ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು | ತೂಗುತಿದೆ ನಿಜ ಬಯಲಲಿ - ಶರೀಫರ ಹೊನಲಿನಲ್ಲಿ ಮೀಯುವ ಸುಖ

Last Updated 2 ಜುಲೈ 2022, 21:15 IST
ಅಕ್ಷರ ಗಾತ್ರ

‘ತೂಗುತಿದೆ ನಿಜ ಬಯಲಲಿ’ ಇದುಶಿಶುನಾಳ ಶರೀಫರ ಆಯ್ದ ತತ್ವಪದಗಳ ವಿಶ್ಲೇಷಣಾತ್ಮಕ ಕೃತಿ. ಲೇಖಕ ದಾವಲಸಾಬ ನರಗುಂದ ಅವರು ಕನ್ನಡದ ಮಹತ್ವದ ಅನುಭಾವಿ ಸಂತ ಶರೀಫರ ಆಯ್ದ ಐವತ್ತೈದು ತತ್ವಪದಗಳ ಜೀವಸಾರವನ್ನು ಇಲ್ಲಿ ಓದುಗರಿಗೆ ಉಣಬಡಿಸಿದ್ದಾರೆ. ಕನ್ನಡದಲ್ಲಿ ಶರೀಫರ ಕುರಿತಾಗಿ ಹಲವು ಕೃತಿಗಳು ಮೂಡಿನಿಂತರೂ ಈ ಕೃತಿ ಹಲವು ವಿಶೇಷಗಳನ್ನು ಮೈದುಂಬಿಕೊಂಡು ನಿಂತಿದೆ. ಆನುಭಾವಿಕ ಪದಗಳನ್ನೂ ವರ್ತಮಾನದಲ್ಲಿಟ್ಟು ವಿಶ್ಲೇಷಿಸುವ ಜಾಣ್ಮೆಯೂ ಇದೆ.

‘ಪದವ ಬೇಗನೆ ಕಲೀ ಕಲಿ ಶಿವಶರಣರ
ಹೃದಯದೊಳು ನೀ ನಲೀ ನಲಿ’

ಇವರ ಪದದ ಜಾಡಿನ ಸಂಸ್ಕೃತಿಯೇ ಕನ್ನಡ ನಾಡಿನಲ್ಲಿ ದೊಡ್ಡದಿದೆ. ಒಂದೆಡೆ ಕಡಕೋಳ ಮಡಿವಾಳಪ್ಪ, ಇನ್ನೊಂದೆಡೆ ಶರೀಫರು ಸಮ ಸಮಾಜದ ಹರಿಕಾರರು. ಹರಿ ಹರ ಭೇದವಿಲ್ಲದೆ ಅವರು ಸಮನ್ವಯದ ಜೀವತಾಣಗಳನ್ನು ಶಿವಶರಣರ ಹೃದಯದಲ್ಲಿ ಮಾತ್ರವಲ್ಲದೆ, ಸಾಮಾನ್ಯ ಜನತೆಯ ಬಾಳಿನ ಸುಖ ದುಃಖದ ಆಚರಣೆಯಲ್ಲಿಯೂ ಅಪರಿಮಿತ ಬೆಳಗನ್ನು ಸೃಷ್ಟಿಸಿ ನಿಂತವರು.

‘ಓದುವವಗ ಎಚ್ಚರಿರಬೇಕು’ ಎಂಬುವ ತತ್ವಪದದಲ್ಲೇ ಹಿಂದಿನ ಜ್ಞಾನವನರಿತು ನಾದ ಸ್ವರ ಸಂಗೀತದ ಹಿತದಿಂದ ಶಿಶುನಾಳಧೀಶನನ್ನೂ ಅರ್ಥೈಸುವ ವಿಸ್ತಾರದ ನೆಲೆ ಇರುವುದನ್ನು ಲೇಖಕರು ಗುರುತಿಸಿದ್ದಾರೆ. ‘ಆರುಶಾಸ್ತ್ರ ಹದಿನೆಂಟು ಪುರಾಣ ನನ್ನ ಬಗಲಾಗ, ಪ್ರಭುಲಿಂಗಲೀಲೆ ನನ್ನ ತಲಿಮ್ಯಾಗ’ ಎಂದು ಶರೀಫರು ನಿಖರವಾಗಿ ಹೇಳುವ ಬಗೆಯಲ್ಲಿಯೇ ಅವರು ಬಸವಣ್ಣನನ್ನು ಭಕ್ತನೆಂತಲೂ, ಪ್ರಭುದೇವರನ್ನು ಪರಮಾತ್ಮನೆಂತಲೂ ಭಾವಿಸಿದ ಅವರ ಸಂತಗುಣದಲ್ಲಿಯೇ ವಚನದ ಜೀವಸಾರವಿದೆ.

ಚಿಂತೆಯಾತಕೆ ಯೋಗಿಗೆ ಎನ್ನುವಲ್ಲಿಯೇ ಯೋಗಿಗಳಿಗೆ ಚಿಂತೆಗಳಿರಬಾರದು. ಏಕೆಂದರೆ ಆತ ಸದ್ಗುರುವಿನ ಅಂತರಂಗದೊಳಗೆ ಇರುವವ, ಕಾಮ ಮತ್ತು ಕಾಲವನ್ನು ಮೀರಿದವ, ಪಂಚೇಂದ್ರಿಯ, ಮಾಯಾಪ್ರಪಂಚ, ವಿಷಯಸುಖ, ಅಂತರಂಗದ ವಿಕಾರ ಅಳಿದವ, ಅಪ್ಪಟ ನಾದಬಿಂದು, ಬೋಧದ ಮಾತಿನಿಂದ ಯೋಗಿಯಾಗಿ ತನ್ನ ಈಶನನ್ನು ಒಲಿಸಿಕೊಂಡವ ಎಂಬುದನ್ನು ಶರೀಫರಿಲ್ಲಿ ಒತ್ತಿಹೇಳಿದ್ದಾರೆ.

ವಸಾಹತುಪೂರ್ವ ಮತ್ತು ವಸಾಹತೋತ್ತರ ಚಿಂತನೆಗಳು, ಗಿರಣಿ ವಿಸ್ತಾರ...ದಲ್ಲೂ, ವರ್ತಮಾನದ ದಂದುಗದಲ್ಲೂ, ವ್ಯಕ್ತಿ ಮತ್ತು ಸಮಾಜದ ನಡವಳಿಕೆಯಲ್ಲೂ, ಸಮುದಾಯದ ಆಚರಣೆಗಳಲ್ಲೂ ಹೇಗೆ ಬಿಂಬಿತವಾಗಿವೆ ಎಂಬುದಕ್ಕೆ ಒಳ್ಳೆಯ ಟಿಪ್ಪಣಿಗಳು ಇಲ್ಲಿವೆ. ಈ ಕೃತಿಯ ಮುನ್ನುಡಿಯಲ್ಲಿ ನಿಂಗಪ್ಪ ಮುದೇನೂರು ಅವರು ಶರೀಫರ ಪ್ರತಿಸಾಂಸ್ಕೃತಿಕ ನೆಲೆಗಳನ್ನು ಗುರುತಿಸಿದ್ದಾರೆ. ಯುವ ಬರಹಗಾರ ನರಗುಂದರ ಮೊದಲ ಪ್ರಯತ್ನದ ಈ ಕೃತಿಯನ್ನು ನಾವು ಮೆಚ್ಚಬಹುದಲ್ಲದೇ, ಹೊಸ ತಲೆಮಾರೂ ಯೋಚಿಸಬೇಕಾದ ಶರೀಫರ ಹಾದಿಯ ಮೇಲೆ ಇದು ಬೆಳಕುಚೆಲ್ಲಿದೆ.

ಕೃತಿ: ತೂಗುತಿದೆ ನಿಜ ಬಯಲಲಿ

ಲೇ: ದಾವಲಸಾಬ ನರಗುಂದ

ಪ್ರ: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ,ಕಲಬುರಗಿ

ಸಂ: 9448124431

ಪುಟ: 176

ಬೆಲೆ:150

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT