ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕಗಳ ಪರಿಚಯ, ವಿಮರ್ಶೆ 'ಚರಿತ್ರೆ ತೆರೆದಿಟ್ಟ ಚಿತ್ರಕಲೆ' 'ಮೈದಾನ'

Last Updated 7 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಪುಸ್ತಕ: ಕರ್ನಾಟಕದ ಆದಿಮ ಚಿತ್ರಕಲೆ

ಲೇಖಕರು: ಮೋಹನ. ಆರ್

ಪ್ರಕಾಶನ: ಇತಿಹಾಸ ದರ್ಪಣ ಪ್ರಕಾಶನ ಬೆಂಗಳೂರು

ಬೆಲೆ: 360

ಪುಟಗಳು: 176

ದೂರವಾಣಿ: 7829404063

ಇತಿಹಾಸ ಅರಿಯುವಲ್ಲಿ ಬಂಡೆಗಲ್ಲು ಚಿತ್ರ ಅಥವಾ ಪ್ರಾಗೈತಿಹಾಸಿಕ ನೆಲೆ ಪ್ರಮುಖ ಆಕರ. ಮಾತ್ರವಲ್ಲ ಚರಿತ್ರೆಯ ಅಧ್ಯಯನಕ್ಕೆ ಅದು ಬಹುವಾಗಿ ನೆರವಾಗುತ್ತದೆ. ಬಂಡೆಚಿತ್ರಕಲೆ ಮಾನವ ಜೀವನ ವೃತ್ತಾಂತದ ದಾಖಲೆಯೂ ಆಗಿದೆ.ಕರ್ನಾಟಕವು ಭಾರತದಲ್ಲಿಯೇ ಅಧ್ಯಯನದ ದೃಷ್ಟಿಯಿಂದ ವಿಶೇಷ ಆಯಾಮ ಪಡೆದಿದ್ದು, ಪುರಾತತ್ವ ಲೋಕಕ್ಕೆ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಅದರಲ್ಲೂ ಬಂಡೆಚಿತ್ರಗಳ ಅಧ್ಯಯನ ಗಮನಾರ್ಹ ಎಂಬ ಲೇಖಕರ ಅಂಬೋಣ ದಿಟವೂ ಹೌದು. ಮಧ್ಯಭಾರತದಲ್ಲಿ ಹೆಚ್ಚು ಅಧ್ಯಯನಕ್ಕೆ ಒಳಗಾಗಿರುವ ಬಂಡೆಚಿತ್ರ ಕ್ಷೇತ್ರ ದಕ್ಷಿಣ ಭಾರತಕ್ಕೆ ಅದರಲ್ಲೂ ಕರ್ನಾಟಕದ ಮಟ್ಟಿಗೆ ತೀರಾ ಕಡಿಮೆ. ಲೇಖಕ ಮೋಹನ್ ಆರ್. ಈ ಕೊರತೆ ನೀಗಿಸುವಲ್ಲಿ ಶ್ರಮಿಸಿದ್ದಾರೆ. ಇದು ಅವರ ಚೊಚ್ಚಲ ಕೃತಿಯೂ ಹೌದು. ಸಾಕಷ್ಟು ಅಧ್ಯಯನ, ಸಂಶೋಧನೆ, ಚರ್ಚೆ, ಪರಾಮರ್ಶೆಗಳ ಕೃಷಿಗೈದು ಉತ್ತಮ ಕೃತಿ ರಚಿಸಿದ್ದಾರೆ.

ಪುಸ್ತಕ ಒಟ್ಟು ಹತ್ತು ಅಧ್ಯಾಯಗಳನ್ನು ಒಳಗೊಂಡಿದೆ. ಜೊತೆಗೆ ಅನುಬಂಧಗಳು, ಕನ್ನಡ, ಇಂಗ್ಲಿಷ್ ಪರಾಮರ್ಶನ ಗ್ರಂಥಗಳು, ಲೇಖನಗಳ ಪಟ್ಟಿಯೂ ಇದೆ. ವರ್ಣಚಿತ್ರಗಳ ಪ್ರತ್ಯೇಕ ವಿಭಾಗವೇ ಇದ್ದು ಕೃತಿಯ ಅಂದವನ್ನು ಹೆಚ್ಚಿಸಿದೆ. ಆದಿಮ ಚಿತ್ರಕಲೆ ನಡೆದುಬಂದ ಹಾದಿ, ಅದಕ್ಕೆ ಶ್ರಮಿಸುತ್ತಿರುವ ಸಂಸ್ಥೆಗಳು, ಬಂಡೆಚಿತ್ರಗಳ ಕಾಲಮಾನದ ಸಂಕ್ಷಿಪ್ತ ಮಾಹಿತಿಯೂ ಇಲ್ಲಿದೆ. ನಿರಂತರ ಸಂಶೋಧನೆ ಸಂಸ್ಕೃತಿ ಹಿರಿಮೆಗೆ ನಾಂದಿ ಎಂಬುದನ್ನು ಧ್ವನಿಸುತ್ತದೆ ಪುಸ್ತಕ. ಅದೆಷ್ಟೋ ಐತಿಹಾಸಿಕ ಕುರುಹುಗಳು ಗಣಿಕಗಾರಿಕೆ, ನಗರೀಕರಣ, ಆಧುನೀಕರಣದ ಹೊಡೆತಕ್ಕೆ ಸಿಕ್ಕು ನಾಮಾವಶೇವಾಗಿವೆ. ಈ ಕುರಿತು ಜನರಲ್ಲಿ ಜಾಗೃತಿ ಹಾಗೂ ಕುರುಹುಗಳ ದಾಖಲೀಕರಣ ಭವಿಷ್ಯದ ಪೀಳಿಗೆಯ ದೃಷ್ಟಿಯಿಂದ ಅತ್ಯಂತ ತುರ್ತು ಎಂಬುದನ್ನು ಪುಸ್ತಕ ಸಾರುತ್ತದೆ. ಇತಿಹಾಸ, ಸಂಶೋಧನಾ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಜನಸಾಮಾನ್ಯರಿಗೂ ಉಪಯುಕ್ತ ಕೃತಿ ಹಾಗೂ ಕೈಪಿಡಿ ಈ ಪುಸ್ತಕ.

**********************

ಪುಸ್ತಕ: ಜಮೀಲಾ ಜಾವೇದ ಮತ್ತು ಇತರ ಕಥೆಗಳು

ಮರಾಠಿ ಮೂಲ: ಹಮೀದ ದಳವಾಯಿ

ಕನ್ನಡಕ್ಕೆ: ಚಂದ್ರಕಾಂತ ಪೋಕಳೆ

ಪ್ರಕಾಶನ: ವಸಂತ ಪ್ರಕಾಶನ ಬೆಂಗಳೂರು

ಬೆಲೆ: 85

ಪುಟಗಳು: 114

ದೂರವಾಣಿ: 080 22443996

ಜಮೀಲಾ ಜಾವೇದ ಮತ್ತು ಇತರ ಕಥೆಗಳು ಹಮೀದ ದಳವಾಯಿಯವರು 1952–66ರ ಅವಧಿಯಲ್ಲಿ ಬರೆದ, ಅಂದಿನ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ಮನ್ನಣೆ ಪಡೆದಂತಹವು. ವೈಚಾರಿಕ ಲೇಖಕರಾದ ದಳವಾಯಿಯವರು ಹೋರಾಟಗಾರರೂ ಆಗಿದ್ದರು. ಅದರ ಛಾಪು ಅವರ ಈ ಬರಹದಲ್ಲಿ ಮೂಡಿದೆ. ಒಟ್ಟು ಹನ್ನೊಂದು ಕಥೆಗಳ ಹೂರಣದ ಈ ಪುಸ್ತಕದಲ್ಲಿ ಮುಸ್ಲಿಂ ಸಮುದಾಯ ಜೀವನದ ವಿವಿಧ ಮಜಲುಗಳನ್ನು ಪರಿಚಯಿಸಲಾಗಿದೆ. ಮಿಗಿಲಾಗಿ ಸ್ತ್ರೀ ಶೋಷಣೆ, ಮಡಿ–ಮೈಲಿಗೆಗಳ ಪರಿಕಲ್ಪನೆ, ಧಾರ್ಮಿಕ ಸಂಕುಚಿತತೆ ಮೊದಲಾದವುಗಳನ್ನು ಧ್ವನಿಸುತ್ತದೆ ಹೊತ್ತಿಗೆ. ಜೀವನದ ಸಂಘರ್ಷದಲ್ಲಿ ಪಡೆದ, ಕಳೆದುಕೊಂಡ, ಪಡೆಯಲು ಮಾಡಿದ, ಅನಿವಾರ್ಯವಿರುವ ಹೋರಾಟವನ್ನು ನವಿರಾಗಿ ಚಿತ್ರಿಸಿದ್ದಾರೆ ದಳವಾಯಿಯವರು. ಅಂತೆಯೇ ಚಂದ್ರಕಾಂತ ಪೋಕಳೆ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ನಮ್ಮವೇ ಎನಿಸುವ ಕಥೆಗಳಿವೆ ಇಲ್ಲಿ. ಓದಿನೊಡನೆಯ ಆಪ್ತತೆ ಹೆಚ್ಚಿಸುವುದು ಇಲ್ಲಿನ ಕಥೆಗಳ ವಿಶೇಷ.

*************************

ಪುಸ್ತಕ: ಅವ್ಯಯ ಕಾವ್ಯ

ಲೇಖಕರು: ಕೆ.ವಿ.ತಿರುಮಲೇಶ್

ಪ್ರಕಾಶನ: ಅಭಿನವ ಬೆಂಗಳೂರು

ಬೆಲೆ: 275

ಪುಟಗಳು: 288

ದೂರವಾಣಿ: 9448804905

ಲೇಖಕರ ‘ಅಕ್ಷಯ ಕಾವ್ಯ’ ಕವನದ ಮುಂದುವರಿದ ಭಾಗವೇ ‘ಅವ್ಯಯ ಕಾವ್ಯ’.ಕಾವ್ಯಕ್ಕೆ ನೋವನ್ನು ಮರೆಸುವ ಗುಣವಿದೆ. ಅಂತೆಯೇ ಅದು ಭಾವಾಭಿವ್ಯಕ್ತಿಯ ಸಾಧನವೂ ಹೌದು. ಅರ್ಥಾತ್ 288 ಪುಟಗಳ ಈ ಕವನ ಭಿನ್ನವೂ, ಅನೇಕ ವಸ್ತು, ವಿಷಯ, ವ್ಯಕ್ತಿ, ಸಂಧರ್ಭ, ಕವಿ, ಕಾವ್ಯ ಸೇರಿದಂತೆ ಹಲವು ಸಂಗತಿಗಳ ವೈಶಿಷ್ಟ್ಯದಿಂದ ಕೂಡಿದೆ. ಅಲ್ಲಲ್ಲಿ ವಿಷಯಾಂತರವಾದಂತೆ ಅನಿಸುವುದೂ ಉಂಟು. ಸೂಕ್ಷ್ಮವಾಗಿ ಅವಲೋಕಿಸಿದರೆ ಇಲ್ಲಿನ ಎಲ್ಲ ಸಂಗತಿಗಳ ಒಟ್ಟು ಮೊತ್ತ ಪರಸ್ಪರ ಸಾಮ್ಯತೆಯಿಂದಲೇ ಕೂಡಿರುವುದು ನಿಚ್ಛಳವಾಗುತ್ತದೆ. ವ್ಯಾಕರಣ ಚಿಹ್ನೆಗಳಿಗೆ ಅಷ್ಟಾಗಿ ಮೊರೆಹೋಗದ ಲೇಖಕರು ಕವನದ ಆರಂಭದಿಂದ ಅಂತ್ಯದವರೆಗೂ ಒಂದೂ ಪೂರ್ಣ, ಅಲ್ಪವಿರಾಮ ಬಳಸದೆ ಪ್ರಯೋಗಾತ್ಮಕ ರಚನೆಯನ್ನು ಮುಂದಿಟ್ಟಿದ್ದಾರೆ. ನವೀನ ಶೈಲಿಯ, ಆಧುನಿಕ ಕವನಗಳೆಡೆ ಕವಿತೆಗಿದು ಕಷ್ಟದ ಕಾಲ ಎನ್ನುವ ಲೇಖಕರು, ಯಾವ ಹಿಡಿತ, ಕಟ್ಟುಪಾಡುಗಳಿಲ್ಲದ ಸುಧೀರ್ಘ, ಸ್ವತಂತ್ರ ಕಾವ್ಯ ರಚಿಸಿದ್ದಾರೆ. ಓದಿದಂತೆಲ್ಲ ನಿಟ್ಟುಸಿರುಯ್ಯುವ ಸರದಿ ಓದುಗರದು. ಮತ್ತೆಮತ್ತೆ ಓದಬೇಕೆನಿಸುವ ಕಾವ್ಯವಿದು.

**************************

ಮಾಧ್ಯಮ ಮಾರ್ಗ

ಲೇ: ಪದ್ಮರಾಜ ದಂಡಾವತಿ

ಪ್ರ: ಸಪ್ನ ಬುಕ್ ಹೌಸ್,

#11, 3ನೇ ಮುಖ್ಯರಸ್ತೆ,

ಗಾಂಧಿನಗರ, ಬೆಂಗಳೂರು– 560009

ಪುಟಗಳು: 197

ಬೆಲೆ: ₹150

ಮಾಧ್ಯಮ ಲೋಕಕ್ಕೆ ಪ್ರವೇಶ ಬಯಸುವ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತಹ ಕೃತಿ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿಯವರ ‘ಮಾಧ್ಯಮ ಮಾರ್ಗ’. ಈ ಕೃತಿಯಲ್ಲಿರುವ ಬಹುತೇಕ ಲೇಖನಗಳು ‘ಪ್ರಜಾವಾಣಿ’ಯಲ್ಲಿ ದಂಡಾವತಿಯವರು ಬರೆಯುತ್ತಿದ್ದ ‘ನಾಲ್ಕನೇ ಆಯಾಮ’ದ ಅಂಕಣದಲ್ಲಿ ಪ್ರಕಟವಾಗಿವೆ.

ಇಲ್ಲಿನ ಎಲ್ಲ ಲೇಖನಗಳು ನೇರವಾಗಿ ಪತ್ರಕರ್ತರು ಹಾಗೂ ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟಿವೆ. ಈ ಹಿನ್ನೆಲೆಯಲ್ಲಿ ಲೇಖಕರು ‘ನನ್ನ ಮಾತು’ ಅಧ್ಯಾಯದಲ್ಲಿ ‘ಪತ್ರಿಕೋದ್ಯಮ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳು ಹಾಗೂ ಹೊಸದಾಗಿ ಪತ್ರಿಕೋದ್ಯಮಕ್ಕೆ ಸೇರುವರು ಈ ಪುಸ್ತಕವನ್ನು ಓದಬೇಕು’ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

‘ಭಾವಿ ಪತ್ರಕರ್ತರಿಗೆ ಪ್ರೀತಿಯಿಂದ’ ಎಂದು ಅಧ್ಯಾಯದಿಂದ ಆರಂಭವಾಗುವ ಕೃತಿ, ‘ಸಂದರ್ಶನಕ್ಕೆ ಹೋಗುವವರಿಗೆ ಹೇಳಲೇಬೇಕು ಅನಿಸಿದ್ದು’ ಎಂಬ ಅಧ್ಯಾಯದವರೆಗಿನ ಎಂಟು ಲೇಖನಗಳಲ್ಲಿರುವ ವಿಷಯಗಳು ನೇರವಾಗಿ ಉದಯೋನ್ಮುಖ ಪತ್ರಕರ್ತರಿಗಾಗಿಯೇ ಬರೆದಿದ್ದಾರೆ. ಇವುಗಳಲ್ಲಿ ಪತ್ರಿಕೋದ್ಯಮ ಕಾಲೇಜುಗಳಲ್ಲಿನ ಉಪನ್ಯಾಸಕರ ಕೊರತೆ, ಪ್ರಾಯೋಗಿಕ ತರಬೇತಿ ಇಲ್ಲದ ಶಿಕ್ಷಣ, ಇಂದಿನ ಪತ್ರಿಕೋದ್ಯಮದ ಸ್ಥಿತಿಗತಿ, ದೃಶ್ಯ ಮಾಧ್ಯಮಗಳ ಜವಾಬ್ದಾರಿ, ಪತ್ರಕರ್ತರಲ್ಲಿರುವ ಭಾಷಾ ಜ್ಞಾನದ ಕೊರತೆ, ಪತ್ರಕರ್ತರೇ ವಿಧಿಸಿಕೊಳ್ಳಬೇಕಾದ ನೀತಿ ಸಂಹಿತೆಯಂತಹ ವಿಚಾರಗಳನ್ನು ಲೇಖನಗಳಲ್ಲಿ ಪ್ರಸ್ತಾಪಿಸಿದ್ದಾರೆ.

ಔಟ್‌ಲುಕ್‌ ವಾರಪತ್ರಿಕೆಯ ಪ್ರಧಾನ ಸಂಪಾದಕ ವಿನೋದ್‌ ಮೆಹ್ತಾ ಕುರಿತ ‘ಪಕ್ಕಾ ಉಡಾಳನೊಬ್ಬ ಅಪ್ಪಟ ಪತ್ರಕರ್ತನಾದ ಕಥೆ’, ‘ಮುರುಘಾ ಶರಣರು ನಿಜವನ್ನೇ ಹೇಳಿದ್ದಾರೆ..’ ‘ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ಹಾಕುವವರು ಯಾರು ?’ ‘ನೀವೆಲ್ಲ ಸರ್ವಜ್ಞರೇ, ಸರಸ್ವತಿಯರೇ ಎಂದ ಆ ಹೆಣ್ಣುಮಗಳಿಗೆ ಏನು ಉತ್ತರ ಕೊಡಲಿ?’ – ಇವು ಮತ್ತೆ ಮತ್ತೆ ಓದಿಸುವ ಅಧ್ಯಾಯಗಳು.

ಕೃತಿಯಲ್ಲಿರುವ ಲೇಖನಗಳು ದೀರ್ಘ ಎನಿಸಿದರೂ, ಚಿಕ್ಕ ಚಿಕ್ಕ ವಾಕ್ಯ, ಸರಳ ಭಾಷೆ, ನವಿರಾದ ನಿರೂಪಣೆ – ಓದುಗರನ್ನು ಹಿಡಿದು ಕೂರಿಸಿ ಓದಿಸುತ್ತದೆ.

*****************************

ಕೃಷಿ ಜಾನಪದ

ಲೇ: ಡಾ. ಎಂ.ಜಿ.ಈಶ್ವರಪ್ಪ

ಪ್ರ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

ಪಂಪ ಮಹಾಕವಿ ರಸ್ತೆ,

ಬೆಂಗಳೂರು – 560018

ಜಾನಪದ ವಿದ್ವಾಂಸ ಡಾ. ಎಂ.ಜಿ.ಈಶ್ವರಪ್ಪ ಅವರು, ಕೃಷಿ ಕ್ಷೇತ್ರದೊಳಗೆ ಮೌಖಿಕವಾಗಿರುವ ನೆಲಮೂಲ ಜ್ಞಾನವನ್ನು ಕ್ಷೇತ್ರಾಧ್ಯಯನದ ಮೂಲಕ ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಕೃಷಿ ಸಂಸ್ಕೃತಿಯ ಬದುಕು ಮತ್ತು ಪರಂಪರೆಯ ಮಹತ್ವದ ಅರಿವು ಮೂಡಿಸುವುದು ಈ ಕೃತಿಯ ಉದ್ದೇಶವಾಗಿದೆ.

ಈಶ್ವರಪ್ಪ ಅವರು ಇಪ್ಪತ್ಮೂರು ವರ್ಷಗಳ ಹಿಂದೆ ‘ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ’ ಎಂಬ ಸಂಶೋಧನಾ ಕೃತಿಯನ್ನು ರಚಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಆ ಕೃತಿಯನ್ನು ಪ್ರಕಟಿಸಿತ್ತು. ಈಗ ಆ ಕೃತಿ ‘ಕೃಷಿ ಜಾನಪದ’ ಎಂಬ ಹೆಸರಿನಲ್ಲಿ ಮರು ಮುದ್ರಣಗೊಂಡಿದೆ.

ರೈತರು ಮಳೆ ಬರುವಿಕೆಯನ್ನು ಗುರುತಿಸುತ್ತಿದ್ದ ಪರಿ, ಮಳೆ ಮತ್ತು ಬೆಳೆ ನಡುವಿನ ಸಂಬಂಧ, ಗುಳಕವ್ವ, ಜೋಕುಮಾರಸ್ವಾಮಿ ಪೂಜೆಯಂತಹ ಮಳೆ ಕರೆಯುವ ಆಚರಣೆಗಳು, ಗಾದೆ ಮಾತು, ಜನಪದ ಹಾಡುಗಳು.. ಕೃಷಿಕರನ್ನಷ್ಟೇ ಅಲ್ಲದೇ, ಕೃಷಿಯೇತರಲ್ಲೂ ಓದುವ ಆಸಕ್ತಿ ಮೂಡಿಸುತ್ತವೆ.

ಯಾಂತ್ರೀಕರಣದ ಭರಾಟೆಯಲ್ಲಿ ಮರೆಯಾಗಿರುವ ಗೋರು, ಮಂಡಕ್ಕಿ ಕುಕ್ಕೆ, ಬೆಲ್ಲದ ಪಾಕ ಹೊಯ್ಯುವ ದೋಣಿಯಂತಹ ದೇಸಿ ಕೃಷಿ ಪರಿಕರಗಳನ್ನು ಕೃತಿಯಲ್ಲಿ ಪರಿಚಯಿಸಿದ್ದಾರೆ. ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯುತ್ತಿದ್ದ ಸಿರಿಧಾನ್ಯಗಳು ಹಾಗೂ ಖುಷ್ಕಿ–ತರಿ ಬೆಳೆಗಳ ಪರಿಚಯ ಹಾಗೂ ರೈತರು ಚರಗ ಚೆಲ್ಲುವಂತಹ ಕೀಟ ನಿಯಂತ್ರಿಸುವಂತಹ ದೇಸಿ ಪದ್ಧತಿಗಳನ್ನು ಉಲ್ಲೇಖಿಸಿದ್ದಾರೆ.

‘ಮಳೆ ಜಾನಪದ’ ಅಧ್ಯಾಯದಲ್ಲಿರುವ ಜನಪದ ಗೀತೆಗಳು, ಗಾದೆ ಮಾತುಗಳು ಓದುಗರಲ್ಲಿನ ಏಕತಾನತೆಯನ್ನು ತೊಡೆದು ಹಾಕುತ್ತವೆ. ‘ತರಿ ಮತ್ತು ಬಾಗಾಯ್ತು ಬೆಳೆಗಳು’ ಅಧ್ಯಾಯದಲ್ಲಿರುವ ಕೃಷಿ ಆಚರಣೆಯ ವೈವಿಧ್ಯ ಜಾನಪದ ಸಾಹಿತ್ಯ ಲೋಕವನ್ನು ಪರಿಚಯಿಸುತ್ತದೆ. ಜಾನಪದ ಅಧ್ಯಯನ, ಕೃಷಿ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳ ಬಳಿ ಇರಬೇಕಾದ ಪುಸ್ತಕವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT