ನೂರೈವತ್ತು ಪುಟಗಳ ಸಂಗೀತ ಪಯಣ

7
ಮೊದಲ ಓದು

ನೂರೈವತ್ತು ಪುಟಗಳ ಸಂಗೀತ ಪಯಣ

Published:
Updated:

ಅದು 1940ರ ಇಸವಿ. ಮೈಸೂರಿನ ಶಿವರಾಂಪೇಟೆಯ ಚಿತ್ರ ಮಂದಿರವೊಂದರಲ್ಲಿ ಚಿತ್ರ ಪ್ರದರ್ಶನವಾಗುತ್ತಿದ್ದರೆ, ಐದು ವರ್ಷದ ಪುಟ್ಟ ಬಾಲಕನೊಬ್ಬ ಕಿವಿಯನ್ನು ಚಿತ್ರ ಮಂದಿರದ ಗೋಡೆಗೆ ಅಂಟಿಸಿ ಚಿತ್ರಗೀತೆಗಳನ್ನು ಆಲಿಸುತ್ತಿದ್ದ. ಬಡತನದ ಕಾರಣದಿಂದ ಚಿತ್ರ ಮಂದಿರದ ಒಳಗೆ ಹೋಗಲು ಆಗದಿದ್ದರೂ, ಗೋಡೆಗೆ ಕಿವಿಯಾನಿಸಿ ಚಿತ್ರ ವೀಕ್ಷಿಸಿದಷ್ಟೇ ಖುಷಿಪಡುತ್ತಿದ್ದ. ಚಿತ್ರದಲ್ಲಿ ಬಳಸುತ್ತಿದ್ದ ಸಂಗೀತ ಪರಿಕರ ಧ್ವನಿಯಿಂದಲೇ ಚಿತ್ರದ ಸನ್ನಿವೇಶವನ್ನು ಗ್ರಹಿಸುತ್ತಿದ್ದ. ಇಂಥಾ ಚಾಣಾಕ್ಷ ಬಾಲಕ ಮುಂದೆ ಪಿಟೀಲು, ವೀಣೆ ನುಡಿಸುವುದನ್ನು ಕಲಿತು, ಸಂಗೀತ ಕಛೇರಿಗಳನ್ನೂ ನೀಡುತ್ತಾನೆ. ಇದು ಸ್ವರ ಸಾಮ್ರಾಟ್‌ ರಾಜನ್‌ ಅವರ ಜೀವನ ಚರಿತ್ರೆಯ ಆರಂಭದ ನೆನಪಿನ ಪುಟಗಳು. 

ರಾಜನ್‌– ನಾಗೇಂದ್ರ ಅವರ ತಂದೆ ರಾಜಪ್ಪ ಅವರ ಸಂಗೀತ ಸಹಚರ್ಯದ ಅಪರೂಪದ ಮಾಹಿತಿಗಳು ಈ ಕೃತಿಯ ಆರಂಭದ ಪುಟಗಳಲ್ಲಿ ಸಿಗುತ್ತವೆ. ಸೋದರರಿಬ್ಬರೂ ಸಂಗೀತ ಕ್ಷೇತ್ರದ ಸಾಧಕರಾಗಲು ರಾಜಪ್ಪ ಅವರು ನೀಡಿದ ಪ್ರೋತ್ಸಾಹ, ಕೊಡುಗೆಯನ್ನು ಇಲ್ಲಿ ಸ್ಮರಿಸಲಾಗಿದೆ.

ರಾಜನ್‌ ಅವರ ತಂದೆ ರಾಜಪ್ಪ ಆ ಕಾಲದಲ್ಲಿ ಮೈಸೂರಿನಲ್ಲಿ ಬೀದಿ ನಾಟಕ, ಹರಿಕತೆ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದರು. ಮೂಕಿ ಸಿನಿಮಾಗಳಿಗೆ ವೇದಿಕೆಯಲ್ಲಿಯೇ ಸಂಗೀತ ಸಂಯೋಜನೆ ಮಾಡುವುದರಲ್ಲಿ ಹೆಸರಾಗಿದ್ದರು. ಮೈಸೂರಿನಲ್ಲಿ ನಡೆಯುತ್ತಿದ್ದ ಇಂಗ್ಲಿಷ್‌ ನಾಟಕಗಳಿಗೂ ಸಂಗೀತ ಸಂಯೋಜನೆ ಮಾಡುತ್ತಿದ್ದರು. ಹೀಗೆ ಅಪ್ಪನ ಸಂಗೀತದ ತಾಲೀಮುಗಳನ್ನು ನೋಡುತ್ತಾ ಬೆಳೆದ ಮಕ್ಕಳಿಗೆ ಸಂಗೀತವನ್ನು ಆವಾಹಿಸಿಕೊಳ್ಳುವುದು ಕಷ್ಟವಾಗಲಿಲ್ಲ. ಮುಂದೆ ಸುಮಾರು ಐದು ದಶಕಗಳ ಕಾಲ ಸಹೋದರರಿಬ್ಬರು ಜೊತೆಗೂಡಿ ಕನ್ನಡ ಚಿತ್ರರಂಗವನ್ನು ಆಳುತ್ತಾರೆ. 

ರಘುನಂದನ್‌ ಶ್ರೀನಿವಾಸನ್‌ ಅವರು ಇಂಗ್ಲಿಷ್‌ನಲ್ಲಿ ಬರೆದಿರುವ ‘ಮೆಲೋಡಿ ಕಿಂಗ್ಸ್‌ ರಾಜನ್‌ ನಾಗೇಂದ್ರ’, ಪುಸ್ತಕವನ್ನು ‘ಸ್ವರ ಸಾಮ್ರಾಟ್‌ ರಾಜನ್‌ ನಾಗೇಂದ್ರ’ ಹೆಸರಿನಲ್ಲಿ ಸ್ಮಿತಾ ಕಾರ್ತಿಕ್‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 

ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ದಾಖಲೆಯ ಸಂಗೀತ ಸಂಯೋಜನೆ, ಪ್ರಯೋಗಗಳನ್ನು ಮಾಡಿದ ಈ ಸೋದರ ಜೋಡಿಯ ಸಂಗೀತ ಪಯಣವನ್ನು ಕೇವಲ ನೂರೈವತ್ತು ಪುಟಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಮೊದಲ ಸಂಗೀತ ಸಂಯೋಜನೆಯಿಂದ ಮೊದಲ್ಗೊಂಡು ಕೊನೆಯ ಸಂಯೋಜನೆಯವರೆಗಿನ ಚಿತ್ರಗಳ ಮಾಹಿತಿ ಈ ಪುಸ್ತಕದಲ್ಲಿದೆ. ಓದುತ್ತಾ ಹೋದಂತೆ ಅನೇಕ ಚಿತ್ರಗಳು, ಹಾಡಿನ ಸಾಲುಗಳು ಸಿಗುತ್ತವೆ. ಭಾರತದ ಚಿತ್ರರಂಗದ ದಿಗ್ಗಜರು ಬಂದು ಹೋಗುತ್ತಾರೆ. ರಾಜನ್‌ ನಾಗೇಂದ್ರ ಸಂಯೋಜನೆಯ ಹಾಡುಗಳಿಗೆ ಧ್ವನಿಯಾದ ಲತಾ ಮಂಗೇಷ್ಕರ್‌, ಎಸ್‌. ಜಾನಕಿ, ಎಸ್‌.ಬಿ. ಬಾಲಸುಬ್ರಹ್ಮಣ್ಯಂ, ಪಿ.ಬಿ. ಶ್ರೀನಿವಾಸ್‌, ಅನುರಾಧಾ ಪೊದ್ವಾಳ್‌ ಇನ್ನೂ ಅನೇಕರು ದರ್ಶನ ನೀಡುತ್ತಾರೆ.

ಈ ಕೃತಿಯಲ್ಲಿ ರಾಜನ್‌– ನಾಗೇಂದ್ರ ಜೋಡಿ ಭಾರತೀಯ ಚಿತ್ರರಂಗದ ಹಲವು ದಿಗ್ಗಜರ ಜೊತೆಗಿರುವ ಅಪರೂಪದ ಕಪ್ಪು ಬಿಳುಪು ಛಾಯಾಚಿತ್ರಗಳಿವೆ. ಅದರೆ, ಅವುಗಳ ಗುಣಮಟ್ಟ ಉತ್ತಮವಾಗಿಲ್ಲ. ಚಿತ್ರಗಳನ್ನು ಇನ್ನಷ್ಟು ದೊಡ್ಡ ಗಾತ್ರದಲ್ಲಿ ಮುದ್ರಿಸಬಹುದಿತ್ತು.

ಸ್ವರ ಸಾಮ್ರಾಟ್ ರಾಜನ್ ನಾಗೇಂದ್ರ
ಅನುವಾದ: ಸ್ಮಿತಾ ಕಾರ್ತಿಕ್
ಪ್ರಕಾಶನ: ಸಪ್ನಾ ಇಂಕ್
ಪುಟ: 162 
ಬೆಲೆ: ₹200

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !