ಮಂಗಳವಾರ, ಅಕ್ಟೋಬರ್ 19, 2021
23 °C

ಕಂಬಾರರ ಹೊಸ ಕಾದಂಬರಿ: ಚಾಂದಬೀ ಸರಕಾರ

ಚಂದ್ರಶೇಖರ ಕಂಬಾರ Updated:

ಅಕ್ಷರ ಗಾತ್ರ : | |

ವಿಜಾಪುರ ಸುಲ್ತಾನರಿಗೆ ಮಸಾಲೆ ಸಾಮಾನು ಪೂರೈಸುತ್ತಿದ್ದ ಬಲದೇವನಾಯಕ ಅಲ್ಲಿ ನಡೆಯುವ ಮೋಜು ಮನರಂಜನೆಗಳ ಕಡೆಗೆ ಗಮನ ಹರಿಸಿದವನೇ ಅಲ್ಲ. ಆದರೆ, ಕೊನೆ ಕೊನೆಗೆ ಮಡದಿಯೊಂದಿಗೆ ಹತಾಶೆಯ ದಿನಗಳನ್ನು ಕಳೆಯುವಾಗ ಲಘು ಮನರಂಜನೆಯ ಕಡೆಗೆ ಅವನ ಚಿತ್ತ ವಾಲಿತೆಂದು ಹೇಳಿದೆನಷ್ಟೆ; ಈ ಸಲ ಅರಮನೆಯಲ್ಲಿ ಶ್ರೀಕೃಷ್ಣ ಪಾರಿಜಾತ ಎಂಬ ಚಾಂದಬಿಯ ಬಯಲಾಟವಿದೆಯೆಂದು ಕೇಳಿ ಈ ದಿವಸ ಇಲ್ಲೇ ವಸ್ತಿ ಇರುವುದೆಂದು ತೀರ್ಮಾನಿಸಿದ.

ಸುಲ್ತಾನರ ಅರಮನೆಗೆ ಬಂದು ಅವರ ಮುಂದೆ ಪಾತ್ರ ಕುಣಿಯುವುದೆಂದರೆ ಸಾಮಾನ್ಯ ಸಂಗತಿಯಲ್ಲ. ಪಾತ್ರವನ್ನು ಅಚ್ಚುಕಟ್ಟಾಗಿ, ಕಲಾತ್ಮಕವಾಗಿ ಅರ್ಥೈಸುವ ತಾಕತ್ತಿನ ನಾಯಕಿಯಾಗಿರಬೇಕು. ತನಗೆ ಎದುರಾಗುವ ಗಂಡಸು ಪಾತ್ರದವರು ನಿರುತ್ತರರಾಗುವಂತೆ ಹಾಡು, ಮಾತು, ಕುಣಿತಗಳಲ್ಲಿ ಸಾಟಿಯಿಲ್ಲದ ಪ್ರತಿಭೆಯವಳಾಗಿರಬೇಕು. ಕಲ್ಲೊಳ್ಳಿಯ ಚಾಂದಬಿ ಆ ಮಟ್ಟದ ಕಲಾವಿದೆಯೆಂದು ತಿಳಿದು ಅವಳ ಬಗ್ಗೆ ಗೌರವ ಮೂಡಿತು. ಅಲ್ಲದೆ ಬೇರೆ ತಂಡದವರಾದರೆ ಸುಲ್ತಾನರ ಮುಂದೆ ‘ದರಬಾರ್ ಆಟ’ ಆಡಲು ವಶೀಲಿ ತರಬೇಕಾಗಿತ್ತು. ಆದರೆ ಚಾಂದಬಿಯ ತಂಡವನ್ನು ಸ್ವಯಂ ಸುಲ್ತಾನರೇ ಹೇಳಿಕಳಿಸಿ ಆಮಂತ್ರಿಸಿದ್ದರಂತೆ! ಈವರೆಗೆ ದೂರ ಕುಳಿತು ಈ ಆಟ ನೋಡಿದ್ದ ನಾಯಕ ಈ ಬಾರಿ ಮುದ್ದಾಂ ಸಮೀಪದಲ್ಲೇ ಕೂತು ನೋಡಬೇಕೆಂದು ಸುಲ್ತಾನರ ಸಮೀಪದಲ್ಲೇ ಕೂತ. ಈತ ಅಪರೂಪಕ್ಕೆ ಆಟ ನೋಡಲು ಕೂತದ್ದನ್ನು ಸೊಥಾ ಸುಲ್ತಾನರೇ ಗಮನಿಸಿದ್ದರು.

ಆದರೆ, ಬೆಳಗಾಗಿ ಆಟ ಮುಗಿದಾಗ ಮಾತ್ರ ಆತ ಮೊದಲಿನ ಬಲದೇವನಾಗಿ ಉಳಿದಿರಲಿಲ್ಲ. ಆ ನಟಿಯಿಲ್ಲದ ತನ್ನ ಬಾಳು ಹುಸಿಯೆಂಬ, ವ್ಯರ್ಥವೆಂಬ, ಅಪೂರ್ಣವೆಂಬ ಹತಾಶೆ ಅವನನ್ನು ಆವರಿಸಿತು. ಬೆಳ್ಳಂ ಬೆಳಕಿನ ಕೊನೆಯ ದೃಶ್ಯವಂತೂ ಏನು ಮಾಡಿದರೂ ಕಣ್ಣಿಂದ ಮರೆಯಾಗಲೊಲ್ಲದು. ಅದು ಸತ್ಯಭಾಮೆಗಾಗುವ ಕೃಷ್ಣದರ್ಶನ!

ಕೃಷ್ಣನ ಮಡದಿ ಸತ್ಯಭಾಮೆಯ ವಿರಹದಿಂದ ಸುರುವಾಯ್ತು ಆಟ. ಸತ್ಯಭಾಮೆ ಕೃಷ್ಣನಿಗೆ ಕಾಗದ ಬರೆದಳು. ದೂತೆಯರನ್ನ ಅಟ್ಟಿದಳು. ಕೃಷ್ಣ ಮಾತ್ರ ಬರಲೇ ಇಲ್ಲ. ಸ್ವಯಂ ಕೃಷ್ಣನೇ ದೇವಲೋಕದ ಕೊರವಂಜಿಯ ವೇಷ ಧರಿಸಿ ಶಕುನ ಹೇಳುವುದಾಗಿ ಇವಳ ಮನೆ ಬಾಗಿಲಿಗೆ ಬರುತ್ತಾನೆ. ಸಹಜವಾಗಿಯೇ ಸತ್ಯಭಾಮೆಗೆ ಭವಿಷ್ಯ ಕೇಳುವ ಕುತೂಹಲ ಕೆರಳಿ ಕೇಳಿದಳು. ಆದರೆ, ತನ್ನ ಕಾಲು ತೊಳೆದು ಭಕ್ತಿ ಮಾಡಿದರೆ ಮಾತ್ರ ಹೇಳುವೆನೆಂದು ಕೊರವಂಜಿಯೆಂದಳು. ಕೃಷ್ಣನ ಕಾಲನ್ನು ಬಿಟ್ಟು ತಾನು ಇನ್ನೊಬ್ಬರ ಕಾಲನ್ನು ಮುಟ್ಟಲಾರೆನೆಂದು ಸತ್ಯಭಾಮೆ. ಇಬ್ಬರ ಜಿದ್ದಿನಲ್ಲಿ ನಡುವೆ ದೂತೆ ಪ್ರವೇಶಿಸಿ ‘ನೀನೂ ಹೆಣ್ಣು, ಕೊರವಂಜಿಯೂ ಹೆಣ್ಣು, ಹೆಣ್ಣಿನ ಕಾಲು ಹೆಣ್ಣು ತೊಳೆದರೆ ತಪ್ಪಿಲ್ಲ’ವೆಂದು ಸಮಾಧಾನ ಹೇಳಿ ಕೊರವಂಜಿಯ ಕಾಲು ತೊಳೆಯಲು ಸತ್ಯಭಾಮೆಯನ್ನು ಒಪ್ಪಿಸುತ್ತಾಳೆ.

ಸಿದ್ಧತೆಗಳೊಂದಿಗೆ ಸತ್ಯಭಾಮೆ ಕೊರವಂಜಿಯ ಕಾಲು ತೊಳೆಯಲು ಹೋದರೆ ಪಾದದಲ್ಲಿ ನಾಗರ ಹೆಡೆಯ ಮತಿಯಿದೆ! ಇದು ಇರೋದು ಕೃಷ್ಣನ ಪಾದದಲ್ಲಿ ಮಾತ್ರ! ಕೃಷ್ಣ ಕಾಮನ ತಂದೆಯಾದುದರಿಂದ ಅದನ್ನು ನೋಡಿ ಒಂದು ಕ್ಷಣ ಚಿತ್ತ ಚಂಚಲವಾಗಿ ತಕ್ಷಣ ಭಕ್ತಿ ಭಾವಕ್ಕೆ ಬಂದಳು. ಆವಾಗ ಸತ್ಯಭಾಮೆ ಹೇಳುತ್ತಾಳೆ :

‘ಕೃಷ್ಣಾ ಈವರೆಗೆ ನಿನ್ನ ಮಡದಿಯಾಗಿ, ನಿನಗಾಗಿ ಹಾರೈಸಿ ಹಂಬಲಿಸಿ ಅತ್ತು ಕರೆದು ಹಾಡಿದ ನನ್ನ ವೇದನೆಯನ್ನ ಕೂತವರೆಲ್ಲ ಕಂಡಿದ್ದಾರೆ. ನನ್ನೊಂದಿಗೆ ಅತ್ತಿದ್ದಾರೆ. ಅಂಥವರೆದುರು ಕೊರವಂಜಿಯಾಗಿ ಬಂದು ನೀನು ಮಾಡಿದ್ದೇನು? ವಿರಹದಲ್ಲಿರುವ ನನ್ನನ್ನ ಸಮಾಧಾನಪಡಿಸುವ ಬದಲು ನಮ್ಮ ಮಗನಾದ ಕಾಮನ ಕೈಗೆ ಕೊಟ್ಟೆಯಲ್ಲೊ! ದೇವರ ದೇವನೆಂದುಕೊಳ್ಳುವ ನಿನಗಿದು ಶೋಭೆಯೇನೊ ಕೃಷ್ಣಾ....’

-ಎಂದು ಅಳುತ್ತ ಹಾಡಿದ್ದು ಕೇಳಿ, ನೋಡಿ ಇಡೀ ಪ್ರೇಕ್ಷಕವರ್ಗ ಕಣ್ಣೀರಲ್ಲಿ ಮುಳುಗಿತು. ಮಹಿಳೆಯರಂತೂ ಬಿಕ್ಕಿ ಬಿಕ್ಕಿ ಅತ್ತರು. ‘ಎಂಥಾ ಭಕ್ತಿವಂತೆಗೆ ಎಂಥಾ ಗತಿ ತಂದ! ಇವನೆಂಥಾ ದೇವರ, ಎವ್ವಾ!’ ಎಂದು ಮರುಗಿ ಹಾಡು ಮುಗಿಯುವ ತನಕ ಕಣ್ಣೀರು ಸುರಿಸಿದರು. ಸುಲ್ತಾನರ ಹೆಂಗಸರೂ ಕಣ್ಣೀರು ಒರೆಸಿಕೊಂಡರು. ಸತ್ಯಭಾಮೆ ಬಹಳ ಬೇಸರ ಮತ್ತು ನಿರಾಸೆಯಿಂದ ಹೋಗಿ ಬಾಗಿಲಿಕ್ಕಿಕೊಳ್ಳುತ್ತಾಳೆ.

ಆಗಸದಲ್ಲೀಗ ಬೆಳ್ಳಿ ಚಿಕ್ಕೆ ಮೂಡಿ ತಂಗಾಳಿ ಸುಳಿಯಿತೋ ಈತನಕ ಸತ್ಯಭಾಮೆಯ ವಿರಹದಲ್ಲಿ ಭಾಗಿಗಳಾಗಿದ್ದ ಭಕ್ತಾದಿಗಳು ಬೆಳಗಿನ ಚಳಿ ತಾಗಿ ಈಗ ಮೈತುಂಬ ಬಟ್ಟೆ ಹೊದೆವಾಗ ಕೃಷ್ಣಾವತಾರವಾಗುತ್ತದೆ.

ಸತ್ಯಭಾಮೆಯ ಬಾಗಿಲಿಗೆ ಕೃಷ್ಣ ತನ್ನ ಸಹಜಾವಸ್ಥೆಯಲ್ಲಿ ಬಂದಾಗ ಆಳುಕಾಳುಗಳ್ಯಾರೂ ಇರೋದಿಲ್ಲ. ತಾನೇ ಬಾಗಿಲು ಬಡಿಯುತ್ತಾನೆ. ಕತ್ತಲೆಯ ಮಾಯೆ ಇನ್ನೂ ಆವರಿಸಿರುವಾಗ ಕೃಷ್ಣನನ್ನು ಗುರುತಿಸುವಂಥ ಭಕ್ತಿಯ ಎಚ್ಚರ ಸತ್ಯಭಾಮೆಗಿಲ್ಲ.

‘ಯಾರದು?‌’

ಎಂದು ಸತ್ಯಭಾಮೆಯ ದನಿ ಕೇಳಿಸುತ್ತದೆ.

‘ಕೃಷ್ಣ ಬಂದಿದ್ದೇನೆ, ಬಾಗಿಲು ತೆಗೆಯೇ ಸತ್ಯಭಾಮೆ’

‘ಯಾವ ಕೃಷ್ಣ?’

‘ಮತ್ಸ್ಯಾವತಾರ ತಾಳಿ ಮುಳುಗಲಿದ್ದ ಭೂಮಿಯನ್ನ ಎತ್ತಿ ಹಿಡಿದು ಕಾಪಾಡಿದ ಕೃಷ್ಣ ಬಂದಿದ್ದೇನೆ, ಬಾಗಿಲು ತೆಗೆ.’

‘ಮತ್ಸ್ಯಾವತಾರ ತಾಳಿದ್ದರೆ ನೀರಿದ್ದಲ್ಲಿ ಹೋಗಿ ಈಜಾಡು. ಇಲ್ಲಿಗ್ಯಾಕೆ ಬಂದೆ? ತೊಲಗು...’

ಕೃಷ್ಣ ನಿರಾಸೆ ತಾಳಲಿಲ್ಲ. ಇನ್ನೊಂದು, ಮತ್ತೊಂದು-ಹೀಗೇ ತನ್ನ ಹತ್ತೂ ಅವತಾರಗಳನ್ನು ಹಾಡಿ ಕುಣಿದು ಅಭಿನಯಿಸಿದರೂ ಸತ್ಯಭಾಮೆಯನ್ನ ಆವರಿಸಿದ ಮಾಯೆ ತೊಲಗಲಿಲ್ಲ. ಬಾಗಿಲು ತೆರೆಯಲಿಲ್ಲ. ಕೃಷ್ಣನೂ ಉಪಾಯಗಾಣದೆ ಪ್ರೇಕ್ಷಕರ ಮಧ್ಯೆ ಹೋಗಿ ಕೂತುಕೊಳ್ಳುತ್ತಾನೆ.

ಈಗ ಅಕ್ಷರಶಃ ಬೆಳಗಾಯಿತು. ಕತ್ತಲೆಯ ಮಾಯೆ ಕರಗಿ ಹೋಗಿ ಹಗಲಿನ ಬೆಳಕುದೋರಿ ಸತ್ಯಭಾಮೆಗೆ ಎಚ್ಚರವಾಗಿ ಹೊರಬರುತ್ತಾಳೆ. ಸೇವಕಿಯನ್ನು ಕರೆದು,

‘ಯಾರೋ ‘ನಾನು ಕೃಷ್ಣ ಬಂದಿದ್ದೇನೆ. ಬಾಗಿಲು ತೆರೆ’ ಅಂತ ಹೇಳುತ್ತ ಬಾಗಿಲು ಬಡೀತಿದ್ದರು, ಯಾರದು?’
‘ಯಾರೋ ಹಸಿದ ಭಿಕ್ಷುಕರಿರಬೇಕು, ಅವರಿಗೇನು ಹೊತ್ತಿಲ್ಲ ಗೊತ್ತಿಲ್ಲ’

-ಎಂದು ಹೇಳಿ ಚೇಷ್ಟೆ ಮಾಡುತ್ತಾಳೆ, ಸೇವಕಿ.

‘ಛೇ ನಾನು ಕೃಷ್ಣ ಅಂತ ಹೇಳುತ್ತ ತನ್ನ ಹತ್ತೂ ಅವತಾರಗಳನ್ನು ಹೇಳಿದರಲ್ಲಾ!’

ಅಷ್ಟರಲ್ಲಿ ಪೂರ್ವ ದಿಕ್ಕಿನಲ್ಲಿ ಸೂರ್ಯೋದಯದ ಲಕ್ಷಣಗಳು ಕಾಣುತ್ತವೆ. ಮತ್ತೆ ಸತ್ಯಭಾಮೆಯೇ ಹೇಳುತ್ತಾಳೆ:

‘ಅದು ಖಂಡಿತ ಕೃಷ್ಣ ಪರಮಾತ್ಮನ ಧ್ವನಿ. ನಾನು ಗುರುತಿಸಬಲ್ಲೆ. ಈಗಷ್ಟೆ ಕೇಳಿದ್ದು ನನಗೆ ಗೊತ್ತು. ದೂರ ಹೋಗಿರಲಾರರು. ಇಲ್ಲೇ ಎಲ್ಲೋ ಇರಬೇಕು. ಹುಡುಕೋಣ ಬಾರೆ.’

ಅದಕ್ಕೆ ಸೇವಕಿ ಹೇಳುತ್ತಾಳೆ: ‘ಕೃಷ್ಣ ಪರಮಾತ್ಮ ಎಷ್ಟೆಂದರೂ ಭಕ್ತರ ಮಧ್ಯೆ ಇರುವಂಥವನು. ಅಗೋ ಅವರ ಮಧ್ಯದಲ್ಲಿ ಕೂತಿದ್ದಾನೆ. ಬರ‍್ರಿ...’

-ಈಗ ಇಬ್ಬರೂ ಪ್ರೇಕ್ಷಕರ ಮಧ್ಯೆ ಕೃಷ್ಣ ಕೂತಲ್ಲಿಗೆ ಹೋಗಿ ಸತ್ಯಭಾಮೆ ತನ್ನ ತಪ್ಪಿಗೆ ಕ್ಷಮೆ ಕೋರಿದಲ್ಲಿ ಆಟ ಮುಗಿಯಿತು.

ಆದರೆ, ಈ ಮಧ್ಯೆ ಕೃಷ್ಣನ ಪಕ್ಕದಲ್ಲೇ ಕೂತಿದ್ದ ಬಲದೇವ ನಾಯಕ ಮತ್ತು ಸತ್ಯಭಾಮೆ ಇಬ್ಬರ ದೃಷ್ಟಿಗಳು ಸೇರಿ ಕ್ಷಣ ಹೊತ್ತು ಇಬ್ಬರೂ ಗರಹೊಡೆದಂತೆ ನಿಂತರು! ಕೃಷ್ಣ ಪರಮಾತ್ಮ ಸತ್ಯಭಾಮೆಯ ಕೈ ಹಿಡಿದು ‘ಪ್ರಿಯೆ ಸತ್ಯಭಾಮೆ ಬಾ’ ಎಂದಾಗ ಚಾಂದಬಿ ಸಂದರ್ಭಕ್ಕೆ ಬಂದಳು. ಅಲ್ಲಿಗೆ ಮಂಗಳಾರತಿ. ಆಟ ಮುಗಿದರೂ ತಳಕು ಬಿದ್ದ ಇಬ್ಬರ ದೃಷ್ಟಿಗಳನ್ನು ಬೇರ್ಪಡಿಸಲಾಗದೆ ಅದು ಇಬ್ಬರ ಕಲ್ಪನೆಯಲ್ಲಿ ಮುಂದುವರಿಯಿತು.

ಚಾಂದಬಿ ಮತ್ತು ದೇಶಪಾಂಡೆ ಮಾಸ್ತರ ಇಳಿದುಕೊಂಡಲ್ಲಿಗೇ ಬಲದೇವ ನಾಯಕ ಹಾಜರಾಗಿ ಮಾಸ್ತರರಿಗೆ ನಮಸ್ಕಾರ ಮಾಡಿ ತನ್ನ ಪರಿಚಯ ಮಾಡಿಕೊಟ್ಟು ತನ್ನ ಆಸೆಯನ್ನು ತೋಡಿಕೊಂಡ.

ಒಂದು ದೊಡ್ಡ ಸೀಮೆಯ ದೇಸಾಯಿ, ಚಾಂದಬಿಯ ಬದುಕಿಗೆ ಆಧಾರವಾಗಿ ನಿಂತು ಗೌರವಾನ್ವಿತ ಬದುಕು ಕೊಡುತ್ತೇನೆಂದರೆ ಆಗಲಿ, ಕೊಡಲು ಆಗದು ಎಂದರೆ ಸಮ್ಮತಿಯಿಲ್ಲವೆಂದು ಹೇಳಿದರಾಯ್ತೆಂದು ನಿರ್ಧರಿಸಿ, ಹೇಳಿದರು:

‘ಅಯ್ಯಾ ನಾಯಕರೆ,

ನೀವು ದೇಸಗತಿಯ ಜಮೀನ್ದಾರರೇ ಆಗಿದ್ದರೂ ಇವಳು ನಿಮ್ಮ ಸೂಳೆಯಾಗಿ ಇರೋದಕ್ಕೆ ಬರುವವಳಲ್ಲ. ನಿಮ್ಮಿಬ್ಬರಿಗೂ ಪಕ್ಕಾ ಮದುವೆ ಆಗಬೇಕು. ತಾಳಿ ಕಟ್ಟಬೇಕು. ಮದುವೆ ಹೆಂಡತಿಯ ಹಕ್ಕು ಬಾಧ್ಯತೆಗಳು ಏನೇನಿವೆಯೋ, ಅವೆಲ್ಲ ಇವಳಿಗೂ ಸಿಕ್ಕಬೇಕು. ಹಾಗಂತ ಕರಾರು ಪತ್ರಕ್ಕೆ ಸಹಿ ಹಾಕಬೇಕು.

ಇದಕ್ಕೆ ತಯಾರಿದ್ದರೆ, ನಾವು ಹೇಳಿದ ತಾರೀಖಿನಂದು ಕಾಗದ ಪತ್ರ ತಯಾರು ಮಾಡಿಕೊಂಡು ಬರಬೇಕು!’

‘ಇದಕ್ಕೆ ತಯಾರಿದ್ದರ ನಾ ಒಂದ ಮಾತು ಕೇಳತೀನಿ.’

-ಎಂದು ದೇಶಪಾಂಡೆ ಅವರ ಮಡದಿ ಅಂಬಾಬಾಯಿ ಚಹಾಪಾನಿ ಸಮೇತ ಒಳಗಿನಿಂದ ಬಂದು ಇಬ್ಬರಿಗೂ ಚಹಾ ಕೊಟ್ಟು ಕೇಳಿದಳು:

‘ನಾಯಕರ, ನಿಮಗೆಷ್ಟ ಮಂದಿ ಹೆಂಡರಿದ್ದಾರ?’

‘ಒಬ್ಬಳು ಹೆಂಡತಿ ಇದ್ದಳು, ಮನೋಳಿ ಸರದೇಸಾಯರ ಪೈಕಿ. ಆಕಿ ಒಬ್ಬ ಗಂಡು ಮಗನ್ನ ಹೆತ್ತು ಸತ್ತು ಹೋದಳು. ಆಮ್ಯಾಲ ನಾ ಬ್ಯಾರೇ ಮದಿವ್ಯಾಗಿಲ್ಲರಿ.’

ಅಂದ ನಾಯಕ.

‘ಆ ಹುಡುಗನ ವಯಸ್ಸೆಷ್ಟು?’

‘ಹದಿಮೂರು, ಹದಿನಾಕು ಇರಬೇಕ್ರಿ. ಅವ ತನ್ನ ತಾಯೀ ಮನ್ಯಾಗ ಅದಾನ್ರಿ. ಇನ್ನೂ ತನಕ ಶಿವಾಪುರದ ಸಂಪರ್ಕ ಬಂದಿಲ್ಲ.’

‘ಆಯ್ತು ನಾಯಕರ ನಾವು ಈಕೀನ್ನ ದೇವದಾಸಿ ಮಗಳು ಅಂಬೋದು ಗೊತ್ತಾಗದ್ಹಂಗ, ಥೇಟ್ ನಮ್ಮ ಮಗಳು ಬ್ಯಾರೇ ಅಲ್ಲ. ಇವಳು ಬ್ಯಾರೇ ಅಲ್ಲ - ಹಾಂಗ ಬೆಳೆಸೀವಿ. ಇನ್ನ ಮುಂದಿಂದ ನಮ್ಮಾ ಯಜಮಾನರು ಹೇಳಿಧಾಂಗ ಕೇಳ್ರಿ....’
ಅಷ್ಟರಲ್ಲಿ ಬಲದೇವ ನಾಯಕರು ಅಡ್ಡಬಾಯಿ ಹಾಕಿ, -

‘ನೋಡ್ರಿ ತಾಯೀ ಈಕೀ ಸಲುವಾಗಿ ಬೇಕಿದ್ದರ ಪ್ರಾಣ ಕೊಡತೀನಿ...’ ಎಂದ.

***

ಮಾರನೇ ದಿನ ಎಲ್ಲರೂ ಬಯಸಿದಂತೆ ಕಲ್ಲೋಳಿಯ ಹನುಮಂತ ದೇವರ ಸಾಕ್ಷಿಯಲ್ಲಿ ಚಾಂದಬಿ ಮತ್ತು ಬಲದೇವನಾಯ್ಕರ ಮದುವೆಯಾಗಿ ಮಾರನೇ ದಿನ ಗುಲಾಬಿ ಕಣ್ಣೀರುಗರೆಯುತ್ತ ತಂದೆ ತಾಯ್ಗಳಂತಿದ್ದ ದೇಶಪಾಂಡೆ ದಂಪತಿ ಆಶೀರ್ವಾದ ಪಡೆದು ಬಲದೇವ ನಾಯ್ಕರ ಕಾರು ಹತ್ತಿದಳೆಂಬಲ್ಲಿ ನಮ್ಮ ಕಥೆಗೆ ಕಥಾನಾಯಕಿಯ ಪ್ರವೇಶ ಸಂಪೂರ್ಣವಾಯಿತು.

(ಅಂಕಿತ ಪ್ರಕಾಶನ ಹೊರತರುತ್ತಿರುವ ‘ಚಾಂದಬೀ ಸರಕಾರ’ ಕೃತಿ ಅ. 10ರಂದು ಬಿಡುಗಡೆ ಆಗಲಿದೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು