ಶುಕ್ರವಾರ, ಆಗಸ್ಟ್ 19, 2022
21 °C

ಪುಸ್ತಕ ವಿಮರ್ಶೆ: ಕುರನ್ಗರಾಯನ ಕ್ರಾಂತಿಕಾರಿ ಮಾದರಿ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Prajavani

ತುಮಕೂರು ಜಿಲ್ಲೆಯ ರವಿಕುಮಾರ್‌ ನೀಹ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಮೊಗಸಾಲೆಯಲ್ಲಿನ ದಲಿತ ಹೆಜ್ಜೆಗುರುತುಗಳ ಹುಡುಕಾಟದಲ್ಲಿ ತೊಡಗಿಕೊಂಡಿರುವ ಉತ್ಸಾಹಿ ಸಂಶೋಧಕ–ಲೇಖಕರು; ವಿಮರ್ಶಕ ಮತ್ತು ಕಥೆಗಾರರಾಗಿಯೂ ಗುರ್ತಿಸಿಕೊಂಡವರು. ‘ದಲಿತ ಸಾಹಿತ್ಯ ಮೀಮಾಂಸೆ’, ‘ಜಲಜಂಬೂಕನ್ನೆ’ ಖಂಡಕಾವ್ಯ ಹಾಗೂ ಕೆ.ಬಿ. ಸಿದ್ಧಯ್ಯನವರ ಕಾವ್ಯದ ಪ್ರಮುಖ ಸೆಲೆಗಳನ್ನು ಚರ್ಚಿಸುವ ‘ಕಣ್ಣು ಧರಿಸಿ ಕಾಣಿರೊ’ ರವಿಕುಮಾರರ ಪ್ರಮುಖ ಕೃತಿಗಳು. ಈ ಸಾಲಿಗೆ ಹೊಸ ಸೇರ್ಪಡೆ – ‘ಅರಸು ಕುರನ್ಗರಾಯ’.

ಕುರನ್ಗರಾಯ ಮಾದಿಗ ಜಾತಿಯವನು. ಅರಸನಾಗಿ ಜನಮನದಲ್ಲಿ ನೆಲೆನಿಂತಿದ್ದರೂ ಜಾತಿಯ ಕಾರಣದಿಂದಾಗಿ ಇತಿಹಾಸದಿಂದ ಹೊರಗೆ ನಿಂತವನು. ಆಚರಣೆ, ನಂಬಿಕೆ, ಐತಿಹ್ಯಗಳಲ್ಲಿ ಹುದುಗಿರುವ ರಾಯನನ್ನು ಹೆಕ್ಕಿ ದಾಖಲಿಸುವ ಪ್ರಯತ್ನ ಈ ಕೃತಿ.

ಕೊರಟಗೆರೆಯಿಂದ 13 ಕಿ.ಮೀ. ದೂರದಲ್ಲಿರುವ ಸುವರ್ಣಗಿರಿ ಬೆಟ್ಟದ ತಪ್ಪಲಲ್ಲಿರುವ ಊರು ಕುರಂಕೋಟೆ. ಸುವರ್ಣಗಿರಿಯ (ಈಗಿನ ಸಿದ್ಧರಬೆಟ್ಟ) ಮೇಲೆ ಕಲ್ಲಿನಿಂದ ಒಂದು ಕೋಟೆ ಹಾಗೂ ಬೆಟ್ಟದ ತಪ್ಪಲಿನಲ್ಲಿ ಸುವರ್ಣಗಿರಿಗೆ ಹೊಂದಿಕೊಂಡಂತೆ ಮಣ್ಣಿನಿಂದ ಒಂದು ಕೋಟೆಯನ್ನು ಕುರನ್ಗರಾಯ ನಿರ್ಮಿಸಿದ್ದು, ಕುರನ್ಗರಾಜನ ಕೋಟೆಗಳ ಕುರುಹುಗಳು ಈಗಲೂ ಇವೆ. ಕುರನ್ಗರಾಜನ ಆತಿಥ್ಯವನ್ನು ಸ್ವೀಕರಿಸಲು ಹೈದರಾಲಿ ಆಗಾಗ ಕುರಂಕೋಟೆಗೆ ಬರುತ್ತಿದ್ದ ಎನ್ನಲಾಗಿದೆ. 

ಸುವರ್ಣಗಿರಿಯನ್ನು ಆಡಳಿತ ಕೇಂದ್ರವಾಗಿಸಿಕೊಂಡು, ಸುತ್ತಮುತ್ತಲಿನ 25–30 ಹಳ್ಳಿಗಳ ಆಳ್ವಿಕೆ ಕುರನ್ಗರಾಯನದಾಗಿತ್ತು. 1730–1780ರ ಆಸುಪಾಸು ಕುರನ್ಗರಾಜನ ಕಾಲ ಎಂದು ಲೇಖಕರು ಅಂದಾಜು ಮಾಡಿದ್ದಾರೆ.

‘ಅರಸು ಕುರನ್ಗರಾಯ’ ಕೃತಿಗೆ ಎರಡು ರೀತಿಯ ಮಹತ್ವವಿದೆ. ಒಂದು, ಚರಿತ್ರೆಯ ವಿಸ್ಮೃತಿಗೆ ಒಳಗಾಗಿದ್ದ ಜನನಾಯಕನಿಗೆ ವರ್ತಮಾನದಲ್ಲಿ ನ್ಯಾಯ ದೊರಕಿಸಿಕೊಡುವ ಪ್ರಯತ್ನ. ಎರಡನೆಯದು, ನಿಮ್ನ ವರ್ಗದ ವ್ಯಕ್ತಿಯೊಬ್ಬ ಆಡಳಿತ ನಡೆಸುವಂತಾದಾಗ ಸಮಾಜಕ್ಕೆ ದೊರೆಯಬಹುದಾದ ಹೊಸ ಚಲನೆಯ ಸೂಚನೆಗಳು. ಯುದ್ಧಗಳ ಮೂಲಕ ಸಾಧ್ಯವಾಗುವ ಸಾಮ್ರಾಜ್ಯ ವಿಸ್ತರಣೆಯನ್ನು ರಾಜರುಗಳ ಸಾಧನೆಯ ಮಾನದಂಡವನ್ನಾಗಿ ನೋಡುವ ಸಂದರ್ಭದಲ್ಲಿ, ಸುಮಾರು ಎರಡು ದಶಕಗಳ ತನ್ನ ಆಳ್ವಿಕೆಯಲ್ಲಿ ಕುರನ್ಗರಾಯ ಒಂದೂ ಯುದ್ಧ ಮಾಡದಿರುವುದನ್ನು ಗಮನಿಸಬೇಕು. ಜನಹಿತವನ್ನೇ ಆದ್ಯತೆಯನ್ನಾಗಿಸಿಕೊಂಡ ಯಾವುದೇ ನಾಯಕನಿಗೆ ಯುದ್ಧ ಮುಖ್ಯವೆನ್ನಿಸುವುದಿಲ್ಲ.

ಕುರನ್ಗರಾಯನ ಆಳ್ವಿಕೆ ಮಾದಿಗ, ಬೇಡ, ಗೊಲ್ಲ ಸಮುದಾಯಗಳ ಸಹಯೋಗದೊಂದಿಗೆ ರೂಪುಗೊಂಡಿತ್ತು. ಇತರ ವರ್ಗಗಳ ದಬ್ಬಾಳಿಕೆಯಿಂದ ನಲುಗಿದ್ದ ಜನರಿಗೆ ಮಾದಿಗ ಸಮುದಾಯದ ರಾಜನ ಆಳ್ವಿಕೆ ನೆಮ್ಮದಿ ತಂದಿರಬೇಕು. ಕುರನ್ಗರಾಯನ ಮೂಲಕ ಸಾಧ್ಯವಾದ ರಾಜಕೀಯ ಸಮೀಕರಣದ ಉದಾಹರಣೆಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿರುವುದು, ಅಂದಿನ ಪುಟ್ಟ ರಾಜಕೀಯ ಪ್ರಯೋಗ ಕ್ರಾಂತಿಕಾರಿಯಾಗಿತ್ತು ಎನ್ನುವುದನ್ನು ಸೂಚಿಸುವಂತಿದೆ. ಆ ಪ್ರಯೋಗ ಈ ಹೊತ್ತಿಗೆ ಹೆಚ್ಚು ಅಪೇಕ್ಷಣೀಯವಾದುದು ಎನ್ನುವುದನ್ನೂ ಕುರನ್ಗರಾಯ ಕೃತಿ ಸೂಚಿಸುವಂತಿದೆ.

ಕುರನ್ಗರಾಯನ ಆಳ್ವಿಕೆಯ ಪ್ರಾಂತ್ಯದಲ್ಲಿ ಚರ್ಮಗಾರಿಕೆ ಮುಖ್ಯ ಕಸುಬಾಗಿತ್ತು; ಜನರಿಗೆ ಆದಾಯದ ಪ್ರಮುಖ ಮೂಲವಾಗಿತ್ತು. ಆ ಪ್ರದೇಶದಲ್ಲಿ ತೊಗಲು ಕಾಸು ಚಲಾವಣೆಯಲ್ಲಿತ್ತು. ಕುರನ್ಗರಾಯನ ಪ್ರಾಂತ್ಯಕ್ಕೆ ಬರುವವರು ತಮ್ಮಲ್ಲಿನ ಹಣವನ್ನು ತೊಗಲು ಕಾಸಿಗೆ ಬದಲಾಯಿಸಿಕೊಳ್ಳಬೇಕಿತ್ತು. ಅಂದಿನ ಚರ್ಮೋದ್ಯಮದ ಆರ್ಥಿಕತೆಯನ್ನು ಪಿಸುಗುಡುವಂತಿರುವ ‘ಗಲ್ಲೆಬಾನಿ’, ಕೋಟೆಗಳ ಅವಶೇಷಗಳ ನಡುವೆ ಈಗಲೂ ಇದೆ.

ಕುರನ್ಗರಾಯನ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ರವಿಕುಮಾರ್‌ ವಹಿಸಿರುವ ಶ್ರಮ ಕೃತಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಅರಸನ ಕಾಲದ ಯಾವುದೇ ಬರಹಗಳು ದೊರಕದಿರುವ ಕಾರಣ, ಲಭ್ಯವಿರುವ ಸಾಂಸ್ಕೃತಿಕ ಸ್ಮೃತಿಗಳ ಮೂಲಕವೇ ಅಳಿದುಹೋದ ಅರಸನೊಬ್ಬನ ಕಾಲಘಟ್ಟದ ಚಹರೆಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ, ಈ ಪ್ರಯತ್ನದಲ್ಲಿ ಸಾಕಷ್ಟು ಯಶಸ್ವಿಯೂ ಆಗಿದ್ದಾರೆ. ‘ಸಾಂಸ್ಕೃತಿಕ ಕಣ್ಣಿಲ್ಲದ ಇತಿಹಾಸ ಇತಿಹಾಸವೇ ಅಲ್ಲ. ಅದು ಜೀವವಿಲ್ಲದ ಶವ. ಸಾಂಸ್ಕೃತಿಕತೆ ಇತಿಹಾಸದ ಜತೆ ಸೇರಿದರೆ ಮಾತ್ರ ಚೈತನ್ಯವುಳ್ಳ ಶಿವ’ ಎನ್ನುವ ಲೇಖಕರ ನಂಬಿಕೆಯ ವ್ಯಕ್ತರೂಪದಲ್ಲಿ ಈ ಕೃತಿಯನ್ನು ನೋಡಬಹುದು.

ಮಾದಿಗ ಸಮುದಾಯಕ್ಕೆ ಸೇರಿದ ಅರಸನನ್ನು ಇತಿಹಾಸ ನಿರ್ಲಕ್ಷಿಸಿರುವುದಕ್ಕೆ ರವಿಕುಮಾರ್‌ ಕಾರಣಗಳನ್ನು ಊಹಿಸಿದ್ದಾರೆ. ಅವುಗಳಲ್ಲೊಂದು, ಕುರನ್ಗರಾಯ ಮತ್ತು ಅವನ ಆಳ್ವಿಕೆಯ ಪ್ರಾಂತ್ಯದ ಜನ ಅನಕ್ಷರಸ್ಥರಾಗಿದ್ದುದು ಹಾಗೂ ಯಾವುದೇ ಯುದ್ಧ ಮಾಡದೆ ಇದ್ದುದು. ಯುದ್ಧವನ್ನೇ ಮಾಡದ ರಾಜ ಇತಿಹಾಸಕಾರರ ಗಮನಸೆಳೆಯುವುದು ಹೇಗೆ?

ದುರ್ಬಲ ಜಾತಿಗಳ ಸ್ಮೃತಿಗಳ ಮೇಲೆ ಪ್ರಬಲ ಜಾತಿಗಳು ಕಾಲಾಂತರದಲ್ಲಿ ಪ್ರಭಾವ ಬೀರುವ ಪ್ರಕ್ರಿಯೆ ಕುರನ್ಗರಾಜನಿಗೆ ಸಂಬಂಧಿಸಿದಂತೆಯೂ ನಡೆದಿದೆ ಎಂದು ಪ್ರತಿಪಾದಿಸುವ ಲೇಖಕರು, ಅದಕ್ಕೆ ಸಾಕಷ್ಟು ನಿದರ್ಶನಗಳನ್ನೂ ಪಟ್ಟಿಮಾಡುತ್ತಾರೆ. ಕುರನ್ಗರಾಯನ ಪ್ರಾಂತ್ಯದ ಪುರುಷ ರಕ್ಷಣಾದೇವರುಗಳಾದ ದೊಡ್ಡಕಾಯಪ್ಪ ಹಾಗೂ ದೊಡ್ಡಮ್ಮ ಅವರುಗಳ ಮೇಲೆ ನಡೆದಿರುವ ಶಿಷ್ಟ ಪ್ರಭಾವವನ್ನು ಗುರ್ತಿಸುವ ಲೇಖಕರು, ಈ ದೈವಗಳಿಗೆ ನಡೆಯುತ್ತಿದ್ದ ಬಲಿ ನೈವೇದ್ಯವನ್ನು ತಪ್ಪಿಸಿ, ಮಾಂಸಾಹಾರ ನಿಷಿದ್ಧಗೊಳಿಸಿರುವುದನ್ನು ಉಲ್ಲೇಖಿಸಿದ್ದಾರೆ. ಹೊಲತಾಳು ಊರಿನಲ್ಲಿದ್ದ ಕುರನ್ಗರಾಯನ ಪ್ರೇಯಸಿಯ ಸ್ನಾನಗೃಹವನ್ನು ‘ವಾಸ್ತು’ವಿನ ಹೆಸರಿನಲ್ಲಿ ಇತ್ತೀಚೆಗಷ್ಟೇ ನೆಲಸಮ ಮಾಡಿರುವುದೂ ಚರಿತ್ರೆಯನ್ನು ವಿರೂಪಗೊಳಿಸುವ ಪ್ರಯತ್ನವೇ ಆಗಿದೆ ಎಂದು ವಿಶ್ಲೇಷಿಸಿದ್ದಾರೆ. 

ಕುರನ್ಗರಾಯ ಕಟ್ಟಿರುವ ಕೋಟೆ ಮತ್ತು ದೇವಸ್ಥಾನ ದಕ್ಷಿಣ ದಿಕ್ಕಿನಲ್ಲಿರುವುದು ಜಾತಿಸೂಚಕವಾಗಿದ್ದು, ಅದು ಕೂಡ ಇತಿಹಾಸಕಾರರಿಗೆ ಸಹ್ಯವಾಗಿಲ್ಲದಿರಬಹುದು ಎನ್ನುವುದು ಕುರನ್ಗರಾಜನನ್ನು ಇತಿಹಾಸಕಾರರು ನಿರ್ಲಕ್ಷಿಸಿರುವುದಕ್ಕೆ ಲೇಖಕರು ನೀಡಿರುವ ಮತ್ತೊಂದು ಕಾರಣ.

‘ಅರಸು ಕುರನ್ಗರಾಯ’ ಕೃತಿಯ ನಾಯಕನ ಆಳ್ವಿಕೆ ಸೀಮಿತ ಚೌಕಟ್ಟಿಗೆ ಒಳಪಟ್ಟಿದ್ದಾದರೂ, ಆತನ ಆಳ್ವಿಕೆ ಜನಮುಖಿಯಾದುದು ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಹತ್ತಿರವಾದುದು; ಕನ್ನಡ ಜನಪದದಲ್ಲಿ ಅಂತರ್ಜಲದಂತಿರುವ ವಿವೇಕ ಹಾಗೂ ಜೀವನಸೌಂದರ್ಯವನ್ನು ಸೂಚಿಸುವಂತಹದ್ದು.

ಕುರನ್ಗರಾಜನ ಮಾದರಿ ವರ್ತಮಾನದ ಕರ್ನಾಟಕಕ್ಕೂ ಮಾದರಿ ಆಗುವಂತಹದ್ದು. ಕತ್ತಿ ಮತ್ತು ಜಾತಿಯ ಮೂಲಕ ಚರಿತ್ರೆಯ ಮೊಗಸಾಲೆಯಲ್ಲಿ ವಿರಾಜಮಾನರಾಗಿರುವ ರಾಜರುಗಳ ಪ್ರಭೆಯಲ್ಲಿ ಹಿನ್ನೆಲೆಗೆ ಸರಿದಿರಬಹುದಾದ ‘ನಿಜ ನಾಯಕ’ರ ಹುಡುಕಾಟಕ್ಕೆ ಈ ಕೃತಿ ಪ್ರೇರಣೆ ನೀಡುವಂತಿದೆ.

ಕೃತಿ: ಅರಸು ಕುರನ್ಗರಾಯ

ಲೇ: ಡಾ. ರವಿಕುಮಾರ್‌ ನೀಹ

ಪ್ರ: ಜಲಜಂಬೂ ಲಿಂಕ್ಸ್‌, ತುಮಕೂರು

ಸಂ: 8095467911

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು