ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ರಕ್ಷಕರಿಂದ ತುಂಗಭದ್ರಾ ಸ್ವಚ್ಛತೆ

Last Updated 21 ಮಾರ್ಚ್ 2018, 7:30 IST
ಅಕ್ಷರ ಗಾತ್ರ

ಹೊಸಪೇಟೆ: ‘ತುಂಗಭದ್ರಾ ನದಿ ಸ್ವಚ್ಛವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಬೇಕು. ಇದರಿಂದ ಇಲ್ಲಿ ವಾಸಿಸುತ್ತಿರುವ ನೂರಾರು ಜಲಚರಗಳ ಸಂತತಿ ಹೆಚ್ಚಾಗಲು ಸಾಧ್ಯವಾಗುತ್ತದೆ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್‌. ಸುಗಾರ್‌ ತಿಳಿಸಿದರು.

ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲಾ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಶನಿವಾರ ಹಂಪಿ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ವಿರೂಪಾಪುರ ಗಡ್ಡಿಯ ಬಳಿಯಿಂದ ಹರಿಯುವ ತುಂಗಭದ್ರಾ ನದಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

‘ವನ್ಯಜೀವಿ ಕಾಯ್ದೆ ಪ್ರಕಾರ ಹುಲಿಗಳಿಗೆ ಎಷ್ಟು ಮಹತ್ವ ನೀಡಲಾಗುತ್ತದೆಯೋ ಅದೇ ರೀತಿ ತುಂಗಭದ್ರಾ ನದಿಯಲ್ಲಿರುವ ಜಲಚರಗಳ ಸಂರಕ್ಷಣೆಗೆ ಪ್ರಾಮುಖ್ಯ ನೀಡಲಾಗಿದೆ. ಅವುಗಳಿಗೆ ಯಾರಾದರೂ ತೊಂದರೆ ನೀಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

‘ಹಂಪಿಗೆ ಬರುವ ಪ್ರವಾಸಿಗರು, ಸ್ಥಳೀಯರು ನದಿ ಪಾತ್ರದಲ್ಲಿ ಪ್ಲಾಸ್ಟಿಕ್‌, ಆಹಾರ ಪದಾರ್ಥ, ಹಳೆಯ ಬಟ್ಟೆ ಸೇರಿದಂತೆ ಯಾವುದೇ ರಿತಿಯ ವಸ್ತುಗಳನ್ನು ಎಸೆಯಬಾರದು. ಇದರಿಂದ ನದಿ ನೀರು ಮಲಿನವಾಗಿ ಜಲಚರಗಳ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಮನುಷ್ಯರಂತೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಹಾಗಾಗಿ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದರು.

ಪಕ್ಷಿ ತಜ್ಞ ಸಮದ್‌ ಕೊಟ್ಟೂರು ಮಾತನಾಡಿ, ‘ತುಂಗಭದ್ರಾ ಜಲಾಶಯ ಎದುರಿನ ಸೇತುವೆಯಿಂದ ಕಂಪ್ಲಿ ವರೆಗಿನ 34 ಕಿ.ಮೀ ಪ್ರದೇಶವನ್ನು ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ನೀರು ನಾಯಿಗಳ ಜತೆಗೇ 120ಕ್ಕೂ ಹೆಚ್ಚು ಬಗೆಯ ಮೀನುಗಳು, ದೈತ್ಯ ಆಮೆ, ಮೊಸಳೆ, ಕಾಗೆ ಮೀನು, ಕಲ್ಲಾಮೆ ಸೇರಿದಂತೆ ಹಲವು ಬಗೆಯ ಜಲಚರಗಳಿವೆ. ಅವುಗಳನ್ನು ಸಂರಕ್ಷಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಹೇಳಿದರು.

‘ನದಿಯನ್ನು ಸ್ವಚ್ಛವಾಗಿ ಇಟ್ಟರೆ ಜಲಚರಗಳ ಸಂತಾನ ವೃದ್ಧಿಗೆ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಅವುಗಳ ಸಂತತಿ ನಶಿಸುತ್ತದೆ. ಹಾಗಾಗಿ ನದಿಗೆ ಯಾರು ಸಹ ಯಾವುದೇ ರೀತಿಯ ವಸ್ತುಗಳನ್ನು ಎಸೆಯಬಾರದು’ ಎಂದರು.

ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನೂರ್‌ ರೆಡ್ಡಿ, ಸಿ.ಸಿ.ಎಫ್ ವಿಜಯಲಾಲ್ ಮೀನಾ,ಡಿ.ಸಿ.ಎಫ್.ಗಳಾದ ತಕತ್ ಸಿಂಗ್ ರಣಾವತ್, ಎಸ್.ಪ್ರಭಾಕರನ್, ಎಸ್.ಎಫ್. ಶಂಕರ್, ಆರ್.ಎಫ್.ಒ.ಗಳಾದ ಟಿ.ಭಾಸ್ಕರ್, ನಾಗರಾಜ್, ಗೋವಿಂದರಾಜು ಉಪಸ್ಥಿತರಿದ್ದರು.

ಹಂಪಿ ಮಾರ್ಗದರ್ಶಿಗಳು, ರೆಸಾರ್ಟ್‌ಗಳ ಮಾಲೀಕರು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ, ರಾಷ್ಟ್ರೀಯ ಸೇವಾ ಯೋಜನೆ, ಗೃಹರಕ್ಷಕ ದಳದ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT