನೆಲ್ಲ ಹೇಳಿ ಅದು ನನಗೆ ಸೇರಿದ್ದು ಎಂಬುದನ್ನು ನಂಬಿಸಲು ನಾನು ಪಟ್ಟ ಕಷ್ಟ ನೆನಪಿಸಿಕೊಂಡರೆ ನಗು ಮೂಡುತ್ತದೆ.

ಸಂವಹನ ತಂತ್ರಜ್ಞಾನದಲ್ಲಿ ಇಂದು ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಕ್ಷಣಾರ್ಧದಲ್ಲಿ ಈಗ ನಾವು ಬಯಸಿದ ವ್ಯಕ್ತಿ ಜತೆ ಮಾತನಾಡಬಹುದು. ಆದರೆ, ಪತ್ರಗಳಂತೆ ಕಾಯುವಿಕೆಯ ಸವಿನೆನಪನ್ನು ಅವು ಕೊಡಲಾರವು. ಈಗ ಅಕ್ಷರಗಳಲ್ಲಿ ಭಾವನೆಗಳನ್ನು ಅನಾವರಣಗೊಳಿಸುತ್ತಿದ್ದ ಪತ್ರಗಳು ಕಡಿಮೆಯಾಗಿವೆ. ಮೊಬೈಲ್‌ನಲ್ಲಿ ಸಂಕ್ಷಿಪ್ತವಾಗಿ ಬರೆಯುವ ಶೈಲಿ ರೂಢಿಯಾಗಿಬಿಟ್ಟಿದೆ. ಇದರಿಂದ ನಮ್ಮ ಬರವಣಿಗೆ ಕೌಶಲ ಜತೆ ಶಬ್ದ ಸಂಪತ್ತು ಕೂಡಾ ಕಡಿಮೆಯಾಗುತ್ತಿದೆ. 

50 ಪೈಸೆ ಪತ್ರವನ್ನು ತಲುಪಿಸಲು ಅಂಚೆ ಇಲಾಖೆ ಸಿಬ್ಬಂದಿ ಎಷ್ಟೊಂದು ಶ್ರಮ ವಹಿಸುತ್ತಾರಲ್ಲ ಎಂಬುದು ಬಾಲ್ಯದಲ್ಲಿ ಸೋಜಿಗದ ಸಂಗತಿಯಾಗಿತ್ತು. ಜತೆಗೆ ನಮ್ಮ ಪತ್ರಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತಿದ್ದ ಅಂಚೆಯಣ್ಣಂದಿರ ಬಗ್ಗೆ ಗೌರವವೂ ಮೂಡುತ್ತಿತ್ತು. ಇಂದು  ವಿಶ್ವ ಅಂಚೆ ದಿನಾಚರಣೆ. ನೂರಾರು ಸವಿ ನೆನಪುಗಳನ್ನು ಕಟ್ಟಿಕೊಟ್ಟ ಅಂಚೆಯಣ್ಣನಿಗೊಂದು ಸಲಾಂ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು