ಸೋಮವಾರ, ಮೇ 23, 2022
21 °C

ಪುಸ್ತಕ ವಿಮರ್ಶೆ | ಇದು ಬರಿ ಬೆಳಗಲ್ಲೋ ಅಣ್ಣಾ...

ಮಹತಿ Updated:

ಅಕ್ಷರ ಗಾತ್ರ : | |

Prajavani

ಕೃತಿ: ಕಂಗಳ ಬೆಳಗು
ಲೇ: ಡಾ. ಸತ್ಯಮಂಗಲ ಮಹಾದೇವ
ಪು: 292, ಬೆ: ರೂ. 300
ಪ್ರ: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಬೆಂಗಳೂರು.
ಸಂ: 9740941126.

***

ಕಂಗಳ ಬೆಳಗು ತಿಂಗಳ ಬೆಳಕಿದ್ದಂತೆ. ಅದು ಅಂತರಂಗವನ್ನು ಕಾಣಿಸುವ, ಬದುಕಿನ‌ ಚೆಲುವನ್ನು ಕಾಣಿಸುವ ಬೆಳಕಿನ ಬೆಳಗು.

ಒಳಗನ್ನು ಸೂಚಿಸುವ ಕಂಗಳ ಬೆಳಗು, ಬದುಕನ್ನು ಮಾಗಿಸಲು ಅಗತ್ಯವಾದ ಅಧ್ಯಾತ್ಮವನ್ನೂ ಸೂಚಿಸುವಂತಹದ್ದು. ಈ ಸಾಧ್ಯತೆಯ ಮಾರ್ಗದಲ್ಲಿ ಬೇಂದ್ರೆ ಮತ್ತು ಮಧುರಚೆನ್ನರನ್ನು ಕೈದೀವಿಗೆಯಾಗಿಸಿಕೊಂಡು ನಡೆದಿರುವ ಕವಿ ಸತ್ಯಮಂಗಲ ಮಹಾದೇವ, ತಮ್ಮ ಕಂಗಳಿಗೆ ಕಂಡ ಬೆಳಗನ್ನು ಕೃತಿಯ ರೂಪದಲ್ಲಿ ಸಹೃದಯರ ಮುಂದಿರಿಸಿದ್ದಾರೆ.

‘ಕಂಗಳ ಬೆಳಗು’ ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿನ ಅನುಭಾವದ ತೌಲನಿಕ ಅಧ್ಯಯನ. ಕನ್ನಡ ಜಗತ್ತಿನ ಉನ್ನತಿಗೆ ಕಾರಣವಾದ ಎರಡು ಚೇತನಗಳನ್ನು ಜೊತೆಗಿಟ್ಟು ನೋಡಿರುವ ಪ್ರೌಢ ಪ್ರಬಂಧ. ಬೇಂದ್ರೆ ಮತ್ತು ಮಧುರಚೆನ್ನರಿಬ್ಬರೂ ಅರವಿಂದರ ಪ್ರಭಾವಲಯಕ್ಕೆ ಆಕರ್ಷಿತರಾದವರು. ಕಾವ್ಯಮಾರ್ಗವನ್ನು ಲೌಕಿಕಕ್ಕೂ ಪಾರಮಾರ್ಥಕ್ಕೂ ಸಾಧನವೆಂದು ನಂಬಿದವರು. ಗೆಳೆಯರಾಗಿದ್ದುಕೊಂಡೂ ಕಾವ್ಯದಲ್ಲಿ ಚಿಂತನೆಯಲ್ಲಿ ಸ್ವಂತಿಕೆಯನ್ನು ಉಳಿಸಿಕೊಂಡವರು. ಈ ಇಬ್ಬರನ್ನು ಕನ್ನಡ ಸಾರಸ್ವತಲೋಕದ ಅನುಭಾವ ಪರಂಪರೆಯ ಎರಡು ಕಂಗಳೆಂದು ಭಾವಿಸುವುದಾದರೆ, ಆ ಕಣ್ಣುಗಳು ಸಹೃದಯರಿಗೆ ಕೊಟ್ಟ ಕಾಣ್ಕೆ ಯಾವ ಬಗೆಯದೆನ್ನುವ ಕುತೂಹಲದ ಶೋಧ ಇಲ್ಲಿದೆ.

ಈ ಅಧ್ಯಯನದ ಚೌಕಟ್ಟು ಕನ್ನಡದ ಇಬ್ಬರು ಮಹತ್ವದ ಕವಿಗಳಿಗಷ್ಟೇ ಸೀಮಿತವಾಗಿಲ್ಲ. ಬೇಂದ್ರೆ ಮತ್ತು ಮಧುರಚೆನ್ನ ಕೇಂದ್ರದಲ್ಲಿದ್ದರೂ ಮಹಾದೇವರ ಅಧ್ಯಯನ ವಚನಕಾರರು, ಹರಿಹರ, ರತ್ನಾಕರವರ್ಣಿಯಂಥ ಭಕ್ತಿಯನ್ನೇ ಶಕ್ತಿಯನ್ನಾಗಿಸಿಕೊಂಡ ಕವಿಗಳು, ಜನಮಾನಸವನ್ನು ಮುಟ್ಟಿದ ತತ್ವಪದಕಾರರು ಹಾಗೂ ಅವಧೂತರು ಸೇರಿದಂತೆ ಕನ್ನಡ ಕಾವ್ಯಪರಂಪರೆ ಅನುಭಾವದೊಂದಿಗೆ ನಡೆಸಿದ ಅನುಸಂಧಾನ ಯಾವ ಬಗೆಯದೆನ್ನುವುದರ ಕುರಿತೂ ಗಮನಹರಿಸಿದೆ. ಕಂಗಳ ಬೆಳಗಿನ ವ್ಯಾಪ್ತಿಯಲ್ಲಿ ಭಾರತೀಯ ಅಧ್ಯಾತ್ಮ ಚಿಂತಕರಾದ ಅರವಿಂದ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರಮಣ ಮಹರ್ಷಿ, ರವೀಂದ್ರನಾಥ ಟ್ಯಾಗೋರರು ಹಾಗೂ ಯೇಟ್ಸ್, ಖಲೀಲ್ ಗಿಬ್ರಾನ್‌ರಂಥ ಇಂಗ್ಲಿಷ್ ಕವಿಗಳ ಚಿಂತನೆಗಳೂ ಇವೆ. ಕನ್ನಡ ಕಾವ್ಯದ ಅನುಭಾವ ಪರಂಪರೆಯಲ್ಲಿನ ಕುವೆಂಪು ಮಾರ್ಗದ ನೋಟವೂ ಇದೆ.

ಬೇಂದ್ರೆ ಮತ್ತು ಮಧುರಚೆನ್ನರ ಅನುಭಾವ ಕಾವ್ಯರಚನೆಗೆ ಒದಗಿದ ಪ್ರೇರಣೆ ಮತ್ತು ಪ್ರಭಾವಗಳನ್ನು ಚರ್ಚಿಸುವ ಕೃತಿ, ಇಬ್ಬರು ಕವಿಗಳ ನಡುವಿನ ಸಾದೃಶ್ಯ ಮತ್ತು ವೈದೃಶ್ಯಗಳನ್ನು ಚಿತ್ರಿಸಲೂ ಪ್ರಯತ್ನಿಸಿದೆ. ಕನ್ನಡ ಕಾವ್ಯ ಪರಂಪರೆಯ ಮೇಲೆ ಈ ಇಬ್ಬರು ಕವಿಗಳು ಬೀರಿರುವ ಪ್ರಭಾವದ ಚರ್ಚೆಯೂ ಇದೆ. ಇಲ್ಲಿನ ಅಧ್ಯಾತ್ಮ, ಬದುಕನ್ನು ಲೋಕದಿಂದ ವಿಮುಖಗೊಳಿಸುವಂತಹದ್ದು ಅಲ್ಲ. ಬದುಕಿನ ಕುರಿತು ಪ್ರೀತಿಯನ್ನು ಹೆಚ್ಚಿಸುವಂತಹದ್ದು, ಸಮೂಹದ ಒಳಿತನ್ನು ಚಿಂತಿಸುವಂತಹದ್ದು. ಅಪಾರ ಜೀವನಪ್ರೀತಿಯನ್ನು ಒಳಗೊಂಡ ಕಾರಣದಿಂದಾಗಿಯೇ ಬೇಂದ್ರೆ–ಮಧುರಚೆನ್ನರ ಅಧ್ಯಾತ್ಮವನ್ನು ‘ಜನಪರ ಅಧ್ಯಾತ್ಮ’ ಎಂದು ಕರೆಯಬಹುದು.

ಅಧ್ಯಾತ್ಮವನ್ನು ಹೊರತುಪಡಿಸಿ, ಕೇವಲ ಕಾವ್ಯಕುತೂಹಲದ ದೃಷ್ಟಿಯಿಂದಲೂ ‘ಕಂಗಳ ಬೆಳಗು’ ಕೃತಿಯನ್ನು ಗಮನಿಸಬಹುದು. ಸಾಹಿತ್ಯದ ವಿದ್ಯಾರ್ಥಿಗಳಿಗೆ ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಲೋಕದ ಹಲವು ರಸಘಟ್ಟಗಳ ಪರಿಚಯ ಕಂಗಳ ಬೆಳಗಿನ ಮೂಲಕ ಸಾಧ್ಯ. ಕಾವ್ಯದ ಕುರಿತ ಚರ್ಚೆ–ವಿಶ್ಲೇಷಣೆ ರೂಪದಲ್ಲೂ ಓದಬಹುದಾದ ಸಾಧ್ಯತೆ ಈ ಕೃತಿಯ ವಿಶೇಷವಾಗಿದೆ.

ಕಾವ್ಯ ಕುತೂಹಲಕ್ಕಷ್ಟೇ ಈ ಅಧ್ಯಯನ ಸೀಮಿತಗೊಂಡಿಲ್ಲ; ಕಾವ್ಯದ ಹಿಂದಿನ ಕವಿಗಳ ಬದುಕಿನ ಬಗ್ಗೆಯೂ ಗಮನಹರಿಸಿದೆ; ಬೇಂದ್ರೆ ಮತ್ತು ಮಧುರಚೆನ್ನರ ಬದುಕು, ವ್ಯಕ್ತಿತ್ವ, ಗೆಳೆತನಗಳ ಬಗ್ಗೆ ಅನೇಕ ವಿವರಗಳನ್ನು ದಾಖಲಿಸಿದೆ.

ಸತ್ಯಮಂಗಲ ಮಹಾದೇವ ಅವರು ಮುಟ್ಟಿದರೆ ಮಿಡಿಯುವ ಕವಿತೆಗಳಿಂದ ಸಹೃದಯರ ಗಮನಸೆಳೆದಿರುವ ಕವಿ. ಅವರ ಕವಿಮನಸ್ಸು ವಿಮರ್ಶೆಯಲ್ಲೂ ಇದೆ. ಕವಿಯೊಬ್ಬ ತನ್ನ ಪರಂಪರೆಯೊಂದಿಗೆ ನಡೆಸಿದ ಅನುಸಂಧಾನದಂತೆ, ವಿಹಾರದಂತೆ ಅವರ ಅಧ್ಯಯನವಿದೆ. ಬಹುತೇಕ ಪ್ರೌಢ ಪ್ರಬಂಧಗಳು ತಮ್ಮ ಗಾಂಭೀರ್ಯದಿಂದ ಹಾಗೂ ಅಕಡೆಮಿಕ್‌ ಚೌಕಟ್ಟಿನಿಂದ ಓದುಗರನ್ನು ದಣಿಸುತ್ತವೆ. ಕೆಲವೊಮ್ಮೆ ಹುಸಿ ಗಾಂಭೀರ್ಯ ಹಾಗೂ ಹೇಳಿಕೆಗಳ ಜೋಡಣೆಯಲ್ಲೇ ಮುಗಿದುಹೋಗುತ್ತವೆ. ಮಹಾದೇವ ಅವರ ಕಥನವೂ ಅಕಡೆಮಿಕ್‌ ಚೌಕಟ್ಟಿನಿಂದ ಹೊರತಾಗಿಲ್ಲ. ಆದರೆ, ಹುಸಿ ಗಾಂಭೀರ್ಯ ಇಲ್ಲಿಲ್ಲ. ಕಾವ್ಯದ ಕುರಿತ ವಿಶ್ಲೇಷಣೆಯ ಸಂದರ್ಭದಲ್ಲಿ ಲೇಖಕನೊಳಗಿನ ಕವಿ ಮುನ್ನೆಲೆಗೆ ಬರುವುದು ಕೃತಿಯ ಹೊಳಪನ್ನು ಹೆಚ್ಚಿಸಿರುವ ಸಂಗತಿಯಾಗಿದೆ.

‘ಬೆಳಕಿನ ಸಾಂಗತ್ಯದಿಂದ ತಾಯ ಸೆರಗ ಹಿಡಿದೆವು / ಬೆಳಕಿನಿಂದ ಬಂದೆವಣ್ಣ ಬೆಳಕಿನತ್ತ ನಡೆದೆವು’ ಎನ್ನುವ ಬೇಂದ್ರೆಯವರ ಸಾಲುಗಳನ್ನೇ ಅವರು ಮತ್ತು ಮಧುರಚೆನ್ನರ ಬದುಕು, ದರ್ಶನಕ್ಕೆ ಉದಾಹರಿಸಬಹುದು. ಬೆಳಕಿನಿಂದ ಬಂದವರು ಬೆಳಕಿನತ್ತ ನಡೆದುದಷ್ಟೇ ಅಲ್ಲದೆ, ಬೆಳಕೇ ಆಗಿಹೋದ ‘ಸಾರಸ್ವತ ಜಾದೂ’ವನ್ನು ಚಿತ್ರಿಸುವ ಹಂಬಲದ ಪ್ರಯತ್ನದ ರೂಪದಲ್ಲಿ ‘ಕಂಗಳ ಬೆಳಗು’ ಮುಖ್ಯವೆನ್ನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು