ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ‘ಕೆಂಪು’ ಬಣ್ಣವೊಂದು ಕಂಡ ಬದುಕು ಹಲವು

Last Updated 16 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕೃತಿ: ಕೆಂಪು ಹಾಗೂ ಇತರ ಬಹುಮಾನಿತ ಕತೆಗಳು
ಲೇ: ಅರ್ಪಣ ಎಚ್‌.ಎಸ್‌
ಪ್ರ: ಟೆಕ್‌ ಫಿಜ್‌ ಇಂಕ್‌, ಬೆಂಗಳೂರು
ಸಂ:9480035877

***

‘ಕೆಂಪು ಮತ್ತು ಇತರ ಬಹುಮಾನಿತ ಕತೆಗಳು’ ಅರ್ಪಣ ಎಚ್‌.ಎಸ್‌. ಅವರ ಮೊದಲ ಕೃತಿ. ವಿವಿಧ ಪತ್ರಿಕೆಗಳ ಕಥಾಸ್ಪರ್ಧೆಯಲ್ಲಿ ಬಹುಮಾನ, ಮೆಚ್ಚುಗೆ ಪಡೆದ ಕಥೆಗಳ ಸಂಕಲನವಿದು. ಇಲ್ಲಿನ ದಶ ಕಥೆಗಳಲ್ಲಿ ಹರಡಿಕೊಂಡಿರುವ ಕಥಾಹಂದರ ದಶದಿಕ್ಕುಗಳಿಗೂ ಚಾಚುವಂಥದ್ದು.

‘ಧರ್ಮ’, ‘ಭಾಷೆ’ ಪ್ರಸ್ತುತ ಹೆಚ್ಚು ಚರ್ಚೆಯಲ್ಲಿರುವ, ವಿವಾದಕ್ಕೆ ಒಳಗಾಗುತ್ತಿರುವ ಪದಗಳು. ಸಾಂಸ್ಕೃತಿಕ ಅಂಗಳಕ್ಕೂ ಧರ್ಮದ ವಿವಾದ ಕಾಲಿಟ್ಟಿರುವ ಈ ಸಂದರ್ಭದಲ್ಲಿ ಉದ್ಭವಿಸಿರುವ ಸನ್ನಿವೇಶವನ್ನು ಕಥೆಗಾರ್ತಿ ಅರ್ಪಣ ಅವರು ಮೊದಲೇ ಊಹಿಸಿದಂತಿದೆ. ‘ಕೆಂಪು’ ಕಥಾಸಂಕಲನದಲ್ಲಿನ ‘ಜಬ್ಬಾರ್‌’ ಕಥೆಯು ಈಗಿನ ಸಂದರ್ಭಕ್ಕೆ ಯಾಕೋ ತುಂಬಾ ಹತ್ತಿರದಲ್ಲಿ ಹೋಲಿಕೆಯಾಗುತ್ತದೆ. ಮತಾಂತರ, ಧರ್ಮ ದ್ವೇಷ, ಅಂತರಧರ್ಮೀಯ ವಿವಾಹದ ಘಟನಾವಳಿಗಳು ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ. ಹವ್ಯಕ ಹುಡುಗ ಹಾಗೂ ಬ್ಯಾರಿ ಹುಡುಗಿಯ ನಡುವೆ ಚಿಗುರೊಡೆದ ಪ್ರೀತಿ, ‘ಜಬ್ಬಾರ್‌–ಗಣಪತಿ ಹೆಗಡೆ’ಯ ಒಳಗಿನ ಸಂಘರ್ಷವನ್ನು ಎಳೆಎಳೆಯಾಗಿ ಹರಡಿದೆ. ಒಡೆದ ಚಿಗುರೊಂದು ಕಥೆ ಅಂತ್ಯವಾಗುತ್ತಾ ಬೋಧಿವೃಕ್ಷವಾಗಿ ಬೆಳೆಯುತ್ತದೆ. ‘ಕೆಂಪು’ ಬೆಳಕೊಂದು ಕಥೆಗೆ ತಿರುವು ನೀಡುತ್ತದೆ.

ಮೌನವೂ ಮಾತಿಗೆ ಜನ್ಮನೀಡಿದಾಗ ‘ಪುನರಾರಂಭ’ವಾಗುತ್ತದೆ. ಇಲ್ಲಿ ‘ಅವಳು’ ಮತ್ತು ‘ಅವನು’ ಎಂಬೆರಡು ಪಾತ್ರ ಚಿರತೆಯಂತೆ ಓಡುವ ನಗರ ಜೀವನ, ಅಲ್ಲಿನ ತಳಮಳವನ್ನು ಪ್ರತಿನಿಧಿಸುತ್ತವೆ. ಮೌನವೆಂಬ ಅಸ್ತ್ರ ಅದೆಷ್ಟೋ ವಿಚ್ಛೇದನಗಳಿಗೆ ಕಾರಣವಾಗಿದೆ. ಈ ಕಥೆಯಲ್ಲೂ ಕಾಲ ಚಕ್ರದಲ್ಲಿ ಸಿಲುಕಿದ ಯುವಜೋಡಿಯ ನಡುವೆ ಮಾತು ಹೆಪ್ಪುಗಟ್ಟಿತ್ತು. ಮಾತಿನ ದಾಹ ತೀರಿಸಲು ‘ಕೆಂಪು’ ದೀಪದ ಸಿಗ್ನಲ್‌ ಬಿದ್ದಿತ್ತು, ಬಹಳ ವರ್ಷಗಳ ನಂತರ ಮೌನ ಮುರಿದಿತ್ತು ಮಾತು ಶುರುವಾಗಿತ್ತು. ‘ಅವಳು’ ಮತ್ತು ‘ಅವನು’ ಒಬ್ಬರಿಗೊಬ್ಬರು ಕಿವಿಯಾಗಿದ್ದರು. ‘ಫೀನಿಕ್ಸ್‌’ ಕಥೆಯಲ್ಲೂ ಇಂಥ ಜೋಡಿಯೊಂದು ‘ಕೆಂ‍ಪು’ ಯೋಚನೆಗಳ ಪ್ರವಾಹಕ್ಕೆ ಸಿಲುಕಿ ಒದ್ದಾಡಿ, ಇನ್ನೇನು ಮುಳುಗುತ್ತೇವೆ ಎನ್ನುವ ಸಂದರ್ಭದಲ್ಲಿ ಅರ್ಥಗಳನ್ನು ಯೋಚಿಸದೆ ಮತ್ತೆ ಬಿಸಿಯುಸಿರಾದ ಬಗೆಯು, ಕಥೆಯ ಕಟ್ಟುವಿಕೆಯನ್ನು ಗಾಢವಾಗಿಸಿದೆ. ‘ಅವನು’, ‘ಅವಳು’ಇಲ್ಲೂ ಪಾತ್ರಗಳಿಗೆ ಜೀವತುಂಬುವವರು.

ಇನ್ನು ಕೃತಿ ಶೀರ್ಷಿಕೆಯಲ್ಲಿ ಬರುವ ‘ಕೆಂಪು’. ಈ ಕಥೆಯಲ್ಲಿ ಮುಟ್ಟಿನ ಅನುಭವ, ಯಾತನೆಯನ್ನು ‘ಲಕ್ಷ್ಮಿ’ ಎಂಬ ಪಾತ್ರದ ಮುಖೇನ ಲೇಖಕಿ ಕಟ್ಟಿದ್ದಾರೆ. ಹದಿಹರೆಯದ ಹುಡುಗಿಯ ಹೆಣ್ತನದ ಅರಿವು, ಆ ಕ್ಷಣದಲ್ಲಿನ ಆತಂಕ, ‘ಕೆಂಪು’ ಕನಸು, ಮುಜುಗರವನ್ನು ಗೆಳತಿಯರ ಅನುಭವದೊಂದಿಗೆ ಬೆರೆಸಿ ಕಟ್ಟಿಕೊಡಲಾಗಿದೆ. ಮುಗ್ಧತೆಯ ಸ್ಪರ್ಶವೂ ಇಲ್ಲಿದೆ. ಜೊತೆಗೆ ವಾಸ್ತವವೆಂಬಂತೆ ಈಗಲೂ ಹಲವು ಸರ್ಕಾರಿ ಶಾಲೆಗಳಲ್ಲಿ ಇರುವ ಮೂಲಸೌಕರ್ಯದ ಕೊರತೆಯನ್ನೂ ಕಥೆ ಉಲ್ಲೇಖಿಸಿದೆ.

ಹೀಗೆ ಇಲ್ಲಿನ ಹತ್ತೂ ಕಥೆಗಳು ವಿಭಿನ್ನ ಆಯಾಮದಲ್ಲಿ ಸಾಗುತ್ತವೆ. ಬಳಸಿದ ಭಾಷೆ, ಕಥೆ ಕಟ್ಟುವಿಕೆ, ಬದುಕಿಗೆ ಹತ್ತಿರವಾಗುವ ಪಾತ್ರಗಳು, ಅವುಗಳ ನಡುವೆ ನಡೆಯುವ ಸಂಭಾಷಣೆ, ಅದು ಹೊರಸೂಸುವ ಅರ್ಥ ಕಥೆಯ ಓಟಕ್ಕೆ ಪೂರಕವಾಗಿ ಒದಗಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT