ಭಾನುವಾರ, ಆಗಸ್ಟ್ 1, 2021
21 °C

ಎದ್ದುಕಾಣುವ ಪ್ರಬಂಧದ ಮನೋಲಹರಿ

ಎಸ್. ದಿವಾಕರ್ Updated:

ಅಕ್ಷರ ಗಾತ್ರ : | |

Prajavani

ಸ್ಮಿತಾ ಅಮೃತರಾಜ್ ಅವರ ಈ ಲಲಿತ ಪ್ರಬಂಧಗಳನ್ನು ಓದುತ್ತಿರುವಾಗ (ಮುನ್ನುಡಿ ಬರೆದಿರುವ ಪ್ರಸಾದ್ ರಕ್ಷಿದಿ ಇವುಗಳನ್ನು ಹಾಗೆಂದೇ ಕರೆದಿದ್ದಾರೆ) ನನಗೆ ಈ ಸಾಹಿತ್ಯ ಪ್ರಕಾರದ ಕುರಿತೇ ತುಸು ಯೋಚಿಸುವಂತಾಯಿತು. ಕಳೆದ ಕೆಲವು ವರ್ಷಗಳಲ್ಲಿ, ಲಲಿತ ಪ್ರಬಂಧದ ಹೆಸರಿನಲ್ಲಿ ಪ್ರಕಟವಾಗಿರುವ ಬರಹಗಳನ್ನು ನೋಡಿ: ನೆನಪುಗಳ ಮೆರವಣಿಗೆ, ಪ್ರಕೃತಿ ವರ್ಣನೆ, ಉದ್ದೇಶರಹಿತ ಜಿಜ್ಞಾಸೆ, ವ್ಯಕ್ತಿಚಿತ್ರ, ಹಾಸ್ಯೋದ್ದೀಪಕ ಹರಟೆ, ಇತ್ಯಾದಿ. ಆದರೆ, ಇವುಗಳ ಅಂಶಗಳು ಲಲಿತ ಪ್ರಬಂಧಗಳಲ್ಲಿ ಸೇರಿರಬಹುದಾದರೂ ಇವೇ ಲಲಿತ ಪ್ರಬಂಧಗಳಾಗುವುದಿಲ್ಲ. ಇಷ್ಟಕ್ಕೂ ಪ್ರಬಂಧ ಎಂದರೇನು? ಪ್ರಬಂಧಕಾರರು ಇತರ ಪ್ರಕಾರಗಳ ಲೇಖಕರು ಬರೆಯಲಾಗದ ಏನನ್ನು ಬರೆಯುತ್ತಾರೆ?

ಪ್ರಬಂಧಕಾರರಿಗೆ ಮುಖ್ಯವಾಗಿ ಒಂದು ವಸ್ತು ಅಥವಾ ವಿಷಯ ಬೇಕೇಬೇಕು. ಆ ವಸ್ತುವಿನ ಕುರಿತು ಅವರಿಗೆ ಏನೇನು ಗೊತ್ತಿದೆಯೋ, ಏನೇನು ಹೊಳೆಯುತ್ತದೆಯೋ ಅದೆಲ್ಲವೂ ಅವರ ಮನೋಲಹರಿಯ ಭಾಗವಾಗಬೇಕು. ಅಂದರೆ ಪ್ರಬಂಧ ಬರೆಯುವ ಕೆಲವರಿಗಾದರೂ ಕೆಲವು ವಿಷಯಗಳ ಬಗ್ಗೆ ತಮ್ಮದೇ ಆದ ವಿಚಾರವೋ ದೃಷ್ಟಿಕೋನವೋ ಇರಬಹುದಲ್ಲವೇ? ಅದಕ್ಕೂ ಅವರ ವ್ಯಕ್ತಿತ್ವಕ್ಕೂ ನಿಕಟವಾದ ಸಂಬಂಧವುಂಟು. ಪ್ರಬಂಧಕಾರರಾದವರು ಯಾವುದಾದರೊಂದು ವಿಷಯದ ಬಗ್ಗೆ ಬರೆಯಬೇಕೆಂದು ನಿರ್ಧರಿಸಿದಾಗಲೇ ಆ ವಿಷಯದೊಡನೆ ಅವರ ನಿಲುವೂ ಸೇರಿಕೊಳ್ಳುತ್ತದೆ.

ಲಲಿತ ಪ್ರಬಂಧವೆನ್ನುವುದು ವೈಯಕ್ತಿಕ ವಿಚಾರವಿಲಾಸವನ್ನು ಪ್ರತಿಫಲಿಸುವ, ಅಷ್ಟೇನೂ ದೀರ್ಘವಲ್ಲದ, ಅನೌಪಚಾರಿಕ ಸಾಹಿತ್ಯ ಪ್ರಕಾರ. ಅದಕ್ಕೆ ಅಷ್ಟೇನೂ ಅವಸರವಿಲ್ಲದ, ಲೋಕಾಭಿರಾಮ ಎನ್ನಬಹುದಾದ ಧಾಟಿಯಿರಬೇಕು. ಒಂದು ವ್ಯಕ್ತಿತ್ವದ ಧ್ವನಿಯೇ ಶೈಲಿಯೆನ್ನುವುದಾದರೆ ಒಳ್ಳೆಯದೊಂದು ಪ್ರಬಂಧದಲ್ಲಿ ಬರೆದವರ ವ್ಯಕ್ತಿವಿಶೇಷಗಳೆಲ್ಲವೂ ಮೇಳೈಸಿರಬೇಕು. ಬಹುಶಃ ಇದೇ ಕಾರಣದಿಂದ ಲಲಿತ ಪ್ರಬಂಧಗಳೆಲ್ಲವೂ ಬಹುಮಟ್ಟಿಗೆ ಉತ್ತಮ ಪುರುಷ ನಿರೂಪಣೆಯಲ್ಲೇ ಇರುತ್ತವೆ.

ಈ ಪ್ರಕಾರದ ಮೂಲಪುರುಷ ಮಾಂಟೇನ್. ಅವನ ಬಗ್ಗೆ ಫ್ರಾನ್ಸಿನ ಇನ್ನೊಬ್ಬ ಮುಖ್ಯ ಲೇಖಕ ವಾಲ್ಟೇರ್ ‘ಮಾಂಟೇನ್ ತನ್ನನ್ನೇ ತಾನು ಚಿತ್ರಿಸಿಕೊಳ್ಳುವ ಮೂಲಕ ಇಡೀ ಮಾನವೀಯತೆಯನ್ನು ಚಿತ್ರಿಸಿಬಿಟ್ಟ’ ಎಂದಿದ್ದಾನೆ. ಈ ಮಾತಿನಲ್ಲಿ ಯಾವುದು ವೈಯಕ್ತಿಕ ಅಥೆಂಟಿಸಿಟಿಯುಳ್ಳದ್ದೋ ಅದು ಸಾರ್ವತ್ರಿಕವೂ ಆಗಿರುತ್ತದೆ ಎಂಬ ಧ್ವನಿಯಿದೆ.

ಸ್ಮಿತಾ ಅಮೃತರಾಜ್ ಅವರ ಈ ಸಂಕಲನದಲ್ಲಿ ಒಟ್ಟು 31 ಬರಹಗಳಿವೆ. ಎಲ್ಲವನ್ನೂ ಪರಿಪೂರ್ಣ ಲಲಿತ ಪ್ರಬಂಧಗಳೆಂದು ಕರೆಯಲಾಗದು. ‘ಇದು ಕಲಿಗಾಲವಲ್ಲ ಇಲಿಗಾಲ’, ‘ಪಾದುಕ ಪ್ರಸಂಗ’, ಈ ಬರಹಗಳಲ್ಲಿರುವುದು ಲಾಗಾಯತಿನಿಂದ ನಮ್ಮ ಹಾಸ್ಯ ಲೇಖಕರು ಬರೆದೂ ಬರೆದೂ ಸವಕಲಾಗಿರುವ ವಸ್ತುಗಳು. ಹಾಗಾಗಿ ಇವುಗಳಲ್ಲಿ ಹೊಸ ದೃಷ್ಟಿಯಿದ್ದೂ ಅದು ಹಳೆಯ ಪ್ರಸಂಗಗಳಲ್ಲಿ ಕಳೆದುಹೋಗಿದೆ ಎನ್ನಬೇಕು.

‘ಮಳೆಯ ತಾನನ.... ನೆನಪುಗಳ ರಿಂಗಣ’, ‘ಮಳೆಯೆಂದರೆ.... ಬರೆ ಮಳೆಯಲ್ಲ’, ‘ಹೊಯ್ಯುತ್ತಿದೆ ಮಳೆ ಇಲ್ಲಿ ನಿಮಗೆಂದೆ....’, ಇವು ಒಂದೇ ಪ್ರಬಂಧದ ಬಿಡಿ ಭಾಗಗಳಂತಿವೆ. ಮಳೆಗಾಲದ ಮಡಿಕೇರಿಯ ಸೌಂದರ್ಯವನ್ನು ಕುರಿತ ಕೊನೆಯ ಬರಹವಂತೂ ಪ್ರವಾಸಿಗರನ್ನು ಆಕರ್ಷಿಸುವ ಒಂದು ನುಡಿಚಿತ್ರಕ್ಕಿಂತ ಹೆಚ್ಚಿನದೇನನ್ನೂ ಸಾಧಿಸಲಾಗಿಲ್ಲ. ‘ಅರೆಯುವ ಕಲ್ಲಿನ ಮುಂದೆ ಅರಳುವ ಕವಿತೆ’, ‘ಒಗ್ಗರಣೆಯೆಂಬ ಕಾಡುವ ಸಂಗತಿ’, ‘ಅಡುಗೆ ಕೋಣೆಯೊಳಗಿನ ಎಡವಟ್ಟುಗಳು’, ‘ಏನ್ ತಿಂಡಿ’, ‘ಒಲೆಯ ಉರಿಯ ಮುಂದೆ’ ಮುಂತಾದ ಬಿಡಿಬಿಡಿಯಾಗಿ ಅಪೂರ್ಣವೆನ್ನಿಸುವ ಬರಹಗಳು ಹೆಣ್ಣಿನ ಅಂತರಂಗದ ಮಾಧುರ್ಯ, ಪಾಕಪ್ರಾವೀಣ್ಯ, ದುಡಿಮೆಯ ಆಯಾಮ, ಕುಟುಂಬ ನಿರ್ವಹಣೆ ಇತ್ಯಾದಿಯನ್ನು ಸಾಂಕೇತಿಕವಾಗಿ ಸೇರಿಸಿಕೊಂಡು ಒಂದೇ ಧ್ವನಿಪೂರ್ಣ ಪ್ರಬಂಧವಾಗಬಹುದಾಗಿದ್ದವೋ ಏನೋ.

ಈಗ ಈ ಸಂಕಲನದ ಶೀರ್ಷಿಕೆಯಾಗಿರುವ ‘ಒಂದು ವಿಳಾಸದ ಹಿಂದೆ’ ಪ್ರಬಂಧವನ್ನು ನೋಡೋಣ. ವ್ಯಕ್ತಿಗೆ ವಿಳಾಸವೊಂದು ಯಾಕೆ ಬೇಕು ಎಂಬಲ್ಲಿಂದ ಪ್ರಾರಂಭವಾಗುವ ಈ ಪ್ರಬಂಧ ಮದುವೆಗೆ ಮೊದಲು, ಮದುವೆಯ ನಂತರ ಹೆಣ್ಣುಮಕ್ಕಳಿಗೆ ವಿಳಾಸ ಯಾಕಿರುವುದಿಲ್ಲ ಎಂಬ ಪ್ರಶ್ನೆಯನ್ನು ಮುಂದಿಡುತ್ತದೆ.

ಮದುವೆ, ಮುಂಜಿ, ನಾಮಕರಣ, ಜಾತ್ರೆ ಮುಂತಾದವುಗಳ ಆಮಂತ್ರಣ ಪತ್ರಿಕೆಗಳು, ಕೆಲವೊಮ್ಮೆ ಹೆಣ್ಣು ತನ್ನ ಅಸ್ಮಿತೆಯನ್ನು ಸಾರಿಕೊಳ್ಳಬೇಕಾದ ಅನಿವಾರ್ಯತೆ, ಶಾಲೆಯಲ್ಲಿ ಕಲಿಸಿದ ಪತ್ರ ಲೇಖನ, ನಗರಗಳಲ್ಲಿ ವಿಳಾಸ ಹುಡುಕುವ ಪಾಡು, ಸಂಬಂಧಗಳನ್ನು ಬೆಳೆಸುವ ಪರಿ, ಒಂದೇ ಹೆಸರಿನ ಇಬ್ಬರಿದ್ದರೆ ಆಗುವ ಫಜೀತಿ, ‘ಅವರು ಮನೆಯಲ್ಲಿದ್ದರೆ ನನಗೊಂದು ವಿಳಾಸವಾದರೂ ಇರುತ್ತಿತ್ತಲ್ಲ’ ಎಂದು  ಅಲವತ್ತುಕೊಳ್ಳುವ ಗೆಳತಿಯೊಬ್ಬಳ ಪ್ರಸಂಗ, ವಿಳಾಸ ಮರೆತ ಹುಚ್ಚಿ, ಕಸದ ತೊಟ್ಟಿಯ ಬಳಿ ನಿಂತ ಅನಾಥ ಮಗು, ಹೀಗೆ ಕಣ್ಣಿಗೆ ಕಟ್ಟುವಂಥ ಹಲವು ಪ್ರಕರಣಗಳನ್ನು ಧ್ಯಾನಿಸುತ್ತಾ ಬದುಕಿನ ಬಗ್ಗೆ ಒಂದು ತಾತ್ವಿಕ ಜಿಜ್ಞಾಸೆಯನ್ನೇ ಮೂಡಿಸಿಬಿಡುತ್ತದೆ. ಇಂಥ ಇತರ ಸೊಗಸಾದ ಪ್ರಬಂಧಗಳೆಂದರೆ ‘ಈ ಹೊತ್ತಿನಲ್ಲಿ’, ‘ಜೇಡನ ಜತೆಗೂಡಿ ಒಂದು ಸುತ್ತು’ ಮತ್ತು ‘ಭಾವಚಿತ್ರಗಳ ಭಾವನಾ ಲೋಕದಲ್ಲಿ’.

ಸ್ಮಿತಾ ಅವರ ಭಾಷೆಗೆ ಕಾವ್ಯದ ಚಿತ್ರಕಶಕ್ತಿಯಿದ್ದು ಅದು ಅನುಭವವನ್ನು ಒಂದು ಸೊಗಸಾದ ಚೌಕಟ್ಟಿನೊಳಗಿಟ್ಟು ತೋರಿಸುತ್ತದೆ. ಉದಾಹರಣೆಗೆ ಈ ಸಾಲುಗಳು: ‘ಅವರ ಅಚಾನಕ್ ಹೊಗಳಿಕೆ ನನ್ನ ಕವಿತೆಯೆಂಬ ಮರಿ ಹಕ್ಕಿಗೆ ರೆಕ್ಕೆ ಪುಕ್ಕ ಹುಟ್ಟಿ ಮತ್ತೆ ಮೇಲೆ ಹಾರಲು ಹವಣಿಸಿದ್ದು ಸುಳ್ಳಲ್ಲ. ಆದರೆ ನನ್ನ ಕವಿತೆಯೆಂಬ ಹಕ್ಕಿಗೆ ಎತ್ತರಕ್ಕೆ ಹಾರಲು ಮತ್ತಷ್ಟು ಬಲ ಬರಲೇ ಇಲ್ಲ ಎಂಬುದು ಇನ್ನೂ ನನಗೆ ಬೇಸರದ ಸಂಗತಿ’; ‘ಕವಿತೆ ನಾವು ಅಂದುಕೊಂಡಷ್ಟು ಸರಳವಲ್ಲ. ಎಲ್ಲರ ಕಣ್ಣೋಟದ ಹಿಂದಿನ ಭಾವವನ್ನು, ಮನದಾಳದ ಇಂಗಿತವನ್ನು ಸುಲಭವಾಗಿ ಗ್ರಹಿಸಿಕೊಂಡು, ಏನೂ ಅರ್ಥವಾಗದ ಹಾಗೆ ಮೊನಾಲಿಸಾ ನಗುವ ಬೀರುತ್ತಾ ನಿಂತುಕೊಳ್ಳುತ್ತದೆ’; ‘ಕವಿತೆ ಪುಟ್ಟ ಮಗುವೇ ತಾನೆ? ಕವಿತೆಯೆಂದರೆ ಮಗುವಿನ ತುಟಿಯಂಚಿನಲ್ಲಿ ಉಳಿದುಕೊಂಡ ನಗುವಲ್ಲವೇ?

ಈ ಲೇಖಕಿಗೆ ಪ್ರಬಂಧಕ್ಕೆ ಅಗತ್ಯವಾದ ಮನೋಲಹರಿಯನ್ನು ಹಲವು ದಿಕ್ಕುಗಳತ್ತ  ಹರಿಸಬಲ್ಲ ಪ್ರತಿಭೆಯಿದೆ. ಪ್ರಬಂಧದ ಧಾಟಿ ಎಷ್ಟು ಅತಿಶಯವಾದರೆ ಉದ್ದೇಶಿತ ಆಶಯ ಎಷ್ಟೆಲ್ಲ ಆಯಾಮಗಳನ್ನು ಪಡೆದುಕೊಳ್ಳಬಹುದೆಂಬ ಪರಿಜ್ಞಾನವಿದೆ. ಅವರು ಒಂದು ವಿಷಯದ ಆಸುಪಾಸನ್ನು ಸಮೀಕ್ಷಿಸುತ್ತಿರುವಾಗಲೇ ಅದರ ಅಂತರಾರ್ಥವನ್ನು ಹೇಗೋ ಹಾಗೆ ಅದರ ಒಟ್ಟು ಧ್ವನಿಯನ್ನೂ ಪಡಿಮೂಡಿಸಬಲ್ಲರು. ಅವರ ಪ್ರಬಂಧಗಳಿಗೆ ಅವರದೇ ಬುದ್ಧಿಭಾವಗಳ ಛಾಪಿದೆ. ಅದು ಅವರ ವಿಶಿಷ್ಟ ವ್ಯಕ್ತಿತ್ವವನ್ನು ಸ್ಫುಟಗೊಳಿಸುವುದರ ಜೊತೆಗೆ ಅವರ ವೈಚಾರಿಕ ನೆಲೆಯನ್ನೂ ಪ್ರಕಟಗೊಳಿಸುತ್ತದೆ.

ಪುಸ್ತಕದಲ್ಲಿ ಕೆಲವು ವ್ಯಾಕರಣ ದೋಷಗಳ ಜೊತೆಗೆ ಅನೇಕ ಅಕ್ಷರದೋಷಗಳೂ ಇವೆ. ಇವುಗಳನ್ನು ನಿವಾರಿಸಬಹುದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು