ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವವೇ ಕವಿತೆಯಾದಾಗ

Last Updated 26 ಜನವರಿ 2020, 10:51 IST
ಅಕ್ಷರ ಗಾತ್ರ

ಭಾವಗಳಿಗೆ ಚ್ಯುತಿ ತಾರದಂತೆ ಪದ್ಯ ಕಟ್ಟುವ ಶೈಲಿ ಮಹತ್ವದ್ದು. ಚಿಕ್ಕ ಸಾಲುಗಳಲ್ಲಿಯೇ ಹೇಳಬೇಕಾದ ಸಾರ ಅದರೊಳಗೆ ಹುದುಗಿದ್ದರೆ ಅದಕ್ಕಿಂತ ಮಿಗಿಲಾದ ಕೌಶಲವಿಲ್ಲ. ರಸ್ತೆಯಲ್ಲಿ, ಬಸ್‌ ನಿಲ್ದಾಣದಲ್ಲಿ, ಆಫೀಸಿನಲ್ಲಿ, ಹೊಟೇಲ್‌ಗಳಲ್ಲಿ ಹೀಗೆ ವಿವಿಧ ತಾಣಗಳಲ್ಲಿ ನಮಗಾದ ಅನುಭವಗಳನ್ನು ಮೆಲುಕು ಹಾಕುತ್ತಾ ಕೂತರೆ ತಾನಾಗಿಯೇ ಪದಗಳು ಹುಟ್ಟುತ್ತವೆ.

ಕವಿ ಆಕರ್ಷ ರಮೇಶ್‌ ಕಮಲ ಅವರು ‘ಗ್ರಾಫಿಟಿಯ ಹೂವು’ ಸಂಕಲನದಲ್ಲಿ ಇಂತಹ ಪ್ರಯತ್ನ ಮಾಡಿದ್ದಾರೆ. ವಿದೇಶದಲ್ಲಿ ತಮಗಾದ ಅನುಭವ, ಅಲ್ಲಿನ ಆಚಾರ–ವಿಚಾರ, ಜನರೊಂದಿಗಿನ ಗುದ್ದಾಟಗಳನ್ನು ಕವಿತೆಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಆಧುನಿಕ ಬದುಕಿಗೆ ಕನ್ನಡಿ ಹಿಡಿದಂತೆ ತೂಗುತ್ತವೆ ಇಲ್ಲಿನ ಪದ್ಯಗಳು. ನಿತ್ಯ ಬದುಕಿನಲ್ಲಿ ಎದುರಾಗುವ ಸನ್ನಿವೇಶಗಳನ್ನು ಆಧರವಾಗಿಟ್ಟುಕೊಂಡು ಒಮ್ಮೆ ವ್ಯಂಗ್ಯವಾಗಿ ರಂಜಿಸಿದರೆ, ಮಗದೊಮ್ಮೆ ಗಾಢ ಚಿಂತನೆಗೆ ಹಚ್ಚುತ್ತವೆ. ನಮ್ಮ ಯೌವ್ವನ ಮತ್ತು ಮುಪ್ಪಿನ ಹಂತವನ್ನು ಕವಿ ಒಂದು ಅಂಗಿಯ ಉದಾಹರಣೆಯೊಂದಿಗೆ ಹೋಲಿಸುತ್ತಾ ಓದುಗರ ಮನ ಮುಟ್ಟುತ್ತಾರೆ. ಅವರ ವಿಮಾನ ಪ್ರಯಾಣದಲ್ಲಿ ಕಂಡ ಭೂದೃಶ್ಯವನ್ನು ಬೇಸರದಿಂದ ವಿವರಿಸಿದ್ದಾರೆ. ತಾಂತ್ರಿಕ ಯುಗದಲ್ಲಿ ಪ್ರಕೃತಿಗೆ ಆಗುತ್ತಿರುವ ಗಾಯ, ಕರಗುತ್ತಿರುವ ಬೆಟ್ಟ–ಗುಟ್ಟಗಳು ಹೀಗೆ ನಿಸರ್ಗ ವಿನಾಶದ ಬಗ್ಗೆ ಕಳವಳದ ದನಿ ಕವಿತೆಯಲ್ಲಿ ವ್ಯಕ್ತಗೊಂಡಿದೆ.‘ಮಹಾಸಾಗರದಲ್ಲಿ ಕಣ್ಣೀರೆ ನೀರಿನ ಮೂಲ’ ಎನ್ನುವ ಸಾಲು ಮನಕಲಕುವಂತಿದೆ.

ಕಾರ್ಮಿಕ ಕುಟುಂಬದ ಮಗುವಿನ ಸ್ನಾನದ ಪರಿ ಮತ್ತು ಅಪಾರ್ಟ್‌ಮೆಂಟಿನಲ್ಲಿ ಶವರ್‌ ಕೆಳಗೆ ನಿಂತು ಉಳ್ಳವರ ಮಗು ಮಾಡುವ ಸ್ನಾನದ ಬಗೆಯನ್ನು ವಿವರಿಸುತ್ತಾ, ಎರಡೂ ಕುಟುಂಬಗಳ ಸ್ಥಿತಿ, ಸಮಯ ಮತ್ತು ಆ ಕ್ಷಣವನ್ನು ಹೇಗೆ ಕಳೆಯುತ್ತಾರೆ ಎಂಬ ದೃಶ್ಯವನ್ನು ಕಣ್ಣಿಗೆ ಕಟ್ಟಿಕೊಡುವಂತೆ ಅಕ್ಷರಗಳಲ್ಲಿ ಚಿತ್ರಿಸಿದ್ದಾರೆ.

‘ಅವಳು ಕವಿತೆ ಬರೆದುಕೊಡಿ ಎಂದರೆ’ ಕವಿತೆಯಲ್ಲಿ ಪ್ರೇಯಸಿಗೆ ಹೇಗೆ ಕವಿತೆ ಬರೆದುಕೊಡಬೇಕೆಂಬ ಟಿಪ್ಸ್‌ ನೀಡುತ್ತಾ ಓದುಗರಲ್ಲಿ ಕಿರುನಗೆಯನ್ನೂ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT