ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಯುದ್ಧ ಕಾಲದ ಹೆಣ್ಣೋಟದ ಕಥನ

Last Updated 26 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಕೃತಿ: ದೇಹವೇ ದೇಶ
ಲೇ: ಗರಿಮಾ ಶ್ರೀವಾಸ್ತವ
ಅನುವಾದ: ವಿಕ್ರಮ ವಿಸಾಜಿ
ಪ್ರ: ಛಂದ ಪುಸ್ತಕ, ಬೆಂಗಳೂರು
ಸಂ: 9945939436

ವಿಕ್ರಮ ವಿಸಾಜಿ ಅನುವಾದಿಸಿದ ‘ದೇಹವೇ ದೇಶ’ ಕೃತಿ ಯುದ್ಧ ಕಾಲದ ಮಹಿಳೆಯರ ಅನುಭವ ಕಥನ. ಹಿಂದಿಯಲ್ಲಿ ಇದನ್ನು ರಚಿಸಿದವರು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರೊ. ಗರಿಮಾ ಶ್ರೀವಾಸ್ತವ. ಈ ಕಥನವು 1992ರಿಂದ 1995ರ ವರೆಗೆ ಪೂರ್ವ ಯುರೋಪಿನ ಕ್ರೊವೇಷ್ಯಾ, ಸರ್ಬಿಯಾ, ಹರ್ಜೆಗೊವಿನಾ ಮತ್ತು ಬೋಸ್ನಿಯಾ ದೇಶಗಳಲ್ಲಿ ನಡೆದ ಯುದ್ಧದಿಂದಾಗಿ ನೊಂದ ಮಹಿಳೆಯರ ದುರಂತ ಕತೆಗಳನ್ನು ಒಳಗೊಂಡಿದೆ.

ಗರಿಮಾ ಅವರು 2010ರಲ್ಲಿ ಕ್ರೊವೇಷ್ಯಾಕ್ಕೆ ಶೈಕ್ಷಣಿಕ ಪ್ರವಾಸಕ್ಕಾಗಿ ತೆರಳಿದ್ದರು. ಶೈಕ್ಷಣಿಕ ಕೆಲಸಗಳ ಜೊತೆಗೆ ಯುದ್ಧಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಮಹಿಳೆಯರನ್ನು ಸಂದರ್ಶಿಸಿ ಅವರ ಯಾತನೆ, ದುಃಖ, ಕಷ್ಟ ಮತ್ತು ಅಸಹಾಯಕತೆಯನ್ನು ಡೈರಿಯಲ್ಲಿ ದಾಖಲಿಸಿಕೊಂಡರು. ಪತ್ರಿಕಾ ಕಚೇರಿಗಳಿಗೆ ಅಲೆದಾಡಿ ಮಾಹಿತಿ ಸಂಗ್ರಹಿಸಿದರು. ಸರ್ಕಾರಿ ದಾಖಲೆಗಳಿಗಾಗಿ ಎಡತಾಕಿದರು. ಇದೆಲ್ಲದರ ಪರಿಣಾಮವೇ ಅವರ ಕೃತಿ ‘ದೇಹ್‌ ಹೀ ದೇಶ್’. ಯುದ್ಧಪೀಡಿತ ಮಹಿಳೆಯರ ಈ ಕತೆಗಳು ಮನಸ್ಸನ್ನು ಘಾಸಿಗೊಳಿಸುತ್ತವೆ. ಯುದ್ಧೋತ್ತರ ಕಾಲದಲ್ಲೂ ಅಲ್ಲಿನ ಸರ್ಕಾರಗಳು ಈ ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಂಡಿದ್ದರ ಚಿತ್ರಣವೂ ಇಲ್ಲಿದೆ. ಯುದ್ಧಗಳು ನಡೆಯುವುದು ದೇಶಗಳ ನಡುವೆ ಅಲ್ಲ, ಬದಲಿಗೆ ಅವು ನಡೆಯುವುದು ಮಹಿಳೆಯರ ದೇಹದ ಮೇಲೆ ಮತ್ತು ಮಕ್ಕಳ ಕನಸುಗಳ ಮೇಲೆ ಎಂಬ ರೂಪಕ ಇಡೀ ಪುಸ್ತಕದಲ್ಲಿ ಹರಡಿಕೊಂಡಿದೆ.

ಡೈರಿ ಸಾಹಿತ್ಯ ಕನ್ನಡದಲ್ಲಿ ಅಷ್ಟಾಗಿ ಪ್ರಚಲಿತವಾಗಿಲ್ಲ. ಹಿಂದಿಯಲ್ಲಿ ಇದಕ್ಕೆ ಅದರದೇ ಆದ ಪ್ರಾಮುಖ್ಯವಿದೆ. ದುರಂತ ಕಥನಗಳ ಜೊತೆಗೆ ಸ್ನೇಹಿತರ ನಡುವಿನ ಮಾತುಕತೆಗಳು, ಇಮೇಲ್‍ಗಳು, ಕವಿತೆಗಳು, ಪ್ರವಾಸ ಕಥನದ ತುಣುಕುಗಳು, ನಾಟಕದ ತುಣುಕುಗಳು ಹತ್ತು ಹಲವು ನಿರೂಪಣೆಗಳು ಸೇರಿ ಒಂದು ವೈವಿಧ್ಯಮಯ ಬರವಣಿಗೆಗೆ ಇಲ್ಲಿ ಅವಕಾಶವಾಗಿದೆ. ಬರವಣಿಗೆಯ ಏಕತಾನತೆಯನ್ನು ಮುರಿಯಲು ಲೇಖಕಿ ಹಲವು ಪ್ರಯೋಗಗಳನ್ನು ಮಾಡಿದಂತಿದೆ. ಇದೆಲ್ಲವೂ ಇಷ್ಟೇ ಆಪ್ತವಾಗಿ ಕನ್ನಡದಲ್ಲಿ ಕಾಣಿಸಿಕೊಂಡಿದೆ. ಎಲ್ಲಕ್ಕೂ ಮಿಗಿಲಾಗಿ ನಾವೆಲ್ಲೂ ಕೇಳಿರದ ಓದಿರದ ಕ್ರೊವೇಷ್ಯನ್ ಕವಿತೆಗಳು ಕೃತಿಯನ್ನು ಆವರಿಸಿಕೊಂಡಿವೆ. ಈ ಕವಿತೆಗಳು ಕೂಡ ಹಿಂಸೆ ಮತ್ತು ಯುದ್ಧದ ಭೀಕರತೆಯನ್ನು ನಿರೂಪಿಸಲು ಗರಿಮಾ ಅವರಿಗೆ ಒಂದು ಮಾರ್ಗವಾಗಿ ಒದಗಿವೆ. ಕವಿ ಇವಾನ್ ಗೊರಾನ್ ಕೆವಾಚಿಚ್ ಕವಿತೆ ಇದಕ್ಕೊಂದು ಸಾಕ್ಷಿ:

ದಿನದ ಬೆಳಕು ಮತ್ತು ರಾತ್ರಿಯ ಕತ್ತಲೆಯಲ್ಲಿ ಬರೀ ರಕ್ತವಿದೆ
ಮನಸ್ಸು ಸದಾ ವಿಚಲಿತ, ಉಸಿರಾಟದಲ್ಲಿ ಅಸಹಜ ಏರಿಳಿತ
ನನ್ನ ಮಿಂಚುವ, ಮುಗ್ಧ, ಕುತೂಹಲಕಾರಿ ಕಣ್ಣುಗಳೀಗ ಸಾಯುತ್ತಿವೆ
ನನ್ನದೇ ಅಂಗೈಯಲ್ಲಿ.

ಹಿಂಸೆಗೊಳಗಾಗುವುದು, ನಿರಾಶ್ರಿತರಾಗುವುದು ಮತ್ತು ಶೋಷಣೆಯ ಹಲವು ಅನುಭವಗಳೊಂದಿಗೆ ಕ್ರೊವೇಷ್ಯಾದ ಕವಿತೆಗಳು ತುಂಬಿಹೋಗಿವೆ. ಇದು ಪ್ರವಾಸ ಕಥನದ ಮಾದರಿಯಲ್ಲಿದ್ದರೂ ಕೊಡುವ ಅನುಭವ ಮಾತ್ರ ವಿಭಿನ್ನವಾದದ್ದು. ಸಾಮಾನ್ಯವಾಗಿ ಪ್ರವಾಸ ಕಥನವೆಂದರೆ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ತಿಂಡಿ ತಿನಿಸುಗಳು, ಭೌಗೋಳಿಕ ಸೌಂದರ್ಯ ಹಾಗೂ ಸಂಗ್ರಹಾಲಯಗಳ ವಿವರ, ಮೋಜುಮಸ್ತಿಗಳ ಆಗರವೇ ಆಗಿರುತ್ತವೆ. ಆದರೆ ಗರಿಮಾ ಅವರು ಹೊತ್ತುಕೊಂಡು ಬಂದದ್ದು ಮನುಕುಲದ ಗಾಯಗಳನ್ನು. ನಾಗರಿಕ ಲೋಕದ ಅನಾಗರಿಕ ನಡೆಗಳನ್ನು. ಮುರುಟಿಹೋದ ಕನಸುಗಳನ್ನು, ಲೆಕ್ಕಕ್ಕೆ ಸಿಗದ ನರಕಗಳನ್ನು. ಅತ್ಯಾಚಾರ, ಲೈಂಗಿಕ ಶೋಷಣೆ, ವೃದ್ಧರ ಕೊಲೆ, ಮಕ್ಕಳ ನರಳಾಟ ಮತ್ತು ಮಾನವ ಕಳ್ಳ ಸಾಗಣಿಕೆಯ ಚಿತ್ರಗಳನ್ನು.

ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಈಗ ‘ಆಘಾತ ಅಧ್ಯಯನಗಳು’ (Trauma Studies) ವಿಸ್ತಾರವಾದ ನೆಲೆ ಪಡೆಯುತ್ತಿವೆ. ಯುದ್ಧ ಮತ್ತು ಯುದ್ಧೋತ್ತರ ಕಾಲದ ದೈಹಿಕ ಮತ್ತು ಮಾನಸಿಕ ಆಘಾತಗಳ ಅಧ್ಯಯನ ಇದರ ಗುರಿ. ಕನ್ನಡದಲ್ಲಿ ಇಂಥ ಅಧ್ಯಯನಕ್ಕೆ ಬೇಕಾದ ಹಲವು ಕೃತಿಗಳು ಅನುವಾದಗೊಂಡಿವೆ. ವಿಸಾಜಿ ಅವರ ಈ ಅನುವಾದ ಹೊಸ ಸೇರ್ಪಡೆಯಾಗಬಲ್ಲದು. ಜೊತೆಗೆ ಇಂಥ ಪರಿಸ್ಥಿತಿಯಲ್ಲಿ ಸರ್ಕಾರಗಳು ಮತ್ತು ನಾಗರಿಕ ಸಮಾಜ ತೆಗೆದುಕೊಳ್ಳಬೇಕಾದ ಮಾನವೀಯ ನಿರ್ಧಾರಗಳನ್ನು ಕುರಿತು ಕೃತಿ ಬೆಳಕು ಚೆಲ್ಲಿದೆ. ಟ್ರಾಮಾ ಸ್ಟಡೀಸ್‍ನಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಕ್ಯಾಥಿ ಕ್ಯಾರತ್ ಅವರ ವಿಚಾರಗಳನ್ನು ಗರಿಮಾ ತಮ್ಮ ಪ್ರಸ್ತಾವದಲ್ಲಿ ಸೇರಿಸುವುದರ ಮೂಲಕ ಇಂಥ ಕೃತಿಗಳ ಓದಿಗೆ ಬೇಕಾದ ಒಂದು ಹಿನ್ನೆಲೆಯನ್ನು ಒದಗಿಸಿದ್ದಾರೆ. ಎಲ್ಲವನ್ನೂ ಧ್ವಂಸಗೊಳಿಸುವುದರ ಮೂಲಕ ಮಾನಸಿಕ ಆಘಾತ ಉಂಟು ಮಾಡುವುದಷ್ಟೇ ಅಲ್ಲ, ಮನುಷ್ಯರ ಅಸ್ತಿತ್ವವೂ ಮುರುಟಿಹೋಗುತ್ತದೆ.

ಈ ಕೃತಿ ಹೊಸದಾಗಿ ಕಟ್ಟಬೇಕಾದ ಇತಿಹಾಸದ ಒಂದು ಮಾದರಿಯ ಬಗ್ಗೆ ಕೂಡ ಸುಳಿವು ಕೊಟ್ಟಿದೆ. ಯುದ್ಧದಲ್ಲಿ ಸೋಲು ಗೆಲುವುಗಳ ಸರಳ ಇತಿಹಾಸದಾಚೆಗೆ ನಿರೂಪಿಸಬೇಕಾದ ಜನರ ಸಂಕಟಗಳನ್ನು ಹಿಡಿದಿಟ್ಟಿದೆ. ಕ್ರೌರ್ಯ, ಅತ್ಯಾಚಾರ ಮತ್ತು ಲೈಂಗಿಕ ಶೋಷಣೆಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗದ ಹೆಣ್ಣುಮಕ್ಕಳ ಅನುಭವಗಳು ಇತಿಹಾಸದ ಪುಟಗಳಲ್ಲಿ ಕಾಣಸಿಗುವುದಿಲ್ಲ. ಇತಿಹಾಸವು ಹಕ್ಕು ಸ್ಥಾಪಿಸದ ಮನುಷ್ಯರ ನರಳಾಟವನ್ನು ಈ ಕೃತಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಯುದ್ಧ ಮಾಡಿದವರಿಗಿಂತ ಯುದ್ಧಕ್ಕೆ ಬಲಿಯಾದವರ ಸಂಕಟವನ್ನು ನಿರೂಪಿಸಿದೆ. ಹಲವು ರೋಗಗಳಿಂದ ನರಳುತ್ತಿರುವ, ಎಲ್ಲ ದುರಂತಗಳನ್ನು ಮೀರಿ ಮತ್ತೆ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ ಹಲವು ಕತೆಗಳು ಮನಸ್ಸನ್ನು ಆರ್ದ್ರಗೊಳಿಸುತ್ತವೆ.

ಇದೊಂದು ಸಹಜ ಅನುವಾದ. ಓದಿಸಿಕೊಳ್ಳುವ, ಅನುಭವಗಳನ್ನು ಎದೆಗೆ ನಾಟಿಸುವ ಅನುವಾದ. ಗದ್ಯ ಮತ್ತು ಪದ್ಯಗಳ ಮಿಶ್ರಣವಾಗಿರುವ ಈ ಕೃತಿಯನ್ನು ವಿಸಾಜಿ ಅವರು ಸೂಕ್ಷ್ಮವಾಗಿ ಕನ್ನಡೀಕರಿಸಿದ್ದಾರೆ. ಈ ಬಗೆಯ ಹೊಸ ಸಾಹಿತ್ಯ, ಯುದ್ಧಗಳ ನಿರೂಪಣೆ, ಯುದ್ಧೋತ್ತರ ಕಾಲದ ಮಾನಸಿಕ ಆಘಾತಗಳ ಕಥನಗಳು ಕನ್ನಡಕ್ಕೆ ಬರುವುದು ಅಗತ್ಯ. ಡೈರಿ ಸಾಹಿತ್ಯ ಪ್ರಕಾರವೊಂದು ಕನ್ನಡದಲ್ಲಿ ಹೊಸ ಉಸಿರಾಟದೊಂದಿಗೆ ಹೊಮ್ಮಬೇಕಾದ ಅಗತ್ಯವನ್ನು ಕನ್ನಡ ಬರಹಗಾರರು ಮನಗಂಡರೆ ಒಳ್ಳೆಯದು. ಕನ್ನಡದ ಸಂವೇದನೆಯನ್ನು ಹಿಗ್ಗಿಸುವ ಅನೇಕ ಅನುವಾದ ಕೃತಿಗಳು ಕನ್ನಡದಲ್ಲಿ ಪ್ರಕಟಗೊಳ್ಳುತ್ತಿವೆ. ಕನ್ನಡದಲ್ಲೀಗ ಅನುವಾದಗಳ ಸುಗ್ಗಿ. ಹೌದು, ಇದು ಅನುವಾದಗಳ ಯುಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT