ಗುರುವಾರ , ಮೇ 6, 2021
25 °C
ಪುಸ್ತಕ ಪರಿಚಯ

ಪಶ್ಚಿಮ ಘಟ್ಟ ಕುರಿತ ಅಪೂರ್ವ ಕೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಸರಕ್ಕೆ ಸಂಬಂಧಿಸಿದ ಬರಹ ಎಂಬ ವಿಷಯ ಪ್ರಸ್ತಾಪ ಆದಾಗಲೆಲ್ಲ ಕನ್ನಡದ ಮನಸ್ಸು ತಾನಾಗಿಯೇ ನೆನಪು ಮಾಡಿಕೊಳ್ಳುವ ಹೆಸರು ‘ನಾಗೇಶ ಹೆಗಡೆ’. ಪ್ರಜಾವಾಣಿ ಸೇರಿದಂತೆ ವಿವಿಧೆಡೆ ಪ್ರಕಟವಾಗುವ ಬರಹಗಳ ಮೂಲಕ ಕನ್ನಡದ ಓದುಗರ ಜೊತೆ ದಶಕಗಳಿಂದ ಒಡನಾಟ ಇರಿಸಿಕೊಂಡವರು ಹೆಗಡೆಯವರು. ಅವರ ಹುಟ್ಟೂರು ಪಶ್ಚಿಮ ಘಟ್ಟದ ಸೆರಗಿನಲ್ಲೇ ಇರುವುದಾಗಿರುವ ಕಾರಣದಿಂದಲೋ ಏನೋ ಅವರಿಗೆ ಈ ಘಟ್ಟ ಶ್ರೇಣಿಗಳ ಜೊತೆ ಹೊಕ್ಕಳ ಬಳ್ಳಿ ಸಂಬಂಧ. ಅಂತಹ ಗಾಢ ಸಂಬಂಧ ಇರುವುದು ಅವರ ಬರಹಗಳಲ್ಲಿ ವ್ಯಕ್ತವಾಗುತ್ತದೆ.

ಪಶ್ಚಿಮ ಘಟ್ಟಗಳ ವಿಸ್ಮಯದ ಬಗ್ಗೆ, ಅಲ್ಲಿನ ಸಂಪತ್ತನ್ನು ರಕ್ಷಿಸುವ ಕಳಕಳಿಯಿಂದ ಹೆಗಡೆಯವರು ಬರೆದಿರುವ ಪುಟ್ಟ ಪುಸ್ತಕ ‘ಅಪೂರ್ವ ಪಶ್ಚಿಮಘಟ್ಟ’. ಇದನ್ನು ಬೆಂಗಳೂರಿನ ಭೂಮಿ ಬುಕ್ಸ್‌ ಪ್ರಕಟಿಸಿದೆ. ‘ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜನಜಾಗೃತಿ ಮೂಡಿಸಲೆಂದು 1986ರ ಅಕ್ಟೋಬರ್‌ನಲ್ಲಿ ಪಾದಯಾತ್ರೆ ನಡೆಯಿತು. ಕೇರಳದಿಂದ ಆರಂಭಿಸಿ, ಗುಜರಾತ್‌ವರೆಗೆ ನಡೆದ ಪಾದಯಾತ್ರೆ ಅದಾಗಿತ್ತು. 800 ಕಿಲೋ ಮೀಟರ್‌ಗಳಷ್ಟು ದೂರ ಕ್ರಮಿಸಿದ ಈ ಪಾದಯಾತ್ರೆಯು ಘಟ್ಟಸಾಲುಗಳ ಹಳ್ಳಿ–ಪಟ್ಟಣಗಳ ಮೂಲಕ ಸಾಗಿತು. ಡಾ. ಶಿವರಾಮ ಕಾರಂತರಂತಹ ಹಿರಿಯರನ್ನು ತನ್ನತ್ತ ಸೆಳೆಯಿತು. ಆ ಪಾದಯಾತ್ರೆಯನ್ನು ನೆನಪಿಸಿಕೊಳ್ಳುತ್ತ, ಅದು ನಡೆದ ಮೂವತ್ತು ವರ್ಷಗಳಲ್ಲಿ ಏನೇನಾದವು ಎಂಬುದರ ಅವಲೋಕನ ಈ ಕೃತಿ’ ಎಂದು ಪುಸ್ತಕದ ಬಗ್ಗೆ ಹೇಳಲಾಗಿದೆ.

ಘಟ್ಟಗಳ ಕುರಿತು ಹೆಗಡೆಯವರ ಸೊಗಸಾದ ಬರಹದ ಜೊತೆಯಲ್ಲೇ ನುರಿತ ಛಾಯಾಚಿತ್ರಗ್ರಾಹಕರು ಕ್ಲಿಕ್ಕಿಸಿರುವ ಪಶ್ಚಿಮಘಟ್ಟ ಸಾಲುಗಳ ವರ್ಣಮಯ ಚಿತ್ರಗಳು ಈ ಪುಸ್ತಕದ ಜೊತೆ ಬರುವ ಬೋನಸ್‌ನಂತೆ ಇವೆ. 360 ಕೋಟಿ ವರ್ಷಗಳ ಇತಿಹಾಸ ಹೊಂದಿರುವ ಈ ಘಟ್ಟ ಸಾಲುಗಳಲ್ಲಿ ಈಗ ಅಳಿವಿನ ಅಂಚಿಗೆ ಸರಿದಿರುವ ಪ್ರಾಣಿ ಪ್ರಭೇದಗಳು, ಅಲ್ಲಿನ ಶೋಲಾ ಕಾಡುಗಳು, ಕಾಳಿಂಗ ಸರ್ಪ‍ಗಳು, ರಾಮಪತ್ರೆ ಜಡ್ಡಿ (ಅಥವಾ ಮಿರಿಸ್ಟಿಕಾ ಸ್ವಾಂಪ್‌) ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಇದರಲ್ಲಿ ಟಿಪ್ಪಣಿಗಳಿವೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವವರ ಪಾಲಿಗೆ ಅತ್ಯಂತ ಮಹತ್ವದ್ದಾದ ಅರಣ್ಯಹಕ್ಕು ಕಾಯ್ದೆಯ ಕುರಿತೂ ಕಿರುಟಿಪ್ಪಣಿಯೊಂದು ಈ ಕೃತಿಯಲ್ಲಿ ಇದೆ.

ಹೊರಗೆ ಧೋ ಎಂದು ಮಳೆ ಹುಯ್ಯುತ್ತಿರುವಾಗ, ಮನೆಯಲ್ಲಿ ಒಂದು ಕಪ್ ಕಾಫಿ ಮಾಡಿಕೊಂಡು ಓದಲು ಕುಳಿತರೆ, ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಡಬಹುದಾದ ಬೆಚ್ಚನೆಯ ಪುಸ್ತಕ ಇದು.

ಪುಟಗಳು: 52
ಬೆಲೆ: ₹ 50

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು