ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಬಿ ಕಳಿಸಿ; ಆರ್ಕಿಡ್‌ ತರಿಸಿ

Last Updated 8 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಗುಲಾಬಿಗೂ ಕರ್ನಾಟಕಕ್ಕೂ ಇರುವ ನಂಟು ತುಸು ಹೆಚ್ಚೇ. ಪುಷ್ಪಕೃಷಿಗೆ ಕನ್ನಡನಾಡು ಪ್ರಸಿದ್ಧಿ. ಉತ್ತರದ ಬೀದರಿನಿಂದ ದಕ್ಷಿಣದ ಚಾಮರಾಜನಗರದವರೆಗೆ ಹೂವು ಬೆಳೆದು, ಗಮನಾರ್ಹ ಪ್ರಮಾಣದಲ್ಲಿ ಆದಾಯ ಪಡೆಯುವ ರೈತರಿದ್ದಾರೆ.

ಅದರಲ್ಲೂ ಆಧುನಿಕ ಕೃಷಿ ವಿಧಾನ ಬಳಸಿ, ಹೊಸ ಬಗೆಯ ಪುಷ್ಪ ಕೃಷಿ ಕೈಗೊಂಡ ಕೃಷಿಕರು, ಹೂವುಗಳ ವಾಣಿಜ್ಯ ವಹಿವಾಟಿನಲ್ಲಿ ಒಂದು ಕೈ ಮೇಲೆಯೇ. ಗುಲಾಬಿ ವಿಷಯಕ್ಕೆ ಬಂದರೂ ಅಷ್ಟೇ. ತೋಟಗಾರಿಕೆ ಇಲಾಖೆ ನೆರವಿನೊಂದಿಗೆ ನಾಡಿನ ವಿವಿಧೆಡೆ ಗುಲಾಬಿ ಕೃಷಿ ಮಾಡುತ್ತಿರುವವರ ಸಂಖ್ಯೆ ದೊಡ್ಡದಿದೆ. ಆ ಪೈಕಿ ಹಲವರು ಸ್ಥಳೀಯ ಮಾರುಕಟ್ಟೆಯಲ್ಲಿ ತೃಪ್ತಿಪಟ್ಟುಕೊಂಡರೆ, ಯುವ ಕೃಷಿಕರು ಮಾರುಕಟ್ಟೆ ವಿಸ್ತರಿಸುವ ಸಾಹಸದಲ್ಲಿ ಯಶಸ್ಸು ಕಂಡಿದ್ದಾರೆ.

ಬೆಂಗಳೂರು ಹೊರವಲಯದ ನೂರಾರು ಹಳ್ಳಿಗಳಲ್ಲಿ ಗುಲಾಬಿ ಕೃಷಿ ನಡೆಯುತ್ತಿದೆ. ದೇವನಹಳ್ಳಿ, ದೊಡ್ಡಬಳ್ಳಾಪುರ, ಆನೇಕಲ್ ಸೇರಿದಂತೆ ಗ್ರಾಮಾಂತರ ಜಿಲ್ಲೆಯ ತಾಲ್ಲೂಕುಗಳ ಸುಮಾರು ಐನೂರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಗಳ ಗುಲಾಬಿ ಕೃಷಿ ಇದೆ. ಡಚ್ ರೋಸ್, ಗ್ರ್ಯಾಂಡ್ ಗಾಲಾ, ಫಸ್ಟ್‍ ರೆಡ್, ಡಾರ್ಕ್ ರೆಡ್, ತಾಜ್‍ಮಹಲ್, ಗೋಲ್ಡ್ ಸ್ಟ್ರೈಕ್ ಯಲೋ– ಎಷ್ಟೊಂದು ತಳಿಗಳು! ಇವು ರೈತ ಸಮುದಾಯದಲ್ಲಿ ಬಹು ಜನಪ್ರಿಯ. ಅದರಲ್ಲೂ ಗಾಢ ಕೆಂಪು ಹಾಗೂ ಹಳದಿ ವರ್ಣದ ಗುಲಾಬಿ ಹೆಚ್ಚು ಆಕರ್ಷಕ.

ಕನ್ನಡ ನಾಡಿನ ಗುಲಾಬಿಯು ಸಾಗರದಾಚೆ ಜಿಗಿಯಲು ಕಾರಣಗಳು ಹಲವು. ಬೆಂಗಳೂರಿನ ಸುತ್ತಲೂ ಸಿಗುವ ಯೋಗ್ಯ ವಾತಾವರಣದಂತೆಯೇ, ಇಲ್ಲಿನ ಬೃಹತ್ ಮಾರುಕಟ್ಟೆ ವ್ಯವಸ್ಥೆಯೂ ಪ್ರಮುಖ ಕಾರಣ. ಗುಲಾಬಿ ಕೃಷಿಗೆ ಬೇಕಾಗಿರುವುದು ತಂಪು ಹವಾಮಾನ ಹಾಗೂ ಫಲವತ್ತಾದ ಮಣ್ಣು. ಅದರೊಂದಿಗೆ, ಸಸಿಗಳನ್ನು ಕಸಿ ಮಾಡಿಕೊಡುವ ನುರಿತ ಕಾರ್ಮಿಕರು ಇಲ್ಲಿದ್ದಾರೆ. ಬೆಳೆದ ಮೇಲೆ ಉತ್ಪನ್ನವನ್ನು ಎಲ್ಲಿ ಮಾರಾಟ ಮಾಡಬೇಕು ಎಂಬ ಸಮಸ್ಯೆ ಅಷ್ಟೊಂದು ಕಾಡುವುದಿಲ್ಲ. ಗುಣಮಟ್ಟ ಕಾಯ್ದುಕೊಂಡರೆ, ಒಳ್ಳೆಯ ದರ ಖಚಿತ.

‘ಬೆಂಗಳೂರಿನ ಸುತ್ತಲಿನ ನೆಲದ ‘ಮೌಲ್ಯ’ ಉಳಿದ ಕಡೆಗಿಂತ ಅತಿಹೆಚ್ಚು. ಹೀಗಾಗಿ ಗುಲಾಬಿ ಬೆಳೆಯಲು ಬ್ಯಾಂಕುಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಉದಾರವಾಗಿ ಸಾಲ ಕೊಡುತ್ತವೆ. ಕೆಲವೊಂದು ಸಲ ಕೃಷಿ ಮೇಲೆ ಹೂಡಿಕೆ ಅಪಾಯ ಅನಿಸಿದರೂ, ಗುಲಾಬಿ ಕೃಷಿಯ ಮಟ್ಟಿಗೆ ಅದು ಅಷ್ಟೊಂದು ರಿಸ್ಕ್ ಅಲ್ಲ. ಅರ್ಧ ಅಥವಾ ಕಾಲು ಎಕರೆ ವಿಸ್ತಾರದ ಗ್ರೀನ್‍ಹೌಸ್‍ಗಳಲ್ಲಿ ಗುಲಾಬಿ ಬೆಳೆದರೆ, ಅದನ್ನು ಸಗಟು ದರದಲ್ಲಿ ಖರೀದಿಸಿ ವಿದೇಶಕ್ಕೆ ರಫ್ತು ಮಾಡುವ ವ್ಯಾಪಾರಿಗಳು ಇಲ್ಲಿದ್ದಾರೆ’ ಎನ್ನುತ್ತಾರೆ ನೆಲಮಂಗಲದ ತೋಟದಲ್ಲಿ ಹತ್ತು ವರ್ಷಗಳ ಕಾಲ ಗುಲಾಬಿ ಕೃಷಿಯನ್ನು ಯಶಸ್ವಿಯಾಗಿ ಮಾಡಿರುವ ರೈತ ಶಂಕರ ರೆಡ್ಡಿ.

ಮುಂಗಡ ಪ್ಲ್ಯಾನ್

ಹಬ್ಬ ಹರಿದಿನಗಳ ಸಂದರ್ಭಕ್ಕೆ ಕರಾರುವಾಕ್ಕಾಗಿ ಹೂವು- ಹಣ್ಣು, ಬಾಳೆ, ಕುಂಬಳಕಾಯಿ ಕೊಯಿಲಾಗುವಂತೆ ವ್ಯವಸಾಯ ಮಾಡುವ ಜಾಣ ರೈತರು ನಮ್ಮಲ್ಲಿ ಇದ್ದಾರೆ. ಸೋಜಿಗವೆಂದರೆ, ಫೆಬ್ರುವರಿ ಹದಿನಾಲ್ಕರ ‘ಹಬ್ಬ’ವೂ ಹೀಗೆಯೇ ಆಗುತ್ತಿದೆ!

ಕಳೆದ ಒಂದೆರಡು ದಶಕಗಳಲ್ಲಿ ‘ಪ್ರೇಮಿಗಳ ದಿನ’ ಸಮೀಪಿಸುತ್ತಿರುವಂತೆ ಗುಲಾಬಿಗೆ ಅತ್ಯಧಿಕ ಬೇಡಿಕೆ ಸೃಷ್ಟಿಯಾಗುತ್ತಿದೆ. ಆ ಸಮಯದಲ್ಲಿ ಮಾರುಕಟ್ಟೆಗೆ ಬರುವ ಉತ್ಪನ್ನಕ್ಕೆ ಒಳ್ಳೆಯ ದರ! ಇದನ್ನು ಅರಿತ ರೈತರು, ಜನವರಿ ಅಂತ್ಯದ ಹೊತ್ತಿಗೆ ಕಟಾವಿಗೆ ಸಿದ್ಧವಾಗುವಂತೆ ಬೆಳೆ ಯೋಜನೆ ರೂಪಿಸಿಕೊಂಡಿದ್ದಾರೆ. ‘ಬೇರೆ ಬೇರೆ ತಳಿಗಳು ಕೊಯ್ಲಿಗೆ ಬರುವ ಅವಧಿಯನ್ನು ಗಮನಿಸಿ, ಸಸಿ ನಾಟಿ ಮಾಡುತ್ತಾರೆ. ದೊಡ್ಡ ಪ್ರಮಾಣದ ಗುಲಾಬಿ ಕೃಷಿಯು ಬಹುತೇಕವಾಗಿ ಪಾಲಿಹೌಸ್‍ಗಳಲ್ಲಿ ನಡೆಯುತ್ತದೆ. ಬೆಳೆ ಉಪಚಾರ ಹಾಗೂ ನಿರ್ವಹಣೆಯು ಚಾಚೂ ತಪ್ಪದೇ ನಡೆಯುವುದರಿಂದ, ಗುಣಮಟ್ಟ ಕಾಯ್ದುಕೊಳ್ಳುವುದು ಸುಲಭ. ಈ ಪ್ರಕ್ರಿಯೆಯು ಪುಷ್ಪಕೃಷಿಕರ ಆದಾಯವನ್ನು ಹೆಚ್ಚಿಸಿದೆ’ ಎನ್ನುತ್ತಾರೆ ದೇವನಹಳ್ಳಿಯ ‘ತೇಜಾ ನರ್ಸರಿ’ ಮಾಲೀಕ ಶಿವನಾಪುರ ರಮೇಶ್.

ಬೆಂಗಳೂರಿನ ಹೆಬ್ಬಾಳಿನಲ್ಲಿರುವ ಅಂತರರಾಷ್ಟ್ರೀಯ ಪುಷ್ಟ ಹರಾಜು ಕೇಂದ್ರವು ವರ್ಷವಿಡೀ ಹೂವಿನ ರಫ್ತು ಹಾಗೂ ಆಮದು ವಹಿವಾಟಿನ ಚಟುವಟಿಕೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಪುಷ್ಪ ಮಾರಾಟ ವಹಿವಾಟು ಹೆಚ್ಚುತ್ತಿದೆ ಎಂದು ಇಲ್ಲಿನ ಅಧಿಕಾರಿಗಳು ಹೇಳುತ್ತಾರೆ.

‘ಖರೀದಿದಾರರಿಗೂ ಬೆಳೆಗಾರರಿಗೂ ಈ ಕೇಂದ್ರವು ಉತ್ತಮ ವೇದಿಕೆಯಾಗಿದೆ. ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ನಡೆಯುವ ಹೂವಿನ ವಹಿವಾಟು, ಉಳಿದ ವಾಣಿಜ್ಯಿಕ ಚಟುವಟಿಕೆಗಳಿಗೂ ಮಾದರಿಯಾಗಿದೆ. ಹೀಗಾಗಿಯೇ, ಬೇರೆ ಬೇರೆ ರಾಜ್ಯಗಳಿಂದಲೂ ಖರೀದಿದಾರರು ಬಂದು ಹರಾಜಿನಲ್ಲಿ ಭಾಗವಹಿಸುತ್ತಾರೆ’ ಎಂದು ಅವರು ವಿವರಿಸುತ್ತಾರೆ.

‘ಪ್ರೇಮಿಗಳ ದಿನ’ಕ್ಕೆ ಸರಿಯಾಗಿ ಕುದುರಿಕೊಳ್ಳುತ್ತದೆ ಗುಲಾಬಿ ಮಾರಾಟ. ಇಲ್ಲಿ ಹೂವೊಂದಕ್ಕೆ ಮೂರು ರೂಪಾಯಿಯಿಂದ ಶುರುವಾಗುವ ದರ, ಯೂರೋಪಿನಲ್ಲಿ ₹ 70 ದಾಟುತ್ತದೆ! ‘ಪುಷ್ಪ ಕೃಷಿ ಮಾಡುವ ಉಳಿದ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ನಿರ್ವಹಣಾ ವೆಚ್ಚ ಕಡಿಮೆ. ಇದು ಹೂವಿನ ಒಟ್ಟಾರೆ ದರವನ್ನು ಕಡಿಮೆ ಮಾಡುತ್ತದೆ. ಯೂರೋಪ್ ಹಾಗೂ ದಕ್ಷಿಣ ಏಷ್ಯಾದ ದೇಶಗಳು ಹೆಚ್ಚೆಚ್ಚು ಪ್ರಮಾಣದ ಗುಲಾಬಿಯನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಇದೇ ಮುಖ್ಯ ಕಾರಣ’ ಎಂದು ಪುಷ್ಪ ರಫ್ತು ಮಾಡುವ ಏಜೆನ್ಸಿಯೊಂದರ ಸಂಯೋಜಕ ಭಾಸ್ಕರ್ ಪ್ರಸಾದ್ ವಿಶ್ಲೇಷಿಸುತ್ತಾರೆ.

ಅತ್ಯುತ್ಕೃಷ್ಟ ಗುಣಮಟ್ಟದ ಗುಲಾಬಿ ಪೈಕಿ ಶೇಕಡ 75ರಷ್ಟು ವಿದೇಶಗಳಿಗೆ ಹಾರಿದರೆ, ಉಳಿದಿದ್ದು ಭಾರತದ ಪ್ರಮುಖ ಪಟ್ಟಣಗಳಲ್ಲಿ ಅಧಿಕ ಬೆಲೆಗೆ ಮಾರಾಟವಾಗುತ್ತದೆ. ತಮ್ಮದೇ ಆದ ಶೀಥಲಗೃಹಗಳಲ್ಲಿ ಟನ್‍ಗಟ್ಟಲೇ ಗುಲಾಬಿ ಸಂಗ್ರಹಿಸಿಟ್ಟು, ನಿಗದಿತ ಪ್ರಮಾಣವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಂಪನಿಗಳೂ ಇವೆ. ಅಲಂಕಾರಿಕ ಉದ್ದೇಶಕ್ಕೆ ಮಾತ್ರವಲ್ಲದೇ, ಔಷಧಿ ಹಾಗೂ ಸುಗಂಧ ದ್ರವ್ಯ ತಯಾರಿಕೆಗೂ ಗುಲಾಬಿ ಬಳಸುವುದುಂಟು. ಯೂರೋಪಿನ ರಾಷ್ಟ್ರಗಳು ಸುಗಂಧ ದ್ರವ್ಯ ತಯಾರಿಕೆಗೆಂದೇ ಗುಲಾಬಿಯನ್ನು ಆಮದು ಮಾಡಿಕೊಳ್ಳುತ್ತಿವೆ.

ಯೂರೋಪಿನ ದೇಶಗಳಲ್ಲದೆ, ಸಿಂಗಪುರ, ಮಲೇಷ್ಯಾ, ಥಾಯ್ಲೆಂಡ್ ಹಾಗೂ ಕೊಲ್ಲಿ ರಾಷ್ಟ್ರಗಳೂ ಬೆಂಗಳೂರಿನಿಂದ ಗುಲಾಬಿ ಆಮದು ಮಾಡಿಕೊಳ್ಳುತ್ತಿವೆ. ಕಳೆದ ವರ್ಷ ಸುಮಾರು ಐವತ್ತು ಲಕ್ಷ ಗುಲಾಬಿ ಹೂಗಳು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಗಳಿಗೆ ಹಾರಿ ಹೋಗಿವೆಯಂತೆ!

ಆರ್ಕಿಡ್ ಆಮದು

ಬೆಂಗಳೂರಿನಿಂದ ಗುಲಾಬಿ ತರಿಸಿಕೊಳ್ಳುವ ದೇಶಗಳ ಪೈಕಿ ಥಾಯ್ಲೆಂಡ್‌ ಅತ್ಯಧಿಕ ಪ್ರಮಾಣದಲ್ಲಿ ಬೆಂಗಳೂರಿಗೆ ಆರ್ಕಿಡ್ಸ್‌ ಕಳಿಸಿಕೊಡುತ್ತದೆ!ಥಾಯ್ಲೆಂಡಿನ ರಾಜಧಾನಿ ಬ್ಯಾಂಕಾಕ್‍ನಲ್ಲಿ ವರ್ಷದ ಎಲ್ಲ ದಿನಗಳಲ್ಲೂ ದಿನವಿಡೀ ವಹಿವಾಟು ನಡೆಸುವ ಬೃಹತ್ ಹೂವಿನ ಮಾರುಕಟ್ಟೆಯೊಂದಿದೆ. ಅದು– ‘ಪಾಖ್ ಕಲಾಂಗ್ ತಾಲಾತ್’. ನಿತ್ಯ ನೂರಾರು ಟನ್ ಹೂವುಗಳು ಇಲ್ಲಿಗೆ ಬರುತ್ತವೆ; ದೇಶ-ವಿದೇಶಗಳಿಗೆ ಹೋಗುತ್ತವೆ. ಈ ಮಾರುಕಟ್ಟೆಯಲ್ಲಿ ಇರುವ ಆರ್ಕಿಡ್‍ ಲೋಕವೇ ವಿಸ್ಮಯಕರ.

ಸಿರಿವಂತರು ಆಯೋಜಿಸುವ ಸಮಾರಂಭಗಳಲ್ಲಿ ‘ಆರ್ಕಿಡ್’ ಬಳಸುವುದು ಈಗ ಪ್ರತಿಷ್ಠೆಯ ಸಂಗತಿ. ಆದರೆ, ಅದನ್ನು ಬೆಳೆಸುವುದು ಅಷ್ಟೇ ಕಷ್ಟ. ಸಸ್ಯಗಳು ಸಿಗುವುದೇ ದುರ್ಲಭ. ನಮ್ಮಲ್ಲಿ ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುವ ಆರ್ಕಿಡ್‍ಗಳು ಮನಮೋಹಕ. ಆದರೆ ಆ ಪೈಕಿ ಬಹುತೇಕ ತಳಿಗಳು ವರ್ಷಕ್ಕೊಮ್ಮೆ ಮಾತ್ರ ಹೂವು ಬಿಡುತ್ತವೆ. ಅದಕ್ಕೆಂದೇ ಹೈಬ್ರಿಡ್ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವು ವರ್ಷಕ್ಕೆ ಮೂರ್ನಾಲ್ಕು ಸಲ ಹೂವು ಬಿಡುತ್ತವೆ. ಒಮ್ಮೆ ಅರಳಿದ ಹೂವು ಏಳರಿಂದ ಇಪ್ಪತ್ತು ದಿನಗಳವರೆಗೆ ತಾಜಾ ಆಗಿಯೇ ಉಳಿಯುತ್ತದೆ. ಅದಲ್ಲದೇ, ವಿಶೇಷವೆನಿಸುವಂಥ ವರ್ಣ ಸಂಯೋಜನೆಯಲ್ಲೂ ಆರ್ಕಿಡ್‍ಗಳು ಗಮನ ಸೆಳೆಯುತ್ತವೆ.

ಇತರ ಹೂವಿನ ಸಸ್ಯಗಳಿಗೆ ಹೋಲಿಸಿದರೆ, ಆರ್ಕಿಡ್ ದುಬಾರಿ. ಏಕೆಂದರೆ ಇಲ್ಲಿ ಪೂರಕ ವಾತಾವರಣವನ್ನು ಅದಕ್ಕಾಗಿ ಸೃಷ್ಟಿ ಮಾಡಬೇಕು. ಸೇವಂತಿಗೆ ಬೆಳೆದಂತೆ ಮುಕ್ತವಾಗಿ ಬೆಳೆಯಲಾಗದು. ಬೆಂಗಳೂರಿನಲ್ಲಿ ಆರೆಂಟು ನರ್ಸರಿಗಳು ಮಾತ್ರ ಆರ್ಕಿಡ್ ಸಸಿಗಳನ್ನು ಮಾರುತ್ತಿವೆ. ಆದರೆ ಬೇಡಿಕೆ ಮಾತ್ರ ಹೆಚ್ಚಿದ್ದು, ಥಾಯ್ಲೆಂಡಿನಿಂದ ಆರ್ಕಿಡ್ ಸಸ್ಯಗಳನ್ನು ಆಮದು ಮಾಡಿಕೊಳ್ಳುವ ಏಜೆನ್ಸಿಗಳು ಈ ವಹಿವಾಟಿನಿಂದ ಲಾಭ ಗಳಿಸುತ್ತಿವೆ.

‘ಬೆಂಗಳೂರಿನಿಂದ ಗುಲಾಬಿ ಹೂವಿನ ಪ್ಯಾಕೆಟ್ಟುಗಳು ವಿಮಾನದಲ್ಲಿ ಥಾಯ್ಲೆಂಡಿಗೆ ಹಾರಿದರೆ, ಅಲ್ಲಿಂದ ಆರ್ಕಿಡ್‍ಗಳು ಇಲ್ಲಿಗೆ ವಿಮಾನದಲ್ಲಿ ಬರುತ್ತವೆ. ಹತ್ತಾರು ವರ್ಷಗಳಲ್ಲಿ ರಫ್ತು-ಆಮದು ಕರ್ನಾಟಕದಲ್ಲಿ ಇಷ್ಟೊಂದು ವಿಸ್ತಾರವಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ’ ಎಂದು ಪುಷ್ಪ ರಫ್ತು ಕಂಪನಿಯ ಮೋಹನರಾಜ್ ಸಂತಸ ವ್ಯಕ್ತಪಡಿಸುತ್ತಾರೆ.

ಶಂಕರ್‌ ರೆಡ್ಡಿಯವರ ಪ್ರಕಾರ, ‘ಥಾಯ್ಲಂಡ್‌ ಕಡೆಯಿಂದ ಬರುವ ಆರ್ಕಿಡ್ಸ್ 2 ಅಡಿವರೆಗೂ ಉದ್ದ ಬೆಳೆಯುತ್ತದೆ. ನಮ್ಮಲ್ಲಿ ಹೆಚ್ಚೆಂದರೆ 18 ಇಂಚು ಉದ್ದ ಬರಲ್ಲ. ನಮ್ಮಲ್ಲಿ ಕೊಡಗು ಭಾಗದಲ್ಲಿ ಸೋಮವಾರಪೇಟೆಯಲ್ಲಿ ಬೆಳೆಯುವುದುಂಟು. ಮುಖ್ಯವಾಗಿ ಹಿಲ್‌ ಸ್ಟೇಷನ್‌ ಹವೆ, ಮಂಜು ಇರಬೇಕು. ನಮ್ಮ ಮಣ್ಣಲ್ಲಿ ಗುಣಮಟ್ಟದ್ದು ಬೆಳೆಯೋದಿಲ್ಲ. ಇದ್ದಿಲು, ತೆಂಗಿನ ಮಟ್ಟೆ ಎಲ್ಲ ಬಳಸಿ ಮಾಡಬೇಕು. ಪೂನಾದಲ್ಲಿ ಪಾಲಿಹೌಸ್‌ನಲ್ಲಿ ಮಾಡ್ತಿದಾರೆ. ಆದರೆ ಕ್ವಾಲಿಟಿ ಕಂಟ್ರೋಲ್‌ ಆಗ್ತಿಲ್ಲ. ಥಾಯ್ಲೆಂಡ್‌ನಿಂದ ಬರುವ ಆರ್ಕಿಡ್ಸ್‌ ಸಾಗಣೆ ವೆಚ್ಚವೂ ಕಡಿಮೆ. ಏಕೆಂದರೆ ಅದು ತೂಕ ಕಡಿಮೆ ಇರುವ ಹೂವು.’

ಬೆಂಗಳೂರಿನ ತಾರಾ ಹೋಟೆಲ್‌ಗಳಿಗೆ ಆರ್ಕಿಡ್ಸೇ ಬೇಕು. ಹಾಗೆಯೇ ಮದುವೆ ಹಾಲ್‌ಗಳಲ್ಲೂ ಆರ್ಕಿಡ್ಸ್‌ಗಳದ್ದೇ ಸಾಮ್ರಾಜ್ಯ. ಆರ್ಕಿಡ್ಸ್‌ನ ಒಂದು ಲಾಭವೆಂದರೆ 15–20 ದಿನಗಳವರೆಗೂ ಬಾಡದೆ ಉಳಿಯುವುದು. ಬೇಡಿಕೆಯ ಮೇಲೆ, ಒಂದು ಬಂಚ್‌ಗೆ ₹ 200 ಆಗುವುದೂ ಉಂಟು!

ಬೆಂಗಳೂರು ಸುತ್ತಮುತ್ತ ಬೆಳೆಯುವ ಗುಲಾಬಿ ಬೆಂಗಳೂರು ನಗರಕ್ಕೆ ಬರುವುದು ಕಡಿಮೆ! ರಾಜ್ಯದ ಇತರ ಭಾಗಗಳಿಗೆ ಹೋಗುತ್ತವೆ. ಬೆಂಗಳೂರಲ್ಲಿ ತಮಿಳುನಾಡಿನಿಂದ ಬರುವ ಗುಲಾಬಿಗಳದ್ದೇ ಪಾರುಪತ್ಯ. ಡೆಂಕನಕೋಟೆ, ಹೊಸೂರು ಸುತ್ತಮುತ್ತ ಯಥೇಚ್ಭ ಗುಲಾಬಿ ಬೆಳೆಯುವ ರೈತರಿದ್ದಾರೆ. ನುರಿತ ಕೆಲಸಗಾರರೂ ಹೆಚ್ಚು. ರಫ್ತು ಕೂಡಾ ಅಲ್ಲಿಂದಲೇ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ.‘ಯಾರ ಹೂವು ಯಾರ ಮುಡಿಗೋ...’ ಎನ್ನುವ ಚಿತ್ರಗೀತೆಯಂತೆ, ಹೂವುಗಳ ವಲಸೆಯದ್ದೇ ಕುತೂಹಲಕ ಕಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT