ಮಂಗಳವಾರ, ಸೆಪ್ಟೆಂಬರ್ 22, 2020
26 °C

ಕಪಾಟು: ಪುಸ್ತಕ ಪರಿಚಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೂಷನ್ ಅವರ ಆಯ್ದ ಹತ್ತು ಚೀನಿ ಕಥೆಗಳು ಎಂಬ ಸಂಕಲನವನ್ನು ಲೇಖಕರಾಗಿ ಡಾ. ವಿಜಯಾ ಸುಬ್ಬರಾಜ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದರಲ್ಲಿ ಲೂಷನ್ ಅವರು ಒಂಟಿತನ, ಹತಾಶೆ, ನೋವುಗಳನ್ನು ಮತ್ತೆ ಕೆಲವು ಸಂದರ್ಭಗಳಲ್ಲಿ ತಮ್ಮ ಬದುಕಿನ ಅನುಭವದ ಕ್ಷಣಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಇದರ ಜತೆಗೆ ತಾವು ಭೇಟಿಯಾಗುತ್ತಿದ್ದ ವ್ಯಕ್ತಿಗಳನ್ನು ಕತೆಯಾಗಿಸಲು ಪ್ರಯತ್ನ ಮಾಡಿದ್ದಾರೆ. ಹಾಗೇಯೆ ಈ ಬರಹದಲ್ಲಿ ಸರಳತೆ, ವಾಸ್ತವತೆ ಕಾಣಬಹುದಾಗಿದೆ.

ಈ ಸಂಕಲನದಲ್ಲಿರುವ ‘ನಾಳೆ’ ಎಂಬ ಕಥೆಯು ಓದುಗರನ್ನು ಆಪ್ತವಾಗಿ ತಟ್ಟುತ್ತದೆ.

ಚೀನಿ ಕಥೆಗಳ ಅನುವಾದ ಇದಾಗಿರುವುದರಿಂದ ಅಲ್ಲಿನ ಬದುಕು, ಸಂಸ್ಕೃತಿಯ ಇಣುಕು ನೋಟವು ಇದರಲ್ಲಿ ಓದುಗರಿಗೆ ದಕ್ಕುತ್ತದೆ.

ಲೂಷನ್ ಅವರ ಆಯ್ದ 10 ಚೀನಿ ಕಥೆಗಳು
ಕನ್ನಡಕ್ಕೆ: ಡಾ. ವಿಜಯಾ ಸುಬ್ಬರಾಜ್
ಪ್ರ: ಸೃಷ್ಟಿ ಪಬ್ಲಿಕೇಷನ್, ಬೆಂಗಳೂರು
ಮೊ: 98450 96668

**

‘ಗಗ್ಗರಿ ನುಡಿಸುವ ಬೆರಳು’ ಹೆಸರೇ ಸೂಚಿಸುವಂತೆ, ಮ್ಯಾಸಬೇಡರ ಸಮುದಾಯ ಒಳಗೊಂಡಂತೆ ತಳಸಮುದಾಯಗಳ ಹಿಂದಿನ ನೂರಾರು ಬೆರಳುಗಳು ಬದುಕಿಗಾಗಿ ನುಡಿಸಿದ ನಾದವನ್ನು ಕವಿತೆಗಳ ಮೂಲಕ ಆರಡಿಮಲ್ಲಯ್ಯ ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

ಮನುಷ್ಯರ ಸಾಮಾಜಿಕ ಹಾಗೂ ಕೌಟುಂಬಿಕ ಜೀವನದ ಬದುಕಿನಲ್ಲಿ ಹುಟ್ಟುಹಾಕಿರುವ ಮಾನಸಿಕ ಹಾಗೂ ದೈಹಿಕ ಹಿಂಸೆ, ತಲ್ಲಣ ಜತೆಗೆ ಶಾಂತಿಯನ್ನು ಈ ರೂಪಕದಲ್ಲಿ ನೀಡಿದ್ದಾರೆ. ಕಾಡು ಮತ್ತು ನಾಡು ನಡುವಿನ ಸೇತುವೆಯಂತೆ ಬುಡಕಟ್ಟು ತಾಯಂದಿರ ದುಗುಡ ದುಮ್ಮಾನಗಳನ್ನು ಪಕ್ಕದಲ್ಲಿ ನಿಲ್ಲಿಸುವ ಮೂಲಕ ನಾಡೊಳಗಿನ ತಾಯಂದಿರ ಸಂಘರ್ಷಗಳನ್ನು ಇಲ್ಲಿ ದಾಖಲಿಸಿದ್ದಾರೆ. 

ಕ್ರಿಯಾಶೀಲತೆ ಹಾಗೂ ದುರಂತಗಳ ಮೂಲಕ ಬದುಕನ್ನು ಹೇಗೆ ವ್ಯಾಖ್ಯಾನಿಸಬಹುದು ಎಂಬ ಹೊಸ ತಲೆಮಾರಿನ ಕಾವ್ಯದ ನಡಿಗೆಯಲ್ಲಿ ಆರಡಿಮಲ್ಲಯ್ಯ ಅವರು ಆರೋಗ್ಯಪೂರ್ಣ ಹೆಜ್ಜೆ ಹಾಕಿದ್ದಾರೆ.

ಗಗ್ಗರಿ ನುಡಿಸುವ ಬೆರಳು
ಲೇ:
ಪಿ.ಆರಡಿಮಲ್ಲಯ್ಯ ಕಟ್ಟೇರ
ಪ್ರ: ವಂಶಿ ಪಬ್ಲಿಕೇಷನ್ಸ್‌
ಮೊ: 9482370430

**

ಶೀರ್ಷಿಕೆಯೇ ತಿಳಿಸುವಂತೆ ನಮ್ಮ ಸುತ್ತಲಿನ ಹೊಲಸುತನವನ್ನು ವಿವರಿಸುತ್ತಾ, ವಾಸ್ತವ ಸ್ಥಿತಿಯನ್ನು ಕಟ್ಟಿಕೊಡುವ ಕಾವ್ಯ ಸಂಕಲನ  ’ನೆಲದ ಹುಣ್ಣು’. ಬದಲಾದ ಕಾಲಗಟ್ಟದಲ್ಲಿ ಮನುಷ್ಯನ ವರ್ತನೆ ಧೂರ್ತತನವು ಭಿನ್ನ ಸ್ವರೂಪ ತಾಳುತ್ತಿರುವುದು ಮನುಕುಲಕ್ಕೆ ಸಂಕಟ ತಂದಿದೆ. ಈ ಸಂಕಟಗಳು ದೂರ ಸರಿದು ನೆಲದ ಹುಣ್ಣು ಮಾಯವಾಗುತ್ತೆ ಎಂಬ ಆಶಯದಲ್ಲಿ ಪದ್ಯದ ಸಾಲುಗಳನ್ನು ಹೆಣೆದಿದ್ದಾರೆ. 

ಕೆಲವು ಪದ್ಯದಲ್ಲಿ ಪದ ಕಟ್ಟುವ ಅಬ್ಬರ ಮತ್ತು ಹುಮ್ಮಸ್ಸಿನಲ್ಲಿ ಅದರ ಭಾವ ಸ್ವಲ್ಪ ಮಟ್ಟಿಗೆ ಕಳೆದೊಕೊಂಡ ಹಾಗೆ ಭಾಸವಾಗುತ್ತದೆ. ಕೆಲವು ಪದಗಳು ಕಟುವಾಗಿದ್ದು ಸಾಮಾನ್ಯರ ನಿಲುವಿಗೆ ಸಿಗದಂತಿದೆ. ತಮ್ಮ ಕಾವ್ಯದಲ್ಲಿ ಸರಳತೆಯನ್ನು ಕಂಡಿದ್ದಲ್ಲಿ ಮತ್ತಷ್ಟು ಯಶಸ್ವಿಯಾಗಿ ಮೂಡಿಬರುತ್ತಿದ್ದವು.

ನೆಲದ ಹುಣ್ಣು
ಲೇ:
ಪ್ರವೀಣ್‌ ಬಿ.ಎಂ
ಪ್ರ: ಸಂವಹನ ಪ್ರಕಾಶನ, ಮೈಸೂರು
ಮೊ: 9902639593

**

ಲೇಖಕ ಅಜಕ್ಕಳ ಗಿರೀಶ ಭಟ್ ಅವರು ಭಾಷೆ, ಸಾಹಿತ್ಯ ಮತ್ತು ಕಲೆಗೆ ಸಂಬಂಧಿಸಿ

ಬರೆದ ಲೇಖನಗಳ ಗುಚ್ಛವೇ ಈ ಕೃತಿ.

ಇದರಲ್ಲಿ ಹದಿನೈದು ಲೇಖನಗಳಿದ್ದು, ಕನ್ನಡ ಜಾಗೃತಿ: ಹೊಸ ಸವಾಲುಗಳ ಬಗ್ಗೆ ಲೇಖಕರು ವಿಷದವಾಗಿ ಚರ್ಚಿಸಿದ್ದಾರೆ. ಕನ್ನಡ ಉಳಿಸುವ ನಿಟ್ಟಿನಲ್ಲಿ ಸಾಮಾನ್ಯ ಕನ್ನಡಿಗರ ಜೊತೆ, ಕನ್ನಡದ ಸಂಘ– ಸಂಸ್ಥೆಗಳು, ಸರ್ಕಾರ ಹಾಗೂ ವಿಶ್ವವಿದ್ಯಾನಿಲಯಗಳ ಜವಾಬ್ದಾರಿ ದೊಡ್ಡದಿದೆ ಎನ್ನುವುದನ್ನು ಇಲ್ಲಿರುವ ಲೇಖನಗಳು ಪ್ರತಿಪಾದಿಸುತ್ತವೆ.

ಕನ್ನಡ ಉಳಿವಿನ ಮಹತ್ವವನ್ನು ಪ್ರತಿಪಾದಿಸುತ್ತಲೇ, ಇಂಗ್ಲಿಷ್‌ ಕಲಿಕೆ ನಮಗೆ ಕಷ್ಟವಾಗಬಾರದು ಎಂಬ ನಿಲುವನ್ನೂ ತಾಳುತ್ತಾರೆ ಲೇಖಕರು. ಜನಪ್ರಿಯ ಸಾಹಿತ್ಯದ ಬಗ್ಗೆಯೂ ಈ ಕೃತಿಯಲ್ಲಿ ಚರ್ಚೆ ಮಾಡಲಾಗಿದೆ. ಪಾ.ವೆಂ.ಆಚಾರ್ಯರ ಗದ್ಯ ಬರಹಗಳ ಕುರಿತ ಲೇಖನ ಸೊಗಸಾಗಿದೆ.

ಹಿತಸಾಹಿತ್ಯ
ಲೇ: ಅಜಕ್ಕಳ ಗಿರೀಶ ಭಟ್
ಪ್ರ: ಚಿಂತನ ಬಯಲು‌
ಮೊ: 99014 13974

**

ಬದುಕಿನ ನೈಜ ಸಂಗತಿಗಳನ್ನು ತಿಳಿಸುವ, ಅರಗಿಸಿಕೊಳ್ಳಲಾಗದ ’ಅವಳ’ ಕೆಲವು ಕಟ್ಟುಪಾಡುಗಳ ಪ್ರಶ್ನೆಗಳ ಸುತ್ತ ’ಧರಣಿ’ ಚುಟುಕು ಕಾವ್ಯಗಳನ್ನು ಡಾ.ಧರಣೀದೇವಿ ಮಾಲಗತ್ತಿ ಅವರು ಕಟ್ಟಿಕೊಟ್ಟಿದ್ದಾರೆ. ಬದುಕಿನ ಸಾರ ತಿಳಿಸುವ ಸಾಲುಗಳು, ಸೋಲನ್ನುಂಡ ಕ್ಷಣಗಳು, ಆತ್ಮಸ್ಥೈರ್ಯ ಹೀಗೆ ಹಲವು ವಿಚಾರಗಳನ್ನು ಸಾಮಾನ್ಯರಿಗೂ ಅರ್ಥೈಸುವಂತಹ ಪದಗಳಿಂದ ಪೋಣಿಸಿದ್ದಾರೆ.

ಮುಟ್ಟು ಸೂತಕವೆಂಬಂತೆ ಬಿಂಬಿಸುವುದು, ಶಾಸ್ತ್ರ–ಸಂಪ್ರದಾಯ, ಜಾತಿ ನಿಂದನೆ, ಗಂಡು ಹೆಣ್ಣಿನ ನಡುವಿನ ತಾರತಮ್ಯ ಹೀಗೆ ಅನೇಕ ಧೋರಣೆಗಳ ಬಗ್ಗೆ ದನಿ ಎತ್ತುವುದು ಘೋರ ಅಪರಾಧವೆಂಬಂತೆ ಕೆಲವು ಸಮಾಜಘಾತುಕ ಶಕ್ತಿಗಳು ಬಿಂಬಿಸಿವೆ. ಜನಸಾಮಾನ್ಯರು ಇದನ್ನು ಪ್ರಶ್ನಿಸುವುದಿರಲಿ ಯೋಚನೆಯೂ ಸಹ ಮಾಡುವಂತಿಲ್ಲ. ಇಂತಹ ಹಲವು ಅಂಶಗಳನ್ನು ತಮ್ಮ ಅಕ್ಷರದ ಗುಚ್ಛದಲ್ಲಿ ವರ್ಣಿಸಿರುವ ಧರಣೀದೇವಿ ಮಾಲಗತ್ತಿ ಅವರು ಅಧಿಕಾರದ ದರ್ಪವಿಲ್ಲದೆ, ತಾವು ಅನುಭವಿಸಿದ ನೈಜ ಸಂಗತಿಗಳನ್ನು ಬಿಂಬಿಸಿರುವುದು ಶ್ಲಾಘನೀಯ. ಸೂಕ್ಷ್ಮ ಅಂಶಗಳಿರುವ ಪದ್ಯವನ್ನು ಒಂದು ಪ್ಯಾರಾದಲ್ಲಿ ಅಂತಿಮಗೊಳಿಸುವ ಬದಲು ಇನ್ನಷ್ಟು ವಿಸ್ತಾರವಾಗಿ ತುಂಬಿದ್ದಲ್ಲಿ ಬೇರೆ ತಿರುವನ್ನು ಪಡೆಯುತ್ತಿದ್ದವು.

ಧರಣಿ (ಚುಟುಕು ಕವಿತೆಗಳು)
ಲೇ:
ಡಾ. ಧರಣೀದೇವಿ ಮಾಲಗತ್ತಿ
ಪ್ರ: ವೈಧ್ಯವಾರ್ತಾ ಪ್ರಕಾಶನ
ಮೊ: 94484 02092

**

ಸೃಷ್ಟಿಗೆ ಮೂಲ ಘಟಕಗಳಾಗಿ ಕಂಡುಕೊಂಡ ಪಂಚ ಮಹಾಭೂತಗಳ ಪಂಕ್ತಿಯಲ್ಲಿ ಭೂಮಿಗೆ ಮೊದಲ ಸ್ಥಾನವಾದರೆ, ಜಲಕ್ಕೆ ಮೂರನೇ ಸ್ಥಾನ. ಇಂತಹ

ಜಲದ ಮಹತ್ವವನ್ನು ತಿಳಿಹೇಳುವ ಕೃತಿಯೇ ಟಿ.ಎಂ.ಶಿವಶಂಕರ್‌ ಅವರ ‘ಬಾಯಾರಿದ ಬೆಂಗಳೂರು’.

ಈ ಪುಸ್ತಕದಲ್ಲಿ ಲೇಖಕರು ಬೆಂಗಳೂರಿನ ಜಲಮೂಲದ ಇತಿಹಾಸವನ್ನು ಮತ್ತು ನಗರ ಬೆಳೆದು ಬಂದ ಬಗೆಯನ್ನು ವಿಸ್ತಾರವಾಗಿ ಕಟ್ಟಿಕೊಟ್ಟಿದ್ದಾರೆ.

ಬೆಂಗಳೂರಿನ ಕೆರೆಗಳ ಐತಿಹಾಸಿಕ ಹಿನ್ನೆಲೆಯನ್ನು, ನೈಸರ್ಗಿಕವಾಗಿ ಆ ಕೆರೆಗಳು ಹೊಂದಿರುವ ಸರಣಿ ಸಂಪರ್ಕವನ್ನು ಲೇಖಕರು ಸಾದ್ಯಂತವಾಗಿ ವಿವರಿಸಿದ್ದಾರೆ.

ಈ ಪುಸ್ತಕದಲ್ಲಿ ಒಟ್ಟು 20 ಅಧ್ಯಾಯಗಳಿವೆ. ಅದರಲ್ಲಿ ‘ಸದಾ ಬಾಯಾರಿದ ನಗರ’ ಅಧ್ಯಾಯವು ಓದುಗರಲ್ಲಿ ನೀರಿನ ಮಹತ್ವದ ಅರಿವು ಮೂಡಿಸುವ ಪ್ರಯತ್ನ ಮಾಡಿದೆ.

ಜಲಸಾಕ್ಷರತೆ ಮೂಡಿಸಲು ಈ ಪುಸ್ತಕವು ಒಂದು ಕೈಪಿಡಿಯಂತಿದೆ. ಮುಂದಿನ ದಿನಗಳಲ್ಲಿ ಎದುರಾಗುವ ಜಲಕ್ಷಾಮದ ಭೀಕರತೆಯ ಎಚ್ಚರಿಕೆ ಗಂಟೆಯನ್ನು ಮೊಳಗಿಸುತ್ತದೆ.

ಬಾಯಾರಿದ ಬೆಂಗಳೂರು
ಲೇ: ಟಿ.ಎಂ.ಶಿವಶಂಕರ್
ಪ್ರ: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು.
ದೂರವಾಣಿ: 22107704

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.