ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಶಾಸನಗಳಲ್ಲಿ ಖಗೋಳಶಾಸ್ತ್ರ– ಹಿಸ್ಟರಿ ಆಫ್‌ ದಿ ಸ್ಕೈ ಆನ್‌ ದಿ ಸ್ಟೋನ್ಸ್‌

Last Updated 17 ಜುಲೈ 2022, 0:00 IST
ಅಕ್ಷರ ಗಾತ್ರ

ಶಾಸನಗಳು ನಮ್ಮ ಇತಿಹಾಸದ ಹಲವು ವಿವರಗಳನ್ನು ಒದಗಿಸುವ ಸಂಸ್ಕೃತಿಕೋಶಗಳೇ ಹೌದು. ನಮ್ಮ ದೇಶದಲ್ಲಿ ಶಾಸನಗಳಿಗೇನೂ ಕೊರತೆಯಿಲ್ಲ; ಸಾವಿರಾರು ಸಿಕ್ಕಿವೆ; ಈಗಲೂ ಸಿಕ್ಕುತ್ತಿವೆಯೆನ್ನಿ! ಕೇವಲ ಕಲ್ಲುಗಳ ಮೇಲೆ ಕೆತ್ತಿರುವಂಥವಷ್ಟೆ ಶಾಸನಗಳಲ್ಲ; ಬಹುಕಾಲ ಉಳಿಯುವಂಥ ವಸ್ತುಗಳ ಮೇಲೆ ಕೆತ್ತಿರುವ ಬರಹಗಳನ್ನು ‘ಶಾಸನ’ ಎಂದು ಕರೆಯುವುದು ವಾಡಿಕೆ.

‘ಶಾಸನ’ ಎಂಬುದು ಸರಳವಾಗಿ ‘ಆಜ್ಞೆ’ ಎಂದು ಹೇಳಬಹುದು. ಅಧಿಕಾರವನ್ನು ನಡೆಸುವವರು – ಸಾಮಾನ್ಯವಾಗಿ ರಾಜರು – ಆಜ್ಞೆಗಳನ್ನು ಹೊರಡಿಸುತ್ತಿದ್ದರು. ಹೀಗಾಗಿ ಶಾಸನಗಳನ್ನು ಆಯಾ ಕಾಲದ ಪ್ರಭುತ್ವದ ಅಧಿಕೃತ ದಾಖಲೆಗಳು ಎಂದೇ ಪರಿಗಣಿಸಲಾಗುತ್ತದೆ. ಪುರಾತತ್ವಶಾಸ್ತ್ರಜ್ಞರು, ಇತಿಹಾಸಕಾರರು ಮುಂತಾದ ಸಂಶೋಧಕರು ಈ ಶಾಸನಗಳ ಬರಹಗಳನ್ನು ‘ಓದಿ’, ಆ ಕಾಲದ ಸಮಾಜದ ಗೊತ್ತು–ಗುರಿಗಳನ್ನು ವಿಶ್ಲೇಷಿಸುತ್ತಿರುತ್ತಾರೆ. ಇದರಿಂದ ನಮ್ಮ ಇತಿಹಾಸದ ಪರಿಚಯ ನಮಗೆ ಸ್ಪಷ್ಟವಾಗಿ ಒದಗುವಂತಾಗುತ್ತದೆ. ಕನ್ನಡದ ಸಂದರ್ಭದದಲ್ಲಿ ಹೇಳುವುದಾದರೆ, ಎಂ. ಚಿದಾನಂದಮೂರ್ತಿ ಅವರ ಕೃತಿ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಉಲ್ಲೇಖಾರ್ಹವಾದುದು. ಶಾಸನಗಳು ಅವುಗಳ ಒಡಲಲ್ಲಿ ಎಷ್ಟೆಲ್ಲ ಮಾಹಿತಿಗಳನ್ನು ಅಡಗಿಸಿಕೊಂಡಿರುತ್ತವೆ; ಈ ಮಾಹಿತಿಗಳು ನಮ್ಮ ಗತಕಾಲವನ್ನು ಅರ್ಥೈಸಿಕೊಳ್ಳುವುದಕ್ಕೆ ಎಷ್ಟೆಲ್ಲ ನೆರವಾಗುತ್ತವೆ ಎಂಬುದಕ್ಕೆ ಈ ಗ್ರಂಥ ಒಂದು ಸಾಕ್ಷ್ಯವಾಗಿದೆಯೆನ್ನಿ.

ಶಾಸನಗಳಲ್ಲಿ ಅಧ್ಯಯನಕ್ಷೇತ್ರಕ್ಕೆ ನೂರಾರು ವಿದ್ವಾಂಸರು ಕೊಟ್ಟಿರುವ ಕೊಡುಗೆಯಿಂದಲೇ ನಾವು ನಮ್ಮ ಪೂರ್ವಜರ ರೀತಿ–ನೀತಿಗಳ ಬಗ್ಗೆ ‘ಅಧಿಕೃತ’ವಾಗಿ ತಿಳಿಯುವಂತಾಗಿದೆ. ಹೀಗಿದ್ದರೂ ಎಲ್ಲ ಶಾಸನಗಳೂ ಅವುಗಳ ಗುಟ್ಟನ್ನು ಬಿಟ್ಟುಕೊಟ್ಟಿವೆ ಎನ್ನುವಂತಿಲ್ಲ; ಹಲವು ಶಾಸನಗಳನ್ನು ನಾವಿನ್ನೂ ಪೂರ್ಣವಾಗಿ ಓದಲಾಗಿಲ್ಲ; ಓದಲಾಗಿರುವಂಥ ಎಲ್ಲವೂ ನಮಗೆ ಅರ್ಥವಾಗಿದೆ ಎನ್ನುವಂತೆಯೂ ಇಲ್ಲ. ಮಾತ್ರವಲ್ಲ, ಇನ್ನೂ ಹಲವು ಆಯಾಮಗಳಿಂದಲೂ ಇವುಗಳ ಅಧ್ಯಯನ ನಡೆಯಬೇಕಾಗಿದೆ. ಬಿ. ಎಸ್‌. ಶೈಲಜಾ ಮತ್ತು ಗೀತಾ ಕೈದಾಳ ಗಣೇಶ ಅವರು ರಚಿಸಿರುವ ಕೃತಿ ‘ಹಿಸ್ಟರಿ ಆಫ್‌ ದಿ ಸ್ಕೈ ಆನ್‌ ದಿ ಸ್ಟೋನ್ಸ್‌’ ಈ ಹಿನ್ನೆಲೆಯಲ್ಲಿ ಒಂದು ವಿಶಿಷ್ಟ ಕೃತಿಯಾಗಿದೆ. ಶಾಸನಗಳು ಪ್ರಕಟಮಾಡುತ್ತಿರುವ ಖಗೋಳಶಾಸ್ತ್ರೀಯ ಅಂಶಗಳ ಬಗ್ಗೆ ಈ ಕೃತಿ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ.

ಶಾಸನಗಳು ಹೇಗಿರಬೇಕು – ಎಂಬುದರ ಸಾಮಾನ್ಯ ನಿಯಮವನ್ನು ನಮ್ಮ ಪೂರ್ವಸೂರಿಗಳು ಮಾಡಿಕೊಂಡಿದ್ದಂತೆ ತೋರುತ್ತದೆ. ಶಾಸನಪತ್ರದಲ್ಲಿ ರಾಜನ ರುಜುವಿನ ಜೊತೆಯಲ್ಲಿ, ರಾಜಾಜ್ಞೆ ಹೊರಟ ದಿನಾಂಕವೂ ಇರಬೇಕೆಂಬ ವಿಧಿಯನ್ನು ‘ಶುಕ್ರನೀತಿಸಾರ’ ಗ್ರಂಥ ಹೇಳುತ್ತದೆ. ಬಹುಪಾಲು ಶಾಸನಗಳು ಇಂಥ ಕೆಲವೊಂದು ಸಾಮಾನ್ಯನಿಯಮಗಳನ್ನು ಪಾಲಿಸಿರುವುದನ್ನೂ ಕಾಣುತ್ತೇವೆ. ಕನ್ನಡಭಾಷೆಯ ಸುಮಾರು ಮೂವತ್ತೆಂಟು ಸಾವಿರ ಶಾಸನಗಳಲ್ಲಿ ಒಂದು ಸಾವಿರದೈನೂರು ಶಾಸನಗಳಲ್ಲಿ ಖಗೋಳಶಾಸ್ತ್ರದ ವಿವರಗಳಿರುವುದನ್ನು ಗುರುತಿಸಿ, ಅವನ್ನು ವೈಜ್ಞಾನಿಕವಾಗಿ ಅಧ್ಯಯನವನ್ನು ನಡೆಸಿರುವ ಶೈಲಜಾ ಮತ್ತು ಗೀತಾ ಅವರು ನಮ್ಮ ದೇಶದ ಪ್ರಾಚೀನ ಖಗೋಳಶಾಸ್ತ್ರದ ಬಗ್ಗೆ ನಮ್ಮ ತಿಳಿವಳಿಕೆಯನ್ನು ವಿಸ್ತರಿಸಿದ್ದಾರೆ. ಇದರ ಜೊತೆಗೆ ಇತಿಹಾಸದ ಹಲವು ಸಂದರ್ಭಗಳ ಕಾಲನಿರ್ಣಯಕ್ಕೂ ನಿಖರತೆಯನ್ನು ತಂದುಕೊಟ್ಟಿದ್ದಾರೆ. ಇನ್ನು ಬೇರೆ ಭಾಷೆಗಳ ಶಾಸನಗಳನ್ನೂ ಈ ನೆಲೆಯಲ್ಲಿ ಅಧ್ಯಯನ ನಡೆಸಿದರೆ ನಮ್ಮ ದೇಶದ ಇತಿಹಾಸಕಾಲಚಕ್ರದ ದಿಕ್ಕು–ದೆಸೆಗಳು ಬೆಳಗುವುದರಲ್ಲಿ ಅನುಮಾನವಿಲ್ಲ.

ಶಾಸನಗಳಲ್ಲಿ ರಾಜನ ವಿಜಯ ಯಾತ್ರೆಯ ಘೋಷಣೆಯಿರಬಹುದು, ದಾನದ ವಿವರಗಳಿರಬಹುದು, ವೀರರ ಮರಣದ ಸ್ಮರಣೆ ಇರಬಹುದು, ಸಮಾಜದ ಕೆಲವೊಂದು ಆಚಾರ–ವಿಚಾರಗಳನ್ನು ತಿಳಿಸಿಕೊಡುವಂಥವು ಇರಬಹುದು – ಈ ಎಲ್ಲದರಲ್ಲೂ ಶಾಸನವನ್ನು ಹೊರಡಿಸಿದ ದಿನಾಂಕ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಅಂತರ್ಗತವಾಗಿರುತ್ತದೆ. ಈ ದಿನಾಂಕವನ್ನು ನಾವು ಕಂಡುಹಿಡಿದರೆ ಆ ಶಾಸನದ ಕಾಲ ಯಾವುದೆಂದು ನಿರ್ಧಾರವಾಗುತ್ತದೆ. ಆದರೆ ಇದು ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಲ್ಲ. ಏಕೆಂದರೆ ಈ ದಿನಾಂಕಗಳು ನಮ್ಮ ಇಂದಿನ ದಿನಾಂಕಗಳಂತೆ ‘ಏಕ ಕ್ಯಾಲೆಂಡರ್‌’ ಪದ್ಧತಿಯನ್ನು ಅನುಸರಿಸಿರುವಂಥವಲ್ಲ; ಶಾಸನಗಳಲ್ಲಿ ಕೆಲವೊಮ್ಮೆ ಸಂವತ್ಸರದ ಹೆಸರು ಉಲ್ಲೇಖವಾಗಿದ್ದರೆ, ಕೆಲವೊಮ್ಮೆ ಕಲಿಯುಗದಿಂದ ಅಂದಿಗೆ ಎಷ್ಟು ಕಾಲ ಸರಿದಿವೆ – ಎಂಬ ಉಲ್ಲೇಖ ಇರುತ್ತದೆ. ಇನ್ನು ಕೆಲವು ಶಕೆಗಳ ಹೆಸರನ್ನು ಹೇಳುತ್ತಿದ್ದರೆ, ಮತ್ತೆ ಕೆಲವು ರಾಜನ ಪಟ್ಟಾಭಿಷೇಕದ ದಿನವನ್ನೇ ಆರಂಭದ ದಿನವನ್ನಾಗಿ ಹೇಳುತ್ತಿರುತ್ತವೆ.

ಇಷ್ಟೆಲ್ಲ ಗೊಂದಲಗಳ ನಡುವೆ ನಮ್ಮ ಕೈ ಹಿಡಿದು ಮುನ್ನಡೆಸುವಂಥವು ಶಾಸನಗಳಲ್ಲಿರುವ ಗ್ರಹಣಗಳ ಕುರಿತಾದ ವಿವರಗಳು ಎನ್ನುತ್ತಾರೆ, ಈ ಕೃತಿಯ ಲೇಖಕಿಯರು. ಸೂರ್ಯಗ್ರಹಣ, ಚಂದ್ರಗ್ರಹಣಗಳ ಉಲ್ಲೇಖಗಳಲ್ಲದೆ, ಕೆಲವೊಂದು ಶಾಸನಗಳಲ್ಲಿ ಬೇರೆ ಬೇರೆ ಗ್ರಹಗಳ ಸಂಯೋಗ ಮುಂತಾದ ಖಗೋಳೀಯ ವಿವರಗಳೂ ಇರುತ್ತವೆ. ಗ್ರಹಣಗಳು ಎಂದೆಲ್ಲ ನಡೆದಿವೆ ಎಂಬುದನ್ನುಇಂದು ನಾವು ನಿಖರವಾಗಿ ಲೆಕ್ಕಾಚಾರ ಮಾಡಿ ತಿಳಿದುಕೊಳ್ಳಬಹುದು. ಈ ದಾರಿಯಲ್ಲಿ ಸಂಶೋಧಕರು ಮುಂದುವರೆದು ಆ ನಿರ್ದಿಷ್ಟ ಶಾಸನದ ಕಾಲವನ್ನು ಪತ್ತೆ ಮಾಡಬಹುದಾಗಿದೆ. ಹೀಗೆ ಮಾಡುವುದರಿಂದ ನಮ್ಮ ಇತಿಹಾಸದ ಹಲವು ವಿವರಗಳ ಸರಿಯಾದ ಕಾಲನಿರ್ಣಯ ಸಾಧ್ಯವಾಗುತ್ತದೆ. ಉದಾಹರಣೆಗೆ, ಈ ಕೃತಿಯಲ್ಲಿ ನಾವು ಟಿಪ್ಪುವಿನ ಕಾಲದ ಶಾಸನದ ಕಾಲನಿರ್ಣಯದ ವಿಶ್ಲೇಷಣೆಯನ್ನೂ, ರಾಮಾನುಜಾಚಾರ್ಯರ ಜೀವಿತಾವಧಿಯನ್ನು ಕುರಿತ ಚರ್ಚೆಯನ್ನೂ ಗಮನಿಸಬಹುದು.

ಒಟ್ಟಿನಲ್ಲಿ ‘ಹಿಸ್ಟರಿ ಆಫ್‌ ದಿ ಸ್ಕೈ ಆನ್‌ ದಿ ಸ್ಟೋನ್ಸ್‌’ ಕೃತಿಯ ಮೂಲಕ ಶೈಲಜಾ ಮತ್ತು ಗೀತಾ ಅವರು ಪ್ರಾಚೀನ ಭಾರತೀಯ ಖಗೋಳಶಾಸ್ತ್ರದ ಆಳ–ಅಗಲಗಳ ಬಗ್ಗೆ ಗಮನಸೆಳೆಯುವುದರ ಜೊತೆಗೆ, ನಮ್ಮ ಇತಿಹಾಸದ ಅಧ್ಯಯನಕ್ಕೆ ದಕ್ಕಬೇಕಾದ ವೈಜ್ಞಾನಿಕ ಸ್ಪರ್ಶದ ಬಗ್ಗೆಯೂ ಅರಿವನ್ನು ಮೂಡಿಸುತ್ತಾರೆ. ದಿಟ, ಈ ಕೃತಿಯನ್ನು ಅರ್ಥ ಮಾಡಿಕೊಳ್ಳಲು ತಕ್ಕಮಟ್ಟಿಗೆ ವಿಜ್ಞಾನ–ಗಣಿತದ ತಿಳಿವಳಿಕೆಯೂ ಅನಿವಾರ್ಯ. ಇತ್ತಿಚೆಗೆ ಶೈಲಜಾ ಮತ್ತು ಸೀತರಾಮ ಜಾವಗಲ್‌ ಅವರು ಪ್ರಕಟಿಸಿರುವ ಶಂಕರನಾರಾಯಣ ಜೋಯಿಸರ ‘ಗಣಿತಗನ್ನಡಿ’ ಕೃತಿಯನ್ನೂ ಓದಿಕೊಂಡರೆ ನಮಗೆ ಅನುಕೂಲವಾಗುತ್ತದೆ.

ಕೃತಿ: ಹಿಸ್ಟರಿ ಆಫ್‌ ದಿ ಸ್ಕೈ ಆನ್‌ ದಿ ಸ್ಟೋನ್ಸ್‌

ಲೇಖಕಿಯರು: ಬಿ. ಎಸ್‌. ಶೈಲಜಾ ಹಾಗೂ ಗೀತಾ ಕೈದಾಳ ಗಣೇಶ

ಪ್ರ: ಇನ್ಫೋಸಿಸ್‌ ಫೌಂಡೇಷನ್‌, ಬೆಂಗಳೂರು

ದರ: 200

ಪುಟ: 156

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT