ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಆರ್. ಲಕ್ಷ್ಮಣರಾವ್ ಅವರ ಗೋಪಿ ಮತ್ತು ಗಾಂಡಲೀನ 50 ಪುಸ್ತಕದ ಅವಲೋಕನ

Last Updated 19 ಮಾರ್ಚ್ 2022, 19:15 IST
ಅಕ್ಷರ ಗಾತ್ರ

‘ಗೋಪಿಯು ಗಾಂಡಲೀನಳ ಪಾದಪದ್ಮಂಗಳಿಗೆರಗಿ ಐವತ್ತು ವರ್ಷಗಳಾದವು. ಅವನ ಧರ್ಮಪತ್ನಿ ವೆಂಕಟಲಕ್ಷ್ಮಿಗೆ ಈ ವಿಚಾರ ತಿಳಿಯಿತೊ? ತಿಳಿದಿದ್ದರೆ ಏನಾಗಿದ್ದಿರಬಹುದು ಅಥವಾ ಈ ಪ್ರಹಸನವನ್ನು ಗೋಪ್ಯವಾಗಿಟ್ಟುಕೊಂಡೇ ಗೋಪಿ ಈ ಐವತ್ತು ವರ್ಷ ಕಳೆದುಬಿಟ್ಟಿರಬಹುದೆ? ಏನಾದರೂ ಇರಲಿ, ಲಕ್ಷ್ಮಣರಾಯರ ಕ್ಯಾಮೆರಾ ಕಣ್ಣಿನ ತುಂಟತನ, ಗಪಗಪನೆ ಬಾಳನ್ನು ಮುಕ್ಕುವ ಲವಲವಿಕೆ ಈಗಲೂ ಹಾಗೇ ಇದೆ ಎನ್ನುವುದೇ ಒಂದು ಬೆರಗು’

–ಬಿ.ಆರ್‌. ಲಕ್ಷ್ಮಣರಾಯರ ‘ಗೋಪಿ ಮತ್ತು ಗಾಂಡಲೀನ’ ಕವನ ಸಂಕಲನಕ್ಕೆ ಐವತ್ತು ತುಂಬಿದ ಸಂದರ್ಭದಲ್ಲಿ ಇಂದಿನ ತಲೆಮಾರಿನ ಪ್ರತಿಸ್ಪಂದನದೊಂದಿಗೆ ಅದನ್ನೀಗ ಮರುಮುದ್ರಿಸಲಾಗಿದೆ. ಹಾಗೆ ಪ್ರತಿಸ್ಪಂದಿಸಿದವರಲ್ಲಿ ಒಬ್ಬರಾದ ಕವಿ ವಿಕ್ರಮ್‌ ಹತ್ವಾರ್‌ ಅವರು ಮೇಲಿನಂತೆ ಬರೆಯುತ್ತಾರೆ. ಇದು ಅವರೊಬ್ಬರ ಅಭಿಪ್ರಾಯವಾಗಿರದೆ ಇಂದಿನ ತಲೆಮಾರಿನ ಕಾವ್ಯಪ್ರಿಯ ಪ್ರತಿಯೊಬ್ಬರ ಅಭಿಪ್ರಾಯವೂ ಆಗಿದೆ. ಒಳ್ಳೆಯ ಕವಿತೆಗಳಿಗೆ ಎಂದಿಗೂ ವಯಸ್ಸು ಆಗುವುದಿಲ್ಲವಂತೆ. ಆ ಲೆಕ್ಕದಲ್ಲಿ ಗೋಪಿ ಮತ್ತು ಗಾಂಡಲೀನ ಇಬ್ಬರಿಗೂ ಐವತ್ತು ವರ್ಷಗಳ ಬಳಿಕವೂ ಅದೇ ಹರೆಯ ಉಕ್ಕುತ್ತಿದೆ. ಇದೇ ಕವನ ಸಂಕಲನದ ಫೋಟೊಗ್ರಾಫರ್‌ನ ಕಣ್ಣುಗಳು ಕೂಡ ಇನ್ನೂ ಅಷ್ಟೇ ತೀಕ್ಷ್ಣವಾಗಿವೆ. ಆದ್ದರಿಂದಲೇ ಈ ಕವಿತೆಗಳನ್ನು ಬರೆದ ಕವಿ ಬಿಆರ್‌ಎಲ್‌ಗೆ ಈಗ 75 ವರ್ಷ ತುಂಬಿದೆ ಎಂದರೆ ಯಾರೂ ನಂಬುತ್ತಿಲ್ಲ!

ಬಿಆರ್‌ಎಲ್‌ ಅವರ ಕಾವ್ಯವೆಂದರೆ ಅದು ಪ್ರೇಮ, ಕಾಮ, ತುಂಟತನಗಳ ರಸಪೂರಿ ಹಣ್ಣು. ಸವಿದಷ್ಟೂ ಅದರ ರುಚಿ ಹೆಚ್ಚು ಎನ್ನುವುದು ಈ ಸಂಕಲನದ ಕುರಿತು ಪ್ರತಿಕ್ರಿಯೆ ಬರೆದ ಬಹುತೇಕ ಬರಹಗಾರರ ಒಕ್ಕೊರಲ ಮಾತು. ಕನ್ನಡ ಕಾವ್ಯಚರಿತ್ರೆಯಲ್ಲಿ ಗಟ್ಟಿ ಹೆಜ್ಜೆ ಗುರುತು ಮೂಡಿಸಿದ ಈ ಸಂಕಲನ ಅರ್ಧಶತಮಾನ ಕಳೆದರೂ ಅದೇ ಯೌವನವನ್ನು, ಅದೇ ತುಂಟತನವನ್ನು ಕಾಪಿಟ್ಟುಕೊಂಡಿರುವುದು ಒಂದು ಅಚ್ಚರಿ. ‘ಎಷ್ಟು ಮುಚ್ಚಿಟ್ಟರೂ ಧಿಗ್ಗನೇ ಎದ್ದು ನಿಲ್ಲುವ ಕಾಮಾಸಕ್ತಿ, ಮನುಷ್ಯನನ್ನು ಗಿರಗಿರ ತಿರುಗಿಸಿ ತಲ್ಲಣಗೊಳಿಸುವ ಪರಿಯನ್ನು ಈ ಸಂಕಲನ ಅದ್ಭುತವಾಗಿ ಹಿಡಿದಿಟ್ಟಿದೆ. ಪರಂಪರೆಯ ನೆರಳು ಮತ್ತು ಆಧುನಿಕತೆಯ ಬೆಳಕು ಕವಿಯ ಕಣ್ಮನಗಳನ್ನು ದಿಗ್ಭ್ರಮೆಗೊಳಿಸುವ ಪರಿ ಕಾವ್ಯಾತ್ಮಕವಾಗಿದೆ’ ಎನ್ನುವ ಧನಂಜಯ ಕುಂಬ್ಳೆ ಅವರ ಮಾತೂ ಖರೆ ಇದೆ.

ಸಂಕಲನದ ‘ಚಳಿ’ ಎಂಬ ಕವಿತೆಯಲ್ಲಿ ಬರುವ ಸಾಲುಗಳು ಹೀಗಿವೆ: ‘ಮುಸುಕು ಕತ್ತಲೆಯಲ್ಲಿ/ ಬಿಸಿ ಬೆತ್ತಲೆ ಕಲ್ಪನೆಗಳ/ ಕಣ್ತುಂಬ ಕೆತ್ತುವ ಪೋಲಿ ಉಳಿ/ ಈ ಚಳಿ’. ‘ಪ್ರತಿ ಸಂಜೆ ಮುಂಜಾನೆ/ ಕಾರಿಕೊಳ್ಳುವ / ಈ ಅತಿ ರತಿಯ/ ಮುಟ್ಟು/ ಬಟ್ಟೆಗಳನ್ನು/ ಪಶ್ಚಿಮ ಪೂರ್ವ ದಿಗಂತಗಳ/ ಧೋಬೀಘಾಟುಗಳಲ್ಲಿ ಒಗೆದು ಹರವುತ್ತಾನೆ/ ಅಗಸ ಸೂರ್ಯ...’ ಹೀಗೆ ಕಾವ್ಯದ ಸಾಲುಗಳಲ್ಲಿ ರತಿವಿಲಾಸವನ್ನು ತೆರೆದಿಡುವ ಬಿಆರ್‌ಎಲ್‌ ಅವರ ತುಂಟತನಕ್ಕೆ ಸಾಟಿಯೇ ಇಲ್ಲ. ‘ಪೋಲಿತನದಿಂದ ಇಲ್ಲಿನ ಕಾವ್ಯಗಳು ಮಿನುಗಿದರೂ ಖಾಸಗಿಯಾದ ಅಸ್ತಿತ್ವಶೋಧವನ್ನೂ ಬಿಟ್ಟುಕೊಟ್ಟಿಲ್ಲ’ ಎನ್ನುವುದನ್ನು ತಾರಿಣಿ ಶುಭದಾಯಿನಿ ಸರಿಯಾಗಿಯೇ ಗುರುತಿಸಿದ್ದಾರೆ.

ಸಂಕಲನದ ಮೊದಲ ಮುದ್ರಣ ಪ್ರಕಟಗೊಂಡಾಗ ‘ಪ್ರಜಾವಾಣಿ’ಯಲ್ಲಿ ಬಂದ ವಿಮರ್ಶೆಯನ್ನೂ ಬಿಆರ್‌ಎಲ್‌ ಈ ಮುದ್ರಣದಲ್ಲಿ ಪ್ರಕಟಿಸಿದ್ದಾರೆ. ಆ ವಿಮರ್ಶೆಯಲ್ಲಿ ಎನ್‌.ಎಸ್‌. ಲಕ್ಷ್ಮೀನಾರಾಯಣಭಟ್ಟರಿಗೆ ಬೋರಿನ ನೀರೋಗಾನದಂತಹ ಕಾವ್ಯದ ಅಪಾಯ ಹೆಚ್ಚಿದ ಸಂದರ್ಭದಲ್ಲಿ ಹೊಸತನದಿಂದ ಕೂಡಿದ ಉತ್ತಮ ಕವನ ಬರೆಯುವ ಕವಿಯಾಗಿ ಬಿಆರ್‌ಎಲ್‌ ಕಂಡಿದ್ದಾರೆ. ನಂತರದ ಐವತ್ತು ವರ್ಷಗಳಲ್ಲಿ ಅವರ ಆ ಮಾತು ನಿಜವಾಗಿರುವ ವಿದ್ಯಮಾನ ಕಣ್ಣ ಮುಂದೆಯೇ ಇದೆ. ಸಂಕಲನಕ್ಕೆ ಪಿ.ಲಂಕೇಶ್‌ ಅವರು ಬರೆದ ಮುನ್ನುಡಿ ಕವಿಯ ವ್ಯಕ್ತಿತ್ವಕ್ಕೊಂದು ಕೈಗನ್ನಡಿಯಾಗಿದೆ. ಹೌದು, ಬಿಆರ್‌ಎಲ್‌ ಅವರಿಗೂ ಅವರ ಕಾವ್ಯಕ್ಕೂ ಎಂದಿಗೂ ವಯಸ್ಸು ಆಗುವುದೇ ಇಲ್ಲ ಬಿಡಿ!

*****

ಗೋಪಿ ಮತ್ತು ಗಾಂಡಲೀನ 50

ಲೇ: ಬಿ.ಆರ್‌. ಲಕ್ಷ್ಮಣರಾವ್‌

ಪ್ರ: ಅಂಕಿತ

ಸಂ:080–26617100

ಬೆಲೆ: 230

ಪುಟಗಳು: 208

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT