ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಾಟು: ಪುಸ್ತಕಗಳ ಆನಾವರಣ

Last Updated 27 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಭಾರತದ ಜ್ಞಾನ ಮತ್ತು ಶಿಕ್ಷಣದ ಕುರಿತು ಭಾಷಾತಜ್ಞ ಜಿ.ಎನ್. ದೇವಿ ಅವರ ಚಿಂತನೆಯ ಪುಸ್ತಕ ರೂಪ ಇದು. ಇದನ್ನು ಕನ್ನಡಕ್ಕೆ ತಂದವರು ಕೆ.ಪಿ. ಸುರೇಶ. ‘ಭಾರತದ ಯುವಕರಿಗೆ ಸಭ್ಯ ಬದುಕು ಖಚಿತಪಡಿಸಬಲ್ಲ ದಾರಿಯೆಂದರೆ ಉತ್ತಮ ಶಿಕ್ಷಣ. ಶಿಕ್ಷಣ, ಜ್ಞಾನೋತ್ಪಾದನೆ ಮತ್ತು ಸಂಶೋಧನೆಗಳು ನಮ್ಮ ಕಾಲದ ಮುಖ್ಯ ಕಾಳಜಿಗಳೆಂದು ಅನಿಸಬೇಕು. ದೇಶದ ಶಿಕ್ಷಣದ, ಅದರಲ್ಲೂ ಉನ್ನತ ಶಿಕ್ಷಣದ ಸ್ಥಿತಿ–ಗತಿ ಕುರಿತಾದ ಈ ಪುಸ್ತಕ ಕೆಲವು ಸಂಕೀರ್ಣತೆಗಳನ್ನು ಬಿಡಿಸುವ ವಿನೀತ ಪ್ರಯತ್ನ’ ಎಂದು ದೇವಿ ಅವರು ಹೇಳಿಕೊಂಡಿದ್ದಾರೆ.

ಮೈಸೂರಿನ ಭಾಗದಲ್ಲಿ ಶಿಷ್ಟ ನಾಟಕ ಪರಂಪರೆಗೆ ನಾಂದಿ ಹಾಡಿದವರು ಸಿ. ಅಂಕಪ್ಪನವರು. ಧಾರ್ಮಿಕ, ಸಾಮಾಜಿಕ ವಿಷಯಗಳ ಮೇಲೆ ಇವರು ರಚಿಸಿರುವ ನಾಟಕಗಳನ್ನು ಡಾ. ನಂದೀಶ್ ಹಂಚೆ ಈ ಪುಸ್ತಕದಲ್ಲಿ ಸಂಪಾದಿಸಿದ್ದಾರೆ. ಆದರ್ಶ ವಿವಾಹ, ಆಶೀರ್ವಾದ, ಉಘೇ ಉಘೇ, ಕಂಬಳಿ ನಾಗಿದೇವ, ಕಾಯಕ, ನಿರಾಸೆ, ಶಿವಶರಣೆ ಸತ್ಯಕ್ಕ, ಶಿವರಾತ್ರೀಶ್ವರ ವಿಜಯ, ಶಿವಶರಣ ಹರಳಯ್ಯ ಹಾಗೂ ಶ್ರೀಪಾದಕ್ಕೆ ನಮೋ ನಮೋ ಎಂಬ ಹತ್ತು ನಾಟಕಗಳು ಇದರಲ್ಲಿವೆ.

ಈ ನಾಟಕಗಳು ಅವು ರಚಿತಗೊಂಡ ಕಾಲ ದೇಶ ಚರಿತ್ರೆಗಳಿಗೆ ಮಾತ್ರ ಸಂಬಂಧಿಸಿದವುಗಳಾಗಿಲ್ಲ. ಇವುಗಳಲ್ಲಿ ವ್ಯಕ್ತವಾಗುವ ವಿಚಾರಗಳು ಪ್ರಚಲಿತ ಸಾಮಾಜಿಕ ಸಮಸ್ಯೆಗಳನ್ನು ಹಾಗೂ ಜನಜೀವನವನ್ನು ಅತ್ಯಂತ ಅರ್ಥಪೂರ್ಣವಾಗಿ ಅರಿಯುವಲ್ಲಿ ಸಹಾಯಕವಾಗಿವೆ.

ಇವರ ಬರಹಗಳಲ್ಲಿ ಪ್ರಖರ ವಿಚಾರಗಳಿದ್ದರೂ ಅವರು ದೇವರು ಮತ್ತು ಧರ್ಮವನ್ನು ಅಲ್ಲಗಳೆದವರಲ್ಲ. ಕುವೆಂಪು ಅವರ ಪ್ರಭಾವವೂ ಅಂಕಪ್ಪನವರ ಮೇಲಾಗಿದೆ. ಶರಣರನ್ನು ಕುರಿತ ಈ ನಾಟಕಗಳು ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ ಎನ್ನಬಹುದು.

2018ರ ಆಗಸ್ಟ್‌ ತಿಂಗಳು ಕೊಡಗು ಜಿಲ್ಲೆಯ ಪಾಲಿಗೆ ದುರಂತಗಳ ಸರಮಾಲೆಯನ್ನೇ ತಂದ ತಿಂಗಳು. ಜಲಪ್ರಳಯದಿಂದ ನಡುಗಿದ ಕೊಡಗು ಜಿಲ್ಲೆಯ ಕಥನಗಳನ್ನು ಲೇಖಕ ಭಾರದ್ವಾಜ ಕೆ. ಆನಂದತೀರ್ಥ ‘ನೀರು ನುಗ್ಗಿದ ಮೇಲೆ’ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಇಲ್ಲಿರುವ ಒಂಬತ್ತು ಪ್ರಬಂಧಗಳಲ್ಲಿ ಕೊಡಗಿನಲ್ಲಿ ಜಲಪ್ರಳಯಕ್ಕೂ ಮುನ್ನ ಇದ್ದಂತ ಬದುಕು ಹಾಗೂ ನಂತರದ ಬದುಕಿನ ಚಿತ್ರಣವಿದೆ. ಅಪಾಯಕಾರಿ ಸನ್ನಿವೇಶಗಳಲ್ಲಿ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಅನೇಕ ಘಟನೆಗಳು ಓದುಗರನ್ನು ಭಾವತೀವ್ರತೆಗೆ ದೂಡುತ್ತವೆ. ಮನುಷ್ಯನ ದುರಾಸೆ ಮತ್ತು ಪ್ರವಾಸೋದ್ಯಮ ತಂದ ವಿಪತ್ತಿಗೆ ಬಲಿಯಾದ ಕೊಡಗು ಜಿಲ್ಲೆಯ ಮನಕಲಕುವ ಚಿತ್ರಣ ಈ ಕೃತಿಯಲ್ಲಿದೆ. ನಿರಾಶ್ರಿತರ ಶಿಬಿರದಲ್ಲಿ ವರದಿಯಾಗದ ವರದಿಗಳೂ ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT