ಹೊಸ ಪುಸ್ತಕ: ಅಂಬೇಡ್ಕರ್ ಚಿಂತನೆಗಳಿಗೆ ಹೊಸ ನೋಟ

7
ಸಂವಿಧಾನಶಿಲ್ಪಿಯ ಸಮಾನತೆ ಸಿದ್ಧಾಂತ ಜಾಗತಿಕ ಕ್ರಾಂತಿಯೇ?

ಹೊಸ ಪುಸ್ತಕ: ಅಂಬೇಡ್ಕರ್ ಚಿಂತನೆಗಳಿಗೆ ಹೊಸ ನೋಟ

Published:
Updated:

ಹುಟ್ಟುವಾಗ ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುವುದು ಸಹಜ. ಬೆಳೆಯುತ್ತಿರುವ ಹಂತದಲ್ಲಿಯೂ ವ್ಯತ್ಯಾಸ ಇರುತ್ತದೆ. ಒಬ್ಬೊಬ್ಬರ ಸಾಧನೆ ಒಂದೊಂದು ರೀತಿ ಇರುತ್ತದೆ. ಹೀಗಿರುವಾಗ ಸಮಾನತೆ ಎಂಬುದು ಹೇಗೆ ಸಾಧ್ಯ? ತಾರತಮ್ಯ, ಅಸಮಾನತೆ ವಿಚಾರ ಚರ್ಚೆಗೆ ಬಂದಾಗ ಬಹುತೇಕ ಮೂಲಭೂತವಾದಿಗಳು ಮಂಡಿಸುವ ವಾದಗಳಿವು.

ಹಾಗಿದ್ದರೆ ಸಮಾನತೆ ಎಂದರೇನು? ಸಂವಿಧಾನಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರು ಪ್ರತಿಪಾದಿಸಿರುವ ಸಮಾನತೆ ಯಾವ ರೀತಿಯದ್ದು? ಇದಕ್ಕೆ ತಮ್ಮ ಕೃತಿಯ ಮೂಲಕ ಉತ್ತರ ಹೇಳಲು ಪ್ರಯತ್ನಿಸಿದ್ದಾರೆ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಆರ್ಟ್ಸ್‌ ಆ್ಯಂಡ್‌ ಈಸ್ತೆಟಿಕ್ಸ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಸೌಮ್ಯಬ್ರತಾ ಚೌಧರಿ.

‘ಅಂಬೇಡ್ಕರ್ ಆ್ಯಂಡ್ ಅದರ್ ಇಮ್ಮಾರ್ಟಲ್ಸ್: ಆ್ಯನ್ ಅನ್‌ಟಚೆಬಲ್ ರಿಸರ್ಚ್‌ ಪ್ರೋಗ್ರಾಂ’ ಎಂಬ ಕೃತಿಯ ಮೂಲಕ ಅಂಬೇಡ್ಕರ್‌ ಅವರ ಸಮಾನತೆಯ ಸಿದ್ಧಾಂತದ ಎಳೆಗಳನ್ನು ಬಿಚ್ಚಿಟ್ಟಿದ್ದಾರೆ ಚೌಧರಿ.

ಅಂಬೇಡ್ಕರ್‌ ಸಿದ್ಧಾಂತಗಳ ಬಗ್ಗೆ ಇರುವ ವಿವಾದಗಳು, ಬಹು ಆಯಾಮಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ಚೌಧರಿ, ಸಂವಿಧಾನಶಿಲ್ಪಿಯ ಚಿಂತನೆಗಳನ್ನು ಹೊಸ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಿದ್ದಾರೆ. ಅಂಬೇಡ್ಕರ್‌ ಅವರ ಬಗ್ಗೆ ಇತರ ಅನೇಕ ಲೇಖಕರು ಬರೆದಿರುವುದಕ್ಕಿಂತಲೂ ಚೌಧರಿ ಅವರ ಕೃತಿ ಭಿನ್ನವಾಗಿ ರೂಪುಗೊಂಡಿದೆ.

ಫ್ರೆಂಚ್ ಕಮ್ಯೂನಿಸ್ಟ್ ತತ್ವಜ್ಞಾನಿ ಅಲೈನ್‌ ಬಡಿಯೌ ಅವರ ಹಾದಿಯನ್ನೇ ಅನುಸರಿಸಿರುವ ಚೌಧರಿ, ಸಮಾನತೆ ಎಂಬುದು ಸಿದ್ಧಾಂತವಾಗಿರಬೇಕು ಎಂಬುದು ಅಂಬೇಡ್ಕರ್‌ ನಿಲುವಾಗಿತ್ತು. ಸಮಾನತೆ ಎಂಬುದು ಧ್ಯೇಯವಾಕ್ಯವಾಗಷ್ಟೇ ಉಳಿಯಬಾರದು, ಅದೊಂದು ನಿರ್ಧಾರವಾಗಬೇಕು ಎಂಬುದನ್ನು ಗುರುತಿಸಿದ್ದಾರೆ.

ಅಸ್ಪೃಶ್ಯತೆ ವಿರುದ್ಧ 1927ರಲ್ಲಿ ಅಂಬೇಡ್ಕರ್ ಕೈಗೊಂಡಿದ್ದ ‘ಮಹರ್  ಸತ್ಯಾಗ್ರಹ’ದ ಉದಾಹರಣೆಯನ್ನು ಮುಂದಿಟ್ಟುಕೊಂಡು ಅವರ ಸಮಾನತೆಯ ಸಿದ್ಧಾಂತವನ್ನು ಪರಿಚಯಿಸಲು ಕೃತಿಯಲ್ಲಿ ಪ್ರಯತ್ನಿಸಲಾಗಿದೆ. ಸತ್ಯಾಗ್ರಹದ ಸಂದರ್ಭ ಅಸ್ಪೃಶ್ಯ ಪುರುಷರು ಮತ್ತು ಮಹಿಳೆಯರನ್ನು ಮಹಾಡ್‌ನ ‘ಚವ್ದಾರ್‌ ಕೆರೆ’ ಬಳಿಗೆ ಕರೆದೊಯ್ದ ಅಂಬೇಡ್ಕರ್‌, ಅಲ್ಲಿನ ನೀರನ್ನು ಕುಡಿಯಲು ಅನುವು ಮಾಡಿಕೊಟ್ಟರು. ಅದಕ್ಕೂ ಮುನ್ನ ಅಂಬೇಡ್ಕರ್, ‘ಚವ್ದಾರ್ ಕೆರೆಯ ನೀರನ್ನು ಕುಡಿಯುವ ಮೂಲಕ ನಾವು ಚಿರಂಜೀವಿಗಳಾಗುವುದಿಲ್ಲ. ಇದನ್ನು ಕುಡಿಯದೇ ನಾವು ಬದುಕಬಹುದು. ಕೇವಲ ನೀರು ಕುಡಿಯುವುದಕ್ಕಾಗಿ ನಾವಲ್ಲಿಗೆ ತೆರಳುತ್ತಿಲ್ಲ. ಈ ಹೋರಾಟದ ಮೂಲಕ ನಾವೂ ಮಾನವರು ಎಂಬುದನ್ನು ಪ್ರತಿಪಾದಿಸಲು ಹೊರಟಿದ್ದೇವೆ’ ಎಂದು ಹೇಳಿದ್ದರು.

ಅಂಬೇಡ್ಕರ್‌ ಅವರ ಈ ಸಣ್ಣ ಭಾಷಣವನ್ನು ಕ್ರಾಂತಿಕಾರಿ ಎಂಬುದಾಗಿ ಚೌಧರಿ ಬಣ್ಣಿಸಿದ್ದಾರೆ. ಸಮಾನತೆಯ ಘೋಷಣೆ ಎಂಬುದು ಹೊಸತು. ಇದು ಅಪೂರ್ವವಾದದ್ದು ಎಂಬುದನ್ನು ಅಂಬೇಡ್ಕರ್‌ ಅವರೇ ಒಪ್ಪಿಕೊಂಡಿದ್ದರು ಎಂದೂ ಚೌಧರಿ ಪ್ರತಿಪಾದಿಸಿದ್ದಾರೆ.

ಜಗತ್ತಿನ ಇತಿಹಾಸದಲ್ಲಿಯೂ ಇದೊಂದು ಕ್ರಾಂತಿಕಾರಕ ಬೆಳವಣಿಗೆ. ಭಾರತದ ಯಾವುದೋ ರಾಜ್ಯದ ಯಾವುದೋ ಒಂದು ಸಣ್ಣ ಹಳ್ಳಿಯಲ್ಲಿ ನಡೆದ ಪುಟ್ಟ ಘಟನೆಯಲ್ಲ ಎಂಬುದೂ ಚೌಧರಿಯವರ ವಾದ. ಅವರು 1789ರ ಫ್ರೆಂಚ್ ಕ್ರಾಂತಿ ಜತೆಗೂ ಮಹಾಡ್‌ ಸತ್ಯಾಗ್ರಹವನ್ನು ಹೋಲಿಕೆ ಮಾಡಿದ್ದಾರೆ.

ಅಂಬೇಡ್ಕರ್ ಅವರ ಹೊಸ ದೃಷ್ಟಿಕೋನಗಳು

ಕೃತಿಯಲ್ಲಿ ಒಟ್ಟು ಏಳು ಅಧ್ಯಾಯಗಳಿವೆ. ಇತರ ತತ್ವಜ್ಞಾನಿಗಳು ಅಂಬೇಡ್ಕರ್‌ ಅವರನ್ನು ಅರ್ಥೈಸಿಕೊಂಡಿರುವುದಕ್ಕಿಂತಲೂ ಭಿನ್ನವಾಗಿ ಅವರ ತತ್ವಗಳ ಬಗ್ಗೆ ಅರ್ಥಮಾಡಿಕೊಳ್ಳಲು ಎಲ್ಲ ಅಧ್ಯಾಯಗಳಲ್ಲೂ ಪ್ರಯತ್ನಿಸಲಾಗಿದೆ. ಅಥೆನ್ಸ್‌ನ ಪೆರಿಕಾಲ್ಸ್, ಅರಿಸ್ಟಾಟಲ್, ಅಬೆ ಸೈಯೆಸ್, ಮಹಾತ್ಮ ಗಾಂಧಿ ಮತ್ತಿತರ ಚಿಂತಕರ ಜತೆಗೆ ಅಂಬೇಡ್ಕರ್‌ ಅವರ ಚಿಂತನೆಗಳ ತುಲನಾತ್ಮಕ ಅಧ್ಯಯನ ಮಾಡಿರುವುದು ಗಮನಾರ್ಹ. ಜಾತಿ ವ್ಯವಸ್ಥೆ ಬಗ್ಗೆ ಗಾಂಧಿಜಿ ಮತ್ತು ಅಂಬೆಡ್ಕರ್‌ ಅವರ ಅಭಿಪ್ರಾಯಗಳನ್ನೂ ಕೃತಿಯಲ್ಲಿ ಹೋಲಿಕೆ ಮಾಡಲಾಗಿದೆ.

ಗ್ರೀಕ್‌ನ ಅಥೆನ್ಸ್‌ನಲ್ಲಿರುವ ಅಸಮಾನತೆ ಜತೆ ಭಾರತದ ಜಾತಿ ವ್ಯವಸ್ಥೆಯನ್ನು ತುಲನೆ ಮಾಡಿರುವುದು ಕೃತಿಯಲ್ಲಿರುವ ಆಸಕ್ತಿದಾಯಕ ವಿಷಯ. ಮಹಿಳೆಯರು, ದಾಸ್ಯದಲ್ಲಿರುವವರು, ಹೊರಗಿನವರು (ಅಲ್ಲಿನ ಪ್ರಜಾಪ್ರಭುತ್ವದಲ್ಲಿ ಯಾವುದೇ ರಾಜಕೀಯ ಹಕ್ಕು ಹೊಂದಿರದವರು) ಎಂದು ಅಥೆನ್ಸ್‌ನಲ್ಲಿ ವರ್ಗೀಕರಿಸಿರುವುದನ್ನು ಭಾರತದ ಜಾತಿ ವ್ಯವಸ್ಥೆ ಜತೆ ಹೋಲಿಕೆ ಮಾಡಿದ್ದಾರೆ ಚೌಧರಿ. ‘ಗ್ರೀಕ್‌ನಲ್ಲಿ ನಾಗರಿಕತ್ವದ ಆಧಾರದಲ್ಲಿ ಬಹಿಷ್ಕಾರವಿದ್ದರೆ ಭಾರತದಲ್ಲಿನ ಅಸ್ಪೃಶ್ಯತೆ ಬ್ರಾಹ್ಮಣರಿಂದ ಇದ್ದು, ಅಸಮಂಜಸವಾಗಿದೆ’ ಎಂದು ಉಲ್ಲೇಖಿಸಲಾಗಿದೆ.

‘ಸನಾತನ’ ಎಂಬ ಪರಿಕಲ್ಪನೆಯನ್ನು ವಿರೋಧಿಸುತ್ತಲೇ ಜಾಗತಿಕ ಇತಿಹಾಸದ ಇತರ ಕ್ರಾಂತಿಕಾರಿ ಮತ್ತು ಸಮಾನತಾವಾದಿ ಘಟನೆಗಳ ಬಗ್ಗೆ ಬೆಳಕು ಚೆಲ್ಲಲು ಕೃತಿಯಲ್ಲಿ ಯತ್ನಿಸಲಾಗಿದೆ. ಅಂಬೇಡ್ಕರ್ ಅವರ ಚಿಂತನೆಗಳು ಜಾಗತಿಕ ಇತಿಹಾಸದಲ್ಲೇ ಕ್ರಾಂತಿಕಾರಕ ಎಂಬುದನ್ನು ನಿರೂಪಿಸುವ ಪ್ರಯತ್ನವೂ ಇದರಲ್ಲಿದೆ.

******

ಪುಸ್ತಕ: ಅಂಬೇಡ್ಕರ್ ಆ್ಯಂಡ್ ಅದರ್ ಇಮ್ಮಾರ್ಟಲ್ಸ್: ಆ್ಯನ್ ಅನ್‌ಟಚೆಬಲ್ ರಿಸರ್ಚ್‌ ಪ್ರೋಗ್ರಾಂ

ಪುಟಗಳು: 272

ಪ್ರಕಾಶಕರು: ನವಯಾನ ಪಬ್ಲಿಷಿಂಗ್ ಪ್ರೈವೇಟ್ ಲಿಮಿಟೆಡ್

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !