ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಮಾಲಗತ್ತಿ ಪುಸ್ತಕ ವಿಮರ್ಶೆ: ಅಸಾಮಾನ್ಯ ಸಾಮಾನ್ಯರ ಲೋಕ ‘ನೀವೂ ದೇವರಾಗಿ’

Last Updated 20 ನವೆಂಬರ್ 2021, 22:00 IST
ಅಕ್ಷರ ಗಾತ್ರ

ದಲಿತೇತರ ಮನಸುಗಳು ದಲಿತ ಬದುಕಿನ ಕುರಿತು ಯೋಚಿಸುವಾಗ ಅಸ್ಪೃಶ್ಯತೆಯಿಂದ ಅವರೆದುರಿಸುವ ಅವಮಾನ, ಸಂಕಷ್ಟಗಳು ಕಣ್ಣೆದುರು ತುಂಬುತ್ತವೆ. ಆದರೆ ಸಾವಿರಾರು ವರ್ಷಗಳಿಂದ ಸಂಕಷ್ಟ, ಶೋಷಣೆಗಳನ್ನೆದುರಿಸಿಯೂ ತಮ್ಮದೇ ವಿವೇಕ, ಸಂಸ್ಕೃತಿ, ಒಳನೋಟವನ್ನವರು ರೂಪಿಸಿಕೊಂಡಿರುವುದು, ತುಳಿತದ ನಡುವೆಯೇ ನೆಲಕ್ಕಂಟಿದ ಗರಿಕೆಯಂತೆ ತಲೆಯೆತ್ತಿ ಬದುಕಿರುವುದೂ ಗಮನಾರ್ಹ ಸಂಗತಿಗಳಾಗಿವೆ. ಸಾಮಾನ್ಯರೂ ಅಸಾಮಾನ್ಯವಾಗಿರುವ ಆ ಲೋಕವನ್ನು ಪ್ರೊ. ಅರವಿಂದ ಮಾಲಗತ್ತಿಯವರು ತಮ್ಮ ಆತ್ಮಕತೆಯ ಎರಡನೆಯ ಭಾಗ ‘ನೀವೂ ದೇವರಾಗಿ’ಯಲ್ಲಿ ಅನಾವರಣಗೊಳಿಸಿದ್ದಾರೆ. ಮೊದಲ ಭಾಗ ‘ಗೌರ್ಮೆಂಟ್ ಬ್ರಾಹ್ಮಣ’ವನ್ನು ಓದದಿದ್ದರೂ ಇದನ್ನು ಓದುತ್ತ ಹೋದಂತೆ ಬರೆದವರ ಬದುಕು, ವ್ಯಕ್ತಿತ್ವಗಳು ಬಿಚ್ಚಿಕೊಳ್ಳತೊಡಗುತ್ತವೆ.

ಅವಿಭಕ್ತ ಕುಟುಂಬದಲ್ಲಿ ಬೆಳೆದ ಹಳ್ಳಿಯ ಕಷ್ಟಕುಲದ ಹುಡುಗನೊಬ್ಬ ಹಲವಾರು ಇವೆ, ಇಲ್ಲಗಳ ನಡುವೆ ಗಾಳಿ, ನೀರು, ಬೆಳಕು, ಕತ್ತಲೆಗಳನ್ನು ಅರಗಿಸಿಕೊಳ್ಳುತ್ತಾ ಬಾಳಪಯಣದಲ್ಲಿ ಎದುರುಗೊಂಡವರನ್ನು ದಾಖಲಿಸಿರುವ ಬರಹವಿದು. ವಿಜಯಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಅನುಕೂಲಸ್ಥ ಕೃಷಿ ಕುಟುಂಬದಲ್ಲಿ, ಚರ್ಮದ ವ್ಯವಹಾರ ಮಾಡುವ ಕುಲದಲ್ಲಿ ಹುಟ್ಟಿದ ಬಾಲಕ ತನ್ನ ಸುತ್ತಮುತ್ತ ಇರುವ ‘ತನ್ನ ತಾನರಿದು ತಾನಾರೆಂದು ತಿಳಿದು ತಾನೇ ದೇವರಾದ’ ಅಸಾಮಾನ್ಯ ವ್ಯಕ್ತಿತ್ವಗಳನ್ನು ಗಮನಿಸುತ್ತಾನೆ. ಅವರ ವಿವೇಕವನ್ನು ಒಳಗಿಳಿಸಿಕೊಳ್ಳುತ್ತಾನೆ. ತನ್ನ ಸೋಲು-ಗೆಲುವು, ಸ್ವೀಕಾರ-ನಿರಾಕರಣೆಯ ಸಂಕಟಗಳು ಕೇವಲ ತನ್ನದಷ್ಟೇ ಅಲ್ಲ ಎಂಬ ಅರಿವಿನ ಬೆಳಕಿನಲ್ಲಿ ಬಾಳು ಕಟ್ಟಿಕೊಳ್ಳುತ್ತಾನೆ. ಅಸ್ಪೃಶ್ಯತೆಯ ಅವಮಾನಕರ ಗಾಯಗಳನ್ನು ದಾಟಲು ಶಿಕ್ಷಣ, ಹೋರಾಟಗಳಂತೆಯೇ ಈ ಗಟ್ಟಿ ಪಾತ್ರಗಳು ಕೊಡಮಾಡಿದ ವಿವೇಕವೂ ಕಾರಣವಾಗುತ್ತದೆ.

ಪುಸ್ತಕದಲ್ಲಿ ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಆಕರವಾಗುವಷ್ಟು ವಿಪುಲವಾಗಿ ದೈನಂದಿನ ಬದುಕಿನ ವಿವರಗಳಿವೆ. ಬ್ರಾಹ್ಮಣ ವಧುವಿನ ನಾಲಿಗೆಗೆ ಬರೆಹಾಕಿ ದಲಿತ ಜಾತಿಯೊಳಗೆ ತಂದುಕೊಂಡು ತಪ್ಪುದಂಡದ ಊಟ ಹಾಕಿಸಿದ ನಂತರ ಚಿಕ್ಕಪ್ಪನ ಮದುವೆ ಊರ್ಜಿತವಾದದ್ದು; ಮೆಹಬೂಬನು ಎಲ್ಲಮ್ಮ ದೀಕ್ಷೆ ಪಡೆದು ಜೋಗಾಡುವಬೂಬಮ್ಮ ಜೋಗತಿಯಾದದ್ದು; ಕುಳಬಾನ ಕಟ್ಟಲು ಹೆಂಡಿಗಾಗಿ ಎಮ್ಮೆದನಗಳ ಹಿಂದೆ ಸಗಣಿ ಹಿಡಿಯಲು ತಿರುಗಾಡಿದ್ದು; ಮುಂಬಯಿಗೆ ಮಗನನ್ನೊಯ್ಯಬೇಡ ಎಂದು ಅಜ್ಜಿ ಬಸ್ಸಿನೆದುರು ಮಲಗಿ ಡ್ರೈವರನನ್ನು ತಡೆಯುವುದು; ಮೈನೆರೆದ ಮದುವಣಗಿತ್ತಿಯನ್ನು ಮೆರವಣಿಗೆಯ ಎಮ್ಮೆಯ ಮೇಲೆ ಕೂರಿಸದೇ ಅದರ ಬಾಲ ಹಿಡಿಸಿ ನಡೆಸುವುದು – ಆಗ ನಡೆಯುವ ತರಲೆಗಳು; ಲೋಕದ ಕಣ್ಣಿಗೆ ತಿಳಿಸುವಂತೆ `ಮದುವೆ’ ಆಗದೇ ಸಂಗಾತಿ ಧರಣಿಯ ಜೊತೆ ಬದುಕು ಆರಂಭಿಸಿದಾಗ ಆಗುವ ಗೊಂದಲಗಳೇ ಮುಂತಾಗಿ ಹತ್ತಾರು ಪ್ರಸಂಗಗಳು ಹೊತ್ತಗೆಯಲ್ಲಿ ಬಂದುಹೋಗುತ್ತವೆ. ಕೆಲವು ನಕ್ಕುನಕ್ಕು ಕಣ್ಣೀರು ಬರಿಸಿದರೆ, ಉಳಿದವು ಅಚ್ಚರಿಗೆ ಕಣ್ಣರಳುವಂತೆ ಮಾಡುತ್ತವೆ. ಹಳ್ಳಿಯ ಬಡ ಹೆಣ್ಣುಮಕ್ಕಳ ಪೊರೆಯುವ, ಸಂಭಾಳಿಸುವ ಬಾವಣಿಕೆಯ ಗುಣಗಳು ಅರಿವಿಗೆ ನಿಲುಕುತ್ತವೆ.

ಕೆಲವೊಮ್ಮೆ ವಿಚಾರವಂತರೆಂದುಕೊಂಡು ನಮ್ಮ ಸರಿ-ತಪ್ಪು ಅಳತೆಪಟ್ಟಿಗೆ ತಕ್ಕಂತೆ ಬಂಧುಮಿತ್ರರನ್ನು, ಆಪ್ತೇಷ್ಟರನ್ನು ಅಳೆಯಹೊರಡುತ್ತೇವೆ. ಅದು ನಂಬಿಕೆಯ ಲೋಕಗಳ ನಡುವಿನ ವಿಚಿತ್ರ ಸಾಂಸ್ಕೃತಿಕ ಸಂಘರ್ಷ. ಸೋಲುಗೆಲುವುಗಳಿರದ ಕದನ. ನಮ್ಮ ಒಳಾವರಣಗಳು ರಣರಂಗವಾಗದಿರಲು, ಎಲ್ಲರನ್ನೂ ಅವರಿರುವ ಹಾಗೆಯೇ ಅರಿತು ಒಳಗೊಳ್ಳಲು ಮೈತ್ರಿಯ ಕಣ್ಣು ಬೇಕಾಗುತ್ತದೆ. ಈ ದೃಷ್ಟಿಯಿಂದ ನಾಸ್ತಿಕ ಮಗ-ಆಸ್ತಿಕ ತಾಯಿಯ ನಡುವೆ ಕಸಿವಿಸಿಯುಂಟಾಗುವ ಪ್ರಸಂಗದಲ್ಲಿ ‘ನೀವೂ ದೇವರಾಗಿ’ ಒಂದು ಹೊಸ ವೈಚಾರಿಕ ಆಯಾಮವನ್ನು ಪ್ರವೇಶಿಸುತ್ತದೆ.

ಮಗನ ನಂಬಿಕೆಗಾಗಿ ತನ್ನ ದೇವರುಗಳನ್ನು ಬಿಟ್ಟುಕೊಡಲಾಗದ ಅವ್ವ ಟ್ರಂಕಿನಲ್ಲಿ ದೇವರ ಪಟಗಳನ್ನು ಬಚ್ಚಿಟ್ಟು ಗುಟ್ಟಾಗಿ ಪೂಜೆ ಮಾಡುತ್ತಾ, ಮಗನ ಮದುವೆಯಾಗಲೆಂದು ಎಡಗೈಯಲ್ಲಿ ಊಟ ಮಾಡುವ ಹರಕೆಯೊಪ್ಪಿಸುತ್ತಾ ಮೌನ ಪ್ರತಿರೋಧ ಒಡ್ಡುತ್ತಾಳೆ. ಆಗ ತಾನು ನಂಬಿದ ವೈಚಾರಿಕತೆ, ಮಗನಾಗಿ ತಾಯಿಯ ಅಪೇಕ್ಷೆ ಪೂರೈಸಬೇಕಾದ ಜವಾಬ್ದಾರಿಗಳ ನಡುವೆ ಹೊಯ್ದಾಡುವ ಲೇಖಕರು, ಪ್ರಸಂಗವನ್ನು ನಿಭಾಯಿಸಿರುವ ಕ್ರಮವು ಚಿಂತನೆಗೆ ಹಚ್ಚುವಂತಿದೆ. ಹೀಗೆ ಬರೆದರೆ ಯಾರೇನೆಂದುಕೊಂಡಾರೋ ಎಂಬ ಲೆಕ್ಕಾಚಾರವಿಲ್ಲದ ನಿರ್ಭೀತ, ಪಾರದರ್ಶಕ ಬರವಣಿಗೆ ಗಮನ ಸೆಳೆಯುತ್ತದೆ.

ದ್ವಿತೀಯಾ ವಿಭಕ್ತಿ `ಅನ್ನು’ವನ್ನು ಹೆಚ್ಚು ಬಳಸದ ಉತ್ತರ ಕರ್ನಾಟಕದ ಭಾಷಾಶೈಲಿ, ಮಡಿಕೆ (ಮಡಕೆ), ಹಲಿಗೆ (ಹಲಗೆ), ತಗೆಯುವುದು (ತೆಗೆಯುವುದು), ಕುದರೆ (ಕುದುರೆ), ಹೊಡಿತ (ಹೊಡೆತ) ಮುಂತಾದ `ಶುದ್ಧ ಕನ್ನಡಿಗ’ರು ಕಾಗುಣಿತ ದೋಷ ಎಂದು ಪರಿಗಣಿಸಿಬಿಡುವಂತಹ ಪದಗಳು; ಗದ್ಯದ ನಡುನಡುವೆಯಿರುವ ಕಾವ್ಯಮಯ ಬಿಜಾಪುರಿ ಕನ್ನಡದ ಸಾಲುಗಳು; ಕುತೂಹಲ ಕೆರಳಿಸುತ್ತ ಕಥೆಯಂತೆ ಓದಿಸಿಕೊಳ್ಳುವ ಶೈಲಿ; ಜವಾರಿ ಕನ್ನಡದ ಪದ, ನುಡಿಗಟ್ಟುಗಳು; ಸಾಲುಗಳ ನಡುವಿನ ಮೌನ, ಖಾಲಿ ಜಾಗಗಳು ಪುಸ್ತಕದಲ್ಲಿ ಎದ್ದು ಕಾಣುತ್ತವೆ.

ತಮ್ಮ ವೈಯಕ್ತಿಕ ವಿವರಗಳನ್ನು ದಾಖಲಿಸುವ ಭರದಲ್ಲಿ ಕೆಲವು ಆತ್ಮಚರಿತ್ರೆಗಳು ‘ನಾನು’ವಿನಲ್ಲೇ ವಿಜೃಂಭಿಸಿ ಇತರ ಪಾತ್ರ, ಘಟನೆ, ವಿವರಗಳನ್ನು ಮಸುಕಾಗಿಸುವುದಿದೆ. ನಿರೂಪಿಸುವ ಪ್ರತಿ ಘಟನೆ, ಚಿತ್ರಿಸಿದ ಪ್ರತಿ ಪಾತ್ರವೂ ‘ನಾನು’ವಿಗೇರಿಸುವ ಒಂದು ಹೂವಾಗಿ ತುರಾಯಿ ಅಲಂಕರಿಸುವಂಥ ಬರವಣಿಗೆಯನ್ನು ನೋಡಿದ್ದೇವೆ. ‘ನೀವೂ ದೇವರಾಗಿ’ಯಲ್ಲಿ ಆತ್ಮವಿಮರ್ಶೆ ಮೇಲುಗೈ ಪಡೆದಿರುವುದರಿಂದ ಸ್ವಪ್ರಶಂಸೆ, ಸ್ವಮರುಕಗಳು ಕಡಿಮೆಯಿರುವುದು ಒಳ್ಳೆಯ ಅಂಶವಾಗಿದೆ. ಹಾಗಾಗಿ ಬರಹವು ಓದುವವರನ್ನು ಸುಸ್ತು ಹೊಡೆಸದೇ ಸುಲಲಿತವಾಗಿ ಮುಂದಕ್ಕೊಯ್ಯುತ್ತದೆ.

ಶೋಷಿತ ಗುರುತಿನ ಆಚೆಗೊಂದು ದಾಟುವಿಕೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ‘ನೀವೂ ದೇವರಾಗಿ’ ಬಾಳಪಯಣದ ನಿರೂಪಣೆಗೆ ಒಂದು ಹೊಸ ಸಾಧ್ಯತೆಯನ್ನು ಸೂಚಿಸುವಂತಿದೆ. ಆತ್ಮಕತೆಯ ಬರವಣಿಗೆಯೆನ್ನುವುದು ಗಾಳಿಪಟ ಹಾರಿಸಿದಂತಲ್ಲ, ಬಿಸಿಲಿಗೆ ಕಾದ ನೆಲದ ಮೇಲಿನ ಬರಿಗಾಲ ನಡಿಗೆಯಂತೆ. ಅನುಭವವೇ ಪ್ರಮಾಣ. ಅಂತಹ ಎರಡು ಹೆಜ್ಜೆಗಳನ್ನು ಯಶಸ್ವಿಯಾಗಿ ಮುಂದಿಟ್ಟ ಮಾಲಗತ್ತಿಯವರಿಗೆ ಅಭಿನಂದನೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT