ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂದೋಲನ ರೂವಾರಿ

Last Updated 15 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

‘ಮೈಸೂರಿನಲ್ಲಿ ಓಡಾಡುವ ಸಂದರ್ಭದಲ್ಲಿ ಆಂದೋಲನ ಹೆಸರಿನ ಬಸ್‌ನಿಲ್ದಾಣಗಳನ್ನು ನೋಡಬಹುದು. ತರಕಾರಿ ಮಾರುಕಟ್ಟೆ ಬಳಿ ಕುಡಿಯುವ ನೀರಿಗಾಗಿ ಬೋರ್‌ವೆಲ್ ಹಾಕಿಸಿದ್ದು ಯಾರು ಎಂದು ಕೇಳಿದರೆ ಅಲ್ಲಿಯ ಜನ ಕೋಟಿ ಅವರ ಹೆಸರು ಹೇಳುತ್ತಾರೆ. ‘ನಾನು ಆಂದೋಲನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ’ ಎಂಬುದನ್ನು ವಿಶ್ವವಿದ್ಯಾಲಯದ ಪದವಿ ಪಡೆದದ್ದಕ್ಕಿಂತ ಹೆಚ್ಚು ಹೆಮ್ಮೆಯಿಂದ ಹೇಳಿಕೊಳ್ಳುವ ಪತ್ರಕರ್ತರು ರಾಜಧಾನಿ ಸೇರಿದಂತೆ ನಾಡಿನ ಹಲವಾರು ಕಡೆ ಇದ್ದಾರೆ’.

ಕಳೆದ ವರ್ಷ ನಿಧನರಾದ ಪತ್ರಕರ್ತ ರಾಜಶೇಖರ ಕೋಟಿ ಅವರ ಕುರಿತ ‘ಕೋಟಿ ಓದುಗರ ಆಂದೋಲನ’ ಸಂಪಾದಿತ ಲೇಖನಗಳ ಸಂಗ್ರಹ ಕೃತಿಯ ಪ್ರಕಾಶಕರ ನುಡಿಯಲ್ಲಿ ಬರುವ ಈ ಮಾತುಗಳು ರಾಜಶೇಖರ ಕೋಟಿ ಅವರು ಪತ್ರಿಕೋದ್ಯಮ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಮಾಡಿದ ಸಾಧನೆಯನ್ನು ಕಟ್ಟಿಕೊಡುತ್ತವೆ.

ಪ್ರಾದೇಶಿಕ ಪತ್ರಿಕೆಗಳ ಲೋಕದಲ್ಲಿ ಬೆಳಕಿನ ಹೊಸ ಕಿರಣ ಮೂಡಿಸಿದ ಕೋಟಿ ಅವರನ್ನು ಸಮಾಜದ ಎಲ್ಲ ವರ್ಗದವರು ಪೂರ್ವಗ್ರಹರಹಿತರಾಗಿ ಹೇಗೆ ಕಾಣುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಈ ಕೃತಿಯಲ್ಲಿ ವಿಭಿನ್ನ ಬಗೆಯ ಲೇಖನಗಳು ಇವೆ. ವೃತ್ತಿದ್ವೇಷ ಮರೆತು ಮೈಸೂರಿನ ಪತ್ರಕರ್ತರು ಈ ಕೃತಿ ಸಂಪಾದಿಸಿದ್ದಾರೆ. ಕೋಟಿಯವರನ್ನು ಹತ್ತಿರದಿಂದ ಬಲ್ಲ, ಆಂದೋಲನ ಪತ್ರಿಕೆಯ ನೆರಳಿನಲ್ಲೇ ಬೆಳೆದ ಮತ್ತು ಅವರ ನೇರ ಪ್ರಭಾವಕ್ಕೆ ಒಳಗಾದವರ ಸಣ್ಣಪುಟ್ಟ ಲೇಖನಗಳ ಸಂಗ್ರಹ ಇದು. ಕಣ್ಣಾಡಿಸುತ್ತ ಹೋದರೆ ಒಂದೇ ಓದಿಗೆ ಮಡಚಿ ಇಡಬಲ್ಲ ಪುಸ್ತಕ, ಭಾವನೆಗಳನ್ನು ಅರಳಿಸಬಲ್ಲ ಮತ್ತು ಹೋರಾಟದ ಕಿಚ್ಚು ಹಚ್ಚಬಲ್ಲ ಕಿಡಿಯನ್ನು ಆಂತರ್ಯದಲ್ಲಿ ಒಳಗೊಂಡಿದೆ. ಪತ್ರಿಕಾ ವೃತ್ತಿಗೆ ಪ್ರವೇಶಿಸುವ ಅಥವಾ ಪತ್ರಿಕೋದ್ಯಮ ಕಲಿಯುವವರು ಸಂಪಾದಕನೊಬ್ಬನ ಬೆವರ ಹನಿಗಳಿಗೆ ಬೆಲೆ ಸಿಕ್ಕಿದ ಕಥೆಯನ್ನೂ ಇದರಿಂದ ಹೆಕ್ಕಿ ತೆಗೆಯಬಹುದು.

ಓದುಗರ ನೋಟ, ಒಡನಾಟ, ಹೋರಾಟ, ಹಲವು ನೋಟ, ಮಾಧ್ಯಮ ನೋಟ, ಬಾಳಾಟ ಮುಂತಾದ ವಿಭಿನ್ನ

ನೆಲೆಯ ಲೇಖನಗಳ ಕೊನೆಯಲ್ಲಿ ಕೋಟಿಯವರು ಆಂದೋಲನದಲ್ಲಿ ಬರೆಯುತ್ತಿದ್ದ ‘ಇದ್ದದ್ದು ಇದ್ಹಾಂಗ’ ಅಂಕಣ ಬರಹಗಳ ಆಯ್ದ ಲೇಖನಗಳೂ ಇವೆ.ಇದೆಲ್ಲದಕ್ಕೆ ಮೆರುಗು ನೀಡುವ, ಅಪರೂಪದ ಚಿತ್ರಗಳ ಸಂಗ್ರಹವೂ ಇದೆ.

ಓದುಗರ ನೋಟ ವಿಭಾಗದಲ್ಲಿ ಕವಿತೆಯ ರೂಪದಲ್ಲೂ ಕೆಲವರು ಕೋಟಿ ಅವರ ವ್ಯಕ್ತಿತ್ವ ಕಟ್ಟಿಕೊಟ್ಟಿದ್ದಾರೆ.

ನಾಡಿನ ಹಿರಿಯ ಸಾಹಿತಿಗಳು, ಹೋರಾಟಗಾರರು, ಚಿಂತಕರು, ರಂಗಕರ್ಮಿಗಳು ಮತ್ತು ರಾಜಕಾರಣಿಗಳ ಲೇಖನಗಳು ಇವೆ. ಮಾಧ್ಯಮ ನೋಟದಲ್ಲಿ ವೃತ್ತಿಪರ ಮತ್ತು ಹವ್ಯಾಸಿ ಪತ್ರಕರ್ತರು, ಛಾಯಾಗ್ರಾಹಕರು ಕೋಟಿ ಅವರನ್ನು ನೆನೆದುಕೊಂಡ ರೀತಿ ಅಪ್ಯಾಯಮಾನವಾಗಿದೆ.

ಕೋಟಿ ಓದುಗರ ಆಂದೋಲನ
ಸಂ: ಅಂಶಿ ಪ್ರಸನ್ನ ಕುಮಾರ್‌, ಎಸ್‌.ತುಕಾರಾಂ. ಪಿ.ಓಂಕಾರ್‌
ಪ್ರ: ಮೈಸೂರು ಜಿಲ್ಲಾ ಪತ್ರಕರ್ತರ ಸಂಘ
ಪು: 480
ಬೆಲೆ: ₹ 350

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT