ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಷ್ಕೆಂಟ್‌ನಲ್ಲಿ ನಿಜಕ್ಕೂ ನಡೆದಿದ್ದೇನು?

Last Updated 24 ಅಕ್ಟೋಬರ್ 2020, 17:34 IST
ಅಕ್ಷರ ಗಾತ್ರ

ಭಾರತೀಯರನ್ನು ಸದಾ ಕಾಡುವ ಎರಡು ನಿಗೂಢ ಸಾವುಗಳೆಂದರೆ ಒಂದು ನೇತಾಜಿ ಸುಭಾಸ್‌ಚಂದ್ರ ಬೋಸ್‌ ಅವರದಾದರೆ, ಮತ್ತೊಂದು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರದು. ಈ ಇಬ್ಬರೂ ನೇತಾರರ ಸಾವುಗಳು ಸಂಭವಿಸಿ ದಶಕಗಳೇ ಉರುಳಿದ್ದರೂ ಆಗಿನ ಘಟನೆಗಳ ಕುರಿತಂತೆ ಹಲವು ಸಂಶಯಗಳು ಇನ್ನೂ ಹಾಗೆಯೇ ಉಳಿದುಕೊಂಡಿವೆ. ಅವರ ಸಾವಿನ ಘಟನೆಗಳ ಹಿನ್ನೆಲೆಯನ್ನು ಕೆದಕಿ ಹೊಸ ಹೊಳಹುಗಳನ್ನು ನೀಡುವ ಪ್ರಯತ್ನಗಳು ಸಹ ನಡೆಯುತ್ತಲೇ ಇವೆ. ಇದೀಗ ಅಂತಹದ್ದೊಂದು ಪ್ರಯತ್ನವನ್ನು ಮಾಡಿದ್ದಾರೆ ಎಸ್‌. ಉಮೇಶ್‌ ಅವರು. ಅದರ ಫಲವೇ ಶಾಸ್ತ್ರಿ ಅವರ ಸಾವಿನ ಸುತ್ತಲಿನ ಘಟನೆಗಳನ್ನು ಮೆಲುಕು ಹಾಕುವ ಅವರ ಕೃತಿ ‘ತಾಷ್ಕೆಂಟ್‌ ಡೈರಿ’.

ಸಾಮಾನ್ಯ ಕುಟುಂಬದಿಂದ ಬಂದ ಶಾಸ್ತ್ರಿ ದೇಶ ಕಂಡ ಕೆಲವೇ ಕೆಲವು ಮುತ್ಸದ್ದಿಗಳಲ್ಲಿ ಒಬ್ಬರು. ಅಪ್ಪಟ ದೇಶಭಕ್ತರು. ನೆಹರೂ ಅವರ ನಿರ್ಗಮನದಿಂದ ನಾಯಕತ್ವದಲ್ಲಿ ಉಂಟಾದ ಶೂನ್ಯವನ್ನು ತುಂಬಿದ ಈ ಧೀಮಂತ ನಾಯಕ, ಪ್ರಧಾನಿ ಹುದ್ದೆಯನ್ನೂ ಅಲಂಕರಿಸಿದರು. 1965ರಲ್ಲಿ ಪಾಕಿಸ್ತಾನ ಕಾಲು ಕೆದರಿ ಜಗಳ ತೆಗೆದಿದ್ದರಿಂದ ಯುದ್ಧ ನಡೆದು, ಆ ದೇಶ ಸೋತು ಸುಣ್ಣವಾಗಿತ್ತು. ಉಪಖಂಡದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಶಾಂತಿ ಮಾತುಕತೆಗಾಗಿ ರಷ್ಯಾದ ತಾಷ್ಕೆಂಟ್‌ಗೆ ತೆರಳಿದ್ದ ಶಾಸ್ತ್ರಿ, ಒಪ್ಪಂದಕ್ಕೆ ಸಹಿ ಹಾಕಿ ರಾತ್ರಿ ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ನಿಗೂಢವಾಗಿ ಅಸುನೀಗಿದ್ದರು.

ಶಾಸ್ತ್ರಿ ಅವರ ಈ ಸಾವಿನ ಹಿನ್ನೆಲೆ ಕೆದಕುವ ಪ್ರಯತ್ನಗಳು ನಡೆಯುತ್ತಲೇ ಇವೆ. ತಾಷ್ಕೆಂಟ್‌ ಡೈರಿ ಹೆಸರಿನಲ್ಲಿ ಸಿನಿಮಾ ಕೂಡ ಬಂದಿದೆ. ಈ ಹಿಂದೆ ಬೆಳಕಿಗೆ ಬಾರದ ಅಂತಹ ಸಂಗತಿಗಳು ಈ ಕೃತಿಯಲ್ಲಿ ಏನಿವೆ ಎಂದು ಹುಡುಕಿದರೆ, ಅಲ್ಲಲ್ಲಿ ಬಿಡಿಯಾಗಿದ್ದ ವಿವರಗಳು ಇಲ್ಲಿ ಇಡಿಯಾಗಿ ಸಿಗುತ್ತವೆ ಎನ್ನುವ ಉತ್ತರ ಸಿಗುತ್ತದೆ. ತಾಷ್ಕೆಂಟ್‌ನಲ್ಲಿ ನಡೆದ ವಿವಿಧ ಘಟನಾವಳಿಗಳು ಹಾಗೂ ಆಗ ದೇಶದ ರಾಜಕೀಯದಲ್ಲಿ ನಡೆದ ಬೆಳವಣಿಗೆಗಳನ್ನು ವಿವರಿಸುತ್ತಾ ಕೆಲವು ಪ್ರಶ್ನೆಗಳನ್ನು ಮುಂದಿಡುತ್ತಾ ಹೋಗುತ್ತಾರೆ ಲೇಖಕರು. ಆ ಪ್ರಶ್ನೆಗಳು ಮೊದಲೂ ಇದ್ದವು. ಈಗಲೂ ಇವೆ. ಅವುಗಳಿಗೆ ಉತ್ತರ ಕಂಡುಕೊಳ್ಳುವ ಆಯ್ಕೆಯನ್ನು ಮಾತ್ರ ಓದುಗರಿಗೇ ಬಿಡುತ್ತಾರೆ.

ಶಾಸ್ತ್ರಿ ಅವರ ಕುರಿತು ಹಲವು ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಲು ಉಮೇಶ್‌ ಅವರು ಸಾಕಷ್ಟು ಶ್ರಮಿಸಿದ್ದು ಎದ್ದು ಕಾಣುತ್ತದೆ. ಶಾಸ್ತ್ರಿ ಅವರ ಸಂಬಂಧಿಗಳು ಮತ್ತು ಪತ್ರಕರ್ತ ಅನುಜ್‌ ಧರ್‌ ಅವರು ಸಂಗ್ರಹಿಸಿದ ದಾಖಲೆಗಳು, ಶಾಸ್ತ್ರಿ ಅವರ ಸಾವಿನ ವಿಷಯವಾಗಿ ಸಂಸತ್‌ನಲ್ಲಿ ನಡೆದ ಚರ್ಚೆಯ ವಿವರಗಳು, ಆಗಿನ ಪತ್ರಿಕೆಗಳಲ್ಲಿ ಪ್ರಕಟವಾದ ತನಿಖಾ ವರದಿಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಲೇಖಕರು ತಮ್ಮ ವಾದವನ್ನು ಮುಂದಿಡುತ್ತಾ ಹೋಗುತ್ತಾರೆ. ಶಾಸ್ತ್ರಿ ಅವರ ಸಾವಿನ ನಿಖರ ಕಾರಣ ಗೊತ್ತಾಗದಿದ್ದರೂ ಅವರ ಬದುಕಿನ ಕೆಲ ಅಧ್ಯಾಯಗಳು ಈ ಕೃತಿಯಿಂದ ಓದುಗರಿಗೆ ಸಿಕ್ಕುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT